Vydyaloka

ವಿಶ್ವ ಕ್ಷಯ ರೋಗ ದಿನ – ಮಾರ್ಚ್ 24

ವಿಶ್ವ ಕ್ಷಯ ರೋಗ ದಿನ- ಮಾರ್ಚ್ 24 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜೋರಾಗಿ ಕೆಮ್ಮುವುದು, ಸೀನುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮುಂತಾದವುಗಳಿಂದ ರೋಗಾಣು ಗಾಳಿಯಲ್ಲಿ ಹರಡಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಕ್ಷಯ ರೋಗ ಗುಣಪಡಿಸ ಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದ್ದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಹಾನಿಯನ್ನು ತಡೆಗಟ್ಟಬಹುದು. 

ವಿಶ್ವ ಕ್ಷಯ ರೋಗ ದಿನ- ಮಾರ್ಚ್ 24 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಕ್ಷಯ ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ 1982ರಿಂದ ಜಾರಿಗೆ ತಂದಿತು. ಪ್ರತಿ ವರ್ಷ ಯಾವುದಾದರೊಂದು ಧ್ಯೇಯ ಇದ್ದುಕೊಂಡು ಈ ಆಚರಣೆ ಮಾಡಲಾಗುತ್ತಿದ್ದು  ಮೂರು ಮಿಲಿಯನ್ ಕ್ಷಯ ರೋಗಿಗಳನ್ನು ತಲುಪುವ ಧ್ಯೇಯವನ್ನು ಹೊಂದಿತ್ತು. ಪ್ರತಿ ವರ್ಷ ಸುಮಾರು 9 ಮಿಲಿಯನ್ ಮಂದಿ ವಿಶ್ವದಾದ್ಯಂತ ಈ ರೋಗಕ್ಕೆ ತುತ್ತಾಗುತ್ತಿದ್ದು, ಮೂರು ಮಿಲಿಯನ್ ರೋಗಿಗಳಿಗೆ ಯಾವುದೇ ರೀತಿಯ ಚಿಕಿತ್ಸಾ ಸೌಲಭ್ಯ ದೊರಕುತ್ತಿಲ್ಲ. ಮಾರಣಾಂತಿಕ ಅಂಟು ರೋಗಗಳಲ್ಲಿ ಏಡ್ಸ್ ಬಳಿಕದ ಸ್ಥಾನವನ್ನು ಕ್ಷಯ ರೋಗಕ್ಕೆ ದಕ್ಕಿದೆ.

1882ನೇ ಇಸವಿಯಲ್ಲಿ ಮಾರ್ಚ್ 24ರಂದು ಡಾ| ರಾಬರ್ಟ್ ಕ್ಷಯ ರೋಗಕ್ಕೆ ಕಾರಣವಾದ ರೋಗಾಣು ಮೈಕೊ ಬ್ಯಾಕ್ಟಿರಿಯಾ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣುವನ್ನು ಕಂಡು ಹಿಡಿದರು. ಈ ದಿನದ ನೆನಪಿಗಾಗಿ ಪ್ರತಿ ವರ್ಷ 24 ರಂದು ವಿಶ್ವ ಕ್ಷಯರೋಗ ದಿನ ಎಂದು ಆಚರಿಸಲಾಗುತ್ತಿದೆ. 2012ರಲ್ಲಿ ಸುಮಾರು 8.6 ಮಿಲಿಯನ್ ಮಂದಿ ಈ ಭೀಕರ ರೋಗಕ್ಕೆ ತುತ್ತಾಗಿದ್ದು ಸುಮಾರು 1.3 ಮಿಲಿಯನ್ ಮಂದಿ ಈ ರೋಗದಿಂದ ಸಾವನ್ನಪ್ಪಿದ್ದರು. ಈಗಲೂ ಕೂಡ ಕ್ಷಯ ರೋಗ ಬಡ ರಾಷ್ಟ್ರಗಳು ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳ ಬಹುದೊಡ್ಡ ಮಾರಣಾಂತಿಕ ಖಾಯಿಲೆಯಾಗಿರುವುದು ಬಹಳ ವಿಷಾದನೀಯ ಸಂಗತಿ. ಏನಿಲ್ಲವೆಂದರೂ 2014ರಲ್ಲಿ 9 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗಿದ್ದು ಸುಮಾರು 1.5 ಮಿಲಿಯನ್ ಮಂದಿ ಸಾವಿನ್ನಪ್ಪಿರುವುದಂತೂ ಸತ್ಯ ಸಂಗತಿ.

ಕ್ಷಯ ರೋಗದ ಬಗೆಗಿನ ವಾಸ್ತವಗಳು:

ಸುಮಾರು 95% ಶೇಕಡಾ ಸಾವು ಕ್ಷಯ ರೋಗದಿಂದ ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಸಂಭವಿಸುತ್ತದೆ. 15 ರಿಂದ 45 ವರ್ಷದ ಮಹಿಳೆಯರ ಸಾವಿಗೆ ಮೂರನೇ ಪ್ರಮುಖ ಕಾರಣ ಕ್ಷಯ ರೋಗ 2012ರಲ್ಲಿ ಸುಮಾರು 5 ಲಕ್ಷ ಮಕ್ಕಳನ್ನು ಕ್ಷಯ ರೋಗ ಬಾಧಿಸಿದ್ದು 75,000 ಮಕ್ಕಳು ಸಾವನ್ನಪ್ಪಿದ್ದಾರೆ. 2014ರಲ್ಲಿ 9 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗಿದ್ದು ಮೂರು ಮಿಲಿಯನ್ ಮಂದಿಗೆ ರೋಗಕ್ಕೆ ಪ್ರಾಥಾಮಿಕ ಚಿಕಿತ್ಸೆ ಕೂಡಾ ದೊರೆತಿಲ್ಲ. ಈ ಮೂರು ಮಿಲಿಯನ್ ಮಂದಿ ಜಗತ್ತಿನ ಅತೀ ಬಡತನದ ರೇಖೆಗಿಂತ ಕೆಳಗಿನವರಾಗಿದ್ದು ನಿರಾಶ್ರಿತರು, ಯುದ್ಧ ಖೈದಿಗಳು, ಮತ್ತು ಕೊಳಚೆ ಪ್ರದೇಶಗಳ ನಿವಾಸಿಗಳಾಗಿರುತ್ತಾರೆ.

ಕ್ಷಯ ರೋಗ ಸುಲಭವಾಗಿ ಗುಣಪಡಿಬಹುದಾದ ರೋಗ. ಔಷಧಿ ಸರಿಯಾಗಿ ದೊರಕದ ಕಾರಣ ಅಥವಾ ಸರಿಯಾಗಿ ಸೇವಿಸದ ಕಾರಣ ರೋಗ ಉಲ್ಭಣವಾಗುತ್ತದೆ. ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಈ ರೋಗದ ಪರಿಣಾಮಕಾರಿ ಚಿಕಿತ್ಸೆಗೆ ತೊಡಕಾಗಿರುವುದಂತೂ ಸತ್ಯವಾದ ಸಂಗತಿ. ಭಾರತ ದೇಶವೊಂದರಲ್ಲಿಯೂ ಪ್ರತಿ ವರ್ಷ 5 ಲಕ್ಷ ಮಂದಿ ಈ ರೋಗದಿಂದ ಸಾಯುತ್ತಾರೆ. ಈ ಕಾರಣಕ್ಕಾಗಿಯೇ ವಿಶ್ವ ಸಂಸ್ಥೆ ಕ್ಷಯ ರೋಗವನ್ನು ಜಾಗತಿಕ ತುರ್ತು ಸ್ಥಿತಿ ಎಂದು ಘೋಷಿಸಿದೆ.

ಹೇಗೆ ಹರಡುತ್ತದೆ?

ಕ್ಷಯ ರೋಗ ಸಾಂಕ್ರಾಮಿಕವಾಗಿ ಹರಡುವ ಅಂಟುರೋಗವಾಗಿದ್ದು ರೋಗಾಣುಗಳು ಗಾಳಿಯಿಂದ ಹರಡುತ್ತದೆ. ಎಲ್ಲೆಂದರಲ್ಲಿ ಉಗುಳುವುದು. ಪರಿಸರ ಮಾಲಿನ್ಯ, ಔದ್ಯೋಗಿಕರಣ, ಬಡತನ, ಅನಕ್ಷರತೆ, ಜನದಟ್ಟಣೆ, ಕೊಳಗೇರಿ ಪ್ರದೇಶ, ಪ್ರಾಥಾಮಿಕ ಸೌಲಭ್ಯಗಳ ಕೊರತೆ, ರೊಗದ ಬಗೆಗಿನ ಮಾಹಿತಿಯ ಕೊರತೆ ಇತ್ಯಾದಿಗಳು ರೋಗವನ್ನು ಹರಡುವಂತೆ ಮಾಡುತ್ತದೆ. ಜೋರಾಗಿ ಕೆಮ್ಮುವುದು, ಸೀನುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮುಂತಾದವುಗಳಿಂದ ರೋಗಾಣು ಗಾಳಿಯಲ್ಲಿ ಹರಡಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ.

ರೋಗದ ಲಕ್ಷಣಗಳು:

1. ನಿರಂತರವಾದ ಕೆಮ್ಮು ಮತ್ತು ಕಫ

2. ಮೂರು ನಾಲ್ಕು ವಾರಗಳಿಗೂ ಅಧಿಕವಾದ ನಿರಂತರ ಕೆಮ್ಮು

3. ಎದೆನೋವು, ಉಸಿರಾದಲ್ಲಿ ಏರುಪೇರು

4. ಕಫದೊಡನೆ ರಕ್ತ ಮಿಶ್ರಿತವಾಗುವುದು

5. ಸಣ್ಣ ಜ್ವರ, ಸಾಯಂಕಾಲದಲ್ಲಿ ಸಮಯದಲ್ಲಿ ಜ್ವರ ಮತ್ತು ಮೈ ಬೆವರುವುದು

6. ಅನಾಸಕ್ತಿ ಹಸಿವಿಲ್ಲದಿರುವುದು

7. ರುಚಿ ಇಲ್ಲದಿರುವುದು

8. ವಾಂತಿ, ಸುಸ್ತು

9. ದೇಹದ ತೂಕ ಕಡಿಮೆಯಾಗುವುದು ಇತ್ಯಾದಿ.

ಈ ಮೇಲೆ ತಿಳಿಸಿದ ಯಾವುದಾದರೂ ಲಕ್ಷಣಗಳಿದ್ದಲ್ಲಿ ತಕ್ಷಣ ವ್ಶೆದ್ಯರಿಗೆ ತೋರಿಸ ತಕ್ಕದ್ದು.

ಕ್ಷಯರೋಗದ ಬಗೆಗಿನ ಮಿಥ್ಯಗಳು:

ಕ್ಷಯ ರೋಗ ಅನುವಂಶಿಕ ಕಾಯಿಲೆ ಎಂದು ಕೆಲವರು ಇನ್ನೂ ನಂಬಿದ್ದಾರೆ. ಕ್ಷಯ ರೋಗ ಅನುವಂಶಿಕ ಕಾಯಿಲೆಯಲ್ಲ. ಕುಟುಂಬದಲ್ಲಿ ಯಾರಿಗಾದರೂ ಕಾಯಿಲೆ ಇದ್ದಲ್ಲಿ ರೋಗಾಣುಗಳು ಗಾಳಿಯ ಮೂಲಕವೇ ಹರಡ ಬಹುದೇ ಹೊರತು ರಕ್ತ ಸಂಬಂಧಿಗಳಲ್ಲಿ ಅನುವಂಶಿಕವಾಗಿ ಹರಡುವುದಿಲ್ಲ. ಒಟ್ಟಿಗೆ ಊಟ ಮಾಡುವುದರಿಂದ ಒಂದೇ ತಟ್ಟೆ, ಲೋಟಗಳನ್ನು ಬಳಸುವುದಿಂದ ಕ್ಷಯ ರೋಗ ಹರಡುವುದಿಲ್ಲ. ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ನಿರ್ಲಕ್ಷ ಮಾಡಿದಲ್ಲಿ ರೋಗ ಉಲ್ಭಣವಾಗಬಹುದು.

ಹಿಂದಿನ ಕಾಲದಲ್ಲಿ ಒಂದೆರಡು ಬಗೆಯ ಮಾತ್ರೆಗಳನ್ನು ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಬಹು ಔಷಧಿ ಪ್ರತಿರೋಧ ಕ್ಷಯ ರೋಗ (MDRT) ಬಂದಿರುವುದಿಂದ ಕನಿಷ್ಠ 4ರಿಂದ 5 ಔಷಧಿಗಳನ್ನು ಬಳಸಬೇಕಾಗುತ್ತದೆ. ಈ ರೀತಿಯ ಕ್ಷಯ ರೋಗಕ್ಕೆ ಕನಿಷ್ಠ 2ರಿಂದ 3 ವರ್ಷ ಔಷಧಿ ಸೇವಿಸಬೇಕಾಗಬಹುದು. ಯಾರು ನಿಯಮಿತ ಮತ್ತು ಪೂರ್ಣ ಖಾಲಿಕ ಚಿಕಿತ್ಸೆ ಪಡೆಯುವುದಿಲ್ಲವೋ ಅವರ ಕ್ಷಯ ರೋಗ ಖಂಡಿತವಾಗಿಯೂ ವಾಸಿಯಾಗದು ಮತ್ತು ರೋಗ ಲಕ್ಷಣಗಳು ಮರುಕಳಿಸುತ್ತವೆ. ವೈದ್ಯರ ಸೂಚನೆಯಂತೆ ಅವರು ನೀಡಿದ ಔಷಧಿಯನ್ನು ನಿಗಧಿ ಪಡಿಸಿದ ಅವಧಿ ಪೂರ್ತಿ ತೆಗೆದುಕೊಳ್ಳಲೇಬೇಕು.

ಚಿಕಿತ್ಸೆ ಹೇಗೆ?

ಮೇಲೆ ತಿಳಿಸಿದ ರೋಗದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಅಲಕ್ಷ್ಯ ಮಾಡದೇ ತಜ್ಞ ವೈದ್ಯರ ಸಲಹೆ ಪಡೆಯತಕ್ಕದ್ದು. ರೋಗದ ಪತ್ತೆಗಾಗಿ ಕೆಲವೊಂದು ನಿಗದಿತ ಪರೀಕ್ಷೆಗಳಿದ್ದು ವೈದ್ಯರು ಈ ಪರೀಕ್ಷೆ ನಡೆಸಿದ ಬಳಿಕವೇ ತೀರ್ಮಾನಕ್ಕೆ ಬರುತ್ತಾರೆ. ಕ್ಷಯ ರೋಗ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಪ್ರತೀ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾದ ಸೌಲಭ್ಯವಿದೆ. ಪ್ರತೀ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಡಾಟ್ಸ (DOTS) ಸೆಂಟರ್ ಬಳಿ ಇದ್ದು ಉಚಿತವಾಗಿ ಔಷಧಿ ನೀಡಲಾಗುತ್ತದೆ. ಇಂತಹ ರೋಗಿಗಳನ್ನು ಒಳ ರೋಗಿಯಾಗಿ ವೈದ್ಯರು ಮತ್ತು ದಾದಿಯರ ತಜ್ಷ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಆರಂಭಿಸಿದ ವಾರದ ಒಳಗೆ ರೋಗ ಹರಡುವಿಕೆ ನಿಂತುಹೋಗುತ್ತದೆ. ಆದರೆ ಸಂಪೂರ್ಣ ಗುಣಮುಖವಾಗಲು ವೈದ್ಯರ ಸಲಹೆಯಂತೆ ಸಂಪೂರ್ಣವಾದ ಅವಧಿಗೆ ಸರಿಯಾದ ರೀತಿಯಲ್ಲಿ ಔಷಧಿ ಸೇವಿಸಲೇಬೇಕು. ಇಲ್ಲವಾದಲ್ಲಿ ಕ್ಷಯ ರೋಗ ಮರುಕಳಿಸಬಹುದು.

ಕೊನೆ ಮಾತು

ಕ್ಷಯ ರೋಗ ಮನುಕುಲದ ಬಹುದೊಡ್ಡ ವೈರಿ. ಬಡ ಮತ್ತು ಮಧ್ಯಮ ವರ್ಗದ ನಡು ವಯಸ್ಸಿನ ದುಡಿಯುವ ಮಂದಿಯನ್ನು ಕಾಡುವ ಕ್ಷಯ ರೋಗ ದೇಶದ ಪ್ರಗತಿಗೆ ಬಹಳ ಮಾರಕವಾದ ರೋಗ. ದಿನ ಬೆಳಗಾಗುವುದರೊಳಗೆ ಸಾಯದಿದ್ದರೂ ಕ್ಷಣ   ಕ್ಷಣಕ್ಕೂ ವ್ಯಕ್ತಿಯನ್ನು ಕ್ಷೀಣ ಗೊಳಿಸಿ ದೇಶದ ಆರ್ಥಿಕತೆಗೆ ಹೊಡೆತ ನೀಡುತ್ತದೆ. ದುಡಿಯುವ ಕೈಗಳನ್ನು ರೋಗ ಬಾಧಿಸಿ ಕುಟುಂಬದ ಆಧಾರ ಸ್ತಂಭವಾದ ಯಜಮಾನನನ್ನು ಹಿಂಡಿ ಹಿಪ್ಪೆಮಾಡಿ ಇಡೀ ಕುಟುಂಬವನ್ನು ದುರ್ಗತಿಗೆ ತಳ್ಳುತ್ತದೆ. 2015ರ ಧೇಯ ವಾಕ್ಯವೆಂದರೆ ಕ್ಷಯ ರೋಗದ ವಿರುದ್ಧ ಸಮರವನ್ನು ಸಾರಿ ರೋಗವನ್ನು ಗೆಲ್ಲು.  ಜಗತ್ತಿನಾದ್ಯಂತ ಎಲ್ಲಾ ಆರೋಗ್ಯ ಸಂಸ್ಥೆಗಳು ಸಾರ್ವಜನಿಕ ಸಂಸ್ಥೆಗಳು ಸರಕಾರಿ ಸಾಮ್ಯದ ಆರೋಗ್ಯ ಕೇಂದ್ರಗಳು ಮತ್ತು ಇನ್ನೂ ಹತ್ತು ಹಲವಾರು ಸರಕಾರೇತರ ಸಂಸ್ಥೆಗಳಾದ ರೋಟರಿ, ಲಯನ್ಸ್, ಲೆಡ್‍ಕ್ರಾಸ್ ಮುಂತಾದ ಸಂಸ್ಥೆಗಳ ಜೊತೆಗೂಡಿ ಕ್ಷಯರೋಗದ ಸಂಪೂರ್ಣ ನಿರ್ಣಾಮಗೊಳಿಸಲು ಟೊಂಕ ಕಟ್ಟಿ ನಿಂತಿದೆ.

ಕ್ಷಯ ರೋಗ ಗುಣಪಡಿಸ ಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದ್ದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಹಾನಿಯನ್ನು ತಡೆಗಟ್ಟಬಹುದು. 2000 ದಿಂದ 2013ರ ಅವಧಿಯಲ್ಲಿ 37 ಮಿಲಿಯನ್ ರೋಗಿಗಳನ್ನು ಕ್ಷಯರೋಗದಿಂದ ಗುಣ ಪಡಿಸಲಾಗಿದೆ. ಆದರೂ ಸಂಪೂರ್ಣವಾಗಿ ಕ್ಷಯರೋಗವನ್ನು ಭೂಮಂಡಲದಿಂದ ಕಿತ್ತು ಹಾಕಲಾಗಲಿಲ್ಲ ಎಂಬುದೇ ವಿಷಾಧದ ಸಂಗತಿ. ಎನಿಲ್ಲದಿದ್ದರೂ ವರ್ಷಕ್ಕೆ 8ರಿಂದ 10 ಮಿಲಿಯನ್ ಹೊಸ ಹೊಸ ರೋಗಿಗಳು ಸೇರ್ಪಡೆಯಾಗುತ್ತಿದ್ದು ಅದರಲ್ಲಿ 2.5 ರಿಂದ 3 ಮಿಲಿಯನ್ ಮಂದಿಗೆ ಅನಕ್ಷರತೆ, ಬಡತನ, ಮೂಢನಂಬಿಕೆ, ಅಜ್ಞಾನ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಚಿಕಿತ್ಸೆ ದೊರಕದಿರುವುದೇ ಬಹಳ ದೌರ್ಭಾಗ್ಯದ ಸಂಗತಿ. ಇತ್ತೀಚಿನ ದಿನಗಳಲಿ ಏಡ್ಸ್, ಹೆಪಟೈಟೀಸ್ ಮುಂತಾದ ಮಾರಣಾಂತಿಕ ರೋಗಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದ್ದು ಮನುಷ್ಯನ ರಕ್ಷಣಾ ವ್ಯವಸ್ಥೆ ಹದಗೆಟ್ಟು ಮತ್ತಷ್ಟು ಕ್ಷಯ ರೋಗಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.

ಸಾಮಾನ್ಯ ರೋಗಿಗಳಿಗಿಂತ ಈ ಏಡ್ಸ್  ರೋಗಿಗಳು 30 ಪಟ್ಟು ಹೆಚ್ಚು ಕ್ಷಯ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದ್ದು ಮುಂಬರುವ ದಿನಗಳಲ್ಲಿ ನಾವು ಇನ್ನಷ್ಟು ಎಚ್ಚರಿಕೆ ಮತ್ತು ಜಾಗೃತಿ ವಹಿಸದಿದ್ದಲ್ಲಿ ಏಡ್ಸ್ ಮತ್ತು ಕ್ಷಯ ರೋಗಗಳು ಮನುಕೂಲವನ್ನು ನುಂಗಿ ನೀರು ಕುಡಿಯುವುದರಲ್ಲಿ ಎಳ್ಳಷ್ಟೂ ಸಂಶಯವೇ ಇಲ್ಲ. ಈ ನಿಟ್ಟಿನಲ್ಲಿ ವೈದ್ಯರು ಮಾತ್ರವಲ್ಲದೇ ಸಾರ್ವಜನಿಕರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದ್ದಲ್ಲಿ “ ಕ್ಷಯ” ರೋಗವನ್ನು ಮತ್ತು ಇನ್ಯಾವುದೇ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟ ಬಹುದು ಮತ್ತು ಅದರಲ್ಲಿಯೇ ಮನುಕುಲದ ಒಳಿತು ಇದೆ. ಹಾಗದಲ್ಲಿ ಮಾತ್ರ “ವಿಶ್ವ ಕ್ಷಯರೋಗ”ದ ಆಚರಣೆಗೆ ಹೆಚ್ಚು ಮೌಲ್ಯ ಬಂದಿತು ಮತ್ತು ಕ್ಷಯ ರೋಗಕ್ಕೆ ಕಾರಣೀಭೂತವಾದ ರೋಗಾಣು ಕಂಡು ಹಿಡಿದ ಪುಣ್ಯಾತ್ಮ ಡಾ| ರೋಬರ್ಟ್‍ನ ಆತ್ಮಕ್ಕೆ ಶಾಂತಿ ದೊರಕಲೂ ಬಹುದು.

Also Read: ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಆಗುವ ಅಪಾಯಗಳೇನು? 

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this: