ದಾರೆ ಹುಳಿ(ನಕ್ಷತ್ರ ಹುಳಿ) ಎಣ್ಣೆ : ನೋವಿನ ಎಣ್ಣೆಯನ್ನು ತಯಾರಿಸಬಹುದು. ಈ ಹಣ್ಣುಗಳಿಂದ ಉಪ್ಪಿನಕಾಯಿ, ಗೊಜ್ಜು, ಜಾಮ್ ಇತ್ಯಾದಿಗಳನ್ನು ಮಾಡಬಹುದು.
ಪಾರಿಜಾತಳ ಅಡಿಕೆ ತೋಟದಲ್ಲಿ ದಾರೆ ಹುಳಿ ಮರ ಇತ್ತು. ಅದರ ತುಂಬಾ ಸುಂದರವಾದ ಹಳದಿ ಮಿಶ್ರತ ಕೇಸರಿ ಬಣ್ಣದ ಹಣ್ಣುಗಳು ಬಿಟ್ಟಿದ್ದವು. ಅಕ್ಕ ಪಕ್ಕದ ಮನೆಯವರು, ನೆಂಟರು ಬಂದವರೆಲ್ಲ ಹಣ್ಣುಗಳನ್ನು ತೆಗೆದು ಕೊಂಡು ಹೋಗಿದ್ದರು. ಆದರೂ ಇನ್ನೂ ಹಣ್ಣುಗಳಿದ್ದವು. ಈ ಹಣ್ಣುಗಳಿಂದ ಉಪ್ಪಿನಕಾಯಿ, ಗೊಜ್ಜು, ಜಾಮ್ ಇತ್ಯಾದಿಗಳನ್ನು ಮಾಡಬಹುದು. ಸಾಂಬಾರಿಗೂ ಹುಣಸೆಹಣ್ಣಿನ ಬದಲಾಗಿ ಉಪಯೋಗಿಸುವುದು ರೂಡಿಯಲ್ಲಿದೆ. ತಿನ್ನಲು ಮತ್ತು ಶರಬತ್ತು ಮಾಡಿಕೊಡಿಯಲು ಯೋಗ್ಯವಾಗಿರುವುದರ ಜೊತೆಗೆ ಔಷಧೀಯ ಗುಣಗಳು ಇರುವುದರಿಂದ ಹಳ್ಳಿ ಕಡೆ ಇದಕ್ಕೆ ಬೇಡಿಕೆ ಜಾಸ್ತಿ.
ಗೋಪಾಲರಾಯರು ಸೊಸೆಯ ಮುಖ ನೋಡುತ್ತಾ,” ಸ್ವಲ್ಪ ನೋವಿನ ಎಣ್ಣೆ ಮಾಡಿ ಇಡು. ಎಲ್ಲಾ ತರಹದ ನೋವಿಗೂ ಇದು ಕೆಲಸ ಮಾಡುತ್ತದೆ. ನಿನಗೆ ನಾನು ಸಹಾಯ ಮಾಡುವೆ ಎಂದು ಹೇಳಿದರು.
ಸೊಸೆಗೆ ಕೊಟ್ಟ ಮಾತಿನಂತೆ ಗೋಪಾಲರಾಯರು , ದಾರೆಹುಳಿಯನ್ನ ಕೈಯಲ್ಲಿ ಕಿವುಚಿ ಒಂದು ತೆಳುವಾದ ಹತ್ತಿ ಬಟ್ಟೆಯ ಟವಲ್ ನಲ್ಲಿ ಹಾಕಿ ಹಿಂಡಿ ರಸ ತೆಗೆದರು. ಕಾಲು ಲೀಟರ್ ಸಾಸಿವೆ ಎಣ್ಣೆ ಜೊತೆಗೆ ಹಿಂಡಿದ ರಸವನ್ನು ಮಿಶ್ರ ಮಾಡಿ ಬಾಣಲೆಗೆ ಹಾಕಿ ಒಲೆಯ ಮೇಲೆ ಇಟ್ಟರು. ಸಣ್ಣ ಉರಿಯಲ್ಲಿ ಬಿಸಿ ಮಾಡುತ ಸೌಟಿನಿಂದ ಆಗಾಗ ತಿರುವುತ್ತಿದ್ದರು.
ಮಾವ ಕೆಲಸ ಮಾಡುವುದನ್ನು ನೋಡಿ ಪಾರಿಜಾತ ಳಿಗೆ ಮನಸ್ಸಿಗೆ ಕಸಿವಿಸಿ ಆಯಿತು. ಮಾವ, ಇಷ್ಟೆಲ್ಲ ಕೆಲಸ ಮಾಡಿದ್ದೀರಲ್ಲ! ಮಿಕ್ಕಿದ್ದು ನಾನು ಮಾಡುತ್ತೇನೆ ನೀವು ಹೋಗಿ ಎಂದು ಹೇಳಿದಳು. ಗೋಪಾಲರಾಯರು ಆಯಿತು ಎನ್ನುವಂತೆ ತಲೆ ಆಡಿಸಿ ಹೊರ ನಡೆದರು.
ಪಾರಿಜಾತ ಒಲೆಯ ಮೇಲಿದ್ದ ಎಣ್ಣೆಯಿಂದ ನೀರಿನ ಅಂಶ ಸಂಪೂರ್ಣವಾಗಿ ಆರುವ ತನಕ ಕಾಯಿಸಿ ನಂತರ ತಣ್ಣಗಾಗಲು ಬಿಟ್ಟಳು. ತಣ್ಣಗಾದ ನಂತರ ಒಂದು ಮುಚ್ಚಳವಿರುವ ಡಬ್ಬದಲ್ಲಿ ಹಾಕಿ ಎತ್ತಿಟ್ಟಳು. ಬಾಣಲೆಯಲ್ಲಿ ಇದ್ದ ನೋವಿನ ಎಣ್ಣೆಯ ಪಸೆಯನ್ನು ಕಾಲಿನ ಪಾದಗಳಿಗೆ, ಮಣಿಗಂಟಿಗೆ ,ಮೊಣಕಾಲಿಗೆ ಉಜ್ಜಿಕೊಂಡಳು
ತನ್ನ ಮಗನ ಮದುವೆಯ ಜವಾಬ್ದಾರಿ, ಆಮಂತ್ರಣ ಪತ್ರಿಕೆ ಹಂಚುವುದು, ಜವಳಿ ತೆಗೆಯುವುದು, ಅಡಿಗೆಯವರನ್ನು ಕರೆಯುವುದು, ಪುರೋಹಿತ ಭಟ್ಟರ ಲಿಸ್ಟ್ ಸಿದ್ದ ಪಡಿಸಿಕೊಳ್ಳುವುದು, ಮನೆ ಶುಚಿಗೊಳಿಸುವುದು ಮತ್ತು ಅಲಂಕಾರ ಮಾಡುವುದು ಹೀಗೆ ಎಲ್ಲದಕ್ಕೂ ಗಂಡನ ಜೊತೆ ತಾನಿದ್ದು ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಳು. ಅಲ್ಲದೆ ಮನೆಯ ಅಡುಗೆ, ತಿಂಡಿ,ತೋಟದ ಕೆಲಸ, ಕೆಲಸಗಾರರಿಗೆ ಊಟ ತಿಂಡಿಯ ವ್ಯವಸ್ಥೆ….. ಹೀಗೆ ಒಂದು ನಿಮಿಷ ಬಿಡುವಿಲ್ಲದ ಕೆಲಸ. ರಾತ್ರಿ ಹಾಸಿಗೆ ಮೇಲೆ ಮಲಗಿದರೆ ಸಾಕು .ಕಾಲು ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತಿತ್ತು. ಆ ಕಾರಣಕ್ಕಾಗಿ ಪಾರಿಜಾತ ದಾರಿ ಹುಳಿಯಿಂದ ಮಾಡಿದ ಎಣ್ಣೆಯನ್ನು ಸ್ನಾನಕ್ಕೆ ಅರ್ಧ ಗಂಟೆ ಮೊದಲು ನೋವು ಇರಲಿ – ಇಲ್ಲದಿರಲಿ; ಕಾಲುಗಳಿಗೆ ಮೊಣಕಾಲಿಗೆ, ಸೊಂಟಕ್ಕೆ ಚೆನ್ನಾಗಿ ತಿಕ್ಕಿ ಮಸಾಜ್ ಮಾಡಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಪದ್ಧತಿ. ನೋವು ಕೂಡ ಶಮನವಾಗುತ್ತಿತ್ತು.
ದಿನಗಳು ಉರುಳಿ ಹೋದದ್ದು ಗೊತ್ತಾಗಲೇ ಇಲ್ಲ. ಮಗನ ಮದುವೆ ದಿನ ಹತ್ತಿರ ಬಂದೇ ಬಂತು. ಹತ್ತಿರದ ಬಂಧು ಬಳಗದವರು ಮತ್ತು ಆಪ್ತ ಸ್ನೇಹಿತರೆ ಸಮೂಹವು ಮುಂಚಿನ ದಿನವೇ ಬಂದಿಳಿದರು. ಯಾರಿಗೂ ಏನು ತೊಂದರೆ ಆಗದಿರಲಿ ಎಂದು ತಂಪು ಪಾನೀಯ ಮಾಡಲು. ಚಾ ಕಾಫಿ ಮಾಡಲು .ಅಡುಗೆ ಮಾಡಲು ಬೇರೆ ಬೇರೆಯಾಗಿ ಭಟ್ಟರನ್ನು ಬರ ಹೇಳಿದ್ದರು. ಬಂದವರನ್ನು ವಿಚಾರಿಸಿಕೊಳ್ಳಲು ತನ್ನ ತಂಗಿ ರೇವತಿ ಮತ್ತು ನಾದಿನಿ ರಮಾ ಳನ್ನು ಕರೆದು ಅವರಿಗೆ ಜವಾಬ್ದಾರಿ ವಹಿಸಿದ್ದಳು. ಆದ್ದರಿಂದ ಊಟ ತಿಂಡಿ ಉಪಚಾರಗಳಿಗೆ ಯಾವ ತೊಂದರೆಯೂ ಇರಲಿಲ್ಲ. ಬಂದವರೊಂದಿಗೆ ಮಾತನಾಡಿ ಖುಷಿ ಪಡಿಸುವ ಜವಾಬ್ದಾರಿ ಮಾತ್ರ ಪಾರಿಜಾತಳ ಮೇಲೆ ಇತ್ತು.
ಬೆಳಿಗ್ಗೆ ಛತ್ರಕ್ಕೆ ಹೋಗುವ ಗಡಿಬಿಡಿ ಇರುವುದರಿಂದ ಬೇಗನೆ ಏಳಬೇಕೆಂದುಕೊಂಡು, ಮದುವೆಯ ಮುಂಚಿನ ದಿನ ರಾತ್ರಿ ಎಲ್ಲರೂ ಬೇಗ ಊಟ ಮುಗಿಸಿ ಮಲಗಿದ್ದರು. ಆದರೂ ಹೆಂಗಸರು ಮಲಗಿಕೊಂಡೆ ಪಿಸು ಮಾತಿನಲ್ಲಿ ಮಾತನಾಡುತ್ತಲೇ ಇದ್ದರು. ಪಾರಿಜಾತಳ ಸ್ನೇಹಿತರಲ್ಲಿ ಒಬ್ಬಳಾದ ಸುಗಂಧಿ ನೀರು ಕುಡಿಯಲೆಂದು ಎದ್ದಳು. ಲೈಟ್ ಹಾಕಿದಳು ಆಗ ಅವಳ ಕಾಲ ಬುಡಕ್ಕೆ ಇಲಿ ಒಂದು ಓಡಿ ಬಂತು. ಹೆದರಿ ಹೌ ಹಾರಿದ ಸುಗಂಧಿ ಕಿಟಾರನೆ ಕಿರುಚಿ ಪಕ್ಕಕ್ಕೆ ಹಾರಿದಳು. ಹಾರಿದಾಗ ಪಕ್ಕದಲ್ಲಿದ್ದ ಮಂಚದ ಕಾಲು ತಾಗಿ ಬಲಗಾಲಿನ ಬೆರಳುಗಳಿಗೆ ಏಟಾಯಿತು. ನೋವಿನಿಂದ ಅಮ್ಮ…. ಅಯ್ಯೋ ಎನ್ನುತ್ತಾ ಅಲ್ಲೇ ಕುಳಿತಳು ಸುಗಂಧಿ.
ಪಾರಿಜಾತ ಓಡಿ ಬಂದು “ಏನಾಯ್ತು ಸುಗಂಧಿ “ಎಂದು ವಿಚಾರಿಸಿದಳು. ಅಷ್ಟರಲ್ಲಿ ಮಲಗಿದ್ದವರೆಲ್ಲ ಎದ್ದು ಏನಾಯಿತು……? ಏನಾಯಿತು ..…..? ಎಂದು ತಲೆಗೊಬ್ಬರಂತೆ ಪ್ರಶ್ನೆ ಮಾಡ ತೊಡಗಿದರು. ಕೆಲವರು ತಮಗೆ ಕಂಡ ದೃಶ್ಯವನ್ನು ಸವಿಸ್ತಾರವಾಗಿ ವಿವರಿಸುತ್ತಿದ್ದರೆ, ಇನ್ನು ಕೆಲವರು ಸಲಹೆಗಳನ್ನು ಹೇಳುತ್ತಿದ್ದರು. ಒಬ್ಬರು ಬಿಸಿನೀರು ಹಾಕಿ ಎಂದರೆ ,ಇನ್ನು ಕೆಲವರು ಐಸ್ ಗಡ್ಡೆ ಇಡಿ. ಕೆಲವರು ಅಯೋಡೆಕ್ಸ್ಉಜ್ಜಿ ಎಂದರೆ ಮಗದೊಬ್ಬರು ಒಲಿನಿ ಸ್ಪ್ರೇ ಹಾಕಿ ಎಂದು ಹೇಳತೊಡಗಿದರು.
ಸುಗಂಧಿ ನೋವು ತಾಳಲಾಗದೆ ಎಡಗೈಯನ್ನು ಹಣೆಯ ಮೇಲೆ ಇಟ್ಟು, ಬಲಗೈಯಿಂದ ಕಾಲಿನ ಪಾದವನ್ನು ಗಟ್ಟಿ ಹಿಡಿದುಕೊಂಡು , ತುಟಿ ಕಚ್ಚಿ ಮುಖವನ್ನು ಕಿವುಚಿ ಕಣ್ಣು ಮುಚ್ಚಿದ್ದಳು .
ಪಾರಿಜಾತ ಸುಗಂಧಿಯ ಕೈ ಹಿಡಿದು ನಿಲ್ಲಿಸಲು ಪ್ರಯತ್ನಿಸಿದಳು. ಅಲ್ಲೇ ಇದ್ದ ಕುರ್ಚಿ ಒಂದರಲ್ಲಿ ಕೂರಿಸಿದಳು. ತಾನು ಕಾಯಿಸಿದ್ದ ದಾರೆಹುಳಿ ನೋವಿನ ಎಣ್ಣೆ ತಂದು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದಳು. ಸುಗಂಧಿಯ ಕಾಲ ಬೆರಳುಗಳಿಗೆ, ಬೆರಳುಗಳ ಸಂಧಿಗಳಿಗೆ ತನ್ನ ಕೈಯಿಂದ ಎಣ್ಣೆ ಹಾಕಿ ತಿಕ್ಕಿದಳು. ಬೆರಳುಗಳಿಂದ ನಟಿಕೆ ತೆಗೆದಳು. ಹತ್ತಿ ಬಟ್ಟೆ ಒಂದನ್ನು ಗಟ್ಟಿಯಾಗಿ ಬಿಗಿಯಾಗಿ ಸುತ್ತಿದಳು. ನೋವು ಗುಣವಾಗುತ್ತದೆ ಹೆದರಬೇಡ ಎಂದು ಸುಗಂಧಿಗೆ ಧೈರ್ಯ ಹೇಳಿದಳು .
ಮಾರನೆಯ ದಿನ ಬೆಳಗ್ಗೆ ಎದ್ದಾಗ ಸುಗಂಧಿಗೆ ಕಾಲು ನೋವು ಅರ್ಧಕ್ಕರ್ಧ ಕಡಿಮೆಯಾಗಿತ್ತು. ಆದರೂ ಪಾರಿಜಾತ ಮತ್ತೊಮ್ಮೆ ನೋವಿನ ಎಣ್ಣೆಯನ್ನು ಸುಗಂಧಿಯ ಕಾಲಿಗೆ ಹಚ್ಚಿ, ಸ್ನಾನಕ್ಕೆ ಕರೆದುಕೊಂಡು ಹೋದಳು. ಕಾಲಿಗೆ ಬಿಸಿ ನೀರನ್ನು ಒಮ್ಮೆ ಮತ್ತು ತಣ್ಣೀರನ್ನು ಒಮ್ಮೆ ರಭಸವಾಗಿ ಏಳೆಂಟು ಸಲ ಹಾಕಿದಳು. ಸುಗಂಧಿಗೆ ಸ್ವಲ್ಪ ನೋವಿದ್ದರೂ ನಿಧಾನವಾಗಿ ನಡೆಯುತ್ತಿದ್ದಳು. ಹಾಗಾಗಿ ಸುಗಂಧಿಯು ಕೂಡ ಎಲ್ಲರೊಂದಿಗೆ ಮದುವೆಯ ಛತ್ರಕ್ಕೆ ಹೋದಳು . ಮದುವೆ ಸಡಗರ ಸಂಭ್ರಮದಿಂದ ಜೋರಾಗಿ ನಡೆಯಿತು.
ಮದುವೆ ಕಳೆದು ನಂತರವೂ ಪಾರಿಜಾತಳು ಸುಗಂಧಿಯನ್ನು ತನ್ನ ಮನೆಯಲ್ಲಿ ಎರಡು ದಿನ ಕೂರಿಸಿಕೊಂಡು ಶುಶ್ರೂಷೆ ಮಾಡಿದಳು. ಕಾಲು ನೋವು ಸಂಪೂರ್ಣವಾಗಿ ಗುಣವಾಯಿತು.
ಸುಗಂಧಿ ಪಾರಿಜಾತ ತನಗೆ ಮಾಡಿದ ಸೇವೆಗೆ ಮೂಕಳಾಗಿ ಹೋದಳು. ಮದುವೆ ಮನೆಯಲ್ಲಿ ಅಷ್ಟೊಂದು ಕೆಲಸ , ಗಡಿಬಿಡಿ, ನೆಂಟರು ಇದ್ದರೂ ಸಹ ನನ್ನನ್ನು ಚೆನ್ನಾಗಿ ನೋಡಿಕೊಂಡ ಸ್ನೇಹಿತೆಯ ಬಗ್ಗೆ ಅಭಿಮಾನ ಮತ್ತು ಪ್ರೀತಿ ಉಕ್ಕಿ ಬಂತು. ಸುಗಂಧಿ ಪಾರಿಜಾತಳನ್ನು ಬಿಗಿದಪ್ಪಿ” ಎಂತಹ ಒಳ್ಳೆಯ ಗೆಳತಿ” ಎಂದು ಉದ್ಘರಿಸಿದಳು.
ನನ್ನ ಕಾಲು ನೋವು ಕಮ್ಮಿಯಾಗಿದೆ. ನಾನು ಮನೆಗೆ ಹೊರಡುವೆ ಎಂದು ಸುಗಂಧಿ ಹೇಳಿದಳು. ನನ್ನ ಕಾಲಿಗೆ ಹಚ್ಚಿದ ಎಣ್ಣೆ ಇದ್ದರೆ ಕೊಂಡು ಹೋಗಲು ನನಗೆ ಸ್ವಲ್ಪ ಕೊಡು ಎಂದಳು. ಹಾಗೆಯೇ ಆ ಎಣ್ಣೆ ಹೇಗೆ ಮಾಡಿದೆ? ಯಾವುದರಿಂದ ಮಾಡಿದೆ ?ಎಂಬುದಾಗಿ ವಿವರಿಸಿ ಎಂದು ಕೇಳಿಕೊಂಡಳು.
ದಾರೆಹುಳಿ. ಕಮರಾಕ್ಷಿ ,ಕರಂಬಳ ಹಣ್ಣು, ಕರಂಬೋಲ, ಕರಬಲ, ಕರಿ ಮಾದಲ ,ನಕ್ಷತ್ರ ಹೊಳಿ ,ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಆಕ್ಷಿಡೆಸಿಯ ಕುಟುಂಬಕ್ಕೆ ಸೇರಿದ ಈ ಹಣ್ಣಿನ ವೈಜ್ಞಾನಿಕ ಹೆಸರು ಆವೇರೋ ಕ್ಯಾರಂಬೋಲ. ಇದರ ಔಷಧಿಯ ಗುಣಗಳು ಹಲವು. ಇದರ ಶರಬತ್ತು ಕುಡಿಯುವುದರಿಂದ ಆಯಾಸ ದಣಿವು ನಿವಾರಣೆ ಆಗುತ್ತದೆ. ಅತಿಸಾರ ಪಿತ್ತ ನಿವಾರಣೆಯಾಗುತ್ತದೆ. ಎಳೆಯ ಚಿಗುರುಗಳನ್ನು ಅರೆದು ಕುಡಿದರೆ ಜಂತುಹುಳ ಸಮಸ್ಯೆ ನಿವಾರಣೆ ಆಗುತ್ತದೆ. ಸಾರು ಸಾಂಬಾರಿಗೆ ಹುಣಸೆ ಹಣ್ಣಿನ ಬದಲಿಗೆ ಉಪಯೋಗಿಸಬಹುದು. ಜಾನ್ ಚಟ್ನಿ ಉಪ್ಪಿನಕಾಯಿ ಗೊಜ್ಜು ಮೆಣಸ್ಕಾಯಿ ಮಾಡಬಹುದು. ಹಿತ್ತಾಳೆ ಪಾತ್ರೆ, ತಾಮ್ರದ ಪಾತ್ರೆ ತೊಳೆಯಲು ಇದನ್ನು ಉಪಯೋಗಿಸಬಹುದು. ನೋವಿನ ಎಣ್ಣೆಯನ್ನು ತಯಾರಿಸಬಹುದು ಎಂದು ಪಾರಿಜಾತ ಗೆಳತಿಗೆ ತಿಳಿಸುತ್ತಾ, ಒಂದು ಡಬ್ಬಿಯಲ್ಲಿ ನೋವಿನ ಎಣ್ಣೆಯನ್ನು ಹಾಕಿ ಕೊಟ್ಟಳು.
ಮಾರನೆಯ ದಿನ ಸುಗಂಧಿ ಖುಷಿಖುಷಿಯಾಗಿ ಊರಿಗೆ ಹೊರಟ ನಿಂತಾಗ ಪಾರಿಜಾತಳಿಗೆ ಗಂಟಲು ಕಟ್ಟಿ ಬಂತು. ಆದರೂ ಕಾಲು ನೋವು ಕಡಿಮೆಯಾಗಿ ಹೋಗುತ್ತಿದ್ದಾಳಲ್ಲ ಎಂದು ಸಮಾಧಾನದಿಂದ ಕಳುಹಿಸಿ ಕೊಟ್ಟಳು.