Vydyaloka

ಟೀವಿಯ ಠೀವಿ ; ಗತವೈಭವ

ಟೀವಿಯ ಠೀವಿ ; ಗತವೈಭವ ಯಾವಾಗಲೂ ನಮ್ಮ ಸ್ಮರಣೆಯಲ್ಲಿರುತ್ತದೆ. ಎಕರೆಯಗಲದ ಪಡಸಾಲೆಯಲ್ಲಿ ಟಿವಿಯ ಪಟ್ಟಾಭಿಷೇಕ್ಕೆ ಇಡಿ ಓಣಿಯ ಮಕ್ಕಳು ತುದಿಗಾಲಲ್ಲಿ ನಿಂತಿದ್ದರು.

1990 ರ ಒಂದು ಶುಭ ಸಂಜೆ ನಾವು ಶಾಲೆಯಿಂದ ಮರಳುವ ರಷ್ಟರಲ್ಲಿ ನಮ್ಮ ಮನೆಯ ಮೇಲೆ ಟಿವಿ ಅಂಟೇನಾ ನಿಲ್ಲಿಸಲಾಗುತಿತ್ತು . ನಮ್ಮ ಓಣಿ ಮಾತ್ರವಲ್ಲದೆ ಅಕ್ಕಪಕ್ಕದ ಓಣಿಯ ಮಕ್ಕಳೆಲ್ಲ ನಮ್ಮ ಮನೆಯ ಮುಂದೆಯೆ. ಬಸಪ್ಪ ಸಾವಕಾರರು ತಮ್ಮ ಅರಮನೆಯಂತಹ ಮನೆಯನ್ನು ಗುಡಿಸಿ ಸುಣ್ಣ ಬಣ್ಣ ಹಚ್ಚಿ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಿ, ಎಂದು ಬಾಡಿಗೆ ಇಲ್ಲದೆ ಮನೆ ನಮಗೆ ಕೊಟ್ಟು ಬಿಟ್ಟಿದ್ದರು. ಸುತ್ತಲಿನ ಮೂರ್ನಾಲ್ಕು ಓಣಿಗಳಲ್ಲಿ ಟಿವಿಯೆ ಇಲ್ಲದ್ದರಿಂದ ನಮ್ಮ ಓಣಿಗೆ ಟಿವಿ ಬಂದುದು ಎಲ್ಲರಿಗೂ ಖುಷಿ ತಂದಿತ್ತು . ಆಟ ಆಡುವಾಗ ಜಗಳ ಮಾಡಿದ ಹುಡುಗರೆಲ್ಲರೂ ನನ್ನ ಹಾಗೂ ತಮ್ಮನ ಜೋತೆ ಆಗಲೆ ಸಂಧಾನ ಕಾರ್ಯಕ್ರಮ ಆರಂಭಿಸಿದ್ದರು. ನಮ್ಮ ಗಾಂಭಿರ್ಯ ಹೇಳತೀರದಾಗಿತ್ತು. ಎಕರೆಯಗಲದ ಪಡಸಾಲೆಯಲ್ಲಿ ಟಿವಿಯ ಪಟ್ಟಾಭಿಷೇಕ್ಕೆ ಇಡಿ ಓಣಿಯ ಮಕ್ಕಳು ತುದಿಗಾಲಲ್ಲಿ ನಿಂತಿದ್ದರು.

ಭಾನುವಾರದ ಬೆಂಗಳೂರು ದೂರದರ್ಶನದ ಕನ್ನಡ ಸಿನೆಮಾ ನೋಡಲು ಎಲ್ಲರೂ ಸಂಭ್ರಮಿಸಲಾರಂಭಿಸಿದರೆ. ಅಪ್ಪ ಅಮ್ಮನಿಗೆ ಸಾಹುಕಾರರ ಪಟ್ಟಿ ಸೇರಿ ಊರಿನ ಹತ್ತನೆ ಟಿವಿಯ ಮಾಲೀಕರಾದುದು ವಿಪರಿತ ಹೆಮ್ಮೆಯುಂಟುಮಾಡಿತ್ತು. ಎಲೆಕ್ಟ್ರಿಕ್ ಕಂಬಕ್ಕಿಂತ ದುಪ್ಪಟ್ಟು ಎತ್ತರದಲ್ಲಿ ಬಾಚಣಿಕೆಯಂತಹ ರಿಸೀವರ್ ಹೊತ್ತು, ಬಾಲಂಗೋಚಿಯಂತಹ ಕಪ್ಪನೆಯ ವೈರ್ ಅಂಟಿಸಿಕೊಂಡು ಆಂಟೆನಾ ನಿಂತಾಗ ಮಕ್ಕಳ ಖುಷಿ ಅಂಟೆನಾ ದಾಟಿ ಮುಗಿಲು ಮುಟ್ಟಿತ್ತು. ಬಿಪಿಎಲ್ ಕಂಪನಿಯ ಕಪ್ಪುಬಿಳುಪು ಟಿವಿಯನ್ನು ರಟ್ಟಿನ ಡಬ್ಬದಿಂದ ಅಂಗರಕ್ಷಕ ಥರ್ಮಾಕೋಲ್ ಶೀಟ್‍ನೊಂದಿಗೆ ಹೊರತೆಗೆದಾಗ ಎಲ್ಲರ ಬಾಯಲ್ಲೂ ಉದ್ಗಾರ.

ಪಡಸಾಲೆಯ ಮೇಜಿನ ಮೇಲೆ ವಿರಾಜಮಾನವಾದ ಟಿವಿಯ ಠೀವಿ ವರ್ಣಿಸಲದಳ.
” ಜರಾ ಎಡಕ್ಕ ….ಇಲ್ಲ ಜರಾ ಬಲಕ್ಕ ತಿರುಗುಸು …”
ಎನ್ನುತ್ತ ಮೂರ್ನಾಲ್ಕು ಹೈಕ್ಳು ನಿಂತು ಚಿತ್ರ ಕಾಣಿಸಿದುದನ್ನು ಒಬ್ಬರಿಗೊಬ್ಬರು ನೇರಪ್ರಸಾರ ಮಾಡುತ್ತ ಅಂಟೆನಾ ನಿಖರವಾಗಿ ತಿರುಗಿಸಿದಾಗ ಮನೆಯಲ್ಲೊಂದು ನವೀನ ಮಾಯಾಗವಾಕ್ಷಿ ತೆರೆಯಿತು.
ಶಾಲೆಯಲ್ಲಿ, ನಮ್ಮ ಮನೆಯ ಟಿವಿಯದೆ ಚರ್ಚೆ. ನಮ್ಮ ಗಾಂಭಿರ್ಯಗಳು ಹೆಚ್ಚಾಗಿ ಧಿಮಾಕಿಗೆ ಮಿತಿ ಇರಲಿಲ್ಲ. ಶನಿವಾರದ ಹಿಂದಿ ಹಾಗೂ ಭಾನುವಾರದ ಕನ್ನಡ ಸಿನೆಮಾ ಹಾಗೂ ಭಾನುವಾರ ಮಧ್ಯಾಹ್ನದ ಅರ್ಥಹೀನ ಕಲಾತ್ಮಕ ಓಡಿಯಾ, ಅಸ್ಸಾಮಿ, ಬಂಗಾಲಿ ಸಿನೆಮಾಗಳಿಗೆ ಇಡೀ ಓಣಿಯೆ ತಯಾರಾದರೆ. ದೈನಂದಿನ ಏಳು ಗಂಟೆಯ ಧಾರಾವಾಹಿ ಏಳೂವರೆಯ ವಾರ್ತೆ, ವಿಧಾನ ಮಂಡಲದಲ್ಲಿ ಅಂದಿನ ಗಲಾಟೆಗಳು ಮನೆಮನೆ ತಲುಪಿಯೆ ಬಿಟ್ಟವು.

“ಯೋಳ್ಕ ಧಾರಾವಳಿ ಐತಿ” ಎಂದು ಎಲ್ಲಿದ್ದರೂ ಓಣಿಯ ವಾನರ ಸೈನ್ಯವೆಲ್ಲ ನಮ್ಮ ಮನೆ ಸೇರಿದರೆ, ಧಾರಾವಾ(ಳಿ)ಹಿಗೆ ಮುನ್ನ ಭರತನಾಟ್ಯ ಮಾಡುತ್ತಿದ್ದ ನರ್ತಕಿಯ ನೋಡಿ “ದಿನ್ನ ಇಕಿನ ಕುಣಿತಾಳ… ಲಗೂ ಮುಗಿಸಿ ಹೋಗ್ವಾ ಮನಿಗಿ” ( ದಿನವೂ ಇವಳೆ ಕುಣಿಯುತ್ತಾಳೆ. ಬೇಗ ಮುಗಿಸಿ ಮನೆಗೆ ಹೋಗಮ್ಮ ) ಎಂದು ಆಜ್ಞೆ ಗೈಯುತ್ತ, ಕಾಲಿಗೆ ಕಚ್ಚುವ ಸೊಳ್ಳೆಗಳನ್ನು ಪಟ್ ಚಟ್ ಎಂದು ಹೊಡೆಯುತ್ತ ಟಿವಿ ಮುಂದೆ ಆಸೀನರಾದ ಮಕ್ಕಳನ್ನು ಸುರಕ್ಷಿತ ಅಂತರದಲ್ಲಿ ಕೂರಿಸುವುದು ನನ್ನ ಮೂಲಭೂತ ಕರ್ತವ್ಯವಾಗಿತ್ತು. ಹಿಂದೆಂದೂ ಕೇಳದ ಬೆಂಗ್ಳೂರು ಭಾಷೆ ಸುಮಾರು ದಿನಗಳವರೆಗೆ ಅರ್ಥವಾದುದೆ ಇಲ್ಲ. ಅದರಲ್ಲಿ ಬೆಂಗ್ಳೂರು ಗ್ರಾಮಾಂತರ ಕನ್ನಡವಂತೂ ಕಬ್ಬಿಣದ ಕಡಲೆ.

Also Read: ಟಿವಿ, ಮೊಬೈಲ್‍ನಿಂದ ಮಕ್ಕಳ ಸ್ಮರಣಶಕ್ತಿಗೆ ತೊಂದರೆ

ವಾರ್ತೆಗಳು ನೋಡಲು ಬಂದ ಅಕ್ಕಪಕ್ಕದ ಮನೆಯ ಗೃಹಿಣಿಯರು ಆಗಿನ ಮುಖ್ಯಮಂತ್ರಿಯವರ ವಿಡಿಯೋ ನೋಡಿ
” ಅವ್ವಾ …ಇಂವ ಅನ್ರಿ ಮೂಕ ಮಂತ್ರಿ ಅಂದ್ರ ಇಂವ ರಾಜಕೀ ಮಾಡತಾನು ?”
ಎಂದು ಸೋಜಿಗವಾದರೆ, ಮಕ್ಕಳು
” ಏ ಕಾಕಿ ಅಂವ ಮೂಕ ಮಂತ್ರಿ ಅಲ್ಲ ಮುಖ್ಯ ಮಂತ್ರಿ …ಮೂಕ ಮಂತ್ರಿ ಅತ ….ಕಿ ಕಿ ಕಿ ಕಿ”
ಎಂದು ನಕ್ಕಾಗ ಅನಕ್ಷರಸ್ಥ ಕಾಕಿಯರು ಬೆಪ್ಪಾದರೆ, ಕೆಲವರು ಅಧಿಕಪ್ರಸಂಗಿಗಳನ್ನು ಬೈದು ಅವಮಾನದ ಸೇಡು ತೀರಿಸಿಕೊಳ್ಳುತಿದ್ದರು .

ಭಾನುವಾರದ ಸಿನೆಮಾ ಆರಂಭವಾಗುವ ಗಂಟೆಗೂ ಮುನ್ನ ನಮ್ಮ ಮನೆಯ ಮುಂದೆ ಮಕ್ಕಳೆಲ್ಲ ಕೂಡಿ, ಬರುವ ಸಿನೆಮಾದ ಬಗ್ಗೆ, ಗುರುವಾರದ ಚಿತ್ರಮಂಜರಿಯ ನಂತರ ಬಂದ ಸಿನೆಮಾದ ಹೆಸರನ್ನು ಕಷ್ಟಪಟ್ಟು ಉಚ್ಚರಿಸುತ್ತ ತಮಗೆ ತೋಚಿದ ಕತೆ ಕಟ್ಟಿ ಒಬ್ಬರಿಗೊಬ್ಬರು ಕತೆಹೇಳುತ್ತ ಐದು ಗಂಟೆಯಾಗುವ ತವಕದಲ್ಲಿ ನಾನಾ ಸಾಹಸಕ್ಕಿಳಿದರೆ, ಗೃಹಿಣಿಯರು ಭಾನುವಾರ ಮಧ್ಯಾಹ್ನವೆ ಸಂಜೆಗಾಗುವಷ್ಟು ಪಲ್ಯ, ರೋಟ್ಟಿಗಳನ್ನು ಬಡಿದಿಟ್ಟು ಸಿನೆಮಾಕ್ಕೆ ಅಣಿಯಾಗುತಿದ್ದರು. ನಮ್ಮನೆಯ ಪಡಸಾಲೆಯಲ್ಲಿ ಸೀಟು ವಿಂಗಡಣೆ, ಅಡ್ವಾನ್ಸ್ ಬುಕಿಂಗ್ ಆರಂಭವಾಗುತಿತ್ತು. ನಮಗೆ ಹುಣಸೆ, ಬಾರೆಹಣ್ಣು, ಸೀತಾಫಲ, ಹುರಿಕಡ್ಲೆಗಳ ರೂಪದಲ್ಲಿ ಲಂಚ ಪಾವತಿಸಿ ಟಿವಿಯ ಎದುರಿಗೆ ಕುಳಿತುಕೊಳ್ಳುವ ಹುನ್ನಾರ.

ಸಿನೆಮಾ ಆರಂಭವಾಗಿ ನಟನಟಿಯರ ಹೆಸರುಗಳು ಪರದೆಯ ಮೇಲೆ ಬರಲಾರಂಭಿಸಿದಾಗ
“ಏ…. ಹೀರೋ ಹೀರೋನಿ ಹೆಸರ ಬಿದ್ದಾವು ಲಗೂ ಬರ್ರಿ” ಎಂದು ಸ್ವಯಂ ಸೇವಕ ಉದ್ಘೋಷಕರು ಓಣಿಯಲ್ಲಿ ಡಂಗುರ ಸಾರಿ ನಮ್ಮ ಮನೆ ಸೇರಿದಾಗ ಅಂತಿಮ ಹಂತದ ಸೀಟ್ ಮ್ಯಾಟ್ರಿಕ್ಸ. ಗುಸುಗುಸು, ಅತಿಕ್ರಮಣ, ಅಕ್ರಮ, ಸಕ್ರಮದ, ಒತ್ತುವರಿಗಳ ಜಗಳ ಅಮ್ಮನ ಬೆದರಿಕೆಯಲ್ಲಿ ಮುಗಿಯುವಷ್ಟರಲ್ಲಿ, ಅಪ್ಪಟ ಬೆಂಗ್ಳೂರ್ ಭಾಷೆಯ ಸಿನೆಮಾ ಆರಂಭವಾಗುತಿತ್ತು . ಆರತಿ, ಭಾರತಿ, ಮಂಜುಳಾ, ಕಲ್ಪನಾ, ಜಯಂತಿ, ಪಂಡರಿಬಾಯಿ, ಹಲವಾರು ಕಂಡು ಕೇಳದ ಹೆಸರುಗಳ ನಾಯಕಿಯರನ್ನೂ ಅಪ್ಸರೆಯರ ನೋಡಿದಂತೆ ಪರವಶರಾದ ಹಳ್ಳಿಯ ಮಹಿಳೆಯರು.

” ಅವ್ವಾ ಭಾರತಿ ಅಂದ್ರ ಈಕಿನ …? ಚಂದಾನ ಚೆಲಿವಿ ಅದಾಳ ಬಿಡವಾ …”
ಎಂದು ಉದ್ಗರಿಸಿದರೆ , “ಅವರೂ ನಮ್ಗತೆನ ಇರ್ತಾರ …ಸ್ನೋ ಪೌಡರ, ಲಿಪಟಿಪ್ ಹಚ್ಚಿ ಹಂಗ ಚಂದ ಕಾಣತಾರ” ಎಂದು ತಮ್ಮನ್ನು ನಟಿಯರ ಸರಿಸಮನಾಗಿ ಕಾಣುವ ಹರೆಯದ ಹುಡುಗಿಯರತ್ತ ಕೆಂಗಣ್ಣು ಬೀರಿದ ಹಿರಿಯ ಮಹಿಳೆಯರು .
” ನೀ ಭಾರಿ ಚಂದ ಅದಿ ಊರಿಗೆ ಗೊತ್ತೈತಿ…ಮಂಗ್ಯಾನ ಮಾರೆಕ್ಕಿ …ನೀನೂ ಸ್ನೋ ಪೌಡರ್ ಹಚಗೊಂಡ ಟಿವಿ ಒಳಗ ಹೋಗಿ ಕುಣಿ ”
ಎಂಬ ಕುಹಕದ ಮಾತಿಗೆ ಸುಂದರವದನ ಸಿಂಡರಿಸಿ ಹಿರಿಯ ಮಹಿಳೆಯರನ್ನು ಶಪಿಸುತ್ತ ಸುಮ್ಮನಾಗುತಿದ್ದ ಹದಿಹರೆಯದ ಅಕ್ಕಂದಿರ ಮುಖ ನೋಡುವುದೆ ಮಜಾ. ಏನೂ ತಿಳಿಯದೆ, ಸರಿಯಾಗಿ ಕಾಣದೆ, ಕಣ್ಣು ಕಿರಿದಾಗಿಸಿ ಸಿನೆಮಾ ಅರ್ಥ ಮಾಡಿಕೊಳ್ಳುವ ಪ್ರಯತ್ನಕ್ಕಿಳಿಯುತಿದ್ದ ವೃದ್ದೆಯರದು ಮಹಾ ಕಾಮಿಡಿ.

” ಹಂಗಂದ್ರ ಯಾನಾ ?” ಎಂದು ಅರ್ಥವಾಗದ ಬೆಂಗ್ಳೂರ ಭಾಷೆಯ ಭಾಷಾಂತರ ಕೇಳಿಕೊಳ್ಳುತ್ತ, ಸಂಭಾಷಣೆಯ ಮಧ್ಯೆ ಮೂರ್ಖರಂತೆ ಪ್ರಶ್ನೆ ಕೇಳಿ ಉಳಿದವರಿಂದ ಬೈಸಿಕೊಳ್ಳುವುದು ಪಾಪದ ಮುದುಕಿಯರ ಪಾಡು. ಅರ್ಥವಾಗದೆ, ನೋಡಲಾಗದೆ ಬೇಸರಿಸಿ, ಮರಸುತ್ತಿ ತಬ್ಬಿ ಮುತ್ತಿಡುವ ಹಾಡುವ ನಾಯಕ ನಾಯಕಿಯರನ್ನು ನೋಡಿ ಮುಜುಗರದಿ
“ಅವ್ವಾ ನೋಡ ನನ ಹಾಂಟ್ಯಾನು …ಅಂವಗರೆ ನಾಚಿಕಿ ಇಲ್ಲಂದ್ರ ಅಕಿಗಿ ನಾಚಿಕಿ ಬ್ಯಾಡಾ…? ಅಕಡಿದೋಂದ ಓಡಕೋತ ಬರತೈತಿ …ಇಕಾಡಿದೊಂದ ಓಡಕೋತ ಬರತೈತಿ ,ಗಣಸಾ ಹೆಂಗಸಾ ಕುಸ್ತಿ ಆಡಾವ್ರ ಗತೆ ತೆಕ್ಕಿ ಬಡದ ತಕಾತೈ ಕುಣದ ಕುಣಿತಾವ. ಅದರ ಮಾರಿ ಮಣ್ಣಾಗ ಅಡಗಲಿ ”
ಎಂದು ನಟಿ ನಟಿಯರನ್ನು ಶಪಿಸುವ ಮಡಿವಂತ ಸಭ್ಯ ಮುದುಕಿಯರ ಮಾತು ಕೇಳಿ ಗಂಭೀರ ವದನೆಯರೆಲ್ಲ ಮುಸಿ ಮುಸಿ ನಗುತ್ತ ವೀಕ್ಷಣೆ ಮುಂದುವರೆಸುವ ವೀಪರಿತ ಬೈಗುಳದ ಮುದುಕಿಯರು.

“ಏ ಕಾಕಿ ಸುಮ್ಮ ನೋಡುದಿದ್ರ ನೋಡು ….ಇಲ್ಲಾ ಮನಿಗಿ ಹೋಗು ” ಎಂಬ ಕತ್ತಲಲಿ ಬಂದ ದನಿಗೆ ಸುಮ್ಮನಾದ ವೃದ್ದೆಯ ಕಂಡು ನಮಗೆಲ್ಲ ನಗು. ಅಮಾಯಕ ನಾಯಕಿಯ ಹಿಂದೆ ನಿಂತು ಖಳನಾಯಕ ಕೆಟ್ಟಕೆಲಸಕ್ಕೆ ಹೊಂಚು ಹಾಕುತಿದ್ದರೆ .
“ಏ ಯವ್ವಾ ನಿನ ಹಿಂದ ನಿಂತಾನ ಹಾಂಟ ಕುಡ್ದಾಂವಾ …ತಿರಿಗಿನೋಡ ಹುಡುಗಿ” ಎಂದು ಮಂದಾಗುವ ಅನಾಹುತ ತಡೆಯುವ ಹುನ್ನಾರಕ್ಕಿಳಿದು ಬೈಸಿಕೊಂಡು ಅಜ್ಜಿಯರು ಸುಮ್ಮನಾದರೆ, ಸ್ವಲ್ಪ ಹೊತ್ತಿನಲ್ಲೆ ನಡೆದು ಹೋದ ದುರ್ಘಟನೆಗೆ ಬೆರಳ ಲಟಿಕೆ ಮುರಿದು ಖಳನಾಯಕನಿಗೆ ನೂರಾರು ಶಾಪಹಾಕುತ್ತ.
“ಗೂಳಿ ಇದ್ದಾಂಗ ಅದಾನವ್ವಾ …ಅಂವಗ ಬರಬಾರದ ಬಂದ ಶೆಟದ ಹೋಗಲಿ ಲಗೂ ….ಬಂಗಾರದಂತಾ ಹುಡಿಗಿನ ಕೆಡಿಸಿ ಇಟ್ಟ ಭಾಡ್ಯಾ …” ಎಂದು ಬೈಯಲಾರಂಭಿಸಿ, ಅಳುವ ನಟಿಯ ಜೊತೆ ತಾವು ಕಣ್ಣೀರಾಗತಿದ್ದರು.

ಏನೂ ತಿಳಿಯದ ಮಕ್ಕಳಿಗೆ ವಿಪರೀತ ಗೊಂದಲ. ಕೊನೆಗೆ ನಾಯಕನ ಕೈಯಲ್ಲಿ ಖಳನಾಯಕ ಬಡಿಸಿಕೊಳ್ಳು ಖಳನ ದುಸ್ಥಿತಿ ಸಂಭ್ರಮಿಸುತ್ತ
“ಬಡಿ ಅವನ… ಚಂದಂಗಿ ಮೈತುಂಬ ಬಡಿ… ನನ್ನ ಹಾಂಟ್ಯಾ ಭಾಳ ಮೆರುಣಿಗಿ ಎದ್ದಿತ್ ಅದರ ಮಾರಿ ಮಣ್ಣಾಗ ಅಡಗಲಿ….. ಬರೋಬರಿ ಟೇಮಕ ಬಂದಿ .. ಹಣ್ಣಂಗಿ ಬಡಿ.. ಎಲುವಾ ಮುರಿ, ಅದರ ಬಾಯಾಗ ನನ್ನ ಚಪಲಿ ತುರುಕಲಿ” ಎಂದು ನಾಯಕನ ಹುರಿದುಂಬಿಸಿ ಮೂಳೆ ಮುರಿಯುವ ಅಪ್ಪಣೆ ಕೊಡುತಿದ್ದರು. ಮಹಿಳೆಯರ ಕೋಪ ಪ್ರತಾಪ ಕಂಡು ನಾವೆಲ್ಲ ಗಾಬರಿಯಾದರೆ, ದುಃಖದ ಸನ್ನಿವೇಶಗಳಲ್ಲಿ ಚಕ್ಷುದ್ವಯಗಳಿಂದ ಗಂಗಾ ಜಮುನಾ ನಿರಂತರ ಧಾರೆ .

“ಚಂದಾನ ಚೆಲಿವಿ ಅದಾಳ ಖರೆ ಅಕಿಗಿ ಎಟ್ಟ ತರಾಸ ಯವ್ವಾ …”
ಎಂದು ಟ್ರಾಜಿಡಿ ಸಿನೆಮಾಕ್ಕೆ ಕಣ್ಣಿರುಹಾಕುವ ಮಹಿಳೆಯರು, ಮಕ್ಕಳನ್ನು, ನೋಡಿ ಯಾರು ಎಷ್ಟು, ಹೇಗೆ ಅತ್ತರು ಎಂಬ ವರದಿ ಅಮ್ಮನಿಗೆ ಒಪ್ಪಿಸಲು ಹೋಗಿ ಬೈಸಿಕೊಂಡು ಸುಮ್ಮನಾಗುತಿದ್ದೆ. ಖಳನಾಯಕಿಯರಿಗೆ ಮಹಿಳೆಯರು ಉಪಯೋಗಿಸುತಿದ್ದ ಬೈಬಾರದ ಮಾತುಗಳನ್ನು ಬೈಯುತಿದ್ದದನ್ನು ಇಲ್ಲಿ ಬರೆಯಲಾರೆ.
ಕೌಟುಂಬಿಕ ಟ್ರಾಜೆಡಿಗಳಿಗೆ ಬಿಕ್ಕಿ ಬಿಕ್ಕಿ ಅಳುತಿದ್ದ ಮಹಿಳೆಯರು “ಅವ್ವಾ ಒಂದ ಕೈವಸ್ತ್ರ ಪೂರ ತೋಯ್ತ ನೋಡ ಕಣ್ಣೀರ್ಲೆ …” ಎಂದು ಕಣ್ಣಿರಿಂದ ಕರವಸ್ತ್ರ ತೋಯಿಸಿ ಟ್ರಾಜೆಡಿ ಎಂಜಾಯ್ ಮಾಡಿದವರಿಗೆ .

” ಕಾಕಿ ಇನ್ನ ಮ್ಯಾಲ ಕರಚೀಪ್ ಬಿಟ್ಟ ಟಾವೆಲ್ ತೊಗೋಂಬರ್ರಿ ” ಎಂದು ಪುಕ್ಕಟೆ ಸಲಹೆಗೆ ಬೈಗುಳದ ಧನ್ಯವಾದ ಪಡೆದು ಧನ್ಯರಾಗುತಿದ್ದೆವು. ನಾಯಕಿಯರ ಪ್ಯಾಂಟು ಶರ್ಟು ಕಂಡು “ಅವ್ವಾ ಗಂಡಸರ ಗತೆ ಪ್ಯಾಂಟಾ ಅಂಗಿ ಹಾಕ್ಯಾಳ ” ಎಂದು ಸೋಜಿಗಪಡುತಿದ್ದ ಹಳ್ಳಿ ಮಹಿಳೇಯರಿಗೆ, ಹಿರೋಯಿನಿಯ ದೊಗಳೆ ಬೆಲ್ ಬಾಟಮ್ ಪ್ಯಾಂಟ್ ನೋಡಿ ” ಅವರಪ್ಪಾಂದ ಹಾಕೊಂಡಿರಬೇಕು” ಎಂದು ತರ್ಕಿಸಿ, ಉತ್ತರಿಸಿ ಬೈಸಿಕೊಂಡು ಕಲಿತುದು ಮೌನದ ಪಾಠ. ಹಳ್ಳಿ ಹೆಂಗಸರ ಬಾಯಿಗೆ ಯಾವ ಜರಡಿಯಿಲ್ಲದೆ ಅವ್ಯಾಹತವಾಗಿ ಹರಿದು ಬರುತಿದ್ದ ಬೈಗುಳಗಳು ಕೋಪಪ್ರತಾಪ ಹೊರಹಾಕಿದರೆ. ಅದೆ ಬೈಗುಳ ಜ್ಞಾನ ಮಕ್ಕಳಿಗೆ ಬಳುವಳಿಯಾಗಿ ಮುಂದುವರಿಯುತಿತ್ತು. ಪರದೆಯ ಮೇಲೆ ನರಸಿಂಹರಾಜು, ದ್ವಾರಕೀಶ್ ಹೆಸರು ಕಂಡಕೂಡಲೆ ಕೇಕೇ ಹಾಕುತಿದ್ದ ಹುಡುಗರು

” ಏ ನರಸಿಂ ರಾಜು. ದಾರ್ಕೇಶಿ ಭಾಳ ನಗಸ್ತಾರ ” ಎನ್ನುತ್ತ ನಗಲು ಅಣಿಯಾಗುವವರ ಸಂಭ್ರಮ ಹೇಳತೀರದು.
“ಇಸ್ಣು ವರ್ದನ್ ಅಂದ್ರ ಇಂವ ಅನ….? ” ಎಂದು ನಟರ ಗುರತು ಹಿಡಿಯುವ ಪ್ರಯತ್ನಕ್ಕಿಳಿಯತಿದ್ದ ಮಹಿಳೆಯರಿಗೆ
” ಅಲ್ಲ ಕಾಕಿ ಅಂವ ಅಂಬ್ರೇಷಿ….” ಎಂದಾಕ್ಷಣ …
” ಏಂತಾ ಹೆಸರಿಟ್ಟಾರ ಯವ್ವಾ ?…ಬಸಪ್ಪಾ …ಹಣಮಂತಾ ..ಮಾಂತೇಸಿ,ಸಿದರಾಯಿ .ರಾಜಾ..ಅತ ಇಡುದ ಬಿಟ್ಟ ಇಂತಾ ತ್ರಾಸ ಲೆ ಹೇಳು ಹೆಸರ ಯಾಕ ಇಟಗೋಬೇಕು ? ” ಎಂದು ಹೆಸರುಗಳನ್ನು ಉಚ್ಚರಿಸಲು ನಾಲಿಗೆ ತಿರುಗದ ಅನಕ್ಷರಸ್ಥ ಮಹಿಳೆಯರ ಗೋಳಿನ ಮಾತುಗಳು.

ಡಾ ರಾಜಕುಮಾರರ ಸಿನೆಮಾಗಳಿಗೆ ಮನೆಯಲ್ಲ ತುಂಬಿ ಪಡಸಾಲೆಯಿಂದ ಹಿಡಿದು ಚಪ್ಪಲಿ ಬಿಡುವ ಜಾಗದವರೆಗೂ ಜನತುಂಬಿ ಹೋಗಿ ಅಪ್ಪ ಅಮ್ಮನ ತಲೆನೋವು ಹೆಚ್ಚಾಗುತಿದ್ದರೆ, ಚಿಕ್ಕ ಪುಟ್ಟ ವಸ್ತುಗಳ ಕಳ್ಳತನಗಳೂ ನಡೆಯುತಿದ್ದವು. ಮನೆಯ ಮಕ್ಕಳೂ ಹಾಗೂ ಅಕ್ಕಪಕ್ಕದ “ಸಿಐಡಿ 999 ” ಮಕ್ಕಳಿಗೆ ಪತ್ತೆದಾರಿ ಜವಾಬ್ದಾರಿ ಹೋರಿಸಿ ಆಯಕಟ್ಟಿನ ಜಾಗಗಳಲ್ಲಿ ಕೂರಿಸಿ ,ಶಂಕಿತ ಕಳ್ಳ ಮಕ್ಕಳ ಮೇಲೆ ವಿಶೇಷ ನಿಗಾ ವಹಿಸಲು ಹೇಳಲಾಗುತಿತ್ತು. ಸಿನೆಮಾ ಮುಗಿದ ಮರುದಿನ ಶಾಲೆಯ ಆಟದ ಬಿಡುವಿನಲ್ಲಿ ನಿನ್ನೆಯ ಸಿನೆಮಾದ ಚರ್ಚೆ ಆರಂಭವಾಗಿ ಅದೆ ಸಿನಮಾದ ಫೈಟಿಂಗ್ಗಳನ್ನು ಅನುಕರಿಸಲಾರಂಭಿಸುತಿದ್ದೆವು .ಕೆಲವರಂತೂ ಸ್ಲೋ ಮೋಷನ್ ನಲ್ಲಿ ನಡೆದು ಖಳನಾಯಕನಂತೆ ನಿಧಾನವಾಗಿ ಬಿದ್ದು, ಮಲಬಧ್ದತೆಯಾದವರಂತೆ ತಿಣುಕುತ್ತ ಮುಖವನ್ನು ವಿಕಾರವಾಗಿಸಿ ಕೆಟ್ಟದಾಗಿ ಕಿರಿಚುತ್ತ ಸಾಯುವ ನಟನೆ ಮಾಡುತಿದ್ದರೆ , ನೋಡಿದ್ದರೆ ಬಹುಶಃ ಆ ಖಳನಟರಿಗೂ ನಿರುದ್ಯೋಗದ ಭಯಕಾಡುತಿತ್ತೇನೂ .

” ಏ ನಮ್ಮ ಸಂತು ವಜ್ರಮುನಿಗತೆ ಭಾಳ ಚಂದ ಒದ್ದ್ಯಾಡಿ ಸಾಯ್ತಾನ..” ಎಂದು ಸಂತುನ ಸಾಯುವ ನಟನೆಯನ್ನು ಹೊಗಳಲು ಸಂತುನ ಮುಖದಲ್ಲಿ ಅಪಾರ ಹೆಮ್ಮೆ ಕಾಣುತಿತ್ತು
” ಯಾ ಡಿಷ್ಕೌಂ …ಬೀಷ್ಗಾ ….ಡಿಷುಂ ಡಿಷುಂ ” ಎಂದು ಹೊಡೆದಾಡಿ ಮೈದಾನದ ತುಂಬೆಲ್ಲ ಹೊರಳಾಡಿ ಮಣ್ಣಾದ ಬಟ್ಟೆಗಳ “ಮಣ್ಣಿನ ಮಕ್ಕಳ” ಕಂಡು ತಾಯಂದಿರ ಕೋಪತಾರಕ್ಕೆರಿ
” ಅವ್ವಾ ಸಿನೆಮಾದ ಪೈಟಿಂಗ್ ಮಾಡಿ ಅರಿಬಿ ಎಲ್ಲಾ ಮಣ್ಣ ಮಣ್ಣ ಅಗ್ಯಾವು .ಬೂದ್ಯಾನ ಬೆಕ್ಕಿನಾಂಗ ಮಾರಿ ಮಣ್ಣಮಾಡಕೊಂಡ ಬಂದಾವು … ” ಎಂದು ಕಪ್ಪಗಾದ ಮಕ್ಕಳ ಮುಖ ಅಥವಾ ಬಟ್ಟೆ ತೊಳೆಯುವ ಸಂದಿಗ್ಧದ ತಾಯಂದಿರ ಕಂಡು  ” ಯವ್ವಾ…. ನಿರಮಾ ಹಾಕು ಹೋಗತೈತಿ” ಎನ್ನುತ್ತ
ವಾಶಿಂಗ್ ಪೌಡರ್ ನಿರ್ಮಾ …ನಿಮ್ಮಪ್ಪಾ ಮಾಡಿದ ಕರ್ಮಾ ….ಹಾಲಿನಂತಾ ಬೀಳಿಪು “ ಎಂದು ಹಾಡುತ್ತ ತಾಯಂದಿರಿಗೆ ಬಟ್ಟೆತೋಳೆಯುವ ವಿವಿಧ ಉಪಾಯ ಕೊಟ್ಟು ಜಾಹಿರಾತು ಹಾಡಿ ಮುಗಿಸುವಷ್ಟರಲ್ಲಿ ಬಡಿಸಿಕೊಂಡವರ ಕತೆಗಳು ದಿನಕ್ಕೊಂದು.

ಬೆಂಗ್ಳೂರ ಭಾಷೆಯ ಅರ್ಥವಾಗದ ಹಾಡುಗಳ ಅಪಭ್ರಂಶಗಳ ಕತೆ ಇನ್ನೊಂದು ಮಹಾಕಾವ್ಯ. ಅರ್ಥವಾಗದ ಎರಡುಮೂರು ಹಾಡುಗಳ ಕಲಸುಮೇಲೋಗರದ ರುಚಿ ಹಾಡಿದವರಿಗೆ ಗೊತ್ತು .ಬಯಲು ಸೀಮೆಯ ಹೈಕ್ಳ ಬಾಯಲ್ಲಿ ಮಡಿವಂತ ಹಾಡುಗಳು ನಲುಗಿಹೋಗುತಿದ್ದವು .
” ನೀ ನೀಟಿದಾ …ನೆನಪಲ್ಲವೂ ಎದೆತುಂಬಿ ಹಾಳಾಗಿದೆ ” ಇಂದ ಹಿಡಿದು
” ಚಿನ್ನದಂತಹ ಹೆಂಡತಿ ಇರಲು ತಣ್ಣೀರೆತಕೆ …
…ತಣ್ಣೀರೆಕೆ ….ಬಿಸಿನೇರೆಕೆ …ಬಾಳುವಿರೆಲ್ಲಾ ಹಾಳಾಗಿ
ನಾನಿರುವುದೆ ನಿಮಗಾಗಿ” ಒಂದು ಹಾಡಿನಿಂದ ಆರಂಭವಾಗು ಇನ್ನಿಂದರಲ್ಲ್ಲಿ ಮುಗಿಸಿದರೆ ಸುಮಾರು ಮೂವತ್ತು ವರ್ಷಗಳ ಹಿಂದೆ ಕನ್ನಡ ರೀ ಮಿಕ್ಸ ಹಾಡಿದ ಶ್ರೆಯ ನಮಗೆ.

ನಾವೆ ಕನ್ನಡದ ಮೊದಲ್ ರಿಮಿಕ್ಸ ಪಾಪ್, ಹಾಗೂ ಟಾಪ್ ಗಾಯಕರು. ಟ್ವಿನ್ ಬಡ್ರ್ಸ ಬನಿಯನ್ ಚಡ್ಡಿ, ಝಂಡುಬಾಮ್‍ನ ರೆಡಿಯೋ ಗೀತೆ ಕೇಳಿ ಬೇಳೆದ ಹಳ್ಳಿ ಮಕ್ಕಳಿಗೆ ಟಿವಿಯ ಜಾಹಿರಾತುಗಳು ತುಂಬ ಖುಷಿಕೊಡುತಿದ್ದವು. “ಡಾಂಬರ್ ಚವನ್ ಪ್ರಾಷ್.. ವಿಕೋಟರ್ಮರಿ, ನೀವು ಉಜಾಲಾಗೆ ಮೋರೆಹೋದಿರಾ…? ” ಎಂಬ ಪ್ರಶ್ನೆ ಎದುರು ಬಂದವರಿಗೆ ಕೇಳುತ್ತ.
“ವಿಡಿಯೋಕಾಲ್ ವಾಷಿಂಗ್ ಮಿಕ್ಸಿ… ಇಟ್ ವಾಷಸ್.. ಇಟ್. ಹುಂ ಹುಂ….. ಇಟ್. ಹಾಂ ಹಾಂ. ವಿಡಿಯೋಕಾಲ್ ವಾಷಿಂಗ್ ಮಿಕ್ಸಿ.” ಎಂದು ವಿಡಿಯೋಕಾಲ್ ವಾಷಿಂಗ್ ಮಿಕ್ಸಿ ಎಂಬ ವಿಚಿತ್ರ ಉಪಕರಣ ಕಂಡು ಹಿಡಿದ ಶ್ರೇಯ ನಮ್ಮದೇ. ದಿನವೂ ಕೇಳುವ ಜಾಹಿರಾತುಗಳನ್ನು ಜೋರುಜೋರಾಗಿ ಹಾಡುತ್ತ ಓಡಾಡುತ್ತ.
“ ಮಕ್ಕಳ ನಡುವೆ ಸುರಕ್ಷಿತ ಅಂತರಕ್ಕೆ ಮಾಲಾ ಡಿ ಬಳಸಿ”
ಎನ್ನುತ್ತ ಅರಿವಿಲ್ಲದ ವಯಸ್ಕರ ಜಾಹಿರಾತುಗಳನ್ನು ಜೋರಾಗಿ ಒದರಿದಾಗ ಕೆಲವರಿಗೆ ನಗು ಕೆಲವರಿಗೆ ಇರುಸುಮುರುಸು.

ವಿಸ್ಪರ್ನ ಅಡ್ವಟೇಜು ಅಡ್ವಾನ್ಸಾಗಿ ಹೇಳಿ ಬೈಸಿಕೊಂಡು ಉಚ್ಚ್ಚಾಟಿಸಿಕೊಂಡ ಅಧಿಕ ಪ್ರಸಂಗಿಗಳು ದಿನಕ್ಕೊಬ್ಬರು. ನಿರೋಧ್ ವಿಸ್ಪರ್ ಮಾಲಾ ಡಿಗಳ ಸರಕಾರಿ ಜಾಹಿರಾತುಗಳನ್ನು ಜೋರಾಗಿ ಕೂಗಿಹಾಡುತಿದ್ದೆವು. ಇಂದು ನೆನೆಸಿಕೊಂಡಾಗ ನಮಗೆ ನಗು ತಡೆಯಲಾಗುದಿಲ್ಲ. ಕೆಲ ಮಿತ್ರರು ಸೇರಿದಾಗ ಇನ್ನೂ ಕೆಲ ಹಳೆಯ ಜಾಹಿರಾತುಗಳನ್ನು ಹಾಡಿ ಗತಕಾಲಕ್ಕೆ ಶೃದ್ಧಾಂಜಲಿ ಅರ್ಪಿಸುತ್ತೆವೆ. ವಾರ್ತೆಗಳ ಸಮಯದಲ್ಲಿನ ಊಟದ ಇಂಟರ್ವಲ್ ಹಾಗೂ ವಾರ್ತೆಯ ನಂತರದ ಭಾಗಕ್ಕೆ ಮತ್ತೆ ಸೀಟುಗಳ ಮರುವಿಂಗಡಣೆಯ ಜಗಳ. ಪ್ರಾಣ ಘಾತುಕ ಅಪಾನವಾಯುಗಳ ದುರ್ವಾಸನೆ, ಜಗಳಗಳ ಮಧ್ಯೆ ಸಿನೆಮಾ ಮುಗಿಯವಷ್ಟರಲ್ಲಿ ಮನೆ ತುಂಬ ಕಸ. ಹಣ್ಣುಗಳ ಬೀಜಗಳು, ಸಿಪ್ಪೆಗಳ ಗುಡಿಸುವುದು ಅಮ್ಮನ ತಲೆನೋವು.

ವಾರಕ್ಕೊಂದು ಸಿನೆಮಾ ದಿನಕ್ಕರ್ಧ ಗಂಟೆಯ ಧಾರಾವಾಹಿ ನಂತರದ ಆಟ ಪಾಠ. ಧಾರವಾಹಿ, ಸಿನೆಮಾಗಳ ಮರುನಟನೆಯ ಸೃಜನಶೀಲತೆ ಎಲ್ಲವೂ ಕೇವಲ ಒಂದು ಚ್ಯಾನೆಲ್‍ನ ಪ್ರಭಾವ. ನೂರು, ಸಾವಿರ, ಚಾನಲ್‍ಗಳ ಮಧ್ಯ ಕಳೆದುಹೋದ ಟಿವಿಯ, ಬೆಲೆ, ಆಪ್ತತೆ, ಹಳೆಯ ಕುತೂಹಲ, ಆಗ ಉಂಟಾದ ಬೆರಗು ಮರಳಿ ಬರುವುದೆ ….?
“ಮಿಲೆಸುರ್ ಮೇರಾ ತುಮ್ಹಾರಾ”ದ ಇಂಪು ಮತ್ತೆ ಕಿವಿಗಳ ತುಂಬೀತೆ ….?

ಡಾ. ಸಲೀಮ್ ನದಾಫ್ – ಸಮುದಾಯ ಆರೋಗ್ಯ ತಜ್ಞ
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this: