Vydyaloka

ರೆಂಜೆ ಮರ ಔಷಧದ ಕಣಜ

ರೆಂಜೆ ಮರ ಔಷಧದ ಕಣಜ. ಈ ಮರದ ಹೂ, ಎಲೆ, ತೊಗಟೆ, ಬೀಜ, ಹಣ್ಣು, ಬೇರು ಎಲ್ಲವೂ ಹಲವಾರು ವ್ಯಾಧಿಗಳನ್ನು ಗುಣಪಡಿಸುವ ಔಷಧಗಳಾಗಿವೆ.ಕಫಹಾರಿ ಗುಣವಿರುವ ರೆಂಜೆಯ ಬೇರೆ ಬೇರೆ ಭಾಗಗಳು ದೀರ್ಘಕಾಲದ ಭೇದಿ, ಅಸ್ತಮಾ, ಗೊನೊರಿಯಾ, ಎದೆನೋವು, ಬಿಳಿಸೆರಗು, ಅತಿ ಋತುಸ್ರಾವಗಳನ್ನು ಗುಣಪಡಿಸುತ್ತವೆ.

ರೆಂಜೆ ಎಂಬ ಪುಟ್ಟ ಪುಟ್ಟ ಹೂಗಳನ್ನು ಉದುರಿಸುವ ಮರ ಎಲ್ಲರಿಗೂ ಪರಿಚಿತವಾದುದು. ಬಿಳಿಯ ಚಿಕ್ಕ ಹೂವಿನಲ್ಲೂ ಚಕ್ರದಂತೆ ಅರಗಳಿದ್ದು ಮಧ್ಯೆ ಗುಳಿಯಿದೆ. ಇದನ್ನು ಬೆಳಗಾಗುವಾಗ ಹೆಕ್ಕಿ ಮಾಲೆ ಮಾಡುವುದು ಹೆಂಗಳೆಯರಿಗೆ ತುಂಬ ಪ್ರಿಯವಾದ ಕೆಲಸ. ಈ ಮರದ ಹೂ, ಎಲೆ, ತೊಗಟೆ, ಬೀಜ, ಹಣ್ಣು, ಬೇರು ಎಲ್ಲವೂ ಹಲವಾರು ವ್ಯಾಧಿಗಳನ್ನು ಗುಣಪಡಿಸುವ ಔಷಧಗಳಾಗಿವೆ. ಮಾಗಿದ ಹಣ್ಣು ತಿನ್ನಲು ಸಿಹಿಯಾಗಿ ರುಚಿಕರವಾಗಿದೆ. ವೈಜ್ಞಾನಿಕವಾಗಿ ಮಿಮ್‍ಸೋಪ್ ಎಲೆಂಜಿ ಎಂಬ ಹೆಸರಿರುವ ಇದು ಸಪೋಟೇಸಿಯೇ ಕುಟುಂಬಕ್ಕೆ ಸೇರಿದೆ. ಸಂಸ್ಕತದಲ್ಲಿ ಬಕುಲ, ಗಂಧಪುಷ್ಪ ಮುಂತಾದ ಹೆಸರುಗಳಿವೆ.

ನಿತ್ಯ ಹರಿದ್ವರ್ಣದ ರೆಂಜೆಮರ ಐವತ್ತು ಅಡಿಗಿಂತ ಹೆಚ್ಚು ಎತ್ತರವಾಗಿ ನೂರಾರು ವರ್ಷ ಬದುಕುತ್ತದೆ. ಬುಡದ ಸುತ್ತಳೆತೆ ಒಂದು ಮೀಟರ್‍ಗಿಂತ ಹೆಚ್ಚಿರುತ್ತದೆ. ಗಾಢಕೆಂಪು ವರ್ಣದ ತಿರುಳಿರುವ ಮರ ಪೀಠೋಪಕರಣಗಳ ತಯಾರಿಕೆಗೆ ದೃಢವಾಗಿದ್ದು ಮೋಹಕವಾದ ಮೆರುಗನ್ನು ಹೊಂದಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಉಷ್ಣವಲಯದ ಕಾಡುವಾಸಿಯಾದ ಅದು ಆಸ್ಟ್ರೇಲಿಯಾದ ಉದ್ಯಾನಗಳಲ್ಲಿ ನೆರಳು ನೀಡುತ್ತಿದೆ. ಕಪ್ಪುಮಿಶ್ರಿತ ಹಸುರಾಗಿರುವ ಅದರ ಹೊಳಪಿನ ಎಲೆಗಳು 14 ಸೆ. ಮೀ. ಉದ್ದ, 5 ಸೆ. ಮೀ. ಅಗಲವಿವೆ. ಎಪ್ರಿಲ್ ತಿಂಗಳಲ್ಲಿ ರಾಶಿ ರಾಶಿ ಹೂಗಳಾಗುತ್ತವೆ.

ಆಯುರ್ವೇ’ವು ರೆಂಜೆಯನ್ನು ತಂಪು, ಸಂಕೋಚಕ, ಜ್ವರಶಾಮಕವೆಂದು ಹೊಗಳಿದೆ. ಕಠಿನವಾದ ಹಲ್ಲುನೋವಿದ್ದರೆ ಇದರ ಬೀಜಗಳನ್ನು ಜಜ್ಜಿ ಹಲ್ಲಿನಲ್ಲಿರಿಸಿ ನೀರನ್ನು ಉಗುಳುತ್ತ ಇದ್ದರೆ ಶೀಘ್ರವಾಗಿ ನೋವು ತಗ್ಗುತ್ತದೆ. ಮರದ ಹಸಿ ತೊಗಟೆಯ ಕಷಾಯದ ಬಿಸಿ ಹಬೆಯನ್ನು ತೂತಾದ ಹಲ್ಲಿಗೆ ನೀಡಿದರೆ ಕೀವು, ನೋವು, ವಸಡಿನ ಹುಣ್ಣುಗಳು ಗುಣವಾಗುವವು. ಶಿಲೀಂಧ್ರ ಮತ್ತು ಸೂಕ್ಷ್ಮ ಕ್ರಿಮಿನಾಶಕ ಗುಣ ತೊಗಟೆಗೆ ಇರುವುದರಿಂದ ದೇಹದ ಗಾಯಗಳನ್ನು ಇದರ ಕಷಾಯದಿಂದ ತೊಳೆಯುವುದು ಗುಣಕಾರಿ. ಈ ಕಷಾಯಕ್ಕೆ ಕಾಳುಮೆಣಸಿನಹುಡಿ, ಜೇನು ಮತ್ತು ತುಪ್ಪ ಬೆರೆಸಿ ಅದರಲ್ಲಿ ಬಾಯಿಮುಕ್ಕಳಿಸಿದರೆ ಹಲ್ಲುನೋವು, ಸಡಿಲು ಹಲ್ಲು, ಸ್ಪಂಜಿನಂತೆ ಮೆತ್ತಗಿರುವ ವಸಡಿನ ಸಮಸ್ಯೆಗಳೂ ಪರಿಹಾರವಾಗುವವು. ತೊಗಟೆಯಿಂದ ಹಲ್ಲುಜ್ಜುವ ಚೂರ್ಣ, ಮಹಾಖದಿರಾದಿ ವಟಿಗಳು ಆಯುರ್ವೇದ ಔಷಧ ಕ್ರಮದಲ್ಲಿ ತಯಾರಾಗುತ್ತವೆ.

ರೆಂಜೆಯ ಎಲೆ ಮತ್ತು ತೊಗಟೆಯಲ್ಲಿ ಎಥಾನಾಲಿಕ್, ಕ್ವೆರ್ಸಿಟೋಲ್, ಮನ್ನಿಟಿಲ್, ಹೆಂಟ್ರಿಯಾ ಕೊಂಟನ್ ಮುಂತಾದ ಹಲವಾರು ಕ್ಷಾರಾಭಗಳಿವೆ. ಹೂಗಳಲ್ಲಿ ಹಲವು ರಾಸಾಯನಿಕಗಳಿವೆ. ಬೀಜಗಳಲ್ಲಿ ತೈಲಾಂಶವಲ್ಲದೆ ರಂಜಕ, ಸುಣ್ಣಗಳಿದ್ದು ಇದನ್ನೊಂದು ಔಷಧವಾಗಿ ರೂಪಿಸಿವೆ. ಹಣ್ಣಿನ ಸೇವನೆ ಹಲ್ಲು ಮತ್ತು ಮೂಳೆಗಳ ಸವೆತ ತಡೆಯುತ್ತದೆ. ರೆಂಜೆಯ ವಿವಿಧ ಭಾಗಗಳಿಗೆ ಕಫಹಾರಿ, ಯಕೃತ್ ಸಮಸ್ಯೆಗಳ ನಿವಾರಕ ಗುಣವಿದೆ. ಹಣ್ಣು ಮತ್ತು ಹೂಗಳನ್ನು ಅರೆದು ಹಚ್ಚಿದರೆ ಗಾಯಗಳನ್ನು ಗುಣಪಡಿಸುತ್ತದೆ. ಹೂಗಳಿಂದ ಭಟ್ಟಿಯಿಳಿಸಿದ ತೈಲ ಕಾಮೋತ್ತೇಜಕವಾಗಿದೆ. ಜ್ವರ, ಕುತ್ತಿಗೆ ನೋವು, ತಲೆನೋವು ಶಮನಕ್ಕೆ ಒಣಗಿದ ಹೂಗಳಿಂದ ತಯಾರಿಸಿದ ನಶ್ಯದ ಸೇವನೆ ಸೂಕ್ತವೆನ್ನುತ್ತದೆ ಆಯುರ್ವೇದ. ಎಲೆಗಳ ಕಷಾಯ ಕಿವಿನೋವು ನಿವಾರಿಸಿದರೆ ಬೇರು ಜ್ವರನಿರೋಧಕವೆನಿಸಿದೆ.

ಕಫಹಾರಿ ಗುಣವಿರುವ ರೆಂಜೆಯ ಬೇರೆ ಬೇರೆ ಭಾಗಗಳು ದೀರ್ಘಕಾಲದ ಭೇದಿ, ಅಸ್ತಮಾ, ಗೊನೊರಿಯಾ, ಎದೆನೋವು, ಬಿಳಿಸೆರಗು, ಅತಿ ಋತುಸ್ರಾವಗಳನ್ನು ಗುಣಪಡಿಸುತ್ತವೆ. ಹಣ್ಣಿನಿಂದ ತಯಾರಿಸುವ ಕಷಾಯ ಬಾಣಂತಿಯರಿಗೆ ಹಾಗೂ ಋತುಮತಿಯರ ತೊಂದರೆಗೆ ಸೂಕ್ತ ಔಷಧ. ದೋರೆಗಾಯಿಯ ಕಷಾಯ ಮೂತ್ರವರ್ಧಕವಾದರೆ ಒಣಗಿದ ಹೂಗಳ ಕಷಾಯ ಹಲ್ಲಿನ ರಕ್ತಸ್ರಾವ ನಿವಾರಿಸುವುದು. ಬೀಜವು ಮಕ್ಕಳ ಮಲಬದ್ಧತೆ ನಿವಾರಣೆಗೆ ಸಹಕಾರಿ. ಇಂತಹ ಔಷಧ ಸಂಪತ್ತನ್ನು ನಮ್ಮ ಕೃಷಿಭೂಮಿಯಲ್ಲಿ ನೆರಳಿಗಾಗಿ ನೆಡುವುದು ಅದರ ವಂಶದ ಉಳಿವಿಗೆ ನೆರವಾಗುತ್ತದೆ.

ಪ.ರಾಮಕೃಷ್ಣ ಶಾಸ್ತ್ರಿ
9483352306

Share this: