Vydyaloka

ಫಿಸಿಯೋಥೆರಪಿ:ಆರೋಗ್ಯ ಹಾಗೂ ಸದೃಢತೆಗೆ ಯಾವ ರೀತಿಯ ವ್ಯಾಯಾಮ ಮಾಡಬೇಕು?

ಆರೋಗ್ಯದ ಬಗ್ಗೆ ಅರಿವು ಸಾರಲೆಂದೇ ಫಿಸಿಯೋಥೆರಪಿಸ್ಟ್‌ಗಳ ಸಂಘ “ವರ್ಲ್ದ್ ಕಾನ್ಫೆಡರೇಶನ್ ಫಾರ್ ಫಿಸಿಕಲ್ ಥೆರಪಿಸ್ಟ್” (ಡಬ್ಲ್ಯು.ಸಿ.ಪಿ.ಟಿ) 1996ರಲ್ಲಿ ಸ್ಥಾಪಿಸಲಾಯಿತು.  ಆರೋಗ್ಯಕರವಾಗಿ ಇರಬೇಕೆಂದರೆ ಜೀವನದ ಕೊನೆಯವರೆಗೂ ಜೀವನಶೈಲಿ ಚಟುವಟಿಕೆಗಳಿಂದ ಕೂಡಿರಬೇಕು ಎಂಬುದು ಈ ಸಂಸ್ಥೆ ನೀಡಿರುವ ಕಿವಿಮಾತು.

ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಎಷ್ಟೇ ಸಂಪತ್ತುಳ್ಳುವರಾಗಿರಲಿ, ಅವರ ಆರೋಗ್ಯವೇ ಕೈಕೊಟ್ಟರೆ ಆ ಸಂಪತ್ತೆಲ್ಲ ಯಾವ ಮೂಲೆಗೆ? ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಲೇ ಇರುತ್ತೇವೆ, ಅಸಂಬದ್ಧ ಜೀವನಶೈಲಿಯನ್ನು ನಡೆಸುತ್ತಿರುತ್ತೇವೆ.ಆರೋಗ್ಯದಿಂದಿರಲಿ, ಅಥವಾ ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕೀಲುನೋವು, ಬೆನ್ನುನೋವು ಮತ್ತಾವುದೇ ರೋಗದಿಂದ ಬಳಲುತ್ತಿರಲಿ ಅವರು ಯಾವಾಗಲೂ ಚಲನಶೀಲರಾಗಿರಬೇಕು, ಚಟುವಟಿಕೆಯಿಂದಿರಬೇಕು ಮತ್ತು ನಿಯಮಿತವಾಗಿ ಮತ್ತು ನಿರಂತರವಾಗಿ ವ್ಯಾಯಾಮ ಮಾಡುತ್ತಿರಬೇಕು. ಯಾವ ಜನರು ಕ್ರಿಯಾತ್ಮಕರಾಗಿರುತ್ತಾರೋ ಅಂಥವರು ಹೆಚ್ಚಾಗಿ ಸಂಭಾವ್ಯ ಕಾರ್ಯಪ್ರವೃತ್ತರಾಗಿ, ಕ್ರಿಯಾಸಕ್ತರಾಗಿ, ಮತ್ತು ಆನಂದದಿಂದ ಯಾರ ನೆರವಿಲ್ಲದೆ ಬದುಕುವರು. ಅವರ ಜೀವನವು ಸಮರ್ಥ ಜೀವನ.

ಆಲಸ್ಯತನ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಅದು ಹೃದಯ ಕಾಯಿಲೆ, ಲಕ್ವಾ (ಸ್ಟ್ರೋಕ್), ಮಧುಮೇಹ ಮತ್ತು ಕ್ಯಾನ್ಸರ್ ರೋಗಗಳಿಗೆ ಕಾರಣವಾಗುತ್ತಿದೆ. ಕ್ರಿಯಾತ್ಮಕರಾಗಿ ಇರಲು ಎಂದೂ ತುಂಬಾ ಕಿರಿಯರು ಅಥವಾ ಹಿರಿಯರು ಎಂದು ಭಾವಿಸಬೇಕಿಲ್ಲ – ಕೇವಲ ಒಂದು ಗಂಟೆ ಮಿತವಾದ ವ್ಯಾಯಾಮ ದಿನನಿತ್ಯ ಮಾಡಿದ್ದಲ್ಲಿ ನಿಜವಾದ ಬದಲಾವಣೆ ಕಾಣಬಹುದು.

ಯಾವ ರೀತಿಯ ವ್ಯಾಯಾಮ ಮಾಡಬೇಕು?

ಸಂಶೋಧನೆ ತಿಳಿಸುವುದೆನೆಂದರೆ, ಪ್ರತಿಯೊಬ್ಬರೂ ಎಲ್ಲಾ ದಿನಗಳಲ್ಲಿ ಸುಮಾರು 5 ಕಿ.ಮೀ. ವೇಗದಲ್ಲಿ ಒಂದು ಗಂಟೆ (3-4 ಮೈಲಿ) ನಡೆದರೆ  ಪ್ರತಿವರ್ಷ ಸುಮಾರು ಶೇ.30 ರಷ್ಟು ಮರಣವನ್ನು ಮುಂದೂಡಬಹುದು ಅಥವಾ ಹೃದಯ ಕಾಯಿಲೆ ಮತ್ತು ಲಕ್ವಾ ಕಾಯಿಲೆಗಳಿಂದ ದೂರವಿರಬಹುದು.

ಫಿಸಿಯೋಥೆರಪಿ ಆರೋಗ್ಯವಂತರಿಗೂ ಸೂಕ್ತ, ರೋಗಿಗಳಿಗೂ ಉಪಯುಕ್ತ. ವ್ಯಾಯಾಮ ಕೂಡ ಫಿಸಿಯೋಥೆರಪಿಯ ಒಂದು ಭಾಗ. ದಿನನಿತ್ಯದ ನಿಯಮಿತ ವ್ಯಾಯಾಮದಿಂದ ಮುಂಬರುವ ಎಷ್ಟೋ ಕಾಯಿಲೆಗಳನ್ನು ತಡೆಗಟ್ಟಬಹುದು. ಕಾಯಿಲೆ ಇದ್ದವರಿಗೂ ಕೂಡ ನಾನಾ ವಿಧದ ಫಿಸಿಯೋಥೆರಪಿಗಳು ಇವೆ. ಪ್ರಮುಖವಾಗಿ ಫಿಸಿಯೋಥೆರಪಿಸ್ಟ್ ಗಳ ಬಳಿ ಬರುವುದು ಪಕ್ಷಾಘಾತ (ಸ್ಟ್ರೋಕ್), ಪಾರ್ಕಿಂಸನ್ ಡಿಸೀಸ್ (ಕಂಪ ವಾತ), ಆರ್ಥ್ರೈಟಿಸ್ (ಆಮವಾತ / ಸಂಧಿವಾತ / ರಕ್ತ ವಾತ). ಸ್ಪಾಂಡೈಲೋಸಿಸ್ (ಕುತ್ತಿಗೆ ಹಾಗೂ ಬೆನ್ನು ಮೂಳೆ ಸವೆತ), ಡಿಸ್ಕ್ ಪ್ರೊಲಾಪ್ಸ್ (ಬೆನ್ನು ಮೂಳೆಯ ಡಿಸ್ಕ್ ಜಾರಿರುವುದು), ಫ್ರೋಜನ್ ಷೋಲ್ಡರ್ (ಭುಜದ ಭಿಗಿತ), ಕಾರ್ಪಲ್ ಟನಲ್ ಸಿಂಡ್ರೋಮ್ (ಕೈ ನರಗಳ ಸಮಸ್ಯೆ), ಮಕ್ಕಳಲ್ಲಿ ಕುಗ್ಗಿದ ಬೆಳವಣಿಗೆ ಹಾಗೂ ಬುದ್ಧಿಮಾಂದ್ಯತೆ (ಸೆರೆಬ್ರಲ್ ಪಾಲ್ಸಿ), ಅಪಘಾತದಿಂದ ದೇಹದ ನರದೌರ್ಬಲ್ಯ (ಟ್ರಾಮಾಟಿಕ್ ಪ್ಯಾರಾಪ್ಲೇಜಿಯಾ), ಮೂಳೆ ಮುರಿತದ ನಂತರ ಉಂಟಾಗುವ ಸ್ನಾಯು ಭಿಗಿತ ಹಾಗೂ ಗಂಟು ನೋವು (ಪೋಸ್ಟ್ ಫ್ರಾಕ್ಚರ್ ಕಾಂಟ್ರಾಕ್ಚರ್ಸ್), ನ್ಯುಮೋನಿಯಾ, ಶ್ವಾಸಕೋಶದ ಇತರೆ ತೊಂದರೆಗಳು – ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಫಿಸಿಯೋಥೆರಪಿ ಬಹಳ ಉಪಯುಕ್ತ.

ಸಾಮಾನ್ಯವಾಗಿ ಜನರು ತಿಳಿದಿರುವ ಹಾಗೆ ಫಿಸಿಯೋಥೆರಪಿ ಎಂದರೆ ಕೇವಲ ವ್ಯಾಯಾಮ ಚಿಕಿತ್ಸೆ ಅಲ್ಲ. ವಿಧವಿಧದ ಕಾಯಿಲೆಗಳಿಗೆ ಅನೇಕ ಚಿಕಿತ್ಸಾ ಕ್ರಮಗಳು ಇಂತಿವೆ – ಅಲ್ಟ್ರಾಸೌಂಡ್ ಥೆರಪಿ, ಐ.ಎಫ್.ಟಿ (ಕರೆಂಟ್ ಥೆರಪಿ), ಟ್ರ್ಯಾಕ್ಷನ್, ಲೇಸರ್ ಥೆರಪಿ, ಅಲ್ಟ್ರಾವಯೊಲೆಟ್ ಥೆರಪಿ, ಇನ್ಫ್ರಾರೆಡ್ ಥೆರಪಿ, ಹಾಟ್ ವ್ಯಾಕ್ಸ್ ಥೆರಪಿ, ಡ್ರೈ ನೀಡ್ಲಿಂಗ್ ಥೆರಪಿ, ಸ್ಟಿಮ್ಯುಲೇಷನ್ ಥೆರಪಿ, ಚೆಸ್ಟ್ ಫಿಸಿಯೋಥೆರಪಿ ಮುಂತಾದ ಪರಿಣಾಮಕಾರಿ ಚಿಕಿತ್ಸೆಗಳು ಇವೆ. ಯಾವುದೇ ದೇಹದ ತೊಂದರೆಗಳಿಂದ ವ್ಯಾಯಾಮ ಮಾಡಲು ತಪ್ಪಿಸುತ್ತಿದ್ದೀರ ಎಂದು ನೀವು ಭಾವಿಸಿದ್ದಲ್ಲಿ, ಫಿಸಿಯೋಥೆರಪಿ ಡಾಕ್ಟರ್ ಬಳಿ ಕೇಳಿ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಿ. ಮತ್ತು ಈ ವ್ಯಾಯಾಮದ ಟೈಂ-ಟೇಬಲ್  ದಿನಚರಿಯಲ್ಲಿ ಮರೆಯದೆ ಸೇರಿಸಿಕೊಳ್ಳಿರಿ.

ಡಾ.ನಿರುಪಮಾ ನಿತಿನ್ ಫಿಸಿಯೋಥೆರಪಿಸ್ಟ್‌
ದಿವಿಶಾ ಅರ್ಥಟಿಸ್‌ ಸೆಂಟರ್‌, ನಂ. 500/ಎ, 1ನೇ ಜಿ ಅಡ್ಡರಸ್ತೆ, 8ನೇ ಮುಖ್ಯರಸ್ತೆ,

4 ನೇ ಬ್ಲಾಕ್, 3 ನೇ ಹಂತ, ಬಸವೇಶ್ವರನಗರ, ಬೆಂಗಳೂರು – 560079
ಮೊ. : 9964081945/8861238279

Share this: