ಬೆಳಕಿನ ಹಬ್ಬ ದೀಪಾವಳಿ ತಾರದಿರಲಿ ಅಂಧಕಾರ. ದೀಪಾವಳಿಯ ಸಂತಸ, ಸಂಭ್ರಮ ಮತ್ತು ಸುಡು ಮದ್ದುಗಳ ಬರಾಟೆಯ ನಡುವೆ ಹೆತ್ತವರು, ಹಿರಿಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಿದ್ದಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿಗೂ ಬೆಳಕಿನ ಸಿಂಚನ ನೀಡಬಹುದು. ಇಲ್ಲವಾದಲ್ಲಿ ಬೆಳಕಿನ ಹಬ್ಬ ಕೆಲವರ ಬಾಳಿಗೆ ಶಾಶ್ವತ ಅಂಧಕಾರವನ್ನು ತರಲೂಬಹುದು ಎಂಬ ಕಟು ಸತ್ಯದ ಅರಿವು ಎಲ್ಲರಿಗೂ ಇದ್ದಲ್ಲಿ ದೀಪಾವಳಿಯ ಆಚರಣೆ ಹೆಚ್ಚು ಮೌಲ್ಯಪೂರ್ಣವಾಗಬಹುದು.
ಮತ್ತೆ ದೀಪಾವಳಿ ಬಂದಿದೆ. ಮನೆಮನಗಳಲ್ಲಿ ಸಂತಸ, ಸಂಭ್ರಮ ಮನೆಮಾಡಿದೆ. ಎಲ್ಲರಿಗೂ ಸಂಭ್ರಮ, ಹಾಲುಗಲ್ಲದ ಮುದ್ದುಮಕ್ಕಳಿಂದ ಹಿಡಿದು ಹಲ್ಲು ಇಲ್ಲದ ಬೊಚ್ಚು ಬಾಯಿಯ ಮುದುಕರಿಗೂ ಸಂಭ್ರಮ, ಸಡಗರ. ಮಕ್ಕಳಿಗೆ ಮನೆತುಂಬಾ ನೆಂಟರಿಸ್ಟರು, ಪಟಾಕಿ ಹೊಸಬಟ್ಟೆ, ತಿಂಡಿ ತಿನಿಸುಗಳ ಸಂಭ್ರಮ ಇದ್ದರೆ, ಅಜ್ಜಂದಿರಿಗೆ ಮೊಮ್ಮಕ್ಕಳ ಜೊತೆ ಸೇರಿ ಮಗದೊಮ್ಮೆ ಮಕ್ಕಳಾಗುವ ಖುಷಿ. ಯುವಕ-ಯುವತಿಯರಿಗೆ ತಮ್ಮ ಬಾಲ್ಯದ ದಿನದ ಚೇಷ್ಟೆಗಳನ್ನು ದೀಪಾವಳಿಯ ಆಚರಣೆಯ ನೆನಪುಗಳನ್ನು ಮೆಲುಕು ಹಾಕಿ ಸಂಭ್ರಮಿಸುವ ಕ್ಷಣ.
ದೀಪಗಳ ಹಬ್ಬ ದೀಪಾವಳಿ:
ನರಕ ಚತುರ್ದಶಿ, ಲಕ್ಷ್ಮೀಪೂಜೆ, ಬಲಿಪಾಡ್ಯಮಿ ಹೀಗೆ ನಿರಂತರ 3 ದಿನಗಳ ಕಾಲ ದೀಪಗಳ ಹಬ್ಬ ದೀಪಾವಳಿಯನ್ನು ಜಾತಿ, ಮತ, ಧರ್ಮ, ವಯಸ್ಸು, ಲಿಂಗ, ಮೇಲು, ಕೀಳು, ಬಡವ-ಬಲ್ಲಿದ, ದಲಿತ, ಬ್ರಾಹ್ಮಣ, ವೈಶ್ಯೆ, ಸವತಿ, ಸಾವಿತ್ರಿ ಎಂಬುದರ ಗೊಡವೆ ಇಲ್ಲದೆ ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಊರಿಗೆ ಊರೇ ಆಚರಿಸುತ್ತಾರೆ. ಊರು ಕೇರಿಗಳಲ್ಲಿ ಒಂದು ರೀತಿಯಲ್ಲಿ ದೀಪಗಳದ್ದೇ ಹಾವಳಿ. ಸಾಲು ಸಾಲು ದೀಪಗಳು ಆಗಸದಲ್ಲಿ ಮೂಡುವ ಬೆಡಗಿನ ಬೆಳಕಿನ ಚಿತ್ತಾರಗಳು, ಸುಡುಮದ್ದುಗಳು, ಶಬ್ಧ ನೀಡುವ ಪಟಾಕಿಗಳು, ಬೆಳಕಿನ ರಂಗೋಲಿ ಬಿಡಿಸುವ ಸುರುಸುರು ಕಡ್ಡಿ ಮತ್ತು ಹೂಕುಂಡಗಳು ಎಲ್ಲವೂ ದೀಪಾವಳಿಯ ಸಂಭ್ರಮವನ್ನು ಮತ್ತಷ್ಟು ಮೆರುಗುಗೊಳಿಸುತ್ತದೆ. ದೀಪದಿಂದ ದೀಪವನ್ನು ಹಚ್ಚೋಣ, ಮನಸ್ಸಿನಿಂದ ಮನಸ್ಸನ್ನು ಬೆಳಗೋಣ ಎಂದು ಹೇಳುತ್ತಾ ಪರಸ್ಪರರನ್ನು ಅರಿತು ಶಾಂತಿ ಸೌಹಾರ್ಧತೆಯ ವಾತಾವರಣ ನಿರ್ಮಿಸೋಣ ಎಂಬ ಪ್ರಾಂಜಲ ಮನಸ್ಸಿನಿಂದ ದೀಪಾವಳಿಯನ್ನು ಶತಶತಮಾನಗಳಿಂದ ನಮ್ಮಲ್ಲಿ ಆಚರಿಸುತ್ತಿದ್ದೇವೆ.
ಉತ್ತಮ ದರ್ಜೆಯ ಗುಣಮಟ್ಟದ ಪಟಾಕಿಗಳು ಮತ್ತು ಸಿಡಿಮದ್ದಿನ ತಯಾರಿಕೆ, ಅವುಗಳ ಸಂಗ್ರಹ, ಅಪಾಯಕಾರಿ ಸಿಡಿಮದ್ದುಗಳನ್ನು ಬಳಸದಿರುವಿಕೆ ಮುಂತಾದ ಕಾನೂನನ್ನು ಯಾರು ಪಾಲಿಸುತ್ತಿಲ್ಲ. ಇದೇ ಕಾರಣದಿಂದಲೇ ವಾತಾವರಣ ಕಲುಷಿತಗೊಳ್ಳುತ್ತಿದೆ. ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವು ನಿಂತಿದ್ದೇವೆ. ಶ್ವಾಸಕೋಶ ಸಂಬಂಧಿ ರೋಗಗಳಾದ ಅಸ್ತಮಾ ಮುಂತಾದ ಚರ್ಮರೋಗಗಳು ಇತ್ಯಾದಿಗಳು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಉಲ್ಬಣಿಸುತ್ತಿದೆ. ಅದೇ ರೀತಿ ಬಾರೀ ಸದ್ದಿನ ಪಟಾಕಿ ಸಿಡಿಸುವುದರಿಂದ ಉಂಟಾಗುವ ಸದ್ದಿನಿಂದ ಶ್ರವಣಶಕ್ತಿ ಕುಂದುತ್ತದೆ. ಸಾಕುಪ್ರಾಣಿಗಳು, ಪಕ್ಷಿ ಸಂಕುಲಗಳು ಬೆದರಿ ಹಿಂಸೆಗೊಳಗಾಗುತ್ತದೆ. ಪುಟ್ಟ ಮಕ್ಕಳಿಗೂ ಹಿಂಸೆಯಾಗಬಹುದು ಮತ್ತು ಮಾನಸಿಕವಾಗಿ ಕುಗ್ಗಿ ಹೋಗಬಹುದು. ಮಕ್ಕಳಿಗೆ ತುಂಬಾ ಸದ್ದಿನ ಸಿಡಿಮದ್ದನ್ನು ಸಿಡಿಸಿದಾಗ ಭಯಭೀತರಾಗಬಹುದು. ಮಾನಸಿಕವಾಗಿ ವಿಶೇಷ ಪರಿಣಾಮ ಬೀರಿ ಮಾನಸಿಕ ಸ್ಥೈರ್ಯ ಉಡುಗಿ ಹೋಗಬಹುದು. ಅಜಾಗರೂಕತೆಯಿಂದ ಸಿಡಿಮದ್ದನ್ನು ಬಳಸಿದಲ್ಲಿ ಕೈಕಾಲುಗಳಿಗೆ ಸುಟ್ಟು ಗಾಯಗಳಾಗಬಹುದು, ಕಣ್ಣುಗಳಿಗೆ ಹಾನಿಯಾಗಬಹುದು. ದೇಹದ ಇತರ ಭಾಗಗಳಿಗೂ ಗಾಯವಾಗಬಹುದು. ಬೆಂಕಿಯ ಜೊತೆ ಸರಸ ಯಾವತ್ತೂ ಒಳ್ಳೆಯದಲ್ಲ. ಆ ಕಾರಣಕ್ಕಾಗಿಯೇ ಹಲವಾರು ಮುಂಜಾಗರೂಕತಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು.
ಮುಂಜಾಗರೂಕತೆ ಮತ್ತು ಮುನ್ನೆಚ್ಚರಿಕೆ:
1. ಯಾವತ್ತೂ ಮನೆಯ ಒಳಗೆ ಪಟಾಕಿ ಸಿಡಿಮದ್ದು ಸುಡಲೇಬಾರದು. ನಾಲ್ಕು ಗೋಡೆಗಳ ನಡುವೆ ಪಟಾಕಿಯ ಜೊತೆ ಸರಸ ಯಾವತ್ತೂ ಅಪಾಯಕಾರಿ. ಮನೆಯ ಹೊರಗಡೆ ಬಯಲು ಪ್ರದೇಶದಲ್ಲಿ ಪಟಾಕಿ ಸಿಡಿಸುವುದು ಉತ್ತಮ.
2. ಮಕ್ಕಳು ಪಟಾಕಿ ಸುಡುವಾಗ ಹಿರಿಯರು ಜೊತೆಗೆ ಇರಲೇಬೇಕು. ಯಾವತ್ತೂ ಮಕ್ಕಳ ಮೇಲೆ ಒಂದು ಕಣ್ಣು ಇರಬೇಕು ಮತ್ತು ವಿಶೇಷ ಮುತುವರ್ಜಿ ಮತ್ತು ಕಾಳಜಿ ಇರಿಸಬೇಕು, ಒಮ್ಮೆ ಸಿಡಿಯಲು ಯತ್ನಿಸಿದ ಸಿಡಿಯದೇ ಇದ್ದ ಪಟಾಕಿಯನ್ನು ಪುನಃ ಸಿಡಿಸುವ ಪ್ರಯತ್ನ ಮಾಡಲೇ ಬಾರದು. ಯಾವತ್ತೂ ಉತ್ತಮ ದರ್ಜೆಯ ಗುಣಪಟ್ಟದ ಪಟಾಕಿಯನ್ನೇ ಖರೀದಿಸಿ. ಖರ್ಚು ಹೆಚ್ಚಾದರೂ ಪರವಾಗಿಲ್ಲ. ಅಗ್ಗದ ಬೆಲೆಯ ಕಳಪೆ ಗುಣಮಟ್ಟದ ಸಿಡಿಮದ್ದು ಯಾವತ್ತೂ ಅಪಾಯಕಾರಿ. ಉಚಿತವಾಗಿ ಸಿಕ್ಕಿದ ಕಳಪೆ ದರ್ಜೆಯ ಪಟಾಕಿ ಉಪಯೋಗಿಸಬೇಡಿ.
3. ಮಕ್ಕಳು ಪಟಾಕಿ ಹಚ್ಚುವಾಗ ಪರಸ್ಪರ ಚೇಷ್ಟೆ, ತುಂಟಾಟ ಮತ್ತು ಮಕ್ಕಳಾಟಿಕೆಗೆ ಅವಕಾಶ ನೀಡಬೇಡಿ. ಒಂದು ಕ್ಷಣದ ಮರೆವು ಮತ್ತು ತುಂಟಾಟ ಇನ್ನೊಬ್ಬರ ಜೀವಕ್ಕೆ ಅಂಧಕಾರ ತರಲೂಬಹುದು. ಮಕ್ಕಳಿಗೆ ಮಕ್ಕಳಿಗಾಗಿ ಮಾಡಿದ ಸಿಡಿಮದ್ದನ್ನು ಮತ್ತು ಪಟಾಕಿಗಳನ್ನು ನೀಡಬೇಕು. ಸುರುಸುರು ಕಡ್ಡಿ, ಹೂಕುಂಡ, ಭೂಚಕ್ರ, ಗುಬ್ಬಿ ಪಟಾಕಿ ಇತ್ಯಾದಿ ಕಡಿಮೆ ಸದ್ದಿನ ಮತ್ತು ಕಡಿಮೆ ಅಪಾಯವಿರುವ ಪಟಾಕಿಗಳನ್ನು ನೀಡಬೇಕು. ಅಪಾಯಕಾರಿ ಸಿಡಿಮದ್ದನ್ನು ಮಕ್ಕಳಿಂದ ದೂರವಿಡಬೇಕು.
4. ಪಟಾಕಿ ಸಿಡಿಸುವುದು ಧೈರ್ಯದ ಸಂಕೇತವಲ್ಲ. ಸಿಡಿಯುವ ಪಟಾಕಿಗಳನ್ನು ಕೈಯಲ್ಲಿ ಹೊತ್ತಿಸಬಾರದು. ಮಕ್ಕಳು ಇದನ್ನು ಧೈರ್ಯದ ಸಂಕೇತವೆಂದು ಭಾವಿಸುತ್ತಾರೆ ಮತ್ತು ಇತರ ಮಕ್ಕಳ ಮುಂದೆ ಮೊಂಡು ಧೈರ್ಯ ತೋರಿಸಲು ಹೋಗಿ ಅಪಾಯವನ್ನು ಆಹ್ವಾನಿಸುತ್ತಾರೆ. ಇದರ ಅಪಾಯ ಮತ್ತು ತೊಂದರೆಗಳ ಬಗ್ಗೆ ಹೆತ್ತವರು ತಿಳಿಹೇಳಬೇಕು.
5. ಹೂಕುಂಡ, ಭೂಚಕ್ರ ಮುಂತಾದವುಗಳನ್ನು ಕೆಳಗಿ ಬಾಗಿ ಹಚ್ಚುವಾಗ ವಿಶೇಷ ಗಮನವಿರಲಿ. ಸಿಡಿಯದ ಪಟಾಕಿಗಳನ್ನು ಕೈಯಿಂದ ಮುಟ್ಟಲು ಹೋದಾಗ ಹಠಾತ್ ಸಿಡಿಯಲೂ ಬಹುದು. ಸಿಡಿಯದ ಪಟಾಕಿಗಳನ್ನು ಪುನಃ ಬಳಸಲೇ ಬೇಡಿ. ಸುರು ಸುರು ಕಡ್ಡಿ ಹೊತ್ತಿಸುವಾಗ ಹೊರಹೊಮ್ಮುವ ಕಿಡಿಗಳ ಬಗ್ಗೆ ಗಮನವಿರಲಿ. ಬೇರೆ ಮಕ್ಕಳ ದೇಹದ ಮೇಲೆ ಮತ್ತು ಮೈ ಮೇಲೆ ಬೆಂಕಿಯ ಕಿಡಿ ಸಿಡಿದು ಬೀಳದಂತೆ ಎಚ್ಚರವಹಿಸಿ. ಮೈ ಮೇಲೆ ಬಟ್ಟೆ ಧರಿಸಿ, ಮೈ ಮುಚ್ಚಿಕೊಂಡು ಸಿಡಿಮದ್ದನ್ನು ಮತ್ತು ಪಟಾಕಿಗಳನ್ನು ಹಚ್ಚಬೇಕು. ಹತ್ತಿಯ ಅಥವಾ ಕಾಟನ್ ಬಟ್ಟೆ ಉತ್ತಮ. ನೈಲಾನ್ ಬಟ್ಟೆ ಬಳಸಬಾರದು.
6. ರಾಕೇಟ್ ಪಟಾಕಿ ಹಚ್ಚುವಾಗ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಅವು ನೇರವಾಗಿ ಮೇಲ್ಮುಖವಾಗಿ ಹಾರುವಂತಿರಬೇಕು. ಕೈಯಲ್ಲಿ ಹಿಡಿದು ರಾಕೇಟ್‍ಗೆ ಬೆಂಕಿ ಹಚ್ಚುವುದು ಅತೀ ಅಪಾಯಕಾರಿ ಮತ್ತು ಮುರ್ಖತನದ ಪರಮಾವಧಿ.
7. ಪಟಾಕಿ ಹಚ್ಚುವ ಸಮಯದಲ್ಲಿ ಮಕ್ಕಳು ಜೇಬುಗಳಲ್ಲಿ ಮತ್ತು ಇನ್ನೊಂದು ಕೈಯಲ್ಲಿ ನಾಲ್ಕೈದು ಪಟಾಕಿ ಇಟ್ಟುಕೊಳ್ಳಬಾರದು. ಯಾವುದೇ ಪಟಾಕಿಯ ಕಿಡಿ ತಗಲಿದಲ್ಲಿ ಜೀವಕ್ಕೂ ಸಂಚಕಾರ ಬರಬಹುದು ಒಮ್ಮೆಗೆ ಒಂದೇ ಪಟಾಕಿ ಎಂಬ ನಿಯಮ ಕಡ್ಡಾಯವಾಗಿ ಪಾಲಿಸಸಬೇಕು.
8. ಮಕ್ಕಳು ಮತ್ತು ಹೆತ್ತವರು ಪಟಾಕಿ ಸುಡುವಾಗ ಚಪ್ಪಲಿ ಧರಿಸಲೇಬೇಕು. ಮಕ್ಕಳೂ ಅವಸರದಲ್ಲಿ ಬರಿಗಾಲಲ್ಲಿ ಓಡಾಡುವಾಗ ಭೂಚಕ್ರ, ಸುರುಸುರುಬತ್ತಿ ಮತ್ತು ಹೂಕುಂಡ ಮುಂತಾದವುಗಳು ಸುಟ್ಟು ಹೋದ ಬಳಿಕವೂ ಬಿಸಿಯಾಗಿರುತ್ತದೆ. ಬರಿಗಾಲಿಗೆ ಬೆಂಕಿ ತಗಲಿ ಸುಟ್ಟು ಗಾಯವಾಗಬಹುದು ಮಕ್ಕಳು ಬಳಸಿದ ಪಟಾಕಿಗಳನ್ನು ಒಂದು ಸುರಕ್ಷಿತ ಮೂಲೆಯಲ್ಲಿ ರಾಶಿ ಹಾಕುವುದು ಉತ್ತಮ.
9. ಯಾವುದೇ ರೀತಿಯ ನಿರ್ಲಕ್ಷ ಪ್ರಾಣಕ್ಕೆ ಸಂಚಕಾರ ತರಬಹುದು. ಅದೇ ರೀತಿ ಪಟಾಕಿ ಹಚ್ಚುವ ಸಮಯದಲ್ಲಿ ಒಂದೆರಡು ಬಕೇಟ್ ನೀರನ್ನು ಇಟ್ಟುಕೊಳ್ಳುವುದು ಅತೀ ಅಗತ್ಯ. ಹಾಗೆಯೇ ಪಟಾಕಿ ಸುಡುವ ಸಮಯದಲ್ಲಿ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು. ಆ ಕಾರಣದಿಂದ ಪ್ರಥಮ ಚಿಕಿತ್ಸೆ ಸಾಧನೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಜ್ಞಾನದ ಬೆಳಕು ನೀಡಬೇಕು ಎಂಬುದೇ ದೀಪಾವಳಿಯ ಆಶಯ:
ಖ್ಯಾತ ಕವಿ ಜಿ.ಎಸ್. ಶಿವರುದ್ರಪ್ಪನವರ ಒಂದು ಕವಿತೆ ದೀಪಾವಳಿಯಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ. “ಹಣತೆ ಹಚ್ಚುತ್ತೇನೆ ನಾನೂ, ಈ ಕತ್ತಲನ್ನು ಗೆದ್ದೇ ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, ಲೆಕ್ಕವೇ ಇಲ್ಲದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ, ನಾನು ಹಚ್ಚುವ ಹಣತೆ ಶಾಶ್ವತ ಎಂಬ ಭ್ರಾಂತಿ ನನಗಿಲ್ಲ” ಈ ಕವಿತೆಯ ಸಾಲುಗಳ ಸಾರಂಶ ಏನೆಂದರೆ “ಮನುಷ್ಯನ ಬದುಕೇ ಇತರರಿಗೆ ದೀಪವಾಗಬೇಕು. ಮನುಷ್ಯ ದೀಪದಾರಿಯಾಗಬೇಕು. ಕತ್ತಲನ್ನು ಸೀಳಿಕೊಂಡು ಬೆಳಕು ನೀಡುವ ದಾರಿ ದೀಪವಾಗಬೇಕು. ಇಲ್ಲಿ ಕತ್ತಲು ಎಂದರೆ ಭೌತಿಕ ಕತ್ತಲೆಯಲ್ಲ. ಮನಸ್ಸಿನ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡಬೇಕು ಎಂಬುದೇ ದೀಪಾವಳಿಯ ಆಚರಣೆಯ ಆಶಯವಾಗಿರುತ್ತದೆ.
ದೀಪಾವಳಿಯ ಆಚರಣೆ ಎಂದರೆ ಬರಿ ಸುಡುಮದ್ದಿನ ಭರಾಟೆಯಾಗಬಾರದು. ಹೊಸಬಟ್ಟೆ, ಹಬ್ಬದೂಟ ಮತ್ತು ತುಂಡು-ಗುಂಡುಗಳ, ಮೋಜು-ಮಸ್ತಿಗಳ ವೇದಿಕೆಯಾಗಬಾರದು. ಒಬ್ಬನ ಸಿರಿತನ, ಶ್ರೀಮಂತಿಕೆ ಮತ್ತು ದೊಡ್ಡತನದ ಪ್ರದರ್ಶನದ ವೇದಿಕೆಯಾಗಲೇಬಾರದು. ಮನಸ್ಸಿನ ದೊಡ್ಡತನ, ಧಾರಳತನವನ್ನು ನಾವು ಪ್ರದರ್ಶಿಸಬೇಕು. ಹಸಿದವರ ನೊಂದವರ ಮತ್ತು ಬಡವರ ಪಾಲಿಗೆ ಸಹಾಯಹಸ್ತ ನೀಡುವ ಉದಾರತನವನ್ನು ಪ್ರದರ್ಶಿಸಬೇಕು. ಒಣಪ್ರತಿಷ್ಠೆ ಮತ್ತು ಆಡಂಬರದ ದ್ಯೋತಕವಾಗದೆ, ಎಲ್ಲರೊಳಗೆ ಒಂದಾಗಿ ಜಾತಿ-ಮತ-ಧರ್ಮಗಳ ಬೇಧವಿಲ್ಲದೆ ಎಲ್ಲರೊಡಗೂಡಿ ಸಂಭ್ರಮಿಸಿ ವಿಶ್ವಭಾತೃತ್ವವನ್ನು ಸಾರುವ ಮಾನವೀಯ ಸಂಬಂಧಗಳನ್ನು ಹೆಚ್ಚಿಸುವ ಹಬ್ಬವಾಗಬೇಕು. ಹಾಗಾದಲ್ಲಿ ಮಾತ್ರ ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಮತ್ತಷ್ಟು ಅರ್ಥಪೂರ್ಣವಾದೀತು. ಬನ್ನಿ ಗೆಳೆಯರೇ ಈ ದೀಪಾವಳಿಯಲ್ಲಿ ಇನ್ನೊಬ್ಬರ ಬಾಳಿಗೆ ಬೆಳಕು ನೀಡೋಣ ಹಾಗೂ ಅವರ ಬಾಳಿನ ಅಂಧಕಾರವನ್ನು ನಿವಾರಿಸುವ ದೊಡ್ಡ ಮನಸ್ಸು ಮಾಡೋಣ.
ಡಾ|| ಮುರಲೀ ಮೋಹನ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ, ಮಂಜೇಶ್ವರ- 671 323
ದೂ: 04998-273 544, 235 111 ಮೊ: 98451 35787
www.surakshadental.com
Email: drmuraleemohan@gmail.com