ಕೊರೊನಾ ಸದ್ದಿನ ಜೊತೆಗೆ ಡೆಂಗೆ ಸೋಂಕು ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಲಿದೆ.ಕೊರೊನಾ ಹಾಗೂ ಡೆಂಗೆ ಒಂದಕ್ಕೊಂದು ಪೂರಕವಾಗಿರುವುದರಿಂದ ಡೆಂಗೆ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು.
ವೈರಾಣುಶಾಸ್ತ್ರಜ್ಞ ಶಾಹೀದ್ ಜಮೀಲ್ ಅವರು 2016 – 19 ರ ಅವಧಿಯ ದತ್ತಾಂಶಗಳನ್ನು ವಿಶ್ಲೇಷಿಸಿ, ಪ್ರತಿ ವರ್ಷ ದೇಶದಲ್ಲಿ 1 ರಿಂದ 2 ಲಕ್ಷ ಡೆಂಗೆ ಪ್ರಕರಣಗಳು ವರದಿಯಾಗುತ್ತಿವೆ ಎಂದಿದ್ದಾರೆ. ಸೋಂಕು ರೋಗ ಹರಡುವಿಕೆ ತಡೆಯುವ ರಾಷ್ಟ್ರೀಯ ಕಾರ್ಯಕ್ರಮದ ದತ್ತಾಂಶಗಳ ಪ್ರಕಾರ, 2019 ರಲ್ಲಿ 1,36,422 ಡೆಂಗೆ ಪ್ರಕರಣ ವರದಿಯಾಗಿದ್ದು, ಈ ಪೈಕಿ 132 ಜನರು ಮೃತಪಟ್ಟಿದ್ದಾರೆ. ಡೆಂಗೆ ವೈರಸ್ ದಕ್ಷಿಣ ಭಾರತದಲ್ಲಿ ವರ್ಷ ಪೂರ್ತಿ ಹಾಗೂ ಉತ್ತರ ಭಾರತದಲ್ಲಿ ಮುಂಗಾರು ಅವಧಿ ಮತ್ತು ಚಳಿಗಾಲದ ಆರಂಭದಲ್ಲಿ ಇರುತ್ತದೆ ಎಂದು ಜಮೀಲ್ ತಿಳಿಸಿದ್ದಾರೆ.
ಡೆಂಗೆ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು :
ಕೊರೊನಾ ಹಾಗೂ ಡೆಂಗೆ ಎರಡೂ ಸೋಂಕುಗಳಲ್ಲಿ ತೀವ್ರ ಜ್ವರ, ತಲೆನೋವು ಹಾಗೂ ಮೈ ಕೈ ನೋವು ಮೊದಲಾದ ಸಾಮಾನ್ಯ ಲಕ್ಷಣಗಳು ಗೊಚರಿಸುತ್ತವೆ. ಎರಡೂ ಒಂದಕ್ಕೊಂದು ಪೂರಕವಾಗಿರುವುದರಿಂದ ಡೆಂಗೆ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು ಎಂದು ಕೋಲ್ಕತ್ತದ ಎಮಿಟಿ ವಿಶ್ವವಿದ್ಯಾಲಯದ ವೈರಾಣುತಜ್ಞ ದೃಬಜ್ಯೋತಿ ಚಟ್ಟೋಪಾಧ್ಯಾಯ ತಿಳಿಸಿದ್ದರೆ. ‘ ಈ ಪರಿಸ್ಥಿತಿ ತುಂಬಾ ನಿರ್ಣಾಯಕವಾವಾಗಿರಲಿದೆ. ರೋಗ ಲಕ್ಷಣಗಳು ಒಂದನ್ನೊಂದು ಮೀರಿಸುತ್ತವೆ. ಏಕಕಾಲಕ್ಕೆ ಆಕ್ರಮಿಸುವ ಸೋಂಕುಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತವೆ. ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ‘ಎಂದು ಅವರು ವಿವರಿಸಿದ್ದಾರೆ.
ಪ್ರತಿ ಡೆಂಗೆ ಋತುವಿನಲ್ಲಿ ಆಸ್ಪತ್ರೆಗಳು ತುಂಬಿರುತ್ತವೆ. ಪರಿಸ್ಥಿತಿಯನ್ನು ನಿರ್ವಹಣೆ ಮಾಡುವುದೇ ಕಷ್ಟವಾಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಒಟ್ಟೊಟ್ಟಿಗೆ ಎರಡೆರಡು ಸೋಂಕುಗಳನ್ನು ನಿಭಾಯಿಸುವುದಾದರೂ ಹೇಗೆ? ಎರಡೂ ಸೋಂಕುಗಳ ರೋಗಲಕ್ಷಣಗಳು ಒಂದೇ ಇವೆ. ರೋಗಿಯೊಬ್ಬರಿಗೆ ಕೋವಿಡ್ ಬಂದಿದೆಯೋ ಅಥವಾ ಡೆಂಗೆ ಆವರಿಸಿದೆಯೇ ಎಂದು ಪ್ರತ್ಯೇಕಿಸಿ ನೋಡಲು ನಾವು ಸಜ್ಜಾಗಿದ್ದೇವೆಯೇ? ಎಂದು ವೈರಾಣುತಜ್ಞೆ ಉಪಾಸನಾ ರಾಯ್ ಪ್ರಶ್ನಿಸಿದ್ದಾರೆ. ಡೆಂಗೆ ಋತು ಸಂಪೂರ್ಣವಾಗಿ ಆರಂಭವಾಗುವ ಮೊದಲು ತುರ್ತಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡೆಂಗೆಜ್ವರ ಹರಡಲು ಮುಖ್ಯ ಕಾರಣಗಳು:
ಡೆಂಗೆ ಜ್ವರ ಆರ್ಬೋವೈರಸ್ ದ ನಾಲ್ಕು ಪ್ರಭೇದಗಳಿಂದ ಉಂಟಾಗುವುದು. ಈ ಕಾಯಿಲೆ ಈತನಕ ಮಾನವನ ಹೊರತು ಬೇರಾವ ಪ್ರಾಣಿಗಳಲ್ಲೂ ಕಂಡು ಬಂದಿಲ್ಲ. ಈ ರೋಗದ ಪ್ರಸಾರದಲ್ಲಿ ಏಡಿಸ್ ಈಜಿಪ್ತಿ ಪ್ರಮುಖ ಪಾತ್ರ ವಹಿಸುವುದು. ಮಿತಿ ಮೀರಿ ಹೆಚ್ಚುತ್ತಿರುವ ಜನಸಂಖ್ಯೆ, ಬೇಕಾಬಿಟ್ಟಿ ಬೆಳೆಯುತ್ತಿರುವ ಪಟ್ಟಣಗಳು, ಅವ್ಯವಸ್ಥಿತ ನೀರಿನ ನಿರ್ವಹಣೆ, ರಸ್ತೆಯಲ್ಲಿನ ಗುಂಡಿಗಳು, ನೀರು ಸಂಗ್ರಹವಾಗುವಂಥಹ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಪರಿಸರ ಮಲಿನಗೊಳಿಸುವ ಉದ್ಯಮಗಳು, ದೇಶ ವಿದೇಶಗಳ ನಡುವಿನ ಜನ ಸಂಚಾರ…….ಡೆಂಗೆಜ್ವರ ಹರಡಲು ಈವರೆಗೆ ತಿಳಿದು ಬಂದಿರುವ ಮುಖ್ಯ ಕಾರಣಗಳು.
ರೋಗದ ಅದಿಶಯನ ಕಾಲ 2 – 15 ದಿನಗಳು. ಆರಂಭಿಕ ಲಕ್ಷಣವೇ ಜ್ವರ. ಏಳೆಂಟು ದಿನಗಳವರೆಗೆ ಮುಂದುವರಿಯುವ ಜ್ವರದ ಪ್ರಮಾಣ 38 ಡಿಗ್ರಿ ಸೆಂಟಿಗ್ರೇಡ್ ದಿಂದ 40 ಡಿಗ್ರಿ ಸೆಂಟಿಗ್ರೇಡ್.ಹಗಲು ರಾತ್ರಿ ಎನ್ನದೇ ಒಂದೇ ಸವನೆ ಪೀಡಿಸುತ್ತದೆ. ಸಹಿಸಲಸಾಧ್ಯವಾದ ತಲೆನೋವು, ಮೈ ಕೈ ನೋವು, ಮೂಳೆ ಕೀಲುಗಳ ನೋವು, ಮಾಂಸಖಂಡಗಳ ನೋವು ಕಾಣಿಸಿಕೊಂಡು ಯಮಯಾತನೆ ನೀಡುತ್ತವೆ. ಹೊಟ್ಟೆ ನೋವು ಕಾಡುವುದು. ರೋಗಿ ನಿತ್ರಾಣನಾಗಿ ಹಾಸಿಗೆ ಹಿಡಿಯುತ್ತಾನೆ. ಮೂಳೆಗಳೆಲ್ಲಾ ಮುರಿದು ಹೋಗುತ್ತವೆಯೇನೋ ಎನ್ನುವಷ್ಟು ಪ್ರಮಾಣದಲ್ಲಿ ನೋವು ಕಾಣುವುದು ಇದರ ಲಕ್ಷಣ. ಹೀಗಾಗಿ ಈ ಕಾಯಿಲೆಗೆ “ಮೂಳೆ ಮುರಿವ ಜ್ವರ “ ಎಂದೂ ಹೇಳುತ್ತಾರೆ. ಕೆಲವರಲ್ಲಿ ರಕ್ತ ಸ್ರಾವ ಉಂಟಾಗುತ್ತದೆ. ಮತ್ತೆ ಕೆಲವರು ರಕ್ತರಸ ಇಂಗಿ ಆಘಾತಕ್ಕೊಳಗಾಗಿ ಅವರು ಸಾವಿನಂಚಿಗೆ ತಲುಪಬಹುದು. ಒಟ್ಟಾರೆ ಹೇಳಬೇಕೆಂದರೆ ಡೆಂಗೆ ಜ್ವರದ ಆಯಾಮ ಹಲವು ಸ್ತರಗಳಲ್ಲಿ ಪ್ರಕಟವಾಗುತ್ತವೆ.
ಸದ್ಯ ಇದಕ್ಕೆ ನಿಶ್ಚಿತ ಚಿಕಿತ್ಸೆಯಿಲ್ಲ. ಬರದಂತೆ ತಡೆಯಲು ಲಸಿಕೆಯೂ ಇಲ್ಲ. ತ್ರಾಸಿಗೆ ತಕ್ಕ ಚಿಕಿತ್ಸೆ ನೀಡುತ್ತ ಹೋಗಬೇಕಾಗುವುದು. ಬದುಕುಳಿಯಲು ಪ್ಲೇಟ್ ಲೆಟ್ ಪೂರಣ ಬೇಕೇ ಬೇಕು ಎಂಬ ಭಯ ಜನರಲ್ಲಿ ಬೇಡ. ಇದರ ಅವಶ್ಯಕತೆ ಅಪರೂಪದ ಪ್ರಕರಣಗಳಲ್ಲಿ ಮಾತ್ರ. ರೋಗಿ—ಸೊಳ್ಳೆ—ಆರೋಗ್ಯವಂತ ಈ ಮೂರು ಕೊಂಡಿಗಳ ಚಕ್ರದಲ್ಲೆಯೇ ಡೆಂಗೆ ಜ್ವರ ಸುತ್ತುತ್ತದೆ. ಈ ಸರಪಳಿಯ ಕೊಂಡಿಗಳು ಕಳಚಿಕೊಂಡಾಗಲೇ ಈ ರೋಗಕ್ಕೆ ಕಡಿವಾಣ ಹಾಕಬಹುದು. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಡೆಂಗೆ ಈಗಾಗಲೇ 1290 ಮಂದಿಯನ್ನು ಬಾಧಿಸಿದೆ. 638 ಚಿಕೂನಗುನ್ಯಾ ಪ್ರಕರಣಗಳು ವರದಿಯಾಗಿವೆ. ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಪಸ್ ಈಜಿಪ್ತಿ ಸೊಳ್ಳೆಗಳಿಂದ ಹರಡುವ ಡೆಂಗೆ ಈಗ ಎಲ್ಲ ಕಾಲದಲ್ಲೂ ಕಾಡಲಾರಂಭಿಸಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ಜನ ಹೆಚ್ಚು ದಿನ ನೀರು ಸಂಗ್ರಹಿಸಿಡುತ್ತಾರೆ. ಅಂತವರು ಸಂಗ್ರಹಿಸಿದ ನೀರಿನ ಮೇಲೆ ಮುಚ್ಚಳ ಮುಚ್ಚಿ, ಸಕಾಲದಲ್ಲಿ ನೀರು ಬದಲಿಸಿ ಸೊಳ್ಳೆಗಳು ಉಗಮವಾಗದಂತೆ ಎಚ್ಚರ ವಹಿಸಬೇಕು.
ಜ್ವರ, ಕೆಮ್ಮು ಅಂದ್ರೆ ಕೊರೊನಾ ಅನ್ನುವ ಸ್ಥಿತಿ ನಿರ್ಮಾಣವಾಗಿದೆ:
ಕೋವಿಡ್ 19 ಹೆಮ್ಮಾರಿಯ ಈ ಕಾಲದಲ್ಲಿ ಜ್ವರ, ಕೆಮ್ಮು ಅಂದ್ರೆ ಕೊರೊನಾ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಈಗ ಕೋವಿಡ್ ಸೋಂಕಿನ ವೇಗ, ಹರವು ಮೊದಲಿಗಿಂತಲೂ ಹೆಚ್ಚು. ಮಳೆಗಾಲದಲ್ಲಿ ಡೆಂಗೆ ಹಾವಳಿಯೂ ಹೆಚ್ಚುವುದು ಸರ್ವೇ ಸಾಮಾನ್ಯ. ಇಂಥ ಸಂದಿಗ್ಧ ಸಂದರ್ಭದಲ್ಲಿ ಈ ಎರಡೂ ಮಾರಕ ರೋಗಗಳ ಜುಗಲ್ ಬಂದಿ ಇನ್ನೆಂಥ ಭಯ, ಭೀತಿ, ಆತಂಕ ಸೃಷ್ಟಿಗೊಳ್ಳುವುದೋ! ಯಾವುದೇ ಕಾಯಿಲೆಯನ್ನು ಯಶಸ್ವಿಯಾಗಿ ಎದುರಿಸಲು ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಪ್ರಮುಖವಾದದ್ದು. ಸಕಾರಾತ್ಮಕ ಭಾವನೆಗಳಾದ ಧೈರ್ಯ, ಮುನ್ನೆಚ್ಚರಿಕೆ, ಸಂತಸ, ಆತ್ಮವಿಶ್ವಾಸದಂತಹವು ನಮ್ಮ
“ಪ್ರಕ್ಷಾಲನಾತಹಿ ಪಂಕಸ್ಯ ದೂರದ ಸ್ಪರ್ಶನಂ ವರಂ” ಮುಂಜಾಗ್ರತೆಯೇ ಮದ್ದು ಎಂಬ ಪ್ರಬಲ ಅಸ್ತ್ರವೇ ಇವೆರಡೂ ರೋಗಗಳಲ್ಲಿ ಮುಖ್ಯ.ಸೊಳ್ಳೆಗಳನ್ನು ನಿಯಂತ್ರಿಸುವುದು ಹಾಗೂ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು ,ಪರಿಸರ ನೈರ್ಮಲ್ಯ ಕಾಪಾಡುವುದು….ಡೆಂಗೆ ಜ್ವರದಿಂದ ರಕ್ಷಿಸಿಕೊಳ್ಳುವಲ್ಲಿ ಅವಶ್ಯವಾದರೆ, ಮನೆಯೇ ಮಂತ್ರಾಲಯ ಎಂದುಕೊಳ್ಳುವುದು, ಮನೆಯಲ್ಲಿಯೇ ಸುರಕ್ಷಿತವಾಗಿರುವುದು, ಸಾಮಾಜಿಕ ಅಂತರ, ದೈಹಿಕ ಅಂತರ ಕಾಯ್ದುಕೊಳ್ಳುವುದು, ಮನೆಯಿಂದ ಹೊರಗೆ ಮಾಸ್ಕ ಧರಿಸದೇ ಹೋಗದೇ ಇರುವುದು,ಮೇಲಿಂದ ಮೇಲೆ ಸೋಪು ನೀರಿನಿಂದ ಕೈ ತೊಳೆಯುವುದು, ಉತ್ತಮ ಆಹಾರ ಸೇವಿಸುವುದು, ದುಶ್ಚಟಗಳಿಂದ ದೂರ ಇರುವುದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಉತ್ತಮ ರೋಗಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವದು ಕೋವಿಡ್ ಕಡಿವಾಣದಲ್ಲಿ ಮುಖ್ಯ. ಅಜಾಗರುಕತೆಯ ಸುಳಿವು ಎಲ್ಲೂ ಸುಳಿಯಬಾರದು. ಮುಂಜಾಗ್ರತಾ ಕ್ರಮಗಳು ಅವರ ಸಲುವಾಗಿ, ಇವರ ಸಲುವಾಗಿ ಎಂಬ ಸಬೂಬು ಹೇಳದೇ ನಮ್ಮೆಲ್ಲರ ಸಲುವಾಗಿ ಎಂಬುದನ್ನು ಮರೆಯುವಂತಿಲ್ಲ! ನೆನಪಿಡಿ ಮರೆತರೆ ಅಪಾಯ ತಪ್ಪಿದ್ದಲ್ಲ.
ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು
ಕ್ಯಾಲಕೊಂಡ ಆಸ್ಪತ್ರೆ , ಬಾದಾಮಿ. 587201
ಜಿಲ್ಲಾ: ಬಾಗಲಕೋಟೆ Mob:9448036207