Vydyaloka

ಪಂಚಕರ್ಮ ಚಿಕಿತ್ಸೆ ಯಾತಕ್ಕಾಗಿ?

ಪಂಚಕರ್ಮ ಚಿಕಿತ್ಸೆ ಅನುಸರಿಸುವುದು ದೀರ್ಘ ಆರೋಗ್ಯದ ಕೀಲಿ ಕೈ. ವೇದಜ್ಞಾನದ ಅಧಾರದಲ್ಲಿ ವಿವರಿಸಲ್ಪಟ್ಟ ಪಂಚಕರ್ಮ ಚಿಕಿತ್ಸೆ ಪ್ರತಿಯೊಬ್ಬರೂ ಪ್ರತೀ ವರ್ಷಕ್ಕೊಮ್ಮೆ ಸಾಧ್ಯವಾಗದಿದ್ದರೂ ಯಾವಾಗಲಾದರೊಮ್ಮೆ  ಪಡೆಯುವುದು ಅತಿ ಸೂಕ್ತ.

ಆಯುರ್ವೇದದ ಪ್ರಕಾರ ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳು ಶರೀರದಲ್ಲಿ ಸಮತೋಲನದಲ್ಲಿದ್ದಾಗ ಆರೋಗ್ಯವನ್ನೂ, ದೋಷಗಳು ಸಮಸ್ಥಿತಿಯಲ್ಲಿ ಇಲ್ಲದೇ ಇದ್ದಾಗ ರೋಗವನ್ನೂ ಉಂಟುಮಾಡುವುದು. ನಮ್ಮ ಆಹಾರ, ವ್ಯಾಯಾಮ, ವೃತ್ತಿ, ವಯಸ್ಸು, ಜೀರ್ಣಕ್ರಿಯೆ, ಮಾನಸಿಕ ಸ್ಥಿತಿ, ಋತು, ಪರಿಸರ ಹಾಗೂ ಹುಟ್ಟಿನಿಂದ ಬಂದಂತಹ ಪ್ರಕೃತಿ ಇತ್ಯಾದಿ ಹಲವು ಕಾರಣಗಳು ದೋಷಗಳ ಸ್ಥಿತಿಯನ್ನು ನಿರ್ಧರಿಸುವುದು. ಈ ರೀತಿ ವಿಷಮಗೊಂಡ ದೋಷಗಳು ಶರೀರದ ವಿವಿಧ ಅಂಗಗಳಲ್ಲಿ ತೊಂದರೆಯನ್ನುಂಟುಮಾಡಿ ಬೇರೆ ಬೇರೆ ರೀತಿಯ ವ್ಯಾಧಿಗಳನ್ನು ಉಂಟುಮಾಡುವುದು.

ಆಯುರ್ವೇದ ಚಿಕಿತ್ಸೆ ಇತರ ಎಲ್ಲಾ ಪದ್ದತಿಗಳಿಂದ ಚಿಕಿತ್ಸಾ ದೃಷ್ಟಿಯಲ್ಲಿ ಭಿನ್ನವಾಗಿದ್ದು ಕೇವಲ ರೋಗಕ್ಕೆ ಚಿಕಿತ್ಸೆ ನೀಡುವ ಬದಲು ರೋಗದ ಕಾರಣ, ಹಾನಿಗೊಂಡ ಭಾಗ ಅಥವಾ ಅಂಗ, ರೋಗ, ರೋಗ ನಡೆದು ಬಂದ ಹಾದಿ (patho physiology) ದೋಷ ಧಾತು, ಮಲಗಳ ಸ್ಥಿತಿ, ರೋಗಿಯ ಸ್ಥಿತಿ ಇತ್ಯಾದಿ ಹಲವು ಮಾನದಂಡಗಳನ್ನು ಅಭ್ಯಸಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ರೀತಿ ರೋಗವನ್ನು ಮೂಲದಿಂದಲೇ ಗುಣಪಡಿಸುವ ಆಯುರ್ವೇದ ಚಿಕಿತ್ಸೆ ಇಂದಿಗೂ ಚಿಕಿತ್ಸೆಯಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.

ಪಂಚಕರ್ಮ ಚಿಕಿತ್ಸೆಯ ಉಪಯೋಗ ಏನು?

ನಮ್ಮ ದೈನಂದಿನ ಜೀವನ ಕ್ರಮದಲ್ಲಿ ವಿವಿಧ ಆಹಾರದ ಕಾರಣದಿಂದ, ವ್ಯಾಯಾಮವಿಲ್ಲದೇ ಇರುವುದರಿಂದ, ಅತಿಯಾದ ವ್ಯಾಯಾಮ ಮಾಡುವುದರಿಂದ, ಅತಿಯಾದ ಶಾರೀರಿಕ ಹಾಗೂ ಮಾನಸಿಕ ಒತ್ತಡದ ಕಾರಣದಿಂದ, ಹಾಗೂ ಶರೀರದ ಚಯಾಪಚಯ ಕ್ರಿಯೆಯ ಸಂದರ್ಭದಲ್ಲಿ, ಆಹಾರ ಜೀರ್ಣಕ್ರಿಯೆಯ ಸಂದರ್ಭದಲ್ಲಿ ಶರೀರದಲ್ಲಿ ನಿರಂತರ ಕಶ್ಮಲಗಳು ಉಂಟಾಗುತ್ತಿರುತ್ತವೆ. ಅದೇ ರೀತಿ ಜೀರ್ಣ ಕ್ರಿಯೆಯಲ್ಲಿ ಉಂಟಾಗುವ ಬಹುತೇಕ ಕಶ್ಮಲಗಳು ಮಲದ ಮುಖಾಂತರ, ಚಯಾಪಚಯ ಕ್ರಿಯೆಯಲ್ಲುಂಟಾಗುವ ಕಶ್ಮಲ (metabolic waste) ಬಹುತೇಕ ಮೂತ್ರ ಮಾರ್ಗದ ಮುಖಾಂತರ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಮಲ, ಬೆವರು, ಉಸಿರು, ಜೊಲ್ಲು, ಮೂಗಿನ ಸ್ರಾವಗಳ ಮುಖಾಂತರ ನಿರಂತರವಾಗಿ ಶರೀರದಿಂದ ಹೊರಹಾಕಲ್ಪಡುತ್ತವೆ.ಸಮತೋಲಿತ ಆಹಾರ ಕ್ರಮ, ಉತ್ತಮ ಜೀರ್ಣ ಕ್ರಿಯೆ, ಕ್ರಮಬದ್ದ ಮಲಮೂತ್ರ ವಿಸರ್ಜನೆ, ಸಮತೋಲಿತ ವ್ಯಾಯಾಮ, ಉತ್ತಮ ಹಾಗೂ ಉಲ್ಲಾಸ ಭರಿತ ಮಾನಸಿಕ ಸ್ಥಿತಿ ಇದ್ದಾಗ ಈ ಕಶ್ಮಲಗಳು ಬಹುತೇಕ ಪೂರ್ಣ ಪ್ರಮಾಣದಲ್ಲಿ ಶರೀರದಿಂದ ಹೊರದೂಡಲ್ಪಡುತ್ತವೆ ಹಾಗೂ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.

ಆದರೆ ನಿರಂತರ ಕ್ರಮಬದ್ದ ಜೀವನ ನಡೆಸುವುದು ಇಂದಿನ ಆಧುನಿಕ ಜೀವನ ಕ್ರಮದಲ್ಲಿ ಬಹಳಷ್ಟು ಜನರಿಗೆ ಕಷ್ಟವೇ ಸರಿ ಹಾಗೂ ವಿವಿಧ ಋತುಗಳಲ್ಲಿ ಹವಾ ವೈಪರೀತ್ಯದಿಂದ ಕ್ರಮಬದ್ದವಾದ ಜೀವನ ಕ್ರಮವಿದ್ದರೂ ಶರೀರದಲ್ಲಿ ಕಶ್ಮಲಗಳು ಅಧಿಕವಾಗಿ ಶೇಖರಣೆಗೊಳ್ಳುವ ಸಾಧ್ಯತೆ ಜಾಸ್ತಿ. ಅನುವಂಶಿಕ ಕಾರಣದಿಂದಲೂ ಕಶ್ಮಲಗಳು ಅಧಿಕವಾಗಿ ಶರೀರದಲ್ಲಿ ಶೇಖರಣೆಗೊಳ್ಳಬಹುದು ಹಾಗೂ ವಿವಿಧ ರೋಗಗಳ ಉತ್ಪತ್ತಿಗೆ ಕಾರಣವಾಗಬಹುದು. ನಮ್ಮ ಪ್ರಾಚೀನ ಋಷಿಮುನಿಗಳು ಈ ರೀತಿಯಾಗಿ ಶರೀರದಲ್ಲಿ ರೋಗಗಳು ಉಂಟಾಗುತ್ತವೆ ಎಂದು ಸಾವಿರಾರು ವರ್ಷಗಳ ಮೊದಲೇ ತಿಳಿದಿದ್ದರು ಹಾಗೂ ಅಂತಹ ರೋಗವನ್ನು ತಡೆಗಟ್ಟುವ ವಿಧಾನ ಮತ್ತು ರೋಗಿಗಳಿಗೆ ರೋಗಗಳನ್ನು ಮೂಲದಿಂದಲೇ ಕಿತ್ತೆಸೆಯುವ ವಿಧಾನವನ್ನು ವೇದಗಳ ಆಧಾರದಿಂದ ಆಯುರ್ವೇದ ಗ್ರಂಥಗಳಲ್ಲಿ ತಿಳಿಸಿರುತ್ತಾರೆ. ಆ ಚಿಕಿತ್ಸೆಗಳಲ್ಲಿ ಒಂದು ಮುಖ್ಯ ವಿಧಾನವೇ ಪಂಚಕರ್ಮ ಚಿಕಿತ್ಸೆ.

ಚರಕ ಪಂಚಕರ್ಮ ಚಿಕಿತ್ಸೆಯ ಮಹತ್ವವನ್ನು ವಿವರಿಸುವಾಗ ಯಾವ ರೀತಿ ಜಲಾಶಯಗಳಲ್ಲಿ ನೀರಿನ ಜೊತೆಗೆ ಕೆಸರು ಸೇರಿಕೊಂಡು ಪದೇ ಪದೇ ಶುದ್ದೀಕರಿಸದಿದ್ದಲ್ಲಿ ಉಪಯೋಗ ಶೂನ್ಯವಾಗುವುದೋ ಅದೇ ರೀತಿ ಶರೀರದಲ್ಲಿ ದೈನಂದಿನ ಚಟುವಟಿಕೆಗಳ ಸಂದರ್ಬಬದಲ್ಲಿ, ಕ್ರಮೇಣ ಶರೀರದಲ್ಲಿ ಕಶ್ಮಲ ಸೇರಿಕೊಂಡು ರೋಗದ ಗೂಡು ಆಗುವ ಸಾಧ್ಯತೆಯಿದೆ. ಇದನ್ನು ಪರಿಹರಿಸಲು ಆರೋಗ್ಯವಂತರೂ ಕೂಡ ವರ್ಷಕ್ಕೊಮ್ಮೆ ಪಂಚಕರ್ಮ ಚಿಕಿತ್ಸೆ ಮಾಡಿಸುವುದು ಒಳಿತು ಎಂಬ ಅಭಿಪ್ರಾಯವನ್ನು ತಿಳಿಸಿರುತ್ತಾರೆ.

ಬಹುತೇಕ ರೋಗಗಳನ್ನು ಆಯುರ್ವೇದ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯ:

ವಿವಿಧ ಔಷಧಿಗಳ ಉಪಯೋಗಗಳೊಂದಿಗೆ ರೋಗಕ್ಕೆ ಅನುಗುಣವಾಗಿ ವಾಂತಿ ಮಾಡಿಸುವುದರ ಮೂಲಕ, ಭೇದಿ ಮಾಡಿಸುವುದರ ಮೂಲಕ, ಬಸ್ತಿ ಅಥವಾ ಎನಿಮಾ ಕೊಡುವುದರ ಮೂಲಕ, ಹಾಗೂ ನಸ್ಯ ಚಿಕಿತ್ಸೆಯ ಮೂಲಕ ಇಂತಹ ಕಶ್ಮಲಗಳನ್ನು ಶರೀರದಿಂದ ಸುಲಭವಾಗಿ ನಿವಾರಿಸಿ ರೋಗವನ್ನು ತಡೆಗಟ್ಟುವ ಹಾಗೂ ಮೂಲದಿಂದಲೇ ಗುಣಪಡಿಸುವ ವಿಧಾನವನ್ನು ತಿಳಿಸಿರುತ್ತಾರೆ. ಕೆಲವೊಂದು ರೋಗಗಳಲ್ಲಿ ರಕ್ತನಾಳಗಳಿಂದ ನೇರವಾಗಿ ರಕ್ತವನ್ನು ನಿಯಮಿತ ಪ್ರಮಾಣದಲ್ಲಿ ತೆಗೆಯುವ ವಿಧಾನವನ್ನೂ ಅನುಸರಿಸಲಾಗುತ್ತದೆ. ಪಂಚಕರ್ಮ ಚಿಕಿತ್ಸೆಯ ಜೊತೆಗೆ ವಿವಿಧ ಮೂಲಿಕಾಸಿದ್ದ ಔಷಧಿಗಳನ್ನು ಉಪಯೋಗಿಸುವುದರ ಮೂಲಕ ಬಹುತೇಕ ರೋಗಗಳನ್ನು ಆಯುರ್ವೇದ ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಲು ಸಾಧ್ಯ. ಪಂಚಕರ್ಮ ಚಿಕಿತ್ಸೆಯ ಜೊತೆಗೆ ಶರೀರಕ್ಕೆ ಅಭ್ಯಂಜನ ಮಾಡುವುದು, ಸೇಕ ಕೊಡುವುದು, ತೈಲ ಕಷಾಯದ ಮೂಲಕ ಶರೀರಕ್ಕೆ ಶಿರಕ್ಕೆ ಧಾರೆ ಎರೆಯುವುದು, ಕಷಾಯ ಸ್ನಾನಗಳು, ಕಿವಿ ಕಣ್ಣಿನ ಚಿಕಿತ್ಸೆಗಳು ಹಾಗೂ ಇನ್ನೂ ಅನೇಕ ಚಿಕಿತ್ಸೆಗಳನ್ನು ಸಂದರ್ಭಾನುಸಾರ ಮಾಡಲಾಗುತ್ತದೆ.

ಆಧುನಿಕ ವಿಜ್ಞಾನವೂ ಇಂದು ಶರೀರದಲ್ಲಿ ಕಶ್ಮಲಗಳು ಸೇರುತ್ತಾ ಹೋಗುವುದರಿಂದ ಬಹಳಷ್ಟು ರೋಗಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುತ್ತಿದೆ. ಇದನ್ನು ಸಾವಿರಾರು ವರ್ಷಗಳ ಮೊದಲೇ ನಮ್ಮ ಋಷಿಮುನಿಗಳು ನಮಗೆ ಆಯುರ್ವೇದದ ಮುಖಾಂತರ ತಿಳಿಸಿರುತ್ತಾರೆ. ಇಂದು ಅನೇಕ ವಿದೇಶೀಯರು ಭಾರತಕ್ಕೆ ಬಂದು ಈ ಪಂಚಕರ್ಮ ಚಿಕಿತ್ಸೆಯನ್ನು ನಿಯಮಿತವಾಗಿ ಪಡೆದು ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆದರೆ ವಿದೇಶೀಯರಿಗೆ ಹೋಲಿಸಿದಲ್ಲಿ ನಿಯಮಿತವಾಗಿ ಪಂಚಕರ್ಮ ಚಿಕಿತ್ಸೆಯನ್ನು ಪಡೆಯುವ ಭಾರತೀಯರು ಕಡಿಮೆಯೆಂದೇ ಹೇಳಬಹುದು. ಕೇರಳೀಯರು ಮಾತ್ರ ಪಂಚಕರ್ಮ ಚಿಕಿತ್ಸಾ ವಿಧಾನವನ್ನು ತಮ್ಮ ಜೀವನ ಕ್ರಮವನ್ನಾಗಿಸಿದ್ದಾರೆ.

ಡಾ|| ಜಯಗೋವಿಂದ ಉಕ್ಕಿನಡ್ಕ
ಉಕ್ಕಿನಡ್ಕಾಸ್ ಆಯುರ್ವೇದ, ಉಕ್ಕಿನಡ್ಕ, ಕಾಸರಗೋಡು ಜಿಲ್ಲೆ, ಕೇರಳ-671 552
ಮೊ.: +91 94002 12222
email: drjayagovind@gmail.com
www.ukkinadkas.com

Share this: