ಹೃದಯಾಘಾತದ ನಂತರದ ಎರಡು ತಿಂಗಳಲ್ಲಿ ರಕ್ತದಲ್ಲಿನ ಕೊಬ್ಬಿನಾಂಶಗಳಾದ ಕೊಲೆಸ್ಟರಾಲ್, ಎಚ್‍ಡಿಎಲ್, ಟ್ರೈಗ್ಲಿಸರೈಯ್ಡ್, ಕೈಲೋಮೈಕ್ರೋನ್ ಇತ್ಯಾದಿ ಪರೀಕ್ಷೆ ಮಾಡಬೇಕು. ಸುಮಾರು 14 ಗಂಟೆಗಳ ಕಾಲ ಆಹಾರ ಸೇವಿಸದೇ ಈ ಮೇಲಿನ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಕೊಲೆಸ್ಟರಾಲ್ ಹಾಗೂ ಟ್ರೈಗ್ಲಿಸರೈಯ್ಡ್ ಅಧಿಕವಾಗುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ. ಆದರೆ, ಎಚ್‍ಡಿಎಲ್ ಅಧಿಕವಾದರೆ ಹಾರ್ಟ್ ಆ್ಯಟಾಕ್ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಎಚ್‍ಡಿಎಲ್ ಮತ್ತು ಕೊಲೆಸ್ಟರಾಲ್ ಪ್ರಮಾಣವು ಅನುಪಾತ ರೀತಿಯಲ್ಲಿ ಅಧಿಕವಾದರೆ ತೊಂದರೆ ಇಲ್ಲ. ಇದರ ಅನುಪಾತವು 4.5ಕ್ಕಿಂತಲೂ ಅಧಿಕವಾಗಿರಬಾರದು. ಇದು ಸಮಪ್ರಮಾಣದಲ್ಲಿ ಇಲ್ಲದಿದ್ದಲ್ಲಿ ಆಹಾರದ ರೀತಿಯನ್ನು ನಿಯಂತ್ರಿಸುವುದರೊಂದಿಗೆ ಔಷಧಿಗಳನ್ನು ಸೇವಿಸಿ ರಕ್ತದಲ್ಲಿನ ಕೊಬ್ಬಿನಾಂಶವನ್ನು ನಿಯಂತ್ರಿಸಬೇಕು.
ಹೃದ್ರೋಗಿಗಳು ಆಹಾರ ನಿಯಂತ್ರಿಸಿ, ವ್ಯಾಯಾಮರ ಮೂಲಕವೂ ಎತ್ತರಕ್ಕೆ ಅನುಗುಣವಾದ ತೂಕದ ಶೇಕಡ 10ರಷ್ಟು ಕಡಿಮೆಗೊಳಿಸುವುದು ಒಳ್ಳೆಯದು, ಆದರೆ ಹೇಳುವಾಗ ಸುಲಭವಾಗಿದ್ದರೂ, ಆಹಾರ ಪಥ್ಯಕ್ರಮಗಳು ರೋಗಿಯ ಸುಖಮಯ ಜೀವನಕ್ಕೆ ಧಕ್ಕೆ ಉಂಟಾಗುವುದರಿಂದ ಇದನ್ನು ಪಾಲಿಸುವುದು, ಅನುಸರಿಸುವುದು ಕಷ್ಟದಾಯಕ. ಮಾನವ ಸಾಮಾನ್ಯವಾಗಿ ಆಹಾರಪ್ರಿಯ. ಆದರೆ ಪ್ರಾಣಿಗಳು ಆಹಾರ ಸೇವಿಸುವುದು ಅದರ ಉಳಿವಿಗಾಗಿ. ಅದಾಗ್ಯೂ ಮನುಷ್ಯ ತನ್ನ ಜೀವನ ನಡೆಸಲು ಮತ್ತು ಆತ್ಮಸಂತೃಪ್ತಿಗಾಗಿ ಆಹಾರ ಸೇವಿಸುತ್ತಾನೆ. ಇದರಿಂದಾಗಿ ನಾವು ಅಗತ್ಯಕ್ಕಿಂತ ಶೇ.3ರಿಂದ 4 ಪಟ್ಟು ಹೆಚ್ಚು ಆಹಾರ ಸೇವಿಸುತ್ತೇವೆ. ಅನಿಯಂತ್ರಿತ ಆಹಾರ ಸೇವನೆ ವಿಷಸಮಾನ.
ದೇಹದ ತೂಕ ಕಡಿಮೆಗೊಳಿಸುವುದು ಹೃದಯ ಕಾರ್ಯದ ಹೊರೆಯನ್ನು ಇಳಿಸುವುದಲ್ಲದೇ ಶರೀರದ ಭಾರವನ್ನು ಮಿತಿಗೊಳಿಸುತ್ತದೆ. ಅಲ್ಲದೇ ಚಿಕಿತ್ಸಾ ವಿಧಾನದ ಯಶಸ್ಸಿಗೆ ಅನಿವಾರ್ಯ ಮಾತ್ರವಲ್ಲ. ಔಷಧಿಗಳ ಸಂಖ್ಯೆ ಕಡಿಮೆ ಮಾಡಲು, ಬೈಪಾಸ್ ಶಸ್ತ್ರಚಿಕಿತ್ಸೆ, ಆಂಜಿಯೋಪಾಸ್ಟಿಯನ್ನು ನಡೆಸದಂತೆ ಮಾಡಲು ಕೂಡ ಇದು ಸಹಕಾರಿ.
ಕೊಬ್ಬಿನಾಂಶವಿರುವ ಆಹಾರಗಳಾದ ಮೊಟ್ಟೆ ಮಾಂಸ, ಬೆಣ್ಣೆ, ತುಪ್ಪ, ವನಸ್ಪತಿ, ಹಾಲು ಮತ್ತು ಅಧಿಕ ಕೊಬ್ಬು ಅಡಗಿರುವ ಸಿಹಿ ಪದಾರ್ಥಗಳನ್ನು ತ್ಯಜಿಸಬೇಕು. ಪ್ರತಿದಿನ 2 ಕಪ್‍ಗಿಂತ ಹೆಚ್ಚು ಟೀ-ಕಾಫಿಯನ್ನು ತಿನ್ನುತ್ತಿರುವುದು, ಲಘುಪದಾರ್ಥಗಳನ್ನು ಸೇವಿಸುವ ಅಭ್ಯಾಸವಿದ್ದರೆ ಅದನ್ನು ಕೂಡ ನಿಲ್ಲಿಸಬೇಕು.
ಆಹಾರ ಕ್ರಮಗಳು
ಎಣ್ಣೆ ಮತ್ತು ಕೊಬ್ಬು ಅಧಿಕ ಸೇವಿಸಿ ತಯಾರಿಸಿದ ಆಹಾರ ಮಾತ್ರ ರುಚಿ ಇರುತ್ತದೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಒಂದು ಗ್ರಾಂ ಕೊಬ್ಬಿನಲ್ಲಿ 9 ಕ್ಯಾಲೋರಿ ಶಕ್ತಿ, 1 ಗ್ರಾಂ ಕಾರ್ಬೋಹೈಡ್ರೇಟ್‍ನಲ್ಲಿ 4 ಕ್ಯಾಲೋರಿ ಶಕ್ತಿ ಮತ್ತು 1 ಗ್ರಾಂ ಪ್ರೋಟೀನ್‍ನಲ್ಲಿ 4 ಕ್ಯಾಲೋರಿ ಶಕ್ತಿ ಅಡಕವಾಗಿದೆ. ಆದ್ದರಿಂದ ಬಹಳ ಕಡಿಮೆ ಕೊಬ್ಬು ಸೇವಿಸಿದರೂ ಕೂಡ ಅಗತ್ಯಕ್ಕಿಂತ ಹೆಚ್ಚು ಶಕ್ತಿ ಲಭಿಸುವುದಲ್ಲದೇ, ಇದರಿಂದ ದುರ್ಮೇದಸ್ಸು ಉಂಟಾಗುತ್ತದೆ. ಅಡುಗೆ ಎಣ್ಣೆ ಇದರಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಈ ಎಣ್ಣೆಯನ್ನು ತೊರೆದರೆ ಹೆಚ್ಚು ಕಡಿಮೆ ಹೊಟ್ಟೆ ತುಂಬಾ ಆಹಾರ ಸೇವಿಸಿದರೂ ದೇಹದಲ್ಲಿ ದುರ್ಮೇದಸ್ಸು ಉಂಟಾಗುವುದಿಲ್ಲ. ಅಲ್ಲದೇ ಶರೀರದ ತೂಕ ಅಧಿಕ ಇದ್ದಲ್ಲಿ ತೂಕವನ್ನು ಕಡಿಮೆ ಮಾಡಬಹುದು. ಹೀಗಾಗಿ ಹೃದ್ರೋಗಿಗಳಲ್ಲಿ ತಮ್ಮ ರೋಗ ಗುಣಮುಖವಾಗಲು ಆಹಾರ ನಿಯಂತ್ರಣ ಬಹುಮುಖ್ಯ ಪಾತ್ರ ವಹಿಸುತ್ತದೆ.
ಆಹಾರದಲ್ಲಿ ಅನ್ನಾಂಶ ಹೆಚ್ಚಿರುವ ಅಕ್ಕಿಯಿಂದ ಮತ್ತು ಗೋಧಿಯಿಂದ ತಯಾರಿಸಿದ ಪದಾರ್ಥಗಳ ಅಳತೆ ಕಡಿಮೆ ಮಾಡಿ, ಹೊಟ್ಟೆ ತುಂಬಲು ಎಣ್ಣೆ ರಹಿತ ರೀತಿಯಲ್ಲಿ ತಯಾರಿಸಿದ ತರಕಾರಿಗಳು, ಸಲಾಡ್‍ಗಳು, ಹಣ್ಣು ಹಂಪಲುಗಳು (ಸಕ್ಕರೆ ಕಾಯಿಲೆ ಇಲ್ಲದವರು) ಇತ್ಯಾದಿ ಸೇವಿಸಿದ್ದಲ್ಲಿ ದುರ್ಮೇದಸ್ಸು ಕಡಿಮೆಯಾಗುತ್ತದೆ. ಹಾಲನ್ನು ಸೇವಿಸದಿರುವುದು ಒಳ್ಳೆಯದು. ಕಾಫಿ, ಟೀ, ಶಕ್ತಿವರ್ಧಕ ಪೇಯಗಳನ್ನು ಆದಷ್ಟು ನಿಯಂತ್ರಿಸಿ.
ಇಡ್ಲಿ, ಉಪ್ಪಿಟ್ಟು, ಎಣ್ಣೆ ಸೇರಿಸದೆ ನಾನ್‍ಸ್ಟಿಕ್ ಪ್ಯಾನ್‍ನಲ್ಲಿ ತಯಾರಿಸಿದ ದೋಸೆ, ಮತ್ತು ಚಪಾತಿ, ತೆಂಗಿನಕಾಯಿಗೆ ಬದಲಾಗಿ ಹಸಿ ತರಕಾರಿಯಿಂದ ಮಾಡಿದ ಸಲಾಡ್‍ಗಳನ್ನು ಮತ್ತು ಹಣ್ಣು-ಹಂಪಲುಗಳನ್ನು ಕೂಡ ಬಳಸಬಹುದು. ಮಾಂಸ ಮತ್ತು ಮೀನು ವಾರಕ್ಕೆ ಒಂದೆರಡು ಬಾರಿ ಮಿತವಾಗಿ ಮಾತ್ರ ಸೇವಿಸಬೇಕು. ಹಾರ್ಟ್ ಡಿಸೀಸಸ್ ರಿವರ್ಸಲ್ ಪ್ರೋಗ್ರಾಂನಲ್ಲಿ ಇರುವವರು ಎತ್ತರಕ್ಕೆ ತಕ್ಕಂತೆ ತೂಕದಲ್ಲೂ ಶೇ.10ರಷ್ಟು ಕಡಿಮೆಗೊಳಿಸುವ ತನಕ ಮೀನು ಮತ್ತು ಮಾಂಸ ಸೇವಿಸಬಾರದು.
ದೇಹ ತೂಕ ಕಡಿಮೆಗೊಳಿಸಲು ಕಟ್ಟುನಿಟ್ಟಿನ ಆಹಾರಪಥ್ಯಗಳು ಫಲಕಾರಿಯಾಗುತ್ತವೆ. ಈ ರೀತಿ ಇರುವ ಆಹಾರ ಪಥ್ಯಗಳನ್ನು ಅನುಸರಿಸುವಾಗ ಮಲ್ಟಿವಿಟಮಿನ್‍ಗಳಲ್ಲಿ ಯಾವುದಾದರೂ ಒಂದನ್ನು ವೈದ್ಯರ ಸಲಹೆಯಂತೆ ಪ್ರತಿದಿನ ಒಂದರಂತೆ ಸೇವಿಸಬೇಕು. ಹೃದ್ರೋಗಕ್ಕೆ ಉಪಯೋಗಿಸುವ ಔಷಧಿಗಳನ್ನು ಸಾಮಾನ್ಯ ರೀತಿಯಲ್ಲೇ ಸೇವಿಸಬೇಕು. ಡಯಾಬಿಟಿಸ್ ಇರುವ ಹೃದ್ರೋಗಗಳು ಉಪವಾಸ ಮಾಡುವಾಗ ಸಕ್ಕರೆ ಕಾಯಿಲೆಗೆ ಉಪಯೋಗಿಸುವ ಔಷಧಿ ಮತ್ತು ಇಂಜೆಕ್ಷನ್ ನಿಲ್ಲಿಸುವುದಾಗಲಿ ಡೋಸ್ ನಿಯಂತ್ರಣಗೊಳಿಸುವುದಾಗಲಿ ಅಗತ್ಯವಿರುವುದರಿಂದ ಚಿಕಿತ್ಸೆ ನೀಡುವ ವೈದ್ಯರ ಸಲಹೆ ಅನಿವಾರ್ಯ.
ಅನ್ನ ಮತ್ತು ಚಪಾತಿಯನ್ನು ಹೆಚ್ಚು ತಿನ್ನಬಾರದು. ಸಂಬಾರು ಮತ್ತು ಇತರ ಸಾರು ತಯಾರಿಸುವಾಗ ಬೇಳೆ ಅತಿ ಕಡಿಮೆ ಮಾತ್ರ ಸೇರಿಸಬೇಕು. ಸಾಮಾನ್ಯವಾಗಿ ಬೇಳೆ ಮತ್ತು ಅಲಸಂದೆ ಇತ್ಯಾದಿಗಳನ್ನು ಸೇವಿಸಬಾರದು. ಸಕ್ಕರೆ ಹಾಗೂ ಇನ್ನಿತರ ಸಕ್ಕರೆ ಮಿಶ್ರಿತ ಆಹಾರಗಳನ್ನು ಉಪಯೋಗಿಸದಿದ್ದರೆ ಒಳ್ಳೆಯದು. ಉಪಯೋಗಿಸುವುದಾದಲ್ಲಿ ಅಲ್ಪಪ್ರಮಾಣದಲ್ಲಿ ಮಾತ್ರ ಬಳಸಬೇಕು. ಗರಂ ಮಸಾಲೆಗಳು (ಏಲಕ್ಕಿ, ಲವಂಗ, ಅನಾನಸ್ ಹೊಮ, ಚಕ್ಕೆ ಮತ್ತು ಕಾಳು ಮೆಣಸು) ಸಾಸಿವೆ, ಹುಣಿಸೆಹಣ್ಣು, ಮದ್ಯಪಾನ ಮುಂತಾದವುಗಳನ್ನು ತಿರಸ್ಕರಿಸಬೇಕು. ಇವನ್ನು ಸೇವಿಸಿದಲ್ಲಿ ಹೊಟ್ಟೆಯ ಆಮ್ಲತೆ ಹೆಚ್ಚಾಗುವುದಲ್ಲಿದೆ ಹೊಟ್ಟೆ ಹುಣ್ಣು ಉಂಟಾಗಬಹುದು.
ಎತ್ತರಕ್ಕೆ ಅನುಸಾರವಾದ ತೂಕದ ಶೇ. 10ರಷ್ಟು ಕಡಿಮೆಯಾಗಿದ್ದಲ್ಲಿ, ಎಣ್ಣೆ ಇಲ್ಲದೆ ತಯಾರಿಸಿದ ಚರ್ಮ ಸುಲಿದ ಕೋಳಿ ಮಾಂಸ ಮತ್ತು ಮೀನು ಅಡುಗೆಯನ್ನು ವಾರಕ್ಕೆ ಒಂದೆರಡು ಜಾರಿ ಮಿತವಾಗಿ ತಿನ್ನಬಹುದು. ಅನ್ನದ ಅಳತೆ ಒಂದು ಲೋಟ (250 ಮಿಲಿ) ಅಥವಾ 2 ಚಪಾತಿಯನ್ನು ಸೇವಿಸಬಹುದು. ತೂಕ ಹೆಚ್ಚಾಗುತ್ತಿದ್ದರೆ, ಆಹಾರದ ಅಳತೆಯನ್ನು ಮತ್ತಷ್ಟು ಕಡಿಮೆಗೊಳಿಸಿ ಎತ್ತರಕ್ಕೆ ಅನುಗುಣವಾದ ತೂಕಕ್ಕಿಂತ ಶೇ.10ರಷ್ಟನ್ನು ಇಳಿಸಬೇಕು.
ಪಥ್ಯಗಳನ್ನು ಮಾಡಿ ಎತ್ತರಕ್ಕೆ ಅನುಸಾರವಾದ ತೂಕಕ್ಕಿಂತ ಶೇ.10ರಷ್ಟನ್ನು ಕಡಿಮೆಗೊಳಿಸುವುದರಿಂದ ಆಂಜೈನಾದಿಂದ ವಿಮುಕ್ತಿ ಹೊಂದಲು, ಔಷಧಿಯ ಅಳತೆ ಮತ್ತು ಸಂಖ್ಯೆಯನ್ನು ಕಡಿಮೆ ಮಾಡಲು, ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಆಂಜಿಯೋಪ್ಲಾಸ್ಟಿ ಇಲ್ಲದಾಗಿಸಲು ಸಹಾಯವಾಗುತ್ತದೆ. ಅದಾಗ್ಯೂ ಹಲವರಿಗೆ ಈ ರೀತಿಯ ಪಥ್ಯಗಳನ್ನು ಮಾಡಿ ತೂಕ ಕಡಿಮೆಗೊಳಿಸಲು ಸಾಧ್ಯವಾಗುವುದಿಲ್ಲ. ಇಂಥವರು ಅಧಿಕ ಔಷಧಿ ಸೇವಿಸಬೇಕಾಗುತ್ತದೆ. ಆದರೂ, ಕೆಲವೊಮ್ಮೆ ಆಂಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಆಪರೇಷನ್‍ನ ಅಗತ್ಯ ಕಂಡುಬರಬಹುದು.
ಯಥೇಚ್ಚ ಸೇವಿಸಬಹುದಾದ ತರಕಾರಿಗಳು
ಎಲೆಕೋಸು, ಹೂಕೋಸು, ಬೀನ್ಸ್, ತೊಂಡೆಕಾಯಿ, ಈಚಲಕಾಯಿ, ಪಡವಲಕಾಯಿ, ಕುಂಬಳಕಾಯಿ, ಸೋರೆಕಾಯಿ, ಮೂಲಂಗಿ, ಅವರೇಕಾಯಿ, ಬಾಳೆಹಿಂಡಿ, ಬಾಳೆ ಹೂ, ಕ್ಯಾರೆಟ್, ಸೌತೆಕಾಯಿ, ಹಾಗಲಕಾಯಿ, ಟೊಮೊಟೊ, ನುಗ್ಗೆಕಾಯಿ, ಅಲಸಂದೆ, ಹಸಿರೆಲೆ ತರಕಾರಿಗಳು, ಬದನೆಕಾಯಿ, ಬೆಂಡೆಕಾಯಿ, ಸೊಪ್ಪುಗಳು ಇತ್ಯಾದಿ, ಇವುಗಳಲ್ಲಿ ಸೌತೇಕಾಯಿ ಕ್ಯಾರೆಟ್ ಮತ್ತು ಟೊಮೊಟೊ ಬೇಯಿಸದೇ ತಿನ್ನಬೇಕು.
ನಿಯಂತ್ರಿಸಬೇಕಾದ ಆಹಾರ ಪದಾರ್ಥಗಳು
ಕೊಬ್ಬಿನಾಂಶ ಇರುವ ಹಾಲು, ಹಾಲಿನಿಂದ ತಯಾರಿಸಿದ ಆಹಾರ ಪದಾರ್ಥಗಳು, ಚೀಸ್, ಐಸ್‍ಕ್ರಿಮ್, ಮೊಟ್ಟೆ, ದನದ ಮಾಂಸ, ಆಡಿನ ಮಾಂಸ, ಕುರಿ ಮಾಂಸ, ಹಂದಿ ಮಾಂಸ, ಚಿಪ್ಪು ಮಾಂಸ, ಗಂಜಿ, ಏಡಿ, ಕಾಯಿಸಿದ ಭಕ್ಷ್ಯ ಪದಾರ್ಥಗಳು ಮತ್ತು ಬೇಕರಿ ತಿಂಡಿ-ತಿನಿಸುಗಳು.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com