Vydyaloka

ಕೋವಿಡ್‍ಗೆ ರಷ್ಯಾದಿಂದ ಲಸಿಕೆ: ಅಧ್ಯಕ್ಷ ಪುಟಿನ್ ಘೋಷಣೆ

ಕೋವಿಡ್‍ಗೆ ರಷ್ಯಾದಿಂದ ಲಸಿಕೆ ಕಂಡು ಹಿಡಿದಿದೆ.ಮಾಸ್ಕೋದಲ್ಲಿರುವ ಗಮಲೆಯ್ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ರಷ್ಯಾದ ರಕ್ಷಣಾ ಇಲಾಖೆ ಸಹಭಾಗಿತ್ವದಲ್ಲಿ ಈ ಲಸಿಕೆಯನ್ನು ತಯಾರು ಮಾಡಲಾಗಿದೆ. ಈ ಕೊರೊನಾ ಲಸಿಕೆಗೆ ರಷ್ಯಾ ಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳುಹಿಸಿಕೊಟ್ಟ ಉಪಗ್ರಹ ಸ್ಪುಟ್ನಿಕ್ ಹೆಸರನ್ನೇ ಇಡಲಾಗಿದೆ.

ಮಾಸ್ಕೋ: ಇಡೀ ಜಗತ್ತು ಕುತೂಹಲದಿಂದ ಕಾಯುತ್ತಾ ಇದ್ದ ಕೋವಿಡ್ ಲಸಿಕೆ ಕಂಡುಹಿಡಿಯುವ ಸುದ್ಧಿಗೆ ಇದೀಗ ಜೀವ ಬಂದಿದೆ. ಕೋವಿಡ್ ಲಸಿಕೆಗೆ ಅನುಮತಿ ನೀಡಿದ ಮೊದಲ ದೇಶವಾಗಿ ಇದೀಗ ರಷ್ಯಾ ಗುರುತಿಸಿಕೊಂಡಿದೆ. ಸ್ವತಃ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಮಂಗಳವಾರ ಈ ಘೋಷಣೆಯನ್ನು ಮಾಡಿದ್ದಾರೆ. ಅಗಸ್ಟ್ 11ರಂದು ರಷ್ಯಾದ ಸರಕಾರಿ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಅಧ್ಯಕ್ಷ ಪುಟಿನ್, “ಕೊರೊನಾಗೆ ರಷ್ಯಾ ದೇಶವು ಲಸಿಕೆ ಕಂಡು ಹಿಡಿದಿದೆ. ಈ ಲಸಿಕೆ ಸುರಕ್ಷಿತವಾಗಿದೆ ಮತ್ತು ಅದನ್ನು ನನ್ನ ಓರ್ವ ಮಗಳಿಗೂ ನೀಡಲಾಗಿದೆ. ಈ ಲಸಿಕೆ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಬಲವಾದ ರೋಗನಿರೋಧಕ ಶಕ್ತಿಯನ್ನು ರೂಪಿಸುತ್ತದೆ. ಮತ್ತು ಈ ಲಸಿಕೆಗೆ ಅನುಮತಿ ನೀಡುವ ವೇಳೆ ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಪಾಲಿಸಲಾಗಿದೆ” ಎಂದು ಪುಟಿನ್ ತಿಳಿಸಿದ್ದಾರೆ. ಹಾಗೆಯೇ ಮಾತನಾಡುತ್ತಾ ಶೀಘ್ರದಲ್ಲೇ ದೇಶವು ಲಸಿಕೆ ಉತ್ಪಾದನೆ ಪ್ರಾರಂಭಿಸಲಿದೆ ಎಂದೂ ಅವರು ವಿವರಿಸಿದರು.

ಲಸಿಕೆಯ ಹೆಸರು- ಸ್ಪುಟ್ನಿಕ್:

 ಮಂಗಳವಾರ ರಷ್ಯಾದಲ್ಲಿ ನೋಂದಣಿ ಮಾಡಿರುವ ಈ ಲಸಿಕೆ ಬುಧವಾರದಿಂದ ಅಧಿಕೃತವಾಗಿ ಬಿಡುಗಡೆಯಾಗಲಿದೆ.ರಷ್ಯಾದ ರಾಜಧಾನಿ ಮಾಸ್ಕೋದಲ್ಲಿರುವ ಗಮಲೆಯ್ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ರಷ್ಯಾದ ರಕ್ಷಣಾ ಇಲಾಖೆ ಸಹಭಾಗಿತ್ವದಲ್ಲಿ ಈ ಲಸಿಕೆಯನ್ನು ತಯಾರು ಮಾಡಲಾಗಿದೆ. ಈ ಕೊರೊನಾ ಲಸಿಕೆಗೆ ರಷ್ಯಾ ಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳುಹಿಸಿಕೊಟ್ಟ ಉಪಗ್ರಹ ಸ್ಪುಟ್ನಿಕ್ ಹೆಸರನ್ನೇ ಇಡಲಾಗಿದೆ. ಮನುಷ್ಯರ ಮೇಲಿನ ಪ್ರಯೋಗ (ಅಂತಿಮ ಹಂತ)ದ ನಂತರ ಕೇವಲ 2 ತಿಂಗಳಲ್ಲಿ ಈ ಗುರಿ ಸಾಧಿಸಿರುವುದಾಗಿ ರಷ್ಯಾ ಪ್ರತಿಪಾದಿಸಿದೆ. ಈ ವರ್ಷದ ಅಕ್ಟೋಬರ್ ವೇಳೆಗೆ ಸಂಪೂರ್ಣ ರಷ್ಯಾದ ಎಲ್ಲಾ ನಾಗರಿಕರಿಗೂ ಮಾಸ್ ವ್ಯಾಕ್ಸಿನೇಶನ್ ಮಾಡಲು ತಯಾರಿ ಸಹಾ ಮಾಡಿಕೊಳ್ಳಲಾಗುತ್ತಿದೆ ಎಂದೂ ರಷ್ಯಾ ಹೇಳುತ್ತಿದೆ. ಲಸಿಕೆಯನ್ನು ಮೊದಲ ಬಾರಿಗೆ ವೈದ್ಯರು ಮತ್ತು ಶಿಕ್ಷರಿಗೆ ನೀಡಲಾಗುವುದು ಎಂದು ಲೈವ್ ಮಿಂಟ್ ವರದಿ ಮಾಡಿದೆ.

ಸೆಪ್ಟೆಂಬರ್‍ನಲ್ಲಿ ಲಸಿಕೆ ತಯಾರಿಕೆ ಆರಂಭವಾಗಲಿದ್ದು, ಅಕ್ಟೋಬರ್‍ನಲ್ಲಿ ಲಸಿಕೆಯನ್ನು ನಾವು ರೋಗಿಗಳಿಗೆ ನೀಡಲು ಅನುಕೂಲವಾಗುವಂತೆ ಬಿಡುಗಡೆ ಮಾಡಲಿದ್ದೇವೆ ಎಂದು ರಷ್ಯಾ ರಕ್ಷಣಾ ಸಚಿವರು ತಿಳಿಸಿದ್ದಾರೆ. ಈ ಲಸಿಕೆ ರಷ್ಯಾ ಪ್ರಜೆಗಳಿಗೆ ಉಚಿತವಾಗಿ ನೀಡಲಿದ್ದು, ಇದರ ಹೊರೆಯನ್ನು ಬಜೆಟ್‍ನಲ್ಲಿ ಭರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಲಸಿಕೆಯನ್ನು ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.

ಈ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅಪಸ್ವರ:

ಆದರೆ ಇಡೀ ಜಗತ್ತಿನ ಇತರ ದೇಶದ ವಿಜ್ಞಾನಿಗಳು ಮಾತ್ರ ರಷ್ಯಾ ವಿಜ್ಞಾನಿಗಳು ಆತುರ ಪಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವಾರವಷ್ಟೇ ಈ ಲಸಿಕೆ ತಯಾರಿಕಾ ರೇಸ್ ಕುರಿತಂತೆ ರಷ್ಯಾಗೆ ಕಿವಿಮಾತು ಹೇಳಿದ್ದ ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಹೇಳಿತ್ತು. ಇದೀಗ ರಷ್ಯಾ ಬಿಡುಗಡೆ ಮಾಡಿರುವ ಲಸಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಇದರ ಬಗ್ಗೆ ಇನ್ನಷ್ಟು ಅಧ್ಯಯನ ಹಾಗೂ ಪುನರ್ ವಿಮರ್ಶೆ ಅಗತ್ಯವಿದೆ ಎಂದು ತಿಳಿಸಿದೆ. ಆದರೆ ರಷ್ಯಾ ಸರಕಾರ ತನ್ನ ವಿಜ್ಞಾನಿಗಳ ಈ ನಡೆಯನ್ನು ಸಮರ್ಥಿಸಿದೆ. ಈಗಾಗಲೇ ಒಂದು ಬಿಲಿಯನ್ ಡೋಸ್‍ಗೆ ಬೇಡಿಕೆ ಬಂದಿದೆ. 20 ರಾಷ್ಟ್ರಗಳು ಲಸಿಕೆಗೆ ಬೇಡಿಕೆ ಸಲ್ಲಿಸಿವೆ. ಇನ್ನು ಭಾರತ, ಬ್ರೆಜಿಲ್ ಹಾಗೂ ಇನ್ನಿತರ ಮುಖ್ಯ ರಾಷ್ಟ್ರಗಳು ರಷ್ಯಾದ ಈ ಲಸಿಕೆಯನ್ನು ತಮ್ಮ ದೇಶಗಳಲ್ಲಿ ಉತ್ಪಾದಿಸಲು ಮುಂದೆ ಬಂದಿವೆ ಎಂದು ರಷ್ಯಾ ಹೇಳಿದೆ.

Also Read: ಕೋವಿಡ್-19 ಗೆ ಚಿಕಿತ್ಸೆ ಏನು ಮತ್ತು ಹೇಗೆ?

 

Share this: