Vydyaloka

ಹೈ ಬ್ಲಡ್ ಪ್ರೆಷರ್ : ಇದೊಂದು ಸೈಲೆಂಟ್ ಕಿಲ್ಲರ್…!

ಹೈ ಬ್ಲಡ್ ಪ್ರೆಷರ್ : ಇದೊಂದು ಸೈಲೆಂಟ್ ಕಿಲ್ಲರ್…!  ಹೈ ಬ್ಲಡ್ ಪ್ರೆಷರ್,ಹೈ ಬ್ಲಡ್ ಪ್ರೆಷರ್ ಅಥವಾ ಹೈಪರ್‍ಟೆನ್ಷನ್ ಇದು ಯಾರಲ್ಲಿ ಬೇಕಾದರೂ ಬರಬಹುದು. ವಯಸ್ಸಾದಂತೆ, ಬೀಪಿ ಬರುವ ಅವಕಾಶ ಹೆಚ್ಚುತ್ತದೆ. ಅತಿಯಾದ ತೂಕ ಹೊಂದಿದ್ದರೆ ಅಥವಾ ಸಕ್ಕರೆ ಕಾಯಿಲೆ ಇದ್ದಾಗ ಇದು ಕಾಣಿಸಿಕೊಳ್ಳುವುದು.

ಹೈ ಬ್ಲಡ್ ಪ್ರೆಷರ್, ಇದೊಂದು ಸೈಲೆಂಟ್ ಕಿಲ್ಲರ್…!
ಮೊದಲೆಲ್ಲ ಪಾಶ್ವಿಮಾತ್ಯ ಜಗತ್ತಿನ ಜನಸಂಖ್ಯೆಯಲ್ಲಿ ಮಾತ್ರ ಕಂಡುಬರುವ ಕಾಯಿಲೆ ಎಂದೆಲ್ಲ ಪರಿಗಣಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಜಗತ್ತಿನಾದ್ಯಂತ ದೊಡ್ಡ ಸಮಸ್ಯೆ ಎಂದಾಗಿದೆ. ಜೊತೆಗೆ ಭಾರತದಂತಹ ದೇಶದಲ್ಲಿ ವಿಪರೀತ ಎನ್ನಿಸುವಷ್ಟು ಬೃಹದಾಕಾರದ ಸಮಸ್ಯೆಯಾಗಿ ಉದ್ಭವಿಸಿದೆ.

ಭಾರತೀಯರಲ್ಲಿ ಹೆಚ್ಚು!

ಕೆಲವೊಂದು ವೈಜ್ಞಾನಿಕ ಅಧ್ಯಯನಗಳ ಕಡೆ ಗಮನಿಹರಿಸಿದರೆ ಭಾರತದಲ್ಲಿ ವಾಸಿಸುತ್ತಿರುವ ಮತ್ತು ಹೊರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಲ್ಲಿಯೂ ಹೃದ್ರೋಗ ಅತಿಯಾಗಿ ಹೆಚ್ಚಾಗಿ ಕಂಡುಬರುವುದನ್ನು ಸೂಚಿಸುತ್ತದೆ. ದೌರ್ಭಾಗ್ಯದ ವಿಷಯವೇನೆಂದರೆ ಭಾರತದಲ್ಲಿ ವಾಸಿಸುತ್ತಿರುವ ಅಥವಾ ಹೊರದೇಶದಲ್ಲಿರುವ ಉನ್ನತ ವರ್ಗದ ಭಾರತೀಯರು ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಹೃದ್ರೋಗವನ್ನು ಹೆಚ್ಚು ಕಡಿಮೆ ಸಮಾನವಾಗಿ ಹೊಂದುವ ಅಪಾಯ ಎದುರಿಸುತ್ತಿದ್ದಾರೆ.
ಕಳೆದ 25 ವರ್ಷಗಳಲ್ಲಿ ಹಲವು ಅಧ್ಯಯನಗಳಿಂದ ಅಧಿಕ ರಕ್ತದೊತ್ತಡದ ನಿಯಂತ್ರಣದ ಪ್ರಾಮುಖ್ಯತೆ ತಿಳಿಯಲ್ಟಟ್ಟಿದೆ. ಅಧಿಕ ರಕ್ತದೊತ್ತಡ-ಸಿಸ್ಟೋಲಿಕ್ ಮತ್ತು ಡಯಾಸ್ಟೋಲಿಕ್ ಬ್ಲಡ್‍ಪ್ರೆಷರ್ ಎರಡೂ ಹೆಚ್ಚಿದರೆ, ಆರೋಗ್ಯಕ್ಕೆ ಮಾರಕ. ಪರಿಣಾಮಕಾರಿ ಬ್ಲಡ್ ಪ್ರೆಷರ್ ನಿಯಂತ್ರಣ ಅತಿ ಅವಶ್ಯಕ ಮತ್ತದನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸುವುದನ್ನು ಶುರು ಮಾಡಬೇಕು. ಯಾವುದೇ ಬಗೆಯ ನಿರ್ಲಕ್ಷ್ಯ ಅಥವಾ ತಡ ಮಾಡುವುದರಿಂದ ಸದಾ ಅಧಿಕ ರಕ್ತದೊತ್ತಡ ಇರುವ ಸ್ಥಿತಿಯಿಂದ ಹಾನಿಯೂ ಹೆಚ್ಚಾಗುತ್ತ ಹೋಗುತ್ತದೆ.

ಹೃದಯ-ಮೆದುಳು-ಕಿಡ್ನಿ

ಅನಿಯಂತ್ರಿತ ರಕ್ತದೊತ್ತಡದಿಂದ 3 ಅಂಗಗಳು ಆ ಹಾನಿಯನ್ನು ತೀವ್ರವಾಗಿ ಅನುಭವಿಸಬೇಕಾಗುತ್ತದೆ. ಅವು-ಹೃದಯ, ಮೆದುಳು ಮತ್ತು ಕಿಡ್ನಿಗಳು. ಸರಿಯಾದ ರಕ್ತದೊತ್ತಡವನ್ನು ಕಾಪಾಡಿಕೊಂಡರೆ ಈ ಅಂಗಗಳನ್ನು ಆರೋಗ್ಯಕರ ಮತ್ತು ಉತ್ತಮ ಸ್ಥಿತಿಯಲ್ಲಿ ರಕ್ಷಿಸಿದಂತೆ. ಇಲ್ಲದಿದ್ದರೆ ನಿಮಗೆ ಅತಿ ಮುಖ್ಯವಾದ ಈ ಅಂಗಗಳನ್ನು ಹಾನಿಯಾಕೆ ಮಾಡುತ್ತೀರಿ? ಪಾಶ್ವಿಮಾತ್ಯ ದೇಶಗಳು ಅನಿಯಂತ್ರಿತ ರಕ್ತದೊತ್ತಡದ ಎರಡು ಅತಿ ಗಂಭೀರ ದುಷ್ಟರಿಣಾಮಗಳಾದ ಹೃದ್ರೋಗ ಮತ್ತು ಪಾಶ್ರ್ವವಾಯುವಿನ ಮಟ್ಟವನ್ನು ಕಡಿಮೆ ಮಾಡುವಲ್ಲಿ ಯಶಸ್ಸು ಕಾಣಲಾಗಿದೆ.
ಆದರೆ, ಭಾರತದಲ್ಲಿ ತೊಂದರೆಯ ಪತ್ತೆ ಮತ್ತು ಅಧಿಕ ರಕ್ತದೊತ್ತಡದ ಸೂಕ್ತ ನಿಯಂತ್ರಣದ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಜ್ಞಾನದ ಕೊರತೆ, ಜಾಗೃತಿಯ ಕೊರತೆ, ಸಂಪನ್ಮೂಲಗಳ ಕೊರತೆ, ವೈದ್ಯಕೀಯ ಸೌಲಭ್ಯಗಳು, ಔಷಧಿಗಳು ಸಿಗದಿರುವುದು, ಅನಕ್ಷರತೆ ಮತ್ತು ಬಡತನ ಇವೆಲ್ಲವೂ ಒಳ್ಳೆಯ ಫಲಿತಾಂಶ ದೊರೆಯದೇ ಇರಲು ಹಲವು ಕಾರಣಗಳು.

ವಯಸ್ಸಿಗೆ ಮುನ್ನ ಸಾವು

ಅಧಿಕ ರಕ್ತದೊತ್ತಡ ಇರುವ ಶೇ.20ರಷ್ಟು ಕಡಿಮೆ ಸಂಖ್ಯೆಯಷ್ಟು ಭಾರತೀಯರು ಉತ್ತಮ ರಕ್ತದೊತ್ತಡ ನಿಯಂತ್ರಣ ಮಾಡುತ್ತಿರಬಹುದು ಎಂಬುದು ಒಂದು ಶೈಕ್ಷಣಿಕ ಊಹೆ ಅμÉ್ಟೀ. ಆದ್ದರಿಂದಲೇ ಅಧಿಕ ರಕ್ತದೊತ್ತಡದ ದುಷ್ಪರಿಣಾಮಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಕ್ತನಾಳಗಳ ಸಂಬಂಧಿ ಹೃದ್ರೋಗ, ಹೃದಯಾಘಾತ, ಹೃದಯ ವೈಫಲ್ಯ, ಲಕ್ವ ಮತ್ತು ಕಿಡ್ನಿ ವೈಫಲ್ಯದಂಥ ದುಷ್ಪರಿಣಾಮಗಳ ರೂಪದಲ್ಲಿ ಆಗಿ ಇವೆಲ್ಲದರ ಒಟ್ಟು `ಉಡುಗೊರೆ’ ಎಂದರೆ ವಯಸ್ಸಿಗೆ ಮುನ್ನವೇ ಸಾವನ್ನಪ್ಪುವುದು!
ದುರುದೃಷ್ಟವಶಾತ್, ಹೆಚ್ಚಿನ ಕೇಸುಗಳಲ್ಲಿ ಅಧಿಕ ರಕ್ತದೊತ್ತಡವು ಕಣ್ಣಿಗೆ ಕಾಣಿಸುವಂಥ ಕೆಲವೇ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಅದೇ ಕಾರಣಕ್ಕೆ ಇದನ್ನು ವೈದ್ಯರು, ವಿಜ್ಞಾನಿಗಳು ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ. ಇಂದಿಗೂ ಕೂಡ ಅತಿಯಾದ ರಕ್ತದೊತ್ತಡದಿಂದ ಬಳಲುವ ಸಹಸ್ರಾರು ಮಂದಿ, ಅದು ತಮಗಿದೆ ಎಂದು ತಿಳಿಯದೆ, ಕೆಲ ಗಂಭೀರ ಮತ್ತು ಹೆಚ್ಚಿನ ವೇಳೆ ಜೀವಕ್ಕೆ ಅಪಾಯವಾಗುವಂಥ ಬೀಪಿಗೆ, ಚಿಕಿತ್ಸೆ ಪಡೆಯುವ ಕಾರಣ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ಬರುತ್ತಾರೆ. ಹಾಗಾದರೆ ಈ ಸೈಲೆಂಟ್ ಕಿಲ್ಲರನ್ನು ಹೇಗೆ ಎದುರಿಸುವುದು ರೋಗಿ ಮತ್ತು ವೈದ್ಯರ ಕಡೆಯಿಂದಲೂ ಉನ್ನತ ಮಟ್ಟದ ಜಾಗೃತಿ-ಎಚ್ಚರ ಇರುವುದು ಅವಶ್ಯ.

ಬಿ.ಪಿ…! ಕಾರಣಗಳೇನು?

ಮಾನಸಿಕ ಒತ್ತಡದ ಯುಗ, ಎಲ್ಲಿ ನೋಡಿದರೂ ಸ್ಪರ್ಧೆ, ಹೋರಾಟ. ಬಾಲ್ಯದಿಂದಲೂ ನಾವು ನಮ್ಮ ಮೆದುಳನ್ನು ಅತಿಯಾಗಿ ದುಡಿಸಿಕೊಳ್ಳುತ್ತಿದ್ದೇವೆ. ಜೊತೆಗೆ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ, ಸಾಮಾಜಿಕ, ರಾಜಕೀಯ, ಪ್ರಾಕೃತಿಕ ಸಂಬಂಧಿ ಸಮಸ್ಯೆಗಳಿಂದಲೂ ಜರ್ಜರಿತ ಗೊಳ್ಳುತ್ತಿದ್ದೇವೆ. ಇದೇ ಕಾರಣಕ್ಕೆ ಬಿ.ಪಿ. ಮಾನವನನ್ನು ಹೆಚ್ಚಾಗಿ ಕಾಡುತ್ತಿದೆ!

ಅಧಿಕ ಉಪ್ಪು

`ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ’ ಎಂಬ ಮಾತು ಇದೆ. ಕೆಲವರಂತೂ ಉಪ್ಪಿಲ್ಲದೆ ತುತ್ತೆದವರು. ಆಹಾರದಲ್ಲಿ ಹೆಚ್ಚಿದ ಉಪ್ಪು ಬಳಕೆಯಿಂದ ಬಿಪಿ ಹೆಚ್ಚುಹೆಚ್ಚು ಬಾಧಿಸುತ್ತದೆ. ಚಿಪ್ಸ್, ಕಾರ, ಚಟ್ನಿ, ಉಪ್ಪಿನಕಾಯಿ ಬಳಸಿ ನಾಲಿಗೆ ಚಪ್ಪರಿಸುತ್ತಲೇ ಬಿಪಿಯನ್ನು ಬರಮಾಡಿಕೊಳ್ಳುತ್ತಿದ್ದೇವೆ.

ತಂಬಾಕು-ಧೂಮಪಾನ

ಇದು ಬಿಪಿ ಪ್ರಚೋದಕ. ತಂಬಾಕಿನಲ್ಲಿ ಅನೇಕ ವಿಷ ಪದಾರ್ಥಗಳಿವೆ. ಅವುಗಳಲ್ಲಿ ನಿಕೋಟಿವ್ ಹಾಗೂ ಇಂಗಾಲದ ಮಾನಾಕ್ಸೈಡ್ ದೇಹದಲ್ಲಿ `ನಾರ್ ಆಡ್ರಿನಲನ್’ ಎಂಬ ರಾಸಾಯನಿಕ ರಕ್ತದೊತ್ತಡ ಹೆಚ್ಚಿಸುತ್ತದೆ. ಧೂಮಪಾನ ಚಟದ ತೀವ್ರತೆ ಬಿಪಿಯನ್ನು ಹೆಚ್ಚಿಸುತ್ತದೆ. ತಂಬಾಕಿನಿಂದ ತಯಾರಾದ ಯಾವುದೇ ಪದಾರ್ಥದ ಸೇವನೆಯಿಂದ ಬಿಪಿ ಬರುತ್ತದೆ ಎಂಬುದು ನಿಶ್ಚಿತ.

ಮದ್ಯಪಾನ

ಮದ್ಯಪಾನಿ ವ್ಯಸನಿಗಳಿಗೆ ಬಿಪಿ ಬರುವ ಸಾಧ್ಯತೆ ಹೆಚ್ಚು. ಮದ್ಯಪಾನ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿದರೆ ಕಾಲಾನುಕ್ರಮೇಣ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.

ಕಾಫಿ-ಟೀ

ಪ್ರತಿದಿನ ಐದಾರು ಕಪ್‍ಗಳಿಗಿಂತ ಹೆಚ್ಚು ಬಾರಿ ಸ್ಟ್ರಾಂಗ್ ಕಾಫಿ ಸೇವಿಸುವವರಿಗೆ ರಕ್ತದೊತ್ತಡ ಹೆಚ್ಚುತ್ತದೆಂಬುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಪ್ರತಿ ಕಪ್ ಸ್ಟ್ರಾಂಗ್ ಕಾಫಿ ನಮ್ಮ ರಕ್ತದೊತ್ತಡವನ್ನು 10 ಮಿಲಿಮೀ.ನಷ್ಟು ಏರಿಸುತ್ತದೆ ಎಂಬುದು ಪ್ರಯೋಗಗಳಿಂದ ವೇದ್ಯವಾಗಿದೆ.

ಮಾನಸಿಕ ಒತ್ತಡ

ರಕ್ತದೊತ್ತಡಕ್ಕೂ ಮಾನಸಿಕ ಒತ್ತಡಕ್ಕೂ ಬಹಳ ಅನ್ಯೋನ್ಯ ಸಂಬಂಧ. ರಕ್ತದ `ಒತ್ತಡ’ ಎಂಬ ಪದವೇ ಈ ಅಂಶವನ್ನು ಧ್ವನಿಸುತ್ತದೆ. ಒತ್ತಡಕ್ಕೆ ಈಡಾದಾಗ ಉಂಟಾಗುವ ಅಹಿತಕರ ವಿದ್ಯಮಾನಗಳು ಬಿಪಿ ಒಂದೇ ಅಲ್ಲದೆ, ಅನೇಕ ಆತಂಕದ ರೋಗಗಳಿಗೆ ನಾಂದಿಯಾಗುತ್ತದೆ. ಅತೀವ ಬಡತನ, ನಿರುದ್ಯೋಗ, ವೈವಾಹಿಕ ಸಮಸ್ಯೆ ಇನ್ನಿತರೆ ಕಾರಣಗಳು ಮಾನಸಿಕ ಖಿನ್ನತೆಗೆ ನೆರವಾಗುತ್ತವೆ.

ದೇಹಸ್ಥೂಲತೆ

ಸ್ಥೂಲದೇಹಿಗಳಿಗೆ ಬಿಪಿ ಬರುತ್ತದೆ ಎಂಬುದು ಜನಸಾಮಾನ್ಯರ ತಿಳಿವಳಿಕೆ. ಈ ನಂಬಿಕೆ ನಿಜವೂ ಹೌದು. ಸ್ಥೂಲದೇಹಿಗಳಿಗೆ ಬಿಪಿ ಸಾಧ್ಯತೆ ಹೆಚ್ಚು ಎಂಬುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಬೊಜ್ಜಿನವರ ಬೆನ್ನು ಹತ್ತುವುದು ಬಿಪಿಯ ಜಾಯಮಾನ. ದೇಹದ ಗಾತ್ರ ಹೆಚ್ಚಿದಂತೆ ಬಿಪಿಯೂ ಏರುವುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ.

ಕೊಬ್ಬು ಸೇವನೆ

ಅತಿ ಹೆಚ್ಚಾಗಿ ಜಿಡ್ಡು ಪದಾರ್ಥ ಹಾಗೂ ಕರಿದ ಪದಾರ್ಥಗಳನ್ನು ಸೇವಿಸುವವರಲ್ಲಿ ಬಿಪಿ ಹೆಚ್ಚುವ ಸಂಭವವಿದೆ. ಕೊಬ್ಬಿನಿಂದ ಏರುವ ದೇಹ ತೂಕ, ಅದರಿಂದಲೇ ರಕ್ತದೊತ್ತಡವೂ ಏರುತ್ತದೆ. ಮುಖ್ಯವಾಗಿ ಡಾಲ್ಡ, ಕೊಬ್ಬರಿ, ಎಣ್ಣೆ, ಬೆಣ್ಣೆ, ಪ್ರಾಣಿಜನ್ಯ ಕೊಬ್ಬು ಸೇವಿಸುವುದರಿಂದ ರಕ್ತದೊತ್ತಡ ಏರಿಕೆಯ ಅಪಾಯ ಹೆಚ್ಚು. ಇಂತಹ ಜಿಡ್ಡು ಪದಾರ್ಥಗಳಿಂದ ರಕ್ತದಲ್ಲಿ ಅಪಾಯಕಾರಿ ಕೊಲೆಸ್ಟ್ರಾಲ್ ಅಂಶವೂ ಇರುತ್ತದೆ.

 

 

 

 

 

 

 

 

 

 

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this: