Vydyaloka

ಪುರುಷ ಜನನೇಂದ್ರಿಯದ ಬಿಗಿ ಮುಂದೊಗಲು

1. ಶಿಶ್ನವು ಪುರುಷನ ಪ್ರಧಾನ ಹೊರಜನನೇಂದ್ರಿಯ.
2. ಶಿಶ್ನದ ತಲೆ ಅಥವಾ ಲಿಂಗಮಣಿ (ಗ್ಲಾನ್ಸ್ ಪೀನಿಸ್)
3. ಶಿಶ್ನದ ಹೊದಿಕೆ (ಚರ್ಮ, ಮುಂದೊಗಲು)
ಲಿಂಗಮಣಿಯ ತುದಿಯಲ್ಲಿ ಮೂತ್ರನಾಳದ ಹೊರರಂಧ್ರ ಇರುತ್ತದೆ. ಪುರುಷರಲ್ಲಿ ಮೂತ್ರ ಹಾಗೂ ವೀರ್ಯ ಹೊರಬರಲು ಇದೊಂದೇ ದಾರಿ. ಲಿಂಗಮಣಿ ಕಾಂಡವನ್ನು ಸೇರುವ ಜಾಗದ ಸುತ್ತ ಇರುವ ದಿಣ್ಣೆಗೆ ಶಿಶ್ನ ಮುಕುಟು (ಕರೋನಾ) ಎಂದು ಕರೆಯಲಾಗುತ್ತದೆ.
ಲಿಂಗಮಣಿಯು ಸಾಮಾನ್ಯವಾಗಿ ಹೊರಚರ್ಮದ ಹೊದಿಕೆಯನ್ನು ಹೊಂದಿರುತ್ತದೆ. ಇದನ್ನು ಮುಂದೊಗಲು (For skin or prepuce) ಎಂದು ಕರೆಯಲಾಗುತ್ತದೆ. ಈ ಹೊದಿಕೆಯು ಟೋಪಿಯ ರೀತಿಯಲ್ಲಿದ್ದು ಸುಲಭವಾಗಿ ಹಿಂದೆ ಮುಂದೆ ಚಲಿಸಬಹುದು. ಚಿಕ್ಕ ಹುಡುಗರಲ್ಲಿ ಚರ್ಮವನ್ನು ಸುಲಭವಾಗಿ ಹಿಂದೆ ಸರಿಸಲಾಗದೇ ಹೋಗಬಹುದು.
ಹದಿಹರೆಯದ ವಯಸ್ಸಿಗೆ ಬಂದಾಗ ಸುಲಭವಾಗಿ ಚರ್ಮವನ್ನು ಸರಿಸಲು ಸಾಧ್ಯವಾಗಬಹುದು. ವಯಸ್ಸಿಗೆ ಬಂದ ನಂತರವೂ ಚರ್ಮವನ್ನು ಹಿಂದೆ ಸರಿಸಲಾಗದಿದ್ದರೆ ಆಗ “ಶಿಶ್ನದ ಬಿಗಿಮುಂದೊಗಲು” ಇರುವುದು ಖಚಿತ ಆಗುತ್ತದೆ.
ಶಿಶ್ನದ ಹೊದಿಕೆ ಲಿಂಗಮಣಿಗೆ ರಕ್ಷಣೆಯನ್ನು ನೀಡುತ್ತದೆ. ಅಲ್ಲದೆ ಸಂಭೋಗ ಕ್ರಿಯೆಯ ಸಮಯದಲ್ಲಿ ಹಿಂದೆ ಮುಂದೆ ಸರಿಯುವ ಮುಖಾಂತರ ಸಹಾಯ ಮಾಡುತ್ತದೆ. ಅಲ್ಲದೆ ಹಸ್ತ ಮೈಥುನಕ್ಕೂ ಸಹಾಯ ಮಾಡುತ್ತದೆ.
ಕೆಲವು ಪುರುಷರಲ್ಲಿ ಮುಂದೊಗಲು ಹಿಂದೆ ಸರಿದು ಶಿಶ್ನ ಮುಕುಟದ ಹಿಂದೆ ಬಂದು ನಿಂತಿರುತ್ತದೆ. ಈ ಹೊದಿಕೆ ಒಳಭಾಗದಲ್ಲಿ ಒಂದು ರೀತಿಯ ದ್ರವ ಉತ್ಪಾದನೆ ಆಗುತ್ತದೆ. ಇದನ್ನು “ಲಿಂಗಮಣಿ ದ್ರವ ಅಥವಾ ಸ್ಮೆಗ್ಮಾ” ಎಂದು ಕರೆಯಲಾಗುತ್ತದೆ. ಈ ದ್ರವವನ್ನು ಪ್ರತಿದಿನ ತೊಳೆದು ಲಿಂಗಮಣಿಯನ್ನು ಶುಚಿಯಾಗಿ ಇಡಬೇಕು. ಇಲ್ಲದಿದ್ದರೆ ಈ ದ್ರವವು ಗಟ್ಟಿಯಾಗಿ ಕಲ್ಲುಗಳಂತಾಗಬಹುದು. ಮುಂದೊಗಲು ಬಿಗಿಯಾಗಿ ಲಿಂಗಮಣಿ ಅಂಟಿಹೋಗಬಹುದು. ನಂತರ ಉರಿ, ಊತ, ಸೋಂಕು ಉಂಟಾಗಿ ನೋವು ಬರಬಹುದು.
ಕೆಲವು ಪುರುಷರಲ್ಲಿ ಶಿಶ್ನದ ಮುಂದೊಗಲನ್ನು ಮುಸ್ಲಿಂ ಜನನಾಂಗದಲ್ಲಿ ಧಾರ್ಮಿಕ ಕಾರಣಗಳಿಗಾಗಿ ತೆಗೆದು ಹಾಕಲಾಗುತ್ತದೆ. ಇದನ್ನು ಧಾರ್ಮಿಕ ಸುನ್ನತಿ (Ritual Circumcision) ಎಂದು ಕರೆಯಲಾಗುತ್ತದೆ. ಶುಚಿತ್ವದ ದೃಷ್ಟಿಯಿಂದ ಇದು ಒಳ್ಳೆಯದೆಂದು ಕೆಲವರ ಅನಿಸಿಕೆ.
ಶಿಶ್ನದ ಬಿಗಿದೊಗಲು:
ಕೆಲವು ಯುವಕರಲ್ಲಿ ಹಾಗೂ ಪುರುಷರಲ್ಲಿ ಶಿಶ್ನದ ಮುಂದೊಗಲು ಬಹಳ ಬಿಗಿಯಾಗಿರುತ್ತದೆ. ಇದನ್ನು ಶಿಶ್ನದ ಬಿಗಿದೊಗಲು (Phimosis) ಎಂದು ಕರೆಯಲಾಗುತ್ತದೆ. ಇಂಥವರಲ್ಲಿ ಚರ್ಮವನ್ನು ಹಿಂದೆ ಸರಿಸಲಾಗುವುದಿಲ್ಲ. ಇದು ಶೇ.5 ರಿಂದ 10ರಷ್ಟು ಪುರುಷರಲ್ಲಿ ಈ ತೊಂದರೆ ಕಂಡುಬರುತ್ತದೆ. ಶಿಶ್ನದ ಬಿಗಿದೊಗಲು ಹುಟ್ಟಿದಾಗಿನಿಂದಲೂ ಇರಬಹುದು ಅಥವಾ ಮಧ್ಯದಲ್ಲೂ ಬರಬಹುದು.
ಶಿಶ್ನದ ಬಿಗಿದೊಗಲಿನಿಂದಾಗುವ ತೊಂದರೆಗಳು:
ಶಿಶ್ನದ ಬಿಗಿದೊಗಲು ಇರುವ ಪುರುಷರಲ್ಲಿ ಲಿಂಗಮಣಿ ದ್ರವವು ಒಳಗೇ ಉಳಿಯುತ್ತದೆ. ಜೊತೆಗೆ ಮೂತ್ರ, ವೀರ್ಯ ಸಹ ಸೇರಿಕೊಳ್ಳುತ್ತದೆ. ಇವೆಲ್ಲವೂ ಸೇರಿ ಗಟ್ಟಿಯಾದ ದ್ರವ ಉಂಟಾಗಿ ಊತ ಉಂಟಾಗಬಹುದು. ಇದನ್ನು ಜಾರಿದ ಬಿಗಿದೊಗಲು (ಪ್ಯಾರಾ ಪೈಮೋಸಿಸ್) ಎಂದು ಕರೆಯಲಾಗುತ್ತದೆ. ಇದು ಒಂದು ಬಹಳ ಆತಂಕಕಾರಿ ಬೆಳವಣಿಗೆ, ಇಂತÀಹವರಿಗೆ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿಸಿ ಸರಿಪಡಿಸಬೇಕಾಗುತ್ತದೆ.
ಚಿಕಿತ್ಸೆ
ಶಿಶ್ನದ ಬಿಗಿದೊಗಲನ್ನು ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬಹುದು. ಇದರಲ್ಲಿ ಎರಡು ರೀತಿಯ ಶಸ್ತ್ರ ಚಿಕಿತ್ಸೆಗಳು ಇವೆ.
1. ಬಿಗಿದೊಗಲನ್ನು ಸಡಿಲಿಸುವುದು (Prepusoplasty)
2. ಸುನ್ನತಿ ಶಸ್ತ್ರ ಚಿಕಿತ್ಸೆ (Circumcision)
ಬಿಗಿದೊಗಲನ್ನು ಸಡಿಲಿಸುವ ಶಸ್ತ್ರ ಚಿಕಿತ್ಸೆ (Prepusoplasty): ಈ ಶಸ್ತ್ರಚಿಕಿತ್ಸೆಯಲ್ಲಿ ಬಿಗಿದೊಗಲನ್ನು ಉದ್ದುದ್ದಕ್ಕೆ ಸೀಳಿ ಚರ್ಮದ ರಂಧ್ರವನ್ನು ಹಿಗ್ಗಿಸಲಾಗುವುದು. ಇದರಿಂದ ಚರ್ಮ ಹಿಂದೆ ಮುಂದೆ ಸುಲಭವಾಗಿ ಚಲಿಸಲು ಸಾಧ್ಯವಾಗುತ್ತದೆ.
ಇದು ಬಹಳ ಸುಲಭ ಹಾಗೂ ಸರಳ ಶಸ್ತ್ರಚಿಕಿತ್ಸೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಈ ಚಿಕಿತ್ಸೆಯನ್ನು ಮಾಡಬಹುದು. ಇದಾದ ನಂತರ ಕೆಲವೇ ಗಂಟೆಗಳಲ್ಲಿ ರೋಗಿಯು ಮನೆಗೆ ಹೋಗಬಹುದು. ಇದ ಅತ್ಯಂತ ಸರಳ ಸುಲಭ, ಶಸ್ತ್ರ ಚಿಕಿತ್ಸೆ.
ಸುನ್ನತಿ ಶಸ್ತ್ರಚಿಕಿತ್ಸೆ: ಈ ಶಸ್ತ್ರ ಚಿಕಿತ್ಸೆಯಲ್ಲಿ ಲಿಂಗಮಣಿಯು ಮುಂದೆ ಇರುವ ಹೆಚ್ಚುವರಿ ಚರ್ಮವನ್ನು ಕತ್ತರಿಸಿ ತೆಗೆದು ಹಾಕಲಾಗುವುದು ಉಳಿದ ಚರ್ಮದ ಎರಡೂ ತುದಿಗಳನ್ನು ಶಿಶ್ನ ಮುಕುಟದ ಹಿಂಭಾಗದಲ್ಲಿ ಹೊಲೆದು ಸೇರಿಸಲಾಗುವುದು. ಈ ಶಸ್ತ್ರಚಿಕಿತ್ಸೆಯನ್ನು ಪೂರ್ಣ ಅರೆವಳಿಕೆ ನೀಡಿ ಅಥವಾ ಸ್ಥಳೀಯ ಅರೆವಳಿಕೆ ನೀಡಿ ಮಾಡಬಹುದು. ಈ ಶಸ್ತ್ರ ಚಿಕಿತ್ಸೆ ಆದ ನಂತರ ರೋಗಿ ಮನೆಗೆ ಹೋಗಬಹುದು ಅಥವಾ ಒಂದು ದಿನ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ. ಮತ್ತು ಒಂದು ವಾರದವರೆಗೆ ಪ್ರತಿದಿನ ತಪ್ಪದೆ ಡ್ರೆಸ್ಸಿಂಗ್ ಮಾಡಿಸಿಕೊಳ್ಳಬೇಕು. ಗಾಯವು ವಾಸಿಯಾಗುವವರೆಗೂ ಸೋಂಕು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಒಂದು ತಿಂಗಳವರೆಗೆ ಸಂಭೋಗ ಮಾಡುವಂತಿಲ್ಲ ಮತ್ತು ಉದ್ರೇಕಗೊಳ್ಳದಂತೆ ನೋಡಿಕೊಳ್ಳಬೇಕು. ನೋವು ನಿವಾರಕ ಹಾಗೂ ರೋಗ ನಿರೋಧಕ ಮಾತ್ರೆಗಳನ್ನು ಮತ್ತು ವಿಟಮಿನ್ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಮೂತ್ರ ಮಾಡುವಾಗ ಮೂತ್ರವು ಗಾಯಕ್ಕೆ ತಾಕದಂತೆ ಎಚ್ಚರಿಕೆಯಿಂದ ಇರಬೇಕು.
ಅನುಕೂಲಗಳು:
ಸುನ್ನತಿ ಮಾಡಿಸಿಕೊಳ್ಳುವುದರಿಂದ ಶಿಶ್ನವನ್ನು ಹೆಚ್ಚು ಶುಚಿಯಾಗಿ ಇಡಲು ಸಾಧ್ಯ. ಶಿಶ್ನವಿನ ಕಾಯಿಲೆಗಳು, ಸೋಂಕುಗಳು, ಕ್ಯಾನ್ಸರ್ ಸಾಧ್ಯತೆಗಳು ಕಡಿಮೆ ಆಗುತ್ತದೆ. ಲಿಂಗಮಣಿಯ ಉದ್ರೇಕತೆ ಕಡಿಮೆ ಆಗುವುದರಿಂದ ಶೀಘ್ರ ಸ್ಖಲನ ಹತೋಟಿಗೆ ಬರುತ್ತದೆ.
ಅಡ್ಡ ಪರಿಣಾಮಗಳು:
1. ಸುನ್ನತಿ ಮಾಡುವುದರಿಂದ ಕೆಲವು ಪುರುಷರಲ್ಲಿ ಉದ್ರೇಕ ಕಡಿಮೆ ಆಗಬಹುದು. ಚರ್ಮವನ್ನು ಹಿಂದೆ ಮುಂದೆ ಚಲಿಸುವುದರಿಂದ ಬರುವ ಸುಖ, ಆನಂದ ಸಿಗದೇ ಹೋಗಬಹುದು.
2. ಶಿಶ್ನದ ಶುಚಿತ್ವ ಅತ್ಯಗತ್ಯ. ಬಿಗಿ ಮುಂದೊಗಲು ಇರುವ ಯುವಕರು ಹಾಗೂ ಪುರುಷರು ತಕ್ಷಣವೇ ತಜ್ಞ ವೈದ್ಯರನ್ನು ಕಂಡು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ. ಸಮಸ್ಯೆಯು ಪ್ರಾರಂಭದಲ್ಲಿರುವಾಗಲೇ ಪರಿಹಾರ ತೆಗೆದುಕೊಳ್ಳುವುದು ಸೂಕ್ತ.

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net

Share this: