Vydyaloka

ಋತುಸ್ರಾವದ ನೋವು, ಉದ್ವೇಗ

ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು, ಅಂದರೆ ಮೂರರಿಂದ ಏಳು ದಿನಗಳ ಮೊದಲು ಕೆಲವು ವಿಶಿಷ್ಟ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಶುರುವಾಗುತ್ತವೆ. ಈ ತೊಂದರೆಗಳು ಪ್ರತಿ ತಿಂಗಳು ಸುಮಾರು 20 ರಿಂದ 45 ವರ್ಷದ ಹೆಂಗಸರಲ್ಲಿ ಕಾಣಿಸಿಕೊಳ್ಳಬಹುದು. ಮಹಿಳೆಯರ ‘ಮೂಡ್’ನಲ್ಲಿ ಬದಲಾವಣೆಯಾಗುವುದು ಇದರ ಪ್ರಧಾನ ಲಕ್ಷಣ. ಇದು ಪಾಶ್ಚಾತ್ಯ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವುದು. ಭಾರತೀಯ ಮಹಿಳೆಯರಲ್ಲೂ ಈ ತೊಂದರೆ ಕಾಣಿಸಿಕೊಳ್ಳುವುದು, ಆದರೆ ಅನೇಕರು ತಮ್ಮ ನಿತ್ಯ ಜೀವನದ ಕೆಲಸದಲ್ಲಿ ಮುಳುಗಿ ಬಿಡುವುದರಿಂದ ಈ ನೋವನ್ನು ನುಂಗಿಕೊಳ್ಳುತ್ತಾರೆ.

ಈ ತೊಂದರೆಗೆ ಹಾರ್ಮೋನ್‍ಗಳು ಕಾರಣವೆಂದು ತಿಳಿಸಲಾಗಿದೆ. ಅವುಗಳಲ್ಲಿ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್‍ಗಳಲ್ಲಿ ಆಗುವ ಏರಿಳಿತ ಈ ತೊಂದರೆಗಳಿಗೆ ಪ್ರಮುಖ ಕಾರಣ. ಜೊತೆಗೆ ಅಗತ್ಯವಾದ ಫ್ಯಾಟಿ ಆ್ಯಸಿಡ್‍ಗಳ ಕೊರತೆಯೂ ಸಹ ಈ ತೊಂದರೆಯನ್ನು ಹೆಚ್ಚಿಸಬಹುದು ಎಂದು ನಂಬಲಾಗಿದೆ.
ಅಂಡವು ಅಂಡಾಶಯದಿಂದ ಬಿಡುಗಡೆಯಾದ ನಂತರ ಇತರ ರಸದೂತಗಳಾದ ಫೊಲಿಕ್ಯುಲರ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್, ಲ್ಯುಟಿನೈಜಿಂಗ್ ಹಾರ್ಮೋನ್ ಗಳ ಏರಿಳಿತದಿಂದಲೂ ಆಗಬಹುದು.

ಈ ತೊಂದರೆಗೆ ಹಲವಾರು ಚಿಕಿತ್ಸೆಗಳು ಬಂದಿವೆ. ಮೊದಲನೆಯದಾಗಿ ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ.
ಯೋಗ : ಆಸನ, ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ ಏರಿಳಿತವನ್ನು ಕಡಿಮೆಗೊಳಿಸಬಹುದು. ಮನಸ್ಸು ಮತ್ತು ದೇಹವನ್ನು ಸಮತೋಲನ ಸ್ಥಿತಿಗೆ ತರಲು ಯೋಗ ಸಹಕಾರಿ. ತಜ್ಞರ ಮಾರ್ಗದರ್ಶನದಲ್ಲಿ ಯೋಗ ಕಲಿತು ಮುಟ್ಟಿನ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
ಆಹಾರ : ದೇಹದಲ್ಲಿ ಹೆಚ್ಚು ನೀರು ಸೇರಿಕೊಳ್ಳುವದರಿಂದ ಮುಟ್ಟಿಗೆ ಮುನ್ನ 10 ದಿನವಾದರೂ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಹೆಚ್ಚು ಮೂತ್ರವರ್ಧಕ ಆಹಾರವನ್ನು ಸೇವಿಸಿ. ಉದಾ: ಬಾಳೆದಿಂಡಿನ ರಸ, ಬೂದುಗುಂಬಳ ರಸ, ಬಾರ್ಲಿನೀರು, ಕಲ್ಲಂಗಡಿ ಹಣ್ಣು, ಸೌತೆಕಾಯಿ ರಸ, ಕಿತ್ತಳೆ, ಎಳನೀರು ಮುಂತಾದವುಗಳನ್ನು ಸೇವಿಸಬಹುದು. ಟೀ, ಕಾಫಿಯನ್ನು ತ್ಯಜಿಸಿ.
ಪಿಷ್ಠ ಶರ್ಕರಗಳನ್ನೊಳಗೊಂಡ ಆಹಾರದ ಜೊತೆಗೆ ಹೆಚ್ಚು ತಾಜಾ ಹಣ್ಣು ಹಂಪಲುಗಳನ್ನು ಸೇವಿಸಿ.
ಬೇಕರಿ ಪದಾರ್ಥ, ಉಪ್ಪು ಮಿಶ್ರಿತ ಸಂಸ್ಕರಿತ ಆಹಾರ ತ್ಯಜಿಸಿ.
ವ್ಯಾಯಾಮ : ಬೆವರು ಬರುವಂತೆ ಪ್ರತಿದಿನ 30 ನಿಮಿಷಗಳ ಲಘು ವ್ಯಾಯಾಮ ಅಥವಾ ಬ್ರಿಸ್ಕ್ ವಾಕಿಂಗ್ ಮಾಡಿ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗ ಆಸ್ಪತ್ರೆ, ಐದು ರಸ್ತೆ ಸರ್ಕಲ್, ಶಿರಸಿ, ಉ.ಕ.
9243772444, ದೂ.: 08384-225414

Share this: