Vydyaloka

ಕೊರೋನಾ -ಪ್ರಕೃತಿಗೆ ಆನಂದಮಯ ಕಾಲ, ಮಾನವನಿಗೆ ಅವಲೋಕಿಸುವ ಕಾಲ

ಕೊರೋನಾ -ಪ್ರಕೃತಿಗೆ ಆನಂದಮಯ ಕಾಲ, ಮಾನವನಿಗೆ ಅವಲೋಕಿಸುವ ಕಾಲ.ನಮ್ಮ ಗುರಿ, ಸಂಕಲ್ಪ ಮತ್ತು ಜೀವನ ಶೈಲಿ ಬದಲಾಯಿಸಬೇಕಾದ ಕಾಲಬಂದಿದೆ. 

ಪೃಥ್ವಿ ಕೆಂಡವಾಗಿದೆ,
ಆಕಾಶ ಬಿಸಿಯಾಗಿದೆ,
ವಾಯು ಮಾಲಿನ್ಯವಾಗಿದೆ,
ಭೂಗರ್ಭ ಬರಿದಾಗುತ್ತಿದೆ
ಅರಣ್ಯ ನಾಶವಾಗಿದೆ,
ಸುನಾಮಿ ಬಂದು ಹೋಗಿದೆ ;
ಕೊರೋನಾ ಬಂದಾಗಿದೆ,
ಮನುಷ್ಯನ ಬುದ್ದಿಗೆ ಏನಾಗಿದೆ !?

ಕೊರೋನಾ ಸೋಂಕಿನ ಪರಿಣಾಮವಾಗಿ ಜಗತ್ತಿನ ಎಲ್ಲಾ ಪೂಜಾಮಂದಿರಗಳು ಮುಚ್ಚಿವೆ. ಅಂತರಾಷ್ಟ್ರೀಯ ಮಟ್ಟದ ದೇವರಿಂದ ಹಿಡಿದು, ಸ್ಥಳೀಯ ದೇವರುಗಳಿಗೂ ದಿಗ್ಬಂಧನ. ಮಾನವರಿಗೂ ಸಹ ದಿಗ್ಬಂಧನ. ಪೂಜಾರಿಗಳಿಗೆ ವಿಶ್ರಾಂತಿ. ಆದರೆ ಪ್ರಕೃತಿ ದೇವಾಲಯ ತೆರೆದಿದೆ. ಪ್ರಕೃತಿ ಮಾತೆಯ ಪೂಜಿಸುವುದೇ ನಮಗಿರುವ ದಾರಿ. ತಪ್ಪಿದ್ದರೆ ಕೊನೆಗಾಲ ತಪ್ಪಿದ್ದಲ್ಲ.

ಮಾನವ ಪೃಕೃತಿಯ ಭಾಗ. ಪ್ರಕೃತಿ ಮಾತೆಯ ಸೂಕ್ಷ್ಮವನ್ನು ಅರಿತು ನಾವು ಬದುಕಬೇಕಿದೆ. ಏಕೆಂದರೆ ಕೊರೋನಾ ಜಗತ್ತಿನ ಯಾವುದೇ ಪ್ರಾಣಿ ಪಕ್ಷಿಗಳಿಗೆ ಅಥವಾ ಇತರ ಜೀವರಾಶಿಗಳಿಗೆ ಅಂಟಿದ ವರದಿಯಾಗಿಲ್ಲ. ಕೊರೋನಾದ ಕಾಟ ಮನುಷ್ಯನಿಗೆ ಮಾತ್ರ. ಏಕೆಂದರೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಹೊಂದಾಣಿಕೆಯಿಲ್ಲ.

ಆಧುನಿಕ ಜೀವನ ಶೈಲಿಯಿಂದ ಮನುಷ್ಯ ಈಗ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತದ್ದಾನೆ. ನಮ್ಮ ಜೀವನ ಶೈಲಿ ಉತ್ತಮವಾಗಿಲ್ಲ. ಉತ್ತಮ ಜೀವನ ಶೈಲಿಯೆಂದರೆ ಪ್ರಕೃತಿ ಹೇಳಿದಂತೆ ಬದುಕುವುದು. ಪ್ರಕೃತಿ ಹೇಗಿದೆಯೋ ಹಾಗೆ ಬದುಕುವುದು ಮತ್ತು ಅದರ ವ್ಯವಹಾರದಲ್ಲಿ ಮಧ್ಯ ಪ್ರವೇಶಿಸಿದೇ ಇರುವುದು ಏಕೆಂದರೆ ನಾವು ಪ್ರಕೃತಿಯ ಒಂದು ಭಾಗವಾಗಿದ್ದೇವೆ. ಪ್ರಕೃತಿಗೆ ಮನುಷ್ಯನ ಅಗತ್ಯವಿಲ್ಲ. ಆದರೆ ಮನುಷ್ಯನಿಗೆ ಪ್ರಕೃತಿ ಅನಿವಾರ್ಯ. ಇದನ್ನು ಅರಿತು ಬಾಳಬೇಕಿದೆ.

ಜಗತ್ತಿನ ಆರು ಸ್ಥಳಗಳಲ್ಲಿ ಶತಾಯುಷಿಗಳನ್ನು ಕಾಣಬಹುದೆಂದು ಸಮೀಕ್ಷೆಯೊಂದು ತಿಳಿಸುತ್ತದೆ. ಉದಾಹರಣೆಗೆ ಹಿಮಾಲಯದ ತಪ್ಪಲಿನಲ್ಲಿರುವ ಉತ್ತರ ಪಾಕಿಸ್ತಾನದಲ್ಲಿರುವ ಹುಂಜಾ ಸಮುದಾಯದ ಜನರ ಆಯಸ್ಸು ನೂರ ಹತ್ತರಿಂದ ನೂರಾ ಇಪ್ಪತ್ತೆಂದು ವರದಿಯಾಗಿದೆ. ಈ ಸುಮುದಾಯದ ದೀರ್ಘಾಯಸ್ಸಿನ ಗುಟ್ಟೇ ಅವರ ಜೀವನ ಶೈಲಿ. ಇತ್ತೀಚೆಗೆ ಕೊರೋನಾ ಬಂದನಂತರ ಕೇರಳದ ತೊಂಬತ್ತಮೂರರ ಅಜ್ಜ, ಎಂಬತ್ತೆಂಟರ ಅಜ್ಜಿಗೆ ಕೊರೋನಾ ಸೋಂಕಿತ್ತು. ವಯೋವೃದ್ಧರು ಕೊರೋನಾ ಸೋಂಕಿತರಾದರೆ ಬದುಕುಳಿಯುವುದು ಕಷ್ಟವೆಂಬುದು ವೈದ್ಯರ ಅಭಿಮತ. ಆದರೆ ಕೇರಳದ ಈ ಅಜ್ಜ ಅಜ್ಜಿ ಇಪ್ಪತ್ತೈದು ದಿನಗಳ ಕೊರೋನಾ ವಿರುದ್ದದ ಹೋರಾಟದ ನಂತರ ಬದುಕುಳಿದಿದ್ದು, ಚಿಕಿತ್ಸೆಗಿಂತ ಹೆಚ್ಚಾಗಿ ಅವರ ಜೀವನ ಶೈಲಿ ಹಾಗೂ ಆರೋಗ್ಯಕರ ಆಹಾರ ಪದ್ದತಿಯೇ ಕಾರಣವೆಂದು ತಿಳಿದು ಬಂದಿದೆ.

ಮನುಷ್ಯನ ಎಲ್ಲಾ ಆಸೆಗಳನ್ನು ಈಡೇರಿಸಲು ಅವಕಾಶ ಈ ಭೂಮಿ ಮೇಲಿದೆ, ಆದರೆ ದುರಾಸೆಯನ್ನಲ್ಲ ಎಂದರು ಮಹಾತ್ಮಾ ಗಾಂಧೀಜಿ. ಪ್ರಪಂಚದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರಕೃತಿಯ ಜೀವಿಗಳ ಒಡಲಿನಿಂದ ಹುಟ್ಟಿಬಂದಿರುವ ಕೊರೋನಾ ಎಂಬ ವೈರಾಣು ಇದಕ್ಕೆ ಕಾರಣವಾಗಿರಬಹುದು. ಸದರಿ ಸಮಸ್ಯಗೆ ಮನುಷ್ಯನೆ ಪರಿಹಾರ ಕಂಡುಕೊಳ್ಳಲು ಸರ್ವಪ್ರಯತ್ನ ಮಾಡುತ್ತಿದ್ದಾನೆ. ಈ ಸಮಸ್ಯೆಯ ಬಗ್ಗೆ ತೆರೆದ ಹೃದಯದಿಂದ ಯೋಚಿಸೋಣಾ, ಕೊರೋನಾವನ್ನು ತೊಲಗಿಸೋಣ.

ಪ್ರಾಣಿಗಳೆಲ್ಲಾ ಹೊರಗೆ, ಮನುಷ್ಯ ಮಾತ್ರ ಒಳಗೆ, ಎಂಥಹ ಪರಿಸ್ಥಿತಿ!! ಪ್ರಕೃತಿ ಸ್ವಚ್ಛವಾಗುತ್ತಿದೆ. ಅರಣ್ಯನಾಶ ಕಡಿಮೆಯಾಗಿದೆ. ವಾಯು ಮಾಲಿನ್ಯರಹಿತವಾಗಿದೆ. ನದಿಗಳಿಗೆ ಜೀವ ಬಂದಿದೆ. ಒಟ್ಟಾರೆ ಪ್ರಕೃತಿಗೆ ಆನಂದಮಯ ಕಾಲ, ಮಾನವನಿಗೆ ಅವಲೋಕಿಸುವ ಕಾಲ. ಮಾನವನಿಗೆ ಈಗ ಮನೆಯೇ ಮಂತ್ರಾಲಯವಾಗಿದೆ, ಪ್ರಕೃತಿಯೇ ದೇವಾಲಯವಾಗಿದೆ.

ಸುನಾಮಿ ಬಂದ್ಹೋಗಿದೆ. ಸುನಾಮಿ ಬಂದಾಗ ನಮಗಿಂತ ಹೆಚ್ಚಾಗಿ ಪ್ರಾಣಿ ಪಕ್ಷಿಗಳು ಸುರಕ್ಷಿತವಾಗಿದ್ದವು. ಆಗಲೂ ನಾವು ಎಚ್ಚಿತ್ತುಕೊಳ್ಳಲಿಲ್ಲ. ಈಗ ಕೊರೋನಾ ಬಂದಿದೆ. ಪ್ರಕೃತಿ ನಮಗೆ ವಿಶ್ರಾಂತಿ ನೀಡಿದೆ. ನಾವು ಗಟ್ಟಿಯಾಗಬೇಕಾಗಿದೆ ಮತ್ತು ಬದಲಾಗಬೇಕಾಗಿದೆ. ನಮ್ಮ ಗುರಿ, ಸಂಕಲ್ಪ ಮತ್ತು ಜೀವನ ಶೈಲಿ ಬದಲಾಯಿಸಬೇಕಾದ ಕಾಲಬಂದಿದೆ. ಇದು ಬದಲಾವಣೆಯ ಪರ್ವ. ಬನ್ನಿ ಬದಲಾಗೋಣ. ಏಕೆಂದರೆ ಬದಲಾವಣೆ ಜಗತ್ತಿನ ನಿಯಮ.

ಪ್ರಕೃತಿಯೇ ದೇವಿ ನಮಗಿಂದು ಪೂಜಿಸುವ ಬಾರಾ ಎನ್ನಬೇಕಿದೆ.
ಇದು ನನ್ನ ಕಳಕಳಿ.

ಡಾ. ಅಮರ್‌ನಾಥ್‌
ಕನ್ಸಲ್ಟೆಂಟ್ – ಆಮ್‍ಕೀ ಎಜುಕೇಷನ್, ಕ್ಯಾರಿಯರ್ ಗೈಡೆನ್ಸ್ ಸೆಂಟರ್
ನಿರ್ದೇಶಕರು, ಸಿಗ್ಫಾ (SIGFA) ಸಲ್ಯೂಷನ್ಸ್
E-Mail: amarn41@gmail.com
ದೂ.: 7353685241    Whatsapp : 9108937631

Share this: