Vydyaloka

ಕರಿಬೇವಿನ ಎಲೆಗಳು- ಪ್ರಾಣಿ ರೋಗಗಳ ನಿವಾರಣೆಗೂ ಉಪಯುಕ್ತ.

ಕರಿಬೇವಿನ ಎಲೆಗಳು ಇಲ್ಲದ ಭಾರತೀಯ ಆಡುಗೆ ಊಹಿಸಿಕೊಳ್ಳುವುದು ಕಷ್ಟ. ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಆದರೆ ಇದು ಪ್ರಾಣಿ ರೋಗಗಳ ನಿವಾರಣೆಗೂ ಉಪಯುಕ್ತ.

ಕರಿಬೇವಿನ ಮರ ಒಂದು ಪುಟ್ಟ ವೃಕ್ಷವಾಗಿದ್ದು, ಭಾರತದ ಬಹುತೇಕ ಅರಣ್ಯಗಳಲ್ಲಿ ಬೆಳೆಯುತ್ತದೆ. ಕರಿಬೇವಿನ ಎಲೆಗಳನ್ನು ಸಂಬಾರ ಎಲೆಗಳೆಂದು ಕರೆಯಲಾಗುತ್ತದೆ. ಭಾರತೀಯ ಆಡುಗೆಗಳಲ್ಲಿ ಕರಿಬೇವಿನ ಸೊಪ್ಪು ಇಲ್ಲದ ಆಹಾರವನ್ನು ಊಹಿಸಿಕೊಳ್ಳುವುದು ಕಷ್ಟ ಎಂಬ ಮಟ್ಟಿಗೆ ಇದು ಚಿರಪರಿಚಿತ. ಇದು ಅನೇಕ ರೋಗಗಳಿಗೆ ಉಪಶಮನ ನೀಡುತ್ತದೆ. ಆದರೆ ಇದು ಪ್ರಾಣಿ ರೋಗಗಳ ನಿವಾರಣೆಗೂ ಉಪಯುಕ್ತ ಎಂಬುದು ಅನೇಕರಿಗೆ ತಿಳಿದಿಲ್ಲ.

ಕರಿಬೇವಿನ ಎಲೆಗಳ ವೈದ್ಯಕೀಯ ಗುಣಗಳು  :

1) ಇದು ಸಾಮಾನ್ಯ ರೋಗಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
2) ಇದು ಆಹಾರದ ವಿಷಯುಕ್ತತೆಯನ್ನು ಕಡಿಮೆ ಮಾಡುತ್ತದೆ.
3) ಆಹಾರದ ಮೂಲಕ ವಿಷ ದೇಹ ಸೇರುವುದನ್ನು ತಪ್ಪಿಸುತ್ತದೆ.
4) ಇದು ಅತಿಸಾರ ಮತ್ತು ಉರಿ ಮೂತ್ರ ವಿಸರ್ಜನೆ ಚಿಕಿತ್ಸೆಗೆ ಪರಿಣಾಮಕಾರಿ.
5) ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಇದು ಮಧುಮೇಹಿಗಳಿಗೆ ಉಪಯುಕ್ತ.
6) ಇದು ಪ್ರಾಣಿಗಳ ಗರ್ಭಧಾರಣೆ ಪ್ರಮಾಣವನ್ನು ಹೆಚ್ಚಿಸುತ್ತದೆ.
7) ಇದು ಅತಿಸಾರವನ್ನು ಶಮನಗೊಳಿಸುತ್ತದೆ.
ಕರಿ ಬೇವಿನ ಎಲೆಗಳನ್ನು ಪ್ರಾಣಿಗಳಲ್ಲಿ ಕಂಡುಬರುವ ಈ ಕೆಳಕಂಡ ರೋಗಗಳ ಚಿಕಿತ್ಸೆಯಲ್ಲಿ ಬಳಸಬಹುದು.

Also read: ಕರಿಬೇವು- ಔಷಧೀಯ ಗುಣಗಳ ಆಗರ.

ವೈರಾಣು ಜ್ವರ (ಎಫೆಮೆರಲ್ ಫೀವರ್):

ಇದು ಒಂದು ರೀತಿಯ ಕೀಟಗಳು ಕಚ್ಚಿದಾಗ ಹರಡುವ ವೈರಾಣು ಜ್ವರ. ಈ ಜ್ವರವು ಜೀವಕ್ಕೆ ಅಪಾಯ ತಂದೊಡ್ಡದಿದ್ದರೂ, ಪ್ರಾಣಿ-ಪಕ್ಷಿಗಳು ಅಧಿಕ ಜ್ವರದಿಂದ ಬಳಲುವಂತೆ ಮಾಡುತ್ತವೆ. ಇಂಥ ಪರಿಸ್ಥಿತಿಯಲ್ಲಿ ಪ್ರಾಣಿಗಳ ಕಾಲುಗಳಲ್ಲಿ ವಿಪರೀತ ನೋವು ಮತ್ತು ನಿಲ್ಲಲ್ಲು ಸಾಧ್ಯವಾಗದಂತೆ ಮಾಡುತ್ತವೆ.

ರೂಢಿಗತ ಉಪಶಮನವಾಗಿ ಈ ಚಿಕಿತ್ಸೆಯನ್ನು ಪ್ರಯತ್ನಿಸಬಹುದು. ಎರಡು ಮುಷ್ಟಿ ಕರಿಬೇವಿನ ಎಲೆಗಳು ಮತ್ತು ಬೇವಿನ ಎಲೆಗಳು, ಒಂದು ಅಲೋವೆರಾ ಎಲೆ, ಎರಡು ಅಡಿಕೆಗಳು ಮತ್ತು ನಿಂಬೆಹಣ್ಣಿನ ಗಾತ್ರ ಬೆಲ್ಲದ ಉಂಡೆಯೊಂದಿಗೆ ಕಾಲು ಲೀಟರ್ ನೀರೊಂದಿಗೆ ಇದನ್ನು ಚೆನ್ನಾಗಿ ಅರೆದು ಮಿಶ್ರಣವನ್ನು ಮಾಡಬೇಕು. ಜ್ವರ ಪೀಡಿತ ಪ್ರಾಣಿಗಳಿಗೆ ಎರಡರಿಂದ ಮೂರು ದಿನಗಳವರೆಗೆ ದಿನಕ್ಕೆ ಒಂದು ಬಾರಿ ಈ ಮಿಶ್ರಣವನ್ನು ತಿನ್ನಿಸಬೇಕು.

ಗರ್ಭಧಾರಣೆ ತೊಂದರೆ ನಿವಾರಣೆ:

ಕೆಲವು ಹಸುಗಳು ಮತ್ತು ಎಮ್ಮೆಗಳು ಎತ್ತುಗಳು ಮತ್ತು ಕೋಣಗಳ ಸ್ವಾಭಾವಿಕ ಲೈಂಗಿಕ ಕ್ರಿಯೆಯಿಂದ ಅಥವಾ ಪುನರಾವರ್ತಿತ ಕೃತಕ ಗರ್ಭಧಾರಣೆಯಿಂದ ಗರ್ಭ ಧರಿಸುವುದಿಲ್ಲ. ಕೆಲವು ಹಸು ಮತ್ತು ಎಮ್ಮೆಗಳು ಉಷ್ಣ ರೋಗ ಲಕ್ಷಣಗಳನ್ನು ವಿಸ್ತರಿತ ಅವಧಿಗೆ ತೋರ್ಪಡಿಸುತ್ತವೆ. ಇಂಥ ಸಂದರ್ಭದಲ್ಲಿ ಅವುಗಳ ಗರ್ಭಧಾರಣೆಯನ್ನು ನಿರ್ಧರಿಸುವುದು ಕಷ್ಟವಾಗುತ್ತವೆ. ಇಂಥ ಪ್ರಕರಣಗಳಲ್ಲಿ, ಎರಡು ಮುಷ್ಟಿ ತಾಜಾ ಬೇವಿನ ಎಲೆಗಳನ್ನು ಸ್ವಾಭಾವಿಕ ಲೈಂಗಿಕ ಕ್ರಿಯೆ ಅಥವಾ ಕೃತಕ ಗರ್ಭಧಾರಣೆ ಉಪಚಾರ ಆರಂಭಿಸಿದ ದಿನದಿಂದ 10 ದಿನಗಳ ಕಾಲ ದಿನಕ್ಕೆ ಒಮ್ಮೆ ಹಸುಗಳು/ಎಮ್ಮೆಗಳಿಗೆ ತಿನ್ನಿಸಬೇಕು.

ಇದು ಗರ್ಭಧಾರಣೆ ತೊಡಕು ನಿವಾರಿಸಿ ರಾಸುಗಳು ಗರ್ಭಧರಿಸಲು ಸಹಕಾರಿಯಾಗುತ್ತದೆ. ಪರ್ಯಾಯವಾಗಿ, ಸಾಕಷ್ಟು ಪ್ರಮಾಣದ ಕರಿಬೇವಿನ ಎಲೆಗಳನ್ನು ನೆರಳಿನ ಅಡಿ ಒಣಗಿಸಬೇಕು ಹಾಗೂ ಅದನ್ನು ಪುಡಿ ಮಾಡಬೇಕು. ಹತ್ತು ಚಮಚಗಳಷ್ಟು ಪ್ರಮಾಣದ ಈ ಪುಡಿಯನ್ನು ಈ ಮೇಲೆ ತಿಳಿಸಿದ ರೀತಿಯಲ್ಲಿಯೇ ಬಳಸಬಹುದು. ಸ್ವಾಭಾವಿಕ ಲೈಂಗಿಕ ಕ್ರಿಯೆ ಅಥವಾ ಕೃತಕ ಗರ್ಭಧಾರಣೆ ಉಪಚಾರ ಆರಂಭಿಸಿದ ದಿನದಿಂದ 10 ದಿನಗಳ ಕಾಲ ದಿನಕ್ಕೆ ಒಮ್ಮೆ ಹಸುಗಳು/ಎಮ್ಮೆಗಳಿಗೆ ಈ ಪುಡಿಯನ್ನು ತಿನ್ನಿಸಬೇಕು. ಇದು ಗರ್ಭಧಾರಣೆ ತೊಡಕು ನಿವಾರಿಸಿ ರಾಸುಗಳು ಗರ್ಭಧರಿಸಲು ಸಹಕಾರಿಯಾಗುತ್ತದೆ.

ಕಾಲಿನ ಗಾಯ ಹಾಗೂ ಕಾಲು ಮತ್ತು ಬಾಯಿ ರೋಗಕ್ಕೆ ತ್ವರಿತ ಉಪಶಮನ

ಕಾಲು ಕಿಲೋಗ್ರಾಂ ಕರಿಬೇವಿನ ಎಲೆಗಳು ಅಥವಾ ಅದರ ಮರದ ತೊಗಟೆ, ಬೇವಿನ ಮರದ ತೊಗಟೆ, ದೊಡ್ಡ ಬೇವಿನ ಮರದ ತೊಗಟೆ, ಮತ್ತು ಜಾಮೂನ್ ಮರದ ತೊಗಟೆ ಇವೆಲ್ಲವನ್ನೂ ಕುಟ್ಟಿ ಮಿಶ್ರಣ ಮಾಡಬೇಕು. ಇದನ್ನು ಹತ್ತು ಲೀಟರ್ ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಬೇಕು. ಈ ಕಷಾಯದೊಂದಿಗೆ ಪ್ರತಿ ದಿನ ಕಾಲಿನ ಗಾಯಗಳು ಹಾಗೂ ಕಾಲು ಮತ್ತು ಬಾಯಿ ರೋಗದ ಜಾಗಗಳನ್ನು ಚೆನ್ನಾಗಿ ತೊಳೆಯಬೇಕು. ಗುಣಮುಖವಾಗುವ ತನಕ ಇದನ್ನು ಮುಂದಿವರಿಸಬೇಕು.

ಡಾ. ಗಣೇಶ್ ಹೆಗಡೆ, ನೀಲೆಸರ
ಪ್ರಾದೇಶಿಕ ಸಂಶೋಧನಾಧಿಕಾರಿ
ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ, ಶಿರಸಿ, ಕರ್ನಾಟಕ
ಮೊಬೈಲ್ : 09448 995595, E-mail: g.hegdevet@gmail.com

Share this: