Vydyaloka

ಕೊರೋನಾ ಪೀಡಿತ ದೇಶಗಳಲ್ಲಿ 2ನೇ ಸ್ಥಾನಕ್ಕೆ ಏರಿದ ಭಾರತ !!

ಕೊರೋನಾ ಪೀಡಿತ ದೇಶಗಳಲ್ಲಿ 2ನೇ ಸ್ಥಾನಕ್ಕೆ ಏರಿದ ಭಾರತ !! ವಿಶ್ವದ ಇತರ ಕೊರೊನಾ ಹಾವಳಿಯ ದೇಶಗಳಿಗೆ ಹೋಲಿಸಿದರೆ, ಚೇತರಿಕೆ ಪ್ರಮಾಣ ಜಾಸ್ತಿ ಮತ್ತು ಸಾವಿನ ಪ್ರಮಾಣ ಭಾರತದಲ್ಲೇ ಕಮ್ಮಿ. ದೈನಂದಿನ ಪರೀಕ್ಷೆಯನ್ನು ಅತಿ ಹೆಚ್ಚು ವರದಿ ಮಾಡಿದ ಕೆಲವೇ ದೇಶಗಳಲ್ಲಿ ಇದೀಗ ಭಾರತವೂ ಒಂದು.

ಕಳೆದ 24 ಗಂಟೆಗಳಲ್ಲಿ ಭಾರತವು ದಾಖಲೆಯ 7,20,362 ಕರೋನ ವೈರಸ್ ಪರೀಕ್ಷೆಗಳನ್ನು ನಡೆಸಿದೆ. ಇದರಿಂದ ಪರೀಕ್ಷಾ ಪ್ರಮಾಣ ಇದೀಗ 5 ಕೋಟಿಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ (ಸೆಪ್ಟೆಂಬರ್ 7, 2020) ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಬಹಿರಂಗಗೊಂಡಿದೆ. ದೈನಂದಿನ ಪರೀಕ್ಷೆಯನ್ನು ಅತಿ ಹೆಚ್ಚು ವರದಿ ಮಾಡಿದ ಕೆಲವೇ ದೇಶಗಳಲ್ಲಿ ಇದೀಗ ಭಾರತವೂ ಒಂದು. ನಮ್ಮಲ್ಲಿ ಇದೀಗ ದೈನಂದಿನ ಪರೀಕ್ಷಾ ಸಾಮಥ್ರ್ಯವು 11.70 ಲಕ್ಷಗಳನ್ನು ದಾಟಿದೆ. ‘ದೈನಂದಿನ ಪರೀಕ್ಷಾ ಸರಾಸರಿಯು ಆಗಸ್ಟ್ 3 ನೇ ವಾರದಲ್ಲಿ ದಿನಕ್ಕೆ ಸುಮಾರು 7 ಲಕ್ಷ ಪರೀಕ್ಷೆಗಳಿಂದ ಸೆಪ್ಟೆಂಬರ್ 1 ನೇ ವಾರದಲ್ಲಿ ದಿನಕ್ಕೆ 10 ಲಕ್ಷ ಪರೀಕ್ಷೆಗಳಿಗೆ ನಿರಂತರವಾಗಿ ಏರಿಕೆಯಾಗಿದೆ” ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತವು ಕಳೆದ 24 ಗಂಟೆಗಳಲ್ಲಿ 90,802 ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಯುಎಸ್ ನಂತರ ವಿಶ್ವದಾದ್ಯಂತ ಎರಡನೇ ಅತಿ ಹೆಚ್ಚು ಕೊರೋನಾ ಪೀಡಿತ ದೇಶವಾಯಿತು. ಸೋಮವಾರ ಬೆಳಿಗ್ಗೆ ಬಿಡುಗಡೆಯಾದ ಆರೋಗ್ಯ ಬುಲೆಟಿನ್ ಪ್ರಕಾರ, ಭಾರತದಲ್ಲಿ 71,642 ಕೊರೋನಾ ಸಂಬಂಧಿತ ಸಾವು ನೋವುಗಳು ಸೇರಿದಂತೆ 42,04,613 ಕರೋನವೈರಸ್ ಸೋಂಕುಗಳು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 1,016 ಜನರು ಭಾರತದಾದ್ಯಂತ ಕರೋನವೈರಸ್‍ಗೆ ಬಲಿಯಾಗಿದ್ದಾರೆ ಮತ್ತು ಕೋವಿಡ್-19 ಪ್ರಕರಣದ ಸಾವಿನ ಪ್ರಮಾಣ ಶೇಕಡಾ 1.70 ಕ್ಕೆ ತಲುಪಿದೆ. ದೇಶಾದ್ಯಂತ ಈಗ 8,82,542 ಸಕ್ರಿಯ ಕೋರೋನಾ ಪ್ರಕರಣಗಳಿವೆ. ಚೇತರಿಸಿಕೊಂಡವರ ಸಂಖ್ಯೆ 32,50,429 ಕ್ಕೆ ತಲುಪಿದೆ. ಇದರಿಂದ ರಾಷ್ಟ್ರೀಯ ಚೇತರಿಕೆ ದರ ಶೇಕಡಾ 77.30 ರಷ್ಟಾಗಿದೆ.

ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಹರಡುತ್ತಿದೆ ಸೋಂಕಿನ ಪ್ರಮಾಣ

ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಭಾರೀ ಸ್ವರೂಪ ಪಡೆದುಕೊಂಡಿದ್ದು ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಸೋಂಕು ಪೀಡಿತ ಪ್ರಕರಣಗಳು ಪತ್ತೆಯಾಗತೊಡಗಿವೆ. ಇದರ ಪರಿಣಾಮವೇ ಭಾರತವು ಅತೀ ಹೆಚ್ಚು ಸೋಂಕಿತರನ್ನು ಹೊಂದಿದ್ದ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಬ್ರೆಜಿಲ್‍ಅನ್ನು ಹಿಂದಿಕ್ಕಿದ್ದು. ಮೊದಲ ಸ್ಥಾನದಲ್ಲಿರುವ ಅಮೇರಿಕದಲ್ಲಿ ಕೊರೋನಾ ಸೋಂಕಿತರು 6,460,250ರಷ್ಟಿದ್ದಾರೆ. ಇದೀಗ ಎರಡನೇ ಸ್ಥಾನಕ್ಕೇರಿರುವ ಭಾರತದ ಸೋಂಕಿತರ ಸಂಖ್ಯೆ 42,04,614ಕ್ಕೆಏರಿಕೆಯಾಗಿದೆ. ಮೂರನೇ ಸ್ಥಾನ ಪಡೆದಿರುವ ಬ್ರೆಜಿಲ್ ನಲ್ಲಿ 41,37,606ಜನಕೊರೊನಾ ಸೋಂಕಿತರಿದ್ದಾರೆ. ನಮ್ಮ ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು.

ಆಗಸ್ಟ್ 19ರ ನಂತರ ಪ್ರತಿದಿನ ಸುಮಾರು70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಆಗಸ್ಟ್ 26ರಿಂದ 75 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈಗ ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಸೆಪ್ಟೆಂಬರ್ 2ರಂದು ದಾಖಲೆಯ 83,883 ಪ್ರಕರಣಗಳು, ಸೆಪ್ಟೆಂಬರ್ 3ರಂದು 83,341 ಪ್ರಕರಣಗಳು ಹಾಗೂ ಸೆಪ್ಟೆಂಬರ್ 4ರಂದು 86,432 ಪ್ರಕರಣಗಳು ಪತ್ತೆಯಾಗಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಲು ಆರಂಭಿಸಿವೆ. ಸೆಪ್ಟೆಂಬರ್ 5ರಂದು 90,633 ಪ್ರಕರಣಗಳು ಕಂಡುಬಂದಿದ್ದವು. ಈಗ ಸೆಪ್ಟೆಂಬರ್ 6ರಂದು 90,802 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 42,04,614ಕ್ಕೆ ಏರಿಕೆಯಾಗಿದೆ.

ಇದರ ಮಧ್ಯೆಯೂ ಸಮಾಧಾನ ನೀಡುವ ಅಂಶ..!

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಅದೇ ವೇಗದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಸಮಾಧಾನಕರ ಅಂಶ. ಇದರ ಜೊತೆಗೆ ಕೊರೊನಾ ಸಾವಿನ ಪ್ರಮಾಣವೂ ವಿಶ್ವದಲ್ಲೇ ಅತಿಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೊನಾ ಚೇತರಿಕೆ ಪ್ರಮಾಣ ಶೇ. 77.32. ಚೇತರಿಕೆಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಾ ಜುಲೈಅಂತ್ಯದ ವೇಳೆ ಐವತ್ತು ಸಾವಿರ ಗಡಿದಾಡಿದೆ, ಇನ್ನು ಆಗಸ್ಟ್  ಅಂತ್ಯದ ವೇಳೆಗೆ ಬಹುತೇಕ 75ಸಾವಿರ ಸನಿಹಕ್ಕೆ ಬಂದು ನಿಂತಿದೆ. “ಒಟ್ಟಾರೆಯಾಗಿ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.77.32ಕ್ಕೆ ಏರಿಕೆಯಾಗಿದೆ”ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ ವಿಶ್ವದ ಇತರ ಕೊರೊನಾ ಹಾವಳಿಯ ದೇಶಗಳಿಗೆ ಹೋಲಿಸಿದರೆ, ಚೇತರಿಕೆ ಪ್ರಮಾಣ ಜಾಸ್ತಿ ಮತ್ತು ಸಾವಿನ ಪ್ರಮಾಣ ಭಾರತದಲ್ಲೇ ಕಮ್ಮಿ. ಕೊರೊನಾ ಹಾವಳಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿಕೊಂಡಿದೆ.

ಕರ್ನಾಟಕದಲ್ಲಿ ಹೇಗಿದೆ ಚೇತರಿಕೆ ಪ್ರಮಾಣ?

ಇನ್ನು, ಕರ್ನಾಟಕದಲ್ಲಿ ಸತತವಾಗಿ ಕೆಲವು ದಿನಗಳಿಂದ, ಒಂಬತ್ತು ಸಾವಿರಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಸತತವಾಗಿ ಸುಮಾರು ಒಂಬತ್ತು ಸಾವಿರ ಸೋಂಕಿತರು ದಿನವೊಂದಕ್ಕೆ ಗುಣಮುಖರಾಗುತ್ತಿದ್ದಾರೆ. ಕಳೆದ ಭಾನುವಾರ 9,575 ರೋಗಿಗಳು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇದು, ಇದುವರೆಗಿನ ಅತಿಹೆಚ್ಚು ಸಂಖ್ಯೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 6,393 ಜನ ಮೃತ ಪಟ್ಟಿದ್ದಾರೆ. ದಾಖಲೆಯಚೇತರಿಕೆ, 30 ಲಕ್ಷ ದಾಟಿದ ಗುಣಮುಖರು. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,98,551, ಇದರಲ್ಲಿ ಗುಣಮುಖರಾದವರ ಸಂಖ್ಯೆ 2,92,873 ಮತ್ತು ಸಕ್ರಿಯ ಪ್ರಕರಣಗಳು 99,266. ಇದರಲ್ಲಿ ಬೆಂಗಳೂರು ನಗರ ಒಂದರಲ್ಲೇ ಸುಮಾರು ನಲವತ್ತು ಸಾವಿರ, ಬಳ್ಳಾರಿ, ಬೆಳಗಾವಿ ಯಲ್ಲಿ ನಾಲ್ಕು ಸಾವಿರ ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆಯಾಗಿ, ದಾಖಲೆ ಪ್ರಮಾಣದಲ್ಲಿ ಸೋಂಕಿತರು ಚೇತರಿಸಿಕೊಳ್ಳುತ್ತಿರುವುದು ನಿಟ್ಟುಸಿರು ಬಿಡುವಂತ ವಿಚಾರವಾಗಿದೆ.

Share this: