Vydyaloka

ಮ್ಯುಕೋರ್ ಮೈಕೋಸಿಸ್ಸ್ ಅಥವಾ ಬ್ಲ್ಯಾಕ್ ಫಂಗಸ್ : ಕೋವಿಡ್-19 ರೋಗ ಬಂದವರಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕು ರೋಗ

ಮ್ಯುಕೋರ್ ಮೈಕೋಸಿಸ್ಸ್ ಅಥವಾ ಬ್ಲ್ಯಾಕ್ ಫಂಗಸ್  ಕೋವಿಡ್-19 ರೋಗ ಬಂದವರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕು ರೋಗ. ಕೋವಿಡ್ ಸೋಂಕು ತಗುಲಿದ ಸಮಯದಲ್ಲಿಯೇ ಈ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳಲೇಬೇಕೆ0ದಿಲ್ಲ ಕೋವಿಡ್-19 ರೋಗಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದ ಒಂದೆರಡು ವಾರದ ಬಳಿಕವೂ ಕಾಣಿಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ರೋಗ ಬಂದವರಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕು ಇದಾಗಿದ್ದು, ಇದನ್ನು ‘ ಬ್ಲ್ಯಾಕ್ ಫಂಗಸ್ ’ ಮತ್ತು ಝೈಗೋಮೈಕೋಸಿಸ್ ಅಂತಲೂ ಕರೆಯುತ್ತಾರೆ. ಇದೊಂದು ಹೊಸ ರೋಗವಲ್ಲ ಅತ್ಯಂತ ಪುರಾತನವಾದ ಖಾಯಿಲೆ ಆಗಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಸಿದವರಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಳ್ಳುತ್ತದೆ.  ಮ್ಯುಕೋರ್ ಮೈಸಿಟಿಸ್  ಎಂಬ ಶಿಲೀಂಧ್ರ ಗಳಿಂದ ಈ ರೋಗ ಬರುತ್ತದೆ. ಅನಿಯಂತ್ರಿತ ಮಧುಮೇಹ, ಇತರ ಕಾರಣಗಳಿಂದ ಸ್ಟೀರಾಯ್ದ್ ಚಿಕಿತ್ಸೆ ತೆಗೆದು ಕೊಳ್ಳುವವರು, ಕ್ಯಾನ್ಸರ್ ರೋಗಕ್ಕೆ ಕಿಮೋ ತೆರಪಿ ಚಿಕಿತ್ಸೆ ಪಡೆಯುವ ಮುಂತಾದವರಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಕುಸಿಯುವ ಕಾರಣದಿಂದ ಇಂದಿನವರಿಗೆ ಈ ‘ ಬ್ಲ್ಯಾಕ್ ಫಂಗಸ್ ’ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ರೋಗದ ಲಕ್ಷಣಗಳು ಏನು?

1. ಮುಖ ಊದಿಕೊಳ್ಳುವುದು ಮತ್ತು ವಿಪರೀತ ನೋವು ಇರುತ್ತದೆ.
2. ತಲೆ ಬಾರ ಮತ್ತು ತಲೆ ನೋವು ಇರುತ್ತದೆ.
3. ಮೂಗು ಕಟ್ಟಿದಂತೆ ಅನಿಸುವುದು ಮತ್ತು ಮೂಗಿನಿಂದ ಕೀವು ಮತ್ತು ದ್ರವ ಒಸರುವಿಕೆ.
4. ಯಾವುದೇ ಔಷಧಿಗಳಿಗೆ ಸ್ಪಂದಿಸದ ಜ್ವರ ಇರುತ್ತದೆ.
5. ಬಾಯಿಯೊಳಗಿನ ಪದರ, ಒಸಡು ಮತ್ತು ನಾಲಿಗೆ ಮೇಲ್ಬಾಗದಲ್ಲಿ ಬಣ್ಣ ಬದಲಾಗುವುದು, ಹುಣ್ಣು ಉಂಟಾಗುವುದು ಮತ್ತು ಕಪ್ಪು ಬಣ್ಣಕ್ಕೆ ತಿರುಗುವುದು ಕಂಡು ಬರುತ್ತದೆ.
6. ಮುಂದುವರಿದ ಹಂತದಲ್ಲಿ ಬಾಯಿಯೊಳಗಿನ ಚರ್ಮ ಮತ್ತು ವಸಡು ಕೊಳೆತು ರೋಗಿ ಒಳಗಿನ ಎಲುಬು ಹೊರಗೆ ಕಂಡು ಬರುತ್ತದೆ. ವಿಪರೀತ ಬಾಯಿ ವಾಸನೆ ಕೂಡ ಇರುತ್ತದೆ.
7. ಕಣ್ಣು ಮಂಜಾಗುವುದು ಮತ್ತು ದೃಷ್ಠಿಯಲ್ಲಿ ನ್ಯೂನತೆ ಕಂಡುಬರುತ್ತದೆ. ಕಣ್ಣಿನ ಕೆಳಭಾಗದಲ್ಲಿ ವಿಪರೀತ ನೋವು ಮತ್ತು ಯಾತನೆ ಇರುತ್ತದೆ. ತಕ್ಷಣವೇ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆಯದಿದ್ದಲ್ಲಿ ಕಣ್ಣಿನ ದೃಷ್ಠಿ ಕೂಡ ಇಲ್ಲದಂತಾಗಿ ಶಾಶ್ವತ ಅಂಧತ್ವ ಬರಬಹುದು ಮತ್ತು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಮಾರಣಾಂತಿಕವಾಗುವ ಎಲ್ಲಾ ಸಾಧ್ಯತೆಗಳು ಇದೆ.

ಕೋವಿಡ್ ರೋಗಿಗಳಲ್ಲಿ ಜಾಸ್ತಿ ಯಾಕೆ?

1. ಕೋವಿಡ್-19 ರೋಗ ಕೂಡಾ ದೇಹದ ರಕ್ಷಣಾ ವ್ಯವಸ್ಥೆ ಜೊತೆ ನೇರವಾದ ಸಂಬಂಧ ಹೊಂದಿದೆ. ರಕ್ಷಣಾ ವ್ಯವಸ್ಥೆ ಕಸಿದ ರೋಗಿಗಳಲ್ಲಿ ಕೋವಿಡ್-19 ರೋಗ ಹೆಚ್ಚು ಉಗ್ರವಾಗಿ ಕಾಣಿಸಿಕೊಳ್ಳುತ್ತದೆ.

2. ಎರಡನೆಯದಾಗಿ ಮುಂದುವರಿದ ಹಂತದಲ್ಲಿ ಕೋವಿಡ್-19 ರೋಗದ ಚಿಕಿತ್ಸೆಯಲ್ಲಿ ಸ್ಟೀರಾಯಿಡ್ ಬಳಕೆ ಅತೀ ಅವಶ್ಯಕ. ಇದು ಕೂಡಾ ರೋಗಿಯ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಕುಸಿಯುವಂತೆ ಮಾಡುತ್ತದೆ.

3. ಕೋವಿಡ್ ರೋಗಿಗಳಲ್ಲಿ ದೇಹದ ಆಮ್ಲಜನಕ ಪ್ರಮಾಣ ಕುಸಿದಾಗ, ಮೂಗಿನ ನಳಿಕೆಗಳ ಮುಖಾಂತರ ಅಥವಾ ಬಾಯಿ ಮುಖಾಂತರ ಹಾಕಿದ ಟ್ಯೂಬ್‍ಗಳ ಮುಖಾಂತರ ಆಮ್ಲಜನಕವನ್ನು ನೀಡಲಾಗುತ್ತದೆ. ಇಲ್ಲಿ ಒಣ ಆಮ್ಲಜನಕ ನೀಡುವುದಿಲ್ಲ. ಹ್ಯೂಮಿಡಿಫೈಯರ್ ಬೆರೆಸಿದ ಆಮ್ಲಜನಕ ನೀಡಿ ದೇಹಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ಈ ಹ್ಯೂಮಿಡಿಫೈಯರ್ ಉದ್ದೇಶಕ್ಕೆ ಬಳಸುವ ನೀರು ಪರಿಶುದ್ದವಾಗಿರಬೇಕು. ಕಲುಶಿತ ಮತ್ತು ಸೋಂಕಿತ ನೀರು ಬಳಸಿದಲ್ಲಿ ಅದರ ಮುಖಾಂತರ ಶೀಲಿಂಧ್ರಗಳು ದೇಹಕ್ಕೆ ಸೇರಿ ಮಾರಾಣಾಂತಿಕ ಮ್ಯುಕೋರ್‍ಮೈಕೋಸಿಸ್ ರೋಗ ಬಂದಿರುವುದು ವರದಿಯಾಗಿದೆ.

ಕೋವಿಡ್ ಸೋಂಕು ತಗುಲಿದ ಸಮಯದಲ್ಲಿಯೇ ಈ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳಲೇಬೇಕೆ0ದಿಲ್ಲ ಕೋವಿಡ್-19 ರೋಗಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದ ಒಂದೆರಡು ವಾರದ ಬಳಿಕವೂ ಕಾಣಿಸಿಕೊಳ್ಳಬಹುದು. ಕೋವಿಡ್ ರೋಗ ಬಂದವರಲ್ಲಿ ಮೂಗು ಕಟ್ಟುವುದು. ಮೂಗಿನಲ್ಲಿ ಕೀವು ಸ್ರವಿಸುವಿಕೆ, ಕಣ್ಣು ಮಂಜಾಗುವುದು, ತಲೆನೋವು, ಜ್ವರ, ತಲೆಬಾರ, ಮುಖ ಊದಿಕೊಳ್ಳುವುದು, ಬಾಯಿಯಲ್ಲಿ ಹುಣ್ಣು ಮುಂತಾದವುಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.

ಈ ಶಿಲೀಂಧ್ರ ಎಲ್ಲಿ ಬದುಕುತ್ತದೆ?

ಮ್ಯುಕೋರ್ ಮೈಸಿಟಿಸ್ ಎಂಬ ಶಿಲೀಂಧ್ರ ವಾತಾವರಣದ ಎಲ್ಲೆಡೆ ಇರುತ್ತದೆ. ಗಾಳಿಯಲ್ಲಿಯೂ ಹಾರಾಡುತ್ತಿರುತ್ತದೆ. ಸಾಮಾನ್ಯವಾಗಿ ಮಣ್ಣು, ಕೊಳೆಯುತ್ತಿರುವ ಜೈವಿಕ ವಸ್ತುಗಳು, ಗೊಬ್ಬರದ ಗುಂಡಿ, ಪಶುಗಳು ಮಲಮೂತ್ರ ಮಾಡಿದ ಜಾಗ, ತಿಪ್ಪೇಗುಂಡಿಗಳು ಮುಂತಾದ ಕಡೆ ಈ ಶಿಲೀಂದ್ರ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ಅದೇ ರೀತಿ ಸ್ವಚ್ಚತೆ ಇಲ್ಲದ ಬ್ಯಾಂಡೇಜ್, ಶುಚಿಗೊಳಿಸದ ಆಸ್ಪತ್ರೆ ಹಾಸಿಗೆಗಳು, ನೀರು ಸೋರುವ ಜಾಗ, ಅಸಮರ್ಪಕ ವಾಯು ಸಂಚಾರದ ಜಾಗ, ಶುಚಿಗೊಳಿಸದ ವೈದ್ಯಕೀಯ ಉಪಕರಣಗಳು, ಕಟ್ಟಡ ನಿರ್ಮಾಣ ಜಾಗಗಳು, ಕೊಚ್ಚೆ ನೀರು ನಿಂತ ಜಾಗಗಳಲ್ಲಿ ಈ ಶೀಲೀಂಧ್ರ ಹೆಚ್ಚು ಕಂಡು ಬರುತ್ತದೆ. ಉಸಿರಾಟದ ಮುಖಾಂತರ ಮತ್ತು ಚರ್ಮದ ಮೇಲಿನ ಗಾಯದ ಮುಖಾಂತರ ಈ ಶಿಲೀಂದ್ರ ದೇಹಕ್ಕೆ ಸೇರಿಕೊಳ್ಳುತ್ತದೆ.

ಹೇಗೆ ರೋಗ ತಡೆಗಟ್ಟಬಹುದು?

1) ಕೋವಿಡ್-19 ಸೋಂಕಿನ ವ್ಯಕ್ತಿಗಳ ಬಾಯಿಯ ಆರೋಗ್ಯವನ್ನು ಅತ್ಯಂತ ಜಾಗರೂಕತೆಯಿಂದ ಜತನ ಮಾಡಿಕೊಳ್ಳಬೇಕು. ಕೋವಿಡ್ ಸೋಂಕು ಸಮಯದಲ್ಲಿ ಬಳಸಿದ ಬ್ರಷ್‍ಗಳನ್ನು ಮುಲಾಜಿಲ್ಲದೆ ವಿಸರ್ಜಿಸಿ, ಇತರರ ಟೂತ್‍ಬ್ರಶ್ ಜೊತೆಗೆ ಇಡಬೇಡಿ. ಟೂತ್‍ಬ್ರಶ್‍ಗಳನ್ನು ಹಂಚಿಕೊಳ್ಳುವುದು ಬಹಳ ಅಪಾಯಕಾರಿ. ಹಲ್ಲುಜ್ಜುವ ಮೊದಲು ಬ್ರಶ್‍ಗಳನ್ನು ಕ್ರಿಮಿನಾಶಕ ದ್ರಾ ವಣ ಬಳಸಿ ಶುಚಿಗೊಳಿಸಿಕೊಳ್ಳಬೇಕು.

2) ದಿನಕ್ಕೆರಡು ಬಾರಿ ಹಲ್ಲುಜ್ಜಬೇಕು ಮತ್ತು ದಿನಕ್ಕೆರಡು ಬಾರಿ ಕ್ಲೋರ್‍ಹೆಕ್ಸಿಡನ್ 0.2 ಶೇಕಡಾ ದ್ರಾವಣದಿಂದ ಬಾಯಿ ಮುಕ್ಕಳಿಸತಕ್ಕದ್ದು. ಅದೇ ರೀತಿ ದಿನಕ್ಕೊಮ್ಮೆ ಬೀಟಾಡೈನ್ ಎಂಬ ಅಯೋಡಿನ್ ನ 5 ಶೇಕಡಾ ದ್ರಾವಣದಿಂದ ಬಾಯಿ ಮುಕ್ಕಳಿಸತಕ್ಕದ್ದು.

3) ಮಧುಮೇಹ ರೋಗಿಗಳು ಕೋವಿಡ್ ಬರುವ ಮೊದಲು ಮತ್ತು ಕೋವಿಡ್-19 ರೋಗ ಬಂದ ಬಳಿಕವೂ ಬಹಳ ಜಾಗರೂಕರಾಗಿರಬೇಕು. ಈ ಮ್ಯುಕೋರ್‍ಮೈಕೋಸಿಸ್ ಶೀಲೀಂಧ್ರ ಸೋಂಕು ಕೋವಿಡ್-19 ರೋಗ ಇಲ್ಲದೆಯೂ ಮಧುಮೇಹಿಗಳಲ್ಲಿ ಕಂಡು ಬರುತ್ತದೆ. ಈ ಕಾರಣದಿಂದ ಮಧುಮೇಹ ರೋಗ ಇರುವ ಕೋವಿಡ್-19 ರೋಗ ಬಂದ ರೋಗಿಗಳು ಮತ್ತಷ್ಟೂ ಜಾಗರೂಕರಾಗಿರಬೇಕು.

4) ವೈರಾಣುಗಳು ಮತ್ತು ಶಿಲೀಂಧ್ರಗಳು ತಣ್ಣಗಿನ ವಾತವರಣವನ್ನು ಹೆಚ್ಚು ಇಷ್ಟಪಡುತ್ತದೆ. ಈ ಕಾರಣದಿಂದ ತಂಪಾಗಿರುವ ಪಾನೀಯ, ಜ್ಯೂಸ್‍ಗಳು, ತಣ್ಣಗಿರುವ ಆಹಾರವನ್ನು ಕೋವಿಡ್-19 ಸೋಂಕಿನ ಸಮಯಲ್ಲಿ ಸೇವಿಸಬೇಡಿ. ಹೆಚ್ಚು ಬಿಸಿಯಾಗಿರುವ ಆಹಾರವನ್ನೇ ಸೇವಿಸಿ. ದಿನಕ್ಕೆ ನಾಲ್ಕೈದು ಬಾರಿ ಬಿಸಿನೀರಿನಿಂದ ಬಾಯಿ ತೊಳೆಯಬಹುದು. ಬೇಕಾದರೆ ಒಂದಷ್ಟು ಉಪ್ಪು ಸೇರಿಸಿ, ಉಪ್ಪಿನ ದ್ರಾವಣದಿಂದ ಬಾಯಿ ಮುಕ್ಕಳಿಸಬಹುದು.

5) ಕೋವಿಡ್ ಸೋಂಕಿತ ಮಧುಮೇಹ ರೋಗಿಗಳು ಮತ್ತು ವಯಸ್ಕರು ಕಡ್ಡಾಯವಾಗಿ ಬಿಸಿನೀರಿನ ಹಬೆಯನ್ನು ದಿನಕ್ಕೆ ನಾಲ್ಕೈದು ಬಾರಿಯಾದರೂ ಬಳಸತಕ್ಕದ್ದು. ಈ ರೀತಿ ಮಾಡುವುದರಿಂದ ವೈರಸ್ ಮತ್ತು ಶೀಲೀಂದ್ರಗಳ ನಾಶವಾಗುತ್ತದೆ ಮತ್ತು ಅವುಗಳ ವಂಶಾಬಿವೃದ್ದಿ ಮಾಡಲು ಅಡ್ಡಿಯಾಗುತ್ತದೆ. ಸಾಮಾನ್ಯವಾಗಿ ಸದಾ ಒದ್ದೆಯಾಗಿರುವ ಬಾಯಿ ಮತ್ತು ಮೂಗಿನಲ್ಲಿ ಈ ಶೀಲೀಂದ್ರಗಳು ಮತ್ತು ವೈರಾಣುಗಳು ಹೆಚ್ಚು ಕಂಡುಬರುತ್ತದೆ.

6) ದೇಹದ ಶುಚಿತ್ವಕ್ಕೆ ಹೆಚ್ಚು ಗಮನ ನೀಡಬೇಕು.ಕೊಳಕು ಬಟ್ಟೆ ಮತ್ತು ಒದ್ದೆ ಬಟ್ಟೆ ಧರಿಸಬೇಡಿ. ಮಲಗುವ ಹಾಸಿಗೆ ಹೊದಿಕೆಗಳ ಶುಚಿತ್ವಕ್ಕೆ ಹೆಚ್ಚು ಗಮನ ನೀಡಬೇಕು.

7) ದೇಹದ ರಕ್ಷಣಾ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುವ ಯಾವುದೇ ಔಷಧಿ ಮತ್ತು ಆಹಾರವನ್ನು ಸೇವಿಸಬೇಡಿ. ರಕ್ಷಣಾ ವ್ಯವಸ್ಥೆಯನ್ನು ವೃಧ್ದಿಸುವ ಆಹಾರವನ್ನು ವೈದ್ಯರ ಸಲಹೆಯಂತೆ ಸೇವಿಸತಕ್ಕದ್ದು.

ಚಿಕಿತ್ಸೆ ಹೇಗೆ?

ಅರೋಗ್ಯವಂತ ವ್ಯಕ್ತಿಗಳ ಸಂಪರ್ಕಕ್ಕೆ ಈ ಶಿಲೀಂಧ್ರ ಬಂದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ರೋಗ ನಿರೋಧಕ ಶಕ್ತಿ ಕುಂದಿರುವವರಲ್ಲಿ ಈ ಶೀಲೀಂಧ್ರ ಮಾರಾಣಾಂತಿಕವಾಗಿ ಕಾಡುತ್ತದೆ. ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯತಕ್ಕದ್ದು. ಸಾಮಾನ್ಯವಾಗಿ ಇಂತಹ ರೋಗಿಗಳನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದ ಒಳ ರೋಗಿಯಾಗಿ ದಾಖಲಾತಿ ಮಾಡಿ ಚಿಕಿತ್ಸೆ ನೀಡುತ್ತಾರೆ. ದೇಹದ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‍ಯುಕ್ತ, ಪೋಷಕಾಂಶಯುಕ್ತ ದ್ರಾವಣಗಳು, ಆ್ಯಂಟಿಬಯಾಟಿಕ್ ಮತ್ತು ಶಿಲೀಂಧ್ರ ನಾಶಪಡಿಸುವ ಶಿಲೀಂಧ್ರ ನಾಶಕ ಔಷಧಗಳನ್ನು ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತದೆ. ‘ಆಂಪೋಟೆರಿಸಿನ್’ ಎಂಬ ಶಿಲೀಂಧ್ರ ನಾಶಕ ಬಹಳ ಉಪಯುಕ್ತ ಎನ್ನಲಾಗಿದೆ. ದೇಹದ ಭಾಗ ಶಿಲೀಂಧ್ರಗಳಿಂದ ಕೊಳೆತು ಹೋಗಿದ್ದಲ್ಲಿ ಆ ಭಾಗವನ್ನು ಸರ್ಜರಿ ಮುಖಾಂತರ ಕಿತ್ತು ತೆಗೆದು ಆ ಭಾಗಕ್ಕೆ ರಕ್ತ ಸಂಚಲನೆ ಹೆಚ್ಚಿಸಿ ಗಾಯ ಒಣಗುವಂತೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಶಿಲೀಂಧ್ರ ರೋಗಕ್ಕೆ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು, ಕಿವಿ, ಮೂಗು, ಗಂಟಲು ತಜ್ಞರು ಮತ್ತು ಫಿಸಿಷಿಯನ್ ವೈದ್ಯರು ಒಟ್ಟು ಸೇರಿ ಚಿಕಿತ್ಸೆ ನೀಡುತ್ತಾರೆ. ಹಲವು ವೈದ್ಯರ ಸಾಂಘಿಕ ಪ್ರಯತ್ನದಿಂದ ರೋಗಿ ಗುಣಮುಖವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ಎಲುಬಿಗೆ ರಕ್ತಪರಿಚಲನೆ ಹೆಚ್ಚಿಸುವ ಸಲುವಾಗಿ “ ಹೈಪರ್ ಬೇರಿಕ್ ಆಕ್ಸಿಜನ್ ಥೆರಪಿ” ಎಂಬ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ಒಟ್ಟಿನಲ್ಲಿ ರೋಗಿಯ ವಯಸ್ಸು, ಗಾತ್ರ, ತೂಕ, ಲಿಂಗ ಮತ್ತು ದೇಹದ ಇತರ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಚಿಕಿತ್ಸೆಯ ವಿಧಾನವನ್ನು ಮತ್ತು ಔಷಧಿಯ ಪ್ರಮಾಣವನ್ನು ವೈದ್ಯರೇ ನಿರ್ಧರಿಸುತ್ತಾರೆ.

ಕೊನೆ ಮಾತು?

ಮ್ಯುಕೋರ್‍ಮೈಕೋಸಿಸ್ ಅತೀ ವಿರಳ ಶಿಲೀಂಧ್ರ ಸೋಂಕು ಆಗಿದ್ದು, ಇತ್ತೀಚಿಗೆ ಕೋವಿಡ್-19 ರೋಗ ಸೋಂಕಿತರಲ್ಲಿ ಹೆಚ್ಚು ಕಂಡುಬರುತ್ತಿದೆ. ಕೊಳೆಯುತ್ತಿರುವ ಹಣ್ಣು, ತರಕಾರಿ, ಮಣ್ಣು, ಗಿಡಗಳಲ್ಲಿ ಕಂಡುಬರುವ ಶಿಲೀಂಧ್ರ ನಮ್ಮ ದೇಹಕ್ಕೆ ಸೇರಿಕೊಳ್ಳುತ್ತದೆ. ಆರೋಗ್ಯವಂತ ವ್ಯಕ್ತಿಗಳಿಗೆ ಏನೂ ತೊಂದರೆ ಆಗುವುದಿಲ್ಲ, ಕಾರಣಂತರಗಳಿಂದ ನಮ್ಮ ದೇಹದಲ್ಲಿ ಶಿಲೀಂಧ್ರ ಸೇರಿದ ಬಳಿಕ  ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ ಇದೇ ಶಿಲೀಂಧ್ರಗಳು ನಮ್ಮ ದೇಹದ ಸೈನಸ್, ಶ್ವಾಸಕೋಶ, ಮೆದುಳುಗಳಲ್ಲಿ ಮಾರಣಾಂತಿಕ ಸೋಂಕು ಉಂಟು ಮಾಡುತ್ತದೆ. 50 ಶೇಕಡಾ ಮರಣದ ಪ್ರಮಾಣ ಹೊ0ದಿರುವ ಈ ಸೋಂಕು, ಕೋವಿಡ್ ರೋಗಿಗಳಲ್ಲಿ 80 ಶೇಕಡ ಮಾರಣಾಂತಿಕ ಎಂದು ವರದಿಯಾಗಿದೆ. ಭಾರತದಲ್ಲಿ ಕಳೆದ ಡಿಸೆಂಬರ್ ನಿಂದ ಈ ವರೆಗೆ ನೂರರಷ್ಟು ಮಂದಿ ಈ ರೋಗಕ್ಕೆ ತುತ್ತಾಗಿ, 50 ಶೇಕಡಾ ಮಂದಿ ಜೀವ ತೆತ್ತಿದ್ದಾರೆ ಮತ್ತು 10 ಶೇಕಡಾ ಮಂದಿ ಶಾಶ್ವತ ಅಂಧತ್ವ ಪಡೆದಿರುತ್ತಾರೆ. ಈ ನಿಟ್ಟಿನಲ್ಲಿ ಕೋವಿಡ್-19 ಸೋಂಕಿತರಲ್ಲಿ ಸ್ಟಿರಾಯ್ದ್ ನೀಡುವಾಗ ವಿಶೇಷ ಮುತುವರ್ಜಿ ವಹಿಸಬೇಕು ಮತ್ತು ಚಿಕಿತ್ಸೆ ಮುಗಿದ ಬಳಿಕವೂ ನಿರಂತರವಾದ ಆರೈಕೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ.

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com

Share this: