ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ ||
ಯುವಜನತೆ ಗುಟ್ಕಾ,ಬೀಡಿ ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳಿಗೆ ದಾಸರಾಗಿದ್ದು ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ.ತಂಬಾಕಿನಲ್ಲಿ ಹೆಚ್ಚು ಹಾನಿಕಾರಕ ರಾಸಾಯನಿಕಗಳಿದ್ದು ಗುಟಕಾ,ಬೀಡಿ,ಸಿಗರೇಟ್ ಸೇವಿಸುವುದರಿಂದ ಹತ್ತು ಹಲವಾರು ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ. ವೈದ್ಯಕೀಯ ಮೂಲಗಳ ಪ್ರಕಾರ ಶ್ವಾಸಕೋಶ,ಅಡ್ರಿನಲ್ ಗ್ರಂಥಿ,ಹೊಟ್ಟೆ ಮೂಗು,ಮೂತ್ರಚೀಲ,ಮೇದೋಜೀರಕ ಗ್ರಂಥಿ,ಪಿತ್ತಜನಕಾಂಗ,ಮೂತ್ರಜನಕಾಂಗ, ಬಾಯಿ,ಗಂಟಲು,ಅನ್ನನಾಳದ ಕ್ಯಾನ್ಸರ್ ತಂಬಾಕು ವ್ಯಸನಿಗಳಲ್ಲಿ ಕಂಡು ಬರುತ್ತವೆ. ನಮ್ಮ ಸಮಸ್ಸೆಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದೈಹಿಕ, ಮಾನಸೀಕ ದುಷ್ಪರಿಣಾಮಗಳು ಮುಂಚೂಣಿಯಲ್ಲಿದ್ದು ಈ ವಿಷಕಾರಿ ಮೃತ್ಯು ಚುಂಬನ ನಮ್ಮನ್ನು ಬಲಿಕೊಡುತ್ತಿದೆ.
ಅನೇಕ ರಾಜ್ಯ ಸರಕಾರಗಳು ಗುಟ್ಕಾ ಮೇಲೆ ನಿಷೇದ ಹೇರಿರುವುದರಿಂದ ವ್ಯಾಪಾರಿಗಳು ಗುಟ್ಕಾಗಳನ್ನು ಹೆಚ್ಚಿನ ಲಾಭಗೊಸ್ಕರ ಕದ್ದುಮುಚ್ಚಿ ಹೆಚ್ಚಿನ ಬೆಲೆಗೆ ಮಾರಾಟಮಾಡುತ್ತಿದ್ದಾರೆ.ಮುಂಬಯಿಯಲ್ಲಿ ಗುಟ್ಕಾ ನಿಷೇದ ನಂತರವೂ ಚಿಲ್ಲರೆ ಪಾನ್ ಬೀಡಾ ಅಂಗಡಿಗಳಲ್ಲಿ ಇನ್ನೂ ಸಹ ಸಿಗುವ ಗುಟ್ಕಾಗಳನ್ನು ಸಾರ್ವಜನಿಕರು ಹೆಚ್ಚಿನ ಬೆಲೆ ತೆತ್ತು ಕೊಂಡುಕೊಂಡು ಜಗಿದು ಉಗುಳಿ ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ.ಇದಲ್ಲದೇ ಗುಟ್ಕಾ ಮೇಲಿನ ನಿಷೇದದಿಂದಾಗಿ ಸಾರ್ವಜನಿಕರು ಚಟ ತೀರಿಸಿಕೊಳ್ಳಲು ಪರ್ಯಾಯವಾಗಿ ತಂಬಾಕು ಪಾನ್ ಗಳ ಮೊರೆ ಹೋಗಿದ್ದು ತಂಬಾಕುಯುಕ್ತ ಪಾನ್ ತಿನ್ನುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ 360 ಬೀಡಾ ,200 ಬೀಡಾ,ಬಾಬುಲ್ ಬೀಡಾ ಕಶ್ಮೀರಿ ಪಾನ್ ಮುಂತಾದ ವಿಳ್ಯದೆಲೆಗಳ ಪ್ರಕಾರಗಳು ದುಬಾರಿಯಾಗಿ ಬಿಟ್ಟಿವೆ. ಕೆಲವರಂತೂ ನಕಲಿ ಗುಟ್ಕಾ ಮಾರಾಟಮಾಡಿ ಅಧಿಕ ಲಾಭಗಳಿಸುವುದರೊಂದಿಗೆ ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾರೆ. ಭಾರತದ ಅನೇಕ ರಾಜ್ಯಗಳಲ್ಲಿ ಗುಟ್ಕಾ ಮತ್ತು ಅದರ ರೂಪಾಂತರ,ಉತ್ಪಾದನೆ, ವಿತರಣೆ ,ಸಂಗ್ರಹಣೆ ಮತ್ತು ಮಾರಾಟ ನಿಷೇದಿಸಿದ್ದರೂ ಸಹ ಗುಟ್ಕಾ ಅಕ್ರಮ ಮಾರಾಟ ಇನ್ನೂ ನಡೆಯುತ್ತಲೇ ಇದೆ.
ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS ) 2016- 2017 ರ ಎರಡನೇ ಸುತ್ತಿನ ಸಮೀಕ್ಷೆ ವರದಿ ಪ್ರಕಾರ ಮಹಾರಾಷ್ಟ್ರದಲ್ಲಿ 6.0% ರಷ್ಟು ಪುರುಷರು, 1.4% ಮಹಿಳೆಯರು ಮತ್ತು 3.8% ರಷ್ಟು ಎಲ್ಲಾ ವಯಸ್ಕರು ಪ್ರಸ್ತುತ ಹೊಗೆ ತಂಬಾಕು ಬಳಸುತ್ತಾರೆ.ಹಾಗೂ 31.7% ರಷ್ಟು ಪುರುಷರು, 16.6% ಮಹಿಳೆಯರು ಮತ್ತು 24.4% ರಷ್ಟು ಎಲ್ಲಾ ವಯಸ್ಕರು ಧೂಮಪಾನವಿಲ್ಲದ ಹೊಗೆರಹಿತ ತಂಬಾಕು ಬಳಸುತ್ತಾರೆ. ಗುಟ್ಕಾ ಮತ್ತು ಖೈನಿ ಇವುಗಳು ಸಾಮಾನ್ಯವಾಗಿ ಬಳಸುವ ಎರಡು ತಂಬಾಕು ಉತ್ಪನ್ನಗಳಾಗಿದ್ದು, ಮಹಾರಾಷ್ಟ್ರದಲ್ಲಿ 15.5% ವಯಸ್ಕರು ಖೈನಿ ಮತ್ತು 8.6% ವಯಸ್ಕರು ಗುಟ್ಕಾ ಬಳಸುತ್ತಾರೆ.15-17 ವಯಸ್ಸಿನವರಲ್ಲಿ ತಂಬಾಕು ಬಳಕೆಯು ವ್ಯಾಪಕವಾಗಿ ಹೆಚ್ಚಾಗಿದ್ದು ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS 1 ) ಒಂದನೇ ಸುತ್ತಿನ ಸಮೀಕ್ಷೆಯಲ್ಲಿ 2.9% ಇದ್ದುದು, ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS 2 ) ಯ ಎರಡನೇ ಸುತ್ತಿನ ಸಮೀಕ್ಷೆ ಯಲ್ಲಿ 5.5% ರಷ್ಟು ಹೆಚ್ಚಾಗಿದೆ.
ಎಲೆ ಅಡಿಕೆ ಜತೆಗೆ ತಂಬಾಕು ಸೇವನೆ ಮಾಡುವುದು, ಬೀಡಿ ಮತ್ತು ಗುಟ್ಕಾ ಸೇವನೆ ಮಾಡುವುದು ಇವು ತಂಬಾಕು ಸೇವನೆ ಮಾಡುವ ವಿಧಾನಗಳಾಗಿದ್ದು, ಕರ್ನಾಟಕದಲ್ಲಿ ಶೇ.9.4 ರಷ್ಟು ವಯಸ್ಕರು ಎಲೆ ಅಡಿಕೆ ಜತೆಗೆ ತಂಬಾಕು ಸೇವನೆ ಮಾಡಿದರೆ ಶೇ.5.9 ರಷ್ಟು ಜನರು ಬೀಡಿ ಸೇದುವುದು ಹಾಗೂ ಗುಟ್ಕಾ ಸೇವನೆ ಮಾಡುತ್ತಿದ್ದಾರೆ.ಕರ್ನಾಟಕದಲ್ಲಿ ತಂಬಾಕು ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲಾಗಿದೆ.ಇ-ಸಿಗರೇಟು ಮತ್ತು ಗುಟ್ಕಾ ನಿಷೇಧಿಸುವುದು ಸೇರಿದಂತೆ ತಂಬಾಕು ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಕಠಿಣವಾದ ಕ್ರಮಗಳನ್ನು ತೆಗೆದುಕೊಂಡಿದೆ.ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ COTPA-2003(ಕೋಟ್ಪಾ) ಜಾರಿಗೊಳಿಸುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ರಾಜ್ಯವು ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿರುವ ಬೀಡಿ, ಸಿಗರೇಟು,ಜಗಿಯುವ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಬಗ್ಗೆ ಕಾನೂನನ್ನು ಉಲ್ಲಂಘಿಸಿದ ವ್ಯಕ್ತಿಯು ಕೋಟ್ಪಾ ಕಾಯ್ದೆ 2003 ರ ಕಲಂ (20) ಅಡಿಯಲ್ಲಿ ದಂಡನೆಗೆ ಒಳಗಾಗುತ್ತಾರೆ.
ಎರಡನೇ ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೇ 2016-17 ಇದರ ಪ್ರಕಾರ ಜಿಎಟಿಎಸ್ ೧ ರ ಪ್ರಕಾರ ಕರ್ನಾಟಕದಲ್ಲಿ 2009-10 ರ ರಾಜ್ಯದಲ್ಲಿ ಶೇ.28.2 ರಷ್ಟಿದ್ದ ತಂಬಾಕು ಬಳಕೆದಾರರ ಪ್ರಮಾಣ ಜಿಎಟಿಎಸ್ 2 ಅವಧಿಯಲ್ಲಿ ಶೇ.22.8 ಕ್ಕೆ ಇಳಿದಿದೆ. ಈ ಅವಧಿಯಲ್ಲಿ ವಯಸ್ಕರ ಧೂಮಪಾನಿಗಳ ಸಂಖ್ಯೆಯು ಶೇ.11.9 ರಿಂದ ಶೇ.8.8 ಕ್ಕೆ ಇಳಿದಿದ್ದರೆ, ಜಗಿಯುವ ತಂಬಾಕು ಸೇವನೆ ಮಾಡುವವರ ಸಂಖ್ಯೆ ಶೇ.19.4 ರಿಂದ ಶೇ.16.3 ಕ್ಕೆ ಇಳಿದಿದೆ.ಗ್ಯಾಟ್ಸ್-2 ಅವಧಿಯಲ್ಲಿ 15-17 ರ ವಯೋಮಾನದ ಯುವಕರಲ್ಲಿ ತಂಬಾಕು ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಜಿಎಟಿಎಸ್1 ರಲ್ಲಿ ಶೇ.6.8 ರಷ್ಟು ತಂಬಾಕು ಸೇವನೆ ಇದ್ದ ಪ್ರಮಾಣ ಜಿಎಟಿಎಸ್2 ಅವಧಿಯಲ್ಲಿ ಶೇ. 3.7 ಕ್ಕೆ ಕುಸಿದಿದೆ.ರಾಜ್ಯದಲ್ಲಿ ನಿರಂತರ ಜಾಗೃತಿ ಫಲವಾಗಿ ವಯಸ್ಕರರಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಹದಿಹರೆಯದವರು ತಂಬಾಕು ಬಳಸುತ್ತಾರೆ.ಪ್ರತಿ ಮೂವರು ವಯಸ್ಕರಲ್ಲಿ ಒಬ್ಬರು ಹಾಗೂ ಪ್ರತಿ ಆರು ವಯಸ್ಸಾದ ಮಹಿಳೆಯರಲ್ಲಿ ಒಬ್ಬರು ತಂಬಾಕು ಬಳಸುತ್ತಾರೆ.ಗುಟ್ಕಾ ಸೇವಿಸುವರಲ್ಲಿ ಮಹಾರಾಷ್ಟ್ರದಲ್ಲಿ 60 ಪ್ರತಿಶತದಷ್ಟು ಜನರು 14-16 ವರ್ಷ ವಯಸ್ಸಿನವರಾಗಿದ್ದಾರೆ.ಮಹಾರಾಷ್ಟ್ರ ಸರ್ಕಾರ 2008 ಮೇ 20 ರಿಂದ ಖೈನಿ ಮತ್ತು ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳ ಮೇಲೆ ನಿಷೇದ ಜಾರಿಗೊಳಿಸಿದೆ.ರಾಜ್ಯದ FDA( ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಇಲಾಕೆಯು 2012 ರಲ್ಲಿ ಕಟ್ಟುನಿಟ್ಟಾಗಿ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ತಯಾರಿಸುವ ಮತ್ತು ಮಾರಾಟಮಾಡುವದನ್ನು ನಿಷೇದಿಸಿದೆ. ಅದರೂ ಸಹ ಇನ್ನೂ ರಾಜ್ಯದಾದ್ಯಂತ ಖೈನಿ ಮತ್ತು ಗುಟ್ಕಾ ಮುಂತಾದ ನಿಷೇದಿತ ತಂಬಾಕು ಉತ್ಪನ್ನಗಳು ವ್ಯಾಪಕವಾಗಿ ಬಳಸಲ್ಪಡುತ್ತಿವೆ.ತಂಬಾಕು ಸೇವನೆಯ ಸಮೀಕ್ಷೆಯ ಪ್ರಕಾರ ಪಾನ್ ಮಸಾಲಾವನ್ನು ಸೇವಿಸುವ ವಿಷಯದಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು. 43% ರಷ್ಟು ಪುರುಷರು ಮತ್ತು 19% ರಷ್ಟು ವಯಸ್ಕ ಮಹಿಳೆಯರು ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳಿಗೆ ವ್ಯಸನಿಯಾಗಿರುತ್ತಾರೆ.ಭಾರತದಲ್ಲಿ ಪ್ರತೀ ವರ್ಷ 10 ಲಕ್ಷ ಜನರು ತಂಬಾಕು ಬಳಕೆಯಿಂದ ಸಾವನ್ನಪ್ಪುತ್ತಿದ್ದಾರೆ.ತಂಬಾಕು ಸೇವನೆ ಮತ್ತು ಧೂಮಪಾನವು ಹಲವಾರು ನಮೂನೆಯ ಕ್ಯಾನ್ಸರ್ ಗಳಿಗೆ ಎಡೆಮಾಡಿಕೊಡುತ್ತದೆ. ಕ್ಯಾನ್ಸರಗಳಲ್ಲಿ ಸುಮಾರು 40% ರಷ್ಟು ತಂಬಾಕು ಬಳಕೆಗೆ ಸಂಬಂಧಿಸಿವೆ ಎಂದು ವೈದ್ಯರು ಹೇಳುತ್ತಾರೆ.
ತಂಬಾಕು ಮತ್ತು ನಿಕೋಟಿನ್ ಒಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲಾಗಳು ಕರುಳು, ಶ್ವಾಸಕೋಶ,ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಗೆ ಕಾರಣವಾಗಿದ್ದು ರಾಜ್ಯ ಸರ್ಕಾರ ಗುಟ್ಕಾ ನಿಷೇದಿಸಿದರೂ ಮಾರುಕಟ್ಟೆಯಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾಗಳು ಲಭ್ಯವಿರುವುದರಿಂದ ಗುಟ್ಕಾ ಮಾರಾಟಗಾರರಿಗೆ ಕಾನೂನಿನ ಬಿಸಿ ಹಾಗೂ ಗುಟ್ಕಾ ಪ್ರೀಯರಿಗೆ ನಿಷೇದದ ಅನುಭವ ಇನ್ನೂ ಆಗಿಲ್ಲ ಅನಿಸುತ್ತಿದೆ.ತಂಬಾಕು ಗುಟ್ಕಾ ಸೇವನೆ ಅಪಾಯಕಾರಿ ವಿಷದ ಗುಟುಕು ಎಂಬುದನ್ನೂ ಅರಿತರೂ ಸಹ ಜನರು ಮೃತ್ಯುವನ್ನು ಅಪ್ಪಿಕೊಳ್ಳುತ್ತಲೇ ಇದ್ದಾರೆ.ತಂಬಾಕು ಗುಟ್ಕಾ ಸೇವನೆಯಿಂದ ದೊರೆಯುವ ಅತ್ಯಲ್ಪ ಆನಂದ ಭಾವ ಕ್ಕಾಗಿ ಜೀವನನ್ನೇ ಬಲಿಕೊಡುತ್ತಿದ್ದಾರೆ.
ಬಾಯಿ ಕ್ಯಾನ್ಸರ್ ನಿಂದ ಬದುಕುಳಿದಿರುವ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ ಅವರು ಇತ್ತಿಚ್ಚೆಗೆ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಾತನಾಡುತ್ತ 40 ವರ್ಷಗಳ ಹಿಂದೆ ಹೊಗೆಸೊಪ್ಪು ಮತ್ತು ಸುಪಾರಿಯ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಯಾರಾದರೂ ನನಗೆ ಮುನ್ನೆಚ್ಚರಿಕೆ ನೀಡಿದ್ದಲ್ಲಿ ಚೆನ್ನಾಗಿತ್ತು, ತಂಬಾಕು ಬಳಕೆಯಿಂದ ಬಾಯಿಯನ್ನು ಭಾದಿಸಿದ ಕ್ಯಾನ್ಸರ್ ತನಗೆ ತೀವ್ರವಾದ ತೊಂದರೆ ನೀಡಿದೆ,ಇದರಿಂದ ಪಾರಾಗಲು ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಯಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹಲ್ಲು ಕಿತ್ತಿರುವುದರಿಂದಾಗಿ ಬಾಯಿಯನ್ನು ದೊಡ್ಡದಾಗಿ ತೆಗೆಯಲು ಆಹಾರವನ್ನು ನುಂಗಲು ಮಾತನಾಡಲು ಅಗುತ್ತಿಲ್ಲ ಎಂದು ಕ್ಯಾನ್ಸರ್ ನಿಂದ ಹೊರಬಂದು ಬದುಕುಳಿದ ಕಹಿ ಅನುಭವವನ್ನು ಹಂಚಿಕೊಂಡರು.ಹೊಗೆಸೊಪ್ಪು ಮತ್ತು ಸುಪಾರಿಯ ಬಳಕೆಯಿಂದಾಗಿ ಈ ಕಾಯಿಲೆಗೆ ಈಗಲೂ ಲಕ್ಷಾಂತರ ಭಾರತೀಯರು ಬಲಿಯಾಗುತ್ತಿದ್ದಾರೆ. ಅವರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತೇನೆ ಎಂದ ಅವರು 2022 ರೊಳಗೆ ಬಾಯಿಯ ಕ್ಯಾನ್ಸರ್ ನಿರ್ಮೂಲನೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿರುವ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಮಿಶನ್ ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಮಾನವ ಜೀವನ ದೇವರು ಕರುಣಿಸಿದ ಅಮೂಲ್ಯ ಕೊಡುಗೆಯಾಗಿದ್ದು ಹುಟ್ಟು ಸಾವುಗಳ ನಡುವೆ ಇರುವ ಜೀವನದಲ್ಲಿ ಜೀವಿಸುವುದು ಮುಖ್ಯವಲ್ಲ ನಾವು ಯಾವರೀತಿ ಜೀವಿಸುತ್ತೇವೆ ಅನ್ನುವುದೇ ಮುಖ್ಯ.ಅನಾದಿಕಾಲದಿಂದಲೂ ರೋಗಗಳು ಮನುಷ್ಯರನ್ನು ಕಾಡುತ್ತಲೇ ಇವೆ.ತಂಬಾಕು ಸೇವನೆಯಿಂದ ಜನರು ಅನೇಕ ಗಂಭೀರವಾದ ರೋಗಗಳಿಗೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಆನಂದಭಾವವನ್ನು ಮೂಡಿಸುವ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಸೇವನೆಯು ದೇಹ ಸೇರುವಾಗ ವಿಷವಾಗಿ ಸೇರುತ್ತದೆ.ಪ್ರತೀ ಆರು ಸೆಕೆಂಡ್ ಗೆ ಒಬ್ಬರಂತೆ ತಂಬಾಕು ಉತ್ಪನ್ನ ಸೇವಿಸುವುದರಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಅಂಕಿಅಂಶ ವಿಪರೀತ ಆತಂಕ ಮೂಡಿಸಿದೆ.ಭಾರತದಲ್ಲಿ ಪ್ರತಿ ವರ್ಷ, 932600 ಕ್ಕೂ ಹೆಚ್ಚು ಜನರು ತಂಬಾಕಿನಿಂದ ಉಂಟಾಗುವ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ.ದೇಶದಲ್ಲಿ ಇಂದಿಗೂ , 625000 ಕ್ಕೂ ಹೆಚ್ಚು ಮಕ್ಕಳು (10-14 ವರ್ಷಗಳು) ಮತ್ತು 89486000 ವಯಸ್ಕರು (15+ ವರ್ಷ ವಯಸ್ಸಿನವರು) ಪ್ರತಿದಿನ ತಂಬಾಕು ಸೇವನೆಯನ್ನು ಮುಂದುವರಿಸಿದ್ದಾರೆ. ಇದು ಗಂಭೀರ ಸಾರ್ವಜನಿಕ ಆರೋಗ್ಯ ಬೆದರಿಕೆಯ ಸಂಕೇತವಾಗಿದೆ ಎಂದು ಜಾಗತಿಕ ಅಧ್ಯಯನವೊಂದು ಹೇಳಿದೆ.
ಗುಟ್ಕಾ ತಂಬಾಕು ಸೇವಿಸುವುದರಿಂದ ಸಾವು ಖಚಿತ ವಾಗಿರುವುದರಿಂದ ಈ ಹವ್ಯಾಸ ಬಿಡಲೇಬೇಕು.ಹೌದು.ಸಾವು ಎಲ್ಲರಿಗೂ ಬರುತ್ತದೆ.ಆದರೆ ಗುಟ್ಕಾ ತಂಬಾಕು ಬರೀ ಸಾವನ್ನು ತರದೇ ತುಂಬಾ ಕಷ್ಟಕರವಾದ ನೋವಿನ ನರಕವನ್ನು ಸೃಷ್ಟಿಮಾಡುತ್ತದೆ.ಈ ನೋವನ್ನು ಸಹಿಸಲಾರದೇ ರೋಗಿ ಸಾವು ಬೇಗ ಬರಲಿ ಎಂದು ಬಯಸುತ್ತ ನೋವಿನಿಂದ ನರಳಿ ನರಳಿ ಸಾವನ್ನಪ್ಪುತ್ತಿದ್ದಾನೆ.ಹೀಗೆ ಹಂತಹಂತವಾಗಿ ಸಾವಿನೆಡೆಗೆ ಒಯ್ಯುವ , ನರಳಿಸಿ ನರಳಿಸಿ ಸಾಯಿಸುವ ಗುಟ್ಕಾ ತಂಬಾಕು ಸಹವಾಸ ನಮಗೇಕೆ ಬೇಕು???
ಜಾಗತಿಕ ತಂಬಾಕು ಅಟ್ಲಾಸ್ ನ (Global Tobacco Atlas)ಇತ್ತೀಚಿನ ವರದಿಯ ಪ್ರಕಾರ ತಂಬಾಕು ಸೇವನೆಯಿಂದ ಭಾರತದಲ್ಲಿ 17,000 ಕ್ಕಿಂತ ಹೆಚ್ಚಿನ ಜನರು ಪ್ರತಿ ವಾರ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬುದು ದಿಗ್ಬ್ರಮೆ ಹುಟ್ಟಿಸದೇ ಇರದು.ಭಾರತದಲ್ಲಿ 10 ರಿಂದ 14 ವರ್ಷ ವಯಸ್ಸಿನ ಸುಮಾರು 625,000 ಮಕ್ಕಳು ಧೂಮಪಾನ ವ್ಯಸನಿಗಳಾಗಿದ್ದಾರೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿ (ACS) ಮತ್ತು ಯುಎಸ್ ಮೂಲದ ವೈಟಲ್ ಸ್ಟ್ರಾಟಜೀಸ್ ತಯಾರಿಸಿದ ತಂಬಾಕು ಅಟ್ಲಾಸ್ ಪ್ರಕಾರ ಭಾರತದಲ್ಲಿ 15 ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಸಿನ 103 ಮಿಲಿಯನ್ ವಯಸ್ಕರು ದಿನನಿತ್ಯವೂ ಧೂಮಪಾನ ಮಾಡುತ್ತಿದ್ದಾರೆ.ಭಾರತದಲ್ಲಿ ಧೂಮಪಾನದ ವೆಚ್ಚ 1,818,691 ಮಿಲಿಯನ್ ಆಗಿದೆ . 429,500 ಹುಡುಗರು ಮತ್ತು 195,500 ಹುಡುಗಿಯರು ತಂಬಾಕು ಬಳಸುತ್ತಿದ್ದಾರೆ ಎಂಬುದು ನಿಜಕ್ಕೂ ಅಘಾತಕಾರಿ ವರದಿ.ಪುರುಷರು ಮಹಿಳೆಯರಿಗಿಂತ ಹೆಚ್ಚು ಕ್ರಮವಾಗಿ 90 ಮಿಲಿಯನ್ ಮತ್ತು 13 ಮಿಲಿಯನ್ ಸಂಖ್ಯೆಯಲ್ಲಿ ದಿನನಿತ್ಯ ಧೂಮಪಾನ ಮಾಡುತ್ತಿದ್ದಾರೆ ಎಂಬ ಆತಂಕಕಾರಿ ಅಂಕಿ ಅಂಶ ಬೆಳಕಿಗೆ ಬಂದಿದೆ.ಧೂಮಪಾನಕ್ಕೆ ದಾಸರಾಗಿರುವವರು ಈ ದುಷ್ಚಟವನ್ನು ಹೀಗೇ ಮುಂದುವರಿಸಿದರೆ ಸಾಯುವವರ ಸಂಖ್ಯೆ ಮುಂದಿನ ನಾಲ್ಕು ದಶಕಗಳಲ್ಲಿ ಶರವೇಗದಲ್ಲಿ ಹೆಚ್ಚುತ್ತದೆ.
ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ, ವಿಪರೀತ ಒತ್ತಡದ ಪೈಪೋಟಿಯ ಅನಿಯಂತ್ರಿತ ಯಾಂತ್ರಿಕ ಜೀವನದಿಂದಾಗಿ ಗುಟ್ಕಾ ತಂಬಾಕು ಮುಂತಾದ ದುಶ್ಚಟಗಳಿಗೆ ಯುವಜನತೆ ತುತ್ತಾಗುತ್ತಿದ್ದು ತಂಬಾಕು ಉತ್ಪನ್ನಗಳ ದುರ್ಬಳಕೆಯು ಮನುಕುಲದ ಮೇಲೆ ಮರಣ ಮೃದಂಗ ಬಾರಿಸುತ್ತಿದೆ .ಕಾರಣ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕನೂ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.ಗುಟ್ಕಾ ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಘೋರ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸಿ ಈ ದುಶ್ಚಟವನ್ನು ಬುಡ ಸಮೇತ ಕಿತ್ತೆಸೆಯಬೇಕು.ತಂಬಾಕು ಉತ್ಪನ್ನಗಳ ಬಳಗೆ ಮತ್ತು ಮಾರಾಟಗಳ ಬಗ್ಗೆ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಸಬೇಕು. ಈ ದೆಶೆಯಲ್ಲಿ ವೈದ್ಯರು , ಸ್ವಯಂ ಸೇವಾ ಸಂಸ್ಥೆಗಳು ,ಸಂಘ ಸಂಸ್ಥೆಗಳೂ ತಮ್ಮ ಹೊಣೆಗಾರಿಕೆ ಅರಿತು ಸರಕಾರದ ಜೊತೆ ಕೈಜೋಡಿಸಿದಲ್ಲಿ ಆರೋಗ್ಯಪೂರ್ಣ ಸಮಾಜ ಖಂಡಿತ ನಿರ್ಮಾಣವಾಗಲು ಸಾಧ್ಯ.
Prakash Tadadikar
KMTC (INDIA) PVT. LTD. , ‘ANCHORAGE’ Ship Agents Premises,
1st Floor, Unit no. 112, Plot no.02, Sector 11, Dronagiri Node , JNPT Township , URAN
Navi Mumbai 400707, MAHARASTRA STATE
M- 9821713603