Vydyaloka

ಸಿಂಪಲ್ ಲೈಫು; ತುಂಬಾ ಕಾಂಪ್ಲಿಕೇಟು..!

ಸಿಂಪಲ್ ಲೈಫು; ತುಂಬಾ ಕಾಂಪ್ಲಿಕೇಟು..! ಜೀವನಕೌಶಲ್ಯದ ಲಕ್ಷ್ಯಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಈ ಆರ್ಟಿಕಲ್‍ ಪ್ರಾಕ್ಟಿಕಲ್ ಆಗಿ ಯೋಚಿಸುವವರಿಗೆ, ಜೀವನವನ್ನು ಎಂಜಾಯ್ ಮಾಡಲು ಬಯಸುವವರಿಗೆ, ಸ್ವಂತ ಉದ್ದಿಮೆದಾರರಿಗೆ ಹಾಗೂ ಕನಸಿನ ಬೇಟೆಗಾರರಿಗೆ ಇಷ್ಟವಾಗಬಹುದು. 

ನೆನ್ನೆಯ ಲೇಖನದಲ್ಲಿ ಜೀವನಕೌಶಲ್ಯದ ಬಗ್ಗೆ ಬರೆಯುವಾಗ ಈ ತರದ ಬರಹಗಳು ಬಹಳಷ್ಟು ಜನರಿಗೆ ಬೋರಿಂಗ್‍ ಅನ್ನಿಸಬಹುದು ಎಂದುಕೊಂಡಿದ್ದೆ, ಆದರೆ ಸುಮ್ಮನೇ ಓದಿ ಮರೆಯುವ ವಿಚಾರಗಳಿಗಿಂತ, ಮನಸ್ಸಿಗೆ ಮುದ ನೀಡುವ ಕೆಲವು ಲೇಖನಗಳಿಗಿಂತ, ರಕ್ತಕುದಿಯುವಂತೆ ಮಾಡುವ ಕ್ರಾಂತಿಕಾರಿ ಬರಹಗಳಿಗಿಂತ ಜೀವನದಲ್ಲಿ ಅಳವಡಿಸಿಕೊಳ್ಳಲು ಅಗತ್ಯವಾಗಿರುವ, ಉತ್ತಮ ಸಮಾಜಕ್ಕೆ ಅವಶ್ಯವಿರುವ ಈ ಎೀWಂIÀು ಬಉÀವಖಿÂಗೆ ನಿಮಗೆ (ಎಲ್ಲರಿಗೂ ಅಲ್ಲದಿರಬಹುದು) ಖುಷಿಕೊಟ್ಟಿರುವ ಬಗ್ಗೆ ಮೆಸೆಜು ಮಾಡಿತಿಳಿಸಿದ್ದಕ್ಕೆ ವಂದನೆಗಳು. ಲೈಫ್ ಸ್ಕಿಲ್‍ಗೆ ಸಂಬಂಧಪಟ್ಟಂತೆ ವಿಶ್ವಆರೋಗ್ಯ ಸಂಸ್ಥೆಯು ಪಟ್ಟಿ ಮಾಡಿದ 10 ಅಂಶಗಳ ಬಗ್ಗೆ ನೆನ್ನೆ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದೆ. ಆದರೆ ಈ ಬಾರಿ ಜೀವನಕೌಶಲ್ಯದ ಲಕ್ಷ್ಯಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಈ ಆರ್ಟಿಕಲ್‍ ಪ್ರಾಕ್ಟಿಕಲ್ ಆಗಿ ಯೋಚಿಸುವವರಿಗೆ, ಜೀವನವನ್ನು ಎಂಜಾಯ್ ಮಾಡಲು ಬಯಸುವವರಿಗೆ, ಸ್ವಂತ ಉದ್ದಿಮೆದಾರರಿಗೆ ಹಾಗೂ ಕನಸಿನ ಬೇಟೆಗಾರರಿಗೆ ಇಷ್ಟವಾಗಬಹುದು ಎಂದುಕೊಂಡಿದ್ದೇನೆ.

ಆರೋಗ್ಯಯುತ ಮನಸಿರಬೇಕು. ಒಳ್ಳೆಯದನ್ನೇ ಬಯಸುವ ಹೃದಯವಿರಬೇಕು.

ಜೀವನ ಕೌಶಲ್ಯದ ಲಕ್ಷ್ಯದತ್ತ ಸಾಗಲು ಒಂದು ಆರೋಗ್ಯಯುತ ಮನಸಿರಬೇಕು. ಒಳ್ಳೆಯದನ್ನೇ ಬಯಸುವ ಹೃದಯವಿರಬೇಕು. ಅದನ್ನು ಸರಿಯೋ ತಪ್ಪೋ ನಿರ್ಣಯಿಸುವ ತಲೆಯಿರಬೇಕು, ಹಾಗೆಯೇ ನಮ್ಮ ಕೆಲಸದತ್ತ ನಮ್ಮ ಕೈ ಶುದ್ಧವಿರಬೇಕು. ಕೆಲಸ ಶೃದ್ದೆಯಿಂದ ಮಾಡುತ್ತಿರಬೇಕು. ನಾವೆಲ್ಲಾ ಬದುಕ್ತಾ ಇದೀವಿ ಆದ್ರೆ ಯಾಕೆ? ಹುಟ್ಟಿದ್ದಕ್ಕೆ ಅನಿವಾರ್ಯ ಅಂತಿರೋ? ಇರ್ಲಿ..ಆದ್ರೆ ಹೇಗೆ ಜೀವನ ಸಾಗಿಸ್ತಿದ್ದೀವಿ ಅನ್ನೋದು ಇಲ್ಲಿ ಮ್ಯಾಟರ್‍ ಆಗತ್ತೆ.ನಮಲ್ಲಿ ಅನೇಕರಿಗೆ ಹೇಗೆ ತಿನ್ನೋದು ಅಂತಾ ಗೊತ್ತಿಲ್ಲ. ಹೇಗೆ ಮಲಗೋದು ಅಂತಾ ಗೊತ್ತಿಲ್ಲ. ಹೇಗೆ ಬದುಕೋದು ಅಂತಾನೂ ಗೊತ್ತಿಲ್ಲ. ಯಾರೇ ಆಗಿರಲಿ ಜೀವನದಲ್ಲಿ ಮೊದಲು ತಮ್ಮ ವಯಕ್ತಿಕ ರಕ್ಷಣೆ ನೋಡ್ಕೋತಾರೆ, ತಮಗಾದ ರೋಗದ ನಿವಾರಣೆಗೆ ಶ್ರಮಿಸ್ತಾರೆ.

ಒತ್ತಡದ ನಿರ್ವಹಣೆಯಲ್ಲಿ ತೊಳಲಾಡುತ್ತಾರೆ. ಆರೋಗ್ಯಯುತ ಜೀವನವನ್ನ ಬಯಸ್ತಾರೆ. ಇದೇ ಜೀವನದ ಮೂಲ ಉದ್ದೇಶ ಅಂದ್ಕೋತಾರೆ. ಹಾಗೆಂದು ಇದಕ್ಕೆ ಅಪವಾದವಾಗಿರುವವರು ಇಲ್ಲವೆಂದಲ್ಲ. ಅಂತವರೂ ಇರ್ತಾರೆ, ಆದ್ರೆ ಬಹು ಸಂಖ್ಯಾತರು ಜೀವನದ ಸಾರವನ್ನು ತಿಳಿಯದೇ ಬದುಕಿದ್ದಾರೆ. ಆದರೆ ತಿಳಿಯುವ ಪ್ರಯತ್ನ ಕೂಡಾ ಮಾಡದೇ ಯಾಂತ್ರಿಕ ಜೀವನ ಸಾಗಿಸುತ್ತಿರುವುದು ನಿಜಕ್ಕೂ ವಿಷಾಧನೀಯ. ಮಾನವ ಜೀವನದ ಜೊತೆಗೆ ಹಾಗೂ ನಂತರ ತನ್ನ ಅಸ್ತಿತ್ವಕ್ಕಾಗಿ ಶಿಸ್ತು ರೂಢಿಸಿಕೊಂಡ, ನಡತೆ ಕಲಿತುಕೊಂಡ, ಜವಾಬ್ದಾರಿ ತೆಗೆದುಕೊಂಡ, ಸ್ವಾಭಿಮಾನ ಬೆಳೆಸಿಕೊಂಡ. ಅಸ್ತಿತ್ವ ಮತ್ತು ಜೀವನ ಆರೋಗ್ಯಕರವಾಗಿದ್ರೆ ಅವರಿಗೆ ಜೀವನ ಕೌಶಲ್ಯ ಸುಲಭವಾಗಿ ದೊರೆಯುವುದರಲ್ಲಿ ಅನುಮಾನವಿಲ್ಲ.

ಜೀವನದಲ್ಲಿ ಯಾರಾದ್ರೂ ಯಶಸ್ವಿಯಾದವರಿದ್ರೆ, ಉತ್ತಮವಾಗಿ ಹೆಸರು ಹಣ ಸಂಪಾದಿಸಿದ್ರೆ ಹೇಳ್ತೀವಿ, “ವ್ಹಾವ್‍ ಅವಂದು ಸೂಪರ್‍ತಲೆ, ಸ್ಮಾರ್ಟ್ ಬ್ರೇನು, ಬುದ್ಧಿವಂತ” ಅಂತೆಲ್ಲಾ. ಆದರೆ ಅದು ಅವರಿಗೆ ಹೇಗೆ ಸಾಧ್ಯವಾಗಿದ್ದು ಅಂತ ನಾವ್ಯಾರೂ ಯೋಚಿಸೊದೇ ಇಲ್ಲ! ಯಶಸ್ವಿಗಳ ಕಾರ್ಯ ನಿರ್ವಹಣೆ ಹೇಗೆ? ಚೇತರಿಕೆಗೆ ಅವರು ಹೇಗೆ ಶ್ರಮಿಸುತ್ತಿದ್ದರು?, ದಾಖಲೆಗಳನ್ನ ಹೇಗೆ ಇಟ್ಟಿದ್ದರು?, ಸಂಪನ್ಮೂಲಗಳನ್ನು ಹೇಗೆ ಬಳಸಿಕೊಂಡಿದ್ದರು?, ಯೋಜನೆ ಹಾಗೂ ಸಂಘಟನೆ ಹೇಗೆ ಮಾಡಿದ್ದರು?, ಅವರ ಗುರಿ ನಿರ್ಧಾರ ಹೇಗಿತ್ತು? ನಿರ್ಣಾಯಕ ಸಂದರ್ಭದಲ್ಲಿ ಅವರ ಯೋಜನೆ ಹೇಗಿತ್ತು ಮತ್ತು ಸಮಸ್ಯೆ ಪರಿಹಾರ ಹೇಗೆ ಮಾಡಿದರು?, ಅವರ ನಿರ್ಧಾರಗಳು ಹೇಗಿದ್ದವು?

ನಕಾರಾತ್ಮಕ ಭಾವನೆ ಕಳೆದು ಸಿಂಪಲ್ ಮನುಷ್ಯರಾಗಿರಿ

ಕಲಿಕೆಯಿಂದ ಕಲಿಕೆ ಹೇಗೆ ಕಲಿತರು ಅನ್ನೋದರ ಬಗ್ಗೆ ನಾವೂ ಯೋಚಿಸಿದರೆ ಖಂಡಿತಾ ಇದೇನೂ ಕಷ್ಟದ ವಿದ್ಯೆಯಲ್ಲ. ಆದ್ರೆ ನಾವ್ಯಾರು ಆ ಬಗ್ಗೆ ಯೋಚಿಸದೇ ನಕಾರಾತ್ಮಕ ಭಾವನೆಯಲ್ಲಿಯೇ ಕಳೆದು ಸೋಲನ್ನು ಒಪ್ಪಿಕೊಳ್ತೀವಿ, ಅಪ್ಪಿಕೊಳ್ತೀವಿ. ಇದನ್ನೆಲ್ಲಾ ಯೋಚಿಸೋಕೆ ನೀವೇನು ಉದ್ದಿಮೆದಾರರೋ, ಉನ್ನತ ಅಧಿಕಾರಿಯೋ, ಶಿಕ್ಷಕರೋ ಆಗಬೇಕೆಂದಿಲ್ಲಾ, ವಿದ್ಯಾರ್ಥಿಯಾಗಿರಿ, ಹೌಸ್‍ವೈಫಾಗಿರಿ, ನಿವೃತ್ತಿಯ ಜೀವನದಲ್ಲಿರಿ, ಏನೇ ಆಗಿರಿ ಒಟ್ಟಿನಲ್ಲಿ ಸಿಂಪಲ್ ಮನುಷ್ಯರಾಗಿರಿ ಸಾಕು. ಖಂಡಿತವಾಗಿ ನೀವೂ ಸಾಧನೆ ಮಾಡಬಹುದು. ನಾಲ್ಕು ಜನ ಗುರುತಿಸುವಂತಹ ವ್ಯಕ್ತಿತ್ವ ಸಂಪಾದಿಸಬಹುದು. ಯಶಸ್ಸು ಅನ್ನೋದನ್ನ ಸ್ನೇಹಿತನನ್ನಾಗಿಸಿಕೊಂಡು ಇಟ್ಟುಕೊಳ್ಳಬಹುದು.

ನಿಮಗೊಂದು ಪ್ರಶ್ನೆ. ನೀವು ಸಾಮಾನ್ಯವಾಗಿ ಯೋಚಿಸೋದು ತಲೆಯಿಂದಲೋ? ಹೃದಯದಿಂದಲೋ? ಉದಾಹರಣೆ ಕೊಡ್ತೇನೆ. ನಿಮ್ಮ ಸ್ನೇಹಿತನಿಗೆ ಹಣದ ಅವಶ್ಯಕತೆ ಇದೆ ಎಂದುಕೊಳ್ಳಿ. ನಿಮ್ಮಜೇಬಲ್ಲಿ ದುಡ್ಡಿದೆ. ಆದರೆ ಆತನಿಗೆ ಹಣಕೊಟ್ಟರೆ ಬೇಗ ಹಿಂದಿರಿಗಿಸುವುದಿಲ್ಲ ಎಂಬುದೂ ನಿಮಗೆ ತಿಳಿದಿದೆ. ಆಗೇನು ಮಾಡ್ತೀರಿ? ಹೃದಯ ಹೇಳುತ್ತೆ ಆತ ನಿಮ್ಮ ಸ್ನೇಹಿತ. ತಲೆ ತಿಳಿಸತ್ತೆ ಹಣ ಬೇಗ ವಾಪಾಸು ಬರಲ್ಲಾಅಂತ! ಆಗ ನಿಮ್ಮ ನಿರ್ಧಾರ ಏನು? ನಿಧಾನವಾಗಿ ಯೋಚಿಸಿ ತಿಳಿದುಕೊಳ್ಳಿ ಹಾರ್ಟಿನ ಮಾತು ಕೇಳಬೇಕೋ? ಬ್ರೇನಿನ ಮಾತನ್ನ ಪಾಲಿಸಬೇಕೋ ಅನ್ನೋದನ್ನ!

ಪ್ರತಿಕ್ಷಣವೂ ನಾಟಕ ಮಾಡ್ತಾ ಇದ್ದೇವೆ

ನಾವು ಪ್ರತಿಕ್ಷಣವೂ ನಾಟಕ ಮಾಡ್ತೀವಿ. ಉತ್ತಮವಾದ ಕೆಲ ಸಂತರು, ಸನ್ಯಾಸಿಗಳು (ಕಾವಿ ಧರಿಸಿದವರು ಎಲ್ಲರೂ ಸನ್ಯಾಸಿಗಳಲ್ಲ) ನಿಜವಾಗಿಯೂ ಬದುಕ್ತಿದ್ದಾರೆ, ಆದ್ರೆ ನಾವು ಕೇವಲ ನಾಟಕಧಾರಿ ಎಂದು ಉಪದೇಶ ಕೊಡ್ತಾರಲ್ಲಾ ಅವರು ನಾಟಕ ಮಾಡೊಲ್ಲ. ನಾವು ಬದುಕು ನಡೆಸ್ತೀವಿ ಎಂದು ಹೇಳಿಕೊಂಡು ನಾಟಕ ಮಾಡ್ತಾ ಇದ್ದೇವೆಯೇ ಹೊರತು ಬದುಕು ನಡೆಸ್ತಿಲ್ಲ. ಸಂಬಂಧಗಳ ಪೋಷಣೆ ಹೇಗೆ ಮಾಡ್ತಾ ಇದ್ದೇವೆ? ನಮ್ಮಲ್ಲಿಯ ವಿನಿಮಯ ಹೇಗಾಗ್ತಿದೆ? ನಮ್ಮ ಅನುಭೂತಿಗಳು ಯಾವ್ಯಾವ್ದು? ಬೇರೆಯವರ ಮೇಲೆ ನಮ್ಮ ಕಾಳಜಿ ಏನು? ಬದಲಾವಣೆ ಒಪ್ಪಿಕೊಳ್ಳುವುದು ಯಾವರೀತಿ? ಇತರರೊಂದಿಗೆ ನಮ್ಮ ಸಹಕಾರ ಹಾಗೂ ಸಂವಹನ ಹೇಗಿದೆ ಇವೆಲ್ಲವನ್ನೂ ಹೃದಯದಿಂದ ಮಾಡಿದ್ರೆ ಜೀವನ ಕೌಶಲ್ಯದ ಬಳಿ ತೆರಳಲು ಸುಲಭವಾಗುವುದು.

ಜೀವನವೇನು ಪಠ್ಯಪುಸ್ತಕವಲ್ಲ

ನಾವು ಸ್ವ ಇಚ್ಚೆಯಿಂದ ಸೇವೆ ಮಾಡುತ್ತಿದ್ದೇವಾ? ನಾಯಕತ್ವ ತೋರಿಸ್ತಾ ಇದ್ದೇವಾ? ಜವಾಬ್ದಾರಿಯುತ ಪ್ರಜೆಯಾಗಿ ನಾವು ಹೇಗಿರಬೇಕಿತ್ತು? ಸಮಾಜಕ್ಕೆ ನಮ್ಮ ಕೊಡುಗೆ ಏನಿದೆ? ಮಾರುಕಟ್ಟೆ ಕೌಶಲ್ಯ ಕಲಿಯಬಲ್ಲೆವಾ? ತಂಡವಾಗಿ ಕೆಲಸ ಮಾಡುತ್ತೇವೆಯಾ? ಸ್ವಯಂ ಪ್ರೇರಣೆ ಪಡೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವಾ ಇತ್ಯಾದಿ ಇತ್ಯಾದಿ ಹಲವಾರು ಪ್ರಶ್ನಾರ್ಥಕ ಮಾರ್ಕುಗಳು ತಲೆ ಒಳಗೆ ಗಿರಕಿ ಹೊಡೆಯುತ್ತಿವೆ. ಮೇಲಿನ ಎಲ್ಲಾ ಪ್ರಶ್ನೆಗಳಿಗೂ, ಆಲೋಚನೆಗಳಿಗೂ ಉತ್ತರ ಕಂಡುಕೊಳ್ಳುತ್ತಾ ಸಾಗುವುದರಲ್ಲಿ ಜೀವನಕೌಶಲ್ಯ ಅರಿತುಕೊಳ್ಳುವ ಉಪಾಯ ಅಡಗಿದೆ.

ನಾನಂತೂ ಸತತ ಪ್ರಯತ್ನದಲ್ಲಿರುತ್ತೇನೆ. ನೀವೂ ಅನುಸರಿಸುತ್ತೀರೆಂಬ ಭರವಸೆಯಿದೆ. ಓದಿ ಮರೆಯೋದಕ್ಕೆ ಜೀವನವೇನು ಪಠ್ಯಪುಸ್ತಕವಲ್ಲ. ಮೈಂಡಲ್ಲಿರೋದೆಲ್ಲಾ ಹೇಳಿ ಲೈಕು, ಕಾಮೆಂಟು ಬರಬಹುದೆಂದು ಕಾಯುತ್ತಾ ಕೂರೋಕೆ ಬದುಕೇನು ಫೆಸ್ ಬುಕ್‍ ಕೂಡಾ ಅಲ್ಲ. ಡ್ರಾಮಾ ಬಿಟ್ಟು ನಿಜವಾಗಿಯೂ ಬದುಕೋಣ, ಪ್ರಯತ್ನವಂತೂ ನಿಲ್ಲಿಸದಿರೋಣ, ಲೈಫು ಹೇಗೆ ಟರ್ನ್‍ ತಗೊಂಡು ಇನ್ನೇನಾಗುತ್ತೋ ಆಮೇಲ್ನೋಡೋಣ..!

ಸಚಿನ್ ಶರ್ಮಾ
ಹವ್ಯಾಸಿ ಬರಹಗಾರ
ಬೆಂಗಳೂರು

Share this: