Vydyaloka

ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು

ಆರೋಗ್ಯ ನಂದನ ಆರೋಗ್ಯ ಜಾಗೃತಿ ಅಭಿಯಾನ

ವೈದ್ಯಲೋಕ-ಹೆಲ್ತ್‍ವಿಷನ್ ಆರೋಗ್ಯ ಮಾಸಿಕಗಳು ಸಂಘಟಿಸಿ, ಬೆಂಗಳೂರಿನಲ್ಲಿ ಆರಂಭಿಸಿರುವ ‘ಆರೋಗ್ಯ ನಂದನ’ ಆರೋಗ್ಯ ಶಿಕ್ಷಣ ಪ್ರಸಾರ ಯೋಜನೆ, ಈಗ ಆಯುಷ್ ಆರೋಗ್ಯ ಫೌಂಡೇಷನ್‍ನೊಂದಿಗೆ ಸಮ್ಮಿಳಿತವಾದ ಮೇಲೆ, ಫೆಬ್ರವರಿ 17ರ ಭಾನುವಾರ, ಹೊಸ ಹುರುಪಿನೊಂದಿಗೆ ಆರೋಗ್ಯ ನಂದನ ಕಾರ್ಯಕ್ರಮ ಏರ್ಪಡಿಸಿತ್ತು. ಮಲ್ಲೇಶ್ವರಂ 9ನೇ ಅಡ್ಡರಸ್ತೆಯಲ್ಲಿರುವ ಪ್ರಣತಿ ಸಭಾಂಗಣದಲ್ಲಿ, ಸುಜನ ಸಮಾಜ ಸಂಸ್ಥೆಯ ಸಹಕಾರದೊಂದಿಗೆ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಮೈಸೂರು ರಸ್ತೆಯ ಅಂಚೆ ಪಾಳ್ಯದಲ್ಲಿರುವ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮಹೇಶ್ ಶರ್ಮಾ ಮತ್ತು ಬೆಂಗಳೂರು ರಾಜಾಜಿನಗರದಲ್ಲಿ ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಶಿವಕುಮಾರ್ ಭಾಗವಹಿಸಿ, ವೃದ್ಧಾಪ್ಯದಲ್ಲಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ಹಾಗೂ ಆರೋಗ್ಯ ನಂದನ ಯೋಜನೆಯ ಸಂಚಾಲಕರಾದ ಎನ್.ವ್ಹಿ. ರಮೇಶ್ಈ ಕಾರ್ಯಕ್ರಮದ ನಿರೂಪಣೆ ಮಾಡಿ, ಸಂವಾದ ನಡೆಸಿಕೊಟ್ಟರು.

ಮೀಡಿಯಾ ಐಕಾನ್ ವೈದ್ಯಲೋಕ – ಹೆಲ್ತ್ ವಿಷನ್ ಮಾಸಿಕಗಳ ವ್ಯವಸ್ಥಾಪಕ ಸಂಪಾದಕರಾದ ಡಾ. ಶ್ರೀಕೃಷ್ಣ ಮಾಯ್ಲೆಂಗಿ, ಸಹ ಸಂಪಾದಕರಾದ ಹನುಮೇಶ್ ಯಾವಗಲ್, ಈ ಬಳಗದ ಬಿ.ಎನ್.ಪ್ರತಾಪ್ ಹಾಗೂ ಸುಜನ ಸಮಾಜದ ಅಧ್ಯಕ್ಷರಾದ ರಾ.ಕೃ.ಶ್ರೀಧರಮೂರ್ತಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬೆಳಿಗ್ಗೆ 11ರಿಂದ ಮಧ್ಯಾಹ್ನ 1.15ರವರೆಗೆ ನಡೆದ ಸಂವಾದದಲ್ಲಿ, ಸುಜನ ಸಮಾಜದ ಸದಸ್ಯರು, ಮಹಿಳೆಯರು, ಯುವಕ-ಯುವತಿಯರು ಆಸಕ್ತಿಯಿಂದ ಭಾಗವಹಿಸಿ, ತಮ್ಮ ಪ್ರಶ್ನೆಗಳನ್ನು ಕೇಳಿ, ವೈದ್ಯರಿಂದ ಉತ್ತರ ಪಡೆದು ತೃಪ್ತರಾದರು. ಅಲ್ಲಿ ನಡೆದ ಸಂವಾದದ ಸಂಕ್ಷಿಪ್ತ ವರದಿ ಇಲ್ಲಿದೆ.

ಎನ್.ವ್ಹಿ.ರಮೇಶ್ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, ಆರೋಗ್ಯ ನಂದನ ಹುಟ್ಟಿದ ಹಿನ್ನೆಲೆ, ಆಕಾಶವಾಣಿ ಹಾಗೂ ರಂಗಭೂಮಿ ಮೂಲಕ ತಮ್ಮ ಆರೋಗ್ಯ ನಾಟಕಗಳು ಹಾಗೂ ಕವಿತೆಗಳ ರಚನೆ, ಪ್ರಸ್ತುತೀಕರಣ, ಪುಸ್ತಕ ಪ್ರಕಟಣೆ, ರೇಡಿಯೋ ಹಾಗೂ ರಂಗಭೂಮಿ ಮೂಲಕ ನಡೆಸಿರುವ ವೈದ್ಯರ ಸಂದರ್ಶನ, ಆರೋಗ್ಯ ನಾಟಕಗಳ ಪ್ರದರ್ಶನ ಇವುಗಳ ಬಗ್ಗೆ ನಿವೇದಿಸಿದರು. ಮಾಗಿದ ವಯಸ್ಸು ಹಾಗೂ ಮನಸ್ಸಿನ ವೃದ್ಧರು, ಅವರ ದಿನಚರಿ, ನಿತ್ಯದ ಸಮಸ್ಯೆಗಳು, ತಲೆಮಾರು ಅಂತರಗಳ ಬಗ್ಗೆ ಇವರು ಪ್ರಸ್ತಾಪಿಸಿದರು. ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ರಾ.ಕೃ.ಶ್ರೀಧರಮೂರ್ತಿ ಸುಜನ ಸಮಾಜದ ಬಗ್ಗೆ, ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ತಾವು ಉಚಿತವಾಗಿ ಆಯಾ ವರ್ಷಕ್ಕೆ ಸೀಮಿತವಾದ ಪಠ್ಯಪುಸ್ತಕ ವಿತರಣೆ ಮಾಡಿ, ಅದನ್ನು ಮುಂದಿನ ವರ್ಷ ಮತ್ತೆ ವಾಪಸ್ ಪಡೆದು ಬೇರೆಯವರಿಗೆ ಓದಲು ಕೊಡುವಂತೆ ರೂಪಿಸಿರುವ ಯೋಜನೆ ವಿವರಿಸುತ್ತಾ, 79 ವರ್ಷದ ತಮ್ಮಂತಹ ವೃದ್ಧರ ಕೈ, ಕಾಲು ನೋವು ಬಗ್ಗೆ ಒತ್ತಿ ಹೇಳಿದರು.

ಡಾ. ಮಹೇಶ್‍ಶರ್ಮ ಅವರ ಭಾಷಣದ ಆಯ್ದ ಭಾಗಗಳು:


ವೃದ್ಧಾಪ್ಯದ ಬಗ್ಗೆ ಹೆದರಿಕೆ ಬೇಡ. ಮಾನವನ ಹುಟ್ಟಿನಿಂದ ಸಾವಿನವರೆಗೆ ಇರುವ ಅವಸ್ಥೆಗಳಲ್ಲಿ, ಬಾಲ್ಯ-ಯೌವನದ ನಂತರ ಬರುವ ಅವಸ್ಥೆಯೇ ವೃದ್ಧಾಪ್ಯ. ತಡೆದುಕೊಳ್ಳುವ ಶಕ್ತಿ ಇರುವುದರಿಂದ, ಬಾಲ್ಯ ಹಾಗೂ ಯೌವನದಲ್ಲಿ ಕಾಹಿಲೆಯ ಬಗ್ಗೆ ಹೆದರಿಕೆಯಿಲ್ಲ ದೇಹದ ಬದಲಾವಣೆಗಳಿಂದ ವೃದ್ಧಾಪ್ಯದಲ್ಲಿ ಹೆದರಿಕೆ, ಆಗ ಧೈರ್ಯ ಅತ್ಯಾವಶ್ಯಕ. ಅನುಕ್ಷಣ ಆಗುವ ಬದಲಾವಣೆಗಳೇ ಶರೀರ. ಜೀವನವೇ ಸತತ ಬದಲಾವಣೆ ಅಧರಿಸಿದೆ. ಜೀವನ ಶೈಲಿಯ ಬದಲಾವಣೆಯಿಂದ ITBTಯ ಯುವಜನ 40 ವಯಸ್ಸಿಗೆ ಹೈರಾಣವಾಗಿ ‘ವಯಸ್ಸಾಯಿತು, ಎಲ್ಲ ಆಗಿ ಹೋಯಿತು’ ಅನ್ನುತ್ತಿದ್ದಾರೆ.ಆಯುರ್ವೆದದ ಪ್ರಕಾರ 70 ವರ್ಷ ವೃದ್ಧಾಪ್ಯ. ಸಾಮಾನ್ಯವಾಗಿ 60 ಎಂದರೆ ವೃದ್ಧರು.

ದೇಹದ ಶಾರೀರಿಕ ಬದಲಾವಣೆಗಳು:

ಶರೀರ ಸುಕ್ಕಾಗಿ, ಮಾಂಸಖಂಡಗಳ ಬಲ ಕಡಿಮೆಯಾಗುತ್ತದೆ.ಚಿಂತೆ ತುಂಬಿ, ನೆನಪಿನ ಶಕ್ತಿ ಕುಂದುತ್ತದೆ. ನೋಡಿದೊಡನೆ ಬದಲಾವಣೆ ತಿಳಿದುಕೊಳ್ಳುವ ಹಾಗೂ ಗುರುತಿಸುವ ಶಕ್ತಿ ಕಡಿಮೆ ಆಗುತ್ತದೆ. ಸಣ್ಣಪುಟ್ಟ ಕೆಲಸ ಮಾಡಲೂ ಕಷ್ಟ. ಬಹಳ ಮುಖ್ಯ-ವ್ಯಾಧಿಕ್ಷಮತೆ. ತಂದುರಸ್ತಿ ಮುಖ್ಯ. ಆನುವಂಶಿಕ ಬಲ, ವಂಶಪಾರಂಪರೆಯ ಬಳುವಳಿ. ವೃದ್ಧಾಪ್ಯದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ. ರೋಗ ನಿರೋಧಕ ಶಕ್ತಿ ಕಡಿಮೆ. ನಿದ್ರೆ ಬರೋಲ್ಲ. ಮಲಬದ್ಧತೆ, ಗ್ಯಾಸ್ಟ್ರಿಕ್, ಹೊಟ್ಟೆನೋವು, ತಲೆ ಹಾಗೂ ಸೊಂಟ ನೋವು, ಎಲ್ಲ ಸೇರಿಕೊಳ್ಳಬಹುದು.

ಚಿಕ್ಕಂದಿನಿಂದ ದೇಹದ ಬೆಳವಣಿಗೆ ಸತತ ಮುಂದುವರೆದರೆ, ವೃದ್ಧಾಪ್ಯದಲ್ಲಿ ದೇಹ ಕುಂದುತ್ತಾ, ನಶಿಸುತ್ತಾ ಹೋಗುತ್ತದೆ. ಚಿಕ್ಕಂದಿನಲ್ಲಿ ಧಾತು – ಪೋಷಕಾಂಶ ಪಡೆದುಕೊಳ್ಳುತ್ತಾ ಹೋದರೆ, ವಯಸ್ಸಾದ ಮೇಲೆ ಮೂಳೆಯಲ್ಲಿ ಕ್ಯಾಲ್ಸಿಯಂ ಕಡಿಮೆ ಆಗಿ ಅದು ದುರ್ಬಲವಾಗುತ್ತ, ಮಾಂಸಬಲ ಕಳೆದು ಹೋಗುತ್ತೆ. ಎಲ್ಲರೂ ಬಯಸುವಂತೆ ಯಾರಿಗೂ ವಯಸ್ಸಾಗಬಾರದು! ಆದರೆ ವಯಸ್ಸು ತಡೆಯಲಾಗದು.

ದೀರ್ಘ ಆರೋಗ್ಯ ಬೇಕಾದರೆ, ಆಯುರ್ವೇದ ನೆರವಿಗೆ ಬರುತ್ತದೆ. ಎಷ್ಟು ಕಾಲ ಬದುಕ್ತೀವಿ ಮುಖ್ಯವಲ್ಲ, ಎಷ್ಟು ಚೆನ್ನಾಗಿ ಬಾಳ್ತೀವಿ ಮುಖ್ಯ. ವರ್ಷಗಳಿಗೆ ಜೀವ ತುಂಬಿ ಆಯಸ್ಸಿಗೆ ವರ್ಷ ತುಂಬಬೇಡಿ. ಮೂಳೆ ಸವೆತ ಬಚ್ಚಲಲ್ಲಿ ಬೀಳುವುದು ಸಾಮಾನ್ಯ. ಆಗ ಸವೆತಕ್ಕೆ ಒಳಗಾದ ಮೂಳೆ ಮುರಿಯಬಹುದು.

ಮಹಿಳೆಯರ ಸಮಸ್ಯೆಗಳು:

ಹರೆಯದಲ್ಲಿ ಚೆನ್ನಾಗಿ ತಿಂದು, ಪೌಷ್ಠಿಕತೆಯಿಂದ ಶಕ್ತಿ ಸಂಚಯ ಮಾಡಿಕೊಳ್ಳದಿದ್ರೆ, ಮುಟ್ಟು ನಿಲ್ಲುವ ಕಾಲದಲ್ಲಿ ಮಹಿಳೆಯರ ಮೂಳೆ ಸವೆದು, ಸೊಂಟ ಅಥವಾ ಕೈ-ಕಾಲು ಮೂಳೆ ಮುರಿಯುತ್ತದೆ. ಕಫ ಕಡಿಮೆ ಆಗುತ್ತದೆ. ಹಾಳಾಗುವ ಕ್ರಿಯೆಯಿಂದ ದೀರ್ಘ ಕಾಲದ ಬದಲಾವಣೆಗಳಿಗಾಗಿ, ಕೆಮ್ಮು, ದಮ್ಮು ಹೆಚ್ಚುತ್ತೆ. ಬಂದ ಕಾಹಿಲೆ ಬೇಗ ಹೋಗೋಲ್ಲ. ಸಿಟ್ಟು, ಭಾವನಾತ್ಮಕ ಸಮಸ್ಯೆಗಳು ಆರಂಭವಾಗುತ್ತೆ. ಆಗ ಕುಟುಂಬದ ಎಲ್ಲಾ ಸದಸ್ಯರೂ ಹೊಂದಾಣಿಕೆ ಮಾಡಿಕೊಳ್ಳಬೇಕು.

ಗಂಡಸರ ಸಮಸ್ಯೆಗಳು:

Prostate ದೊಡ್ಡದಾಗಿ, ಮೂತ್ರದ ಸಮಸ್ಯೆ ಹೆಚ್ಚುತ್ತೆ. ಸರಿಯಾಗಿ, ಸಂಪೂರ್ಣವಾಗಿ ಮೂತ್ರ ವಿಸರ್ಜನೆ ಆಗೋಲ್ಲ. ಪೂರ್ಣ ಹೊರ ಹೋಗದೇ, ಪದೇ ಪದೇ ಸ್ವಲ್ಪ ಸ್ವಲ್ಪ ಹೋಗಿ, ಹಾಗೆ ಒಳಗೆ ಉಳಿದು, ಮತ್ತೆ ಮತ್ತೆ ಮೂತ್ರ ವಿಸರ್ಜನಾ ಬಯಕೆ, ಅವಸರವಾಗುತ್ತೆ. ಅಧಿಕ ರಕ್ತದ ಒತ್ತಡ (ಬಿ.ಪಿ) ಸಕ್ಕರೆ (ಮಧುಮೇಹ) ಹಾಗೂ ಥೈರಾಯ್ಡ್ ಅಣ್ಣ-ತಮ್ಮಂದಿರು. ಹಿಂದೆ ಇವೆಲ್ಲ ಶ್ರೀಮಂತರ ಕಾಹಿಲೆಗಳಾಗಿದ್ದವು. ಈಗ ಇವು ಶ್ರೀಸಾಮಾನ್ಯರವಾಗಿವೆ. ಈಗ ನಮ್ಮ ಭಾರತ ಮಧುಮೇಹದ ರಾಜಧಾನಿಯಾಗಿದೆ. ಹಿಂದೆ ದೇಹ, ಪ್ರಕೃತಿ, ಪ್ರದೇಶಗಳಿಗೆ ಅನುಗುಣವಾಗಿ ಆಹಾರ ಪದ್ಧತಿ ಜೀವನಶೈಲಿ ಇದ್ದವು. ಈಗ ಕೈ-ಕಾಲುಗಳಿಗೆ ಸಾಕಷ್ಟು ಕೆಲಸವಿಲ್ಲ. ಸಿಕ್ಕಿದ್ದೆಲ್ಲಾ ತಿಂತೀವಿ. ಆದರೆ ವ್ಯಾಧಿಕ್ಷಮತೆ ಕಡಿಮೆ. ಹಿಂದೆ ಸೋಂಕಿನ ಕಾಹಿಲೆಗಳ ಕಾಲವಾಗಿತ್ತು. ಈಗ ಸೋಂಕಿರದ, ಸಾಂಸರ್ಗಿಕವಲ್ಲದ ಕಾಹಿಲೆಗಳು. ಜನ ಜಾಸ್ತಿ ತಿಂದು, ವ್ಯಾಯಾಮ ಇಲ್ಲದೇ ಇದ್ದಾರೆ. ಯೋಗ್ಯ ಜೀವನ ಪದ್ಧತಿಯೇ ಆರೋಗ್ಯ.
ವೃದ್ಧರ ಆಹಾರ:
ಅತಿ ಗಟ್ಟಿ ಪದಾರ್ಥ ತಿನ್ನಬೇಡಿ. ಎಣ್ಣೆಯಲ್ಲಿ ಕರಿದ ಪದಾರ್ಥ ಹೆಚ್ಚು ತಿನ್ನಬೇಡಿ. ಹಸಿವಾದಾಗ ತಿನ್ನಿ. ಆಹಾರದಲ್ಲಿ ನಾರಿನಾಂಶ ಹೆಚ್ಚಿರಬೇಕು. ಸದಾ ಬಿಸಿ ನೀರು ಕುಡಿಯಿರಿ. ಚೆನ್ನಾಗಿ ಬೇಯಿಸಿ ತಿನ್ನಿ. ಎಲ್ಲೆಲ್ಲೋ ಏನೇನೋ ಹಾಕಿ ಬೆಳೆಸಿದ ತರಕಾರಿಗಳಿಂದ ಸೋಂಕಾಗುತ್ತದೆ.

ರಮೇಶ್ – ಅದಕ್ಕೇ ಬಿಸಿ ನೀರಿಗೆ ಉಪ್ಪು ಹಾಕಿ ಎಲ್ಲ ತರಕಾರಿ ಹಾಕಿ ಚೆನ್ನಾಗಿ ತೊಳೆಯಬೇಕು.

ಡಾ. ಮಹೇಶ್‍ಶರ್ಮಾ – ಮೊಳಕೆ ಕಾಳು, ಹಸಿ ಸಲಾಡ್ ತಿನ್ನಬೇಡಿ. ವಾಯು ಜಾಸ್ತಿ. ದಿನಾ ತೊಗರಿಬೇಳೆ, ಹೆಸರು ಬೇಳೆ ಬಳಸಿ. ಕಡಲೆ ಬೇಳೆ, ಆಲೂಗೆಡ್ಡೆ, ಕಡಿಮೆ ಬಳಸಿ. ದೇಹಕ್ಕೆ ಪುಷ್ಠಿ ಬೇಕು. ಅದಕ್ಕೆ ತಾಯಿ ಹಾಲಿನ ನಂತರ, ದಿನಾ 1 ಲೋಟ ಹಾಲು ಕುಡಿಯಿರಿ. ದಪ್ಪ ಆಗುತ್ತೇವೆ, ಕೊಲೆಸ್ಟ್ರಾಲ್ ಎಂದು ಹುಡುಗಿಯರು ಹಸು ಹಾಲು ಕುಡಿಯುವುದಿಲ್ಲ. ನರಪುಷ್ಠಿಗೆ, ದೇಹದ ಸವೆತ ಕಡಿಮೆ ಮಾಡಲು, ದಿನಾ ಅಲ್ಪ ಪ್ರಮಾಣದಲ್ಲಿ ತುಪ್ಪ ತಿನ್ನಿ. ಹಾಗಂತ ಹೆಚ್ಚಾಗಿ ಹೆಚ್ಚು ತುಪ್ಪದಲ್ಲಿ ಕರಿದದ್ದು ತಿನ್ನಬೇಡಿ. ಪ್ರತಿದಿನ ಹೆಸರು ಕಾಳು ತಿನ್ನಿ. ನೆಲ್ಲಿಕಾಯಿ (ರಸಾಯನ) ವಿಶೇಷ ತಾಕತ್ ನೀಡುವ ಪರಮೌಷದ. ದಿನಾ ಅದನ್ನೆ ತಿನ್ನಿ. ಹಿಂದಿನ ಶಾಸ್ತ್ರೀಯ – ಸಾಂಪ್ರದಾಯಿಕ ಆಹಾರ ಧೈರ್ಯವಾಗಿ ತಿನ್ನಿ. ಪ್ರದೇಶಕ್ಕೆ ಅನುಗುಣವಾಗಿ ತಿನ್ನಿ. ಮೈಸೂರಿನಲ್ಲಿ ಅನ್ನ, ಮಂಗಳೂರಿನಲ್ಲಿ ಗಂಜಿ, ಉತ್ತರ ಕರ್ನಾಟಕದಲ್ಲಿ ಜೋಳ, ಗೋಧಿ ಬಳಕೆ ಸಾಮಾನ್ಯ.

ವ್ಯಾಯಾಮ: ಹಿಂದೆ ಕಟ್ಟಿಗೆ ಆಯ್ದು ತರುತ್ತಿದ್ದರು. ಬಾವಿಯಿಂದ ನೀರು ಸೇದುತ್ತಿದ್ದರು. ಅಡಿಗೆ, ಕಸ, ಬಟ್ಟೆ ಎಲ್ಲ ವ್ಯಾಯಾಮ. ಆಲೋಪತಿ, ಹೋಮಿಯೋಪತಿ ಆಯುರ್ವೇದ ಏನೇ ಪದ್ಧತಿ ಇದ್ದರೂ, ಕಡಿಮೆ ಔಷಧ ಚೆನ್ನಾದ ಆಹಾರ ಬೇಕು. ಜಾಸ್ತಿ ವ್ಯಾಯಾಮ ಬೇಡ. ನಿಮ್ಮ ಶಕ್ತಿಯ ಅರ್ಧದಷ್ಟು ಮಾತ್ರ ವ್ಯಾಯಾಮ ಮಾಡಿ.

ಔಷಧ: ಯಾರಿಗೋ ಡಾಕ್ಟರ್ ಒಮ್ಮೆ ಬರೆದುಕೊಟ್ಟ ಔಷಧಿ, ನಿಗದಿತ ಕಾಲಕ್ಕೆ ಮಾತ್ರ. ಅದನ್ನು ವೈದ್ಯರ ಸಲಹೆ ಪಡೆಯದೇ, ಪದೇ ಪದೇ ದೀರ್ಘಕಾಲ ಹಾಗೇ ಮುಂದುವರೆಸಬಾರದು. ನಿಗದಿತ ವ್ಯಕ್ತಿಗೆ ನಿಗದಿತ ಕಾಲಕ್ಕೆ ಕೊಟ್ಟ ಔಷಧಿ, ಬೇರೆ ಎಲ್ಲರಿಗೂ, ಎಲ್ಲ ಕಾಲಕ್ಕೂ ಸಲ್ಲದು.

ರಮೇಶ್ – ಜನ 20 ವರ್ಷ ಆಲೋಪತಿ ಔಷಧ ತೆಗೆದುಕೊಂಡು, ಗುಣವಾಗಲಿಲ್ಲ ಅಂತ ಅದನ್ನು ದಿಢೀರ್ ನಿಲ್ಲಿಸಿ, ಹೋಮಿಯೋಪತಿಗೆ ಅಥವಾ ಆಯುರ್ವೆದಕ್ಕೆ ಹೋಗ್ತಾರೆ. ಅವರಿಗೇನಂತೀರಿ? ಯಾವುದೆ ವೈದ್ಯ ಪದ್ಧತೀಲಿ ಅಥವಾ ವೈದ್ಯರಲ್ಲಿ ನಂಬಿಕೆ ಇಡದೇ ಅತ್ತಿತ್ತ ದಿಢೀರ್ ಬದಲಾಯಿಸ್ತಾರಲ್ಲ?

ಡಾ. ಮಹೇಶ್- ಪ್ರತಿ ಪದ್ಧತಿ, ಕಾಹಿಲೆ, ರೋಗಿಯ ಟಾರ್ಗೆಟ್ (ಗುರಿ) ಬೇರೆ ಬೇರೆ. ಹಾಗೆ ಬದಲಾಯಿಸಬಾರದು. ಆಯುರ್ವೇದದಲ್ಲಿ ಮಧುರ ಅಂತಾರೆ.

ಶ್ರೀಧರಮೂರ್ತಿ- ಡಾಕ್ಟರೇ ನಿಮ್ಮ ಔಷಧಿ ಬಹಳ ಕಹಿ. ಅದನ್ನು ಸಿಹಿ ಮಾಡಿ. ಹಾಗೇ ಬಹಳ ಪಥ್ಯ ಹೇಳ್ತೀರಿ. ಪಥ್ಯ ತೆಗೆದು ಹಾಕೋಕೆ ಆಗೋಲ್ವಾ?

ಡಾ. ಮಹೇಶ್- ಆಯುರ್ವೇದದಲ್ಲಿ ಔಷಧಗಳು Poಣeಟಿಛಿಥಿಯಿಂದ ಕೆಲಸ ಮಾಡುತ್ತವೆ. ಹೀಗಾಗಿ ಅವು ಕಹಿ, ಒಗರು ಇರುತ್ತವೆ. ರುಚಿಯಿಂದ ಕೆಲಸ ಮಾಡೋದು ಆಹಾರ. ಕಹಿಯಾದಷ್ಟೇ ಮದ್ದು. ಪಥ್ಯವೇ ಅರ್ಧ ಚಿಕಿತ್ಸೆ. ಮೊಸರಿನಿಂದ ಶೀತವಿದ್ದರೆ, ಮೊಸರು ಪಥ್ಯ ಹೇಳಲೇಬೇಕಾಗುತ್ತೆ. ಆಲೋಪತಿ ತಕ್ಷಣ ಗುಣ ನೀಡುತ್ತೆ. ಆದರೆ ಆ ಔಷಧಿಗಳಿಗೆ ಪಾಶ್ರ್ವ ಪರಿಣಾಮಗಳು ಇವೆ. ಆಯುರ್ವೇದ, ವ್ಯಕ್ತಿಯ ಮೂಲ ಸಮತೆ, ಮೂಲಸ್ಥಿತಿಗೆ ತರಬೇಕು ಎನ್ನುತ್ತದೆ.

ಖಿನ್ನತೆ: ವೃದ್ಧಾಪ್ಯದಲ್ಲಿ ಖಿನ್ನತೆ ಕಾಡುತ್ತದೆ. ಇಡೀ ಜೀವನ, ಮಕ್ಕಳು, ಸಂಸಾರ ಎಂದು ಒದ್ದಾಡಿದ ಹಿರಿಯ ಜೀವಿಗಳನ್ನು ಈಗ ಯಾರೂ ಗಮನಿಸಿ ಮಾತಾಡಿಸುವುದಿಲ್ಲ. ಅವರ ತ್ಯಾಗ ಯಾರೂ ಸ್ಮರಿಸುವುದಿಲ್ಲ.

ಪುನರಾರಂಭಿಸಿ: ರಿಟೈರ್ಡ್ ಆದ ಮೇಲೆ ಸುಮ್ಮನೆ ಕೊರಗುತ್ತ ಕೂರದೇ, ರೀಜನರೇಟ್ ಆಗಬೇಕು. ನಿಮ್ಮ ಅನುಭವವೇ ನಿಮ್ಮ ಆಸ್ತಿ. ಅದೇ ಹಳೇ ಜೋಶ್ ಮುಂದುವರೆಸಿ. ಕೌಟುಂಬಿಕ ಸಲಹೆ ನೀಡಿ. ಸಮಾಜ ಸೇವೆ ಮಾಡಿ. ನಿಮ್ಮ ಕೌಶಲ್ಯಗಳು ಹಾಗೂ ಕಲೆಗಳನ್ನು ಮುಂದುವರೆಸಿ. ನಿಮಗೆ ಸಾಧ್ಯವಾಗುವ ಸಣ್ಣ ಕೆಲಸಗಳನ್ನು ಸಮಯ ಕಳೆಯಲು ಮಾಡಿ. ಕೊಂಚ ಸಂಪಾದನೆ ಸಹ ಆಗಬಹುದು. ಏಕಾಂಗಿತನ ಬೇಡ. ಮನಸ್ಸಿಗೆ ಉಲ್ಲಾಸ, ನವಚೈತನ್ಯ ತುಂಬಿಕೊಳ್ಳಿ. ದಿನಾ ಹಾಲು ಕುಡಿಯಿರಿ.

ರಮೇಶ್- ಡಾಕ್ಟರೇ, ನಾನು ಜಪಾನಿಯರ ದೀರ್ಘಾಯುಷ್ಯದ ಬಗ್ಗೆ ಓದಿದಾಗ, ಕೆಲವರು ಜಪಾನಿಯರನ್ನ ಮಾತನಾಡಿಸಿದಾಗ, ಅವರ ಆಹಾರ ಪದ್ಧತಿ ಅಭ್ಯಸಿಸಿ ಲೇಖನ ಬರೆದಿದ್ದೆ. ಅವರು ಜೀವಮಾನವಿಡೀ, ಹೈನು ಪದಾರ್ಥಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ ತಿನ್ನೋದೇ ಇಲ್ಲ. ನಾಯಿಕೊಡೆಗಳು, ಅಣಬೆಗಳಿಂದ ತಯಾರಿಸಿದ ಮೊಸರು ತಿಂತಾರೆ. ನೀವು ದಿನಾ ಹಾಲು ಕುಡಿಯಿರಿ ಅಂತೀರಲ್ಲ?

ಡಾ. ಮಹೇಶ್- ದೇಶ-ಪ್ರದೇಶ ಭಿನ್ನ. ಆಹಾರ ಭಿನ್ನ. ನಮ್ಮ ದೇಶದಲ್ಲಿ ಹಿಂದೆ ಕಲಬೆರಕೆ ಇರದ ಶುದ್ಧ ದೇಶಿ ಹಸು ಹಾಲನ್ನು, ಹಿರಿಯರು ಬೇಕಾದಷ್ಟು ಕುಡೀತಿದ್ರು. ಮೊಸರು, ಬೆಣ್ಣೆ, ತುಪ್ಪ ಚೆನ್ನಾಗಿ ತಿಂದು, ಶ್ರಮದ ಕೆಲಸ ಮಾಡಿ ಅರಗಿಸಿಕೊಳ್ತಿದ್ರು. ಈಗ ಶುದ್ಧ ಹಾಲಲ್ಲ. ಜಾಸ್ತಿ ಟೀ, ಕಾಫಿ ಕುಡೀತಿದ್ದೀರಿ. ಅದರಲ್ಲಿ ಹೆಚ್ಚು ಕೆಫಿನ್, ಟೆನಿನ್ ಹೆಚ್ಚು ಸಕ್ಕರೆ, ಹೆಚ್ಚು ಹಾಲು, ದೇಹ ಸೇರಿ, ಆರೋಗ್ಯ ಹಾಳಾಗ್ತಿದೆ. ಹೀಗಾಗಿ ಹೈ ಕೆಲರಿಯಿಂದ ಬೊಜ್ಜು ಬರ್ತದೆ. ಪ್ರಕೃತಿ ಬೆಳೆಸುವಂತೆ ಬೆಳೆಗಳು ಬೆಳೆಯುತ್ತೆ. ಪಂಜಾಬ್‍ನಲ್ಲಿ ಗೋದಿ ಬೆಳೆಯುತ್ತೆ. ಹಾಗೆ ಅಲ್ಲಿಯ ಜನ ತಿಂತಾರೆ. ಹಾಲು, ಲಸ್ಸಿ ಹೆಚ್ಚು ಬಳಸ್ತಾರೆ. ಮೈಸೂರಲ್ಲಿ ರಾಗಿ, ಭತ್ತ, ಕಬ್ಬು ಅವೇ ಆಹಾರ. ಉತ್ತರ ಕರ್ನಾಟಕದಲ್ಲಿ ತೊಗರಿಬೇಳೆ, ಜೋಳ ಬೆಳೆಯುತ್ತೆ. ಜಪಾನಿ ಉeಟಿe (ವಂಶವಾಹಿ)ಗೆ ಆ ಆಹಾರ ಬಗ್ಗಿದೆ. ಅದು ಇಲ್ಲಿ ಆಗಲ್ಲ. ಇಲ್ಲಿ ಬಾಳೆಹಣ್ಣು ಬೆಳೆಯುತ್ತೆ. ಕಾಶ್ಮೀರದಲ್ಲಿ ಸೇಬು ಬೆಳೆಯುತ್ತೆ. ಮಕ್ಕಳು ಯುವಜನ, ಮನೇಲೂ ಚೆನ್ನಾಗಿ ಊಟ ಮಾಡಿ, ಹೊರಗೆ ಪಾನಿಪೂರಿ ತಿಂದರೆ, ಅದು ಅತಿ ಜಾಸ್ತಿ ಕೆಲರಿ ಕೊಡುತ್ತೆ. ವಿದೇಶಗಳಲ್ಲಿ ಬ್ರೆಡ್, ಬರ್ಗರ್ ತಿಂತಾರೆ. ಆಮೇಲೆ ಏನೂ ತಿನ್ನೋಲ್ಲ.

ರಮೇಶ್ – ನಾನು 12 ವರ್ಷಗಳಿಂದ ಬೆಳಿಗ್ಗೆ ಖಾಲಿ ಹೊಟ್ಟೇಲಿ ಬೆಚ್ಚನೆ ನೀರಿಗೆ ಜೇನುತುಪ್ಪ ಹಾಕಿ ಕುಡೀತಿದ್ದೆ. ನಂತರ ಲಿಂಬೆ ಬೆರಸಿ ಕುಡೀತಿದ್ದೆ. ಈಗ ಗ್ಯಾಸ್ಟ್ರಿಕ್ ಆಗಿದೆ. ನನಗೀಗ 67 ವರ್ಷ. ಏನ್ ಮಾಡ್ಲಿ?.
ಡಾ. ಮಹೇಶ್- ಜೇನುತುಪ್ಪ ಎಲ್ಲರಿಗೂ ಬಹಳ ಒಳ್ಳೆಯದು. ಗ್ಯಾಸ್ಟ್ರಿಕ್ ಇದ್ದರೆ ಲಿಂಬೆ ಬೇಡ.

ರಮೇಶ್ – ನೀರಲ್ಲಿ ಜೇನುತುಪ್ಪ ನಿತ್ಯ ಬೆಳಗಿನ ಜಾವ ಕುಡಿದ್ರೆ ತೆಳ್ಳಗಾಗ್ತಾರೆ. ರಾತ್ರಿ ಹಾಲಿನಲ್ಲಿ ಜೇನು ಸೇರಿಸಿ ಕುಡಿದ್ರೆ ದಪ್ಪ ಆಗ್ತಾರಂತೆ. ಹೌದಾ?

ಡಾ. ಮಹೇಶ್- ಜೇನು ಬಹಳ ಒಳ್ಳೆಯದು. ಆದರೆ ಇದರಿಂದ ದಪ್ಪ ಆಗ್ತಾರೆ ಅನ್ನೋದಕ್ಕೆ ಆಧಾರ ಇಲ್ಲ. ಆದರೆ ಅನೇಕರು ಜೇನು ಬಿಸಿ ಮಾಡಿ ಆರಿಸಿ ಮಾರ್ತಾರಂತೆ. ಅದು ಒಳ್ಳೆಯದಲ್ಲ.

ರಮೇಶ್ – ಈಗ ನೀವು ರಸಾಯನ ತಿನ್ನಬೇಕು ಅಂತಿದ್ದೀರಿ. ಈಗ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್‍ಗಳು, ಅನೇಕ ಚವನ್‍ಪ್ರಾಶ್‍ಗಳನ್ನ ಬಿಟ್ಟಿದ್ದಾರೆ!

ಡಾ. ಮಹೇಶ್- ಆಯುರ್ವೇದ ಉತ್ಪನ್ನಗಳನ್ನು ಯಾರು ಬೇಕಾದರೂ ತಯಾರಿಸ್ತಿದ್ದಾರೆ. ಎಲ್ಲ ರಸಾಯನಗಳೂ ಎಲ್ಲರಿಗಾಗಿ ಅಲ್ಲ. ಚಿಕಿತ್ಸೆಯ ಕೊನೆಯ ಹಂತ ಔಷಧ. ಪ್ರತಿ ರೋಗಿಗೂ ಕೊಡುವ ರಸಾಯನ ಬೇರೆ. ವೈದ್ಯರ ಸಲಹೆ ಇಲ್ಲದೇ ಯಾವ ರಸಾಯನವನ್ನೂ ಬಳಸಬೇಡಿ.
ಡಾ. ಶಿವಕುಮಾರ ಅವರ ಭಾಷಣದ ಅವತರಣಿಕೆಗಳು
ಸ್ವಸ್ತವಾಗಿರೋವ್ರು ಹಾಗೇ ಆರೋಗ್ಯವಾಗೇ ಮುಂದುವರೆಯಬೇಕೆಂದು ಆಯುರ್ವೇದದ ಗುರಿ. 5000 ವರ್ಷಗಳ ಹಿಂದಿನಿಂದ ವಾಗ್ಭಟ. ಚರಕ, ಶುಶ್ರುತ ಎಲ್ಲ ಹೇಳಿರುವಂತೆ, ದಿನಚರಿ ಹಾಗೂ ಋತುಚರ್ಯ ಪಾಲಿಸಬೇಕು. ಪ್ರತಿದಿನ ಬೆಳಗಿನ ಜಾವ ಸೂರ್ಯೋದಯಕ್ಕೆ ಮೊದಲೇ, ಅಂದರೆ ಸುಮಾರು 4.30ಕ್ಕೆ ಅಥವಾ 5.00ಕ್ಕೆ ಮೊದಲು ಏಳಬೇಕು. ನಾವು ತಡವಾಗಿ ಮಲಗಿತ್ತ್ರ್ತೀವಿ, ಬೆಳಿಗ್ಗೆ ಬೇಗ ಏಳಲು ಆಗೋಲ್ಲ ಅಂತಾರೆ ಹಲವರು. ಎಷ್ಟೇ ತಡವಾಗಿ ಮಲಗಿದರೂ ಬೇಗ ಏಳಿ. ಜೀರ್ಣಶಕ್ತಿ ಇಲ್ಲದಿದ್ದವರು ಮಾತ್ರ ಬೆಳಿಗ್ಗೆ 6ರವರೆಗೆ ಮಲಗಬಹುದು. ಪ್ರತಿನಿತ್ಯ ನಾವು ನಿಸರ್ಗದಿಂದ ದೂರ ಹೋಗ್ತೀದೀವಿ. ಪ್ರಾಣಿ-ಪಕ್ಷಿಗಳು ನಿಸರ್ಗದ ನಿಯಮಗಳಿಗೆ ಅನುಗುಣವಾಗಿ ಜೀವಿಸುತ್ತವೆ.

5000 ಸಾವಿರ ವರ್ಷಗಳ ಹಿಂದೆಯೇ ಋಷಿಗಳು ವಿಜ್ಞಾನಿಗಳಂತೆ ಹೇಳಿದ್ದಾರೆ. 8 ಅಂಗಗಳ ಬಗ್ಗೆ ವಿವರಿಸಿದ್ದಾರೆ. ಬಾಲ್ಯದಲ್ಲಿ ಕಫ ರೋಗಗಳು, ಯೌವ್ವನದಲ್ಲಿ ಪಿತ್ತ ಸಂಬಂಧಿ ರೋಗಗಳು, ಮುಪ್ಪಿನಲ್ಲಿ ವಾತ ಪ್ರಧಾನ ಕಾಹಿಲೆಗಳು. ಪ್ರಾಣವಾಯು ವಿಭಾಗದಲ್ಲಿ ಕೆಮ್ಮು, ದಮ್ಮು, ಅಸ್ತಮಾ, ಅಔPಆ. ಸಮಾನ ವಾತದಲ್ಲಿ – ಜೀರ್ಣ, ಅಪಾನುವಾಯು. ವಾತವೇ ಈಗ ಡಾನ್ ಮಾಸ್ಟರ್. ಪಿತ್ತ ಕಫಗಳು ಕಾಲಿಲ್ಲದವು. ನಡೆಸಲು ವಾತ ಬೇಕಂತೆ. ದಿನಚರಿ ಪ್ರಕಾರ ಬೇಗ ಏಳಿರಿ. ನಿಶ್ಚಿತ ಸಮಯಕ್ಕೆ ಮಲ-ಮೂತ್ರ ವಿಸರ್ಜನೆ ಮಾಡಿ. ಹೇಗೆ ಹಲ್ಲುಜ್ಜಬೇಕು ತಿಳಿಯಲು, ಅಷ್ಟಾಂಗ ಹೃದಯ ಸೂತ್ರ ಸ್ಥಾನ ಓದಿರಿ. ನಿತ್ಯ ತಣ್ಣೀರು ಸ್ನಾನ ಮಾಡಬೇಕು. ಇದೇ ಅಭ್ಯಂಜನ. ಬಿಸಿ ನೀರು ಸ್ನಾನ ಬೇಡ. ಮಕ್ಕಳಾಗದಿದ್ದವರು ಮಕ್ಕಳು ಬೇಕು. ಪಡೆಯಬೇಕೆಂಬ ಗಂಡಸರು ಖಂಡಿತ ಬಿಸಿ ನೀರ ಸ್ನಾನ ಮಾಡಬಾರದು. ವೃಷಣಗಳಿಗೆ ತಂಪಿರಬೇಕು. ದೇಹದ ಉಷ್ಣತೆಗಿಂತ ಪುರುಷರ ತರಡು ಬೀಜಗಳಿಗೆ 2 ಡಿಗ್ರಿ ಉಷ್ಣತಾಮಾನ ಕಡಿಮೆ ಇರಬೇಕು. ವಾಹನ ಚಾಲಕರು, ಬಿಸಿ ಕೆಲಸ ಮಾಡುವವರಲ್ಲಿ, ಹೆಚ್ಚಿನ ಶಾಖದಿಂದ ವೀರ್ಯ ನಾಶವಾಗುತ್ತದೆ. ತಣ್ಣೀರ ಸ್ನಾನ ಸಾಧ್ಯವಿಲ್ಲದಿದ್ದರೆ, ಉಗುರು ಬೆಚ್ಚನ್ನ ನೀರಲ್ಲಿ ಮಾಡಿ. ದಣಿವಾಗಿದೆ, ಬಹಳ ಬೆವರಿದ್ದೀರಿ ಎಂದಾಗ ಮಾತ್ರ, ಬಿಸಿ ನೀರ ಸ್ನಾನ ಮಾಡಿ. ನಿತ್ಯ ಅಭ್ಯಂಜನ ಮಾಡಿ.

ರಮೇಶ್ – ಹಬ್ಬ ಹರಿದಿನ, ಭಾನುವಾರ ರಜಾದಿನ, ನಮ್ಮವರೆಲ್ಲ ಅಭ್ಯಂಜನ ಅಂದರೆ ಎಣ್ಣೆ ಸ್ನಾನ ಮಾಡ್ತಾರಲ್ವಾ?

ಡಾ. ಶಿವಕುಮಾರ್- ಆ ಎಣ್ಣೆಸ್ನಾನ ಪ್ರತಿ ನಿತ್ಯ ಮಾಡಬೇಕು. ಸ್ನಾನಕ್ಕೆ ಮೊದಲು ತಲೆ, ಮೈ ಕೈ, ಕಾಲು ಎಲ್ಲ ಕಡೆ ಎಣ್ಣೆ ಹಚ್ಚಿಕೊಂಡು, ತಲೆಗೆ ಸ್ನಾನ ಮಾಡಿ. ಒಂದೇ ವಾರದಲ್ಲಿ ನಿಮ್ಮ ಆರೋಗ್ಯ ಹೇಗೆ ಸುಧಾರಿಸುತ್ತೆ ಗಮನಿಸಿ. 5 ನಿಮಿಷದಲ್ಲೇ ನಿತ್ಯ ಎಣ್ಣೆ ಸ್ನಾನ ಮಾಡಬಹುದು. ಕೊಬ್ಬರಿ ಎಣ್ಣೆ ಒಳ್ಳೆಯದು. ನಿತ್ಯ ಬಳಕೆಯಿಂದ ಒತ್ತಡ, ಜಗಳ, ಆತಂಕ ದೂರವಾಗಿ ಮನಸ್ಸು ಶಾಂತವಾಗಿಡುತ್ತದೆ. ಸೋಪು, ಸೀಗೆಪುಡಿ ಬಿಟ್ಟು, ಕಡಲೆಹಿಟ್ಟು, ಮೆಂತ್ಯೆಹಿಟ್ಟು, ಅಂಟವಾಳಕಾಯಿ ಸೇರಿಸಿ ಸ್ನಾನ ಮಾಡಿ. ಸೋಪು, ಸೀಗೆಪುಡಿ, ಕಡಲೆಹಿಟ್ಟು ಚರ್ಮ ಒಣ ಮಾಡುತ್ತೆ. ಬೆವರು ಬರೋ ಕಂಕುಳಿಗೆ ಸೋಪು ಹಚ್ಚಿ.

ಋತುಚರ್ಯ: ಶಿಶಿರ ಮಾಸದಲ್ಲಿ ಚಳಿ ಜಾಸ್ತಿ. ಅಗ್ನಿ ಜಾಸ್ತಿ. ಜೀರ್ಣಶಕ್ತಿ ಹೆಚ್ಚು. ಹಸಿವಾಗ್ತದೆ. ಜಾಸ್ತಿ ತಿನ್ನಿ. ವ್ಯಾಯಾಮ ಮಾಡಿ. ವಯಸ್ಸಾಯ್ತು ಅಂದ್ಕೊಂಡ್ರೆ ವೃದ್ಧ. ನಾನು 20ರ ಯುವಕ ಅನ್ಕೊಳ್ಳಿ. ಏನಾದ್ರೂ ಮಾಡ್ತೀವಿ, ಜಯಸ್ತೀವಿ ಅಂದ್ಕೊಳ್ಳಿ. ಧನಾತ್ಮಕ ಮನಸ್ಸು ನಂಬಿಕೆ ಹೊಂದಿ. ಮನಸ್ಸಿನ ಭಾವನೆ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ರಮೇಶ್ – ಊಟ ಹೇಗಿರಬೇಕು?

ಡಾ. ಶಿವಕುಮಾರ್- ಬೇಜಾರಿನಿಂದ ತಿನ್ನಬೇಡಿ. ಊಟದ ಕೊನೆಗೆ ಮಜ್ಜಿಗೆ ಕುಡಿಯಿರಿ. ಶಾಸ್ತ್ರೀಯ ರೀತಿ ಮೊಸರು ಕಡೆದು, ಬೆಣ್ಣೆ ತೆಗೆದು, ಬಳಸೋ ಮಜ್ಜಿಗೆ ಇರಲಿ. ಚೆನ್ನಾಗಿ ನೀರು ಕುಡಿಯಿರಿ.

ರಮೇಶ್ – ಎಷ್ಟು ನೀರು ದಿನಾ ಕುಡೀಬೇಕು?

ಇತರರು – ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಎಷ್ಟು ಕುಡೀಬೇಕು?

ಡಾ. ಶಿವಕುಮಾರ್- ಮೊದಲು ನಿಮ್ಮ ಮೂತ್ರದ ಬಣ್ಣ ನೋಡಿ. ಬಿಳಿ ಅಥವಾ ಸ್ವಲ್ಪ ಹಳದಿ ಇದ್ದರೆ ಸರಿ. ತುಂಬಾ ಹಳದಿ ಇದ್ದರೆ ಜಾಸ್ತಿ ನೀರು ಕುಡಿಯಿರಿ.

ರಮೇಶ್ – ಅತಿ ಜಾಸ್ತಿ ನೀರು ಕುಡಿದ್ರೆ ಏನಾಗುತ್ತೆ?

ಡಾ. ಶಿವಕುಮಾರ್- ಅತಿ ಜಾಸ್ತಿ ನೀರು ಕುಡಿದ್ರೆ ಅಗ್ನಿಮಾಂದ್ಯ ಜಾಸ್ತಿ ಅಗುತ್ತೆ. ಸೇವಿಸಿದ ಆಹಾರ ಜೀರ್ಣವಾಗಲು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಬೇಕು. ನೀರು ಜಾಸ್ತಿ ಆದರೆ, ಈ ಆಮ್ಲ ಕಡಿಮೆ ಆಗಿ, ಜೀರ್ಣಶಕ್ತಿ ಕಡಿಮೆ ಆಗುತ್ತೆ.

ರಮೇಶ್ – ಊಟದ ಮಧ್ಯೆ ಹೇಗೆ ಹಾಗೂ ಎಷ್ಟು ನೀರು ಕುಡಿಯಬೇಕು?

ಡಾ. ಶಿವಕುಮಾರ್- ಹೊಟ್ಟೆ ಗಾತ್ರ 3 ಭಾಗ ಮಾಡಿಕೊಂಡು ಹೊಟ್ಟೆಯ 1/3 ಭಾಗ ಊಟ ತಿನ್ನಿ. 1/3 ಭಾಗ ನೀರು ಕುಡಿಯಿರಿ. 1/3 ಭಾಗ ಗಾಳಿಗಾಗಿ ಖಾಲಿ ಇಡಿ. ಜಾಸ್ತಿ ಊಟ ಮಾಡಿ, ನೀರು ಕುಡಿದರೆ ಕಷ್ಟ. ಹೀಗಾಗಿ ನೀರನ್ನು ಊಟದ ಮಧ್ಯೆ ಮಧ್ಯೆ ಕುಡಿಯಬೇಕು. ಊಟದ ನಂತರ ನೀರು ಕುಡಿಯಬಾರದು. ದಿನಾ 5-6 ಗ್ಲಾಸ್ ನೀರು ಕುಡಿಯಿರಿ. ಅತಿ ಹೆಚ್ಚು ಊಟ ಮಾಡಿದರೆ ಅಧಿಕ ರಕ್ತದ ಒತ್ತಡ. ಚೆನ್ನಾಗಿ ಬೇಯಿಸಿದ್ದು ತಿನ್ನಿ. ಸರಳ ಸಕ್ಕರೆ, ಗ್ಲೂಕೋಸ್ ಆಗಿ ರಕ್ತದಲ್ಲಿ ಬೇಗ ಸೇರಿಕೊಳ್ಳುತ್ತೆ. ಊಟಕ್ಕೆ ಮುಂಚೆ ನೀರು ಕುಡಿದರೆ ಆಮ್ಲದ ಹೊರಸೂಸುವಿಕೆ ದುರ್ಬಲ ವಾಗುತ್ತೆ. ಹಸಿ ತರಕಾರಿ, ಸೊಪ್ಪು, ಮೊಳಕೆಕಾಳು ತಿನ್ನುವಾಗ ಮಧ್ಯೆ ನೀರು ಕುಡಿಯಿರಿ. ತಿನ್ನುವಾಗ ಮಧ್ಯೆ ನೀರು ಕುಡಿಯಿರಿ.

ಭಾಗವಹಿಸಿದವರ ಪ್ರಶ್ನೆ – ಬೆಳಗೆ ಎದ್ದು ತಾಮ್ರದ ಪಾತ್ರೇಲಿ ನೀರು ಕುಡಿದರೆ ಹೇಗೆ?

ಡಾ. ಶಿವಕುಮಾರ್- ಬೆಳಿಗ್ಗೆ ಕುಡಿದರೆ ಜೀರ್ಣಶಕ್ತಿ ಕಡಿಮೆ ಆಗಿ ತಿಂದ ತಿಂಡಿಯಿಂದ ಅಜೀರ್ಣ. ತಣ್ಣೀರಿನ ಬದಲು ಬಿಸಿ ನೀರು ಕುಡಿಯಿರಿ. ಇದರಿಂದ ಉಚಿsಣಡಿiಛಿ ಗ್ಯಾಸ್ಟ್ರಿಕ್ ಅಥವಾ ಖಿoxiಟಿs ಆಗೋಲ್ಲ. ಮೆಟಾಬಾಲಿಸಂ ವೇಗವಾಗಿ ಆಗುತ್ತೆ.

ತಡೆಯುವಿಕೆ ಹಾಗೂ ಗುಣವಾಗುವಿಕೆ:- ಜೀವನದಲ್ಲಿ ಬಹಳ ಒತ್ತಡಗಳಿವೆ. ಆಹಾರ ನಿಯಂತ್ರಣದಲ್ಲಿ ಅನ್ನ ತಿನ್ನಲೇಬಾರದೇ? ಅನ್ನ ತಿನ್ನಿ. 3 ಸಲ ಗಂಜಿ ಬಸಿದ ಅನ್ನ ತಿನ್ನಿ. ಕುಕ್ಕರ್‍ನಲ್ಲಿ ಪಾಲೀಶ್ ಮಾಡದ ಅಕ್ಕಿ ಬೇಯಿಸಿ ತಿನ್ನಿ. ಎಲ್ಲರಿಗೂ ಸಿರಿಧಾನ್ಯ ಒಗ್ಗೋಲ್ಲ. ಆಯುರ್ವೇದದ ಪ್ರಕಾರ ಅಗ್ನಿ ಸಮ ಇದ್ದರೆ, ಆರೋಗ್ಯ. ಇಲ್ಲಿ ಸಮ ಮೂತ್ರ ಮಲ ಇರಬೇಕು. ಪ್ರಸನ್ನ ಮನ-ಆತ್ಮ ಇರದೇ, ಆuಟಟ ಆದರೆ, ಯೋಚನೆ ದುಗುಡದ ಕಾಹಿಲೆಗೆ ಮೂಲ.

ರಮೇಶ್ – ಎಲ್ಲ ಬೇಯಿಸಿ ತಿನ್ನಿ ಅಂತೀರಿ. ನನ್ನ ಚಿಕ್ಕಪ್ಪನ ಮಿತ್ರ ಶಾಸ್ತ್ರಿ ಅನ್ನುವವರು, ಅವರ ಕುಟುಂಬದವರು, ತುಮಕೂರಿನ ಪ್ರಕೃತಿ ಅಥವಾ ನಿಸರ್ಗ ಪದ್ಧತಿ ಅನುಸರಿಸಿ, 50 ವರ್ಷಕ್ಕಿಂತ ಹೆಚ್ಚು ಮನೆಯಲ್ಲಿ ಅಗ್ನಿ ಇರದೇ, ಏನನ್ನೂ ಬೇಯಿಸದೇ, ಕಾಳಿನ ರಸ, ಕಾಳಿನ ಹಾಲು ಕುಡಿದು, ಹಸಿ ಹಸಿ ಬೇಯಿಸದ ಆಹಾರ ತಿಂತಿದಾರಲ್ಲ!.

ಡಾ. ಶಿವಕುಮಾರ್:- ಅದು ಕೆಲವರಿಗೆ ಆಗಬಹುದು. ಎಲ್ಲರಿಗೂ ಆಗೋಲ್ಲ.

ಡಾ. ಶ್ರೀಕೃಷ್ಣ ಮಾಯ್ಲೆಂಗಿ – ನನ್ನ ಒಬ್ಬ ಬಂಧು ತುಂಬಾ ನೀರು ಕುಡಿದು, ಕಡಿಮೆ ಉಪ್ಪು ತಿಂದಾಗ, ಹುಚ್ಚುಚ್ಚು ವರ್ತನೆ ಜಾಸ್ತಿಯಾಯಿತಲ್ಲ?.

ಡಾ. ಶಿವಕುಮಾರ್:- ಎಲ್ಲಕ್ಕೂ ಕಾರ್ಯ ಕಾರಣ ಸಿದ್ಧಾಂತವಿದೆ. ಒಬ್ಬರಿಗೆ ಅಲರ್ಜಿ. ಯಾವುದರಿಂದ ಎಂದು ಬಹಳ ಕಷ್ಟಪಟ್ಟು ಪರೀಕ್ಷಿಸಿದಾಗ, ಅವರಿಗೆ ಕಡಲೆ ಬೇಳೆ ಅಲರ್ಜಿ ಎಂದು ತಿಳಿಯಿತು. ಅದನ್ನ ಬಿಟ್ಟ ಮೇಲೆ ಅಲರ್ಜಿ ಹೋಯಿತು.

ರಮೇಶ್ – ಜೇನುತುಪ್ಪದ ಬಳಕೆ ಬಗ್ಗೆ ಏನಂತೀರಿ?

ಡಾ. ಶಿವಕುಮಾರ್:- ಅದು ಸಿಹಿ ಹಾಗೂ ಕÀಫಹರ. ಆದರೆ ಯಾರಿಗೆ ಇನ್ನೂ ಮಕ್ಕಳಾಗಿರೊಲ್ಲ, ಅವರು ತಿನ್ನಬಾರದು. ಇದು ಶುಕ್ರಧಾತು ಕಡಿಮೆ ಮಾಡುತ್ತೆ. ಹಾಲು ಕುಡಿದರೆ ಕಫ. ಬಿಸಿ ಹಾಲಿಗೆ ಜೇನು ಹಾಕಿದರೆ ಕೆನೆ ಕಟ್ಟುವುದಿಲ್ಲ. ದೇಹ ಪ್ರಕೃತಿ, ವ್ಯಾಯಾಮ ಅಧರಿಸಿ, ವಾತಾವರಣ ಅವಲಂಬಿಸಿ, ಆಹಾರ ತಿನ್ನಿ.

ಶ್ರೀಧರಮೂರ್ತಿ:- ಏನೇನೋ ತಿನ್ನಬೇಕು ಆಸೆ ನಮಗೆ ಶಕ್ತಿ ಜಾಸ್ತಿ ಬೇಕು. ರೋಗಗಳನ್ನು ತಡೆಯುವ ಶಕ್ತಿ ಜಾಸ್ತಿ ಆಗಬೇಕು. ನಾನು ಮೊದಲು 1 ಗಂಟೆಗೆ 6 ಕಿ.ಮೀ. ನಡೀತಿದ್ದೆ. ಪಾದ ಮುರಿದು ಚಿಕಿತ್ಸೆ ಆದ ಮೇಲೆ ವೇಗ 1 ಗಂಟೆಗೆ 2 ಕಿ.ಮೀ. ಆಗಿದೆ. ಕೂರಲು, ನಿಲ್ಲಲು ಆಗೋಲ್ಲ. ಕಾಲು ಕೆಳಗಿಳಿಸಲೂ ಕಷ್ಟ. ಇದಕ್ಕೆ ಪರಿಹಾರವೇನು?

ರಮೇಶ್ – ಡಾಕ್ಟರೇ, ಶ್ರೀಧರಮೂರ್ತಿ ತಾವು ತಯಾರಾಗಿ ನಡೆದಾಡಲು ಶಕ್ತಿ ಕೇಳ್ತಿಲ್ಲ. ಪರೋಪಕಾರಕ್ಕಾಗಿ ಶಕ್ತಿ ಬೇಕು ಅಂತಿದಾರೆ.

ಡಾ. ಶಿವಕುಮಾರ್:- ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ.

ಡಾ. ಶ್ರೀಕೃಷ್ಣ ಮಾಯ್ಲೆಂಗಿ – 15 ವರ್ಷಗಳಿಂದ ವೈಧ್ಯಲೋಕ ಹಾಗೂ 6 ವರ್ಷಗಳಿಂದ ಹೆಲ್ತ್ ವಿಷನ್ ಪ್ರಕಟಿಸ್ತಿದ್ದೀನಿ. ವೆಬ್ ಪೋರ್ಟಲ್ ಇದೆ. ಈ ಆರೋಗ್ಯ ಶಿಬಿರಗಳ ಮೂಲಕ, ಮುಂದಿನ ಜನಾಂಗ ಆರೋಗ್ಯವಾಗಿರಲಿ ಎಂಬುದು ನಮ್ಮ ಬಯಕೆ ಹಾಗೂ ಗುರಿ. ಶಾಲೆ-ಕಾಲೇಜುಗಳಿಗೆ ವೈದ್ಯರನ್ನು ಕರೆದೊಯ್ದು, ಪಾಲಕರು ಮಕ್ಕಳಿಗೆ ಜಂಕ್‍ಫುಡ್ ಕೊಡಬಾರದು ಅಂತೀವಿ. ಸಮಾಜದಲ್ಲಿ ಆರೋಗ್ಯದ ಬಗ್ಗೆ ಜನಜಾಗೃತಿ ಆಗಲಿ ಎಂಬುದೇ ನಮ್ಮ ಧ್ಯೇಯವಾಕ್ಯ. ಕಾರ್ಯಕ್ರಮದ ಕೊನೆಗೆ ಎನ್.ವ್ಹಿ.ರಮೇಶ್, ವೃದ್ಧರ ಆರೋಗ್ಯದ ಬಗ್ಗೆ ಒಂದು ಕಿರು ಪ್ರಹಸನ ಪ್ರಸ್ತುತಪಡಿಸಿದಾಗ ಸಭಿಕರು ನಕ್ಕು ಆನಂದಿಸಿ ಕರತಾಡನ ಮಾಡಿದರು.

Share this: