ಧಾವಂತಕ್ಕೆ ಬ್ರೇಕ್ ಹಾಕಿ ಹೃದಯಕ್ಕೆ ಸ್ಪೇಸ್ ಕೊಡಿ. ನಮಗೆ ಎಲ್ಲಾ ವಿಷಯಗಳಿಗೂ ಸಮಯವಿರುತ್ತದೆ. ನಮ್ಮ ದೇಹ ಮತ್ತು ಆಹಾರಕ್ರಮದ ಬಗ್ಗೆ ಕಾಳಜಿವಹಿಸಲು ನಮಗೆ ಸಮಯವಿರುವುದಿಲ್ಲ!
ನಾವು ವ್ಯಾಯಾಮ ಮಾಡುತ್ತೇವೆ, ದೇಹ ದಂಡಿಸುತ್ತೇವೆ ಯಾವುದೇ ಊಟ ಮಾಡಿದರು ಸಮಸ್ಯೆಯಿಲ್ಲ ಅಂದುಕೊಂಡಿರುತ್ತೇವೆ. ನಮ್ಮ ಪ್ರತಿದಿನದ ದಿನಚರಿಯಲ್ಲಿ ನಮ್ಮ ದೇಹ ಮತ್ತು ಮನಸ್ಸನ್ನು ಎಷ್ಟು ಶಾಂತವಾಗಿ ಇಟ್ಟುಕೊಂಡಿರುತ್ತೇವೆ ಎನ್ನುವುದು ಬಹಳ ಮುಖ್ಯ. ಇಂದು ನಮ್ಮ ನಡುವೆ ಜರುಗುತ್ತಿರುವ ಪ್ರತಿ ಘಟನೆಗಳು ಮನುಷ್ಯನನ್ನು ಸಂತೋಷಕ್ಕಿಂತ ಹತಾಶೆ, ಭಯ ಮತ್ತು ದುಃಖದ ಮಡುವಿಗೆ ತಳ್ಳುತ್ತಿವೆ. ನಮ್ಮ ಸುತ್ತಮುತ್ತ ಇರುವ ವಾತಾವರಣ ಹಾಗೂ ಆಹಾರ ಪದ್ಧತಿಗಳು ದೊಡ್ಡವರನ್ನು ಮಾತ್ರವಲ್ಲದೆ ಸಣ್ಣ ಮಕ್ಕಳನ್ನು ದೊಡ್ಡ ದೊಡ್ಡ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿವೆ. ನಮಗೆ ಎಲ್ಲಾ ವಿಷಯಗಳಿಗೂ ಸಮಯವಿರುತ್ತದೆ. ನಮ್ಮ ದೇಹ ಮತ್ತು ಆಹಾರಕ್ರಮದ ಬಗ್ಗೆ ಕಾಳಜಿವಹಿಸಲು ನಮಗೆ ಸಮಯವಿರುವುದಿಲ್ಲ!
ಮನುಷ್ಯ ರೋಗಗಳಿಗೆ ಹೆದರುವುದನ್ನು ಮರೆತುಬಿಟ್ಟಿದ್ದಾನೆ:
ಈ ಆಧುನಿಕ ವೈದ್ಯಕೀಯ ಪದ್ಧತಿಗಳು ಮತ್ತು ಆಸ್ಪತ್ರೆಗಳು ಇಂದು ಮನುಷ್ಯರನ್ನು ಶೋಷಿಸುವ ಕಸಾಯಿಖಾನೆಗಳಾಗಿವೆ. ಒಂದು ಸಣ್ಣ ಸಮಸ್ಯೆಗೂ ಕೂಡ ಅಡಿಯಿಂದ ಮುಡಿಯವರೆಗೆ ಪರಿಶೀಲಿಸಲು ಬರೆದುಕೊಡುತ್ತಾರೆ. ಅವರ ಅನುಭವ ಯಾವುದಕ್ಕೂ ಬೇಡ. ಮೊದಲಿನ ವೈದ್ಯರು ನಾಡಿ ಪರೀಕ್ಷೆಯಿಂದಲೇ ಎಲ್ಲವನ್ನು ಹೇಳಿಬಿಡುತ್ತಿದ್ದರು. ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಬಂದಮೇಲೆ ಮನುಷ್ಯ ರೋಗಗಳಿಗೆ ಹೆದರುವುದನ್ನು ಮರೆತುಬಿಟ್ಟಿದ್ದಾನೆ. ಕೊರಾನಾವನ್ನು ಹೊರತುಪಡಿಸಿ ಅಂದುಕೊಂಡರೂ ಕೂಡ ಈ ಕಾಯಿಲೆಗೂ ಯಾರೂ ಭಯ ಪಡುತ್ತಿಲ್ಲ. ಆಸ್ಪತ್ರೆಗಳು, ವೈದ್ಯರುಗಳು ಯಾವುದೇ ಕಾಯಿಲೆಗಳಿಗೆ ಕೊಡುವ ಔಷಧಿ ಉಪಚಾರಗಳು ತಾತ್ಕಾಲಿಕವಾಗಿರುತ್ತದೆ. ಅವು ನಮ್ಮನ್ನು ರೋಗ ಮುಕ್ತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಮನುಷ್ಯನಿಗೆ ಇರಬೇಕು.
ಇಂದು ಸಣ್ಣ ನೆಗಡಿಗೆ ಕೂಡ ಡಾಕ್ಟರನ್ನು ಹುಡುಕಿಕೊಂಡು ಹೋಗುತ್ತಿದ್ದೇವೆ. ಅದರ ದುಷ್ಪರಿಣಾಮ ಬಹುದೊಡ್ಡದು. ಹಿಂದಿನಿಂದ ನಡೆದುಬಂದ ಊಟದ ಕ್ರಮ, ಹಿತ್ತಲಿನ ಹಸಿರು ಸೊಪ್ಪುಗಳು, ಬೇಲಿ ಮೇಲಿನ ಹಾಗಲ, ಕುಂಬಳ, ಸೋರೆ, ಹೀರೆಕಾಯಿ ಗಳು , ಮನೆಯಲ್ಲಿ ಕರೆಯುತ್ತಿದ್ದ ದೇಸಿ ಆಕಳಿನ ಹಾಲು, ತುಪ್ಪ ಮೊಸರು, ಬೆಣ್ಣೆ ನಮ್ಮನ್ನು ಯಾವುದೇ ಹಣವಿಲ್ಲದೆ ಆರೋಗ್ಯವಾಗಿ ಇರಿಸುತ್ತಿದ್ದವು. ಇನ್ನು ನಾವು ತಿನ್ನುತ್ತಿರುವ ತರಕಾರಿಗಳನ್ನು ಪ್ರಾಣಿಗಳಿಗೂ ಕೂಡ ಹಾಕಲು ಯೋಗ್ಯವಾಗಿರುವುದಿಲ್ಲ ಎಂದರೇ ಒಂದು ಬಾರಿ ಯೋಚಿಸಬೇಕು. ಇನ್ನು ಊಟವನ್ನು ದೇವರೇ ಬಲ್ಲ. ಬಿಳಿ ಅಕ್ಕಿಯಲ್ಲಿ ಮಾಡಿದ ಚಿತ್ರಾನ್ನ ಪುಳಿಯೋಗರೆ ಬಾತುಗಳನ್ನು ನಮ್ಮ ಮಕ್ಕಳಿಗೆ ಬಹಳ ಪ್ರೀತಿಯಿಂದ ನಮ್ಮ ಕೈಯಾರೆ ತಿನ್ನಿಸಿ ವಿಷಾವುಣಿಸುತ್ತಿದ್ದೇವೆ ಎಂಬುದನ್ನು ಮರೆತಿದ್ದೇವೆ.
ಅಂಗಗಳ ಯೋಗಕ್ಷೇಮ ನೋಡಿಕೊಳ್ಳುವುದು ಆದ್ಯ ಕರ್ತವ್ಯ :
ಕೇವಲ ದುಡ್ಡಿನ ಹಿಂದೆ ಓಡುತ್ತಾ , ಈ ಹೃದಯಕ್ಕೆ ಬೇಕಾಗಿರುವ ಕರುಣೆ, ಪ್ರೀತಿ, ನಂಬಿಕೆ, ತೃಪ್ತಿ ಎಂಬುದನ್ನು ಮರೆತ್ತಿದ್ದೇವೆ. ಅದನ್ನೇ ವೈದ್ಯ ಭಾಷೆಯಲ್ಲಿ ಹೃದಯಾಘಾತ ಎನ್ನುವುದು. ನಮ್ಮ ಪ್ರತಿಯೊಂದು ಅಂಗಗಳು ಎಷ್ಟೊಂದು ಬೆಲೆಬಾಳುತ್ತದೆ ಎಂಬುದನ್ನು ಆಸ್ಪತ್ರೆಯಲ್ಲಿ ಮಲಗಿರುವ ಹೃದಯ, ಕಿಡ್ನಿ, ಲಿವರ್ ಸಮಸ್ಯೆಯಿರುವ ರೋಗಿಗಳನ್ನು ಕೇಳಿ ಆಗಲಾದರೂ ಅರ್ಥವಾದೀತು. ಈ ಅಂಗಗಳು ನಮಗೆ ಪುಕ್ಕಟೆಯಾಗಿ ಹಗಲಿರುಳು ವಿಶ್ರಾಂತಿಯಿಲ್ಲದೆ ಕೆಲಸ ಮಾಡುತ್ತಿವೆ ಎಂದರೆ ನಂಬಲೇಬೇಕು. ಅವುಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಬೇರೆ ಯಾವುದೇ ಕೆಲಸಕ್ಕಿಂತ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಮರೆಯಬಾರದು.
ಈಗ ಎಲ್ಲರೂ ಹೇಳುವುದು ‘ಚಿರಂಜೀವಿ ಸರ್ಜಾ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಯಬಾರದಿತ್ತೆಂದು‘, ಸಾವಿಗೆ ಕಾರಣಗಳು ನೂರಾರು. ಕೇವಲ ವಯಸ್ಸಲ್ಲ. ಇನ್ನೇನು ಸತ್ತೇ ಹೋಗುತ್ತಾರೆ ಎನ್ನುವವರು ಇಪ್ಪತ್ತು ಮುವ್ವತ್ತು ವರ್ಷಗಳ ವರೆಗೆ ಬದುಕಿದವರನ್ನು ನೋಡಿದ್ದೇವೆ. ಕೆಲವರು ಗೊತ್ತಾಗದ ಹಾಗೆ ಸತ್ತು ಹೋಗುತ್ತಾರೆ. ಯಾರು ಹೇಗೆ ಸತ್ತರೂ ಈ ಸಮಾಜ ಎಲ್ಲರನ್ನೂ ಅಷ್ಟೇ ಬೇಗ ಮರೆತು ಬಿಡುತ್ತದೆ ಎಂಬುದು ವಾಸ್ತವ ಸತ್ಯ. ಆದುದರಿಂದ ನಮ್ಮ ಧಾವಂತದ ಬದುಕನ್ನು ಸ್ವಲ್ಪವಾದರೂ ಕಡಿಮೆ ಸ್ಪೀಡಿನಲ್ಲಿ ಓಡಿಸೋಣ. ಯಾರು ಇರಲಿ ಇಲ್ಲದಿರಲಿ ತಿರುಗುವ ಭೂಮಿ ತಿರುಗುತ್ತಲೇ ಇರುತ್ತದೆ. ಬೀಸುವ ಗಾಳಿ ಬೀಸುತ್ತಿರುತ್ತದೆ. ಒತ್ತಡದ ಧಾವಂತವನ್ನು ಕಡಿಮೆ ಮಾಡಿಕೊಂಡು ಹೃದಯದ ಕಾಳಜಿ ಮಾಡಿಕೊಳ್ಳುತ್ತಲಿರಬೇಕು.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು -ತಥಾಗತ್ ಹೃದಯ ಆಸ್ಪತ್ರೆ
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32,
ಕ್ರೆಸೆಂಟ್ ರಸ್ತೆ, ಬೆಂಗಳೂರು-01
Ph: 080-41410099, 9900356000
E-mail: mahanteshrc67@gmail.com