Vydyaloka

 ತಲೆನೋವು ಅಥವಾ ಮೈಗ್ರೇನ್ – ಹೋಮಿಯೋಪಥಿಯಲ್ಲಿದೆ ಶಾಶ್ವತ  ಪರಿಹಾರ

ತಲೆನೋವು ಅಥವಾ ಮೈಗ್ರೇನ್ ಅನೇಕರನ್ನು ಕಾಡುವ ಒಂದು ದೊಡ್ಡ ಸಮಸ್ಯೆ, ತೀವ್ರವಾದ ಸಿಡಿಯುವಂತಹ ತಲೆನೋವು ಇದಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಸಾಮಾನ್ಯವಾಗಿ ಬರುವ ತಲೆನೋವುಗಳಿಗಿಂತ ಇದು ಭಿನ್ನವಾಗಿದ್ದು, ತಲೆನೋವು ಕೆಲವೊಮ್ಮೆ ಬರುವ ಮುನ್ನ ರೋಗಿಗೆ  ಮುನ್ಸೂಚನೆ ನೀಡಿ ಬರುತ್ತದೆತೀವ್ರವಾದ ಅರ್ಧ ತಲೆ ನೋವು ಇದರ ಮುಖ್ಯ ಲಕ್ಷಣ. ತಲೆನೋವು ಬರುವ ಮುನ್ನ ಉಂಟಾಗುವ ಔರ (AURA) ಲಕ್ಷಣಗಳು ಮೈಗ್ರೇನ್ ತಲೆನೋವನ್ನು ಗುರುತಿಸಲು ಸಹಕಾರಿ.

ಬೆಳಗಾದರೆ ಸಿಡಿಯುವ  ತಲೆ ನೋವು 

ಒಮ್ಮೆ ಅರೆದಲೆ ಇನ್ನೊಮ್ಮೆ ಪೂರಾ ತಲೆ ನೋವು 

ಇಮ್ಮಡಿಸುವುದು ಹೆಚ್ಚಾದರೆ ಸೂರ್ಯನ ಕಾವು 

ನೋವು ಹೆಚ್ಚಾದರೆ ಮುಖಕ್ಕೆ ಬಡಿದಂತೆ ರಾವು 

ಕತ್ತಲೆ ಕೊಣೆಯ ಮೂಲೆಯೇ ಗತಿಯೇ ?

ಬೆಳಕಿನ ಕಿರಣವ ನೋಡುವೆನೆಂತು ?

ನೋವುಂಡು ನಾನಾದೆ ನಿಸ್ತೇಜ ನಿಸ್ತಂತು ?

ನೀರನು ಕುಡಿದರೆ  ವಾಂತಿ, ಊಟವ ನೋಡಿದರೆ ವಾಕರಿಕೆ

ಜೀವನದಲ್ಲಿ ಉಳಿದಿದೆಯೇ  ಬರೀ ಬೇಸರಿಕೆ ?

ಏನನು ತಿನ್ನಲಿ ? ಏನನು ಕುಡಿಯಲಿ ? ಇನ್ನೇನೇನು ಮಾಡಲಿ ?

ಕೆಲವೊಮ್ಮೆ ತಲೆಯನು ಚಚ್ಚಿಕೊಳಲೇ ಎನಿಸುವುದು 

ಸುರಿದರೂ  ಲೆಕ್ಕವಿಲ್ಲದಷ್ಟು ಹಣ, ಅಲೆದರೂ ಸಾಕಷ್ಟು ಡಾಕ್ಟ್ರು ದವಾಖಾನೆ

 ಸೇವಿಸಿದರೂ ಅಸಂಖ್ಯ ಮಾತ್ರೆ, ಆದರೂ  ತಗ್ಗದೇಕಿದು  ಬೇನೆ ?

ಮೈಗ್ರೇನ್ ಒಂದು  ಸಾಮಾನ್ಯ ತಲೆನೋವೆಂದು  ಅಲಕ್ಷಮಾಡುವಂತಿಲ್ಲ. ಇದೊಂದು ದೇಹದ ನರವ್ಯೂಹಕ್ಕೆ ಸಂಬಂದಿಸಿದ ಕಾಯಿಲೆ.ಇದು ಕೆಲವೊಮ್ಮೆ ತೀವ್ರವಾದ ಅಶಕ್ತತೆಯನ್ನುಂಟುಮಾಡಬಹುದು. ಮನುಷ್ಯನನ್ನು ಆಶಕ್ತಗೊಳಿಸುವ ವ್ಯಾಧಿಗಳಲ್ಲಿ  ಜಗತ್ತಿನಾದ್ಯಂತ 6 ನೇ ಸ್ಥಾನ ಮೈಗ್ರೇನ್ ತಲೆನೋವಿಗಿದೆ. ತೀವ್ರವಾದಸಿಡಿಯುವಂತಹ ತಲೆನೋವು, ಬಹುತೇಕ ಅರ್ಧ ತಲೆನೋವು  ಕೆಲವೊಮ್ಮೆ ಎರಡೂ ಕಡೇ ನೋವು ಕಾಣಿಸುತ್ತದೆ.ತಲೆನೋವಿನ ಜೊತೆಗೆ ಕಣ್ಣಿನ  ವಾಕರಿಕೆ, ವಾಂತಿ,ದೃಷ್ಟಿ ಸಮಸ್ಯೆ ಕಾಣಿಸುತ್ತದೆ.

ಮೈಗ್ರೇನ್ ತೆಲೆನೋವಿಗೆ ಕಾರಣಗಳೇನು ?

ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ, ಸಂಭವನೀಯ ಕಾರಣಗಳು ಕೆಳಗಿನಂತಿವೆ

1. ವಾತಾವರಣ : ಹೆಚ್ಚಿನ ಉಷ್ಣತೆ ಅಥವಾ ಶೀತ, ತೀವ್ರ ಪ್ರಮಾಣದ ಬೆಳಕು, ಶಬ್ದ ಮತ್ತು ತೇವಾಂಶ

2. ಕ್ರಮವಿಲ್ಲದ ಜೀವನಶೈಲಿ : ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು, ಉಪವಾಸವಿರುವುದು, ಚೀಸ್, ಚಾಕಲೇಟ್ ಸೇವನೆ, ಜಂಕ್ ಫುಡ್ ಸೇವನೆ ಇತ್ಯಾದಿ..

3. ಅನುವಂಶೀಯತೆ: ಶೇಕಡಾ 90% ಮೈಗ್ರೇನ್ ಉಳ್ಳ ಜನರಲ್ಲಿ ಇದು ಕಂಡುಬಂದಿದೆ.

4. ಸಾಕಾಗದ ನಿದ್ರೆ (inadequate sleep): ಅಮೇರಿಕಾದಲ್ಲಿ ಪ್ರಕಟಿಸಲ್ಪಡುವ headache ನಿಯತಕಾಲಿಕದ (Headache Journal) ಪ್ರಕಾರ ಅಸಮರ್ಪಕ ನಿದ್ರೆಯಿಂದ ಮೈಗ್ರೇನ್ ಉಂಟಾಗುವ ಸಂಭವ ಹೆಚ್ಚು, ಇದೇ ನಿಯತಕಾಲಿಕದಲ್ಲಿ ವರದಿಯಾದ ಸಮೀಕ್ಷೆಯ ಪ್ರಕಾರ ಕ್ರಮವಾದ ಮತ್ತು ಸಮರ್ಪಕ  ನಿದ್ರೆ ಮಾಡುವ ಅಭ್ಯಾಸವುಳ್ಳವರಲ್ಲಿ ಮೈಗ್ರೇನ್ ತಲೆನೋವಿನ ತೀವ್ರತೆ ಮತ್ತು ಆವರ್ತನೆ (frequency) ಗಣನೀಯವಾಗಿ ಕಡಿಮೆಯಾಗಿದೆ.

5. ನರ ರೋಗ:  ಫಿಟ್ಸ್ ಅಥವಾ ಆಲ್ಜಿಮಿರ್ (Alzheimer) ನಿಂದ ಬಳಲುತ್ತಿರುವವರಲ್ಲಿ ಇದು ಉಂಟಾಗುವ ಸಂಭವ ಜಾಸ್ತಿ.

6. ಮೆದುಳಿನ ನ್ಯೂನ್ಯತೆಗಳು: ಮೆದುಳಿನಲ್ಲಿ ಇರುವ ಸೆರೋಟೋನಿನ್ ಎಂಬ ರಾಸಾಯನಿಕ ಇದಕ್ಕೆ ಕಾರಣ, ಕ್ರಮವಿಲ್ಲದ ಜೀವನ ಶೈಲಿ ಕೆಲವೊಂದು ಏರುಪೇರುಗಳಿಗೆ ಕಾರಣ.

7. ಔಷಧಿಗಳು : ನಾವು ಸೇವಿಸುವ ಕೆಲವು ಔಷಧಿಗಳ ರಾಸಾಯನಿಕ ಸಂಯೋಜನೆಯಿಂದ ಮೈಗ್ರೇನ್ ಉಂಟಾಗಬಹುದು. ಉದಾಹರಣೆಗೆ ಗರ್ಭನಿಯಂತ್ರಣಕ್ಕೆ ಸೇವಿಸುವ ಮಾತ್ರೆಗಳು ಮೈಗ್ರೇನ್ ಹೆಚ್ಚುಮಾಡುತ್ತವೆ.

8. ಇಂದ್ರಿಯ ಉತ್ತೇಜಕಗಳು (sensory stimuli): ಕೆಲವೊಮ್ಮೆ ತೀವ್ರ ಬೆಳಕು ನೀಡುವ ಲೈಟುಗಳು, ಜೋರಾದ ಶಬ್ದ , ಸುಗಂಧ ದ್ರವ್ಯ (perfumes), ಸಿಗರೇಟು ಹೊಗೆ ಮತ್ತು ಪೇಂಟುಗಳ ವಾಸನೆ  ಮತ್ತು ಇತರೇ ಪ್ರಚೋದಕಗಳು ಮೈಗ್ರೇನ್ ತಲೆನೋವು ಉಂಟಾಗಲು ಪ್ರಚೋದಿಸುತ್ತವೆ.

ಮೈಗ್ರೇನ್ ವ್ಯಾಧಿಯಲ್ಲಿ 2 ಮುಖ್ಯ ವಿಧಗಳಿವೆ. 

ಮುನ್ಸೂಚನೆಯಿಲ್ಲದೆ ಬರುವ ಮೈಗ್ರೇನ್ (Migraine without aura): ಈ ಬಗೆಯ ಮೈಗ್ರೇನ್ ತೊಂದರೆಯಲ್ಲಿ ಮೈಗ್ರೇನ್ ಅಟ್ಯಾಕ್ ಬರುವ ಮುನ್ಸೂಚನೆ ನೀಡುವ ಯಾವ ಲಕ್ಷಣಗಳೂ ಇರುವುದಿಲ್ಲ, ಇದು ಹೆಚ್ಚು ಕಂಡುಬರುತ್ತದೆ. ಸುಮಾರು 70-90% ಮೈಗ್ರೇನ್ ರೋಗಿಗಳು ಈ ವಿಧದ ತಲೆನೋವಿನಿಂದ ಬಳಲುವವರು

ಮುನ್ಸೂಚನೆ ಕೊಟ್ಟು ಬರುವ ಮೈಗ್ರೇನ್ ತಲೆನೋವು(Migraine with aura) :ಕೆಲವರಲ್ಲಿ ಮೈಗ್ರೇನ್ ತಲೆನೋವು ಶುರುವಾಗುವಮುಂಚೆ ಕೆಲವು ಮುನ್ಸೂಚನಾ ಲಕ್ಷಣಗಳು (aura) ಉಂಟಾಗುತ್ತವೆ, ಮೈಗ್ರೇನ್ ಉಳ್ಳವರಿಗೆ  ಇದು ಮೈಗ್ರೇನ್ ಅಟ್ಯಾಕ್ ಆಗುವುದರ ವಾರ್ನಿಂಗ್ ಕೊಡುತ್ತವೆ, ಅವುಗಳೆಂದರೆ

ಈ ತರಹದ ಮುನ್ಸೂಚನಾ ಲಕ್ಷಣಗಳು ಮೊದಲು ಉಂಟಾಗಿ ನಂತರ ಮೈಗ್ರೇನ್ ತಲೆನೋವು ಶುರುವಾಗುತ್ತದೆ.

ಮೈಗ್ರೇನ್ ತಲೆನೋವಿನ ಇತರ ವಿಧಗಳು:

1. ದೀರ್ಘಕಾಲೀನ ಮೈಗ್ರೇನ್ (Chronic Migraine) : ಈ ತರಹದ ಮೈಗ್ರೇನ್ ಒಮ್ಮೆ ಶುರುವಾದರೆ 15 ದಿನಕ್ಕೂ ಹೆಚ್ಚು ದಿನ ಬಾಧಿಸುತ್ತದೆ.

2. ಋತುಚಕ್ರಕ್ಕೆ ಸಂಬಂದಿಸಿದ ಮೈಗ್ರೇನ್ (Menstrual migraine) : ಇದು ಮಾಸಿಕ ಋತುಸ್ರಾವದ ಸಮಯದಲ್ಲಿ ಹೆಚ್ಚು ಕಂಡುಬರುತ್ತದೆ

3. ಪಾರ್ಶ್ವವಾಯು ಮೈಗ್ರೇನ್ (Hemiplegic migraine) : ಇದರಿಂದ  ದೇಹದ ಅರ್ಧಭಾಗ ಸ್ವಲ್ಪ ಸಮಯದವರೆಗೆ ಸ್ವಾಧೀನ ತಪ್ಪುವಂತೆ ಆಗುತ್ತದೆ

4. ಉದರಸಂಬಂಧಿ ತೊಂದರೆಗಳಿಂದುಂಟಾಗುವ ಮೈಗ್ರೇನ್ :  ಜೀರ್ಣಾಂಗದ ತೊಂದರೆಯುಳ್ಳವರಲ್ಲಿ ಈ ತರಹದ ಮೈಗ್ರೇನ್ ಕಂಡುಬರುತ್ತದೆ. ಇದು ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ

ಮೈಗ್ರೇನ್ ತಲೆನೋವಿನ ಹಂತಗಳು: 

ಮೈಗ್ರೇನ್ 4 ಭಿನ್ನವಾದ ಹಂತಗಳಲ್ಲಿ ಉಂಟಾಗುತ್ತದೆ, ಅವುಗಳೆಂದರೆ  Prodrome, Aura, Headache ಮತ್ತು Postdrome.  ಈ 4 ಹಂತಗಳು ಎಲ್ಲರಲ್ಲೂ ಇರಬೇಕೆಂದಿಲ್ಲ ಮತ್ತು ಮೈಗ್ರೇನ್ ತಲೆನೋವಿನ ಅವಧಿ, ಸ್ವಭಾವ ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುತ್ತದೆ. ಬಹಳಷ್ಟು ಜನರಲ್ಲಿ ಮೂರನೇ ಹಂತ ಹೆಚ್ಚು ನೆನಪಿರುವ ಯಾತನಾಮಯ ಸ್ಥಿತಿಯಾಗಿರುತ್ತದೆ.

ಮೈಗ್ರೇನ್ ಗುಣಲಕ್ಷಣಗಳು :

1. ಮೈಗ್ರೇನ್ ತಲೆನೋವು ಹೆಚ್ಚಾಗಿ 25-55 ವರ್ಷದವರಲ್ಲಿ ಕಾಣಿಸುತ್ತದೆ ಮತ್ತು ಮಹಿಳೆಯರಲ್ಲಿ ಇದು ಗಂಡಸರಿಗಿಂತ ಮೂರು ಪಟ್ಟು ಜಾಸ್ತಿ ಕಂಡುಬರುತ್ತದೆ.

2. ಸಾಧಾರಣದಿಂದ ತೀವ್ರ ತಲೆನೋವು ಇದಾಗಿದ್ದು , ಸಾಮಾನ್ಯವಾಗಿ ಅರ್ಧತಲೆನೋವು ಆದರೆ ಕೆಲವೊಮ್ಮೆ ಎರಡೂ ಕಡೆ ಉಂಟಾಗಬಹುದು

3. ತೀವ್ರವಾದ ಸಿಡಿಯುವಂತಹಾ ನೋವು.

4. ಆಯಾಸ, ಸುಸ್ತು

5. ತಲೆಸುತ್ತುವಿಕೆ

6. ಧೈಹಿಕ ಚಟುವಟಿಕೆಗಳಿಂದ ನೋವು ಹೆಚ್ಚಾಗುವ ಸಂಭವ

7. ತೀವ್ರ ನೋವಿದ್ದಾಗ ದೈನಂದಿನ ಕೆಲಸಗಳನ್ನು ಮಾಡಲು ಆಗದಿರುವುದು

8. ಅಸ್ವಸ್ಥತೆ ಮತ್ತು ವಾಂತಿಯಾಗುವುದು

9. ಸುತ್ತಮುತ್ತಲಿನ ಬೆಳಕು, ಶಬ್ದ ಅಸಹನೀಯವೆನಿಸುವುದು, ನಿಶಬ್ದ ಕತ್ತಲ ಕೋಣೆಯಲ್ಲಿ ಮಲಗಿದರೆ ನೋವು ಶಮನವಾಗುವಿಕೆ

10. ಕೆಲವೊಬ್ಬರಲ್ಲಿ ಹೆಚ್ಚು ಬೆವರು, ದೇಹದ ಉಷ್ಣತೆಯಲ್ಲಿ ಏರಿಳಿತ, ಹೊಟ್ಟೆ ನೋವು, ಬೇಧಿ ಉಂಟಾಗುತ್ತವೆ

ಮೈಗ್ರೇನ್ಪರಿಣಾಮಗಳು :

1. ದೀರ್ಘಕಾಲೀನ ಮೈಗ್ರೇನ್ ತೊಂದರೆಯಿಂದ ಬಳಲುವವರಲ್ಲಿ ಜೀವನದ ಗುಣಮಟ್ಟ ಕುಸಿಯುವುದು, ಆಗಾಗ್ಗೆ ನಿದ್ರೆಯ ತೊಂದರೆಗಳು, ಕೆಲಸಕ್ಕೆ ಗೈರುಹಾಜರು, ಕೆಲಸದಲ್ಲಿ ಆಸಕ್ತಿ, ಸಾಮರ್ಥ್ಯ ಕಡಿಮೆ ಯಾಗುವುದು ಇತರೇ ತೊಂದರೆಗಳಿಗೆ ಈಡಾಗುವರು.

2. ಅನೇಕರಲ್ಲಿ  ಮತ್ತೆ ಯಾವಾಗ ಮೈಗ್ರೇನ್ ಅಟ್ಯಾಕ್ ಆಗುತ್ತದೋ ಎಂಬ ಭಯ ಅಥವಾ ಚಿಂತೆ ಕಾಡುತ್ತಿರುತ್ತದೆ, ಅವರ ಜೀವನ ದುಸ್ತರವೆನಿಸುತ್ತದೆ, ನೋವುನಿವಾರಕ ಮಾತ್ರೆಗಳು ತಾತ್ಕಾಲಿಕ ಪರಿಹಾರ ನೀಡುತ್ತವೆ, ಆದರೆ ಅವುಗಳಿಂದಾಗುವ ಅಡ್ಡ ಪರಿಣಾಮಗಳು ಅಸಂಖ್ಯ.

3. ಒಮ್ಮೊಮ್ಮೆ ದೀರ್ಘಕಾಲದ ಮೈಗ್ರೇನ್ ತೊಂದರೆಯಿಂದ ಬಳಲುತ್ತಿರುವವರು ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆ ಉಂಟು.

ಮೈಗ್ರೇನ್ ತಲೆನೋವನ್ನು ತಡೆಗಟ್ಟುವುದು ಹೇಗೆ ?

ಮೈಗ್ರೇನ್ ಪ್ರಚೋದಕಗಳನ್ನು(triggering factors) ಗುರುತಿಸಿ ಆದಷ್ಟು ಅವುಗಳಿಂದ ದೂರ ಇರುವುದು, ಉದಾಹರಣೆಗೆ – ಒಬ್ಬ ವ್ಯಕ್ತಿಯಲ್ಲಿ ಸಿಗರೇಟು ಹೊಗೆ ಮೈಗ್ರೇನ್ ತಲೆನೋವು ಬರಲು ಈ ಹಿಂದೆ ಕಾರಣ ವೆನಿಸಿದ್ದರೇ, ಅಂತಹ ವ್ಯಕ್ತಿಯು ಆದಷ್ಟು ಸಿಗರೇಟು ಹೊಗೆಯ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿಕೊಳ್ಳಬೇಕು.

ಡಯಾಬಿಟೀಸ್ ತೊಂದರೆಯಿರುವವರು ತಮ್ಮ ಬ್ಲಡ್ ಶುಗರ್ ಪ್ರಮಾಣವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು. ಅಲ್ಪ ಪ್ರಮಾಣದ ಆಹಾರವನ್ನು ಆಗಾಗ ಸೇವಿಸುವುದು ಮಾತು ಆಹಾರ ವಿಲ್ಲದೆ ದೀರ್ಘಕಾಲ ಇರುವುದು ಒಳ್ಳೆಯದಲ್ಲ.

ಡಿಹೈಡ್ರೇಶನ್, ಮೈಗ್ರೇನ್ ತಲೆನೋವುಂಟುಮಾಡುವ ಒಂದು ಪ್ರಚೋದಕ ಆದ್ದರಿಂದ ಆಗಾಗ ನೀರು ಕುಡಿಯುತ್ತಿರಬೇಕು.

ಸರಿಯಾದ ನಿದ್ದೆಯೂ ಅತ್ಯವಶ್ಯಕ, ಆದಷ್ಟು ನಿದ್ರೆಯ ದಿನಚರಿ ತಪ್ಪಿಸಬೇಡಿ, ಅಂದರೆ ನಿತ್ಯವೂ ಅದೇ ಸಮಯದಲ್ಲಿ ಮಲಗಿ ಏಳುವ ಪರಿಪಾಠ ರೂಡಿಸಿಕೊಳ್ಳಿ.

ಕ್ರಮಬದ್ಧ ಜೀವನ ಶೈಲಿ ರೂಡಿಸಿಕೊಳ್ಳಿ, ಅರೋಗ್ಯಕರ ಆಹಾರ ಸೇವನೆ, ಬೆಳಗಿನ ಉಪಹಾರ (Breakfast) ತಪ್ಪದೇ ಸೇವಿಸುವುದು, ಜಂಕ್ ಫುಡ್ ತ್ಯಜಿಸುವುದು ಇವೆಲ್ಲಾ ಕ್ರಮಗಳು ಸಹಕಾರಿ.

ಮೈಗ್ರೇನ್ ತಲೆನೋವಿಗೆ ಶಾಶ್ವತ  ಪರಿಹಾರ :

ನೋವುನಿವಾರಕಗಳಿಂದ ಮೈಗ್ರೇನ್ ನಿವಾರಣೆ ಸಾಧ್ಯವಿಲ್ಲ, ಪದೇ ಪದೇ ನೋವುನಿವಾರಕ ಮಾತ್ರೆಗಳನ್ನು ಸೇವಿಸುವದರಿಂದ ಅಡ್ಡ ಪರಿಣಾಮಗಳೂ (side-effects) ಸಾಕಷ್ಟಿವೆ. ಈ ನಿಟ್ಟಿನಲ್ಲಿ ಹೋಮಿಯೋಪಥಿ ಚಿಕಿತ್ಸೆ ಹೆಚ್ಚು ಫಲಕಾರಿ, ಯಾವುದೇ ತೊಂದರೆಯನ್ನು ತಾತ್ಕಾಲಿಕ ಶಮನ ಮಾಡದೆ, ಬುಡ ಸಮೇತ ಹೋಗಲಾಡಿಸಿ, ಶಾಶ್ವತ ಪರಿಹಾರ ನೀಡುವ ಶಕ್ತಿ  ಹೋಮಿಯೋ ಔಷಧಿಗಳಲ್ಲಿದೆ. ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವ ಅನೇಕ ಜನರು ಹೋಮಿಯೋ ಚಿಕಿತ್ಸೆಯಿಂದ ಮೈಗ್ರೇನ್ ಮುಕ್ತ ಸುಖ ಜೀವನ ನೆಡೆಸುತ್ತಿದ್ದಾರೆ.

ಮೈಗ್ರೇನ್ ಬಗ್ಗೆ ನಮ್ಮ ವೀಡಿಯೊ ನೋಡಿ: Migraine-how to get relief by Dr Tejaswi

ಡಾ. ತೇಜಸ್ವಿ ಕೆ.ಪಿ.- ಸುರಭಿ ಹೋಮಿಯೋ ಕ್ಲಿನಿಕ್
823, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 4ನೇ ಬ್ಲಾಕ್, ಬೆಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು-97
(ಹಳೆ ಅಂಚೆ ಕಛೇರಿ ಬಸ್ ನಿಲ್ದಾಣ, ಸಾಯಿಬಾಬ ದೇವಸ್ಥಾನ ರಸ್ತೆ)
ಸಹ ಪ್ರಾಧ್ಯಾಪಕರು, ಭಗವಾನ್ ಬುದ್ಧ ಹೋಮಿಯೋಪತಿ ವೈದ್ಯಕೀಯ ಕಾಲೇಜು
ಮೊ: 9731133819 email: drtejas2020@rediffmail.com

Share this: