Vydyaloka

 ಮಳೆಗಾಲದಲ್ಲಿ ಆರೋಗ್ಯ-ಸೂಕ್ತ ಆಹಾರ ಸೇವಿಸಬೇಕು

ಮಳೆಗಾಲದಲ್ಲಿ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಕೊಡಿ.ಮಳೆಗಾಲದ ಪ್ರಭಾವದಿಂದ ನಮ್ಮ ಪಚನಶಕ್ತಿ ಮಂದಗೊಳ್ಳುತ್ತದೆ ಮತ್ತು ವಾಯುವಿನ ಪ್ರಕೋಪ ಇರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಹಗುರ-ಪೌಷ್ಠಿಕ ಆಹಾರ ಸೇವಿಸಬೇಕು.

ಆಯುರ್ವೇದದಲ್ಲಿ ಮಳೆಗಾಲ ಅಥವಾ ವರ್ಷಋತುವನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಆರಂಭ ಕಾಲ ಮತ್ತು ಅಂತಿಮ ಕಾಲ. ಆರಂಭ ಕಾಲ ಅಥವಾ ಪ್ರಾರಂಭಿಕ ಕಾಲವೆಂದರೆ ಬೇಸಿಗೆ ಸಂದರ್ಭದಲ್ಲಿ ಮಳೆಯ ಹನಿಗಳು ಬೀಳುತ್ತವೆ. ಆಗ ಭೂಮಿಯ ಉಷ್ಣತೆ ಹೊರಹೊಮ್ಮುತ್ತದೆ ಮತ್ತು ವಾತಾವರಣ ಒಂದು ರೀತಿಯ ಉಷ್ಣಾಂಶದಿಂದ ಕೂಡಿರುತ್ತದೆ. ಇದರಿಂದ ವಾತಾವರಣದ ಮೇಲೂ ಪ್ರಭಾವ ಉಂಟಾಗುತ್ತದೆ. ಅಲ್ಲದೇ ವಾತ ಕುಪಿತಗೊಳ್ಳುತ್ತದೆ. ಎಲ್ಲಿಯವರೆಗೆ ಭಾರೀ ಮಳೆಯಾಗುವುದಿಲ್ಲವೋ ಅಲ್ಲಿಯವರೆಗೆ ಉಷ್ಣಾಂಶದಿಂದ ಕೂಡಿದ ವಾತಾವರಣ ಮುಂದುವರೆಯುತ್ತದೆ.

1. ಆರಂಭಿಕ ಕಾಲದಲ್ಲಿ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಮಾಡುವ ತಂಗಳು, ಶುಷ್ಕ, ಒಣಗಿದ ಮತ್ತು ಮಸಾಲೆಯುಕ್ತ ಆಹಾರ ಸೇವನೆ ಮಾಡಬಾರದು. ನೀರನ್ನು ಕುದಿಸಿ ಕುಡಿಯಬೇಕು.

2. ರಾತ್ರಿಯ ಊಟವನ್ನು ಬೇಗನೆ ಅಂದರೆ ಮಲಗುವ 2 ಗಂಟೆ ಮುಂಚೆಯೇ ಮಾಡಬೇಕು. ರಾತ್ರಿ ತಡವಾಗಿ ಊಟ ಮಾಡುವುದರಿಂದಲೂ ಆಹಾರ ಪಚನವಾಗುವುದಿಲ್ಲ. ಇದರಿಂದ ತೊಂದರೆ ಕಾಣಿಸಿಕೊಳ್ಳುತ್ತದೆ.

ಸ್ವಚತೆಗೆ ಆದ್ಯತೆ ಕೊಡಿ:

1. ಮಳೆಗಾಲದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಬಿಸಿನೀರಿನ ಸ್ನಾನ ಮಾಡಬೇಕು. ತಣ್ಣೀರು ಸ್ನಾನ ತ್ವಚೆಯ ವಿಕಾರವನ್ನು ಉಂಟು ಮಾಡಬಹುದು.

2. ಕಲುಷಿತ ನೀರಿನ ಸೇವನೆಯಿಂದ ಕಾಮಾಲೆ, ಕರುಳಿನ ಊತ ಮತ್ತು ಟೈಫಾಯಿಡ್ ಜ್ವರದಂತಹ ಸಮಸ್ಯೆಗಳು ಉದ್ಭವಿಸುತ್ತವೆ.

3. ತರಕಾರಿ, ಹಣ್ಣು, ಸೊಪ್ಪು ಮತ್ತು ಇತರೆ ಆಹಾರ ಪದಾರ್ಥಗಳನ್ನು ತೊಳೆದು ಸ್ವಚ್ಚಗೊಳಿಸಿಯೇ ಉಪಯೋಗಿಸಬೇಕು.

4. ವರ್ಷ ಋತುವಿನಲ್ಲಿ ನಮ್ಮ ಜೀವನಶೈಲಿಯ ಮೇಲೆ ಸಂಪೂರ್ಣ ನಿಗಾ ವಹಿಸಬೇಕು. ಬಟ್ಟೆ ಮತ್ತು ಹಾಸಿಗೆ-ಹೊದಿಕೆಗಳು ಸ್ವಚ್ಚವಾಗಿರಬೇಕು.

5. ಆಲಸ್ಯದಿಂದ ದೂರವಿರಲು ಈ ಋತುವಿನಲ್ಲಿ ರಾತ್ರಿ ಬಹುಹೊತ್ತಿನ ತನಕ ಎಚ್ಚರದಿಂದ ಇರುವುದು ಬೇಡ. ಬೆಳಿಗ್ಗೆ ಬೇಗನೇ ಏಳುವ ಅಭ್ಯಾಸ ಮಾಡಿಕೊಳ್ಳಿ. ಹಗಲು ಹೊತ್ತು ನಿದ್ದಿಸಬೇಡಿ.

6. ಮಳೆಯಲ್ಲಿ ನೆನೆದಿದ್ದರೆ ಆದಷ್ಟು ಬೇಗನೇ ಬಟ್ಟೆಗಳನ್ನು ಬದಲಿಸಿ ದೇಹವನ್ನು ಬಿಸಿನೀರಿನಿಂದ ಒರೆಸಿಕೊಂಡು ಸ್ವಚ್ಚವಾದ ಬಟ್ಟೆಗಳನ್ನು ಧರಿಸಿ.

ಸೂಕ್ತ ಆಹಾರ ಸೇವಿಸಬೇಕು:

ಋತುವಿಗೆ ಅನುಗುಣವಾಗಿ ಆಹಾರ-ವಿಹಾರ ಅನುಸರಿಸುವುದು ನಮ್ಮನ್ನು ಆರೋಗ್ಯವಂತ ಮತ್ತು ನಿರೋಗಿಯಾಗಿಸುತ್ತದೆ. ಆದರೆ, ಪ್ರತಿಕೂಲ ಆಹಾರ-ವಿಹಾರ ರೋಗಗಳನ್ನು ಉತ್ಪತ್ತಿ ಮಾಡುತ್ತದೆ. ನಾವು ದೈನಂದಿನ ಜೀವನದಲ್ಲಿ ಪ್ರಸ್ತುತ ಋತುವಿಗೆ ಅನುಗುಣವಾಗಿ ನಮ್ಮನ್ನು ಆರೋಗ್ಯದಿಂದಿಡುವ ಆಹಾರ-ವಿಹಾರದ ರೀತಿ-ನೀತಿ, ನಿಯಮ-ನಿಷ್ಠೆಗಳನ್ನು ಪಾಲಿಸಬೇಕು.

1. ತೀವ್ರ ಮಸಾಲೆಯುಕ್ತ ಮತ್ತು ಕಡಲೆಹಿಟ್ಟಿನಿಂದ ತಯಾರಿಸಿದ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು.

2. ವರ್ಷ ಋತುವಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಣ್ಣೆ, ಇಂಗು, ಜೀರಿಗೆ, ಬೆಳ್ಳುಳ್ಳ್ಳಿ, ಲವಂಗ, ಕರಿಮೆಣಸು, ಏಲಕ್ಕಿ ಮತ್ತು ಸೈಂದಲವಣದ ಬಳಕೆ ಮಾಡುವುದರಿಂದ ಅಗ್ನಿಯ ಬಲ ಹೆಚ್ಚುವುದರ ಜೊತೆ ವಾಯುವಿನ ಶಮನವಾಗುತ್ತದೆ.

3. ಆಹಾರದಲ್ಲಿ ಹಳೆಯ ಅಕ್ಕಿ, ಗೋಧಿ, ಉದ್ದು, ಹೆಸರು ಮತ್ತು ಎಳ್ಳುಗಳ ಬಳಕೆ ಸೂಕ್ತವಾಗಿರುತ್ತದೆ. ಹಾಗಲಕಾಯಿ, ಪಡವಲ, ಮೆಂತ್ಯ ಮುಂತಾದವುಗಳ ಬಳಕೆ ಉಪಯುಕ್ತವಾಗುತ್ತದೆ.

4. ಮಾವು, ನೇರಳೆ, ಪಪ್ಪಾಯಿ, ಖರ್ಜೂರ ಮುಂತಾದ ಹಣ್ಣುಗಳನ್ನು ತಿನ್ನುವುದು ಪ್ರಯೋಜನಕಾರಿ. ನಿಂಬೆ ಜ್ಯೂಸ್ ರೂಪದಲ್ಲಿ ಸೇವಿಸಿ.

5. ವರ್ಷಋತು ಅಥವಾ ಮಳೆಗಾಲದ ಪ್ರಭಾವದಿಂದ ನಮ್ಮ ಪಚನಶಕ್ತಿ ಮಂದಗೊಳ್ಳುತ್ತದೆ ಮತ್ತು ವಾಯುವಿನ ಪ್ರಕೋಪ ಇರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಹಗುರ-ಪೌಷ್ಠಿಕ ಆಹಾರ ಸೇವಿಸಬೇಕು.

6.ಹಗುರ, ತಾಜಾ ಮತ್ತು ಬೇಗ ಪಚನವಾಗುವ ಆಹಾರ ಸೇವಿಸಬೇಕು. ಆಹಾರವನ್ನು ಪಚನಗೊಳಿಸಲು ಪಚನವ್ಯವಸ್ಥೆಗೆ ಅನವಶ್ಯಕ ಒತ್ತಡ ಹಾಕಬಾರದು.ಮಲವಿಸರ್ಜನೆ ಪ್ರಕ್ರಿಯೆ ಮೇಲೆ ಗಮನವಹಿಸಬೇಕು. ಏಕೆಂದರೆ ಮಲಬದ್ಧತೆ ಸಮಸ್ಯೆ ಉದ್ಭವಿಸಬಾರದು. ಮಲಬದ್ಧತೆ ಅನೇಕ ಅನಾರೋಗ್ಯ ತೊಂದರೆಗೆ ಕಾರಣವಾಗಿರುತ್ತದೆ.

7.ನಿಮಗೆ ಸಾಧ್ಯವಾದರೆ ವರ್ಷಋತುವಿನಲ್ಲಿ ಹಸಿಶುಂಠಿ, ಮೂಲಂಗಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಕುಟ್ಟಿ ಅದರ ಮೇಲೆ ನಿಂಬೆಹಣ್ಣು ಹಿಂಡಿಕೊಂಡು ದಿನವೂ ಊಟದೊಂದಿಗೆ ಸೇವಿಸಬೇಕು. ಇದರಿಂದ ಉತ್ತಮ ಪಾಚಕರಸ ಉತ್ಪತ್ತಿಯಾಗುತ್ತದೆ. ಇದು ಆಹಾರವನ್ನು ಉತ್ತಮ ರೀತಿಯಲ್ಲಿ ಜೀರ್ಣವಾಗುವಂತೆ ಮಾಡುತ್ತದೆ ಮತ್ತು ಹಸಿವು ಕೂಡ ಹೆಚ್ಚುತ್ತದೆ.

ಡಾ. ಸಿದ್ದುಕುಮಾರ್ ಘಂಟಿ
ಬಸವಶ್ರೀ ಆಯುರ್ವೇದ ಸೇವಾ ಕೇಂದ್ರ
ಇಎಸ್‍ಐ ಆಸ್ಪತ್ರೆ ಮುಖ್ಯರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 9845042755

Share this: