Vydyaloka

ಸೋಂಕು ನಿರ್ವಹಣೆಗೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಪರಿಣಾಮಕಾರಿ.

ಸೋಂಕು ನಿರ್ವಹಣೆಗೆ ಆಯುರ್ವೇದ ಪರಿಣಾಮಕಾರಿ. ಸೋಂಕನ್ನು ತಡೆಗಟ್ಟುವಲ್ಲಿ ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಗಿಡಮೂಲಿಕೆಗಳು ಹಾಗೂ ಚಿಕಿತ್ಸಾ ಪದ್ದತಿಯು ಪರಿಣಾಮಕಾರಿಯಾಗಿದೆ ಎಂದು ಭಾರತ ಸರಕಾರದ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದೆ. ಅಶ್ವಗಂಧ, ರಸಾಯನದಂತಹ ಚೂರ್ಣಗಳು ಶ್ವಾಸಕೋಶದ ತೊಂದರೆಗಳು, ಫೈಬ್ರೋಸಿಸ್, ಆಯಾಸ ಹಾಗೂ ಮಾನಸಿಕ ಕಿರಿಕಿರಿಗಳನ್ನು ತಪ್ಪಿಸಲು ಸಹಾ ಸಹಾಯಕಾರಿಯಾಗಿದೆ.

ಕೋವಿಡ್-19 ಸಾಂಕ್ರಾಮಿಕದ ಹಾವಳಿ ಹೆಚ್ಚಾಗುತ್ತಿದ್ದಂತೆ ಆಯುರ್ವೇದದಲ್ಲಿನ ಮಾಹಿತಿಗಳು, ಅದರಲ್ಲಿ ಉಲ್ಲೇಖಿಸಿರುವ ಜೀವನಶೈಲಿಯ ಬಗ್ಗೆ ಜನರು ಹೆಚ್ಚಾಗಿ ಮಾತನಾಡಲು ಆರಂಭಿಸಿದರು. ಏಕೆಂದರೆ ಆಯುರ್ವೇದ ಎಂಬುದು ಕೇವಲ ಒಂದು ಚಿಕಿತ್ಸೆ ಮಾತ್ರವಲ್ಲ ಅದು ಮಾನವನ ಜೀವನ ಪದ್ಧತಿಯ ಒಂದು ಭಾಗವಾಗಿದೆ. ನಮ್ಮ ಪ್ರಾಚೀನ ಋಷಿಮುನಿಗಳಿಂದ, ಜ್ಞಾನಿಗಳಿಂದ ಉಲ್ಲೇಖಗೊಂಡಿರುವ ಪದ್ದತಿಯು ಮನುಷ್ಯನೊಂದಿಗೇ ವ್ಯವಹರಿಸುತ್ತದೆ. ರೋಗ ತಡೆಗಟ್ಟುವಿಕೆಯಲ್ಲಿ, ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದರಲ್ಲಿ ಮತ್ತು ಸ್ವಯಂ-ದುರಸ್ತಿಯ ಕಾರ್ಯವಿಧಾನವನ್ನು ಆಯುರ್ವೇದವು ಬೆಂಬಲಿಸುತ್ತದೆ.

ಆಯುರ್ವೇದ ಅನುಸರಣೆಯಿಂದ ಅದು ಶರೀರವನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಬಲಪಡಿಸುತ್ತದೆ. ಹಾಗಾಗಿ ಕೊರೋನಾ ಸೋಂಕಿನ ಸಂದರ್ಭದಲ್ಲಿಯೂ ದೇಹದ ರೋಗ ನಿರೋಧಕತೆಯನ್ನು ಹೆಚ್ಚಿಸುವಲ್ಲಿ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಔಷಧಿಗಳೇ ಹೆಚ್ಚು ಪರಿಣಾಮಕಾರಿ ಎನಿಸಿಕೊಂಡಿವೆ. ಆಯುರ್ವೇದದ ಮಹತ್ವವನ್ನು ಉಳಿಸಿಕೊಳ್ಳಲು ಮತ್ತು ಅದರ ಪರಿಣಾಮಕಾರಿತ್ವವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಲು, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಇತ್ತೀಚೆಗೆ ಕೋವಿಡ್-19ನ ವೈದ್ಯಕೀಯ ನಿರ್ವಹಣೆಗೆ ಒಂದು ಶಿಷ್ಟಾಚಾರ ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ಜನಸಾಮಾನ್ಯರಿಗೆ ಅನುಸರಿಸಲು ಆಹಾರ ಕ್ರಮಗಳು, ಯೋಗ, ಆಯುರ್ವೇದ ಗಿಡಮೂಲಿಕೆಗಳು, ಮತ್ತು ಕೋವಿಡ್-19 ಸೋಂಕನ್ನು ತಡೆಗಟ್ಟಲು ಮತ್ತು ಸೌಮ್ಯ ಮತ್ತು ಲಕ್ಷಣ ರಹಿತ ಪ್ರಕರಣಗಳ ಚಿಕಿತ್ಸೆಗಾಗಿ ಅಶ್ವಗಂಧದಂತಹ ಸೂತ್ರೀಕರಣಗಳ ಪಟ್ಟಿ ಒಳಗೊಂಡಿದೆ. ಪ್ರಸ್ತುತ ಅವಲೋಕನದ ಪ್ರಕಾರ, ಕೋವಿಡ್-19 ಸೋಂಕನ್ನು ತಡೆಗಟ್ಟಲು ಮತ್ತು ರೋಗದ ಉಲ್ಬಣದಿಂದ ರಕ್ಷಿಸಲು ಉತ್ತಮ ರೋಗನಿರೋಧಕ ಶಕ್ತಿ ಅತ್ಯಗತ್ಯ.

ವಿಶ್ವದ ಗಮನ ಸೆಳೆಯುತ್ತಿದೆ ಆಯುರ್ವೇದ

ಕೋವಿಡ್-19 ನ ಪ್ರಾಥಮಿಕ ತಡೆಗಟ್ಟುವಿಕೆಗಾಗಿ ಯೋಗ ಮತ್ತು ನಂತರದ ಕೋವಿಡ್-19 ನಿರ್ವಹಣೆಗೆ ಅಶ್ವಗಂಧ ಮತ್ತು ರಸಾಯನ ಚೂರ್ಣ ಬಹಳ ಸಹಾಯಕವಾಗಿದೆ. ಆಯುರ್ವೇದ ಪದ್ಧತಿಯು ಕೋವಿಡ್-19 ನಿರ್ವಹಣೆಯಲ್ಲಿ ಮಾತ್ರವಲ್ಲದೇ, ಬಹಳಷ್ಟು ರೋಗಗಳನ್ನು ತಡೆಯಲು ಹಾಗೂ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಂಪ್ರದಾಯಿಕ ಜ್ಞಾನವನ್ನು ಪ್ರಸ್ತುತಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆಧುನಿಕ ಔಷಧದ ತಳಹದಿಯಲ್ಲಿ ಆಯುರ್ವೇದವು ಗಮನಾರ್ಹ ಪರಿಣಾಮ ಬೀರಿದೆ. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ಆಯುರ್ವೇದವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ಇದೀಗ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದಕ್ಕೆ ಅರ್ಹವಾದ ಪ್ರಾಮುಖ್ಯತೆಯನ್ನು ನೀಡುತ್ತಿರುವುದರಿಂದ ವಿಶ್ವದ ಗಮನ ಸೆಳೆಯುತ್ತಿದೆ ಹಾಗೂ ನಮ್ಮಲ್ಲೂ ಪದ್ಧತಿಯ ಬಗ್ಗೆ ಜನಜಾಗೃತಿ ಮೂಡುತ್ತಿದೆ.

ಆಯುರ್ವೇದ ಚಿಕಿತ್ಸೆಯು ಕೇವಲ ರೋಗ ಕೇಂದ್ರಿತವಲ್ಲ; ಬದಲಾಗಿ ಮಾನವನ ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಮೇಲೆ ಕೇಂದ್ರಿತವಾಗಿದೆ. ಆಯುರ್ವೇದ ಪದ್ಧತಿಯು ನಮ್ಮ ದೈಹಿಕ ಕಾರ್ಯಗಳ ಸಮತೋಲನವನ್ನು ಪುನಃಸ್ಥಾಪಿಸುವ ಮೂಲಕ ಯಾವುದೇ ರೋಗವನ್ನು ತೆಗೆದುಹಾಕುವ ಹಾಗೂ ಶರೀರಶಾಸ್ತ್ರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕೋವಿಡ್-19 ಸೋಂಕಿನ ಸಮಯದಲ್ಲಿ ಉಂಟಾದ ತೊಂದರೆಗಳನ್ನು ತೊಡೆದುಹಾಕಲು ಕೋವಿಡ್ ನಂತರದ ಆರೋಗ್ಯ ರಕ್ಷಣೆಯಂತಹ ಸಂದರ್ಭಗಳ ನಿರ್ವಹಣೆಗೆ ಸಹಕಾರಿಯಾಗಿದೆ.

ಆಯುರ್ವೇದಕ್ಕೆ ನೂರಾರು ಶತಮಾನಗಳಷ್ಟು ಇತಿಹಾಸ

ಭಾರತದ ಪ್ರಾಚೀನ ವೈದ್ಯಶಾಸ್ತ್ರವಾದ ಆಯುರ್ವೇದಕ್ಕೆ ನೂರಾರು ಶತಮಾನಗಳಷ್ಟು ಇತಿಹಾಸವಿದೆ. ಇಂದಿನ ಹಲವಾರು ಕಾಯಿಲೆಗಳಿಗೆ ಆ ಕಾಲದಲ್ಲಿಯೇ, ಯಾವ ಯಾವ ಔಷಧಿಗಳನ್ನು ಬಳಸಬೇಕೆನ್ನುವುದನ್ನೂ ಬರೆದಿಟ್ಟಿದ್ದಾರೆಂದರೆ ಅಂದಿನವರ ಜ್ಞಾನ ನಿಜಕ್ಕೂ ಅಪರಿಮಿತ. ಇಷ್ಟೆಲ್ಲಾ ಇದ್ದರೂ ನಮ್ಮಲ್ಲಿ ಈ ವೈದ್ಯ ಪದ್ಧತಿಯ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲದಿರುವುದು ದುರಂತವೇ ಸರಿ. ನಾವು ಪ್ರತಿದಿನವೂ ಅಡುಗೆಯಲ್ಲಿ ಬಳಸುವ ಮಸಾಲೆಗಳು, ತರಕಾರಿಗಳು, ಹಣ್ಣುಗಳು, ಅಷ್ಟೇ ಏಕೆ ಹೂವು ಕೂಡಾ ಔಷಧಿಯ ಗುಣಗಳನ್ನು ಹೊಂದಿದೆಯೆಂದು, ಯಾವ ರೋಗಗಳಿಗೆ ಸಹಕಾರಿ ಎಂಬುದನ್ನೂ ಬರೆದಿಟ್ಟಿದ್ದಾರೆ.

ಇದರ ಜೊತೆಗೆ ನಮ್ಮ ಆಹಾರ ಹೇಗಿರಬೇಕು, ಜೀವನ ಕ್ರಮ ಏನು? ಅಷ್ಟೇ ಏಕೆ ನಮ್ಮ ಉಸಿರಾಟ ಹೇಗಿರಬೇಕು, ದೇಹದ ಸುಸ್ಥಿತಿಗೆ ಯಾವ ರೀತಿ ವ್ಯಾಯಾಮಗಳು ಅಗತ್ಯ ಎಲ್ಲವನ್ನೂ ವಿಸ್ತ್ರತವಾಗಿ ವಿವರಿಸಿದ್ಧಾರೆ. ಹಾಗಾಗಿ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ತಜ್ಞ ವೈದ್ಯರ ಸಲಹೆಯ ಮೇಲೆಗೆ ಪ್ರತಿದಿನವೂ ನಾವೆಲ್ಲರೂ ಅನುಸರಿಸಿದರೆ ಹಲವಾರು ರೋಗಗಳಿಂದ ರಕ್ಞಿಸಿಕೊಳ್ಳಬಹುದು ಹಾಗೂ ಉತ್ತಮ ಸಮಾಜಕ್ಕೂ ನೆರವಾಗಬಹುದು.

ಡಾ.ರಾಘವೇಂದ್ರ ಬಾಬು
ಸಿರಿ ಆಯುರ್ವೇದ
262/16, ಸ್ವಾಮಿ ಕಾರ್ನರ್
ನಂ.1,11 ನೇ ಕ್ರಾಸ್, 8 ನೇ ಮುಖ್ಯ ರಸ್ತೆ,
ವಿಲ್ಸನ್ ಗಾರ್ಡನ್, ಬೆಂಗಳೂರು -560027
ದೂ: 080-22249500. ಮೊ: 90089 43611
ಇಮೇಲ್: siriayurveda@gmail.com   www.siriayurveda.com

 
Share this: