ದಂಪತಿಗಳು ಒಬ್ಬರನ್ನೊಬ್ಬರ ಮನಸ್ಸನ್ನು, ಆಸೆ-ಆಕಾಂಕ್ಷೆಗಳನ್ನು ಅರಿತು ಒಮ್ಮತದಿಂದ ದೈಹಿಕ ವಾಂಛೆಯನ್ನು ವ್ಯಕ್ತಪಡಿಸುವುದೇ “ಲೈಂಗಿಕ ಕ್ರಿಯೆ ಅಥವಾ ಸಂಭೋಗ ಕ್ರಿಯೆ” ಎನಿಸಿದೆ. ಈ ಕ್ರಿಯೆ ಇಬ್ಬರ ಒಪ್ಪಿಗೆಯಿಂದ ನಡೆದರೆ ಆರೋಗ್ಯಪೂರ್ಣ ಸಂಭೋಗ ಕ್ರಿಯೆಯಾಗುತ್ತದೆ. ಯಾರೊಬ್ಬರ ಒಪ್ಪಿಗೆಯಿಲ್ಲದೆ ನಡೆದರೆ ಅದು ಯಾವ ರೀತಿಯ ಸಂತೋಷ, ನೆಮ್ಮದಿಯನ್ನೂ ಕೊಡುವುದಿಲ್ಲ. ಹೀಗೆ ಮಾಡುವುದರಿಂದ ಲೈಂಗಿಕ ಕ್ರಿಯೆಯ ಬಗ್ಗೆ ಬೇಸರ, ಅಸಹ್ಯ ಮತ್ತು ಜಿಗುಪ್ಸೆ ಮೂಡುವುದು ಖಂಡಿತ.ಲೈಂಗಿಕ ಕ್ರಿಯೆಯನ್ನು ನಾಲ್ಕು ಘಟ್ಟಗಳನ್ನಾಗಿ ವಿಂಗಡಿಸಬಹುದು.
1.ಲೈಂಗಿಕ ಕಾಮನೆ ಮತ್ತು ಆಸೆಯ ಆರಂಭದ ಘಟ್ಟ (Appetitive Phase)
2.ಉದ್ರೇಕತೆಯ ಘಟ್ಟ (Excitement Phase)
3.ಭಾವಪ್ರಾಪ್ತಿ (Orgasm)
4.ವಿಘಟಣೆ (Resolution)
ದಂಪತಿಗಳು ಸಂಪೂರ್ಣ ಸಂತೃಪ್ತಿ ಪಡೆಯಲು ಈ ಎಲ್ಲಾ ಘಟ್ಟಗಳೂ ಅವಶ್ಯಕ. ಇವುಗಳು ಒಂದಕ್ಕೊಂದು ಸರಪಳಿ ಇದ್ದಂತೆ. ಲೈಂಗಿಕ ಕಾಮನೆ ಅಥವಾ ಆಸೆ ಇಲ್ಲದೆ ಉದ್ರೇಕವಾಗದು, ಉದ್ರೇಕಗೊಳ್ಳದೇ ಭಾವಪ್ರಾಪ್ತಿಯಾಗದು, ಭಾವಪ್ರಾಪ್ತಿಯಾಗದೆ ವಿಘಟನೆ ಇರುವುದಿಲ್ಲ. ಈ ನಾಲ್ಕು ಘಟ್ಟಗಳೂ ದಂಪತಿಗಳ ಸುಖ, ಸಂತೋಷ ದಾಂಪತ್ಯಕ್ಕೆ ಭದ್ರಭುನಾದಿ. ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಆರೋಗ್ಯವನ್ನು ಅಳೆಯುವಾಗ ಲೈಂಗಿಕ ಆರೋಗ್ಯ ಅತ್ಯಂತ ಅವಶ್ಯಕವಾದ ಒಂದು ಅಳತೆಗೋಲು ಎಂದು ಗುರುತಿಸಿದೆ.
1.ಲೈಂಗಿಕ ಕಾಮನೆ ಮತ್ತು ಆಸೆಯ ಆರಂಭದ ಘಟ್ಟ (Appetitive Phase): ಹೆಣ್ಣು-ಗಂಡು ಪರಸ್ಪರ ಭೇಟಿಯಾದಾಗ ಅವ್ಯಕ್ತವಾದ ಆಕರ್ಷಣೆಗೆ ಒಳಗಾಗುತ್ತಾರೆ. ಈ ಆಕರ್ಷಣೆಯು ಪ್ರೀತಿಯ ರೂಪದಲ್ಲಿ ಪರಸ್ಪರ ಆತ್ಮೀಯತೆಯ ಒಡನಾಟವನ್ನು ಬಯಸುತ್ತದೆ. ಒಡನಾಟ ಬೆಳೆದಂತೆಲ್ಲಾ ಸಾಮೀಪ್ಯತೆ ಬಯಸುತ್ತದೆ. ಸಾಮೀಪ್ಯ ದೈಹಿಕ ಸಂಗದ (ಸಂಪರ್ಕ) ಬಯಕೆಯನ್ನು ವ್ಯಕ್ತಪಡಿಸುತ್ತದೆ. ಹೀಗೆ ಒಲಿದು ಒಂದಾದ ಹೆಣ್ಣು -ಗಂಡು ಪರಸ್ಪರ ಮಿಲನವಾಗುವ ಘಟ್ಟ ತಲುಪುತ್ತದೆ. ಹೀಗೆ ಲೈಂಗಿಕತೆಯ ಕಾಮನೆ ಆರಂಭವಾಗುತ್ತದೆ. ಇದೇ ಆಸೆಯ ಆರಂಭದ ಘಟ್ಟ.
2.ಉದ್ರೇಕದ ಘಟ್ಟ:ಲೈಂಗಿಕ ಆಸೆ ಉದ್ರೇಕತೆಯನ್ನು ಮೂಡಿಸುತ್ತದೆ. ಉದ್ರೇಕಗೊಂಡಾಗ ದೈಹಿಕವಾಗಿ ಕೆಲವು ಬದಲಾವಣೆಗಳಾಗುತ್ತವೆ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿನ ರಕ್ತಚಲನೆಯಿಂದಾಗಿ ಆಗುವ ವ್ಯತ್ಯಾಸಗಳು. ಗಂಡು-ಹೆಣ್ಣು ಇಬ್ಬರಲ್ಲೂ ಜನನೇಂದ್ರಿಯಗಳಲ್ಲಿ ಚಲನೆ ಹೆಚ್ಚಾಗುತ್ತದೆ. ಗಂಡಿನಲ್ಲಿ ಶಿಶ್ನದ ನಿಮಿರುವಿಕೆಯುಂಟಾಗುತ್ತದೆ.
ಶಿಶ್ನದ ನಿಮಿರುವಿಕೆ ಮನಸ್ಸು ಮತ್ತು ಮೆದುಳಿನಿಂದ ಮಾತ್ರ ಸಾಧ್ಯ. ಯಾವುದೇ ಆತಂಕ ಮೂಡಿದರೆ ಶಿಶ್ನ ನಿಮಿರುವಿಕೆಯನ್ನು ಕಳೆದುಕೊಳ್ಳುತ್ತದೆ. ಶಿಶ್ನ ನಿಮಿರುವುದೋ, ಇಲ್ಲವೂ ಎಂದುಕೊಳ್ಳುವುದು, ಹೆಚ್ಚಿನ ಸಮಯ ನಿಮಿರಿರಬೇಕೆಂದುಕೊಳ್ಳುವುದು, ಸಂಗಾತಿ ಏನೆಂದುಕೊಳ್ಳುತ್ತಾಳೋ ಮತ್ತು ತಾನು ಸಂಪೂರ್ಣವಾಗಿ ಆಕೆಗೆ ತೃಪ್ತಿ ನೀಡಲು ಯೋಗ್ಯನೋ ಇಲ್ಲವೋ ಎಂಬ ಮೊದಲಾದ ಭಾವನೆಗಳು ನಪುಂಸಕತ್ವವನ್ನು ತರಬಲ್ಲವು. ಆದ್ದರಿಂದ ಮನಸ್ಸಿಗೆ ಪ್ರಶಾಂತ ವಾತಾವರಣದ ಅವಶ್ಯಕತೆ ಅತ್ಯಗತ್ಯ. ಬೇಕು ಎಂದಾಕ್ಷಣ ನಿಮಿರುವಿಕೆ ಸಾಧ್ಯವಿಲ್ಲ. ಶಿಶ್ನ ನಿಮಿರುವಿಕೆ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬಂದರೆ ವಯಸ್ಸಾಗುತ್ತಾ (40ನೇ ವಯಸ್ಸಿನ ನಂತರ) ನಿಮಿರುವಿಕೆ ಸ್ವಲ್ಪ ಮಟ್ಟಿಗೆ ನಿಧಾನವಾಗುತ್ತದೆ ಮತ್ತು ಹೆಚ್ಚು ಹೊತ್ತು ನಿಮಿರಿರಲು ಸಾಧ್ಯವಿಲ್ಲ.
ಸ್ತ್ರೀಯರಲ್ಲಿ ಉದ್ರೇಕಗೊಂಡಾಗ ಆಗುವ ಬದಲಾವಣೆಗಳೇ ಬೇರೆ. ರಕ್ತದ ಚಲನೆ ಜನನೇಂದ್ರಿಯಗಳಲ್ಲಿ ಆಗುತ್ತಿದ್ದಂತೆಯೇ ಯೋನಿರಸದ ಸ್ರವಿಕೆಯಾಗುತ್ತದೆ. ಈ ಸ್ರವಿಕೆಯಿಂದಲೇ ಶಿಶ್ನ ಒಳಸೇರಲು ಅನುಕೂಲವಾಗುವುದು. ಸ್ರವಿಕೆ ಪ್ರಾರಂಭವಾಗಲು ಕೆಲವರಲ್ಲಿ ಸ್ವಲ್ಪ ಸಮಯ ತೆಗೆದುಕೊಂಡರೆ ಮತ್ತೆ ಕೆಲವರಿಗೆ ಅಧಿಕ ಸಮಯ ಬೇಕಾಗಬಹುದು. ಕೆಲವರು ನೋಟವೊಂದರಿಂದಲೇ ಉದ್ರೇಕಗೊಂಡರೆ ಮತ್ತೆ ಕೆಲವರಿಗೆ ಸ್ಪರ್ಶದಿಂದ ಮಾತ್ರ ಸಾಧ್ಯ.
ಸ್ತ್ರೀಯರಲ್ಲಿ ಉದ್ರೇಕತೆ ಜನನೇಂದ್ರಿಯಗಳಲ್ಲಿ ಮಾತ್ರವಲ್ಲದೆ ದೇಹದ ಇತರ ಭಾಗಗಳಲ್ಲೂ ಕಂಡುಬರುತ್ತದೆ. ತುಟಿಗಳ ಅದರುವಿಕೆ, ರಕ್ತದೊತ್ತಡದಿಂದ ಬಣ್ಣ ಕೆಂಪೇರುವುದು, ವೇಗದ ಉಸಿರು, ಎದೆಯ ಹಿಗ್ಗುವಿಕೆ, ಮೊಲೆತೊಟ್ಟು ನಿಮಿರುವುದು, ಬಟುಗಲೆಯಲ್ಲಿ ಬದಲಾವಣೆ, ನಾಡಿಬಡಿತ-ರಕ್ತದೊತ್ತಡ ಎರಡೂ ಹೆಚ್ಚಾಗಬಹುದು. ರಕ್ತದ ಕೂಡುವಿಕೆಯಿಂದ ಯೋನಿತುಟಿಗಳು ಬಡಿಯಬಲ್ಲವು. ಕೆಂಪಾಗುವುದು, ಯೋನಿತುಟಿ ದಪ್ಪವಾಗುವುದು, ಭಗಾಂಕುರ ನಿಮಿರುವುದು ಇತ್ಯಾದಿ.
3.ಭಾವಪ್ರಾಪ್ತಿ: ಉದ್ರೇಕತೆ ಸ್ವಲ್ಪ ಸಮಯದವರೆಗೆ ಇದ್ದು ನಂತರ ಉದ್ರೇಕತೆ ಮುಂದುವರೆದಂತೆ ಅತಿ ಸಂತೋಷದಾಯಕ ಉತ್ತುಂಗ ಶಿಖರವನ್ನು ತಲುಪುವುದೇ ಭಾವಪ್ರಾಪ್ತಿ ಎನ್ನಬಹುದು. ಭಾವಪ್ರಾಪ್ತಿ ಎಲ್ಲರಿಗೂ ಒಂದೇ ರೀತಿ ಆಗುತ್ತದೆಯೆಂದು ಹೇಳಲಾಗುವುದಿಲ್ಲ. ಕೆಲವರಲ್ಲಿ ನಿಧಾನವಾಗಬಹುದು ಮತ್ತೆ ಕೆಲವರಲ್ಲಿ ಶೀಘ್ರದಲ್ಲಿಯೇ ಸಂತೃಪ್ತಿ ದೊರೆಯಬಹುದು. ಇನ್ನೂ ಕೆಲವರಿಗೆ ಭಾವಪ್ರಾಪ್ತಿ ದೊರೆಯದೇ ಇರಬಹುದು. ಇದು ಅವರವರ ಮಾನಸಿಕ ತೃಪ್ತಿಯನ್ನು ಅವಲಂಬಿಸಿರುತ್ತದೆ.
ಭಾವಪ್ರಾಪ್ತಿ ಎನ್ನುವುದು ಲೈಂಗಿಕ ಕ್ರಿಯೆಯ ಎಲ್ಲಾ ಘಟ್ಟಗಳಿಗೆ ಹೋಲಿಸಿದರೆ ಅತಿ ಕಡಿಮೆ ಸಮಯದಲ್ಲಿ ಮೂಡುವಂತಹುದು. ಆ ಸಮಯ ಅದೆಷ್ಟು ಸಂತೋಷದಾಯಕವೆಂದರೆ ಆಗ ನಮ್ಮ ಯೋಚನಾಶಕ್ತಿ ಕುಂದುತ್ತದೆ. ತಮ್ಮಲ್ಲಿ ತಾವಾಗುತ್ತೇವೆ. ಬೇರೆ ಯಾವುದೇ ರೀತಿಯ ಯೋಚನೆಗಳು ಮನಸ್ಸಿಗೆ ಬರುವುದಿಲ್ಲ. ಮತ್ತೆ ಮತ್ತೆ ಈ ಸುಖ ಬೇಕೆನಿಸುತ್ತಿರುತ್ತದೆ.
ಭಾವಪ್ರಾಪ್ತಿ ವ್ಯಕ್ತಿಯಿಂದ ವ್ಯಕ್ತಿಗೆ, ಸಮಯದಿಂದ ಸಮಯಕ್ಕೆ ಭಿನ್ನವಾಗಿರುತ್ತದೆ. ಇದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಇದು ಗಂಡು-ಹೆಣ್ಣಿನ ಮನಸ್ಸಿನ ಸಂತೋಷ, ಸಂಗಾತಿಯ ಅಪೇಕ್ಷೆ, ಕಾಮನೆ, ಹಸಿವೆ ಮತ್ತು ಸಮಯ ಎಲ್ಲವನ್ನೂ ಅವಲಂಬಿಸಿರುತ್ತದೆ. ಭಾವಪ್ರಾಪ್ತಿಯು ಗಂಡು-ಹೆಣ್ಣಿನಲ್ಲಿ ವಿಭಿನ್ನವಾಗಿರುತ್ತದೆ.
ಅ) ಹೆಣ್ಣಿನಲ್ಲಿ ಭಾವಪ್ರಾಪ್ತಿ: ಹೆಣ್ಣಿನಲ್ಲಿ ಭಾವಪ್ರಾಪ್ತಿ ಇರುವುದೇ? ಇಲ್ಲವೇ? ಎಂಬ ಸಂದೇಹ ಹಲವಾರು ವರ್ಷಗಳಿಂದ ಎಲ್ಲರಲ್ಲಿಯೂ ಇರುವಂತಹದೇ. ಇದರ ಬಗ್ಗೆ ವಾತ್ಸ್ಯಾಯನ, ಕಲ್ಯಾಣಮಲ್ಲ ಮೊದಲಾದವರು ಸರಿಯಾದ ಅರಿವನ್ನು ಶತಮಾನಗಳ ಹಿಂದೆಯೇ ಹೇಳಿದರೂ, ವೈಜ್ಞಾನಿಕವಾದ ವಿವರಣೆ ಸಿಕ್ಕಿರುವುದು ಇತ್ತೀಚೆಗಷ್ಟೆ.ಹಿಂದಿನ ದಿನಗಳಲ್ಲಿ ಮಹಿಳೆ ಪುರುಷನ ಲೈಂಗಿಕ ಕಾಮನೆಗಳನ್ನು ಪೂರೈಸುವ ವಸ್ತುವಷ್ಟೇ ಆಗಿದ್ದಳು. ಅವಳಿಗೆ ತನ್ನ ಬಯಕೆ, ಕಾಮನೆ, ಆಸೆಗಳನ್ನು ಹೇಳಿಕೊಳ್ಳುವುದಕ್ಕೆ ಅವಕಾಶವಿರಲಿಲ್ಲ. ಇತ್ತೀಚೆಗಷ್ಟೆ ಈ ಎಲ್ಲಾ ಭಾವನೆಗಳು ತಪ್ಪು ಎಂದು ಮನವರಿಕೆಯಾಗಿದೆ. ಗಂಡಸರಿಗಿರುವಷ್ಟೇ ಆಸೆ, ಆಕಾಂಕ್ಷೆಗಳು, ಕಾಮನೆಗಳು, ಹಸಿವು, ಹೆಣ್ಣಿಗೂ ಇರುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನದ ಮುಖಾಂತರ ದೃಢಪಡಿಸಲಾಗಿದೆ. ಹೆಣ್ಣಿನಲ್ಲಿ ಭಾವಪ್ರಾಪ್ತಿಯಾಗಿರುವುನ್ನು ತಿಳಿಯುವುದು ತುಂಬಾ ಕಷ್ಟ. ಕೆಲವು ಸ್ತ್ರೀಯರು ಇದರ ಅನುಭವದಿಂದ ಪೂರ್ಣವಾಗಿ ವಂಚಿತವಾಗಿರಲು ಸಾಧ್ಯ. ಕೆಲವೊಮ್ಮೆ ಭಾವಪ್ರಾಪ್ತಿ ಮೂಡಿದಂತೆ ನಟಿಸುವವರೂ ಇದ್ದಾರೆ. ಕೆಲವರು ನಿಜವಾಗಿಯೂ ಭಾವಪ್ರಾಪ್ತಿಯನ್ನು ತಲುಪುತ್ತಾರೆ. ಮತ್ತೆ ಕೆಲವರು ಭಾವಪ್ರಾಪ್ತಿಯಾಗಿಲ್ಲವೆಂದು ಕೊರಗುವವರೂ ಇದ್ದಾರೆ. ಸ್ತ್ರೀಯರ ಭಾವಪ್ರಾಪ್ತಿಯಲ್ಲಿ ಎರಡು ರೀತಿ ಇರುತ್ತದೆ. ಮೊದಲನೆಯದು ಶೀಘ್ರ ಭಾವಪ್ರಾಪ್ತಿ, ಎರಡನೆಯದು ವಿಧಾನ ಭಾವಪ್ರಾಪ್ತಿ. (ಚಿತ್ರ 1).
ಭಾವಪ್ರಾಪ್ತಿಯಾದಾಗ ಅತಿಯಾಗಿ ಗರ್ಭಕೋಶದಲ್ಲಿ ಒತ್ತಡ ಮೂಡುತ್ತದೆ. ಯೋನಿಯ ಹೊರಭಾಗ, ಗುದದ್ವಾರ ಹಾಗೂ ದೇಹದ ಬಹುಭಾಗಗಳಲ್ಲಿ ಮಾಂಸಖಂಡಗಳು ಗಟ್ಟಿಯಾಗಿ ಸಡಿಲವಾಗುವ ಭಾವನೆ ಮೂಡುತ್ತದೆ. ಯೋನಿ ಮತ್ತು ದೇಹದ ಇತರ ಭಾಗಗಳಲ್ಲಿ ಬಿಸಿಬಿಸಿಯಾದ ಅನುಭವಾಗುತ್ತದೆ.ಕಿಬ್ಬೊಟ್ಟೆಯಲ್ಲಿ ಮಾಂಸಖಂಡಗಳ ಬಿರಿಯುವಿಕೆ, ಸಂಭೋಗದ ತುಡಿತದ ಭಾವನೆಯನ್ನು ಸೃಷ್ಟಿಸುತ್ತದೆ. ಭಾವಪ್ರಾಪ್ತಿಯಲ್ಲಿ ಭಗಾಂಕುರದ ಪಾತ್ರ ಹಿರಿದು. ಇದನ್ನೂ ಪ್ರತಿಯೊಬ್ಬ ಪುರುಷನು ತಿಳಿದಿರಬೇಕು. ಬೆರಳಿನಿಂದ, ನಾಲಿಗೆ ತುದಿಯಿಂದ ಭಗಾಂಕುರವನ್ನು ಮುಟ್ಟುವುದರಿಂದ ಅಥವಾ ತೀಡುವುದರಿಂದ ಸ್ತ್ರೀಯನ್ನು ಉತ್ತುಂಗ ಶಿಖರಕ್ಕೊಯ್ಯಬಹುದು. ಭಾವಪ್ರಾಪ್ತಿಯಾಗುತ್ತಿದ್ದಂತೆ ದ್ರವ ಸ್ರವಿಸುತ್ತದೆ.
ಆ) ಗಂಡಿನಲ್ಲಿ ಭಾವಪ್ರಾಪ್ತಿ: ಗಂಡಿನಲ್ಲಿ ಭಾವಪ್ರಾಪ್ತಿ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ವೃಷಣ ನಾಳ, ಮುನ್ನಿಲು ಗ್ರಂಥಿ ಹಾಗೂ ವೃಷಣ ಚೀಲಗಳಲ್ಲಿ ಮೂಡುವ ಅಲೆಗಳು ವೀರ್ಯವನ್ನು ಮುನ್ನಿಲು ಗ್ರಂಥಿಯ ಒಳಗಿರುವ ಸ್ಖಲನ ನಾಳದ ಬಳಿ ತಳ್ಳುತ್ತದೆ. “ವೀರ್ಯ ಚಿಮ್ಮುತ್ತದೆ” ಎನ್ನುವ ಭಾವನೆ ಈ ಸಮಯದಲ್ಲಿ ಮೂಡುತ್ತದೆ.ಈ ಭಾವನೆ ಮೂಡಿದ ನಂತರ ಧಾತುವಿನ ಚಿಮ್ಮುವಿಕೆಯನ್ನು ಎಷ್ಟೇ ಕಷ್ಟಪಟ್ಟರೂ ಗಂಡು ತಡೆಯಲಾರ. ಒಮ್ಮೆ ಸ್ಖಲಿಸಿದ ನಂತರ ಮತ್ತೊಮ್ಮೆ ಭಾವಪ್ರಾಪ್ತಿಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಎರಡೂ ಭಾವಪ್ರಾಪ್ತಿಗಳ ಮಧ್ಯದ ಅಂತರವನ್ನು ನಿಶ್ಚೇತನ ಘಟ್ಟ ಎಂದು ಕರೆಯಲಾಗುವುದು. (ಚಿತ್ರ 2. ಪುರುಷರಲ್ಲಿ ಭಾವಪ್ರಾಪ್ತಿಗಳ ರೇಖಾಚಿತ್ರ)
ಎರಡನೆಯ ಹಂತದಲ್ಲಿ ಶಿಶ್ನದಿಂದ ವೀರ್ಯ ಹೊರಚಿಮ್ಮುತ್ತದೆ. ಚಿಮ್ಮುವಿಕೆ ಅತಿ ಉದ್ರೇಕವಾದಾಗ ವೀರ್ಯ ದೂರಕ್ಕೆ ಹಾರಬಹುದು. ಹದಿಹರೆಯದವರಲ್ಲಿ ಇದು ಸಾಮಾನ್ಯ. ವೀರ್ಯ ಚಿಮ್ಮುವಿಕೆ ಭಾವನೆ ಮೂಡಲು ಹಾಗೂ ನಿಜವಾಗಿ ವೀರ್ಯ ಹೊರಬರಲು ಕೆಲವೇ ಸಮಯದಷ್ಟು ವ್ಯತ್ಯಾಸವಿರುತ್ತದೆ.ಕೆಲವರಲ್ಲಿ ವೀರ್ಯ ಮತ್ತು ಮೂತ್ರದ ಹೊರಬರುವಿಕೆಯ ಬಗ್ಗೆ ಸಂದೇಹವಿದೆ. ವೀರ್ಯ ಸ್ಖಲಿಸುವಾಗ ಮೂತ್ರ ಚೀಲದ ಬಾಯಿ ಮುಚ್ಚಲ್ಪಡುತ್ತದೆ. ಈ ಕಾರಣದಿಂದಲೇ ಶಿಶ್ನ ನಿಮಿರಿದಾಗ ಮೂತ್ರ ಮಾಡುವುದು ಸಾಧ್ಯವಿಲ್ಲ. ಸಂಭೋಗಾನಂತರ ಮೂತ್ರ ಮಾಡಬೇಕೆನಿಸಬಹುದು.
ಇದು ಸ್ತ್ರೀ-ಪುರುಷರಿಬ್ಬರಲ್ಲಿಯೂ ಒಂದೇ ಭಾವನೆಯಿರುತ್ತದೆ. ಭಾವಪ್ರಾಪ್ತಿಯ ಶಕ್ತಿ ಗಂಡಿಗಿಂತಲೂ ಹೆಣ್ಣಿನಲ್ಲಿ ಅಧಿಕ. ಗಂಡು ಒಮ್ಮೆ ಭಾವಪ್ರಾಪ್ತಿಯ ನಂತರ ಪುನಃ ಸುಲಭವಾಗಿ ಉತ್ತುಂಗ ಶಿಖರವನ್ನೇರಲಾರ. ಆದರೆ ಹೆಣ್ಣು ಹಲವು ಬಾರಿ ಭಾವಪ್ರಾಪ್ತಿಯನ್ನು ತಲುಪುವ ಶಕ್ತಿಯನ್ನು ಪಡೆದಿದ್ದಾಳೆ.
4.ವಿಘಟಣೆ:
ಭಾವಪ್ರಾಪ್ತಿ ಆದ ನಂತರ ಪರಸ್ಪರ ಇಬ್ಬರೂ ತೃಪ್ತಿಯನ್ನು ಪಡೆದು ಆನಂದಿತರಾಗಿ ದೇಹದಲ್ಲಿ ಮೂಡಿದ ಒತ್ತಡ ಉತ್ತುಂಗ ಶಿಖರವನ್ನು ತಲುಪಿ ತೃಪ್ತಿಯ ಭಾವನೆ ಮೂಡುತ್ತದೆ. ನಂತರ ದೇಹದ ಒತ್ತಡ ಸಡಿಲವಾಗುತ್ತದೆ. ಇದನ್ನು ‘ವಿಘಟಣೆ’ ಎನ್ನಲಾಗುತ್ತದೆ. ವಿಘಟಣೆಯ ಘಟ್ಟದಲ್ಲಿ ಶರೀರದ ಸ್ನಾಯುಗಳು ಸಡಿಲವಾಗುತ್ತವೆ. ರಕ್ತದ ಒತ್ತಡ ಕಡಿಮೆ ಆಗುತ್ತದೆ. ಉಸಿರಾಟದ ಕ್ರಿಯೆ ಸಹಜ ಸ್ಥಿತಿಗೆ ಮರಳುತ್ತದೆ. ಹೃದಯ ಬಡಿತದ ವೇಗ ಕಡಿಮೆ ಆಗುತ್ತದೆ. ವಿಘಟಣೆಯ ನಂತರ ಮತ್ತೊಮ್ಮೆ ಸಂಭೋಗ ಕ್ರಿಯೆಗೆ ತೊಡಗಲು ಸ್ವಲ್ಪ ಸಮಯ ವಿಶ್ರಾಂತಿ ಅಗತ್ಯ. ಈ ಅವಧಿಯಲ್ಲಿ ಶರೀರವು ಮತ್ತೆ ಪುನಶ್ಚೇತನಗೊಳ್ಳುತ್ತದೆ. ಹೀಗೆ ಪುನಶ್ಚೇತನಗೊಂಡು ಮತ್ತೊಮ್ಮೆ ಸಂಭೋಗ ಕ್ರಿಯೆಯಲ್ಲಿ ತೊಡಗಲು ಕಾಲಾವಕಾಶ ಬೇಕಾಗುತ್ತದೆ. ಇದಕ್ಕೆ “ಮರು ಉದ್ರೇಕಗೊಳ್ಳಲಾಗದ ಘಟ್ಟ” ಅಥವಾ “ನಿಶ್ಚೇತನ ಘಟ್ಟ” (Refractory Period) ಎಂದು ಕರೆಯುತ್ತಾರೆ.
ಗಂಡಸಿನಲ್ಲಿ ಈ ಮರು ಉದ್ರೇಕಗೊಳ್ಳಲಾಗದ ಘಟ್ಟ 20 ನಿಮಿಷದಿಂದ ಹಲವು ಗಂಟೆಗಳವರೆಗೆ ವಿಸ್ತರಿಸುತ್ತದೆ. ಹೆಂಗಸರಲ್ಲಿ ಈ ಅವಧಿ ಬಹಳ ಕಡಿಮೆಯದ್ದಾಗಿರುತ್ತದೆ. ಮಹಿಳೆಯು ಒಮ್ಮೆ ಸಂಭೋಗ ಆದ ನಂತರ ತಕ್ಷಣವೇ ಮತ್ತೊಮ್ಮೆ ಸಂಭೋಗ ಕ್ರಿಯೆಗೆ ತೊಡಗುವ ಶಕ್ತಿ ಇರುತ್ತದೆ. ಆದರೆ ಗಂಡಸಿಗೆ ಇದು ಸಾಧ್ಯವಿಲ್ಲ. ಕನಿಷ್ಟ ಕಾಲಾವಕಾಶ ಬೇಕೇ ಬೇಕು.ಭಾವಪ್ರಾಪ್ತಿಯಾದ ನಂತರ ದಂಪತಿಗಳಲ್ಲಿ ಪರಸ್ಪರ ತೃಪ್ತಿಯುಂಟಾಗಿ ಉಲ್ಲಾಸ ಹೊಂದುತ್ತಾರೆ. ಒಂದು ವೇಳೆ ತೃಪ್ತಿಯಾಗಲೀ, ಉಲ್ಲಾಸವಾಗಲೀ ಪ್ರಾಪ್ತಿಯಾಗದಿದ್ದರೆ, ಇಬ್ಬರಲ್ಲಿಯೂ ಉದ್ವಿಗ್ನತೆ, ವಿನಾಕಾರಣ ಕೋಪ, ಮುನಿಸು ಉಂಟಾಗಿ ಜೀವನದ ಮಧುರ ಕ್ಷಣಗಳು ವಿರಸವಾಗುತ್ತವೆ. ಹೀಗೆ ದಾಂಪತ್ಯದಲ್ಲಿ ವಿರಸ ಮೂಡಿದರೆ ಬಂಜೆತನ ಮತ್ತು ಮಾನಸಿಕ ಕ್ಷೋಭೆಗೊಳಗಾಗಬಹುದು.ಇಂತಹ ಸಂದರ್ಭದಲ್ಲಿ ಯಾವುದೇ ಸಂಕೋಚ ಪಡದೇ ತಜ್ಞವೈದ್ಯರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಮುಚ್ಚಿಡದೆ ಹೇಳಿ ಸೂಕ್ತ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದುಕೊಂಡು ಸಂಸಾರವನ್ನು ಸುಖಸಾಗರವನ್ನಾಗಿಸಿ ಕೊಳ್ಳಬಹುದು.
ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net