Vydyaloka

ಒತ್ತಡದಿಂದ ಹೃದಯ ರಕ್ಷಣೆ ಹೇಗೆ ?

ಹೃದಯ ಕಾಯಿಲೆಗಳಿಗೆ ಗಂಡಾಂತರಕಾರಿ ಅಂಶವೆಂದರೆ ಕೆಲಸಕ್ಕೆ ಸಂಬಂಧಿಸಿದ ಒತ್ತಡ. ಇದನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಬೇಕು ಮತ್ತು ನಿಮ್ಮ ಹೃದಯವನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಇಲ್ಲಿ ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ.

ಇಂದಿನ ಆಧುನಿಕ ಜೀವನ ಶೈಲಿ ಮತ್ತು ಜಂಜಾಟದ ಬದುಕಿನಲ್ಲಿ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಒತ್ತಡ ಸಾಮಾನ್ಯ. ಒತ್ತಡ ಹೆಚ್ಚಾದಷ್ಟೂ ಅದು ಹೃದಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಕೆಲಸದ ಒತ್ತಡದಿಂದಾಗಿ ವಿಶ್ರಾಂತಿ ಪಡೆಯಲು ನಮಗೆ ಸಮಯವೇ ಲಭಿಸದಂತಾಗುತ್ತದೆ. ನಾವು ಕೆಲಸ ಮಾಡುವ ಸ್ಥಳದಲ್ಲಿನ ಒತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಈಗ ಅನಿವಾರ್ಯ ಎಂಬಂತಾಗಿದೆ. ಇದು ಒಂದಲ್ಲ ಒಂದು ರೀತಿಯಲ್ಲಿ ಎಲ್ಲ ಕ್ಷೇತ್ರದವರನ್ನೂ ಕಾಡುತ್ತದೆ. ಒತ್ತಡಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಂದಾಗಿ ಪ್ರತಿವರ್ಷ ಕೆಲಸದ ದಿನಗಳು ನಷ್ಟವಾಗುವ ಪ್ರಮಾಣವೂ ಹೆಚ್ಚಾಗುತ್ತಿದೆ.

ದೀರ್ಘಕಾಲದ ಒತ್ತಡದಿಂದಾಗಿ ವ್ಯಕ್ತಿಗಳಲ್ಲಿ ಹತಾಶೆ, ಖಿನ್ನತೆ, ಮಾನಸಿಕ ಕ್ಷೋಭೆಯಂಥ ದೈಹಿಕ ಲಕ್ಷಣಗಳು ಗೋಚರಿಸಿ ಅಧಿಕವಾಗಿ ಕಾರ್ಯನಿರ್ವಹಿಸಿದ ನರಗಳ ದೋಷದಿಂದ ಬಳಲುತ್ತಾರೆ. ಕೆಲಸಕ್ಕೆ ಸಂಬಂಧಪಟ್ಟ ಒತ್ತಡದಿಂದ ಆರಂಭದಲ್ಲಿ ಕಂಡುಬರುವ ಗುಣಲಕ್ಷಣಗಳು ಲಘುವಾಗಿರುತ್ತದೆ. ತಲೆನೋವು, ಶೀತ ಮೊದಲಾದ ಸಾಮಾನ್ಯ ಸಮಸ್ಯೆಗಳು ಆರಂಭದ ಚಿಹ್ನೆ. ಆದಾಗ್ಯೂ ಒತ್ತಡದ ಮಟ್ಟ ಹೆಚ್ಚಾದಂತೆ ಲಕ್ಷಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಹತಾಶೆ, ಖಿನ್ನತೆ, ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಕೂದಲು ಉದುರುವಿಕೆ, ಹೃದ್ರೋಗ, ಅಧಿಕ ಕ್ರಿಯಾಶೀಲ ಥೈರಾಯ್ಡ್ ಸಮಸ್ಯೆ, ಬೊಜ್ಜು, ಸ್ಥೂಲಕಾಯ, ಉದ್ವೇಗ, ಲೈಂಗಿಕ ನಿರಾಸಕ್ತಿ, ಜಠರ ಹುಣ್ಣು ಇವು ಒತ್ತಡದಿಂದ ಉಂಟಾಗುವ ದೈಹಿಕ ಸಮಸ್ಯೆಗಳು.

ಒತ್ತಡ ಸಮಸ್ಯೆ ನಿವಾರಣೆ ಹೇಗೆ?

ಹಾಗಾದರೆ ಒತ್ತಡದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ? ಈ ಸಮಸ್ಯೆ ನಿವಾರಣೆಗೆ ಎರಡು ಮಾರ್ಗಗಳಿವೆ.

ಒತ್ತಡ ನಿಯಂತ್ರಣ: ಧ್ಯಾನ, ಯೋಗ ಮತ್ತು ದೀರ್ಘ ಆಳ ಉಸಿರಾಟದ ವಿಧಾನಗಳಿಂದ ದೇಹವನ್ನು ಪ್ರಶಾಂತ ಸ್ಥಿತಿಗೆ ತಂದು ಒತ್ತಡದ ಸಮಸ್ಯೆಯನ್ನು ಹದ್ದುಬಸ್ತಿನಲ್ಲಿ ಇಡಬಹುದು.

ಒತ್ತಡ ತಡೆ: ನಮ್ಮ ಜೀವನದಲ್ಲಿ ಎದುರಾಗುವ ಒತ್ತಡದ ಬಹುಭಾಗವನ್ನು ವಾಸ್ತವವಾಗಿ ತಪ್ಪಿಸಲು ಸಾಧ್ಯ. ಉತ್ತಮ ಸಂಘಟನೆ, ಪ್ರಭಾವಶಾಲಿ ಕಾಲ ನಿರ್ವಹಣೆ, ಮತ್ತು ಆಂತರಿಕ ವ್ಯಕ್ತಿತ್ವ ಸಂವಹನ ಕೌಶಲದಂಥ ಸರಳ ವಿಧಾನಗಳು ಒತ್ತಡಯುಕ್ತ ಜೀವನಶೈಲಿಯನ್ನು ಕಡಿಮೆಗೊಳಿಸುವ ಮೊದಲ ಹೆಜ್ಜೆಯಾಗಿದೆ.

ಒತ್ತಡ ತಗ್ಗಿಸುವ ಒಂದು ಪರಿಣಾಮಕಾರಿ ವ್ಯಾಯಾಮ ವಿಧಾನವೆಂದರೆ ವ್ಯಾಯಾಮ. ಇದು ನಮ್ಮ ನರಮಂಡಲದ ಮೂಲಕ ಚೈತನ್ಯ ಹೆಚ್ಚಿಸುವ ರಾಸಾಯನಿಕಗಳನ್ನು ಬಿಡುಗಡೆ ಮಾಡಲು ಪ್ರಚೋದನೆ ನೀಡುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಮ್ಮ ದೇಹಾರೋಗ್ಯವನ್ನು ಉತ್ತಮಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ನಮ್ಮ ಬೌದ್ಧಿಕ ಶಕ್ತಿ ವೃದ್ಧಿಗೊಳಿಸಿ ಮನಸ್ಸನ್ನು ಆರೋಗ್ಯವಾಗಿಡುತ್ತದೆ. ಕೇವಲ 30 ನಿಮಿಷಗಳ ಸಾಧಾರಣ ದೈಹಿಕ ಚಟುವಟಿಕೆಗಳು ನಮಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ನೀಡುತ್ತವೆ. ಆದರೆ, ಪರಿಣಿತರು ಅಥವಾ ಫಿಸಿಯೋಥೆರಪಿ ತಜ್ಞರ ಸಲಹೆ ಮತ್ತು ಮಾರ್ಗದರ್ಶನದ ಮೇಲೆ ವ್ಯಾಯಾಮ ಮಾಡುವುದು ಸೂಕ್ತ. ನಿಮ್ಮ ಸುತ್ತಮುತ್ತ ಸ್ಥಳದಲ್ಲಿ ಬಿರುನಡಿಗೆ ಮಾಡಬಹುದು ಅಥವಾ ಲಿಫ್ಟ್-ಎಸ್ಕುಲೇಟರ್‌ಗಳ ಬದಲು ಮೆಟ್ಟಿಲುಗಳನ್ನು ಬಳಸಿ. ಮಕ್ಕಳೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಿ.

ಜೀವನಶೈಲಿ ಬದಲಾವಣೆ

ಒತ್ತಡಕ್ಕೆ ಸಂಬಂಧಿಸಿದ ಹೃದ್ರೋಗ ತಡೆಗಟ್ಟಲು ಕೆಲವು ಜೀವನಶೈಲಿ ಬದಲಾವಣೆ ಸೂಕ್ತ.

ಧೂಮಪಾನ ವರ್ಜಿಸಿ: ಧೂಮಪಾನ ಅಥವಾ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಪಟ್ಟಿ ಮಾಡಿ. ನಂತರ ನಾನೇಕೆ ಧೂಮಪಾನ ಬಿಡಬೇಕು ಎಂಬುದನ್ನು ಬರೆಯಿರಿ. ಧೂಮಪಾನ ತ್ಯಜಿಸಲು ಸೂಕ್ತ ದಿನವನ್ನು ಗೊತ್ತು ಮಾಡಿ ದೃಢಸಂಕಲ್ಪದಿಂದ ಆ ದುಶ್ಚಟದಿಂದ ದೂರವಿರಿ. ನೀವು ಧೂಮಪಾನ ವರ್ಜಿಸಲು ನಿರ್ಧರಿಸಿದ ತಕ್ಷಣ ಸಿಗರೇಟ್‌ಗಳು, ಆಷ್‌ಟ್ರೇ ಮತ್ತು ಲೈಟರ್‌ನನ್ನು ಹೊರಗೆ ಎಸೆಯಿರಿ. ಧೂಮಪಾನ ವರ್ಜಿಸಿದ ನಂತರ ನಿಮ್ಮ ದೇಹದಲ್ಲಿ ಕೆಲವು ಪ್ರತಿಕ್ರಿಯೆಗಳು ಕಂಡುಬಂದರೆ ನಿಮಗೆ ಔಷಧಿ ನೀಡಬೇಕಾಗುತ್ತದೆ. ನಿಮಗೆ ನಿಕೋಟಿನ್ ಪರ್ಯಾಯದ ಅಗತ್ಯವಿದಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇದು ಗಮ್, ಇನ್‌ಹೇರಲ್ ಮೊದಲಾದ ರೂಪದಲ್ಲಿ ಬರುತ್ತದೆ.

ಆರೋಗ್ಯಕರ ಆಹಾರ: ಆರೋಗ್ಯ ರಕ್ಷಣೆ ಹಾಗೂ ದೈಹಿಕ-ಮಾನಸಿಕ ಸಾಮರ್ಥ್ಯ ಹೆಚ್ಚಳದಲ್ಲಿ ಉತ್ತಮ ಆಹಾರ ಮಹತ್ವದ ಪಾತ್ರ ವಹಿಸುತ್ತದೆ. ಆರೋಗ್ಯಕರವಾಗ ಸಂತುಲಿತ ಮತ್ತು ಪೌಷ್ಟಿಕ ಆಹಾರ ದೇಹವನ್ನು ಸಮತೋಲನದಲ್ಲಿ ಇಡುತ್ತದೆ. ಆದರೆ ಸಕಾಲದಲ್ಲಿ ಸೇವನೆ ಮತ್ತು ಸೂಕ್ತ ಪ್ರಮಾಣದಲ್ಲಿ ಆಹಾರ ಸೇವನೆ ಮುಖ್ಯ.

ಉತ್ತಮ ನಿದ್ರೆ: ಮನುಷ್ಯನ ಆರೋಗ್ಯ ಸ್ಥಿತಿಗೆ ಸೂಕ್ತ ನಿದ್ರೆಯೂ ಅತ್ಯಗತ್ಯ. ಸಾಕಷ್ಟು ನಿದ್ರೆಯ ಮಹತ್ವದ ಬಗ್ಗೆ ಜನರಲ್ಲಿ ಅನೇಕ ತಪ್ಪು ತಿಳುವಳಿಕೆ ಇದೆ. ಸೂಕ್ತ ಸಮಯದಲ್ಲಿ ನಿದ್ರೆ ಮಾಡುವುದು ಒಳ್ಳೆಯದು. ಬೇಗನೆ ಮಲ?? ಬೇಗನೆ ಏಳುವುದು ಉತ್ತಮ ಅಭ್ಯಾಸ. ಆದಾಗ್ಯೂ ಸಾಕಷ್ಟು ನಿದ್ರೆ ಇಲ್ಲದಿದ್ದರೆ ಕೆಲವೊಂದು ತೊಂದರೆಗಳಿಗೆ ಕಾರಣವಾಗುತ್ತದೆ. ಅನಿದ್ರತೆ, ತಲೆನೋವು, ನಿರುತ್ಸಾಹ, ಮಂಕು ಇತ್ಯಾದಿ. ಕೆಲವೊಮ್ಮೆ ಇದು ಬೊಜ್ಜು, ಅಜೀರ್ಣ, ಜ್ಞಾಪಕ ಶಕ್ತಿ ನಷ್ಟದಂಥ ಗಂಭೀರ ಸಮಸ್ಯೆಗಳಿಗೂ ಎಡೆ ಮಾಡಿಕೊಡಬಹುದು.

 


ಡಾ. ಮಹಂತೇಶ್ ಆರ್. ಚರಂತಿಮಠ್

ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this: