ಕೋವಿಡ್-19 ಸೋಂಕಿಗೆ ಮಧುಮೇಹಿಗಳು ಯಾಕೆ ಬೇಗ ತುತ್ತಾಗುತ್ತಾರೆ? ಮಧುಮೇಹಿ ರೋಗಿಗಳು ಬಹಳ ಜಾಗರೂಕರಾಗಿದ್ದು, ರೋಗಾಣುಗಳು ದೇಹದೊಳಗೆ ಸೇರದಂತೆ ನೋಡಿಕೊಳ್ಳಬೇಕು. ಅದೇ ರೀತಿ ದೇಹದಲ್ಲಿನ ಗ್ಲೂಕೋಸ್‍ನ ಪ್ರಮಾಣವನ್ನು ಯಾವಾಗಲೂ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾಗಿರುತ್ತದೆ.
ಆರೋಗ್ಯವಂತ ವ್ಯಕ್ತಿಗಳು ಸಾಮಾನ್ಯವಾಗಿ ಕೋವಿಡ್-19 ಸೋಂಕು ತಗುಲಿದಾಗ, ತಮ್ಮ ಸುದೃಢ ರಕ್ಷಣಾ ವ್ಯವಸ್ಥೆಯ ಕಾರಣದಿಂದ ವೈರಾಣುವಿನ ಮೇಲೆ ಪ್ರತಿ ದಾಳಿ ನಡೆಸಿ, ವೈರಾಣುವನ್ನು ಹಿಮ್ಮೆಟ್ಟಿಸಿ ರೋಗಿ ಗುಣಮುಖನಾಗುವಂತೆ ಮಾಡುತ್ತದೆ. ರೋಗಿ ಗುಣಮುಖನಾಗಿ ಒಂದೆರಡು ವಾರಗಳಲ್ಲಿ ಕೋವಿಡ್-19 ವೈರಾಣುವಿನ ವಿರುದ್ಧ ಆಂಟಿಬಾಡಿಗಳನ್ನು ಸೃಷ್ಟಿಸಿಕೊಂಡು ಮಗದೊಮ್ಮೆ ಕೋವಿಡ್-19 ವೈರಾಣು ಸೋಂಕು ಬರದಂತೆ ತಡೆಯಲು ದೇಹವನ್ನು ತಯಾರುಗೊಳಿಸುತ್ತದೆ. ಇಂತಹ ಆಂಟಿಬಾಡಿಗಳು ಗುಣಮುಖರಾದ ರೋಗಿಗಳ ಫ್ಲಾಸ್ಮಾದಲ್ಲಿ ಹೇರಳವಾಗಿ ಇರುತ್ತದೆ. ಇಂತಹಾ ಪ್ಲಾಸ್ಮಾಗಳನ್ನು ‘ಪ್ಲಾಸ್ಮಾ ಥೆರಪಿ’ ಮಾಡಲು ಹಾಗೂ ಕೋವಿಡ್-19 ಸೋಂಕಿತ ರೋಗಿಗಳಲ್ಲಿ ಚಿಕಿತ್ಸೆ ನೀಡಲು ಬಳಸುತ್ತಾರೆ.
ಮಧುಮೇಹಿಗಳು ಯಾಕೆ ಬೇಗ ಸೋಂಕಿಗೆ ತುತ್ತಾಗುತ್ತಾರೆ?
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹದೊಳಗೆ ಹೊರಗಿನಿಂದ ಯಾವುದೋ ರೀತಿಯ ಸೂಕ್ಷ್ಮಾಣು ಜೀವಿಗಳಾದ ವೈರಸ್, ಶಿಲೀಂದ್ರ, ಬ್ಯಾಕ್ಟೀರಿಯಾ ಅಥವಾ ಇನ್ನಾವುದೇ ಜೀವಿಗಳು ಸೇರಿಕೊಂಡಾಗ ನಮ್ಮ ದೇಹದಲ್ಲಿನ ರಕ್ಷಣಾ ವ್ಯವಸ್ಥೆಯ ಆರಂಭಿಕ ಮುಂದಿನ ಸಾಲಿನ ಸೈನಿಕರಾದ ‘ನ್ಯೂಟ್ರೊಫಿಲ್’ ಎಂಬ ಬಿಳಿ ರಕ್ತಕಣಗಳು, ಅಂತಹಾ ಸೂಕ್ಷ್ಮಾಣು ಜೀವಿಗಳ ವಿರುದ್ಧ ಪ್ರತಿ ದಾಳಿ ನಡೆಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ರೀತಿಯ ದಾಳಿಗಳಲ್ಲಿ ನಮ್ಮ ಬಿಳಿ ರಕ್ತಕಣಗಳು, ವೈರಾಣು ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಏರಿ ಹೋಗಿ ವಿಜೃಂಭಿಸಿ ಅವುಗಳನ್ನು ಮಣಿಸಿ ದೇಹವನ್ನು ರಕ್ಷಿಸಿಕೊಳ್ಳುತ್ತದೆ.
ಈ ರೀತಿ ಒಂದೇ ದಿಕ್ಕಿನಲ್ಲಿ ರೋಗಾಣುಗಳು ವಿರುದ್ಧ ನ್ಯೂಟ್ರೋಫಿಲ್ ಎಂಬ ಬಿಳಿ ರಕ್ತಕಣಗಳು ದಾಳಿ ಮಾಡುವುದನ್ನು ನಾವು ‘ಫಾಗೋಸೈಟೋಸಿಸ್’ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಈ ರೀತಿಯ ಫಾಗೋಸೈಟೋಸಿಸ್ ಎಂಬ ಪ್ರತಿ ಹೋರಾಟದ ಕಾರಣದಿಂದ ನಮ್ಮ ದೇಹಕ್ಕೆ ಎಷ್ಟೇ ರೋಗಾಣುಗಳು ದಾಳಿ ಮಾಡಿದರೂ ನಮ್ಮ ದೇಹವನ್ನು ಬಿಳಿ ರಕ್ತಕಣಗಳು ರಕ್ಷಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ರೋಗಾಣುಗಳು ಸಾವಿಗೀಡಾಗಿ, ಬಿಳಿ ರಕ್ತಕಣಗಳು ಯುದ್ಧದಲ್ಲಿ ಗೆದ್ದು, ದೇಹವನ್ನು ಮತ್ತಷ್ಟು ಸುದೃಢವಾಗುವಂತೆ ಮಾಡುತ್ತದೆ.
ಇನ್ನು ಮಧುಮೇಹಿ ರೋಗಿಗಳಲ್ಲಿ ಈ ರೀತಿಯ ‘ಫಾಗೋಸೈಟೋಸಿಸ್’ ಎಂಬ ಪ್ರತಿ ದಾಳಿ ಬಹಳ ಪರಿಣಾಮಕಾರಿಯಾಗಿರುವುದಿಲ್ಲ. ಮಧುಮೇಹಿಗಳ ದೇಹದಲ್ಲಿನ ನ್ಯೂಟ್ರೋಫಿಲ್ ಎಂಬ ಬಿಳಿ ರಕ್ತಕಣಗಳು ಆರೋಗ್ಯವಂತ ವ್ಯಕ್ತಿಗಳ ನ್ಯೂಟ್ರೋಫಿಲ್ ಗಳಷ್ಟು ಪರಿಣಾಮಕಾರಿಯಾಗಿಲ್ಲ ಎಂದು ತಿಳಿದುಬಂದಿದೆ. ಮಧುಮೇಹಿಗಳ ದೇಹದಲ್ಲಿನ ‘ಫಾಗೋಸೈಟೋಸಿಸ್’ ಪ್ರಕ್ರಿಯೆ ಬಹಳ ನಿಧಾನ ಮತ್ತು ತೀವ್ರತರವಾಗಿಲ್ಲದ ಕಾರಣದಿಂದಾಗಿ ರೋಗಾಣುಗಳು ಬಿಳಿರಕ್ತಕಣಗಳ ವಿರುದ್ಧದ ಹೋರಾಟದಲ್ಲಿ ಹೆಚ್ಚಾಗಿ ಮೇಲುಗೈ ಪಡೆಯುತ್ತದೆ.
ಇದಲ್ಲದೆ ಮಧುಮೇಹಿಗಳ ದೇಹದಲ್ಲಿ ಗ್ಲೂಕೋಸ್ ಅಂಶಗಳು ಜಾಸ್ತಿ ಇರುತ್ತದೆ. ರೋಗಾಣುಗಳು ಬಹಳ ವೇಗವಾಗಿ ಮತ್ತು ಸುಲಭವಾಗಿ ವಂಶಾಭಿವೃದ್ಧಿ ಮಾಡಲು ಪೂರಕವಾದ ವಾತಾವರಣ ಇರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಮಧುಮೇಹಿ ರೋಗಿಗಳಲ್ಲಿ ಎಲ್ಲಾ ರೀತಿಯ ಅವಕಾಶವಾದಿ ಸೋಂಕುಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ಬರೀ ಬ್ಯಾಕ್ಟೀರಿಯಾ ವೈರಾಣುವಿಗೆ ಮಾತ್ರ ಸೀಮಿತವಾಗಿಲ್ಲ. ಅತೀ ವಿರಳವಾದ ಶಿಲೀಂದ್ರ ಸೋಂಕು (ಫಂಗಲ್ ಸೋಂಕು) ಕೂಡಾ ಮಧುಮೇಹಿ ರೋಗಿಗಳಲ್ಲಿ ಹೆಚ್ಚು ಕಂಡು ಬರುತ್ತದೆ.
ಮಧುಮೇಹಿಗಳು ಏನು ಮುಂಜಾಗರೂಕತೆ ವಹಿಸಬೇಕು?
ಮಧುಮೇಹಿ ರೋಗಿಗಳು ಬಹಳ ಜಾಗರೂಕರಾಗಿದ್ದು, ರೋಗಾಣುಗಳು ದೇಹದೊಳಗೆ ಸೇರದಂತೆ ನೋಡಿಕೊಳ್ಳಬೇಕು. ಅದೇ ರೀತಿ ದೇಹದಲ್ಲಿನ ಗ್ಲೂಕೋಸ್‍ನ ಪ್ರಮಾಣವನ್ನು ಯಾವಾಗಲೂ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾಗಿರುತ್ತದೆ.
1. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಜಾಸ್ತಿಯಾದಂತೆ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.
2. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಏರಿದಂತೆ ದೇಹದ ರಕ್ಷಣಾ ವ್ಯವಸ್ಥೆ ಹದಗೆಡುತ್ತದೆ.
3. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಏರಿದಾಗ ದೇಹದಲ್ಲಿನ ಕೊಬ್ಬು ಹೆಚ್ಚು ಜಾಸ್ತಿ ಬೇಗನೆ ಅಸ್ವಾಭಾವಿಕವಾಗಿ ಕರಗುತ್ತದೆ ಮತ್ತು ‘ಕೀಟೋನ್ ಬಾಡಿ’ ಎಂಬ ರಾಸಾಯನಿಕಗಳು ಹೆಚ್ಚು ಉತ್ಪತ್ತಿ ಯಾಗುತ್ತದೆ. ದೇಹದಲ್ಲಿನ ಕೀಟೋನ್‍ಗಳ ಸಾಂಧ್ರತೆ ಹೆಚ್ಚಾದಂತೆ ಸೋಂಕು ಉಲ್ಬಣವಾಗುತ್ತದೆ.
4. ಕೊರೋನಾ ಜ್ವರದ ಸಂದರ್ಭದಲ್ಲಿ ಮಧುಮೇಹಿಗಳು ಜಾಸ್ತಿ ಒತ್ತಡಕ್ಕೊಳಗಾದಾಗ, ದೇಹದಲ್ಲಿನ ಸಕ್ಕರೆ ಅಂಶವೂ ಏರುತ್ತಲೇ ಹೋಗುತ್ತದೆ. ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ ಸಮಚಿತ್ತದಿಂದ ಎಲ್ಲವನ್ನು ಎದುರಿಸಬೇಕು.
5. ಮಧುಮೇಹಿಗಳು ಕಾಲಕಾಲಕ್ಕೆ ಸೂಕ್ತವಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು. ಔಷಧಿಯನ್ನು ಕೂಡಾ ತುಂಬಾ ಜಾಗರೂಕತೆಯಿಂದ ಸೇವಿಸಬೇಕಾದ ಅನಿವಾರ್ಯತೆ ಇರುತ್ತದೆ. ಆಹಾರ, ನೀರು ಹಾಗೂ ಔಷಧಿಯ ಬಗ್ಗೆ ವಿಪರೀತ ಕಾಳಜಿ ವಹಿಸಲೇಬೇಕಾಗುತ್ತದೆ.
ಮಧುಮೇಹ ರೋಗ ಇರುವವರಲ್ಲಿ ಕೋವಿಡ್-19 ಸೋಂಕು ಹೆಚ್ಚು ತೀವ್ರವಾಗಿ ಮತ್ತು ವಿಭಿನ್ನವಾಗಿ ಕಾಡುತ್ತದೆ. ಬಹುತೇಕ ಮಧುಮೇಹಿರೋಗಿಗಳಲ್ಲಿ ಕೋವಿಡ್-19 ಸೋಂಕು ತಗುಲಿದಾಗ ಒಳರೋಗಿಗಳಾಗಿ ಚಿಕಿತ್ಸೆ ನೀಡುವ ಅನಿವಾರ್ಯತೆ ಇರುತ್ತದೆ. ಸಾವಿನ ಅನುಪಾತ ಕೂಡಾ ಮಧುಮೇಹಿ ರೋಗಿಗಳಲ್ಲಿ ಹೆಚ್ಚು ಎಂದು ಇತ್ತೀಚಿನ ಘಟನೆಗಳಿಂದ ಸಾಬೀತಾಗಿದೆ. ಇದಲ್ಲದೆ ಹೆಚ್ಚಿನ ಮಧುಮೇಹಿ ರೋಗಿ ಸ್ಥೂಲಕಾಯ ಹೊಂದಿದ್ದು, ಅಂತವರಲ್ಲಿ ರಕ್ಷಣಾ ವ್ಯವಸ್ಥೆ ಕೂಡಾ ಶಿಥಿಲಗೊಂಡಿರುತ್ತದೆ ಹಾಗೂ ಮಧುಮೇಹ ರೋಗದ ಜೊತೆಗೆ ಹೃದಯದ ತೊಂದರೆ, ಅಧಿಕ ರಕ್ತದೊತ್ತಡ ಮತ್ತು ಕಿಡ್ನಿ ತೊಂದರೆಗಳು ಕೂಡಾ ಜೊತೆ ಜೊತೆಗೆ ಇರುತ್ತದೆ.
ಇದಲ್ಲದೆ ಮಧುಮೇಹ ರೋಗಿಗಳಿಗೆ ವೈರಾಣು ಸೋಂಕು ತಗುಲಿದಾಗ, ಜೊತೆಗೆ ಬ್ಯಾಕ್ಟೀರಿಯಾ ಸೋಂಕು ತಗಲುವ ಸಾಧ್ಯತೆ ಇತರರಿಗಿಂತ ದುಪ್ಪಟ್ಟು ಇರುತ್ತದೆ, ಕೋವಿಡ್-19 ಸೋಂಕು ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುತ್ತದೆ. ಇದರ ಜೊತೆಗೆ ಮಧುಮೇಹಿಗಳಲ್ಲಿ ಬ್ಯಾಕ್ಟೀರಿಯಾ ಸೋಂಕು ಶ್ವಾಸಕೋಶಕ್ಕೆ ತಗಲಿ ನ್ಯೂಮೋನಿಯಾ ಉಂಟಾಗುವ ಸಾಧ್ಯತೆ ಇತರರಿಗಿಂತ ಎರಡು ಪಟ್ಟು ಜಾಸ್ತಿ ಇರುತ್ತದೆ. ಒಟ್ಟಿನಲ್ಲಿ ಅನಿಯಂತ್ರಿತ ಗ್ಲೂಕೋಸ್ ಪ್ರಮಾಣ, ಕ್ಷೀಣಿಸಿದ ದೇಹದ ರಕ್ಷಣಾ ವ್ಯವಸ್ಥೆ, ಸ್ಥೂಲಕಾಯ, ಜೊತೆಗಿರುವ ಇತರ ಕಾಯಿಲೆಗಳು ಇವೆಲ್ಲಾ ಒಟ್ಟು ಸೇರಿ ಮಧುಮೇಹಿ ರೋಗಿಗಳಲ್ಲಿ ಕೋವಿಡ್-19 ಸೋಂಕು ಹೆಚ್ಚು ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚು ಎಂದು ನುರಿತ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಮತ್ತು ಅಂಕಿಅಂಶಗಳಿಂದ ಈ ಅಭಿಪ್ರಾಯ ದೃಢೀಕರಿಸಲ್ಪಟ್ಟಿದೆ.
ಮಧುಮೇಹ ಎನ್ನುವುದು ನಮ್ಮ ಈಗಿನ ಜೀವನ ಶೈಲಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಜನಸಂಖ್ಯೆಯ ಪ್ರತಿ 10 ರಲ್ಲಿ ಒಬ್ಬರು ಮಧುಮೇಹ ರೋಗದಿಂದ ಬಳಲುತ್ತಿರುವುದು ವಾಸ್ತವದ ವಿಚಾರವಾಗಿದೆ. ಬಹಳ ವರ್ಷಗಳಿಂದ ಮಧುಮೇಹ ರೋಗದಿಂದ ಬಳಲುತ್ತಿರುವವರಿಗೆ ಮಧುಮೇಹದ ಜೊತೆಗೆ ಇಂತಹ ತೊಂದರೆಗಳು ಒಟ್ಟಿಗೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನರದ ತೊಂದರೆಗಳು, ಹೃದಯದ ತೊಂದರೆಗಳು, ಕಿಡ್ನಿ ವೈಫಲ್ಯ ಮತ್ತು ರಕ್ತನಾಳಗಳ ಪೆಡಸುವಿಕೆಯಿಂದ ಉಂಟಾಗುವ ರಕ್ತ ಪೂರೈಕೆಯ ತೊಂದರೆಗಳು ಹೀಗೆ ಎಲ್ಲವೂ ಒಟ್ಟು ಸೇರಿ ಅಂತಹಾ ವ್ಯಕ್ತಿಗಳ ರಕ್ಷಣಾ ವ್ಯವಸ್ಥೆ ಹಾಳಾಗಿ ಬಹುಬೇಗ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ.
ಇಂತಹ ವ್ಯಕ್ತಿಗಳಲ್ಲಿ ಬಹಳ ಜಾಗರೂಕರಾಗಿದ್ದು, ರಕ್ತದಲ್ಲಿನ ಗ್ಲೋಕೋಸ್ ಪ್ರಮಾಣವನ್ನು ನಿಯಂತ್ರಿಸಿ ಕಾಲಕಾಲಕ್ಕೆ ನಿಯಮಿತವಾದ ಆಹಾರ, ಔಷಧಿಸೇವೆ ಅತೀ ಅಗತ್ಯ. ಮನಸ್ಸಿನ ನೆಮ್ಮದಿ ಕೂಡಾ ಹಾಳಾಗದಂತೆ ನೋಡಿಕೊಳ್ಳಬೇಕು. ಮಾನಸಿಕ ನೆಮ್ಮದಿ ಹಾಳಾಗಿ ಮನಸ್ಸು ಒತ್ತಡಕ್ಕೆ ಒಳಗಾದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಏರುಪೇರಾಗಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕೋವಿಡ್-19 ಸೋಂಕು ಮಧುಮೇಹಿಗಳಲ್ಲಿ ಹೆಚ್ಚು ಉಗ್ರವಾಗಿ ವರ್ತಿಸುವುದರ ಕಾರಣದಿಂದ, ಮಧುಮೇಹಿಗಳು ಅತಿ ಹೆಚ್ಚು ಜಾಗರೂಕರಾಗಿ ಇರಬೇಕಾದ ಅನಿವಾರ್ಯತೆ ಇದೆ.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
Email: drmuraleemohan@gmail.com