Vydyaloka

ಗಣಜಲಿ-ಚಿಕನ್‍ಪಾಕ್ಸ್

  ಡಾ. ಕೆ. ಹನುಮಂತಯ್ಯ

 

 

 

 

ಡಾ. ಮೇನಕಾ ಮೋಹನ್

ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, # 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066. ಫೋನ್ : 080-28413381/1/2/3/4/5.

http://www.vims.ac.in/

 

ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗ 

ಮಕ್ಕಳು ಶಾಲೆಗೆ ಹೋದಾಗ, ಜಾತ್ರೆಗೆ ತೆರಳಿದಾಗ, ಉತ್ಸವಗಳಲ್ಲಿ ಭಾಗವಹಿಸಿದಾಗ, ಇತರ ಮಕ್ಕಳೊಂದಿಗೆ ಆಟ ಆಡುವಾಗ  ಒಂದು ಮಗುವಿಗೆ ಗಣಜಲಿ ಇದ್ದರೆ, ಬಹು ಬೇಗ ಅಲ್ಲಿ ಇರುವ ಬಹಳಷ್ಟು ಮಕ್ಕಳಿಗೆ ಈ ರೋಗ ಬರುತ್ತದೆ. ಗಣಜಲಿಯಿಂದ ಬಳಲುವ ಮಗು ಕೆಮ್ಮಿದಾಗ, ಸೀನಿದಾಗ, ನಕ್ಕಾಗ ಮತ್ತು ಮಾತನಾಡುವಾಗ, ಬಾಯಿಯಿಂದ, ಮೂಗಿನಿಂದ ಹೊರ ಬರುವ ಉಗುಳಿನ ತುಂತುರು ಹನಿಗಳಲ್ಲಿ ಮತ್ತು ಉಸಿರಾಡುವ ಗಾಳಿಯ ಮೂಲಕ ಈ ರೋಗಾಣು ಹೊರ ಬರುತ್ತದೆ. ಈ ರೋಗಾಣುವುಳ್ಳ ಗಾಳಿಯು ಆರೋಗ್ಯವಂತ ಮಗುವಿನ ದೇಹ ಸೇರಿಕೊಂಡಾಗ ರೋಗಾಣುಗಳು ಗಂಟಲಿನಲ್ಲಿ ವಿಶ್ರಮಿಸಿ, ತಮ್ಮ ಸಂಖ್ಯೆಯನ್ನು ವೃದ್ದಿಸಿ, ಈ ರೋಗವನ್ನು ಹರಡುತ್ತವೆ.
ಗಾಬರಿಯಾಗಿದ್ದ ತಂದೆ-ತಾಯಿ ತಮ್ಮ ಏಳು ವರ್ಷದ ಮಗುವನ್ನು ನನ್ನ ಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಬಂದು, ನಮ್ಮ ಮಗುವನ್ನು ಪರೀಕ್ಷಿಸಿ ಎಂದು ಮನವಿ ಮಾಡಿದರು. ಮಗುವನ್ನು ಪರೀಕ್ಷಿಸುವಾಗ ತಾಯಿ ತನ್ನ ಮಗುವಿನ ಅನಾರೋಗ್ಯ ಸಮಸ್ಯೆ ಬಗ್ಗೆ ತಿಳಿಸಿ ಎಂದು ಕೇಳಿದರು. ಎಂದಿನಂತೆ ನನ್ನ ಮಗು ಶಾಲೆಯಿಂದ ಬಂದು ಆಟವಾಡಿ ರಾತ್ರಿ ಊಟ ಮಾಡಿ ಮಲಗಿತು. ಮುಂಜಾನೆ ಎದ್ದಾಗ ಮಗುವಿನ ಮುಖದಲ್ಲಿ ನೀರುಗುಳ್ಳೆಗಳು ಕಾಣಿಸಿತು. ಅದು ಮಗುವಿನ ಎದೆ, ಹೊಟ್ಟೆ ಮತ್ತು ಬೆನ್ನಿನ ಮೇಲೂ ಕಂಡುಬಂದಿತು. ಇದನ್ನು ನೋಡಿ ಗಾಬರಿಯಾಗಿ ನಿಮ್ಮ ಬಳಿ ಕರೆದುಕೊಂಡು ಬಂದಿದ್ದೇನೆ ಎಂದು ಆ ತಾಯಿ ನನ್ನ ಬಳಿ ಹೇಳಿದರು. ಮಗುವನ್ನು ನಾನು ಪರೀಕ್ಷಿಸಿದಾಗ ಚರ್ಮದ ಮೇಲೆ ಮತ್ತು ಬಾಯಿಯ ಒಳಗೆ ನೀರುಗುಳ್ಳೆಗಳು ಆಗಿರುವುದನ್ನು ಅವರಿಗೆ ತೋರಿಸಿದೆ. ಇದು ಗಣಜಲಿ ಅಥವಾ ಚಿಕನ್‍ಪಾಕ್ಸ್. ವೆರಿಸಿಲ್ಲಾ ವೈರಸ್‍ನಿಂದ ಉಂಟಾದ ರೋಗ ಎಂದು ಹೇಳಿ ಚಿಕಿತ್ಸೆ ಆರಂಭಿಸಿದೆ.
ಚಿಕನ್‍ಪಾಕ್ಸ್ ಎಂದು ಏಕೆ ಕರೆಯುತ್ತಾರೆ?
1968ರಲ್ಲಿ ಡಾ. ಸ್ಯಾಮುಯೆಲ್ ಜಾನ್ಸನ್ ಸ್ಮಾಲ್‍ಪಾಕ್ಸ್ (ಸಿಡುಬು) ಮತ್ತು ಗ್ರೀನ್‍ಪಾಕ್ಸ್ (ಸಿಫಿಲಿಸ್) ಕಾಯಿಲೆಗಳಿಂದ ನರಳುತ್ತಿದ್ದ ರೋಗಿಗಳನ್ನು ಪರೀಕ್ಷಿಸುತ್ತಿದ್ದ. ಈ ರೋಗಿಗಳಲ್ಲಿ ನೀರುಗುಳ್ಳೆಗಳು ಮತ್ತು ಕೀವುಗುಳ್ಳೆಗಳು ಕಾಣಿಸಿಕೊಳ್ಳುತ್ತಿತ್ತು.
ಬಹಳಷ್ಟು ಸಂದರ್ಭಗಳಲ್ಲಿ ರೋಗಿಯು ಈ ಮಾರಕ ರೋಗದಿಂದ ಮೃತನಾಗುತ್ತಿದ್ದ.  ಇಂಥ ಸಮಯದಲ್ಲಿ ಕೆಲವು ರೋಗಿಗಳಿಗೆ ಸಿಡುಬು ಮತ್ತು ಸಿಫಿಲಿಸ್ ರೋಗದಂತೆ ನೀರು ಗುಳ್ಳೆಗಳು ಕಾಣಿಸಿಕೊಂಡವು. ಅವರಿಗೆ ಏನೂ ತೊಂದರೆಯಾಗಲಿಲ್ಲ ಮತ್ತು ಒಂದು ವಾರದಲ್ಲಿ ಈ ಗುಳ್ಳೆಗಳು ಬತ್ತಿ ಹೋಗಿ ರೋಗಿಗಳು ಸಂಪೂರ್ಣ ಗುಣಮುಖರಾದರು. ಇಂಥ ಬಹಳಷ್ಟು ಜನರನ್ನು ನೋಡಿದ ಡಾ. ಸ್ಯಾಮುಯೆಲ್ ಈ ನೀರುಗುಳ್ಳೆಗಳನ್ನು ಅಂಜುಬುರುಕ ಸಿಡುಬು ರೋಗ ಅಥವಾ ಮೃದು ಸಿಡುಬು ರೋಗ ಎಂದು ಕರೆದನು. ಅಂದರೆ ಇಂಗ್ಲಿಷ್ ಪದ ಚಿಕನ್ ಎಂದರೆ ಅಂಜುಬುರುಕ ಮತ್ತು ಪಾಕ್ಸ್ ಅಂದರೆ ನೀರುಗುಳ್ಳೆ ಮತ್ತು ಕೀವುಗುಳ್ಳೆ ಎಂದರ್ಥ. ಆದ್ದರಿಂದ ಈ ರೋಗವನ್ನು ಡಾ.ಸ್ಯಾಮುಯೆಲ್ ಚಿಕನ್ ಪಾಕ್ಸ್ ಎಂದು ಕರೆದರು.
ರೋಗಕ್ಕೆ ಕಾರಣ 
ಇಟೆಲಿ ದೇಶದ ಜಿಯೋವಾನಿ ಫಿಲಿಪ್ಸ್ ಈ ರೋಗಕ್ಕೆ ಕಾರಣವಾದ ವೆರಿಸಿಲ್ಲಾ ಜೋಸ್ಟರ್ ವೈರಸ್ ಎಂಬ ಸೂಕ್ಷ್ಮ ಜೀವಿಯನ್ನು ಪತ್ತೆ ಮಾಡಿದರು. 1986ರಲ್ಲಿ ಈ ವಿಷಾಣುವಿನ ಸಂಪೂರ್ಣ ಜೀವಕೋಶಗಳನ್ನು ಕಂಡುಹಿಡಿದರು. ಅದು ಡಿಎನ್‍ಎ ವೈರಸ್ ಮತ್ತು ಹ್ಯುಮನ್ ಹರ್ಪಿಸ್ ಅಲ್ಫಾ ವೈರಸ್-3 ಎಂದು ಗುರುತಿಸಲ್ಪಟ್ಟಿತು. ಒಬ್ಬ ರೋಗಿಯು ನೀರುಗುಳ್ಳೆಗಳು ಬರುವುದಕ್ಕಿಂತ 2-3 ದಿನ ಮತ್ತು ನೀರುಗುಳ್ಳೆಗಳು ಕಾಣಿಸಿಕೊಂಡ ನಂತರ 6-7 ದಿನ ತನ್ನ ದೇಹದಿಂದ ಈ ರೋಗಾಣುಗಳನ್ನು ಬಿಡುಗಡೆ ಮಾಡುತ್ತಿರುತ್ತಾನೆ. ಇದರಿಂದಾಗಿ ಇನ್ನೊಬ್ಬರಿಗೆ ರೋಗ ಹಬ್ಬುತ್ತದೆ.
ರೋಗಾಣುಗಳು ದೇಹದಲ್ಲಿ ಹರಡುವಿಕೆ
ರೋಗಾಣುಗಳು ಗಂಟಲಿನಲ್ಲಿ ಸಾಕಷ್ಟು ವೃದ್ದಿಗೊಂಡು ದೇಹದ ಇತರ ಭಾಗಗಳಾದ ಧರ್ಮ, ರಕ್ತನಾಳ, ಶ್ವಾಸಕೋಶ, ಜಠರ, ಮತ್ತು ಮೆದುಳು ಎಲ್ಲ ಕಡೆ ಹಬ್ಬುತ್ತವೆ. ಎರಡು ವಾರಗಳಾದ ನಂತರ ರಕ್ತನಾಳಗಳಲ್ಲಿ, ಚರ್ಮ ಪದರಗಳಲ್ಲಿ ರೋಗಾಣುಗಳು ಹೆಚ್ಚು ಚಟುವಟಿಕೆ ಹೊಂದಿ, ವೃದ್ದಿಗೊಂಡು, ಮತ್ತೊಮ್ಮೆ ದೇಹದ ಇತರ ಭಾಗಗಳಿಗೆ ಹಬ್ಬುತ್ತವೆ. ಈ ಸಮಯದಲ್ಲಿ ರೋಗಿಯ ಬಾಯಿಯಿಂದ ಮತ್ತು ಮೂಗಿನಿಂದ ಹೊರ ಬರುವ ಗಾಳಿಯಲ್ಲಿ ಮತ್ತು ಉಗುಳಿನಲ್ಲಿ ರೋಗಾಣುಗಳು ಇರುವುದರಿಂದ ಸೋಂಕು ರೋಗವು ಇತರರಿಗೆ ಶೀಘ್ರವಾಗಿ ಹರಡುತ್ತದೆ.
ಚಿಕನ್‍ಪಾಕ್ಸ್ ಪಾರ್ಟಿ: ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ನಮ್ಮ ಊರುಗಳಲ್ಲಿ ಹಿರಿಯರು ಗಣಜಲಿ ಮಕ್ಕಳ ಜೊತೆ ಆರೋಗ್ಯವಂತ ಮಕ್ಕಳಿಗೆ ಆಟವಾಡಲು ಮತ್ತು ಊಟ ಮಾಡಲು ಪ್ರೇರೇಪಿಸುತ್ತಾರೆ. ಇದರ ಉದ್ದೇಶ ಆರೋಗ್ಯವಂತ ಮಕ್ಕಳು ಕೂಡ ಚಿಕ್ಕವಯಸ್ಸಿನಲ್ಲೇ ಗಣಜಲಿಯಿಂದ ಬಳಲಿ ಎಂಬುದಾಗಿರುತ್ತದೆ. ಅವರು ದೊಡ್ಡವರಾದಾಗ ಗಣಜಲಿಯು ತೊಂದರೆ ಕೊಡುವುದಿಲ್ಲ. ಒಂದು ವೇಳೆ ಚಿಕನ್‍ಪಾಕ್ಸ್ ಕಾಣಿಸಿಕೊಂಡರೂ ಅದು ಮೃದು ಗಣಜಲಿಯಾಗಿರುತ್ತದೆ. ಆದ್ದರಿಂದ ದೊಡ್ಡವರು, ತಿಳಿದವರು ತಮ್ಮ ಆರೋಗ್ಯವಂತ ಮಕ್ಕಳನ್ನು ಗಣಜಲಿಯಿಂದ ಬಳಲುತ್ತಿರುವ ಮಕ್ಕಳ ಜೊತೆಗೆ ಬೆರೆಯುವುದಕ್ಕೆ ಉತ್ತೇಜನ ನೀಡುತ್ತಾರೆ. ಇದು ಹಿರಿಯರ ಮುಂದಾಲೋಚನೆಯನ್ನು ತೋರಿಸುತ್ತದೆ.
ರೋಗ ಲಕ್ಷಣಗಳು
ರೋಗಾಣುಗಳು ರಕ್ತನಾಳಗಳ ಪದರದಲ್ಲಿ ದ್ವಿಗುಣಗೊಳ್ಳುವುದರಿಂದ ರಕ್ತನಾಳಗಳ ಮೇಲಿನ ಚರ್ಮದಲ್ಲಿ ತುರಿಕೆ, ಕೆಂಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇದರೊಂದಿಗೆ ಸೆರಂ ನೀರು ಸೇರಿಕೊಳ್ಳುವುದರಿಂದ ಗುಳ್ಳೆಗಳ ಸ್ಥಳದಲ್ಲಿ ಉಬ್ಬು ಉಂಟಾಗಿ 4 ರಿಂದ 6 ತಾಸುಗಳಲ್ಲಿ ನೀರು ಗುಳ್ಳೆಗಳು ಆಗುತ್ತವೆ. ಈ ನೀರುಗುಳ್ಳೆಗಳು ಮೊದಲು ಮುಖದ ಮೇಲೆ ಕಾಣಿಸಿಕೊಂಡು ಕ್ರಮೇಣ ಎದೆ, ಹೊಟ್ಟೆ, ಮತ್ತು ಬೆನ್ನಿನ ಮೇಲೂ ಗೋಚರಿಸುತ್ತದೆ. ಇದೇ ವೇಳೆ ನೀರುಗುಳ್ಳೆಗಳು ಬಾಯಲ್ಲೂ ಕಂಡುಬರುತ್ತದೆ. ನಂತರ 2.-3 ತಾಸುಗಳಲ್ಲಿ ಗುಳ್ಳೆಗಳು ಒಡೆದು ಗಾಯಗಳಾಗುತ್ತವೆ. ಈ ಗಾಯ 2-3 ಮಿಲಿ ಮೀಟರ್‍ನಷ್ಟಿದ್ದು, ಬಿಳಿಯ ಹೊದಿಕೆಯನ್ನು ಹೊಂದಿರುತ್ತದೆ. ಕೆಲವು ಮಕ್ಕಳಲ್ಲಿ ಮಾತ್ರ ನೀರು ಗುಳ್ಳೆಗಳು ಕೈ, ಕಾಲುಗಳಲ್ಲೂ ಕಾಣಿಸಬಹುದು.
ಮುಂದಿನ 2-3 ದಿನಗಳಲ್ಲಿ ಹೊಸ ನೀರುಗುಳ್ಳೆಗಳು ಗುಂಪು ಗುಂಪಾಗಿ ಮತ್ತೆ ದೇಹದ ಮೇಲೆ ಕಾಣಿಸಿಕೊಳ್ಳುತ್ತವೆ. ಇಂಥ ರೋಗಿಯನ್ನು ಪರೀಕ್ಷಿಸಿದಾಗ ಮೊದಲು ಇದ್ದ ನೀರುಗುಳ್ಳೆಗಳು ಒಣಗಿ ಹಕ್ಕಳೆಗಳಾಗಿ ಗುಣವಾಗುವ ಹಂತವನ್ನು, ಹೊಸದಾಗಿ ಗೋಚರಿಸಿದ ನೀರುಗುಳ್ಳೆಗಳು ಇನ್ನೂ ತಾಜಾವಾಗಿತ್ತವೆ. 8-10 ದಿನಗಳಲ್ಲಿ ಎಲ್ಲ ನೀರುಗುಳ್ಳೆಗಳು ಒಣಗಿ, ಹಕ್ಕಳೆಗಳು ಉದುರಿ ಪೂರ್ಣ ಗುಣವಾಗುತ್ತದೆ.
ಮಗು ಹೆಚ್ಚು ಕೆರೆದುಕೊಂಡಿದ್ದರೆ ಅಥವಾ ಹೆಚ್ಚು ಕೀವು ತುಂಬಿಕೊಂಡಿದ್ದರೆ ಮಾತ್ರ ಸ್ವಲ್ಪ ಕಲೆಗಳಾಗಿರುತ್ತವೆ. ಆಶಕ್ತ ಮಕ್ಕಳಲ್ಲಿ ಮಾತ್ರ ನ್ಯುಮೋನಿಯಾ ಮೆನಿನ್‍ಜಿಟಿಸ್ ಆಗಬಹುದು.
ಲಸಿಕೆ
ಗಣಜಲಿಯನ್ನು ತಡೆಗಟ್ಟಲು ಲಸಿದೆ ಇದೆ. ಎಲ್ಲ ಮಕ್ಕಳಿಗೆ ಈ ಲಸಿಕೆಯನ್ನು ಹಾಕಿಸಬೇಕು. ಈ ಲಸಿಕೆ ಹಾಕಿದರೂ ಕೂಡ ಕೆಲವು ಮಕ್ಕಳಲ್ಲಿ ಮೃದು ಪ್ರಮಾಣದ ಗಣಜಲಿ ಬರಬಹುದು. ಇದನ್ನು ಬ್ರೇಕ್‍ಥ್ರೂ ಚಿಕನ್‍ಪಾಕ್ಸ್ ಎನ್ನುವರು.
ಚಿಕಿತ್ಸೆ 
ಸಣ್ಣ ಮಕ್ಕಳಲ್ಲಿ ಗಣಜಲಿ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ. ತುರಿಕೆ ಇದ್ದಾಗ ಆಂಟಿ ಹಿಸ್ಟಮೈನ್ ಮತ್ತು ಜ್ವರ ಬಂದರೆ ಆಂಟಿ ಬಯೋಟಿಕ್ ಮತ್ತು ಪ್ಯಾರಾಸಿಟಮಲ್ ಔಷಧಿಗಳನ್ನು ನೀಡಬೇಕು.
ಗಣಜಲಿಯ ವಿಶಿಷ್ಟ ಔಷಧ ಆಸಿಕ್ಲೋವೆರ್‍ನನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು. ನೀರು ಗುಳ್ಳೆಗಳಾದ ಮೇಲೆ ಕ್ಯಾಲಮೈನ್ ಲೋಷನ್ ಹಚ್ಚಿದರೆ, ನೀರು ಗುಳ್ಳೆಗಳು ಬೇಗ ಒಣಗಿ ಗುಣವಾಗುತ್ತದೆ.
Share this: