Vydyaloka

ವಿಟಮಿನ್ ಎ ಅಗತ್ಯತೆ ಏನು?

ವಿಟಮಿನ್‌ಗಳು ದೇಹದಲ್ಲಿ ಅತಿ ಮಹತ್ವದ ಕೆಲಸಗಳನ್ನು ಮಾಡುತ್ತವೆ. ವಿಟಮಿನ್‌ಗಳು ಸಾವಯವ ಮಿಶ್ರಣಗಳಾಗಿದ್ದು, ಅತಿ ಅವಶ್ಯಕ ಪೋಷಕಾಂಶಗಳಾಗಿವೆ. ವಿಟಮಿನ್‌ಗಳಿಂದ ದೇಹಕ್ಕೆ ಬಲ, ಶಕ್ತಿ ಸಿಗುವುದಿಲ್ಲ. ಆದರೆ ಆಹಾರದಲ್ಲಿಯ ಬಹುಪಾಲು – ಪ್ರೊಟೀನ್ಸ್, ಕಾರ್ಬೋಹೈಡ್ರೈಟನ್ ಮತ್ತು ಫ್ಯಾಟ್ಸ್ -> ಸಸಾರಜನಕ, ಪಿಷ್ಠ ಮತ್ತು ಕೊಬ್ಬುಗಳನ್ನು ಜೀರ್ಣಿಸಿಕೊಳ್ಳಲು ಮತ್ತು ಉಪಯೋಗಿಸಿಕೊಳ್ಳಲು ವಿಟಮಿನ್‌ಗಳು ಬೇಕು. 
ನಮ್ಮ ದೇಹವು ವಿಟಮಿನ್‌ಗಳನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ಪ್ರತಿನಿತ್ಯ ವಿಟಮಿನ್‌ಗಳನ್ನು ನಾವು ನಮ್ಮ ಆಹಾದಲ್ಲಿ ತೆಗೆದುಕೊಳ್ಳಬೇಕು. ನಾವು ದಿನನಿತ್ಯ ಊಟ ಮಾಡುವ ಸಮತೋಲನ ಆಹಾರದಲ್ಲಿ ದೇಹಕ್ಕೆ ಬೇಕಾಗುವಷ್ಟು ವಿಟಮಿನ್‌ಗಳು ಇರುತ್ತವೆ.

ವಿಟಮಿನ್‌ಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ.
1. ಕೊಬ್ಬು, ಜಿಡ್ಡುಪದಾರ್ಥಗಳಲ್ಲಿ ಕರಗುವ ವಿಟಮಿನ್‌ಗಳು – ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ.
2. ನೀರಿನಲ್ಲಿ ಕರಗುವಂತಹ ವಿಟಮಿನ್‌ಗಳು – ವಿಟಮಿನ್ ಬಿ-ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ.

ವಿಟಮಿನ್ ಎ – ಪರ್ಯಾಯ ಪದಗಳು:
1. ವಿಟಮಿನ್ ಎ1
2. ವಿಟಮಿನ್ ಎ2
3. ರೆಟಿನಾಲ
4. ಡಿಹೈಡ್ರೋ ರೆಟಿನಾಲ
5. ಕಣ್ಣುಗಳನ್ನು ರಕ್ಷಿಸುವ ವಿಟಮಿನ್
6. ಕಣ್ಣಿನ ತೇವಾಂಶಗಳನ್ನು ಕಾಪಾಡುವ ವಿಟಮಿನ್

ವಿಟಮಿನ್ ಎ ಯ ಇತಿಹಾಸ :
1816ರಲ್ಲಿ ಸಂಶೋಧಕ ಪ್ರಾನ್‌ಕೊಯ್ಸಿ ತಮ್ಮ ಪ್ರಯೋಗಾಲಯದಲ್ಲಿ ನಾಯಿಗಳಿಗೆ ಮಿತವಾದ ಮತ್ತು ಸಂಸ್ಕರಿಸಿದ ಆಹಾರ ಕೊಡುವುದರಿಂದ ನಾಯಿಗಳ ಕಣ್ಣಿನಲ್ಲಿ ಗಾಯಗಳಾಗುವುದು ಮತ್ತು ಬೇಗನೆ ಸಾಯುವುದನ್ನು ಕಂಡುಹಿಡಿದರು. ೧೯೧೨ರಲ್ಲಿ ಪ್ರೆಡ್ರಿಕ್ಸ್ ಹಾಪಕಿನ್ ಇವರು ನಾಯಿಗಳ ಆಹಾರದಲ್ಲಿ ಮೀನು ಮತ್ತು ಮೊಟ್ಟೆಗಳನ್ನು ಕೊಟ್ಟಾಗ, ಕಣ್ಣಿನ ಗಾಯಗಳು ಕಡಿಮೆಯಾಗಿ ನಾಯಿಗಳು ಬೇಗನೆ ಚೇತರಿಸಿಕೊಂಡವು. ಹಾಪಕಿನ್‌ರವರು ಮೀನು ಮತ್ತು ಮೊಟ್ಟೆಗಳಲ್ಲಿ ಕಣ್ಣುಗಳನ್ನು ರಕ್ಷಿಸುವ ಪದಾರ್ಥವನ್ನು ವಿಟಮಿನ್ ಎ ಎಂದು ಕರೆದರು. ಇವರ ಈ ಸಂಶೋಧನೆಗೆ ೧೯೨೦ರಲ್ಲಿ ನೋಬೆಲ್ ಪಾರಿತೋಷಕ ಕೊಟ್ಟು ಸನ್ಮಾನಿಸಿದರು.
ಪ್ರತಿಯೊಂದು ವಿಟಮಿನ್‌ಗಳಿಗೆ ವಿಶೇಷವಾದ ಕಾರ್ಯ ಇರುತ್ತದೆ. ಆದ್ದರಿಂದ ಒಂದು ವಿಟಮಿನ್ ಕಡಿಮೆ ಇದ್ದರೆ ಆ ವಿಟಮಿನ್‌ನ ಕಾರ್ಯಭಾರದ ಅನುಗುಣವಾಗಿ ವಿಶೇಷ ರೋಗಗಳು ಬರುತ್ತವೆ.

ಕೊಬ್ಬಿನಲ್ಲಿ ಕರಗುವ ವಿಟಮಿನ್ ಎ :
ವಿಟಮಿನ್ ಎ ಎರಡು ರೂಪಗಳಲ್ಲಿ ದೊರಕುತ್ತದೆ.
1. ಪ್ರಾಣಿಜನ್ಯ ವಸ್ತುಗಳಲ್ಲಿ – ರೆಟಿನಾಲ ಮತ್ತು
2. ಸಸ್ಯಜನ್ಯ ವಸ್ತುಗಳಲ್ಲಿ -ಬೀಟಾಕೆರೋಟಿನ್ ರೂಪದಲ್ಲಿ ದೊರಕುತ್ತದೆ. ನಮ್ಮ ಆಹಾರದಲ್ಲಿ ತೆಗೆದುಕೊಳ್ಳುವ ಸಸ್ಯಜನ್ಯ ವಸ್ತುಗಳಲ್ಲಿರುವ ಬೀಟಾಕೆರೋಟಿನ್ ನಮ್ಮ ಕರುಳಿನಲ್ಲಿ, ರೆಟಿನಾಲ ಆಗಿ ಪರಿವರ್ತನೆ ಆಗಿ, ಯಕೃತನ್ನು ತಲುಪುತ್ತದೆ. ಯಕೃತ್‌ನಲ್ಲಿ ರೆಟಿನಾಲ ಪರ್ಮಿಟೇಟ್ ಆಗಿ ಸಂಗ್ರಹವಾಗುತ್ತದೆ.

ವಿಟಮಿನ್ ಎ ಜೀವಸತ್ವದ ಕಾರ್ಯಗಳು:
ನಮ್ಮ ದೇಹದಲ್ಲಿ ನಡೆಯುವ ಜೈವಿಕ ಕಾರ್ಯಗಳಲ್ಲಿ ವಿಟಮಿನ್ ಎ ಜೀವಸತ್ವವು ಬಹಳಷ್ಟು ಪರಿಣಾಮಕಾರಿಯಾಗಿ ಭಾಗಿಯಾಗುತ್ತದೆ
ಕಣ್ಣುಗಳ ದೃಷ್ಟಿ ಸರಿಯಾಗಿ ಕಾಣಲುಕಣ್ಣಿನ ಒಳಪದರದಲ್ಲಿ ತಯಾರಾಗುವ Rhodopsin – ರೊಡಾಪ್ಸಿನ್ ಮುಖ್ಯವಾದ ರಾಸಾಯನಿಕ. ರೊಡಾಸ್ಪಿನ್ ತಯಾರು ಆಗಲು ವಿಟಮಿನ್ ಎ ಬೇಕು. ಸಂಜೆ ಮತ್ತು ಮಬ್ಬು ಕತ್ತಲು ಇದ್ದ ಸಮಯದಲ್ಲಿ ವಿಟಮಿನ್ ಎ, ರೊಡಾಪ್ಸಿನ್ ಆಗಿ ನಾವು ಸರಿಯಾಗಿ ನೋಡುತ್ತೇವೆ. ವಿಟಮಿನ್ ಎ ಕಡಿಮೆ ಇದ್ದರೆ, ಸಂಜೆ ಕಣ್ಣುಗಳ ದೃಷ್ಟಿ ಕಡಿಮೆಯಾಗುತ್ತದೆ.
ನಮ್ಮ ಚರ್ಮ – Skin, Mucus Membrane – ಲೋಳೆಯ ಪದರು ಅನ್ನನಾಲ, ಜಠರ, ಕರಳು, ಶ್ವಾಸಮಾಗ, ಮೂತ್ರಜನಕಾಂಗ ಮತ್ತು ಕಣ್ಣಿನ ರೆಪ್ಪೆಯ ಒಳಪದರಗಳ ಸಮಗ್ರತೆ ಕಾಪಾಡಲು ಮತ್ತು ಸಂರಕ್ಷಿಸಲು ವಿಟಮಿನ್ ಅವಶ್ಯಕ.
ನಮ್ಮ ಮೂಳೆಗಳು ಗಟ್ಟಿಯಾಗಿ ಸಶಕ್ತವಾಗಿರಲು ವಿಟಮಿನ್ ಡಿ ಜೊತೆ ವಿಟಮಿನ್ ಎ ಕೂಡ ಅವಶ್ಯ. ವಿಟಮಿನ್ ಡಿ ಮತ್ತು ಎ ಸಮೃದ್ಧವಾಗಿದ್ದರೆ ಮೂಳೆಗಳು ಗಟ್ಟಿಯಾಗಿ ಉದ್ದವಾಗಿ ಬೆಳೆದು ನಮ್ಮ ಎತ್ತರವನ್ನು ಹೆಚ್ಚಿಸುತ್ತದೆ.
ವಿಟಮಿನ್ ಎ ಜೀವಸತ್ವವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೇಲಿಂದ ಮೇಲೆ ಗಂಟಲಲ್ಲಿ ಕೆರೆತ, ಕೆಮ್ಮು ಮತ್ತು ಕಫ ಬರುವುದು. ವಿಟಮಿನ್ ಎ ಈ ಒರಟು ಬದಲಾವಣೆಯನ್ನು ಸರಿಪಡಿಸುತ್ತದೆ. ವಿಟಮಿನ್ ಎ ಕೊರತೆ ಹಾಗೆಯೇ ಮುಂದುವರೆದರೆ ಗಂಟಲು ಪದರು, ಶ್ವಾಸಕೋಶದ ಪದರುಗಳಲ್ಲಿ ಮೂತ್ರನಾಳಗಳ ಪದರುಗಳಲ್ಲಿ ಒರಟುತನ ಹೆಚ್ಚಿ ಕ್ಯಾನ್ಸರ್ ರೋಗ ಬರಬಹುದು ಮತ್ತು ಮೂತ್ರನಾಳಗಳಲ್ಲೂ ಕಲ್ಲುಗಳು ಉತ್ಪನ್ನವಾಗಬಹುದು.

ಮಿಟಮಿನ್ ಎ ಮೂಲಗಳು:
ವಿಟಮಿನ್ ಎ ನಿಸರ್ಗದಲ್ಲಿ ಹಸಿರು ಎಲೆಗಳಲ್ಲಿ, ಹಣ್ಣುಗಳಲ್ಲಿ ಮತ್ತು ಮಾಂಸಹಾರಿ ಆಹಾರದಲ್ಲಿ ಸಿಗುತ್ತದೆ. ಹಸಿರು ಎಲೆಗಳಲ್ಲಿ ಮತ್ತು ಹಣ್ಣುಗಳಲ್ಲಿ ಇದು ಕ್ಯರೋಟಿನ್ ರೂಪದಲ್ಲಿ ಮತ್ತು ಮಾಂಸಹಾರದಲ್ಲಿ ರೆಟಿನಾಲ ರೂಪದಲ್ಲಿ ದೊರಕುತ್ತದೆ.

ಸಸ್ಯಹಾರಿಗಳಿಗೆ ವಿಟಮಿನ್ ಎ:
ಹಸಿರು ತರಕಾರಿಗಳಾದ ಪಾಲಕ, ಮೆಂತ್ಯೆ ಪಲ್ಲೆಗಳಲ್ಲಿ ನಮಗೆ ಬೇಕಾಗುವಷ್ಟು ವಿಟಮಿನ್ ಎ ದೊರಕುತ್ತದೆ. ಹಸಿರು ಎಲೆಗಳಲ್ಲಿ ವಿಟಮಿನ್ ಎ ಹೆಚ್ಚು ಇರುತ್ತದೆ. ಹಣ್ಣುಗಳಾದ ಮಾವು, ಪಪ್ಪಾಯಿ, ಕುಂಬಳಕಾಯಿ ಮತ್ತು ಗಜ್ಜರಿಗಳಲ್ಲಿಯೂ ಕೂಡ ವಿಟಮಿನ್ ಎ ಬಹಳಷ್ಟು ಇರುತ್ತದೆ. ತರಕಾರಿ ಮತ್ತು ಹಣ್ಣುಗಳಲ್ಲಿಯ ಕ್ಯಾರೊಟಿನ್ ನಮ್ಮ ಕರುಳುಗಳಲ್ಲಿ ಸ್ನಿಗ್ದ ಪದಾರ್ಥಗಳ ಸಂಯೋಗದಿಂದ ಹೀರಿಕೊಂಡು, ರಕ್ತನಾಳಗಳ ಮೂಲಕ ಯಕೃತ್ ತಲುಪಿ ಅಲ್ಲಿ ರೆಟಿನಾಲ ಆಗಿ ಪರಿವರ್ತನೆಯಾಗುತ್ತದೆ. ಈ ರೆಟಿನಾಲ ನಮ್ಮ ದೇಹದ ರಸಾಯನಿಕ ಕ್ರಿಯೆಯಲ್ಲಿ ಭಾಗಿಯಾಗಿ, ಉಪಯುಕ್ತ ರಸಾಯನಿಕಗಳಾಗಿ (ರೊಡಾಪ್ಸಿನ್) ತಯಾರು ಆಗುತ್ತದೆ.

ಮಂಸಾಹಾರದಲ್ಲಿ ವಿಟಮಿನ್ ಎ:

ಮೊಟ್ಟೆ, ಮೀನು, ಮೀನಿನ ಎಣ್ಣೆಯಲ್ಲಿ, ಮಾಂಸ ಮತ್ತು ಯಕೃತ್‌ದಲ್ಲಿ ರೆಟಿನಾಲ ರೂಪದಲ್ಲಿ ದೊರಕುತ್ತದೆ.

ವಿಟಾಮಿನ್ ಎ ಕೊರತೆಯಿಂದ ಆಗುವ ಪರಿಣಾಮಗಳು:
ಕಣ್ಣಿನಲ್ಲಿಯ CONJUCTIVA ಲೋಳೆಪದರಿನಲ್ಲಿ ತೇವ ಕಡಿಮೆಯಾಗಿ, ಲೋಳೆಪದರು ಒಣಗುತ್ತದೆ, ಮತ್ತು ಪದರುಗಟ್ಟುತ್ತದೆ -BITOT SPOTS. ಕಾರ್ನಿಯದಲ್ಲಿಯ ಪಾರದರ್ಶಕತೆ ಕಡಿಮೆಯಾಗುತ್ತದೆ, ಗಟ್ಟಿತನ ಕಡಿಮೆಯಾಗುತ್ತದೆ, ಸಂಜೆ ಕಣ್ಣುಗಳು ಸರಿಯಾಗಿ ಕಾಣಿಸುವುದಿಲ್ಲ, ಈ ಹಂತದಲ್ಲಿ ವಿಟಮಿನ್ ಎ ಕೊಡದಿದ್ದರೆ, ರಾತ್ರಿ ಕುರುಡು ಬರುತ್ತದೆ ಮತ್ತು ಕಾರ್ನಿಯದಲ್ಲಿ ಹುಣ್ಣುಗಳು ಕೂಡ ಆಗುತ್ತವೆ.
ಚರ್ಮದಲ್ಲಿರುವ ನುಣುಪು, ಹೊಳಪು ಮತ್ತು ಮೃದುತ್ವವು ಕಡಿಮೆಯಾಗಿ ಚರ್ಮವು ಒರಟು, ನಿಸ್ತೇಜವಾಗುತ್ತದೆ. ಮೊಣಕೈ ಮತ್ತು ಮೊಣಕಾಲುಗಳ ಚರ್ಮದಲ್ಲಿ ಪ್ರಾರಂಭಿಕವಾಗಿ ಒರಟಾದ, ಚೂಪಾದ, ಗಟ್ಟಿಯಾದ, ಉಬ್ಬಿದ ಗಂಟುಗಳು ಆಗುತ್ತವೆ. ಈ ಹಂತದಲ್ಲಿ ವಿಟಮಿನ್ ಎ ಕೊಡದಿದ್ದರೆ, ಚರ್ಮದ ಎಲ್ಲ ಭಾಗಗಳಲ್ಲಿ ಚರ್ಮವು ಒರಟು ಆಗುವುದು ಮತ್ತು ಗಂಟುಗಳು ಕಾಣಿಸಿಕೊಳ್ಳುವವು. ನಮ್ಮ ಚರ್ಮವು ಕಪ್ಪೆಯ ಒಣ ಚರ್ಮದಂತೆ ಕಾಣುತ್ತದೆ. ಇದಕ್ಕೆ TOAD SKIN-PHRYNODERMA ಅನ್ನುತ್ತಾರೆ.

ಹಸಿವು ಕಡಿಮೆಯಾಗುವುದು :

ಚರ್ಮದಲ್ಲಿ ಮೃದುತ್ವವು ಕಡಿಮೆಯಾಗುವಂತೆ, ಜಠರ ಮತ್ತು ಕರಳಿನ ಪದರುಗಳಲ್ಲಿ ಮೃದುತ್ವವು ಕಡಿಮೆಯಾಗಿ, ಒರಟಾಗಿ, ಆಹಾರವು ಜೀರ್ಣವಾಗುವುದಿಲ್ಲ ಮತ್ತು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಆದ್ದರಿಂದ ಹಸಿವು ಕಡಿಮೆಯಾಗುತ್ತದೇ ಮತ್ತು MAL ABORPTION – ಎಲ್ಲ ಆಹಾರಗಳ ಕೊರತೆ ಉಂಟಾಗುತ್ತವೆ.
ಲೋಳೆಪದರುಗಳ ಮೃದುತ್ವವು ಕಡಿಮೆಯಾಗುವುದರಿಂದ ಶ್ವಾಸಕೋಶದ ಸೋಂಕು ಮತ್ತು ಮೂತ್ರನಾಳದಲ್ಲಿ ಕಲ್ಲು ಉಂಟಾಗುವುದು.

ಪ್ರತಿದಿನ ವಿಟಮಿನ್ ಎ ನಮಗೆ ಬೇಕಾಗುವ ಪ್ರಮಾಣ: 
ಹಸು ಕೂಸು ಸಸ್ಯ ಆಹಾರದಲ್ಲಿಯ ಪ್ರಮಾಣ 2800 mcg ಮಾಂಸಾಹಾರದಲ್ಲಿಯ ಪ್ರಮಾಣ ತಾಯಿಯ ಹಾಲು 350 mcg

ಶಾಲಾ ಮಕ್ಕಳಲ್ಲಿ ವಿಟಮಿನ್ ಎ ಕಾರ್ಯಕ್ರಮ:

ನಮ್ಮ ಸರ್ಕಾರವು ವಿಟಮಿನ್ ಎ, ಎಲ್ಲ ಶಾಲಾ ಮಕ್ಕಳಿಗೆ ಪ್ರತಿ 6 ತಿಂಗಳಿಗೊಮ್ಮೆ ಕೊಡುತ್ತದೆ. ಶಾಲೆಯಲ್ಲಿಯ ಗುರುಗಳು ವ್ಯವಸ್ಥಿತವಾಗಿ ಕಣ್ಣು ಪರೀಕ್ಷೆ ಮತ್ತು ವಿಟಮಿನ್ ಎ ಕೊಡುವುದನ್ನು ಮಾಡುತ್ತಲೇ ಇರುತ್ತಾರೆ.

ವಿಟಮಿನ್ ಎ ಹೆಚ್ಚಿಗೆ ಕೊಟ್ಟರೆ :

ವಾಕರಿಕೆ, ಹೊಟ್ಟೆ ತೊಳಸಿ ಬರುವುದು ಮತ್ತು ವಾಂತಿಯಾಗುವುದು. ನಿದ್ರಾಹೀನತೆ, ಚರ್ಮವು ಒರಟು ಆಗುವುದು, ಬಹಳ ಹೆಚ್ಚು ತೆಗೆದುಕೊಂಡರೆ ಯಕೃತ್‌ದಲ್ಲಿ ಮತ್ತು ಮಿದುಳಿನಲ್ಲಿಯು ಕೂಡ ಬದಲಾವಣೆಗಳು ಆಗುವವು.

                          

ಡಾ. ಕೆ. ಹನುಮಂತಯ್ಯ        ಡಾ. ಮೇನಕಾ ಮೋಹನ್

ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್,

# 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/1/2/3/4/5.   

Email: info@vims.ac.in       

 www.vims.ac.in

Share this: