Vydyaloka

ಮತ್ತೆರಡು ಚೈನಾವೈರಸ್ ಕಾಟಗಳು – ಜಗತ್ತಿಗೆ ಮತ್ತೊಂದು ತಲೆನೋವು ಸಾಧ್ಯತೆ

ಮತ್ತೆರಡು ಚೈನಾವೈರಸ್ ಕಾಟಗಳು ತಮ್ಮ ಉಪಟಳವನ್ನು ಶುರುಮಾಡಿರುವ ಬಗ್ಗೆ ವರದಿಯಾಗಿವೆ. ಕೋವಿಡ್ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ. ಹಂದಿ ಜ್ವರ, ಎಚ್1ಎನ್1, ಸಾರ್ಸ್ ಹೀಗೆ ಹತ್ತು ಹಲವಾರು ಮಾರಕ ವೈರಸ್‍ಗಳ ತವರೂರಾಗಿರುವ ಚೀನಾದಿಂದ ಇಡೀ ವಿಶ್ವಕ್ಕೇ ಇನ್ನಷ್ಟು ತೊಂದರೆಗಳು ಆಗದಿರಲಿ .

ಕೋವಿಡ್ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೇ ಚೈನಾದಲ್ಲಿ ಮತ್ತೆರಡು ವೈರಾಣುಗಳು ತಮ್ಮ ಉಪಟಳವನ್ನು ಶುರುಮಾಡಿರುವ ಬಗ್ಗೆ ವರದಿಯಾಗಿವೆ. ಈ ವೈರಸ್‍ಗಳನ್ನು ಎಸ್‍ಎಫ್‍ಟಿಎಸ್‍ವಿ (ಸೀವಿಯರ್ ಫೀವರ್ ವಿಥ್ ಥ್ರೋಂಬೋ ಬೊಕ್ಯಾಟೋಪಿನಿಯ ಸಿಂಡ್ರೋಮ್ ಬುನಿವೈರಸ್) ಹಾಗೂ ಬುಬೋನಿಕ್ ಪ್ಲೇಗ್ ಎಂದು ಗುರುತಿಸಲಾಗಿದೆ. ಈ ವೈರಸ್‍ಗಳಿಂದ ಈಗಾಗಲೇ ಸಾವು ನೋವುಗಳು ಶುರುವಾಗಿದ್ದು ಜಗತ್ತಿಗೆ ಮತ್ತೊಂದು ತಲೆನೋವು ಬರುವ ಎಲ್ಲಾ ಸಾಧ್ಯತೆಗಳೂ ಇವೆ.

ಏನಿದು ಬುನ್‍ಯಾ ವೈರಸ್?

ಸೀವಿಯರ್ ಫೀವರ್ ವಿಥ್ ಥ್ರೋಂಬೋ ಬೊಕ್ಯಾಟೋಪಿನಿಯ ಸಿಂಡ್ರೋಮ್ ಬುನಿವೈರಸ್ ಹೆಸರಿನ ಈ ವೈರಾಣುವನ್ನು ವಿಜ್ಞಾನಿಗಳು ಬುನ್ಯಾ ಹೆಸರಿನ ವೈರಸ್ ವರ್ಗಕ್ಕೆ ಸೇರಿಸಿದ್ದಾರೆ. ಉಣ್ಣೆಗಳು ಕಚ್ಚುವಿಕೆಯಿಂದ ಈ ವೈರಾಣು ಮನುಷ್ಯನ ದೇಹ ಸೇರುತ್ತಿದ್ದು ಈಗಾಗಲೇ ಈ ಅಪಾಯಕಾರಿ ಸೋಂಕಿನಿಂದ ಚೀನಾದ ಜಿಯಾಂಗ್ಸು ಪ್ರಾಂತದಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದು 60ಕ್ಕೂ ಹೆಚ್ಚು ಜನರು ಈ ಸೋಂಕಿಗೆ ಒಳಗಾಗಿದ್ದಾರೆ.

ಉಣ್ಣೆಯಿಂದ ಕಡಿಸಿಕೊಂಡ 7 ರಿಂದ 13 ದಿನಗಳ ಅವಧಿಯಲ್ಲಿ ರೋಗಿಯಲ್ಲಿ ಜ್ವರ, ಬಳಲಿಕೆ, ಚಳಿ ನಡುಕ, ತಲೆನೋವು, ವಾಕರಿಕೆ, ವಾಂತಿ, ಉರಿಯೂತ, ಹಸಿವು ಇಲ್ಲದಿರುವಿಕೆ, ಸ್ನಾಯು ನೋವು, ಹೊಟ್ಟೆ ನೋವು, ಬೇಧಿ, ವಸಡಿನ ರಕ್ತಸ್ರಾವ, ಕಣ್ಣಿನ ಉರಿ ಮುಂತಾದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೇ ಪ್ಲೇಟಲೆಟ್ ಹಾಗೂ ಬಿಳಿ ರಕ್ತಕಣಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತದೆ. ತೀವ್ರ ಜ್ವರವೇ ಈ ರೋಗದ ಆರಂಭಿಕ ಲಕ್ಷಣವಾಗಿದ್ದು, ರೋಗ ಗಂಭೀರವಾದರೆ ಬಹು ಅಂಗವೈಫಲ್ಯ, ಮೆದುಳಿನ ರಕ್ತಸ್ರಾವ ಹಾಗೂ ಕೇಂದ್ರ ನರವ್ಯೂಹದಲ್ಲಿ ವೈಫಲ್ಯ ಉಂಟಾಗಬಹುದು. ಸಾವಿನ ಪ್ರಮಾಣ ಶೇಕಡಾ 30ರಷ್ಟು ಇರುವುದು ಈ ರೋಗ ತೀವ್ರತೆಯ ವಿಷಯದಲ್ಲಿ ಚಿಂತೆಗೀಡುಮಾಡಿವೆ.

ಈ ರೋಗಕ್ಕೆ ಮದ್ದೇನು?

ಹಿಮಾಫೈಸೇಲಿಸ್ ಲಾಂಗಿಕಾರ್ನಿಕ್ ಎಂಬ ಉಣ್ಣೆಯೇ ಈ ಬುನಿವೈರಾಣುವಿನ ಪ್ರಾಥಮಿಕ ವಾಹಕವಾಗಿದ್ದು ಮಾರ್ಚ್‍ನಿಂದ ನವೆಂಬರ್ ಅವಧಿಯಲ್ಲಿ ಇದರ ಹರಡುವಿಕೆ ಹೆಚ್ಚು. ಪ್ರಾಣಿಗಳ ಸಂಪರ್ಕಕ್ಕೆ ನಿರಂತರವಾಗಿ ಬರುವ ಸಾಕುಪ್ರಾಣಿ ಮಾಲಿಕರು, ಪಶುಪಾಲಕರು ಹಾಗೂ ಬೇಟೆಗಾರರು ಈ ಉಣ್ಣೆಗಳ ಕಡಿತಕ್ಕೆ ಒಳಗಾಗಬಹುದು. ಆಡು, ಆಕಳು, ಜಿಂಕೆ, ಕುರಿಗಳಿಂದ ಇವು ಮನುಷ್ಯನ ಮೈಗೆ ದಾಟುತ್ತವೆ. ಮನುಷ್ಯರಲ್ಲಿ ಈ ರೋಗ ಉಲ್ಭಣವಾಗುತ್ತದೆಯಾದರೂ ಪ್ರಾಣಿಗಳಿಗೆ ಇದು ಮಾರಕವಾದ ನಿದರ್ಶನ ಕಂಡುಬಂದಿಲ್ಲ. ಹಾಗಂತ ಈ ವೈರಾಣು ಹೊಸತೇನೂ ಅಲ್ಲ. 2011ರಲ್ಲಿಯೇ ಚೀನಾದ ತಜ್ಞರು ಈ ವೈರಾಣುಗಳನ್ನು ಗುರುತಿಸಿದ್ದರು.

ರಿಬಾವೈರಿನ್ ಹೆಸರಿನ ಆಂಟಿವೈರಲ್ ಔಷಧವೇ ಈ ರೋಗದ ಚಿಕಿತ್ಸೆಗೆ ಪರಿಣಾಮಕಾರಿ ಎಂದು ರುಜುವಾತಾಗಿದ್ದರಿಂದ ಇದಕ್ಕಾಗಿಯೇ ಇನ್ನೊಂದು ಲಸಿಕೆ ಅಭಿವೃದ್ಧಿಯಾಗಿಲ್ಲ. ಕಾಡು, ಹುಲ್ಲುಗಾವಲುಗಳಲ್ಲಿ ಸಂಚರಿಸುವಾಗ ಕಾಲು ಪೂರ್ತಿ ಮುಚ್ಚಿಕೊಳ್ಳುವಂತಹ ಬಟ್ಟೆ ಧರಿಸುವುದು, ಸಾಕು ಪ್ರಾಣಿಗಳನ್ನು ಉಣ್ಣೆ ಇಲ್ಲದಂತೆ ಸ್ವಚ್ಛವಾಗಿಡುವುದು ಮುಂತಾದ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ವೈದ್ಯಕೀಯ ಸಮುದಾಯ ಸೂಚಿಸಿದೆ. ಕಳೆದ ಹತ್ತು ವರ್ಷದಿಂದಾಚೆಗೆ ಈ ವೈರಾಣು ಚೀನಾದಿಂದ ಜಪಾನ್, ದಕ್ಷಿಣ ಕೋರಿಯಾ, ಸಿಂಗಾಪುರ್ ಮುಂತಾದ ದೇಶಗಳಿಗೆ ವ್ಯಾಪಿಸಿದ್ದರೂ ಪರಿಸ್ಥಿತಿ ತಹಬಂದಿಗೆ ತರಲು ಅಲ್ಲಿನ ಸರಕಾರಗಳು ಯಶಸ್ವಿಯಾಗಿದ್ದವು.

ಬುನ್‍ಯಾ ವೈರಸ್ ಜೊತೆಗೇ ಬುಬೋನಿಕ್ ಪ್ಲೇಗ್ ಹಾವಳಿ..!

‘ಗ್ರಹಚಾರ ಕೆಟ್ಟಾಗ ಮುಟ್ಟಿದ್ಕಡೆ ಎಲ್ಲಾ ವೈರಸ್ ಬರ್ತದೆ’ ಅನ್ನೋ ಹಾಗೆ ಕೋವಿಡ್, ಸೀವಿಯರ್ ಫೀವರ್ ವಿಥ್ ಥ್ರೋಂಬೋ ಬೊಕ್ಯಾಟೋಪಿನಿಯ ಸಿಂಡ್ರೋಮ್ ಬುನಿವೈರಸ್ ಜೊತೆಜೊತೆಗೆ ಬುಬೋನಿಕ್ ಪ್ಲೇಗ್ ಕೂಡಾ ಹಾವಳಿ ಇಡೋಕೆ ಶುರುಮಾಡಿದೆ. ಚೀನಾದ ಮಂಗೋಲಿಯಾ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಬುಬೋನಿಕ್ ಪ್ಲೇಗ್‍ನಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಈ ಪ್ಲೇಗ್ ಕೂಡಾ ಕೊರೋನಾದಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೋಂಕು ತಗುಲಿದರೆ ಲಕ್ಷಣಗಳು ಗೋಚರಿಸಲು ನಾಲ್ಕರಿಂದ ಆರು ದಿನಗಳು ಬೇಕು. ದುರಂತ ಅಂದ್ರೆ ಇದಕ್ಕೂ ಕೂಡಾ ಯಾವುದೇ ಔಷಧಿ ಇಲ್ಲಿಯವರೆಗೆ ಕಂಡುಹಿಡಿದಿಲ್ಲ.

ಬ್ಯಾಕ್ಟೀರಿಯಾ ಕಾರಣದಿಂದ ಬರುವ ಈ ಸಾಂಕ್ರಾಮಿಕ ಪ್ಲೇಗ್ ರೋಗವು ಹೆಗ್ಗಣ, ತೋಡದಂತಹ ಪ್ರಾಣಿಗಳ ಮೈಮೇಲಿರುವ ಚಿಗಟಗಳಿಂದ ಮನುಷ್ಯನಿಗೆ ರವಾನೆಯಾಗಿ ಆ ಮೂಲಕ ಸೋಂಕು ಹರಡುತ್ತದೆ. ಬುಬೋನಿಕ್ ಪ್ಲೇಗ್ ಕಾಯಿಲೆಯ ಲಕ್ಷಣಗಳೂ ಭೀಕರವಾಗಿರುತ್ತವೆ. ಚಳಿ ನಡುಕ, ತೀವ್ರ ಜ್ವರದಂತಹ ಕಾಯಿಲೆಯ ಜೊತೆಗೆ ದುಗ್ದರಸ ಗ್ರಂಥಿ ಊತ, ತೀವ್ರತರದ ಉಸಿರಾಟ, ರಕ್ತವಾಂತಿ ಕೆಮ್ಮು ಸಹಾ ಉಂಟಾಗುತ್ತದೆ. ಕೆಲ ತೀವ್ರ ಸೋಂಕಿನ ಸಂದರ್ಭದಲ್ಲಿ ಬೆರಳು, ಪಾದ, ತುಟಿ, ಮೂಗಿನ ಕಡೆಗಳಲ್ಲಿ ಗ್ಯಾಂಗ್ರಿನ್ ಸಹಾ ಆಗಬಹುದು.

ಪ್ರಸ್ತುತ ಈ ಕಾಯಿಲೆಗಳು ಕಂಡು ಬಂದಿರುವ ಪ್ರದೇಶಗಳನ್ನು ಸಧ್ಯಕ್ಕೆ ಸಂಪೂರ್ಣ ಸೀಲ್‍ಡೌನ್ ಮಾಡಿ ಕ್ವಾರಂಟೈನ್ ಮಾಡಿದ್ದಾರೆ. ಹಾಗಾಗಿ ಈ ಸೋಂಕುಗಳು ಕೋವಿಡ್ ರೀತಿಯಲ್ಲಿ ಹರಡಲಾರದು ಎನ್ನುವ ಆಶಾಭಾವನೆ ಜನತೆಯದ್ದಾಗಿದೆ. ಹಂದಿ ಜ್ವರ, ಎಚ್1ಎನ್1, ಸಾರ್ಸ್ ಹೀಗೆ ಹತ್ತು ಹಲವಾರು ಮಾರಕ ವೈರಸ್‍ಗಳ ತವರೂರಾಗಿರುವ ಚೀನಾದಿಂದ ಇಡೀ ವಿಶ್ವಕ್ಕೇ ಇನ್ನಷ್ಟು ತೊಂದರೆಗಳು ಆಗದಿರಲಿ ಎನ್ನುವುದಷ್ಟೇ ಈಗ ನಮ್ಮೆಲ್ಲರ ಆಶಯವಾಗಿದೆ.

ಸಚಿನ್ ಶರ್ಮಾ ಬೆಂಗಳೂರು
ಆರೋಗ್ಯ ಚಿಂತಕರು
ಮೊ: 9036723369

Share this: