Vydyaloka

ನಿದ್ದೆಯಿದ್ದರೆ ಸುಖ ನಿದ್ದೆಯಿರದಿರೆ ದುಖ ಅತಿನಿದ್ರೆಯೆಂಬುದದು ರೋಗ

ನಿದ್ದೆಯಿದ್ದರೆ ಸುಖ  ನಿದ್ದೆಯಿರದಿರೆ ದುಖ.  ನಮ್ಮಲ್ಲಿ ಬಹಳ ಮಂದಿ ನಿದ್ರೆಯನ್ನು ಕಡೆಗಣಿಸುತ್ತಾರೆ. ಹಾಗೆಂದು ನಿದ್ರೆ ಅತಿಯಾದರೂ ಕಾಯಿಲೆ ಕಟ್ಟಿಟ್ಟದ್ದು; ಬೌದ್ಧಿಕ ಸಾಮಥ್ರ್ಯ ಕಡಿಮೆಯಾಗಲು ಕಾರಣವಾಗುವುದು.ಬಹುಶ: ನಮ್ಮಲ್ಲಿ ಕಾಲು ಭಾಗದಷ್ಟು ಜನ ದೀರ್ಘಕಾಲೀನ ಅನಿದ್ರೆಯಿಂದ ಬಳಲುತ್ತಿದ್ದಾರೆ!

” ಮುಂದಿನ ದಿನವನ್ನು ಆರಂಭಿಸುವುದಕ್ಕೆ ಮುನ್ನ ಹಿಂದಿನ ದಿನವನ್ನು ಮುಗಿಸಿಬಿಡು, ಮತ್ತು ಇವೆರಡರ ನಡುವೆ ನಿದ್ರೆಯ ಗಟ್ಟಿ ಗೋಡೆಯನ್ನು ಕಟ್ಟಿಕೋ”- ರಾಲ್ಫ್ ವಾಲ್ಡೋ ಎಮರ್ಸನ್ ಹೇಳಿದ ಈ ಮಾತುಗಳು ನಿತ್ಯ ನೆನಪಿನಲ್ಲಿಡಬೇಕಾದದ್ದು.

ಅದೊಂದು ದಿನ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ನನ್ನ ಕ್ಲಿನಿಕ್ ಒಳಗೆ ಬಂದಿದ್ದ. ಆತನ ಆರೋಗ್ಯ ಸುಧಾರಿಸಿಕೊಡಬೇಕೆಂದು ಕೇಳಿಕೊಂಡ. ಈ ರೀತಿಯ ಬೇಡಿಕೆ ಇದುವ ರೋಗಿ ಇವನೊಬ್ಬ ಮೊದಲಲ್ಲ. ಆದರೆ ಆತನಿಗೆ ಏನು ಬೇಕೆಂಬುದನ್ನು ನಾನು ಅರಿತುಕೊಂಡೆ. ಆತನ ಸಮಸ್ಯೆಯ ಸುಳಿಯೊಳಗೆ ನಾನು ಸುಳಿದು, ಅದರ ಆಳಕ್ಕೆ ಇಳಿದು, ಆತನು ಈ ಮೊದಲು ಅನುಭವಿಸದೇ ಇದ್ದ ಹೊಳೆಯುವ ಆರೋಗ್ಯದ ನಿರಾಳತೆಯನ್ನು ಆತನಿಗೆ ನೀಡಬೇಕಿತ್ತು.ಯಾವುದೇ ವೈದ್ಯರ ಬಳಿ ಬರುವಾಗ ಇರುವ ಬಹುದೊಡ್ಡ ನಿರೀಕ್ಷೆಯನ್ನು ಹೊತ್ತಿದ್ದ ಆತನ ಮುಖ ಮಾತ್ರ ಊದಿಕೊಂಡಿತ್ತು. ಅದು ಆತನ ಸಮಸ್ಯೆಯನ್ನು ನಾನು ಊಹಿಸುವಂತೆ ಮಾಡಿತು.

ಆತನ ಕಾಯಿಲೆಯ ಚರಿತ್ರೆ ಹಾಗೂ ಚಿಹ್ನೆಗಳ ಬಗೆಗೆ ಕೆದಕುವುದಕ್ಕೆ ತೊಡಗಿದೆ. ಥೈರಾಯ್ಡ್  ಗ್ರಂಥಿಯ ಕುಂದಿದ ಚಟುವಟಿಕೆ ಆತನ ಸಮಸ್ಯೆ, ಅದಕ್ಕಾಗಿ ಚಿಕಿತ್ಸೆ. ಒತ್ತಡದ ಬದುಕಾದರೂ, ಆರೋಗ್ಯ ಚೆನ್ನಾಗಿದೆಯೆಂದು ಹೇಳಿಕೊಂಡ. ಬೇರೇನೂ ದೊಡ್ಡದೆನ್ನುವ ಆರೋಗ್ಯದ ಗತಸಮಸ್ಯೆ ಆತ ಹೇಳಲಿಲ್ಲ. ಕುತೂಹಲಕ್ಕೆ ಎನ್ನುವಂತೆ, ಆತನ ಮಗನಿಗೆ ಬಾಲ್ಯದಲ್ಲಿದ್ದ ಘನ ಆಹಾರದ, ಅದರಲ್ಲೂ ಆಹಾರದಲ್ಲಿನ ಗ್ಲುಟನ್ ಎಂಬ ಅಂಶದ ಬಗೆಗಿನ ತೊಡಕನ್ನೂ ಹೇಳಿಕೊಂಡ. ಆತನ ಥೈರಾಯ್ಡ್ ಸಮಸ್ಯೆ ಬಗ್ಗೆ ಮತ್ತೂ ಆಳಕ್ಕೆ ಹೋದಾಗ ಅದು ಅಟೋಇಮ್ಯೂನ್ ಕಾಯಿಲೆಯಾದ “ಹಶಿಮೋಟೋ ಥೈರಾಯಿಡೈಟಿಸ್” ಆಗಿತ್ತು! ಶರೀರದ ರೋಗನಿರೋಧಕ ವ್ಯವಸ್ಥೆಯ ವೈಪರೀತ್ಯ! ರಕ್ಷಣಾತ್ಮಕ ವ್ಯವಸ್ಥೆಯು ಥೈರಾಯಿಡ್ ಗ್ರಂಥಿಯನ್ನೇ ಧಾಳಿ ಮಾಡುವ ವಿಚಿತ್ರ ಪರಿಸ್ಥಿತಿ ! ಅವನ ಸ್ಥಿತಿಯಲ್ಲಿ ಗ್ಲುಟನ್ ವಿರಹಿತ ಆಹಾರ ಪದ್ಧತಿ ಆತನಿಗೆ ಬೇಕಾಗಿತ್ತು.

ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು, ಆಯುರ್ವೇದ ಚಿಕಿತ್ಸೆ ಆರಂಭಿಸಿದ ಒಂದೇ ತಿಂಗಳಿನಲ್ಲಿ ಆತನ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂತು. ಮತ್ತೆ ಹಲವು ತಿಂಗಳುಗಳ ನಂತರದ ಭೇಟಿಯಲ್ಲಿ ತನ್ನ ಆರೋಗ್ಯ ಅತ್ಯಂತ ಚೆನ್ನಾಗಿದೆಯೆಂದು ಹೇಳಿದ. ಮೊದಲ ಭೇಟಿಯ ಸಂದರ್ಭದ ಗುಳಿಬಿದ್ದ ಕಣ್ಣು, ಬಾಡಿದ ಮುಖ ಬದಲಾಗಿ ಉತ್ಸಾಹದ ಚಿಲುಮೆಯಾಗಿದ್ದ. ಆತನ ಮಾತುಗಳಲ್ಲೇ ಹೇಳುವುದಾದರೆ- “ಆಯುರ್ವೇದ ಚಿಕಿತ್ಸೆ ಮತ್ತು ಆಹಾರದಲ್ಲಿ ಬದಲಾವಣೆ ಮಾಡುವ ಮೊದಲು ನನ್ನ ದೇಹಸ್ಥಿತಿ ಪಾತಾಳಕ್ಕೆ ಕುಸಿದಿತ್ತು. ದಿನನಿತ್ಯದ ವ್ಯಾಯಾಮದ ಕಸರತ್ತು ಮಾಡಿದರೂ ಆಲಸ್ಯ, ಜಡತ್ವಗಳು ನನ್ನ ದಿನವನ್ನು ಕತ್ತಲನ್ನಾಗಿ ಮಾಡಿತ್ತು. ಸಣ್ಣ ಕಾರಣಗಳಿಗೂ ಸಿಡುಕುತ್ತಿದ್ದೆ. ಖಿನ್ನತೆ ಆವರಿಸುತ್ತಿತ್ತು, ಋಣಾತ್ಮಕ ಆಲೋಚನೆಗಳನ್ನು ಹತ್ತಿಕ್ಕಲು ಅಸಮರ್ಥನಾಗಿದ್ದೆ.ನಾನು ಸಾವಿಗೆ ಹತ್ತಿರವಾಗುತ್ತಿದ್ದೇನೆ ಎನಿಸುತ್ತಿತ್ತು. ಆದರೆ ಈಗ ಹೊಸ ವ್ಯಕ್ತಿಯಾಗಿದ್ದೇನೆ. ಖುಷಿಯಾಗಿರುವ ಅದೃಷ್ಟವಂತ., ದಿನವಿಡೀ ಶಕ್ತಿ,ಉತ್ಸಾಹಗಳಿವೆ. ರಾತ್ರೆ ನಿಯಮಿತವಾದ ನಿದ್ರೆ ಚೆನ್ನಾಗಿ ಬರುತ್ತದೆ. ಗಂಟುನೋವು ಮಾಯವಾಗಿದೆ. ಸ್ಪಷ್ಟವಾಗಿ ಯೋಚನೆ ಮಾಡಬಲ್ಲೆ. ಹಿಡಿದ ಕೆಲಸಗಳನ್ನು ಪೂರ್ತಿಗೊಳಿಸಬಲ್ಲೆ. ಕಿಬ್ಬೊಟ್ಟೆ ಮತ್ತು ಸೊಂಟದ ಬೊಜ್ಜು ಕೆಲವೇ ತಿಂಗಳುಗಳಲ್ಲಿ ಕರಗಿ ಹೋಗಿದೆ. ಜೀವನವನ್ನು ಮರಳಿ ಕೊಟ್ಟದ್ದಕ್ಕೆ ಧನ್ಯವಾದಗಳು, ಡಾಕ್ಟ್ರೇ”.

ಬಹಳ ರೋಗಿಗಳಿಗೆ ನಿದ್ರೆ ಇಲ್ಲದಿರುವುದು ನಾರ್ಮಲ್!! 

ನಿದ್ದೆ ಬಾರದಿರುವ ಬಗ್ಗೆ ಆತ ಭೇಟಿಯಲ್ಲಿ ಹೇಳಿಕೊಳ್ಳದೇ ಇದ್ದರೂ, ಸುಖನಿದ್ರೆಯಿಂದ ಆತ ವಂಚಿತನಾಗಿದ್ದ ಎಂದು ನಿಶ್ಚಯಿಸಿದ್ದೆ. ಬಳಲಿದಂತೆ ಕಾಣುತ್ತಿದ್ದ ಆತನ ಮುಖ ಬಹು ಕಾಲದ ನಿದ್ರಾಹೀನ ಸ್ಥಿತಿಗೆ ಸಾಕ್ಷ್ಯ ನುಡಿಯುತ್ತಿತ್ತು. ಬಹಳ ಜನ ರೋಗಿಗಳಿಗೆ ನಿದ್ರೆ ಇಲ್ಲದಿರುವುದು ನಾರ್ಮಲ್!!  ಏಕೆಂದರೆ , ಮತ್ತೆ ಸಹಜ ನಿದ್ರೆಯ ಅನುಭವ ಪಡೆಯುವ ತನಕ ಸರಿಯಾದ ನಿದ್ರೆ ಹೇಗಿರುತ್ತದೆ ಎಂಬುದನ್ನು ಅವರು ಮರೆತೇ ಬಿಟ್ಟಿರುತ್ತಾರೆ !!! ಬಹುಶ: ನಿದ್ರೆಯು ಆಹಾರ ಬದಲಾಣೆಯ ಹಾದಿಯಲ್ಲಿ ದೊರಕಿದ ಕಿರು ಪ್ರಯೋಜನ ಎಂದು ಆತ ಭಾವಿಸಿರಲೂ ಸಾಕು. ಆದರೆ ಅದು ಅಷ್ಟೇ ಆಗಿರಲಿಲ್ಲ. ಬಹುದಿನಗಳ ಸುಖಮಯ ಗಾಢ ನಿದ್ರೆಯ ಕ್ಷಣಗಳೆಂದರೆ, ದೇಹ ವ್ಯವಸ್ಥೆಯಲ್ಲಿನ ಹಾರ್ಮೋನ್‍ಗಳನ್ನು, ಭಾವನೆಗಳನ್ನು, ಆಧ್ಯಾತ್ಮಿಕತೆಯನ್ನು ಮರಳಿ ನವೀಕರಿಸಿ ಕಟ್ಟುವ ಕೆಲಸ.

ಗ್ಲುಟನ್ ಮತ್ತು ಥೈರಾಯ್ಡ್ ಸಮಸ್ಯೆಗಳನ್ನು ಬದಿಗಿರಿಸಿ ಮತಾಡಿದರೆ, ನಿಗದಿತ ವಿಶ್ರಾಂತ ನಿದ್ರೆಯು ಆತನ ಸ್ಥಿತಿಯನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಅವನ ಅಪೇಕ್ಷೆಯ “ಸರಿಯಾದ” ಆರೊಗ್ಯ ಆತನಿಗೆ ದೊರಕಿತ್ತು. ನಮ್ಮಲ್ಲಿ ಬಹಳ ಮಂದಿ ನಿದ್ರೆಯನ್ನು ಕಡೆಗಣಿಸುತ್ತಾರೆ. ಅದು ನಾವು ಚೆನ್ನಾಗಿರಲು ಬೇಕಾದ ಅತ್ಯಗತ್ಯವಾದ, ಅನಿವಾರ್ಯವಾದ, ಉಚಿತವಾದ ಆಸ್ತಿ ಎಂಬುದು ಅವರಿಗೆ ಅರಿವು ಇರುವುದಿಲ್ಲ.

ನಿದ್ರೆಯ ಕಾರ್ಯವ್ಯಾಪ್ತಿ ಏನೆಂಬುದು ಗೊತ್ತೇನು?

ಪ್ರಯೋಗಶಾಲೀಯ ಹಾಗೂ ವೈದ್ಯಕೀಯ ಅಧ್ಯಯನಗಳ ಪ್ರಕಾರ ನಮ್ಮ ದೇಹದ ಪ್ರತಿಯೊಂದು ಕೋಶವೂ ಕೂಡಾ ನಮ್ಮ ನಿದ್ರೆಯ ಗುಣಮಟ್ಟ ಮತ್ತು ಪ್ರಮಾಣದಿಂದ ಪ್ರಭಾವಿತವಾಗುತ್ತದೆ., ವಿಶೇಷವಾಗಿ ಮೆದುಳು. ಹಾಗಾದರೆ ನಿದ್ರೆಯ ಕಾರ್ಯವ್ಯಾಪ್ತಿ ಏನೆಂಬುದು ಗೊತ್ತೇನು?

1. ನಿದ್ರೆಯು ನಾವು ಎಷ್ಟು ತಿನ್ನುತ್ತೇವೆಂಬುದನ್ನು ನಿರ್ದೇಶಿಸುತ್ತದೆ.
2. ನಮ್ಮ ಚಯಾಪಚಯ ಕ್ರಿಯೆಯ ವೇಗವನ್ನು ನಿರ್ಧರಿಸುತ್ತದೆ.
3. ನಮ್ಮ ದೇಹ ದಪ್ಪಗಾಗುವುದು, ತೆಳ್ಳಗಾಗುವುದನ್ನು ನಿರ್ಧರಿಸುತ್ತದೆ.
4. ರೋಗಾಣುಗಳ ವಿರುದ್ಧ ಹೋರಾಡುವ ದೇಹದ ಶಕ್ತಿಯನ್ನು ನಿರ್ಧರಿಸುತ್ತದೆ.
5. ನೀವು ಎಷ್ಟು ಉತ್ಸಾಹಿ,ಕ್ರಿಯಾಶೀಲ ಎಂಬುದನ್ನು ನಿರ್ಧರಿಸುತ್ತದೆ.
6. ಒತ್ತಡವನ್ನು ನಿಭಾಯಿಸುವ  ಸಾಮಥ್ರ್ಯವನ್ನು ತೀರ್ಮಾನಿಸುತ್ತದೆ.
7. ಮಾಹಿತಿಯನ್ನು ಅರ್ಥೈಸುವ ಪ್ರಕ್ರಿಯೆ, ಹೊಸವಿಷಯಗಳ ಕಲಿಯುವಿಕೆಯನ್ನು ನಿರ್ಧರಿಸುತ್ತದೆ.
8. ನೆನಪುಗಳನ್ನು ಕ್ರೋಢೀಕರಿಸುವ, ಉಳಿಸಿಕೊಳ್ಳುವ  ಶಕ್ತಿಯನ್ನು ನಿರ್ಧರಿಸುತ್ತದೆ.

ಸಾಧಾರಣ ಏಳು ಗಂಟೆಗಳ ನಿದ್ರೆ ಸರಿಯಾಗಿದ್ದು, ನಮ್ಮ (ಜೀನ್) ವಂಶವಾಹಿಗಳನ್ನು ಪ್ರಭಾವಿಸುತ್ತದೆ. 2013 ರಲ್ಲಿ ಇಂಗ್ಲೇಂಡ್ ನಲ್ಲಿ ನಡೆದ ಅಧ್ಯಯನವು, ಒಂದು ವಾರದ ನಿದ್ರಾಹೀನತೆಯು 711 ಜೀನ್ ಗಳ ಕಾರ್ಯವನ್ನು ಕುಂಠಿತಗೊಳಿಸುತ್ತದೆ ಎಂಬುದನ್ನು ತೋರಿಸಿತು. ಅವುಗಳು ಒತ್ತಡ, ಉರಿಯೂತ, ರೋಗನಿರೋಧಕತೆ ಮತ್ತು ಚಯಾಪಚಯ ಕ್ರಿಯೆಗಳಿಗೆ ಸಂಬಂಧಪಟ್ಟವು. ಈ  ಪ್ರಮುಖ  ಅಂಶಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಯಾವುದೇ  ಆದರೂ  ಮೆದುಳನ್ನು  ಹಾನಿಗೊಳಿಸುವುದು.

ನಿದ್ರೆ ಅತಿಯಾದರೂ ಕಾಯಿಲೆ 

ದೀರ್ಘಕಾಲೀನ ನಿದ್ರೆಯಿಲ್ಲದಿರುವಿಕೆಯು ಗೊಂದಲ, ನೆನಪಿನ ಹ್ರಾಸ, ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದು, ಬೊಜ್ಜು, ಹೃದಯ ರೋಗ, ಮಧುಮೇಹ ಹಾಗೂ ಮಾನಸಿಕ ಖಿನ್ನತೆಗೆ ಕಾರಣ. ಇವೆಲ್ಲದಕ್ಕೂ ಮೆದುಳಿಗೂ ಅವಿನಾಭಾವ ಸಂಬಂಧವಿದೆ.

ಹಾಗೆಂದು ನಿದ್ರೆ ಅತಿಯಾದರೂ ಕಾಯಿಲೆ ಕಟ್ಟಿಟ್ಟದ್ದು; ಬೌದ್ಧಿಕ ಸಾಮಥ್ರ್ಯ ಕಡಿಮೆಯಾಗಲು ಕಾರಣವಾಗುವುದು. ಒಂಬತ್ತು ಗಂಟೆಗಳಿಗಿಂತ ಹೆಚ್ಚಿನ ನಿದ್ರೆಯು, ಹತ್ತು ವರ್ಷಗಳ ಒಳಗೆ ವ್ಯಕ್ತಿಯನ್ನು “ಡಿಮೆನ್ಶಿಯಾ” ಎಂಬ ಮೆದುಳಿನ ಶಕ್ತಿ ಕಡಿಮೆಯಾಗುವ ಕಾಯಿಲೆಗೆ ಒಳಗಾಗುವಂತೆ ಮಾಡುತ್ತದೆ ಎಂದು “ಜರ್ನಲ್ ನ್ಯೂರಾಲಜಿ “ 2017ರಲ್ಲಿ ವರದಿ ಮಾಡಿತು. ಇದನ್ನು ಕೇವಲ ಹೇಳಿಕೆಯೆಂದು ನೀವು ಭಾವಿಸಿದರೆ ಮತ್ತೊಂದು ಪೂರಕ ವರದಿ ಹೇಳುತ್ತಿದೆ- “ಅತಿನಿದ್ರೆ ಮಾಡುವವರಲ್ಲಿ ಮೆದುಳಿನ ಗಾತ್ರ ಕಡಿಮೆಯಾಗುತ್ತದೆ.”!

 ಪುರುಷರು ಮತ್ತು ಮಹಿಳೆಯರಲ್ಲಿ ಭಿನ್ನಪ್ರಭಾವ

ಆದರೆ ಏಳರಿಂದ ಎಂಟು ಗಂಟೆಗಳ ನಿದ್ರೆಯನ್ನು ನಾವು ದಿನವೂ ಹೊಂದುತ್ತೇವೆಯೇ ಎಂಬುದನ್ನು ನಾವೇ ಗಮನಿಸಬೇಕು ತಾನೇ ? ಬಹುಶ: ನಮ್ಮಲ್ಲಿ ಕಾಲು ಭಾಗದಷ್ಟು ಜನ ದೀರ್ಘಕಾಲೀನ ಅನಿದ್ರೆಯಿಂದ ಬಳಲುತ್ತಿದ್ದಾರೆ! ಈಗ ಸಂಶೋಧಕರು ಮೆದುಳನ್ನು ಪುನಶ್ಚೇತನಗೊಳಿಸುವ ನಿದ್ರೆಯ ಗುಣಮಟ್ಟದ ಬಗ್ಗೆ ಆಸಕ್ತರಾಗಿದ್ದಾರೆ. ಇನ್ನೂ ಕುತೂಹಲದ ವಿಷಯವೆಂದರೆ, ನಿದ್ರೆಯಿಲ್ಲದಿರುವುದರ ಪ್ರಭಾವ ಪುರುಷರು ಮತ್ತು ಮಹಿಳೆಯರಲ್ಲಿ ಭಿನ್ನವಾಗಿದೆ !..ಅನಿದ್ರೆಯು ಹಾರ್ಮೋನುಗಳ ಮೇಲೆ ಉಂಟುಮಾಡುವ ಪರಿಣಾಮ ಪುರುಷ ಹಾಗೂ ಸ್ತ್ರೀಯಲ್ಲಿ ಬೇರೆ ಬೇರೆ. ಅತಿಯಾಗಿ ತಿನ್ನುವ ಪ್ರವೃತ್ತಿಯನ್ನು ಹೆಚ್ಚಿಸುವುದೇ ಆದರೂ, ಅದರ ತೀವ್ರತೆಯಲ್ಲಿ ಇಬ್ಬರಲ್ಲೂ ವ್ಯತ್ಯಾಸವಿದೆ.

ಪುರುಷರಲ್ಲಿ, ಅನಿದ್ರೆಯು ಹಸಿವೆಯನ್ನು ಹೆಚ್ಚಿಸುವ “ಗ್ರೆಲಿನ್” ಎಂಬ ಹಾರ್ಮೋನನ್ನು ಹೆಚ್ಚು ಸ್ರವಿಸುವಂತೆ ಮಾಡುತ್ತದೆ. ಆದರೆ ಮಹಿಳೆಯರಲ್ಲಿ ಇದು ಈ ಮಟ್ಟದಲ್ಲಿ ಸಂಭವಿಸುವುದಿಲ್ಲ. ಬದಲಿಗೆ ಹಸಿವೆಯನ್ನು ತಗ್ಗಿಸುವ “ಜಿ.ಎಲ್.ಪಿ.1 ” ಎಂಬ ಹಾರ್ಮೋನು ಮಟ್ಟ ಹೆಚ್ಚಾಗುತ್ತದೆ! ಈ ಸಣ್ಣ ವ್ಯತ್ಯಾಸವು ನಮಗೆ ದೊಡ್ಡ ಸಂಗತಿಯೆಂದು ಅನ್ನಿಸದಿದ್ದರೂ, ನಮ್ಮ ಇಡೀ ದೇಹದ ಜೀವರಾಸಾಯನಿಕ ಕ್ರಿಯೆಗಳು ನಿದ್ರೆಯಿಂದ ಹೇಗೆ ಪ್ರಭಾವಿತವಾಗುತ್ತದೆ ಎಂಬುದರ ಬಗೆಗೆ ನಮಗೆಷ್ಟು ಕಡಿಮೆ ತಿಳಿದಿದೆಯೆಂದು ತಿಳಿಸಿಕೊಡುತ್ತದೆ.

ವಯಸ್ಸಾದಂತೆಲ್ಲಾ ನಿದ್ರಿಸುವುದು ಒಂದು ಸವಾಲು! 

ನಿದ್ರೆಯ ಬಗ್ಗೆ ಒಂದು ವಿಷಯ ಮಾತ್ರ ನಮಗೆಲ್ಲ ಚೆನ್ನಾಗಿ ಗೊತ್ತಿದೆ. ಅದೇನೆಂದರೆ, ವಯಸ್ಸಾದಂತೆಲ್ಲಾ ನಿದ್ರಿಸುವುದು ಒಂದು ಸವಾಲು!  ಅದು ಬೇರೆ ಬೇರೆ ಕಾರಣಗಳಿಗಾಗಿ. ಹದಗೆಟ್ಟ ಆರೋಗ್ಯ ಅದನ್ನು ಉಲ್ಬಣಗೊಳಿಸುತ್ತದೆ. ನಲುವತ್ತು ಶೇಕಡಾದಷ್ಟು ವೃದ್ಧಾಪ್ಯದವರಲ್ಲಿ ರಾತ್ರೆಯ ಸುಖನಿದ್ರೆ ಕಷ್ಟ. ಮೆದುಳಿನ ಶಕ್ತಿ ಕುಂಠಿತಗೊಳ್ಳುವುದು ಮತ್ತು ನಿದ್ರಾಹೀನತೆಯ ನಡುವಿನ ಅಂತಸ್ಸಂಬಂಧವನ್ನು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಮನೋರೋಗತಜ್ಞೆ ಕ್ರಿಸ್ಟಿನ್ ಯಾಫಿ ತೆರೆದಿಟ್ಟಿದ್ದಾರೆ. ತನ್ನ ಕ್ಲಿನಿಕ್‍ನಲ್ಲಿ ರೋಗಿಗಳ ಸಮಸ್ಯೆಗಳಲ್ಲಿ ಸಮಾನ್ಯ ಎಳೆಯನ್ನು ಅಧ್ಯಯನ ಮಾಡಿದರು- ನಿದ್ರೆಯನ್ನು ಹೊಂದುವುದು ಮತ್ತು ನಿದ್ರೆಯಲ್ಲಿ ಮುಂದುವರಿಯುವಲ್ಲಿ ಇರುವ ಸಮಸ್ಯೆಗಳು. ಎಪ್ಪತ್ತೈದು ವರ್ಷಗಳಿಗಿಂತ ಹಿರಿಯ ಹದಿಮೂರು ಸಾವಿರ ವ್ಯಕ್ತಿಗಳನ್ನು ಐದು ವರ್ಷ ಗಮನಿಸಿದಾಗ, ಅನಿದ್ರೆಯಿರುವವರಲ್ಲಿ ಬೌದ್ಧಿಕ ಕೌಶಲ್ಯಗಳು ಕುಂಠಿತಗೊಳ್ಳುವ ಡಿಮೆನ್ಶಿಯಾ ಸಾದ್ಯತೆ ಎರಡುಪಟ್ಟು ಹೆಚ್ಚಾಗಿದ್ದದ್ದು ಕಂಡುಬಂತು. ಪ್ರಕೃತಿಯನ್ನು ಅನುಸರಿಸಿಕೊಂಡು ಹೋಗುವ ನಿದ್ರೆ-ಎಚ್ಚರಗಳ ಲಯವು ಯಾರಲ್ಲಿ ತಪ್ಪುತ್ತದೋ, ಅಥವಾ ಯಾರು ರಾತ್ರೆಯಿಡೀ ಎಚ್ಚರದಲ್ಲಿರುವ ಪರಿಸ್ಥಿತಿಯಲ್ಲಿರುತ್ತಾರೋ , ಅಂಥವರಲ್ಲಿ ಡಿಮೆನ್ಶಿಯಾ ಸಾಧ್ಯತೆ  ಅಧಿಕವಾಗಿರುವುದು.

ನಿದ್ರೆ-ಎಚ್ಚರಗಳ ಲಯವು  ಆರೋಗ್ಯದೊಂದಿಗೆ ನಿಕಟ ಸಂಬಂಧ 

ಹಗಲು-ರಾತ್ರೆಗಳ ಬ್ರಹ್ಮಾಂಡಲಯದೊಂದಿಗೆ ಮೇಳೈಸಿರುವ ನಿದ್ರೆ-ಎಚ್ಚರಗಳ ಲಯವು ನಮ್ಮ ಆರೋಗ್ಯದೊಂದಿಗೆ ನಿಕಟ ಸಂಬಂಧ ಹೊಂದಿದೆ. ಸೂರ್ಯೋದಯ-ಸೂರ್ಯಾಸ್ತಗಳ ನಿಯತಿಯಂತೆ ದೇಹವೂ ದಿನದ ಇಪ್ಪತ್ತನಾಲ್ಕು ಗಂಟೆಗಳ ಈ ಲಯವನ್ನು ಜೀವನಪೂರ್ತಿ ಕಾಪಿಟ್ಟುಕೊಳ್ಳಬೇಕು. ದೇಹದಲ್ಲಿನ ಹಾರ್ಮೋನುಗಳ ಏರಿಳಿತಗಳು, ಉಷ್ಣತೆಯಲ್ಲಿನ ಏರಿಳಿತಗಳು, ರಾಸಾಯನಿಕ ಕಣಗಳ ಚಲನೆಗಳು – ಈ ಜೈವಿಕ ಲಯವನ್ನು ಆಧರಿಸಿ ಇರುವುದು. ನಮ್ಮ ದೇಹದೊಳಗಿನ ಈ ಜೀವಲಯವು, ಇಪ್ಪತ್ತನಾಲ್ಕು ಗಂಟೆಗಳ ಸೂರ್ಯಗತಿಯ ದಿನದ ಲಯದೊಂದಿಗೆ ತಾಳ-ಮೇಳ ಹೊಂದದೇ ಇದ್ದಾಗ ದೇಹ-ಮನಸ್ಸುಗಳು ಅನಾರೋಗ್ಯಕ್ಕೆ ಒಳಗಾಗುವುದು.

ದೇಹದಲ್ಲಿ ಅಂತರ್ಗತವಾಗಿರುವ ಈ ಲಯವು ನಮ್ಮ ನಿದ್ರೆಯ ಅಭ್ಯಾಸವನ್ನು ಆಧರಿಸಿರುವುದು ಮತ್ತು ಮೆದುಳಿನಿಂದ ನಿಯಂತ್ರಣಗೊಳ್ಳುವುದೆಂಬುದನ್ನು ಬಹಳ ಜನ ಅರಿತಿರಲಾರರು. ಹಾರ್ಮೋನುಗಳ ಸ್ರಾವವಲ್ಲದೆ, ಪ್ರತಿಯೊಂದು ಕೂಡಾ ಇದಕ್ಕೆ ಸಂಬಂಧಿಸಿದೆ. ಉದಾಹರಣೆಗೆ ಹೇಳುವುದಾದರೆ ದೇಹದ ಉಷ್ಣತೆ., ಹಾರ್ಮೋನುಗಳಿಂದ ಪ್ರಭಾವಿತಗೊಂಡು, ದಿನದ ಮೊದಲ ಅವಧಿಯಲ್ಲಿ ಹೆಚ್ಚುವುದು, ಮಧ್ಯಾಹ್ನ ನಂತರ ಕಡಿಯಾಗುವುದು, ಸಂಜೆ ಮತ್ತೆ ಹೆಚ್ಚುವುದು, ರಾತ್ರೆಯಿಂದ ಮತ್ತೆ ಕಡಿಮೆಯಾಗುತ್ತಾ ಹೋಗುವುದು. ಕಾರ್ಟಿಸಾಲ್ ಎಂಬ ಹಾರ್ಮೋನು ಬೆಳಗ್ಗಿನ ಅವಧಿಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿ, ನಂತರದ ಹಗಲಿನ ಅವಧಿಯಲ್ಲಿ ಕಡಿಮೆಯಾಗುತ್ತಾ ಹೋಗುವುದು. ರಾತ್ರೆ ಪಾಳಿಯ ಕೆಲಸಗಾರರು, ತಮ್ಮ ಕೆಲಸದ ಜವಾಬ್ದಾರಿಯಿಂದಾಗಿ ನಿದ್ರೆಯಲ್ಲಿ ಅನಿಯಮಿತತೆ ಕಾರಣದಿಂದ ಪ್ರಬಲ ಹಾಗೂ ತೀವ್ರತರವಾದ ರೋಗಗಳಿಗೆ ತುತ್ತಾಗುವರು.

ಆದುದರಿಂದ , ಮುಂದೆ ಎಂದಾದರೂ ನೀವು ಅಸಹಜವಾಗಿ ಸುಸ್ತು, ಖಿನ್ನತೆ, ಆಲಸ್ಯ, ಬಾಯಾರಿಕೆ, ಹಸಿವೆ, ಮಾನಸಿಕವಾಗಿ ಚುರುಕುತನ ಕಳಕೊಳ್ಳುವುದು, ಮರೆವು, ಉದ್ರೇಕ- ಇತ್ಯಾದಿಗಳಿಗೆ ಒಳಗಾದಲ್ಲಿ ನಿಮ್ಮ ಇತ್ತೀಚೆಗಿನ ನಿದ್ರೆಯ ಪ್ರಮಾಣ, ಗುಣಮಟ್ಟ, ಅಭ್ಯಾಸಗಳನ್ನು ಆಳವಾಗಿ ಪರಿಶೀಲಿಸಿಕೊಳ್ಳಿ. ಮತ್ತು ವೈದ್ಯರು ಮತ್ತು  ಆಸ್ಪತ್ರೆಗಳಿಗೆ ತೆರಳುವ  ಮೊದಲು
ಈ ಕರ್ತವ್ಯ ಪಾಲಿಸಿ.ಆಗ  ಬದುಕೊಂದು  ಸುಂದರ  ನಂದನ.

ಡಾ. ಆರ್.ಪಿ.ಬಂಗಾರಡ್ಕ.
ಆಯುರ್ವೇದ ತಜ್ಞವೈದ್ಯರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ,
ಪಾದೆ,ನರಿಮೊಗರು,ಪುತ್ತೂರು.ದ.ಕ.
ಅಸಿಸ್ಟೆಂಟ್ ಪ್ರೊಫೆಸರ್,ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜ್,ಸುಳ್ಯ.
www.prasadini.com
mob:89044  74122

Share this: