Vydyaloka

ಮಳೆಗಾಲದಲ್ಲಿ ಕಾಡುವ 9 ಅಪಾಯಕಾರಿ ಕಾಯಿಲೆಗಳಿವು…

ಮಳೆಗಾಲದಲ್ಲಿ ಕಾಡುವ 9 ಅಪಾಯಕಾರಿ ಕಾಯಿಲೆಗಳಿವು. ಈಗ ಎತ್ತ ನೋಡಿದರೂ ಕೋವಿಡ್‌ 19ನದ್ದೇ ಸುದ್ದಿ. ಈ ಕೊರೊನಾವೈರಸ್‌ ನಡುವೆ ಇತರ ಕಾಯಿಲೆ ಬಗ್ಗೆ ಯಾರು ಚಿಂತಿಸುತ್ತಿಲ್ಲ. ಆದರೆ ಕೊರೊನಾದಷ್ಟು ಅಲ್ಲದಿದ್ದರೂ ಜೀವಕ್ಕೆ ಅಪಾಯಕಾರಿಯಾದ ಅನೇಕ ಕಾಯಿಲೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಮಳೆಗಾಲದಲ್ಲಿ ನೀರಿನಿಂದ ಹಾಗೂ ಸೊಳ್ಳೆಗಳಿಂದ ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇವುಗಳನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಇಲ್ಲಿ ನಾವು ಮಳೆಗಾಲದಲ್ಲಿ ಯಾವ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಬೇಕೆಂದು ನೋಡಿ:

1. ಮಲೇರಿಯಾ:

ಮಳೆಗಾಲದಲ್ಲಿ ಮಲೇರಿಯಾ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತದೆ. ಅನೋಫಿಲ್ಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ರೋಗ ಉಂಟಾಗುತ್ತದೆ. ಆದ್ದರಿಂದ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ನಿಂತ ನೀರಿನಲ್ಲಿ ಈ ಸೊಳ್ಳೆಗಳು ಮೊಟ್ಟೆ ಹಾಕಿ ಮರಿ ಮಾಡುತ್ತವೆ.

ತಡೆಗಟ್ಟುವುದು ಹೇಗೆ?

ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಸೊಳ್ಳೆ ಕಚ್ಚದಂತೆ ತುಂಬು ತೋಳಿನ ಬಟ್ಟೆ ಧರಿಸಿ, ಸೊಳ್ಳೆ ನಿಯಂತ್ರಕ ಕ್ರೀಮ್‌ಗಳನ್ನು ಹಚ್ಚಿ.

2. ಡೆಂಗ್ಯೂ
ಇನ್ನು ಸೊಳ್ಳೆಗಳಿಂದ ಬರುವ ಮತ್ತೊಂದು ಭಯಾನಕ ಕಾಯಿಲೆ ಎಂದರೆ ಡೆಂಗ್ಯೂ. ಇದು ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ರೋಗ ಬರದಂತೆ ತಡೆಯಲು ಮೊದಲು ಸೊಳ್ಲೆಗಳ ಕಾಟವನ್ನು ತಪ್ಪಿಸಬೇಕು.

ತಡೆಗಟ್ಟುವುದು ಹೇಗೆ?

ಡೆಂಗ್ಯೂ ತಡೆಯಲು ಕೂಡ ಸೊಳ್ಳೆಗಳು ಬಾರದಂತೆ ಎಚ್ಚರಿಕೆವಹಿಸಬೇಕು, ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಮಲಗುವಾಗ ಸೊಳ್ಳೆ ಪರದೆ ಬಳಸಿ. ಸಂಜೆಯಾಗುತ್ತಿದ್ದಂತೆ ಮನೆ ಕಿಟಕಿ, ಬಾಗಿಲುಗಳನ್ನು ಮುಚ್ಚಿ. ಈ ರೀತಿ ಮಾಡುವ ಮೂಲಕ ಸೊಳ್ಳೆ ಕಚ್ಚುವುದನ್ನು ತಡೆಗಟ್ಟಬಹುದು.

3. ಚಿಕನ್‌ಗುನ್ಯಾ

ಮಳೆಗಾಲದಲ್ಲಿ ಚಿಕನ್‌ ಗುನ್ಯಾ ಕಾಯಿಲೆ ಕೂಡ ಹೆಚ್ಚಾಗಿ ಕಂಡು ಬರುತ್ತದೆ. ಇದು ಕೂಡ ಅಷ್ಟೇ ಸೊಳ್ಳೆಗಳು ಕಚ್ಚುವುದರಿಂದ ಬರುತ್ತದೆ. ಚಿಕನ್‌ ಗುನ್ಯಾ ಬಾರದಿರಲು ಸೊಳ್ಳೆಗಳು ಕಚ್ಚದಂತೆ ಮುನ್ನೆಚ್ಚರಿಕೆವಹಿಸಬೇಕು.

ತಡೆಗಟ್ಟುವುದು ಹೇಗೆ?

ಮೇಲೆ ಹೇಳಿದಂತೆ ಸೊಳ್ಳೆಗಳು ಹೆಚ್ಚಾಗದಂತೆ ಎಚ್ಚರವಹಿಸಬೇಕು. ಮನೆ ಸುತ್ತ ಮುತ್ತ ಸ್ವಚ್ಛವಾಗಿಡಬೇಕು. ಮನೆ ಒಳಗಡೆ ವಾರಕ್ಕೊಮ್ಮೆ ವಸ್ತುಗಳನ್ನು ರೂಮ್‌ನಿಂದ ಹೊರಹಾಕಿ ಸ್ವಚ್ಛ ಮಾಡಬೇಕು. ಮನೆಯೊಳಗೆ ಸೊಳ್ಳೆ ಬರದಂತೆ ಮುನ್ನೆಚ್ಚರಿಕೆವಹಿಸಿ.

4. ಕಾಲರಾ

ಕಾಲರಾ ರೋಗ ಕಲುಷಿತ ನೀರಿನಿಂದಾಗಿ ಹರಡುತ್ತದೆ. ಕಾಲರಾ ಬರಲು ವಿಬ್ರೋ ಕಾಲರಾ ಎಂಬ ಬ್ಯಾಕ್ಟಿರಿಯಾ ಕಾರಣ. ಬೀದಿ ಬದಿಯ ಆಹಾರಗಳನ್ನು ಸೇವಿಸುವುದರಿಂದ, ಕಲುಷಿತ ನೀರು ಕುಡಿಯುವುದರಿಂದ, ಆಹಾರ ತಯಾರಿಸುವಾಗ ಸ್ವಚ್ಛತೆ ಕಡೆ ಗಮನ ನೀಡದಿದ್ದರೆ ಈ ಕಾಯಿಲೆ ಉಂಟಾಗುವುದು.

ತಡೆಗಟ್ಟುವುದು ಹೇಗೆ?

ಬೀದಿ ಬದಿಯ ಆಹಾರ ಸೇವಿಸಬಾರದು, ಆಹಾರವನ್ನು ಸ್ವಚ್ಛ ಮಾಡಿ ಸೇವಿಸಬೇಕು, ನೀರನ್ನು ಕುದಿಸಿ ಕುಡಿಯಬೇಕು.

5. ಟೈಫಾಯ್ಡ್

ಟೈಫಾಯ್ಡ್ ಕಾಯಿಲೆಯೂ ಸಾಲ್ಮೋನೆಲ್ಲಾ ಬ್ಯಾಕ್ಟಿರಿಯಾದಿಂದ ಉಂಟಾಗುತ್ತದೆ. ಈ ಕಾಯಿಲೆ ಅನೇಕ ಕಾರಣಗಳಿಂದ ಉಂಟಾಗುತ್ತದೆ. ಸ್ವಚ್ಛ ಆಹಾರ, ಶುದ್ಧ ನೀರು ಸೇವಿಸದಿದ್ದರೆ ಟೈಫಾಯ್ಡ್ ಕಾಯಿಲೆ ಬರುವುದು. ಕೊಳಚೆ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ತಡೆಗಟ್ಟುವುದು ಹೇಗೆ?

ಆಹಾರವನ್ನು ತಯಾರಿಸುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು, ತರಕಾರಿಗಳನ್ನು ಸ್ವಚ್ಛ ಮಾಡಿ ತೊಳೆದ ಬಳಿಕ ಅಡುಗೆಗೆ ಬಳಸಬೇಕು. ಅಡುಗೆಗೆ ಬಳಸುವ ನೀರು ಶುದ್ಧವಾಗಿರಬೇಕು. ನೀರನ್ನು ಕುದಿಸಿ ಕುಡಿಯಬೇಕು.

6. ವೈರಲ್ ಹೆಪಟೈಟಿಸ್

ಅರಿಶಿಣ ಕಾಮಲೆ ಇರುವ ಅನೇಕ ರೋಗಿಗಳಲ್ಲಿ ಹೆಪಟೈಟಿಸ್ ಸೋಂಕು ಕಂಡು ಬರುವ ಸಾಧ್ಯತೆ ಹೆಚ್ಚು. ಈ ರೀತಿ ಉಂಟಾದಾಗ ಜೀವಕ್ಕೆ ಅಪಾಯ ಉಂಟಾಗಬಹುದು.

ತಡೆಗಟ್ಟುವುದು ಹೇಗೆ?

ಸ್ವಚ್ಛತೆ ಕಡೆ ಗಮನ ನೀಡುವುದು ಹಾಗೂ ಆರೋಗ್ಯಕರ ಜೀವನಶೈಲಿ ಮೂಲಕ ಈ ಕಾಯಿಲೆ ಬರದಂತೆ ತಡೆಗಟ್ಟಬಹುದು.

7. ಲೆಪ್ಟೋಸ್ಪಿರೋಸಿಸ್

ಇದು ಬ್ಯಾಕ್ಟಿರಿಯಾ ಸೋಂಕಿನಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ಕಲುಷಿತ ನೀರು, ಸೋಂಕಿರುವ ಪ್ರಾಣಿಗಳ ಮೂತ್ರ ಮಿಶ್ರಿತ ಮಣ್ಣು ಇವುಗಳ ಮುಖಾಂತರ ಹರಡುತ್ತದೆ.

ತಡೆಗಟ್ಟುವುದು ಹೇಗೆ?

ಕಲುಷಿತ ನೀರಿನಲ್ಲಿ ಈಜಾಡುವುದು, ಆ ನೀರಿನಲ್ಲಿ ಬಟ್ಟೆ ಒಗೆಯುವುದು ಮಾಡಿದರೆ ಈ ಸಮಸ್ಯೆ ಬರುತ್ತದೆ. ಆದ್ದರಿಂದ ಸ್ನಾನಕ್ಕೆ, ಸ್ವಚ್ಛತೆಗೆ ಕಲುಷಿತ ನೀರು ಬಳಸಬೇಡಿ.

8. ತ್ವಚೆ ಹಾಗೂ ಕಣ್ಣಿನ ಸೋಂಕು

ಮಳೆಗಾಲದಲ್ಲಿ ಕಾಡುವ ಮತ್ತೊಂದು ಸಮಸ್ಯೆಯೆಂದರೆ ತ್ವಚೆ ಹಾಗೂ ಕಣ್ಣಿನ ಸೋಂಕು. ಅದರಲ್ಲೂ ಪ್ರವಾಹದಂಥ ಪರಿಸ್ಥಿತಿ ಉಂಟಾದಾಗ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ತಡೆಗಟ್ಟುವುದು ಹೇಗೆ?

ಮುಖವನ್ನು ಮುಟ್ಟುವ ಮುನ್ನ ಕೈಗಳಿಗೆ ಸೋಪ್‌ ಹಾಕಿ ಚೆನ್ನಾಗಿ ತೊಳೆಯಿರಿ.

9. ಉಸಿರಾಟದ ತೊಂದರೆ

ಮಳೆಗಾಲದಲ್ಲಿ ಅಸ್ತಮಾ ಸಮಸ್ಯೆ ಇರುವವರಿಗೆ ಆ ಕಾಯಿಲೆ ಮತ್ತಷ್ಟು ಅಧಿಕವಾಗುವುದು. ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು. ಇದರ ಜೊತೆಗೆ ಕೆಮ್ಮು, ಅಲರ್ಜಿ ಸಮಸ್ಯೆಗಳು ಕಂಡು ಬರುವುದು.

ತಡೆಗಟ್ಟುವುದು ಹೇಗೆ?

ನೀರನ್ನು ಕುದಿಸಿ ಬಿಸಿ ಬಿಸಿಯಾದ ನೀರು ಕುಡಿಯಿರಿ. ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳಿ. ಬೆಚ್ಚಗಿನ ಆಹಾರ ಸೇವಿಸಿ. ಸ್ವಚ್ಛತೆ ಕಡೆ ಗಮನ ನೀಡಿ.

 

Share this: