Vydyaloka

ಸ್ಕೇಬೀಸ್ ಅಥವಾ ತುರಿಕಜ್ಜಿ : ಸಹಿಸಲಸಾಧ್ಯ ನವೆ ನೀಡುವ ಚರ್ಮ ರೋಗ

ಸ್ಕೇಬೀಸ್ ಅಥವಾ ತುರಿಕಜ್ಜಿ ತುಂಬಾ ನವೆಯುಂಟಾಗುವ ಮತ್ತು ಸೋಂಕಿನಿಂದ ಹರಡುವ ಒಂದು ಚರ್ಮರೋಗವಾಗಿದೆ. ಕೇವಲ ಚಿಕಿತ್ಸೆಯಿಂದ ನವೆ, ಕೆರೆತ ಮತ್ತು ಉರಿ ಕಡಿಮೆಯಾಗುವುದಿಲ್ಲ ಎಂಬುದನ್ನು ರೋಗಿಯು ಆರ್ಥ ಮಾಡಿಕೊಳ್ಳಬೇಕು.

ಸ್ಕೇಬೀಸ್ ಅಥವಾ ತುರಿಕಜ್ಜಿಯು ಸಾಂಕ್ರಾಮಿಕ ರೋಗವಾಗಿದ್ದು, ಓರ್ವ ಸೋಂಕು ಪೀಡಿತ ವ್ಯಕ್ತಿಯೊಂದಿಗೆ ದೀರ್ಘಕಾಲ ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ.ಇದು ಸಾಮಾನ್ಯ ಎಕ್ಟೋಪ್ಯಾರಾಸೈಟ್ ಪರಾವಲಂಬ ಜೀವಿಯಿಂದ ಉಂಟಾಗುವ ಸೋಂಕು ರೋಗವಾಗಿದ್ದು ಸಾರ್ಕೋಪ್ಟೆಸ್ ಸ್ಕಾಬೀ ಎಂಬ ಕ್ರಿಮಿ ಇದಕ್ಕೆ ಕಾರಣ. ಹತ್ತಿರದ ಸಂಪರ್ಕದಿಂದ ಈ ಚರ್ಮರೋಗ ಹರಡುತ್ತದೆ. ಗೃಹ ಘಟಕದ ಕುಟುಂಬ ಸದಸ್ಯರು, ಶಾಲಾ ಮಕ್ಕಳು, ವಸತಿನಿಲಯಗಳು, ಹಾಸ್ಟೆಲ್‍ಗಳು, ಮಿಲಿಟರಿ ಕ್ಯಾಂಪುಗಳು, ಜೈಲಿನ ಕೈದಿಗಳು ಮತ್ತು ಲೈಂಗಿಕ ಕ್ರಿಯೆ ವೇಳೆ ವ್ಯಕ್ತಿಗಳ ನಡುವೆ ದೀರ್ಘಕಾಲ ಸಂಪರ್ಕದಿಂದ ಸ್ಕೇಬೀಸ್ ಚರ್ಮ ದೋಷಗಳು ಕಾಣಿಸಿಕೊಳ್ಳುತ್ತವೆ. ರೋಗಿಯ ಜೊತೆ ಸಂಪರ್ಕದಿಂದ ಆರೋಗ್ಯ ರಕ್ಷಣೆ ಕಾರ್ಯಕರ್ತರಿಗೂ ತುರಿಕಜ್ಜಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ತುರಿಕಜ್ಜಿ ಪತ್ತೆಯಾಗಿರುವುದಕ್ಕೆ ಒಂದು ಇತಿಹಾಸವೇ ಇದೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಅರಿಸ್ಟೋಟಲ್ ಕಜ್ಜಿಯನ್ನು ಪತ್ತೆ ಮಾಡಿ ಇದಕ್ಕೆ ಹೆಸರಿಟ್ಟಿದ್ದರು. ಅಕಾರಿ ಎಂದರೆ ಗಾಯದಲ್ಲಿ ಕ್ರಿಮಿಗಳು ವಾಸಿಸುತ್ತವೆ ಎಂದರ್ಥ. ಫಾನ್ಸ್ ಚಕ್ರವರ್ತಿ ಒಂದನೇ ನೆಪೋಲಿಯನ್ ಸಹ ತುರಿಕಜ್ಜಿ ರೋಗದಿಂದ ನರಳುತ್ತಿದ್ದ ಎಂದು ಚರಿತ್ರೆ ಹೇಳುತ್ತದೆ. ಕಜ್ಜಿ ಚರ್ಮರೋಗದ ಬಗ್ಗೆ ಪ್ರಾಚೀನ ಚಿಕಿತ್ಸೆಯಲ್ಲಿ ವರ್ಣಿಸಲಾಗಿದೆ. ರೋಮ್‍ನ ವೈದ್ಯ ಸೆಲ್‍ಸಸ್, ಕ್ರಿಸ್ತಶಕ 1ನೇ ಶತಮಾನದಲ್ಲಿ ಈ ಸ್ಥಿತಿಯನ್ನು ಸ್ಕೇಬೀಸ್ ಎಂದು ವಿವರಿಸಿದ್ದ.

ಸ್ಕೇಬೀಸ್‍ನನ್ನು ಲ್ಯಾಟಿನ್ ಪದ ಸ್ಕ್ರಾಚ್‍ನಿಂದ ಬಣ್ಣಿಸಲಾಗಿದೆ. ಇಟಲಿಯ ವೈದ್ಯ ಬೊನೊಮಾ 1687ರಲ್ಲಿ ಪರಾವಲಂಬಿ ಕ್ರಿಮಿಯಿಂದ ಈ ಸೋಂಕು ಹರಡುತ್ತದೆ ಎಂದು ಪತ್ತೆ ಮಾಡಿ ಇದಕ್ಕೆ ಅಕ್ರುಸ್ ಸ್ಕೇಬೀ/ಸಾರ್ಕೋಪ್ಟ್ಸ್ ಸ್ಕೇಬೀ ಕರೆದಿದ್ದರು. ಪ್ರಾಚೀನ ಆಯುರ್ವೇದ ವಿದ್ವಾಂಸರಾದ ಚಕ್ರ ಸಹ ಈ ಸೋಂಕು ರೋಗದ ಬಗ್ಗೆ ಉಲ್ಲೇಖಿಸಿ, ಅರಿಶಿಣ ತೈಲ, ನಿಂಬೆ ತೈಲ ಲೇಪಿಸಿ, ದಿನನಿತ್ಯ ಸ್ನಾನ ಮಾಡುವುದರಿಂದ ಈ ಕಜ್ಜಿ ಚರ್ಮರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ. ಆಗಲೇ ಇವರು ಪ್ರಾಣಿಗಳಲ್ಲಿ ಕಂಡು ಬರುವ ಕಜ್ಜಿ ರೋಗದ ಬಗ್ಗೆ ವಿವರಿಸಿದ್ದರು. ಇದು ಇದನ್ನು ಮಂಗೆ (ಪಶು ಚರ್ಮವ್ಯಾದಿ ಎಂದು ಈಗ ಇದನ್ನು ಕರೆಯಲಾಗುತ್ತದೆ).

ಸಾರ್ಕೋಪ್ಟ್ಸ್ ಸ್ಕೇಬೀಯ ಜೀವನ ಚಕ್ರ:

ತುರಿಕಜ್ಜಿ ರೋಗವನ್ನು ಹರಡುವ ಸಾರ್ಕೋಪ್ಟ್ಸ್ ಸ್ಕೇಬೀ ಕ್ರಿಮಿಗಳು ಗಾತ್ರದಲ್ಲಿ 0.3 ರಿಂದ 0.4 ಮಿ.ಮೀ. ಇದ್ದು, ವಿಶ್ವದ ಬಹುತೇಕ ಭಾಗಗಳಲ್ಲಿ ಕಂಡುಬರುತ್ತದೆ. ಇವು ಪರಾವಂಬಿ ಜೀವಿಗಳಾಗಿದ್ದು, ಮನುಷ್ಯನ ದೇಹವನ್ನು ಪ್ರವೇಶಿಸಿ ಸೋಂಕು ಉಂಟು ಮಾಡಿ ಅಲ್ಲೇ ವಾಸಿಸುತ್ತಾ ಚರ್ಮ ರೋಗ ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತದೆ. ಈ ಕ್ರಿಮಿಗಳ ದೇಹವು ಸ್ಪಷ್ಟ ಗೆರೆಗಳು ಮತ್ತು ಹಲವು ಉದ್ದ ಕೂದಲುಗಳಿಂದ ಆವೃತವಾಗಿರುತ್ತವೆ. ಇವು ಮೊಟ್ಟೆಯಾಕಾರದಲ್ಲಿದ್ದು, ಒಣ ಹುಲ್ಲು ಬಣ್ಣ ಹೊಂದಿರುತ್ತವೆ. ಇವು ಪುಟ್ಟ ಮತ್ತು ನಾಲ್ಕು ಜೊತೆ ದಪ್ಪನಾದ ಕಾಲುಗಳನ್ನು ಒಳಗೊಂಡಿರುತ್ತವೆ. ಹೆಣ್ಣು ಕ್ರಿಮಿಗಳು ಗಂಡಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಹೆಣ್ಣು ಕ್ರಿಮಿಯು ಫೆರೋಮೊನೆಸ್ ಎಂಬ ವಿಶೇಷ ರಾಸಾಯನಿಕಗಳನ್ನು ಉತ್ಪಾದಿಸಿ ಗಂಡು ಕ್ರಿಮಿಯನ್ನು ಲೈಂಗಿಕ ಕ್ರಿಯೆಗೆ ಆಕರ್ಷಿಸುತ್ತವೆ.

ಗಂಡು ಕ್ರಿಮಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಹೆಣ್ಣು ಕ್ರಿಮಿಯು 1 ರಿಂದ 2 ಗಂಟೆಗಳಲ್ಲಿ ಮನುಷ್ಯರ ಚರ್ಮದ ಹೊರ ಪದರಗಳಲ್ಲಿ ಅತ್ಯಂತ ಸೂಕ್ಷ್ಮವಾದ ಸುರಂಗ ತೋಡುತ್ತವೆ. ಹೆಣ್ಣು ಕ್ರಿಮಿಯು ತನ್ನ ಬಾಯಿಯ ಬಾಗಗಳೊಂದಿಗೆ ಪ್ರತಿ ದಿನ 0.5 ರಿಂದ 5 ಮಿ.ಮೀ. ಸುರಂಗ ಬಿಲ ಕೊರೆಯುತ್ತವೆ. ಬಿಲ ತೋಡುತ್ತಾ ಅವು ಅಂಗಾಂಶ ದ್ರವವನ್ನು ಹೀರುತ್ತವೆ ಮತ್ತು ಚರ್ಮದ ಭಾಗವನ್ನು ತಿನ್ನುತ್ತವೆ. 2 ರಿಂದ 3 ದಿನಗಳ ಮಿಲನ ಕ್ರಿಯೆ ನಂತರ, ಒಂದು ವಾರಕ್ಕ ಪ್ರತಿ ದಿನ ಹೆಣ್ಣು ಕ್ರಿಮಿಯು 1 ರಿಂದ 2 ಮೊಟ್ಟೆಗಳನ್ನು ಇಡುತ್ತವೆ. ಇವು ಪುಟ್ಟ ಕ್ರಿಮಿಗಳಾಗಿ ನಂತರ ಪ್ರಾಯಕ್ಕೆ ಬರುತ್ತವೆ. ಪ್ರತಿ ಬಿಲವು ಏಕೈಕ ಗರ್ಭಧರಿಸಿದ ಹೆಣ್ಣನ್ನು ಹೊಂದಿರುತ್ತದೆ. ಪ್ರಾಯಕ್ಕೆ ಬಂದ ಹೊಸ ಗಂಡು ಮತ್ತು ಹೆಣ್ಣು ಕ್ರಿಮಿಗಳು ತಮ್ಮ ಲೈಂಗಿಕ ಸಂಗಾತಿಗಳಿಗಾಗಿ ಬಿಲದಿಂದ ಹೊರಬಂದು ತಮ್ಮ ಸಂತಾನೋತ್ಪತ್ತಿಯನ್ನು ಮುಂದುವರಿಸುತ್ತವೆ. ಸರಾಸರಿ 10 ರಿಂದ 12 ಹೆಣ್ಣು ಕ್ರಿಮಿಗಳು ಆರೋಗ್ಯಕರ ವಯಸ್ಕರರಲ್ಲಿ ವಾಸ ಮಾಡುತ್ತವೆ. 12ಕ್ಕಿಂತ ಹೆಚ್ಚು ಕ್ರಿಮಿಗಳು ವಾಸವಾಗಿದ್ದರೆ, ಅಗ ಇಮ್ಯೂನೋ ಡಿಫಿಸಿಯೆನ್ಸಿಯನ್ನು ತಪಾಸಣೆ ಮಾಡಬೇಕಾಗುತ್ತದೆ.

ತುರಿಕಜ್ಜಿ ಹರಡುವಿಕೆ-ರೋಗ ಅಧ್ಯಯನ:

ಪರಾವಲಂಬಿ ಜೀವಿಗಳು ಮನುಷ್ಯರ ದೇಹವನ್ನು ಪ್ರವೇಶಿಸಿದಾಗ ಉಂಟಾಗುವ ಅಲರ್ಜಿ ಪರಿಣಾಮದಿಂದ ಸ್ಕೇಬೀಸ್ ರೋಗಲಕ್ಷಣಗಳು ಕಂಡುಬರುತ್ತದೆ. ಕ್ರಿಮಿಯ ಮಲವನ್ನು ಬೃಹತ್ಕಣಗಳು ತೆಗೆದುಕೊಂಡು ಸಂಸ್ಕರಿಸಿ ಇಮ್ಯೂನೋ ಸಕ್ಷಮ ಕೋಶಗಳಿಗೆ ಸಲ್ಲಿಸುತ್ತವೆ. ಇವು ಆಂಟಿಬಾಡಿಗಳನ್ನು ಉತ್ಪಾದಿಸುತ್ತವೆ. ಈ ಆಂಟಿಬಾಡಿಗಳು ಕ್ರಿಮಿ ಮೇಲೆ ಆಕ್ರಮಣ ಮಾಡುತ್ತವೆ ಹಾಗೂ ಕ್ರಿಮಿ ಮತ್ತು ಕ್ರಿಮಿ ಮಲದ ಮೇಲೆ ಆಕ್ರಮಣ ಮಾಡುತ್ತವೆ ಹಾಗೂ ಅಲರ್ಜಿ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತವೆ. ಆದ್ದರಿಂದ ಆಂಟಿಬಾಡಿಗಳಿಂದ ಕ್ರಿಮಿ ಉತ್ಪತ್ತಿಗಳಿಗೆ ಇದು ಮೊದಲ ಬಾರಿ 4-6 ವಾರಗಳು ಬೇಕಾಗುತ್ತವೆ. ಆನಂತರದ ಮರು ಸೋಂಕು ಮುನ್ನ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇನ್‍ಕ್ಯೂಬೇಷನ್ ಅವಧಿಯು 4-6 ವಾರಗಳಾಗುತ್ತದೆ.

ಚಿಹ್ನೆ ಮತ್ತು ರೋಗಲಕ್ಷಣಗಳು :

ಇದು ತುಂಬಾ ನವೆಯುಂಟಾಗುವ ಮತ್ತು ಸೋಂಕಿನಿಂದ ಹರಡುವ ಒಂದು ಚರ್ಮರೋಗವಾಗಿದೆ. ಸ್ಕೇಬೀಸ್ ಅಥವಾ ತುರಿಕಜ್ಜಿ ಪ್ರಮುಖ ಚಿಹ್ನೆ ಮತ್ತು ರೋಗಲಕ್ಷಣಗಳೆಂದರೆ ತೀವ್ರ ನವೆ ಮತ್ತು ತುರಿಕೆ ಹಾಗೂ ಚರ್ಮದಲ್ಲಿ ಬಾಹ್ಯ ಸೂಕ್ಷ್ಮ ಬಿಲಗಳು ಮತ್ತು ಗುಳ್ಳೆಗಳು. ರಾತ್ರಿ ವೇಳೆ ನವೆ-ತುರಿಕೆ ತೀವ್ರವಾಗಿರುತ್ತದೆ. ಬೆರಳಿನ ಸಂದುಗಳಲ್ಲಿ, ಹಸ್ತಗಳು, ಅಂಗೈ, ಕಣ್ಣಿನ ಉಬ್ಬು, ಮಹಿಳೆಯರಲ್ಲಿ ಸ್ತನದ ತೊಟ್ಟು ಮತ್ತು ಕಿರುಗಂಡಿ, ಹೊಕ್ಕಳಿನ ಸ್ಥಳ, ಜನನಾಂಗದ ಬಳಿ, ತೊಡೆ ಸಂದುಗಳು ಮತ್ತು ಪೃಷ್ಟದ ಭಾಗಗಳಲ್ಲಿ ಗುಳ್ಳೆಗಳು ಮತ್ತು ಬಿಲಗಳು ಗೋಚರಿಸಬಹುದು.

ಕೆಲವರಲ್ಲಿ ಮುಖದ ಮೇಲೂ ತುರಿಕಜ್ಜಿ ಗೋಚರಿಸುತ್ತದೆ. ಶಿಶುಗಳಲ್ಲಿ ಕಜ್ಜಿಯ ಮುಖ ಮತ್ತು ತಲೆಯ ಭಾಗಗಳಲ್ಲಿ ಕಂಡುಬರಬಹುದು. ಎಚ್‍ಐವಿ/ಏಡ್ಸ್ ರೋಗಿಗಳು ಕುಷ್ಠ ರೋಗಿಗಳು, ಮತ್ತು ಕ್ಯಾನ್ಸರ್ ರೋಗಿಗಳಲ್ಲಿ ತೀವ್ರ ಸ್ವರೂಪದ ತುರಿಕಜ್ಜಿ ಚರ್ಮರೋಗ ಕಂಡುಬರುತ್ತದೆ. ಇದನ್ನು ಕ್ರಸ್ಟೆಡ್ ಸ್ಕೇಬೀಸ್ ಎಂದು ಕರೆಯಲಾಗುತ್ತದೆ. ತುರಿಕಜ್ಬಿ ರೋಗವನ್ನು ನಿರ್ಲಕ್ಷ್ಯ ಮಾಡಿದರೆ ಅದು ಇಸಬು, ಎಸ್ಜಿಮಾ, ಕರಪಾಣಿ, ಮೂತ್ರಪಿಂಡ ರೋಗ ಮತ್ತು ತೀವ್ರ ಸ್ವರೂಪದ ಜ್ವರಕ್ಕೆ ಎಡೆ ಮಾಡಿಕೊಡುತ್ತದೆ.

ಚಿಕಿತ್ಸೆ :

1. ಕುಟುಂಬದ ಎಲ್ಲ ಸದಸ್ಯರಿಗೆ, ಶಾಲೆಯ ಎಲ್ಲ ಮಕ್ಕಳಿಗೆ, ಎಲ್ಲ ಸಮೂಹದವರಿಗೆ ತುರಿಕಜ್ಜಿ ಹೇಗೆ ಹರಡುತ್ತದೆ, ವೈಯಕ್ತಿಕ ಶುಚಿತ್ವದ ಪ್ರಾಮುಖ್ಯತೆ ಇವುಗಳ ಬಗ್ಗೆ ವಿವರಿಸಬೇಕು ಹಾಗೂ ಎಲ್ಲ ರೋಗಿಗಳಿಗೂ ಚಿಕಿತ್ಸೆ ಒಂದೇ ಆಗಿರುತ್ತದೆ.

2. ರೋಗಿಗಳ ಎಲ್ಲ ಬಟ್ಟೆಗಳನ್ನು ಚೆನ್ನಾಗಿ ಒಗೆದು ಇಸ್ತ್ರಿ ಮಾಡಬೇಕು. ಬಿಸಿ ಇಸ್ತ್ರಿಪೆಟ್ಟಿಗೆಯು ಎಲ್ಲ ಸ್ಕೇಬೀಸ್ ಕ್ರಿಮಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ.

3. ಆಂಟಿ ಸ್ಕೇಬೀಸ್ ಸಾಬೂನು, ಆಂಟಿ ಸ್ಕೇಬೀಸ್ ಶಾಂಪೂ ಮತ್ತು ಆಂಟಿ ಸ್ಕೇಬೀಸ್ ಲೋಷನ್‍ಗಳು ಮಾರುಕಟ್ಟೆಯಲ್ಲಿ ಲಭಿಸುತ್ತದೆ. ಪೆರ್‍ಮೆಥ್ರಿನ್ 5% ಲೋಷನ್ ತುಂಬಾ ಪರಿಣಾಮಕಾರಿ. ಈ ಲೋಷನ್‍ನನ್ನು ಕುತ್ತಿಗೆಯ ಕೆಳಗೆ ಲೇಪಿಸಬೇಕು ಮತ್ತು 24 ಗಂಟೆಯ ನಂತರ ಸ್ನಾನ ಮಾಡಬೇಕು.

4. ವಿಪರೀತ ತುರಿಕೆ ಇಲ್ಲದ ಕಜ್ಜಿ ಇರುವ ಸ್ಥಳವನ್ನು ಚೆನ್ನಾಗಿ ಉಜ್ಜಿ ಆಂಟಿ ಸ್ಕೇಬೀಸ್ ಸಾಬೂನಿನೊಂದಿಗೆ ಸ್ನಾನ ಮಾಡಬೇಕೆಂದು ರೋಗಿಗ ಸಲಹೆ ನೀಡಲಾಗುತ್ತದೆ. ವಿಶೇಷವಾಗಿ ಕೈಕಾಲುಗಳ ಬೆರಳುಗಳ ನಡುವೆ ಸೇರಿದಂತೆ ಕತ್ತಿನ ಕೆಳಭಾಗದಿಂದ ಇಡೀ ಚರ್ಮದ ಮೇಲ್ಮೈ ಮೇಲೆ ಪೆರ್‍ಮೆಥ್ರಿನ್ ಲೋಷನ್ ಸವರಬೇಕು. ಇದು ಎಲ್ಲ ಪ್ರದೇಶಗಳಿಗೆ ತಲುಪುವಂತೆ ನೋಡಿಕೊಳ್ಳುವುದು ಮುಖ್ಯ.

5. ಕಜ್ಜಿ ಇರುವ ಜಾಗಗಳಿಗೆ ಎಚ್ಚರಿಕೆಯಿಂದ ಮತ್ತು ಚೆನ್ನಾಗಿ ಲೋಷನ್‍ನನ್ನು ಹಾಕಬೇಕು. ಇದನ್ನು ಓರ್ವ ಶುಶ್ರೂಷಿಕೆ ಅಥವಾ ಕುಟುಂಬದ ಇತರ ಸದಸ್ಯರು ಲೇಪಿಸಬೇಕು, ಏಕೆಂದರೆ ರೋಗಿಯು ಲೋಷನ್‍ನನ್ನು ಹಾಕಿಕೊಳ್ಳುವಾಗ ಕೆಲವು ಭಾಗಗಳನ್ನು ತಲುಪದೆ ಇರುವ ಸಾಧ್ಯತೆಗಳಿರುತ್ತವೆ.

6. ಲೋಷನ್ ಹಚ್ಚಿದ ನಂತರ 24 ತಾಸುಗಳ ಕಾಲ ಸ್ನಾನ ಮಾಡದಂತೆ ರೋಗಿಗೆ ಸೂಚನೆ ನೀಡಬೇಕು. 24 ಗಂಟೆಗಳು ಪೂರ್ಣಗೊಂಡ ಬಳಿಕ ರೋಗಿಯು ಆಂಟಿ ಸ್ಕೇಬೀಸ್ ಸೋಪಿನಿಂದ ಚೆನ್ನಾಗಿ ಸ್ನಾನ ಮಾಡಿ ನಂತರ ಒಣಗಿಸಿ ಇಸ್ತ್ರೀ ಮಾಡಿದ ಮಡಿ ಬಟ್ಟೆಗಳನ್ನು ಹಾಕಿಕೊಳ್ಳಬೇಕು.

7. ಕೇವಲ ಚಿಕಿತ್ಸೆಯಿಂದ ನವೆ, ಕೆರೆತ ಮತ್ತು ಉರಿ ಕಡಿಮೆಯಾಗುವುದಿಲ್ಲ ಎಂಬುದನ್ನು ರೋಗಿಯು ಆರ್ಥ ಮಾಡಿಕೊಳ್ಳಬೇಕು. ಕಾಲಕ್ರಮೇಣ ಇದು ಗುಣಮುಖವಾಗುತ್ತದೆ. ಪ್ರಾಣಿಗಳಲ್ಲಿ ತುರಿಕಜ್ಜಿ ಕಾಣಿಸಿಕೊಂಡಲ್ಲಿ ತಕ್ಷಣ ಚಿಕಿತ್ಸೆ ನೀಡಬೇಕು. ಸ್ಕೇಬೀಸ್ ಅಥವಾ ತುರಿಕಜ್ಜಿಗೆ ಇವೆರ್‍ಮೆಸ್‍ಟಿಸ್ ಮಾತ್ರೆಗಳು ತುಂಬಾ ಪರಿಣಾಮಕಾರಿ.

ಡಾ. ಭಾನುಪ್ರಕಾಶ್
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066   

ಫೋನ್: 080- 49069000 Extn: 1147/1366 M0b: 9844011219
www.vims.ac.in 

 

 

Share this: