Vydyaloka

ಗುಬ್ಬಚ್ಚಿ-ಕೋಗಿಲೆ-ಕಾಗೆ- ಮಾನವ ಕುಲವು ಕಲಿಯಬೇಕಾದ ಕಥೆ

ಗುಬ್ಬಚ್ಚಿ-ಕೋಗಿಲೆ-ಕಾಗೆ- ಮಾನವ ಕುಲವು ಕಲಿಯಬೇಕಾದ ಕಥೆ. ಎರಡು ಮುದಿ ಕಾಗೆ, “ಏ,, ಏನ ತಿನ್ನುತ್ತಿದ್ದರಿ, ನೀವು. ಛೀ.. ನಾವು ಎಂದಿಗೂ ಇಂತಹ ಪ್ರಾಣಿಗಳನ್ನು ತಿಂದಿಲ್ಲಾ, ಮುರ್ಖಗಳಿರಾ.. ನಮಗೆಲ್ಲಾ ದೊಡ್ಡ ವಿಪತ್ತು ಕಾದಿದೆ..” ಎಂದು ಹೇಳಿ  ಅಲ್ಲಿಂದ ಭರ್ರೆಂದು ಹಾರಿ ಹೋದವು.

ಒಂದು ಸುಂದರ ಕಾಡು. ಅಲ್ಲೊಂದು ರುಚಿ ನೀರಿನ ಹೊಂಡ. ಅದರ ದಂಡೆಗೆ ಆಲದ ಮರ, ಅದರ ಕೆಳಗಿದ್ದ ಜಾಲಿಮರವು ನೀರಿನತ್ತ ಬಾಗಿತ್ತು. ಅದರ ಟೊಂಗೆಗೆ ಒಂದು ಗುಬ್ಬಚ್ಚಿ ಗೂಡು ಕಟ್ಟಿಕೊಂಡು ಮಕ್ಕಳ ಜೊತೆ ವಾಸವಿತ್ತು. ಆ ಆಲದ ಮರದ ಮೇಲೆ ಕಾಗೆಗಳ ಗ್ಯಾಂಗು ಅವರಲ್ಲಿ ಸಭ್ಯ ಕೋಗಿಲೊಂದು ವಾಸವಿತ್ತು.
ಗುಬ್ಬಚ್ಚಿಗೆ ಶಿಸ್ತು ಮತ್ತು ಸ್ವಚ್ಛ ಬಹಳ ಇಷ್ಟ. ಅರಣೋದಯದ ಮುಂಚೆ ಗೂಡಿನ ಹೊರ ಬಂದು ದೂರ ಹೋಗಿ ಶೌಚ ಮಾಡಿ, ಚಿಲಿಪಿಲಿ ಗಾನದಿ ಮರದಿಂದ ಮರಕ್ಕೆ ಜಿಗಿಯುತ್ತಾ, ನಲಿಯುತ್ತಾ… ಸರೋವರಕ್ಕೆ ಸ್ನಾನಕ್ಕಾಗಿ ಹೋಗುತಿತ್ತು. ಸ್ನಾನ ಮಾಡಿ ಸೂರ್ಯನ ಎಳೆಯ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕೂತು, ಬುರ್ರೆಂದು ಗೂಡಿಲ್ಲಿ ಬಂದು ಮಕ್ಕಳ ನೋಡಿ ತಿಂಡಿ ಹುಡುಕಲು ಭರ್ರೆಂದು ಹೋಗುತ್ತಿತ್ತು.

ಅತ್ತ ಕಾಗೆಗಳ ದಿನಚರಿ ಬೇರೆನೆ. ಎಲ್ಲರಿಗಿಂತ ತಡವಾಗಿ ಎದ್ದು ಕಾವ್ ಕಾವ್ ಗದ್ದಲ ಸುರು ಇಡುತ್ತಿದ್ದವು. ಅಲ್ಲಿ, ಇಲ್ಲಿ ಎಲ್ಲಿಯೂ ಸಿಕ್ಕಲ್ಲಿ ಶೌಚ ಮಾಡುತ್ತಿದ್ದವು. ಗಾನವಿಲ್ಲ, ಸ್ನಾನವಿಲ್ಲ ನೇರ ಹಳಸಿದ ಅನ್ನ ಅಥವಾ ಸತ್ತ ಪ್ರಾಣಿ ತಿನ್ನಲು ಗ್ಯಾಂಗು ಭರ್ರೆಂದು ರವಾನೆ ಆಗುತಿತ್ತು. ಅವೆಲ್ಲಾ ಹೋದ ನಂತರ ಕೋಗಿಲೆ ಮಾತ್ರ ಗುಬ್ಬಚ್ಚಿಯಂತೆ ಸ್ವಚ್ಛ ಸ್ನಾನ ಮಾಡಿ ಮಾವಿನ ಅಥವಾ ಹುಣಸೆ ಚಿಗುರು ತಿಂದು ಕೂಡುತ್ತಿತ್ತು.

ಒಂದು ದಿನ ಗುಬ್ಬಚ್ಚಿ ಮಕ್ಕಳ ತಿಂಡಿಗಾಗಿ ಹೋದಾಗ ಕಾಗೆಗಳೆಲ್ಲಾ ಕೂಡಿ ದೊಡ್ಡ ರಂಪಾಟವನ್ನೆ ಮಾಡಿದ್ದವು. “ಕೋಗಿಲೆ ನಮ್ಮ ಜಾತಿಯವಳಲ್ಲಾ, ಅವಳಿಗೆ ನಮ್ಮ ಪರಂಪರೆ ಗೊತ್ತಿಲ್ಲಾ..” ಎಂದು ಹೇಳಿ ಕಾಗೆ ಗ್ಯಾಂಗು ಅದಕ್ಕೆ ಕಾಡಿ ಕಚ್ಚಿ ಹಾರಿ ಹೋಗಿತ್ತು. ಅಷ್ಟರಲ್ಲಿ ಗುಬ್ಬಚ್ಚಿ ಚುಂಚಿನಲ್ಲಿ ತಿಂಡಿ ತಂದು ಚಿಂವ್ ಚಿಂವ್ ಎಂದು ಬಾಯಿ ತೆರೆದು ಕೂತ ಮಕ್ಕಳ ಬಾಯಿಗೆ ಹಾಕಿದಾಗ ಮಕ್ಕಳು, “ಅಮ್ಮಾ, ಸಿ.. ಥೂ ಏನೋ ವಾಸನೆ,,” ಎಂದವು. ಅದಕ್ಕೂ ವಾಸನೆ ಸಹಿಸದು, ಹೊರಬಂದು ನೋಡಿದರೆ ಅಲ್ಲಿ ಕಾಗೆ ಶೌಚ ಮಾಡಿತ್ತು. ಸಿಟ್ಟು ಬಂತು ಆದರೆ ಅಲ್ಲಿ ಯಾರು ಇಲ್ಲ. ಸುಮ್ಮನಾಗಿ ಸ್ವತಃ ಕಡ್ಡಿಯಿಂದ ತೆಗೆದು ಹಾಕಿತು. ಆಗ ಅದರ ಗಮನ ಎಲೆಯಲ್ಲಿ ಭಯದಿಂದ ಅವಿತ ಕೋಗಿಲೆಯತ್ತ ಹೋಯಿತು. “ಏನ ಕೋಗಿ¯ಕ್ಕಾ ಹೀಗೆ ಕೂತಿಯಲ್ಲಾ ಏನಾಯಿತು..?” ಎಂದು ಕೇಳಿತು. ಆಗ ಕೋಗಿಲೆ ಅಳುತ್ತಾ, “ಏನ್ ಗುಬ್ಬಕ್ಕಾ ಏನ್ ಹೇಳಲಿ ನನ್ನ ಪಾಡು, ಇಷ್ಟು ದಿನ ಸುಮ್ಮನಿದ್ದು ಇಂದು ಒಮ್ಮೇಲೆ ನೀನು ನಮ್ಮ ಜಾತಿಯವಳು ಅಲ್ಲಾ, ಹೋಗು ಇಲ್ಲಿಂದ ಅಂದವು. ನೀನೆ ಹೇಳು ಗುಬ್ಬಕ್ಕಾ,, ನಮ್ಮಮ್ಮಾ ಇಲ್ಲಿ ಮೊಟ್ಟೆ ಇಡುವಾಗ ಇವರ ಜಾತಿ ಕೇಳಿದಳಾ, ಇಲ್ಲವಲ್ಲ.” ಎಂದು ಹೇಳಿತು. ಆಗ “ಇರಲಿ ಬೀಡು ಕೋಗಿಲಕ್ಕಾ, ಹುಚ್ಚು ಕಾಗೆಗಳು ಅವು..” ಗುಬ್ಬಚ್ಚಿ ಸಾಂತ್ವನ ಮಾಡಲು ಕೋಗಿಲೆ, “ಇಲ್ಲ.. ನಾನಿಲ್ಲಿ ಇರುವದಿಲ್ಲಾ, ಸಂಕಟದಲ್ಲಿ ಇವರೆ ನನ್ನ ಹತ್ತಿರ ಬರುತ್ತಾರೆ..” ಹೇಳಿ ಬುರ್ರೆಂದು ಹಾರಿತು.

ಎಲ್ಲ ಹಕ್ಕಿಗಳು ರವಿ ಮುಳುಗುತ್ತಿದ್ದಂತೆ ಗೂಡು ಸೇರುತಿದ್ದವು. ಆದರೆ ಕಾಗೆಗಳಿಗೆ ಮಾತ್ರ ತಡವಾಗಿ ಬಂದು ಒಂದೆರಡು ತಾಸು ಗಲಭೆ ಮಾಡಿ ಮಲಗುವ ರೂಢಿ. ಕಾಗೆ ಬಂದ ತಕ್ಷಣ ಗುಬ್ಬಚ್ಚಿ, “ಯಾರು ನನ್ನ ಗೂಡಿನ ಮೇಲೆ ಶೌಚ ಮಾಡಿದಿರಿ, ಸ್ವಲ್ಪನಾದರೂ ಮಾನ ಮರ್ಯಾದೆ ಇದೆಯಾ ನಿಮಗೆ..?” ಎಂದು ರೇಗುತ್ತದೆ. ಈ ಮಾತು ಕೇಳಿದ ನಾಯಕ ಕಾಗೆ, “ಯಾರು ಗುಬ್ಬಿನಾ, ಲೇ ನೀನು ನನ್ನ ಕೊಕ್ಕಿನಷ್ಟು ಇದ್ದಿಯಾ..? ನನ್ನ ಮುಂದೆ ಮಾತನಾಡುವ ಧೈರ್ಯ ನಿನಗೆ. ನಿಲ್ಲು ನಿನ್ನನ್ನು..” ಅಷ್ಟರಲ್ಲಿ ಇನ್ನೊಂದು ಕಾಗೆ, “ಇರಲಿ, ಶಾಂತನಾಗಣ್ಣಾ, ಬೇಡಾ. ಅದು ನಮಗೆಲ್ಲಿ ಸಾಲುತ್ತದೆ, ಲೇ ಗುಬ್ಬಿ ನಾನೆ ಶೌಚ ಮಾಡಿದ್ದು, ಏನ ಇವಾಗ..?” “ಅಲ್ಲಪ್ಪಾ ಕಾಗೆಗಳಿರಾ, ನಿವೇಲ್ಲಾ ಹೀಗೆ ಹೊಲಸು ತಿಂದು ಸುತ್ತಮುತ್ತ ಗಲಿಚ್ಛ ಮಾಡಿದರೆ ಹೇಗೆ..? ನಿಮ್ಮ ಕ್ರೂರ ಕರ್ಮ ನಾಳೆ ನಮ್ಮ ಇಡಿ ಪಕ್ಷಿ ಸಂಕುಲನ ಸಂಕಟದಲ್ಲಿ ಬರಬಹುದು..” ಎಂದು ಗುಬ್ಬಚ್ಚಿ ಬುದ್ಧಿ ಮಾತು ಹೇಳಲು ಹೋದಾಗ, ಕಾಗೆಗಳೆಲ್ಲಾ ಗಹಿ ಗಹಿಸಿ ನಗುತ್ತಾ, “ನಮಗೆ ಬುದ್ಧಿ ಮಾತು ಹೇಳಬೇಡ. ನಿನ್ಯಾರು,,? ನಮ್ಮ ರಕ್ಷಣೆಗೆ ದೇವಿ ಕಾಗಮ್ಮಾ ಇದ್ದಾಳೆ..” ಎಂದವು. ಆಗ ಗುಬ್ಬಚ್ಚಿ ಸುಮ್ಮನೆ ಹೋಗಿ ಮಕ್ಕಳೊಂದಿಗೆ ಮಲಗುತ್ತದೆ.

ರಾತ್ರಿ ಪೂರ್ಣ ಮಳೆ. ರವಿ ಬಂದಿದ್ದು ಕಾಣುತ್ತಿರಲಿಲ, ಅಷ್ಟು ಧಾರಾಕಾರ ಮಳೆ. ಮಧ್ಯಾಹ್ನ ಕಾಗೆಗಳಿಗೆ ಹಸಿವೆಯಾಗಿ ಚೀಟಿ ಚೀಟಿ ಮಳೆಯಲ್ಲಿಯೆ ರಾತ್ರಿ ತಂದ ಕೊಳೆತ ಮೌಂಸವನ್ನು ತಿನ್ನಲು ಪ್ರಾರಂಭ ಮಾಡುತ್ತವೆ. ಅದರಲ್ಲಿ ಒಂದು ಕಾಗೆ ಗುಬ್ಬಚ್ಚಿಯತ್ತ ತೆಗಳುತ್ತಾ, “ಏ ಸಾಧು ಗುಬ್ಬಿ, ನಿನ್ನೆ ರಾತ್ರಿ ಬಹಳ ಮಾತನಾಡುತಿದ್ದಿಯಲ್ಲಾ ಇಗೇನು ತಿನ್ನುತ್ತಿಯಾ, ಚಳಿ ಇದೆ ಸಾಯುತ್ತಿ, ಹಿಡಿ ತಿನ್ನು..” ಎಂದು ಕೊಳೆತ ಮೌಂಸದ ತುಣುಕು ಗೂಡಿನತ್ತ ಬೀಸಿತು.

ಕಾಗೆಯ ಬಾಯಿಗೆ ಎಲ್ಲಿ ಹತ್ತಬೇಕೆಂದು ಗುಬ್ಬಚ್ಚಿ ಗೂಡು ಬಿಟ್ಟು ಬರಲಿಲ್ಲ. ಗೂಡಿನಲ್ಲಿದ್ದ ಸ್ವಲ್ಪ ಕಾಳು ಮಕ್ಕಳಿಗೆ ತಿನ್ನಲು ಕೊಟ್ಟು ತಾನು ಎರಡು ದಿನ ಉಪವಾಸ ಮಾಡಿತು. ಅದಕ್ಕೆ ಗೊತ್ತಿತ್ತು ಸಂಕಟ ಬಹಳ ದಿನ ಇರುವದಿಲ್ಲ. ಮಾರನೆಯ ದಿನ ಮಳೆ ನಿಂತಿತು. ಏನಾದರೂ ತಿನ್ನಲು ತರಬೇಕೆಂಬ ವಿಚಾರದಲ್ಲಿ ಹೊರಗೆ ಬಂದು ನೋಡಿದರೆ, ಕಾಗೆಗಳು ಅದರ ಗೂಡಿನ ಸುತ್ತಲೆಲ್ಲಾ ಶೌಚ ಮಾಡಿ, ಎಲುಬು ತೂಗು ಹಾಕಿದ್ದವು. ಗುಬ್ಬಚ್ಚಿಗೆ ಭಯವಾಯಿತು. ಇಲ್ಲಿಯೆ ಇದ್ದರೆ ಈ ಕಾಗೆಗಳು ಬದಕಲು ಬಿಡುವದಿಲ್ಲ ಎಂದು ತಿಳಿದು ಮಕ್ಕಳಿಗೆ ತನ್ನ ರೆಕ್ಕೆ ಮೇಲೆ ಕುಳಿಸಿ ಮತ್ತೊಂದು ಕಾಡಿಗೆ ಬುರ್ರನೆ ಹಾರಿತು.

ಗುಬ್ಬಚ್ಚಿ ಹೇಳುತಿತ್ತು, ಕೇಳುತಿತ್ತು ಆದರೆ ಈಗ ಮಾತ್ರ ಕಾಗೆಗಳಿಗೆ ಹೇಳುವರಿಲ್ಲಾ, ಕೇಳುವವರಿಲ್ಲಾ. ಅವುಗಳ ಕ್ರೂರತೆ ಮತ್ತಷ್ಟು ಹೆಚ್ಚಾಯಿತು. ಸಿಕ್ಕಿದೆಲ್ಲಾ, ಸತ್ತಿದೆಲ್ಲಾ ತಿನ್ನಲು ಪ್ರಾರಂಭ ಮಾಡಿದವು. ಒಮ್ಮೆ ದೂರ ದೇಶದ ಬಾವುಲಿಗಳು ಅಲ್ಲಿಗೆ ಬಂದು ಸತ್ತು ಬಿದ್ದಿದ್ದವು. ಸಂಜೆ ಹೊತ್ತು ಮನೆಯತ್ತ ಬರುವಾಗ ಕಾಗೆಗಳ ನಾಯಕನ ಕಣ್ಣು ಅತ್ತ ಬಿದ್ದಾಗ ಸಂತೋಷದಿಂದ ತಕ್ಷಣ ಎಲ್ಲ ಕಾಗೆಗಳನ್ನು ಕರೆದು ಬೇಟೆ ಎತ್ತಿಕೊಂಡು ಮರದತ್ತ ಒಯ್ಯಲು ಹೇಳಿತು. ಅಂದು ಕಾಗೆಗಳ ಸಂಭ್ರಮ ಹೇಳತಿರದು, ಅವುಗಳ ಕಿರುಚಾಟ ಕಾಡು ತುಂಬಿತ್ತು. ಇದನ್ನು ನೋಡಿದ ಎರಡು ಮುದಿ ಕಾಗೆ, “ಏ,, ಏನ ತಿನ್ನುತ್ತಿದ್ದರಿ, ನೀವು. ಛೀ.. ನಾವು ಎಂದಿಗೂ ಇಂತಹ ಪ್ರಾಣಿಗಳನ್ನು ತಿಂದಿಲ್ಲಾ, ಮುರ್ಖಗಳಿರಾ.. ನಮಗೆಲ್ಲಾ ದೊಡ್ಡ ವಿಪತ್ತು ಕಾದಿದೆ..” ಎಂದು ಹೇಳಿ ಅವು ಸಹ ಅಲ್ಲಿಂದ ಭರ್ರೆಂದು ಹಾರಿ ಹೋದವು.

ಮರುದಿನ ನೋಡಿದರೆ ಎಲ್ಲ ಕಾಗೆಗಳು ಅಲ್ಲಲ್ಲೆ ಸಾಯಲು ಪ್ರಾರಂಭ ಮಾಡಿದವು. ಅವುಗಳಿಗೆ ಬಾವುಲಿಯ ರೋಗ ತಗಲಿತ್ತು. ಆ ಮಹಾಮಾರಿ ಅತ್ಯಂತ ವೇಗವಾಗಿ ಕಾಡಿನ ತುಂಬೆಲ್ಲಾ ಪಸರಿಸಿತು. ಎಲ್ಲ ಪಕ್ಷಿಗಳ ಪ್ರಾಣಕ್ಕೆ ಕುತ್ತು ಬಂತು. ಇಡಿ ಕಾಡು ಹಕ್ಕಿ ಇಲ್ಲದಂತೆ ಆಗುವ ಭಯಾನಕ ಪರಿಸ್ಥಿತಿ ನಿರ್ಮಾಣವಾಯಿತು. ಇದು ಆ ಮುದಿ ಕಾಗೆಗಳಿಗೆ ಗೊತ್ತಾಯಿತು. ಒಂದು ಕಾಲದಲ್ಲಿ ಇಂತಹ ಮಹಾಮಾರಿ ಬಂದಾಗ ಕೋಗಿಲೆ ತಂದ ಸಂಜೀವಿನಿ ಕಡ್ಡಿಯಿಂದ ಸಂಕುಲನ ಉಳಿದಿದ್ದು ಅವುಗಳ ನೆನಪಿಗೆ ಬಂತು. ಆದರೆ “ಕೋಗಿಲೆ ನಮ್ಮ ಮೇಲೆ ಸಿಟ್ಟಾಗಿ ಹೋಗಿದೆ ಅದಕ್ಕೆ ನಾವು ಕೇಳಿದರೆ ಕೋಡುವದಿಲ್ಲ,, ಹೇಗೆ ಮಾಡುವದೆಂದು..” ಒಂದು ಮುದಿ ಕಾಗೆ ಚಿಂತಿಸಲು ಮತ್ತೊಂದು ಕಾಗೆ, “ಅದರ ಪ್ರೀತಿಯ ಗೆಳತಿ ಗುಬ್ಬಚ್ಚಿ ಕೇಳಿದರೆ ಇದಕ್ಕೆ ಸಹಕರಿಸಬಹುದು…” ಎಂಬ ವಿಚಾರದಲ್ಲಿ ಗುಬ್ಬಚ್ಚಿ ಹುಡುಕಿ ಮತ್ತೊಂದು ಕಾಡಿಗೆ ಹೋರಟವು.

ಕೊನೆಗೆ ಬಹಳ ಪರಿಶ್ರಮದಿಂದ ಗುಬ್ಬಚ್ಚಿಯನ್ನು ಹುಡುಕಿ, ಕ್ಷಮೆ ಕೇಳಿ, “ಗುಬ್ಬಕ್ಕಾ, ನಮ್ಮ ಕಾಗೆಗಳು ಮಾಡಿದ ತಪ್ಪಿನಿಂದ ನಾವೆಲ್ಲಾ ದೊಡ್ಡ ಸಂಕಟದಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೀಗ ಸಂಜೀವಿನಿ ಕಡ್ಡಿ ಬೇಕು. ನೀನು ಸಹಕರಿಸಿದರೆ ಕೋಗಿಲೆ ನಮಗೆ ಕೋಡುತ್ತದೆ. ನಮ್ಮೆಲ್ಲರ ಪ್ರಾಣ ಉಳಿಯುತ್ತದೆ..” ಎಂದು ವಿನಂತಿಸಿ ಕೊಂಡವು. ತಕ್ಷಣ ಗುಬ್ಬಚ್ಚಿ ಕೋಗಿಲಕ್ಕನ ಹತ್ತಿರ ಹೋಗಿ ಎಲ್ಲ ಪರಿಸ್ಥಿಯನ್ನು ಹೇಳುತ್ತಾಳೆ. ‘ಅಯ್ಯೋ..! ದೊಡ್ಡ ಸಂಕಟವೆ ಉದ್ಭವ ಆಗಿದೆಯಲ್ಲಾ..” ಎಂದು ಜೀವ ಪರ್ವತದ ಮೇಲೆ ಹೋಗಿ ಸಂಜೀವಿನಿ ಕಡ್ಡಿಯನ್ನು ತಂದು ಆ ಮಹಾಮಾರಿಯಿಂದ ಪಕ್ಷಿ ಸಂಕುಲನವನ್ನು ಬದುಕಿಸುತ್ತದೆ. ಎಲ್ಲ ಹಕ್ಕಿಗಳು ಕೋಗಿಲೆಗೆ ಧನ್ಯವಾದ ಹೇಳುತ್ತವೆ. ಮುಂದೆ ಎಲ್ಲ ಹಕ್ಕಿ ಸಭ್ಯರಾಗಿ, ಪ್ರೀತಿಯಿಂದ ಒಬ್ಬರನೊಬ್ಬರ ವಿಶ್ವಾಸದ ಮೇಲೆ ಬದುಕುತ್ತವೆ.

ಮಲಿಕಜಾನ್ ಶೇಖ್
ಜಾನ್ ಹೌಸ್‘, ಪ್ಲಾಟ್ ಕ್ರ.709/31, ಬಾಸಲೇಗಾಂವ ರೋಡಅಕ್ಕಲಕೋಟ- 413216
ಸಂಪರ್ಕ: 9423468808

Share this: