ಲವ್ಲಿಯಾಗಿ ಲೈಫಲ್ಲಿ ಇರಲಿ ಈ ಜೀವನ ಕೌಶಲ್ಯ..!ಇದು ಕಲಿಕೆಯ ನಿರಂತರ ಪ್ರಕ್ರಿಯೆ. ಇವು ಕಾಲಕ್ಕೆ ತಕ್ಕಂತೆ ಬದಲಾಗತ್ತೆ, ಜೊತೆಗೆ ನಮ್ಮನ್ನೂ ಬದಲಾಯಿಸತ್ತೆ. ಸೀರಿಯಸ್‍ನೆಸ್ ಬಿಡಿ, ಖುಷಿ ಖುಷಿಯಾಗಿರಿ. ಬಂದದ್ದು ಎದುರಿಸೋಣ, ತಿಳಿಯದ್ದು ಕಲಿಯೋಣ.
ಯಾರಪ್ಪಾ ಈ ಕೌಶಲ್ಯಾ? ಅವಳನ್ನ ಎಲ್ಲಿಂದ ಲೈಫಲ್ಲಿ ತರ್ಲಿ ಅಂತ ತಲೆ ಕೆಡಿಸಿಕೊಳ್ಳಬೇಡಿ. ದಶರಥನ ಪಟ್ಟದ ರಾಣಿ ಕೌಸಲ್ಯೆ ಹೆಸರನ್ನ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿ ಕೌಶಲ್ಯಾ ಅಂತ ಅಂದೇ ಅಂತಾನೋ ಅಥವಾ ಬೀದಿ ಕೋನೇ ಮನೇಲಿ ಅಟ್ಟದ ಮೇಲೆ ಪಿಜಿ ಮಾಡ್ಕೊಂಡಿರೋ ಕಾಲೇಜು ಹುಡುಗಿ ಕೌಶಲ್ಯಾ ಬಗ್ಗೆ ಹೇಳ್ತಾ ಇದೀನೇನೋ ಅಂತಾ ದಯವಿಟ್ಟು ಕಂಫ್ಯೂಜಾಗ್ಬೇಡಿ! ನಾನು ನಿಮ್ಮತ್ರ ಹಂಚಿಕೊಳ್ಬೇಕು ಅಂದ್ಕೊಂಡಿರೋ ವಿಷಯ- ಜೀವನ ಕೌಶಲ್ಯ ಅರ್ಥಾತ್ ಲೈಫ್ ಸ್ಕಿಲ್ ಬಗ್ಗೆ!
‘ಏನಿದ್ಯಪ್ಪಾ ಅದ್ರಲ್ಲಿ ಅಂಥಾದ್ದು?’ ಅನ್ನೋ ಕುತೂಹಲ ಇರೋರ್ವು, ಈ ಬಗ್ಗೆ ಹೆಚ್ಚು ತಿಳ್ಕೊಳಿ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಿ! ‘ಓ ಅದಾ ಗೊತ್ತು ಬಿಡು’ ಅಂತಾ ಹೇಳೊರೂ ಇನ್ನೊಮ್ಮೆ ಓದ್ಕೊಳಿ ಕಳ್ಕೊಳೋದೇನಿಲ್ಲ! ಇದನ್ನ ವೇಸ್ಟ್ ಸಬ್ಜೆಕ್ಟ್ ಅಂದ್ಕೊಬೇಡಿ. ಇದೊಂದು ವಾಸ್ಟ್ ಸಬ್ಜೆಕ್ಟ್. ಇದ್ರಲ್ಲಿ ವಿಷಯಗಳು ಅಗೆದಷ್ಟೂ ಸಿಗತ್ತೆ, ಮಗೆದಷ್ಟೂ ಮಿಗತ್ತೆ. ಇದು ಕಲಿಕೆಯ ನಿರಂತರ ಪ್ರಕ್ರಿಯೆ. ಇವು ಕಾಲಕ್ಕೆ ತಕ್ಕಂತೆ ಬದಲಾಗತ್ತೆ, ಜೊತೆಗೆ ನಮ್ಮನ್ನೂ ಬದಲಾಯಿಸತ್ತೆ.
ದೊಡ್ಡ ದುನಿಯಾದ ಹಲವಾರು ವಿಷಯಗಳನ್ನ ಚಿಕ್ಕ ಮೆಮೊರಿ ಕಾರ್ಡ್‍ಲ್ಲಿ ಸ್ಟೋರ್ರ್ಡ್ ಮಾಡಿರೋ ತರ ಹಲವು ವಿಷಯಗಳ ಕೆಲವು ಅಂಶಗಳನ್ನು ಮಾತ್ರ ನಿಮ್ಮ ಮೆದುಳಿನಂಗಳಕ್ಕೆ ತಲುಪಿಸುವುದು ಈ ಲೇಖನದ ಉದ್ದೇಶ. ಅದ್ನ ಇಟ್ಕಳದು ಬಿಟ್ಕಳದು ನಿಮಗೆ ಬಿಟ್ಟದ್ದು!ಮೊದಲೇ ಹೇಳಿದಂತೆ ಈ ಜೀವನ ಕೌಶಲ್ಯ ವಿಷಯವೇ ತುಂಬಾ ಆಳವಾಗಿದೆ. ಯಾಕೆಂದ್ರೆ ಇದು ಮನಸ್ಸಿಗೆ ಮತ್ತು ಮೆದುಳಿಗೆ ಸಂಬಂಧಿಸಿದ್ದು. ಅವುಗಳನ್ನ ಸಂಕ್ಷಿಪ್ತವಾಗಿ ಹಂಚಿಕೊಳ್ಳೋ ಪ್ರಯತ್ನವನ್ನ ನಾನು ಮಾಡ್ತೀನಿ. ಜೀವನ ಕೌಶಲ್ಯ ಯಾಕೆ ಇಲ್ಲಿ ಹೇಳ್ತಾ ಇದೀನಂದ್ರೆ, ಲೈಫಲ್ಲಿ ನಾವು ಎಲ್ಲವನ್ನೂ ಪಡಿತೀವಿ, ಎಲ್ಲವನ್ನೂ ಮಾಡ್ತೀವಿ ಆದ್ರೆ ಜೀವನಕ್ಕೆ ತುಂಬಾ ಅವಶ್ಯಕವಾಗಿರೋದನ್ನೇ ಬಹುತೇಕ ಬಾರಿ ಅನುಸರಿಸುವುದಿಲ್ಲ. ನಿಮಗೆ ತಿಳಿಸುವುದರ ಜೊತೆಗೆ ನನ್ನ ಕಲಿಕೆಯೂ ಇದರಲ್ಲಿದೆ.
ಜೀವನ ಕೌಶಲ್ಯ ಯಾಕೆ ಬೇಕು ಅಂದ್ರೆ ನಮ್ಮ ಸಮಾಜದಲ್ಲಿ, ಮನೆಯಲ್ಲಿ, ಕೆಲಸಗಳಲ್ಲಿ ಪ್ರತಿಕ್ಷಣವೂ ಹಲವಾರು ಸವಾಲುಗಳು ಬರ್ತಾನೆ ಇರ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ಈ ಜೀವನ ಕೌಶಲ್ಯ ಅಥವಾ ಲೈಫ್ ಸ್ಕಿಲ್ ಬೇಕೇ ಬೇಕು. ವಿಶ್ವ ಆರೋಗ್ಯ ಸಂಸ್ಥೆ 1997ರಲ್ಲಿ ಜಿನೀವಾದಲ್ಲಿ ನಡೆದ ಸಭೆಯಲ್ಲಿ ಈ ಜೀವನ ಕೌಶಲ್ಯವನ್ನು ಶಾಲಾ ಶಿಕ್ಷಣದಲ್ಲಿಯೇ ಅಳವಡಿಸಬೇಕೆಂದು ಒಂದು ಠರಾವನ್ನು ಹೊರಡಿಸ್ತು. ಆದರೆ ಈ ಗೊತ್ತುವಳಿಯನ್ನು ಬಹುತೇಕ ಶಿಕ್ಷಣ ಸಂಸ್ಥೆಗಳು ಅನುಸರಿಸಲೇ ಇಲ್ಲ. ಈ ಕುರಿತಂತೆ ಜೀವನ ಕೌಶಲ್ಯಕ್ಕೆ ಸಂಬಂಧಿಸಿದ ಮುಖ್ಯ ಹತ್ತು ಅಂಶಗಳ ಪಟ್ಟಿಯನ್ನು ಡಬ್ಲ್ಯೂ.ಎಚ್.ಓ. ಮಾಡಿತ್ತು.
Also Read: ಮೆಚ್ಚುಗೆಯ ಟಿಪ್ಪಣಿಯೊಂದಿಗೆ ಒಂದಿಷ್ಟು ನಾವು ಬದಲಾಗೋಣ
ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ 10 ಮುಖ್ಯ ಜೀವನ ಕೌಶಲ್ಯ ಅಂಶಗಳ ಪಟ್ಟಿ
1. ಸೆಲ್ಫ್ ಅವೇರ್ನೆಸ್- Self-awareness : ಅಂದ್ರೆ ಸ್ವಯಂ ಅರಿವು. ನಮ್ಮ ಬಗ್ಗೆ ನಮಗೇ ಅರಿವು ಇಲ್ಲದಿದ್ರೆ ಏನ್ ತಾನೇ ಮಾಡೋಕಾಗತ್ತೆ? ನಮ್ಮ ಜೀವನದ ಬಗ್ಗೆ ನಾವೇ ಅರಿವು ಹೊಂದಿರಬೇಕು. ಸುಮ್ನೇ ಮಶಿನ್ನುಗಳ ತರ ಯಾಂತ್ರಿಕ ಜೀವನ ನಡೆಸಿದ್ರೆ ಹುಟ್ಟಿಗೆ ಅರ್ಥವಾದ್ರೂ ಏನ್ ಬಂತು ಅಲ್ವಾ? ಡೂ ಸಮಥಿಂಗ್ ಡಿಫರೆಂಟ್!
2. ಎಂಪತಿ-Empathy: ಸಿಂಪತಿ, ದಂಪತಿ ಗೊತ್ತು ಇದೆಂತಾ ಎಂಪತಿ ಅಂತಾ ಜಾಸ್ತಿ ತಲೆ ಕೆಡಿಸ್ಕೋಬೇಡಿ. ಎಂಪತಿ ಅಂದ್ರೆ ಅನುಭೂತಿ. ಅಂದ್ರೆ ನೀವು ಏನೋ ಒಂದು ನೋಡ್ತೀರಾ ಮನಸಿಗೆ ಏನೋ ಒಂದು ಅನ್ಸತ್ತೆ. ಅದು ಒಳ್ಳೆಯದನಿಸಬಹುದು ಅಥವಾ ಕಿರಿಕಿರಿ ಅನಿಸಬಹುದು. ಆಗ ಮನಸಿಗೆ ಆದಂತ ಅನುಭವವೇ ಅನುಭೂತಿ. ಒಳ್ಳೆಯದನ್ನು ಯೋಚಿಸ್ತಾ ಇದ್ರೆ ಒಳ್ಳೆಯ ಅನುಭೂತಿ ಹೊಂದುತ್ತೀರಿ ಅಷ್ಟೇ!
3. ಕ್ರಿಟಿಕಲ್ ಥಿಂಕಿಂಗ್- Critical Thinking: ನಿರ್ಣಾಯಕ ಯೋಚನೆಗೆ ಕ್ರಿಟಿಕಲ್ ಥಿಂಕಿಂಗ್ ಅನ್ನೋದು. ಉದಾಹರಣೆ ನಿಮ್ಮ ಮನೆಯಲ್ಲಿ ಮಕ್ಕಳಿಬ್ರು ಜಗಳವಾಡ್ತಿದ್ದಾರೆ ಅಂದ್ಕೊಳಿ. ನೀವು ಯಾರ ಪರವಾಗಿಯೂ ಇರೋಕಾಗಲ್ಲ ಅವಾಗ. ಪರಿಸ್ಥಿತಿಯನ್ನು ಅವಲೋಕಿಸಿ ಹಿರಿಯರಾದ ನೀವೇ ಒಂದು ನಿರ್ಣಯ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೀರಿ. ಆಗ ಮಾಡುವ ನಿರ್ಣಾಯಕ ಯೋಚನೆಯೇ ಒಂದು ಜೀವನ ಕೌಶಲ್ಯ.
4. ಕ್ರಿಯೇಟಿವ್ ಥಿಂಕಿಂಗ್-Creative Thinking: ಸೃಜನಶೀಲ ಯೋಚನೆ. ಅಂದ್ರೆ ನೀವು ಟಿವಿ, ಯೂ ಟ್ಯೂಬ್ ಎಲ್ಲಾ ಕಡೆ ಜಾಹೀರಾತುಗಳನ್ನು ನೋಡೇ ನೋಡಿರ್ತೀರಿ. ಇವೆಲ್ಲಾ ಜಾಹಿರಾತಿನಲ್ಲಿದ್ದಂತೆ ಕಾರ್ಯ ಮಾಡುತ್ತೋ ಬಿಡುತ್ತೋ ಅದು ಬೇರೆ ಮಾತು. ಆದ್ರೆ ಆ ಆಲೋಚನೆ ಇದ್ಯಲ್ಲ ಅದು ಕ್ರಿಯೇಟಿವ್! ಹೀಗೆ ಎಲ್ಲಾ ವಿಷಯಗಳಲ್ಲಿಯೂ ಸೃಜನಶೀಲತೆ ಬೇಕೇ ಬೇಕು.
5. ಡಿಸಿಜನ್ ಮೇಕಿಂಗ್-Decision Making: ಅಂದ್ರೆ ನಿರ್ಧಾರ ತಗೋಳ್ಳೋದು. ಯಾವ ಯಾವ ಪರಿಸ್ಥಿತಿಯಲ್ಲಿ ಹೇಗೇಗೆ ನಿರ್ಧಾರ ತಗೋಬೇಕು ಅನ್ನೋದನ್ನ ಕಲಿಯೋ ತರಬೇತಿ ಪಡೆಯೋದು ಈ ಲೈಫ್ ಸ್ಕಿಲ್ ವಿಷಯಗಳಲ್ಲಿ ಒಂದು.
6. ಪ್ರಾಬ್ಲಮ್ ಸಾಲ್ವಿಂಗ್-Problem Solving: ಕನ್ನಡದಲ್ಲಿ ಸಮಸ್ಯೆ ನಿವಾರಣೆ. ಇದಕ್ಕೆ ಒಂದೇ ಲೈನಲ್ಲಿ ಉತ್ತರ ಕೊಡಬಹುದು. ಸಮಸ್ಯೆಯನ್ನ ಸಮಸ್ಯೆ ಅಂತಾಗಿ ನೋಡದೆ. ಸವಾಲು ಅಂತನ್ನಿ. ಪ್ರಾಬ್ಲಮ್ ಇಸ್ ನಾಟ್ ಎ ಪ್ರಾಬ್ಲಮ್, ಇಟ್ಸ್ ಎ ಚಾಲೆಂಜ್. ಸಮಸ್ಯೆ ಸಾಲ್ವ್ಡ್.
7. ಇಫೆಕ್ಟಿವ್ ಕಮ್ಯುನಿಕೇಶನ್-Effective Communication: ಪರಿಣಾಮಕಾರಿ ಸಂವಹನ. ನನ್ನ ಲೇಖನಗಳನ್ನ ಓದಿದ ಹಲವರಿಗೆ ನನ್ನ ಬರವಣಿಗೆಯ ಶೈಲಿ ಗೊತ್ತಿದೆ. ಇದರಲ್ಲಿ ಲಿಪಿ ಕನ್ನಡದಲ್ಲಿದ್ರೂ ಇಂಗ್ಲೀಶ್ ಶಬ್ದಗಳು ನುಸುಳಿರತ್ತೆ. ಕೆಲವರಿಗೆ ಈ ಬಗ್ಗೆ ಆಕ್ಷೇಪವಿದ್ರೂ ಹಲವರು ಇದನ್ನ ಒಪ್ಪಿಕೊಂಡಿದ್ದಾರೆ. ಆದ್ರೆ ನನ್ನ ಪರಿಸ್ಥಿತಿ ಯಾರೂ ಯೋಚ್ನೇನೇ ಮಾಡಿಲ್ಲ. ನನ್ನನ್ನೂ ಸೇರಿಸಿ ನಮ್ಮಲ್ಲಿ ಬಹುತೇಕರಿಗೆ ಸಂಪೂರ್ಣ ಕನ್ನಡವೇ ಗೊತ್ತಿಲ್ಲ. ಅಚ್ಛ ಕನ್ನಡದ ಎಷ್ಟೋ ಪದಗಳನ್ನ ಕೊಟ್ರೆ ತಲೆ ಕೆರೆದುಕೊಳ್ಳುವವರೆ ಹೆಚ್ಚು ನಮ್ಮ ರಾಜ್ಯದಲ್ಲಿ. ಹಾಗಂತಾ ಇಂಗ್ಲೀಷಾದ್ರೂ ಸಂಪೂರ್ಣ ಗೊತ್ತಾ? ಅದೂ ಇಲ್ಲ. ಎರಡೂ ಅರ್ಧಂಬರ್ಧ! ಇಂತವರ ಸಂಖ್ಯೆಯೇ ಹೆಚ್ಚಿರುವಾಗ ಕನ್ನಡ ಕಲಿಕೆಯ ಜಾಗೃತಿ ಜೊತೆಗೆ ಅವರಿಗೆ ಅರ್ಥವಾಗುವ ಹಾಗೆ ಸಂವಹನ ನಡೆಸುವುದು ಅನಿವಾರ್ಯ. ಇದನ್ನೇ ನಾನು ನನ್ನ ಲೇಖನದಲ್ಲಿ ಅಳವಡಿಸಿಕೊಂಡಿದ್ದೇನೆ. ಮಾತೃ ಭಾಷೆ ಅತ್ಯವಶ್ಯಕ, ಹಾಗೆಯೇ ಹೇಳುವುದು ಕೂಡಾ ಪರಿಣಾಮಕಾರಿಯಾಗಬೇಕಲ್ಲವೇ? ಅದಕ್ಕೇ ಬೇಕಿರೋದು ಇಫೆಕ್ಟಿವ್ ಕಮ್ಯುನಿಕೇಶನ್.
8. ಇಂಟರ್ ಪರ್ಸನಲ್ ರಿಲೇಶನ್‍ಶಿಪ್-Interpersonal Relationship: ಪರಸ್ಪರ ವಯಕ್ತಿಕ ಜೀವನ ಸಂಬಂಧಗಳು. ಸಂಬಂಧಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಅದನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಕೌಶಲ್ಯವೇ ಈ ಇಂಟರ್ ಪರ್ಸನಲ್ ರಿಲೇಶನ್‍ಶಿಪ್.
9. ಕಮಿಂಗ್ ವಿಥ್ ಸ್ಟ್ರೆಸ್-Coming with Stress : ಒತ್ತಡದೊಂದಿಗೆ ಜೀವನ. ನಮ್ಮದೆಲ್ಲಾ ಅದೇ ಬಾಳೇ! ಒತ್ತಡವೇ ಒತ್ತುತ್ತಾ ಇರತ್ತೆ ಎಲ್ಲಾ ಬದಿಯಿಂದ. ಅದನ್ನ ಎದುರಿಸುವ ಕಲೆ ಕರಗತಮಾಡಿಕೊಳ್ಳಬೇಕಿದೆ.
10. ಮ್ಯಾನೇಜಿಂಗ್ ಎಮೋಶನ್ಸ್-Managing Emotions: ಅಂದ್ರೆ ಭಾವನೆಗಳ ನಿರ್ವಹಣೆ. ಭಾವನೆಗಳನ್ನ ಎಲ್ಲಿ ಹೇಗೆ ಅದುಮಿಡಬೇಕು, ಎಲ್ಲಿ ಹೇಗೆ ತೋರಿಸಿಕೊಳ್ಳಬೇಕು ಅನ್ನೋ ಕಲಿಕೆ ಈ ಜೀವನ ಕೌಶಲ್ಯ.
ಈ ಬಗ್ಗೆ ಮತ್ತಷ್ಟು ವಿಷಯಗಳನ್ನು ನಾಳಿನ ಲೇಖನದಲ್ಲಿ ಹಂಚಿಕೊಳ್ತೀನಿ. ಸೀರಿಯಸ್‍ನೆಸ್ ಬಿಡಿ, ಖುಷಿ ಖುಷಿಯಾಗಿರಿ. ಬಂದದ್ದು ಎದುರಿಸೋಣ, ತಿಳಿಯದ್ದು ಕಲಿಯೋಣ.
Also Read: How active listening makes a person healthier?
ಎಂ.ಆರ್. ಸಚಿನ್ ಶರ್ಮ
ಹವ್ಯಾಸಿ ಬರಹಗಾರ
ಬೆಂಗಳೂರು