Vydyaloka

ನಿಸರ್ಗದ ಸೋಪು ಸೀಗೆ

ಪ.ರಾಮಕೃಷ್ಣ ಶಾಸ್ತ್ರಿ
ಅಂಚೆ: ತೆಂಕಕಾರಂದೂರು-574217
ಬೆಳ್ತಂಗಡಿ ತಾಲೂಕು, ದ.ಕ.
9483352306

ಪ್ರಾಚೀನ ಕಾಲದಿಂದಲೂ ಕೂದಲಿನ ಸಂರಕ್ಷಣೆಗೆ ಬಳಕೆಯಾಗುತ್ತಿದ್ದುದು ಸೀಗೆ ಪುಡಿ. ಹಿಂದೆ ನಮ್ಮಲ್ಲಿ ತಲೆಗೆ ಸ್ನಾನ ಮಾಡಲು ಮಹಿಳೆಯರು ಪೇಟೆಯಿಂದ ಸೋಪು ತಂದು ಬಳಸುತ್ತಿರಲಿಲ್ಲ. ಅವರಿಗೆ ನಿಸರ್ಗದ ಅನುಪಮ ಕೊಡುಗೆಯೆನಿಸಿದ ಸೀಗೆಕಾಯಿ ಮನೆಯ ಬಳಿಯೇ ಸಿಗುತ್ತಿತ್ತು. ಅದನ್ನು ಬೆಚ್ಚಗೆ ಜೋಪಾನ ಮಾಡುತ್ತಿದ್ದರು, ಬೇಕಾದಾಗ ಕುಟ್ಟಿ ಪುಡಿ ಮಾಡಿ ವಸ್ತ್ರಗಾಳಿತ ಚೂರ್ಣವನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರು. ಇದರಿಂದ ತಲೆಗೂದಲಿನ ಆರೋಗ್ಯದ ದೃಷ್ಟಿಯಿಂದ ಅನೇಕ ಲಾಭಗಳಿದ್ದವು. ಅಕಾಲಿಕ ನರೆಯಿಂದ ತಲೆಗೂದಲು ಬೆಳ್ಳಗಾಗುತ್ತಿರಲಿಲ್ಲ. ತಲೆಹೊಟ್ಟಿನ ಸಮಸ್ಯೆಯ ಪರಿಚಯವೇ ಇರಲಿಲ್ಲ. ಕಪ್ಪಾದ, ನೀಳವಾದ ಕೇಶರಾಶಿಯ ಅಭಿವೃದ್ಧಿಗೆ ಸೀಗೆಕಾಯಿ ನೆರವಾಗುತ್ತಿತ್ತು.

ಪ್ರಾಚೀನ ಕಾಲದಿಂದಲೂ ಕೂದಲಿನ ಸಂರಕ್ಷಣೆಗೆ ಬಳಕೆಯಾಗುತ್ತಿದ್ದುದು ಸೀಗೆ ಪುಡಿ. ಹಿಂದೆ ನಮ್ಮಲ್ಲಿ ತಲೆಗೆ ಸ್ನಾನ ಮಾಡಲು ಮಹಿಳೆಯರು ಪೇಟೆಯಿಂದ ಸೋಪು ತಂದು ಬಳಸುತ್ತಿರಲಿಲ್ಲ. ಅವರಿಗೆ ನಿಸರ್ಗದ ಅನುಪಮ ಕೊಡುಗೆಯೆನಿಸಿದ ಸೀಗೆಕಾಯಿ ಮನೆಯ ಬಳಿಯೇ ಸಿಗುತ್ತಿತ್ತು. ಅದನ್ನು ಬೆಚ್ಚಗೆ ಜೋಪಾನ ಮಾಡುತ್ತಿದ್ದರು, ಬೇಕಾದಾಗ ಕುಟ್ಟಿ ಪುಡಿ ಮಾಡಿ ವಸ್ತ್ರಗಾಳಿತ ಚೂರ್ಣವನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರು. ಇದರಿಂದ ತಲೆಗೂದಲಿನ ಆರೋಗ್ಯದ ದೃಷ್ಟಿಯಿಂದ ಅನೇಕ ಲಾಭಗಳಿದ್ದವು. ಅಕಾಲಿಕ ನರೆಯಿಂದ ತಲೆಗೂದಲು ಬೆಳ್ಳಗಾಗುತ್ತಿರಲಿಲ್ಲ. ತಲೆಹೊಟ್ಟಿನ ಸಮಸ್ಯೆಯ ಪರಿಚಯವೇ ಇರಲಿಲ್ಲ. ಕಪ್ಪಾದ, ನೀಳವಾದ ಕೇಶರಾಶಿಯ ಅಭಿವೃದ್ಧಿಗೆ ಸೀಗೆಕಾಯಿ ನೆರವಾಗುತ್ತಿತ್ತು. ಹಾಗೆಯೇ ಬಾಣಂತಿಯರಿಗೆ ಕೂಡ ಸ್ನಾನಕ್ಕೆ ಸೀಗೆಹುಡಿಯೇ ಕಡ್ಡಾಯವಾಗಿತ್ತು. ಸೀಗೆಬಳ್ಳಿಯ ಚಿಗುರು ಮತ್ತು ಹುರಿದ ಹುರುಳಿಯಿಂದ ತಯಾರಿಸಿದ ಸಾರನ್ನು ಊಟಕ್ಕೆ ಬಡಿಸುತ್ತಿದ್ದರು. ಇದು ನಂಜು ನಿರೋಧಕವಾಗಿತ್ತು. ಎದೆಹಾಲಿನ ವೃದ್ಧಿಗೆ ನೆರವಾಗುತ್ತಿತ್ತು. ತಮ್ಮ ಭೂಮಿಯಲ್ಲಿ ಸೀಗೆಯ ಬಳ್ಳಿಯಿದ್ದರೆ ರೈತರು ಅದನ್ನು ಕಾಪಾಡುತ್ತಿದ್ದರು. ಆದರೆ ಬದಲಾದ ಈ ಕಾಲದಲ್ಲಿ ಆಧುನಿಕ ಬೆಳೆಗಳ ವ್ಯಾಮೋಹದಿಂದಾಗಿ ದಟ್ಟ ಅರಣ್ಯಗಳನ್ನು ಬಿಟ್ಟರೆ ಸೀಗೆ ಎಂಬ ಸಸ್ಯ ಸಂಪತ್ತು ಪೂರ್ಣ ಅಗೋಚರವಾಗಿದೆ. ರಬ್ಬರ್ ಕೃಷಿಯ ಸ್ಥಾಪನೆಗಾಗಿ ಅದರ ವಂಶವನ್ನು ಕೈಯಾರೆ ಅಳಿಸಲಾಗಿದೆ.

ವೈಜ್ಞಾನಿಕವಾಗಿ ಅಕೇಸಿಯಾ ಕಾನ್‍ಸಿನ್ನಾ ಎಂದು ಹೆಸರಿರುವ ಸೀಗೆ ಮೈಮೊಸಾಸಿಯೆ ಕುಟುಂಬಕ್ಕೆ ಸೇರಿದೆ. ಹಿಂದಿಯಲ್ಲಿ ಅದನ್ನು ಶಿಕಾಕಾಯಿ ಎಂದು ಕರೆಯುತ್ತಾರೆ. ಇದೇ ಹೆಸರಿನ ಸೋಪುಗಳು, ತಲೆಗೆ ಹಚ್ಚಿ ಮೀಯುವ ಪೌಡರುಗಳು, ಶಾಂಪೂಗಳು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ದೊರಕುತ್ತಿವೆ. ದಪ್ಪ ಗಾತ್ರದ ಬಳ್ಳಿಯಲ್ಲಿ ಗೊಂಚಲುಗಳಾಗಿ ಸೀಗೆಕಾಯಿ ಸಿಗುತ್ತದೆ. ಈ ಬಳ್ಳಿಗೆ ಆಧಾರಕ್ಕೆ ಬೇರೆ ಮರಗಳು ಬೇಕು. ಬಳ್ಳಿಯಲ್ಲಿ ತುಂಬ ಮುಳ್ಳುಗಳಿರುವ ಕಾರಣ ಅದರ ಕಾಯಿ ಸಂಗ್ರಹಿಸಬೇಕಿದ್ದರೆ ಬಳ್ಳಿಯ ಕೆಳಭಾಗದ ನೆಲವನ್ನು ಚೊಕ್ಕಟಗೊಳಿಸಬೇಕಾಗುತ್ತದೆ. ಪ್ರತೀ ವರ್ಷ ಕಾಯಿ ಸಿಗುವುದಿಲ್ಲ. ಎರಡು ವರ್ಷಗಳಿಗೊಮ್ಮೆ ಫಸಲು ಕೊಡುತ್ತದೆ. ಈ ವರ್ಷ ಮಾರ್ಚಿಗೆ ಹೂ ಬಿಟ್ಟರೆ ಮುಂದಿನ ವರ್ಷ ಆ ವೇಳೆಗೆ ಅದರ ಕಾಯಿಗಳು ಒಣಗಿ ಕೊಯ್ಲಿಗೆ ಸಿದ್ಧವಾಗುತ್ತವೆ. ಉದ್ದನೆಯ ದೋಟಿಯಿಂದ ಬಳ್ಳಿಯನ್ನು ಕುಲುಕಾಡಿಸಿದಾಗ ಕೆಳಗೆ ಬೀಳುವ ಕಾಯಿಗಳನ್ನು ಸಂಗ್ರಹಿಸಲಾಗುತ್ತದೆ. ಇದಕ್ಕೆ ಉತ್ತಮ ಬೆಲೆಯಿದೆ. ಬೇಡಿಕೆಯೂ ಇದೆ. ಆದರೆ ಉದ್ದೇಶಪೂರ್ವಕ ಅದರ ವಂಶವನ್ನು ಅಳಿಸಿರುವ ಕಾರಣ ಬೇಡಿಕೆಯಿರುವಷ್ಟು ಲಭಿಸುವುದಿಲ್ಲ.

ಕಾಲಿಕ್ಟೊಮೈನ್ ಮುಂತಾದ ಅಲ್ಕಲಾಯಿಡ್‍ಗಳು, ಅಕ್ಸಾಲಿಕ್, ಟಾರ್ಟಾರಿಕ್, ಸಿಟ್ರಿಕ್, ಸುಸ್ಸಿನಿಕ್, ಆಸ್ಕೊರ್ಬಿಕ್, ಸ್ಪಿನಾಸ್ಟೆರೋನ್, ಕಾಲಿಕ್ಟೊಮೈನ್, ನಿಕೊಟಿಕ್ ಮೊದಲಾದ ಆಮ್ಲಗಳು, ಹಲವು ಸತ್ವಾಂಶಗಳಿಂದ ತುಂಬಿರುವ ಸೀಗೆಯ ಕಾಯಿ ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಪ್ರಧಾನವಾಗಿದೆ. ಪಶ್ಚಿಮ ಘಟ್ಟದ ಅರಣ್ಯಗಳಲ್ಲಿ ಇನ್ನೂ ಉಳಿದುಕೊಂಡಿದೆ. ಹುಣಸೆ ಎಲೆಯನ್ನು ಆಕಾರದಲ್ಲಿ ಹೋಲುವ ಹಾಗೆಯೇ ಹುಳಿ ರುಚಿಯಿರುವ ಅದರ ಚಿಗುರು ಸಾರಿಗೆ ಮಾತ್ರ ರುಚಿ ಕೊಡುವುದಲ್ಲ, ಮಲೇರಿಯಾ ಜ್ವರಕ್ಕೂ ಅದರಿಂದ ಚಿಕಿತ್ಸೆ ಮಾಡುತ್ತಾರೆ. ಅದನ್ನು ಅರೆದು ತಲೆಗೆ ಹಚ್ಚಿದರೆ ತಲೆಹೊಟ್ಟು ಶಮನವಾಗುತ್ತದೆ. ನೆತ್ತಿಗೆ ಸಿ ಜಿವಸತ್ವದ ಕೊರತೆಯಿದ್ದರೆ ಅದು ತುಂಬುತ್ತದೆ. ಇದರ ಕಷಾಯ ವಿರೇಚಕವೂ ಹೌದು. ಬೀಜಗಳ ಪುಡಿ ಚರ್ಮರೋಗ ನಿವಾರಕ. ಆಯುರ್ವೇದದ ಹಲವು ಔಷಧಿಗಳಿಗೆ ಸೀಗೆ ಬೇಕಾಗುತ್ತದೆ.

ಸೀಗೆಯ ಬೀಜದ ಚೂರ್ಣ ಮತ್ತು ಬೆಣ್ಣೆಯಿಂದ ಮೂಲವ್ಯಾಧಿಗೆ ಮಾಡುವ ಚಿಕಿತ್ಸೆಯಿದೆ. ಜ್ಯೇಷ್ಠಮಧು ಮತ್ತು ಸೀಗೆಕಾಯಿಯನ್ನು ತುಪ್ಪದಲ್ಲಿ ಅರೆದು ಬೆಂಕಿಗೆ ಹಾಕಿ ಅದರ ಹೊಗೆಯನ್ನು ಸೇವಿಸಿದರೆ ನೆಗಡಿ, ಶೀತ, ಕೆಮ್ಮು, ತಲೆನೋವು, ಕುತ್ತಿಗೆನೋವು, ತಲೆಭಾರ ಶಮನವಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಇದರ ಚೂರ್ಣದಿಂದ ಮೈ ತಿಕ್ಕಿ ಮಿಂದರೆ ಚರ್ಮದ ಕಾಂತಿ ಅಧಿಕವಾಗುವುದಂತೆ. ಅರಣ್ಯದ ಈ ಸಂಪತ್ತು ಅಗೋಚರವಾಗದಿರಲಿ. ಇಲಿಗಳ ಮೇಲೆ ಕೈಗೊಂಡ ಪ್ರಯೋಗಗಳಿಂದ ಸೀಗೆಯಲ್ಲಿ ಉತ್ತಮ ಗರ್ಭ ನಿರೋಧಕವಾಗುವ ಲಕ್ಷಣಗಳು ಕಂಡುಬಂದಿವೆ. ಇದರ ಎಲೆ ಮತ್ತು ಬೀಜಗಳ ಸತ್ವದಿಂದ ಕೃಷಿಗೆ ಬರುವ ಕೀಟಗಳನ್ನು ಕೊಲ್ಲಬಹುದು ಎನ್ನುತ್ತಾರೆ ಸಸ್ಯಶಾಸ್ತ್ರಜ್ಞರು.

Share this: