Vydyaloka

ಸೈಟೋಕೈನ್ ಸ್ಟೋರ್ಮ್ ಸಿಂಡ್ರೋಮ್ ಮತ್ತು ಕೋವಿಡ್-19

ಸೈಟೋಕೈನ್ ಸ್ಟೋರ್ಮ್ ಸಿಂಡ್ರೋಮ್ ಎನ್ನುವುದು ಅತ್ಯಂತ ಅಪಾಯಕಾರಿಯಾದ ರೋಗದ ಸ್ಥಿತಿಯಾಗಿದ್ದು,  ದೇಹದೆಲ್ಲೆಡೆ ಅತಿಯಾದ ಉರಿಯೂತಕಾರಕ ರಾಸಾಯನಿಕಗಳನ್ನು ಬಿಡುಗಡೆಯಾಗುವಂತೆ ಮಾಡಿ, ದೇಹದ ಜೀವಕೋಶಗಳನ್ನು ಹಾಳುಗೆಡಹುತ್ತದೆ.ಉಸಿರಾಟದ ಸಮಸ್ಯೆ ತೀವ್ರವಾಗಿ ಮಾರಣಾಂತಿಕವಾಗುವ ಎಲ್ಲಾ ಸಾ‌ಧ್ಯತೆಯೂ ಇರುತ್ತದೆ.

ಕೋವಿಡ್-19 ಎನ್ನುವುದು ಕೊರೋನಾ ವೈರಸ್ ಡಿಸೀಸ್ 2019 ಎಂಬ ರೋಗದ ಸಂಕ್ಷಿಪ್ತವಾದ ಹೆಸರಾಗಿದ್ದು, ಸಾರ್ಸ್ ಕೋವಿ-2 ಅಂದರೆ ಸೀವಿಯರ್ ಅಕ್ಯೂಟ್ ರೆಸ್ಪಿರೇಟರ್ ಸಿಂಡ್ರೋಮ್-ಕೊರೋನಾ ವೈರಸ್-2 ಎಂಬ ವೈರಾಣುವಿನಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಡಿಸೆಂಬರ್ 2019 ರಲ್ಲಿ ಚೀನಾ ದೇಶದ ವುಹಾನ್ ನಗರದ ಹ್ಯೂಬೆ ಪ್ರಾಂತದಲ್ಲಿ ಆರಂಭಗೊಂಡು ಜಗತ್ತಿನ ಸುಮಾರು 210 ದೇಶಗಳಿಗೆ ತನ್ನ ಕದಂಬಬಾಹುಗಳನ್ನು ವಿಸ್ತರಿಸಿ ಈ ಕೋವಿಡ್-19 ರೋಗ ಮನುಕುಲವನ್ನು ತನ್ನ ಕಪಿ ಮುಷ್ಟಿಯನ್ನು ಹಿಡಿದಿಟ್ಟುಕೊಂಡು ಮನುಕುಲವೇ ವಿಲವಿಲನೆ ಒದ್ದಾಡುವಂತೆ ಮಾಡುತ್ತಿದೆ. ಸುಮಾರು 32,56,832ಮಂದಿ ಈ ರೋಗದಿಂದ ಬಾಧಿತರಾಗಿ 2,30,244  ಮಂದಿ ಸಾವಿಗೀಡಾಗಿದ್ದು, ಸಾವು ನೋವಿನ ಪ್ರಮಾಣ ಮತ್ತು ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಲೇ ಹೋಗುತ್ತಿದೆ.

ಉಸಿರಾಟದ ಸಮಸ್ಯೆ ತೀವ್ರವಾಗಿ ಮಾರಣಾಂತಿಕವಾಗುವ ಸಾ‌ಧ್ಯತೆ:

ಇನ್ನು ಸೈಟೋಕೈನ್ ಸ್ಟೋರ್ಮ್ ಸಿಂಡ್ರೋಮ್ ಎನ್ನುವುದು ಅತ್ಯಂತ ಅಪಾಯಕಾರಿಯಾದ ರೋಗದ ಸ್ಥಿತಿಯಾಗಿದ್ದು, ಯಾವುದಾದರೂ ಬಾಹ್ಯ ಅಥವಾ ಆಂತರಿಕ ಕಾರಣಗಳಿಂದಾಗಿ ದೇಹದ ರಕ್ಷಣಾ ಸ್ಥಿತಿ ಅತಿಯಾಗಿ ಪ್ರಚೋದಿತಗೊಂಡು ದೇಹದೆಲ್ಲೆಡೆ ಅತಿಯಾದ ಉರಿಯೂತಕಾರಕ ರಾಸಾಯನಿಕಗಳನ್ನು ಬಿಡುಗಡೆಯಾಗುವಂತೆ ಮಾಡಿ, ದೇಹದ ಜೀವಕೋಶಗಳನ್ನು ಹಾಳುಗೆಡಹುತ್ತದೆ ಎಂದು ಅಂದಾಜಿಸಲಾಗಿದೆ. ಈ ರಾಸಾಯನಿಕಗಳು ಅತೀ ಹೆಚ್ಚು ನಮ್ಮ ದೇಹದ ಶ್ವಾಸಕೋಶದ ಒಳಗಿನ ಗಾಳಿ ಚೀಲಗಳ ಒಳಪದರದ ಮೇಲೆ ಹಾನಿ ಮಾಡಿ ಒಳಪದರ ಊದಿಕೊಂಡು ಅಲ್ಲಿ ನಡೆಯುವ ಆಮ್ಲಜನಕ ಮತ್ತು ಇಂಗಾಲ ವರ್ಗಾವಣೆ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಈ ರೀತಿ ಆಮ್ಲಜನಕದ ಪೂರೈಕೆ ಅಥವಾ ಸರಬರಾಜು ಪ್ರಕ್ರಿಯೆಯೇ ಅಡ್ಡಿಯಾದಾಗ ಉಸಿರಾಟದ ಸಮಸ್ಯೆ ತೀವ್ರವಾಗಿ ಮಾರಣಾಂತಿಕವಾಗುವ ಎಲ್ಲಾ ಸಾ‌ಧ್ಯತೆಯೂ ಇರುತ್ತದೆ. ಇದನ್ನೇ ಆಂಗ್ಲಭಾಷೆಯಲ್ಲಿ SARS ಅಂದರೆ ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಎಂದು ಕರೆಯಲಾಗುತ್ತಿದೆ.

ಇತ್ತೀಚೆಗೆ ಸುದ್ದಿಮಾಡುತ್ತಿರುವ ಕೋವಿಡ್-19 ರೋಗಕ್ಕೆ ಕಾರಣವಾಗುವ ವೈರಾಣುಗಳು ನೇರವಾಗಿ ಶ್ವಾಸಕೋಶಗಳಿಗೆ ದಾಳಿ ಮಾಡಿ ಶ್ವಾಸಕೋಶದ ಒಳಪದರವು ಈ ವೈರಾಣುವಿನ ದಾಳಿಯಿಂದ ಕೆರಳುವಂತೆ ಮಾಡಿ ಮಾರಣಾಂತಿಕವಾಗಿ ಕಾಡುತ್ತದೆ ಎಂದು ಅಂದಾಜಿಸಲಾಗಿದೆ. ಈ ರೀತಿ ಅತಿಯಾದ ಉರಿಯೂತ ಕಾರಕ ರಾಸಾಯನಿಕಗಳಾದ ಸೈಟೋಕೈನ್ ಬಿಡುಗಡೆಯಾಗುವ ಪ್ರಕ್ರಿಯೆಯನ್ನು ಸೈಟೋಕೈನ್ ರಿಲೀಸ್‍ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಒಮ್ಮೆಲೇ ಲಕ್ಷಾಂತರ ವೈರಾಣುಗಳು ಎದೆಗೂಡಿನ ಶ್ವಾಸಕೋಶದೊಳಗಿನ ಗಾಳಿ ಚೀಲಗಳ ಒಳಪದರದ ಮೇಲೆ ದಾಳಿ ಮಾಡಿದಾಗ, ದೇಹದ ರಕ್ಷಣಾ ವ್ಯವಸ್ಥೆ ಕ್ಷುದ್ರವಾಗಿ ಅತಿಯಾಗಿ ಕೆರಳಿದಾಗ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉರಿಯೂತಕಾರಕ ಸೈಟೋಕೈನ್ ಬಿಡುಗಡೆಯಾಗಿ ರಕ್ಷಣಾ ವ್ಯವಸ್ಥೆಯನ್ನು ಹಳಿತಪ್ಪಿಸಿ ಉಸಿರಾಟದ ಸಮಸ್ಯೆ ಉಲ್ಬಣವಾಗಿ ಮಾರಣಾಂತಿಕವಾಗುವಂತೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.

ಕೋವಿಡ್-19 ರೋಗ ಕೊರೋನಾ ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುತ್ತದೆ. ಈ ಹಿಂದೆ 2003 ಮತ್ತು 2012 ರಲ್ಲಿ ಇದೇ ಕೊರೋನಾ ವೈರಾಣು SARS ಮತ್ತು MERS ಎಂಬ ರೋಗಕ್ಕೆ ಕಾರಣವಾಗಿತ್ತು. ಈ ಎರಡೂ ರೋಗಗಳಲ್ಲಿ ಶ್ವಾಸಕೋಶಕ್ಕೆ ಅತಿಯಾದ ಹಾನಿಯಾಗಿ ಉಸಿರಾಟದ ತೊಂದರೆಯೇ ಜೀವ ಹಾನಿಗೆ ಮೂಲ ಕಾರಣ ಎಂದೂ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ SARS ಮತ್ತು MERS ರೋಗಕ್ಕೆ ಹೋಲಿಸಿದಲ್ಲಿ ಸಾವಿನ ಅನುಪಾತ ಈ ಕೋವಿಡ್-19 ರೋಗದಲ್ಲಿ ಕಡಿಮೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿದೆ. ಆದರೆ ಇನ್ನೊಂದು ಆಘಾತಕಾರಿ ಅಂಶವೆಂದರೆ ಕೋವಿಡ್-19 ರೋಗಕ್ಕೆ ಕಾರಣವಾಗುವ SARS-COV-2 ವೈರಾಣು ಬರೀ ಶ್ವಾಸಕೋಶದ ಜೀವಕೋಶಗಳಿಗೆ ಮಾತ್ರವಲ್ಲದೆ, ಹೃದಯ ಮತ್ತು ಕಿಡ್ನಿಗಳ ಮೇಲೂ ಹಾನಿ ಮಾಡಿ ಬಹು ಅಂಗಾಂಗ ವೈಫಲ್ಯಕ್ಕೂ ಕಾರಣವಾಗುತ್ತದೆ ಎಂದೂ ಅಂದಾಜಿಸಲಾಗಿದೆ. ಅಂಜಿಯೋಟೆನ್ಸಿನ್ ಪರಿವರ್ತಿತ ಕಿಣ್ವ-2 ಎಂಬ ವಾಹಕ ಶ್ವಾಸಕೋಶ, ಹೃದಯ ಮತ್ತು ಕಿಡ್ನಿಗಳಲ್ಲಿ ಇದ್ದು, ಈ ಕೋವಿಡ್-19 ವೈರಾಣು ಈ ವಾಹಕಕ್ಕೆ ಸೇರಿಕೊಂಡು ಆಂತರಿಕವಾಗಿ ಹೆಚ್ಚು ಹಾನಿ ಮಾಡಿ ಬಹು ಅಂಗಾಂಗ ವೈಫಲ್ಯಕ್ಕೂ ಕಾರಣವಾಗುತ್ತದೆ ಎನ್ನಲಾಗಿದೆ.

ಒಟ್ಟಿನಲ್ಲಿ ಕೋವಿಡ್-19 ವೈರಾಣು ರೋಗದಲ್ಲಿ ಸೈಟೋಕೈನ್ ಮತ್ತು ಇಂಟರ್‍ಲ್ಯುಕಿನ್ -6 ಇಂಟರ್‍ಲ್ಯುಕಿನ್ -1, ಇಂಡ್ಯುಸ್‍ಡ್ ಪ್ರೊಟೀನ್ 10 ಮುಂತಾದ ಕೀಮಾಕೈನ್‍ಗಳು ಅತಿಯಾಗಿ ಸ್ರವಿಸಲ್ಪಟ್ಟು ಮಾರಣಾಂತಿಕವಾಗಿ ಕಾಡುತ್ತದೆ ಎಂದೂ ಚೀನಾದೇಶದಲ್ಲಿ ನಡೆದ ಆರಂಭಿಕ ಸಂಶೋಧನೆಗಳಿಂದ ತಿಳಿದು ಬಂದಿದೆ. ಕೋವಿಡ್-19 ರೋಗ ಬಂದವರಲ್ಲಿ 80 ಶೇಕಡಾ ಮಂದಿ ಯಾವುದೇ ಹೆಚ್ಚಿನ ತೊಂದರೆ ಇಲ್ಲದೆ ಗುಣಮುಖವಾಗುವ ಸಾಧ್ಯತೆ ಇರುತ್ತದೆ. ಇನ್ನು ಉಳಿದ 20 ಶೇಕಡಾ ಮಂದಿ ರೋಗಿಗಳಿಗೆ ಒಳರೋಗಿಯಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಅಗತ್ಯ ಇರುತ್ತದೆ. ಇದರಲ್ಲಿ 5 ಶೇಕಡಾ ಮಂದಿ ಮಾತ್ರ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯಬೇಕಾದ ಅಗತ್ಯ ಬರಬಹುದು. ಮಧುಮೇಹಿಗಳು, ವಯಸ್ಕರು ಮತ್ತು ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟವರು ಹೆಚ್ಚು ತೊಂದರೆಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮರಣದ ಅನುಪಾತ ಇಂತವರಲ್ಲಿ ಹೆಚ್ಚು ಇರುತ್ತದೆ. ಆದರೆ ಸ್ಟೆಟೋಕೈನ್ ಸ್ಟೋರ್ಮ್ ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳಲ್ಲಿಯೂ ಉಂಟಾಗುವ ಸಾಧ್ಯತೆ ಇರುತ್ತದೆ. ಸೈಟೋಕೈನ್ ಸ್ಟೋರ್ಮ್ ಬಂದವರಲ್ಲಿ 25 ಶೇಕಡಾ ಮಂದಿ ಸಾವಿನಲ್ಲಿ ಪರ್ಯವಸಾನವಾಗುತ್ತದೆ ಎಂದೂ ಅಂಕಿ ಅಂಶಗಳಿಂದ ತಿಳಿದುಬಂದಿದೆ. ತಕ್ಷಣವೇ ಗುರುತಿಸಿ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇರುತ್ತದೆ.

ಹೇಗೆ ಪತ್ತೆ ಹಚ್ಚುವುದು?

ರಕ್ತದಲ್ಲಿ ʻಸೀರಮ್ ಫೆರಟಿನ್’ ಎಂಬ ರಕ್ತಪರೀಕ್ಷೆ ಮುಖಾಂತರ ಈ ಸೈಟೋಕೈನ್ ಸ್ಟೋರ್ಮ್ ಅನ್ನು ಪತ್ತೆ ಹಚ್ಚಲಾಗುತ್ತದೆ. ಕೋವಿಡ್-19 ರೋಗದಿಂದ ಬಳಲುತ್ತಿದ್ದು ಅತಿಯಾದ ಜ್ವರ, ಸುಸ್ತು ಹಾಗೂ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಶಂಕಿತರಿಗೆ ಈ ಅತಿ ಸುಲಭದ ಪರೀಕ್ಷೆ ಮಾಡಲಾಗುತ್ತದೆ. ರಕ್ತದಲ್ಲಿ ಫೆರಟಿನ್ ಅಂಶ ಅಧಿಕವಾಗಿದ್ದರೆ, ಆತನಲ್ಲಿ ಅತಿಯಾದ ಉರಿಯೂತದ ಕಾರಣದಿಂದಾಗಿ ಆತನ ರಕ್ಷಣಾ ವ್ಯವಸ್ಥೆ ಉಗ್ರವಾಗಿ ಪರಿಸ್ಥಿತಿ ಹಳಿ ತಪ್ಪಿದೆ ಎಂಬ ನಿರ್ಧಾರಕ್ಕೆ ವೈದ್ಯರು ಬರುತ್ತಾರೆ.

ಚಿಕಿತ್ಸೆ ಹೇಗೆ?

ಅತಿಯಾದ ಕೆರಳಿದ ಉರಿಯೂತದ ಚಿಕಿತ್ಸೆಯಲ್ಲಿ ‘ಸ್ಟೀರಾಯ್ಡು’ ಔಷಧಿಯ ಪಾತ್ರದ ಬಗ್ಗೆ ಬಹಳಷ್ಟು ಭಿನ್ನಾಭಿಪ್ರಾಯ ವೈದ್ಯರಲ್ಲಿ ಇದೆ. ಸ್ಟೀರಾಯ್ಡು ಬಳಸಿದಾಗ ದೇಹದ ರಕ್ಷಣಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿ, ದೇಹದೆಲ್ಲೆಡೆ ಸೋಂಕು ಪಸರಿಸುವ ಸಾಧ್ಯತೆ ಹೆಚ್ಚಾಗುತ್ತದೆ ಎನ್ನಲಾಗಿದೆ. ಈ ಕಾರಣದಿಂದ ವೈರಾಣು ಸೋಂಕಿನ ಸಂದರ್ಭದಲ್ಲಿ ಯಾರೂ ಸ್ಟಿರಾಯ್ಡು ಬಳಸುವುದೇ ಇಲ್ಲ. ಇತ್ತೀಚೆಗೆ ಸೈಟೋಕೈನ್ ಥೆರಪಿ ಎಂಬ ಚಿಕಿತ್ಸೆ ಲಭ್ಯವಿದ್ದು ಇವು ನೇರವಾಗಿ ಉರಿಯೂತಕ್ಕೆ ಕಾರಣವಾಗುವ ರಾಸಾಯನಿಕಗಳ ಮೇಲೆ ಮಾತ್ರ ದಾಳಿ ಮಾಡುತ್ತದೆ ಮತ್ತು ಉರಿಯೂತವನ್ನು ನಿಯಂತ್ರಿಸುತ್ತದೆ. ಈ ಔಷಧಿಗಳು ನೇರವಾಗಿ ಇಂಟರ್‍ಲ್ಯುಕಿನ್ ಎಂಬ ರಾಸಾಯನಿಕಗಳ ಮೇಲೆ ಮಾತ್ರ ಪರಿಣಾಮ ಬೀರಿ, ರಕ್ಷಣಾ ವ್ಯವಸ್ಥೆ ಜಾಸ್ತಿ ಕೆರಳದಂತೆ ಮಾಡುತ್ತದೆ. ಸ್ಟೀರಾಯ್ಡು ಬಳಸುವಾಗ ಉಂಟಾಗುವ ರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸುವಂತಹಾ ಸಾಮಥ್ರ್ಯ ಈ ಔಷಧಿಗೆ ಇಲ್ಲದ ಕಾರಣ ವೈರಾಣು ಸೋಂಕು ಹರಡುವ ಸಾದ್ಯತೆ ಕಡಿಮೆ ಇರುತ್ತದೆ. ಈ ಎಲ್ಲಾ ಪ್ರಯೋಗಗಳನ್ನು ಚೀನಾ ದೇಶದಲ್ಲಿ ಕೋವಿಡ್-19 ರೋಗಿಗಳಲ್ಲಿ ಬಳಸಿ ಆರಂಭಿಕ ಯಶಸ್ಸು ಪಡೆಯಲಾಗಿದೆ ಎಂಬುದು ಅಂಕಿಅಂಶಗಳಿಂದ ಸಾಬೀತಾಗಿದೆ.

ಇದರಿಂದಾಗಿ ಲಸಿಕೆ ಇಲ್ಲದ ಚಿಕಿತ್ಸೆ ಇಲ್ಲದ ಈ ಕೋವಿಡ್-19 ರೋಗದ ಚಿಕಿತ್ಸೆಯಲ್ಲಿ ಹೊಸ ಆಶಾಭಾವನೆ ರೋಗಿಗಳಲ್ಲಿ ಮಾಡಿಸಿರುವುದಂತೂ ನಿಜವಾದ ಮಾತು. ಇತ್ತೀಚೆಗೆ ಬೆಂಗಳೂರಿನ ಖ್ಯಾತ ವೈದ್ಯರೊಬ್ಬರು ಹೊಸದೊಂದು ಚಿಕಿತ್ಸೆಯಿಂದ ಕೋವಿಡ್ -19 ರೋಗವನ್ನು ನಿಯಂತ್ರಿಸಬಹುದು ಎಂದಿದ್ದಾರೆ. ನಮ್ಮ ದೇಹಕ್ಕೆ ವೈರಾಣುಗಳ ದಾಳಿ ಮಾಡಿದಾಗ ನಮ್ಮ ದೇಹದ ಜೀವಕೋಶಗಳು ಇಂಟರ್‍ಫೆರಾನ್ ಎಂಬ ವಸ್ತುವನ್ನು ಉತ್ಪಾದಿಸುತ್ತದೆ. ಇದೊಂದು ರೀತಿಯ ಸೈಟೋಕೈನ್ ಆಗಿರುತ್ತದೆ. ಸೈಟೋ ಅಂದರೆ ಜೀವಕೋಶಕ್ಕೆ ಸಂಬಂಧಿಸಿದ ಮತ್ತು ಕೈನ್ ಅಂದರೆ ಚಲನೆ ಎಂದರ್ಥ ಈ ಇಂಟರ್‍ಫೆರಾನ್‍ಗಳು ವೈರಾಣುಗಳ ಮೇಲೆ ದಾಳಿ ಮಾಡುತ್ತದೆ. ಈ ಇಂಟರ್‍ಫೆರಾನ್‍ಗಳು ಜೀವಕೋಶದ ಮೇಲೆ ಪ್ರೋಟೀನ್ ಪದರ ನಿರ್ಮಿಸಿ ವೈರಾಣು ಜೀವಕೋಶಕ್ಕೆ ಪ್ರವೇಶಿಸದಂತೆ ತಡೆಯುತ್ತದೆ ಮತ್ತು ವೈರಾಣುಗಳನ್ನು ಕೊಲ್ಲುತ್ತದೆ. ಆದರೆ ಕೋವಿಡ್-19 ರೋಗದಲ್ಲಿ ಈ ರೀತಿಯ ಇಂಟರ್‍ಫೆರಾನ್ ಉತ್ಪತ್ತಿಯಾಗದ ಕಾರಣದಿಂದ ವೈರಾಣು ಅನಿಯಂತ್ರಿತವಾಗಿ ಉಳಿಯುತ್ತದೆ ಎನ್ನಲಾಗಿದೆ. ಈ ಕಾರಣದಿಂದ ದಾನಿಗಳಿಂದ ಪಡೆದ ಸೈಟೋಕೈನ್ ಅನ್ನೂ ಕೋವಿಡ್-19 ರೋಗಿಗಳಿಗೆ ಆರಂಭದಲ್ಲಿ ನೀಡಲಾಗುತ್ತದೆ. ಈ ಸೈಟೋಕೈನ್‍ಗಳು ವೈರಾಣು ವಿರುದ್ಧ ದಾಳಿ ಮಾಡಿ ವೈರಾಣುಗಳು ವೃದ್ಧಿಯಾಗದಂತೆ ತಡೆದು ರೋಗವನ್ನು ಆರಂಭಿಕ ಹಂತದಲ್ಲಿಯೇ ನಿವಾಳಿಸಿ ಹಾಕುತ್ತಾರೆ. ಈ ಚಿಕಿತ್ಸೆ ಇನ್ನು ಆರಂಭಿಕ ಪ್ರಾಯೋಗಿಕ ಹಂತದಲ್ಲಿ ಇದ್ದು ಯಶಸ್ಸು ಪಡೆಯಲಿ ಎಂದು ಹಾರೈಸೋಣ.

ಕೋವಿಡ್-19 ರೋಗದ ಆರ್ಭಟ ಎಲ್ಲೆಡೆ ಹರಡುತ್ತಿದೆ. ಲಸಿಕೆ ಇಲ್ಲದ ಚಿಕಿತ್ಸೆ ಇಲ್ಲದ ಈ ರೋಗವನ್ನು ನಿಯಂತ್ರಿಸುವ ಹತ್ತು ಹಲವು ಪ್ರಾಯೋಗಾತ್ಮಕ ಪ್ರಯತ್ನಗಳು ವಿಶ್ವದೆಲ್ಲೆಡೆ ನಡೆಯುತ್ತಿದೆ. ಆದಷ್ಟು ಬೇಗ ಚಿಕಿತ್ಸೆ ದೊರೆತು ಮನುಕುಲ ಈ ವೈರಾಣುವಿನಿಂದ ಮುಕ್ತವಾಗಿ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಆಗಲಿ ಎಂದು ಹಾರೈಸೋಣ.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com
Email: drmuraleemohan@gmail.com

Share this: