ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ.
ಹೃದಯವು ಒಂದು ಅಂಗವಾಗಿದ್ದು, ಅದು ಜೀವದ ಮುಂದುವರಿಕೆಗಾಗಿ ತೀರಾ ಅನಿವಾರ್ಯವಾದ ಅಮ್ಲಜನಕ ಮತ್ತು ಇತರೆ ಪೋಷಕಾಂಶಗಳನ್ನು ಪೂರೈಸಲು ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ನಿರಂತರವಾಗಿ ಪಂಪ್ ಮಾಡುತ್ತಲೇ ಇರುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳ ಅಗತ್ಯತೆಗಳನ್ನು ಪೂರೈಸಲು ಎರಡು ಸಣ್ಣ ರಕ್ತ ನಾಳಗಳ ಮೇಳೆ ಹೃದಯ ಅವಲಂಬಿಸಿರುತ್ತದೆ. ಈ ರಕ್ತ ನಾಳಗಳನ್ನು ಕರೋನರಿ ಆರ್ಟರಿಗಳು ಎಂದು ಕರೆಯಲಾಗುತ್ತದೆ.
ವಯಸ್ಸಾಗುವ ಪ್ರಕ್ರಿಯೆ ಮುಂದುವರೆದಂತೆಲ್ಲಾ ಸಣ್ಣ ಪ್ರಮಾಣದ ಕೊಲೆಸ್ಟರಾಲ್ (ಕೊಬ್ಬು) ರಕ್ತ ನಾಳಗಳ ಗೋಡೆಗಳಲ್ಲಿ ಶೇಖರಣೆಯಾಗುತ್ತದೆ ಹಾಗೂ ಕಾಲಕ್ರಮೇಣ ನಾಳಗಳು ದಪ್ಪವಾಗಿ, ಗಟ್ಟಿಯಾಗಿ, ಕಿರಿದಾಗುತ್ತವೆ.
ಕೆಲವು ಅಂಶಗಳು ಆರಂಭದಲ್ಲಿ ಮತ್ತು ಕ್ಷಿಪ್ರವಾಗಿ ಈ ಬದಲಾವಣೆಗೆ ಕಾರಣವಾಗುತ್ತದೆ. ಈ ಅಂಶಗಳನ್ನು ಕರೋನರಿ ಅರ್ಟರಿ ರೋಗದ ರಿಸ್ಕ್ ಫ್ಯಾಕ್ಟರ್‍ಗಳು ಎಂದು ಕರೆಯಲಾಗುತ್ತದೆ.
ಹೃದಯಾಘಾತಕ್ಕೆ ಕಾರಣವಾಗುವ ಕೆಲವು ರಿಸ್ಕ್ ಫ್ಯಾಕ್ಟರ್‍ಗಳು :
ತಂಬಾಕು ಸೇವನೆ : ಧೂಮಪಾನಿಗಳು ಧೂಮಪಾನ ಮಾಡದವರಿಗಿಂತ ಹೃದಯಾಘಾತಕ್ಕೆ ತುತ್ತಾಗುವ ಗಂಡಾಂತರ 3 ರಿಂದ 6 ಪಟ್ಟು ಹೆಚ್ಚಾಗುತ್ತದೆ. ತಂಬಾಕಿನಲ್ಲಿರುವ ನಿಕೋಟಿನ್, ಕಾರ್ಬನ್ ಮೊನೊಕ್ಸೈಡ್ ಮತ್ತು ಇತರೆ ವಿಷಯುಕ್ತ ವಸ್ತುಗಳು ರಕ್ತ ನಾಳ ಗೋಡೆಗೆ ಹಾನಿ ಉಂಟು ಮಾಡುತ್ತವೆ, ರಕ್ತದೊತ್ತಡವನ್ನು ಹೆಚ್ಚಿಸುತ್ತೇವೆ ಹಾಗೂ ರಕ್ತದಲ್ಲಿ ಕೊಬ್ಬಿನ ಆಮ್ಲದ ಮಟ್ಟವನ್ನು ಅಧಿಕಗೊಳಿಸುತ್ತವೆ. ಇವೆಲ್ಲವೂ ಅತಿರೋಸ್‍ಸ್ಕೆಲೋರಿಸಿಸ್ (ರಕ್ತನಾಳಗಳನ್ನು ಕಠಿಣಗೊಳಿಸುವಿಕೆ) ಸಮಸ್ಯೆಗೆ ಕಾರಣವಾಗುತ್ತದೆ. ಇವು ಹೃದಯ ಬಡಿತವನ್ನು ಹೆಚ್ಚಿಸುತ್ತವೆ ಹಾಗೂ ಅಸಮರ್ಪಕ ಹೃದಯ ಬಡಿತಕ್ಕೆ ಎಡೆ ಮಾಡಿಕೊಟ್ಟು ಹಠಾತ್ ಸಾವು ಸಂಭವಿಸಲು ಕಾರಣವಾಗುತ್ತದೆ. ಪ್ಯಾಸಿವ್ ಸ್ಮೋಕರ್‍ಗಳಲ್ಲೂ (ನೀವು ಧೂಮಪಾನ ಮಾಡದಿದ್ದರೂ, ಧೂಮಪಾನಿಗಳ ಹೊರ ಸೂಸುವ ತಂಬಾಕಿನ ಹೊಗೆಯನ್ನು ಪಕ್ಕದಲ್ಲಿದ್ದು ಸೇವಿಸುವವರು) ಇದು ಅಷ್ಟೇ ಪ್ರಮಾಣದ ಹಾನಿ ಉಂಟು ಮಾಡುತ್ತದೆ ಎಂದು ಪರಿಗಣಿಸಲಾಗಿದೆ. ಬೀಡಿಗಳು, ಸಿಗಾರ್‍ಗಳು ಮತ್ತು ಪೈಪ್‍ಗಳನ್ನು ಸೇದುವುದು ಸಿಗರೇಟ್ ಸೇದಿದಷ್ಟೇ ಕೆಟ್ಟದ್ದು. ತಂಬಾಕು ಜಗಿಯುವುದು ಹಾಗೆಯೇ ನಶ್ಶೆ ಸೇವಿಸುವುದನ್ನು ಸಹ ಹಾನಿಕಾರಕವೆಂದು ಪರಿಗಣಿಸಲಗಿದೆ.
ಅಧಿಕ ಕೊಲೆಸ್ಟರಾಲ್ : ರಕ್ತದಲ್ಲಿ ಕೊಲೆಸ್ಟರಾಲ್ (ಕೊಬ್ಬು) ಪ್ರಮಾಣ ಹೆಚ್ಚಾಗುವುದರಿಂದ ಕರೋನರಿ ಆರ್ಟರಿಗಳು ಗಟ್ಟಿಯಾಗುತ್ತವೆ ಹಾಗೂ ಇದು ಹೃದಯಾಘಾತ ಸಂಭವಿಸುವ ಅವಕಾಶವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಒಟ್ಟು ಕೊಲೆಸ್ಟರಾಲ್ ಪ್ರಮಾಣ ಮುಖ್ಯವಾದರೂ ವಿವಿಧ ರೀತಿಯ ಕೊಲೆಸ್ಟರಾಲ್‍ನ ಮಟ್ಟವನ್ನು ತಿಳಿಯುವುದು ತುಂಬಾ ಮುಖ್ಯ. ಅತಿರೋಸ್‍ಸ್ಕೆಲೋರಿಸಿಸ್‍ಗೆ ಸಂಬಂಧಪಟ್ಟಂತೆ ಮುಖ್ಯವಾಗಿ ಎರಡು ರೀತಿಯ ಕೊಲೆಸ್ಟರಾಲ್‍ಗಳು ಇವೆ. ಅವುಗಳೆಂದರೆ ಎಲ್‍ಡಿಎಲ್ ಮತ್ತು ಎಚ್‍ಡಿಎಲ್ ಕೊಲೆಸ್ಟರಾಲ್‍ಗಳು.
ಎಲ್‍ಡಿಎಲ್ ಕೊಲೆಸ್ಟರಾಲ್ : ಇದನ್ನು ಕೆಟ್ಟ ಕೊಲೆಸ್ಟರಾಲ್ ಎಂದು ಕರೆಯಲಾಗುತ್ತದೆ. ಪ್ರಾಣಿ ಮೂಲಗಳಿಂದ ಪಡೆದ ಕೊಬ್ಬಿನ ಪದಾರ್ಥಗಳ ವಿಪರೀತ ಸೇವನೆಯಿಂದ ಎಲ್‍ಡಿಎಲ್ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುತ್ತದೆ. ಪ್ರಾಣಿ ಜನ್ಯ ಕೊಬ್ಬಿನಂಶದ ಆಹಾರ ಪದಾರ್ಥಗಳೆಂದರೆ ಹಾಲಿನ ಕೆನೆ, ಬೆಣ್ಣೆ, ತುಪ್ಪ, ಮೊಸರು, ಐಸ್ ಕ್ರಿಮ್, ಮೊಟ್ಟೆಯ ಹಳದಿ ಭಾಗ, ಲಿವರ್, ಬ್ರೇನ್ ಮತ್ತು ಕಿಡ್ನಿಗಳಂಥ ಅಂಗಾಂಗ ಮಾಂಸಗಳು, ಸಿಗಡಿ ಮತ್ತು ಏಡಿಯಂಥ ಶೆಲ್ ಫಿಶ್‍ಗಳು. ಕೊಬ್ಬರಿ ಎಣ್ಣೆಯಲ್ಲೂ ಅಧಿಕ ಪ್ರಮಾಣದ ಕೊಬ್ಬಿನಂಶದ ಪದಾರ್ಥಗಳಿರುತ್ತವೆ. ಏಳ್ಳೆಣ್ಣೆ ಮತ್ತು ಸೂರ್ಯಕಾಂತಿ ಎಣ್ಣಿಗಳು ಅಧಿಕ ಪ್ರಮಾಣದ ಅನ್‍ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‍ಗಳಿದ್ದು, ಇದು ಬಳಕೆ ಆಯ್ಕೆಗೆ ಸೂಕ್ತ.
ಎಚ್‍ಡಿಎಲ್ ಕೊಲೆಸ್ಟರಾಲ್ : ಇದು ಆರೋಗ್ಯಕ್ಕೆ ಪೂರಕವಾದ ಒಳ್ಳೆಯ ಕೊಲೆಸ್ಟರಾಲ್. ಎಚ್‍ಡಿಎಲ್ ಕೊಲೆಸ್ಟರಾಲ್‍ನನ್ನು ನಿಯಮಿತ ದೈಹಿಕ ವ್ಯಾಯಾಮದ ಮೂಲಕ ಹೆಚ್ಚಿಸಿಕೊಳ್ಳಬಹುದು. ಎಚ್‍ಡಿಎಲ್ ಕೊಲೆಸ್ಟರಾಲ್ ಮಟ್ಟದ ಹೆಚ್ಚಳವು ಹೃದಯವನ್ನು ರಕ್ಷಿಸುತ್ತದೆ.
ಅಧಿಕ ಬ್ಲಡ್ ಷುಗರ್ : ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆ ಪ್ರಮಾಣ ಅತಿರೋಸ್‍ಸ್ಕೆಲೋರಿಸಿಸ್ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಎಂದು ದೃಢಪಟ್ಟಿದೆ. ಇದರೊಂದಿಗೆ ಹತೋಟಿ ಇಲ್ಲದ ಡಯಾಬಿಟಿಸ್ ಅತಿಯಾದ ತೂಕ ಮತ್ತು ಅಧಿಕ ಕೊಲೆಸ್ಟರಾಲ್‍ಗೆ ಎಡೆ ಮಾಡಿಕೊಡುತ್ತದೆ. ಇವೆಲ್ಲವೂ ಹೃದಯಾಘಾತ ಗಂಡಾಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಅಧಿಕ ರಕ್ತದೊತ್ತಡ : ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ. ಇದು ಕೇವಲ ಕರೋನರಿ ರಕ್ತ ನಾಳಗಳ ಮೇಲೆ ಮಾತ್ರ ದುಷ್ಪರಿಣಾಮ ಉಂಟು ಮಾಡುವುದಲ್ಲದೇ ಮೆದುಳಿನ ಹಾಗೂ ಮೂತ್ರಪಿಂಡಗಳ ರಕ್ತ ನಾಳಗಳಿಗೂ(ಇದು ಪಾಶ್ರ್ವವಾಯು ಮತ್ತು ಕಿಡ್ನಿ ವೈಫ್ಯಲಕ್ಕೆ ಎಡೆ ಮಾಡಿಕೊಡುತ್ತದೆ). ತೊಂದರೆ ನೀಡುತ್ತದೆ. ಅಧಿಕ ರಕ್ತದೊತ್ತಡದಿಂದ ಹೃದಯ ದೊಡ್ಡದಾಗಿ ಹಾರ್ಟ್ ಆಟ್ಯಾಕ್‍ಗೆ ಕಾರಣವಾಗುತ್ತದೆ.
ಅಧಿಕ ತೂಕ : ಅಧಿಕ ತೂಕ ಹೊಂದಿರುವ ವ್ಯಕ್ತಿಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ. ಸಮೃದ್ದ ಆಹಾರಗಳ (ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರ ಪದಾರ್ಥಗಳು) ಸೇವನೆ ಹಾಗೂ ವ್ಯಾಯಾಮದ ಕೊರತೆಯಿಂದ ಸಾಮಾನ್ಯವಾಗಿ ತೂಕ ಅತಿಯಾಗಿ ಹೆಚ್ಚಾಗುತ್ತದೆ. ಇದರಿಂದ ರಕ್ತದಲ್ಲಿನ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗಿ ಅತಿರೋಸ್‍ಸ್ಕೆಲೋರಿಸಿಸ್ ಗಂಡಾಂತರವನ್ನು ಅಧಿಕಗೊಳಿಸುತ್ತದೆ.
ಐಷಾರಾಮಿ ಅಭ್ಯಾಸಗಳು : ಎಲ್ಲರಿಗೂ ಚೆನ್ನಾಗಿ ತಿಳಿದಿರುವಂತೆ ದೈಹಿಕವಾಗಿ ಕ್ರಿಯಾಶೀಲವಾಗಿರುವ ಅಥ್ಲೇಟ್‍ಗಳಿಗೆ ಹೃದಯಾಘಾತವಾಗುವ ಸಂಭವ ತೀರಾ ಕಡಿಮೆ. ಅದೇ ರೀತಿ ದೈಹಿಕ ಜಡತ್ವದ ಐಷಾರಾಮಿ ವ್ಯಕ್ತಿ ಹಾರ್ಟ್ ಆಟ್ಯಾಕ್ ಗಂಡಾಂತರಕ್ಕೆ ಒಳಗಾಗುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ. ಐಷಾರಾಮಿ ಅಭ್ಯಾಸಗಳು ಮತ್ತು ಸ್ಥೂಲಕಾಯ, ಬೊಜ್ಜು ಹಾಗೂ ಕೊಬ್ಬನ್ನು ಕರಗಿಸುವಲ್ಲಿ ಕಡಿಮೆ ಸಾಮಥ್ರ್ಯಕ್ಕೆ ಕಾರಣವಾಗಿ ಅಧಿಕ ಕೊಲೆಸ್ಟರಾಲ್‍ಗೆ ಎಡೆ ಮಾಡಿಕೊಡುತ್ತದೆ.
ಉದ್ವೇಗದ ಒತ್ತಡ ಮತ್ತು ಆಯಾಸ: ಉದ್ವೇಗದಿಂದ ಉಂಟಾಗುವ ಒತ್ತಡ ಮತ್ತು ಆಯಾಸವು ಅತಿರೋಸ್‍ಸ್ಕಲೋರಿಸಿಸ್ ಗಂಡಾಂತರವನ್ನು ಹೆಚ್ಚಿಸುತ್ತದೆ. ಯಾವಾಗಲೂ ಉದ್ವೇಗ, ಒತ್ತಡ, ಕೋಪ, ಆವೇಶಕ್ಕೆ ಒಳಗಾಗುವ ವ್ಯಕ್ತಿಗಳು ಹಾಗೂ ಆತುರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ತವಕಿಸುವ ಮಂದಿ ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂಥ ವ್ಯಕ್ತಿಗಳನ್ನು ನಡವಳಿಕೆ ನಮೂನೆ ರೀತಿಯವರು ಎಂದು ಕರೆಯಲಾಗುತ್ತದೆ. ಶಾಂತ ಸ್ವಭಾವದವರು, ಪ್ರಶಾಂತ ಚಿತ್ತ ಗುಣದವರು, ಮಾನಸಿಕವಾಗಿ ದೃಢವಾಗಿರುವವರು ಹಾಗೂ ತಾಳ್ಮೆಯಿಂದ ಸಮಸ್ಯೆಗಳನ್ನು ನಿಭಾಯಿಸುವವರು ದೀರ್ಘಾಯುಷಿಗಳಾಗಿರುತ್ತಾರೆ. ಮಹಿಳೆಯರಲ್ಲಿ ಮಾಸಿಕ ಋತು ಕೊನೆಗೊಳ್ಳುವ ತನಕ (ಮೆನೊಪಾಸ್) ಅವರಿಗೆ ಸಾಮಾನ್ಯವಾಗಿ ಹೃದಯಾಘಾತದಿಂದ ರಕ್ಷಣೆ ದೊರೆಯುತ್ತದೆ. ಆದರೆ, ಮಹಿಳೆಯರು ದೀರ್ಘಕಾಲ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಿದರೆ ಮತ್ತು ತಂಬಾಕು ಉಪಯೋಗಿಸಿದರೆ ಈ ರಕ್ಷಣೆ ಕೊನೆಗೊಳ್ಳುತ್ತದೆ.
ಅನುವಂಶಿಯ ಅಂಶಗಳು: ಕುಟುಂಬದ ಯಾರಾದರೂ ಒಬ್ಬರಿಗೆ ಯೌವ್ವನದಲ್ಲಿ ಹೃದಯಾಘಾತವಾಗಿದ್ದರೆ ಆ ಕುಟಂಬದಲ್ಲಿ ಯಾವುದೇ ವ್ಯಕ್ತಿ ಹಾರ್ಟ್ ಆಟ್ಯಾಕ್‍ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂಥ ಗಂಡಾಂತರದ ಅಧಿಕ ಸಾಧ್ಯತೆ ಇರುವ ಮಂದಿ ಧೂಮಪಾನ, ಐಷಾರಾಮಿ ಅಭ್ಯಾಸ ಹಾಗೂ ಅಧಿಕ ಪ್ರಮಾಣದ ಕೊಬ್ಬಿನಂಶವಿರುವ ಆಹಾರ ಪದಾರ್ಥಗಳ ಸೇವನೆಯಂಥ ಪರಿವರ್ತಿತ ಗಂಡಾಂತರಕಾರಿ ಅಂಶಗಳನ್ನು ತಪ್ಪಿಸಬೇಕಾಗುತ್ತದೆ. ಇಂಥ ವ್ಯಕ್ತಿಗಳು ಆರಂಭಿಕ ವರ್ಷದಲ್ಲೇ ಅಗಾಗ ತಪಾಸಣೆಗೆ ಒಳಗಾಗಬೇಕು.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com