Vydyaloka

ಕೊರೋನಾ ಗುಣಮುಖರು ಮತ್ತೆ ಸೋಂಕಿಗೊಳಗಾದರೆ ಅಪಾಯ ಹೆಚ್ಚು!

ಕೊರೋನಾ ಗುಣಮುಖರು ಮತ್ತೆ ಸೋಂಕಿಗೊಳಗಾದರೆ ಅಪಾಯ ಹೆಚ್ಚು! ಮುಂದಿನ ವರ್ಷದ ಆರಂಭದಲ್ಲಿ ವಿಶ್ವದೆಲ್ಲೆಡೆ ಕೊರೋನಾ ಲಸಿಕೆ ಜನಸಾಮಾನ್ಯರಿಗೆ ಸಿಗಲಿದೆ ಎಂದು ಹೆಳಲಾಗುತ್ತಿದೆ. ಆದರೆ ಮಕ್ಕಳ ಕೊರೋನಾ ಲಸಿಕೆಗೆ ಮತ್ತಷ್ಟು ಸಮಯ ಕಾಯಬೇಕು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಒಮ್ಮೆ ಕೊರೋನಾ ಸೋಂಕಿಗೊಳಗಾಗಿ ಗುಣ ಹೊಂದಿದವರಿಗೆ ಮತ್ತೆ ಕೂಡಾ ಕೊರೋನಾ ಬಾಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಈಗಾಗಲೇ ಸಾಬೀತಾಗಿದೆ. ಆದರೆ ಎರಡನೇ ಬಾರಿ ಸೋಂಕು ತಗುಲಿದಾಗ ಆಗ ರೋಗದ ಲಕ್ಷಣಗಳು ಗಂಭೀರವಾಗಿರುತ್ತವೆ ಎನ್ನುವ ಆತಂಕಕಾರಿ ವಿಚಾರವೂ ಈ ಸಮಯದಲ್ಲಿ ಬೆಳಕಿಗೆ ಬಂದಿದೆ. ಮೊದಲಬಾರಿಗೆ ಸೋಂಕು ತಗುಲಿದಾಗ ಎದುರಿಸಿದ ಆರೋಗ್ಯ ಸಮಸ್ಯೆಗಳಿಗಿಂತಲೂ ಎರಡನೇ ಬಾರಿ ಸೋಂಕು ತಗುಲಿದಾಗ ಉಂಟಾಗುವ ರೋಗದ ಲಕ್ಷಣಗಳು ಮತ್ತಷ್ಟು ಅಪಾಯಕಾರಿಯಾಗಿರುತ್ತವೆ ಎಂದು ಮುಂಬಯಿಯ ಎರಡು ಆಸ್ಪತ್ರೆಗಳು ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ಹಾಗಾಗಿ ಕೊರೋನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರು ಮತ್ತಷ್ಟು ಜಾಗೃತರಾಗಿ ಇರಬೇಕಾದ್ದು ಅತೀ ಅಗತ್ಯ. ಇಲ್ಲದಿದ್ದರೆ ಮೊದಲ ಬಾರಿಗಿಂತಲೂ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಕುರಿತು ಲ್ಯಾನ್ಸೆಟ್ ವೆಬ್‍ಸೈಟಿನಲ್ಲಿ ಪ್ರಕಟವಾದ ಲೇಖನದಲ್ಲಿ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗೆ ಮೊದಲು ಸೋಂಕು ತಗುಲಿದಾಗ ರೋಗದ ಲಕ್ಷಣಗಳು ಇರಲಿಲ್ಲ. ಆದರೆ ಎರಡನೇ ಬಾರಿ ಸೋಂಕು ತಗುಲಿದಾಗ ಪರಿಸ್ಥಿತಿ ಭಿನ್ನವಾಗಿತ್ತು ಎಂದು ಬರೆಯಲಾಗಿದೆ. ಕೊರೋನಾ ದಿನದಿಂದ ದಿನಕ್ಕೆ ಏರುಗತಿಯಲ್ಲಿ ವ್ಯಾಪಿಸಿದ್ದರೂ ಕೂಡಾ ಜನರು ಇನ್ನೂ ಎಚ್ಚೆತ್ತುಕೊಂಡಂತಿಲ್ಲ. ಹಾಗಾಗಿ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹೇಳಲಾಗಿದೆ.

ಮಕ್ಕಳ ಕೊರೋನಾ ಲಸಿಕೆಗೆ ಬೇಕು ಇನ್ನಷ್ಟು ಸಮಯ!

ಮುಂದಿನ ವರ್ಷದ ಆರಂಭದಲ್ಲಿ ವಿಶ್ವದೆಲ್ಲೆಡೆ ಕೊರೋನಾ ಲಸಿಕೆ ಜನಸಾಮಾನ್ಯರಿಗೆ ಸಿಗಲಿದೆ ಎಂದು ಹೆಳಲಾಗುತ್ತಿದೆ. ಆದರೆ ಮಕ್ಕಳ ಕೊರೋನಾ ಲಸಿಕೆಗೆ ಮತ್ತಷ್ಟು ಸಮಯ ಕಾಯಬೇಕು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮಕ್ಕಳಲ್ಲಿನ ರೋಗನಿರೋಧಕ ವ್ಯವಸ್ಥೆಯು ವಯಸ್ಕರಿಗಿಂತ ಭಿನ್ನವಾಗಿರುತ್ತವೆ. ವಿವಿಧ ವಯಸ್ಸಿನ ಮಕ್ಕಳ ರೋಗ ನಿರೊಧಕತೆಯೂ ಬೇರೆ ಬೇರೆ ರೀತಿ ಇರುತ್ತವೆ. ಹಾಗಾಗಿ ಮಕ್ಕಳಿಗೆ ಕೊಡುವ ಕೊರೋನಾ ಲಸಿಕೆಯು ಸಹಾ ವಯಸ್ಕರ ಕೊರೋನಾ ಲಸಿಕೆಗಿಂತಲೂ ಬೇರೆಯದೇ ರೀತಿಯ ಡೋಸೇಜುಗಳನ್ನು ಹೊಂದಿರುತ್ತವೆ.

ಸಮಾಧಾನಕರ ವಿಷಯವೇನೆಂದರೆ ಇಲ್ಲಿಯವರೆಗೆ ಕೊರೋನಾ ರೋಗ ಲಕ್ಷಣವು ಮಕ್ಕಳಲ್ಲಿ ಹೆಚ್ಚೇನೂ ಅಪಾಯಕಾರಿಯಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಮಕ್ಕಳು ಬೆಳವಣಿಗೆಯ ಈ ಸಮಯದಲ್ಲಿ ಮುಂದೆ ಯಾವಾಗಲೂ ಯಾವುದೇ ಅಡ್ಡ ಪರಿಣಾಮಗಳು ಬೀರದಂತೆ ಹೆಚ್ಚಿನ ಕಾಳಜಿ ವಹಿಸಿ ಲಸಿಕೆ ತಯಾರಿಸಬೇಕಿದೆ. ಲಸಿಗೆ ತಯಾರಾದ ನಂತರ ಮಾನವ ಪ್ರಯೋಗ ನಡೆಸಿ ನಂತರ ಮಾರುಕಟ್ಟೆಗೆ ಬರುವಷ್ಟರಲ್ಲಿ ಬಹಳ ಸಮಯ ಕಾಯಲೇಬೇಕಿದೆ. ಇದಕ್ಕೆ ಕನಿಷ್ಟ 1 ವರ್ಷವಾದರೂ ಹೆಚ್ಚಿನ ಸಮಯ ಬೇಕಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಂದರೆ 2022ರ ಆರಂಭದಿಂದ ಮಕ್ಕಳ ಕೊರೋನಾ ಲಸಿಕೆ ಸಿಗುವ ಸಾಧ್ಯತೆ ಇದೆ.

ಆಕ್ಸ್‌ಫರ್ಡ್ ಕೋವಿಡ್ ಶೀಲ್ಡ್ ಲಸಿಕೆಯ ಪ್ರಯೋಗ ಆರಂಭ

ಮುಂಬಯಿಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಆಕ್ಸ್‌ಫರ್ಡ್ ಕೋವಿಡ್ ಶೀಲ್ಡ್ ಲಸಿಕೆಯ ಎರಡು ಮತ್ತು ಮೂರನೇ ಹಂತದ ಪ್ರಯೋಗವನ್ನು ಇದೀಗ ಆರಂಭಿಸಲಾಗಿದೆ. ಪ್ರಯೋಗಗಳಿಗೆ ಒಳಗಾಗುವ ಸ್ವಯಂ ಸೇವಕರ ಪರೀಕ್ಷೆ ಪ್ರಕ್ರಿಯೆ ಇದೀಗ ಶುರುವಾಗಿದೆ. ಇದಕ್ಕಾಗಿ ಸುಮಾರು 100 ಸ್ವಯಂ ಸೇವಕರು ಈ ಪ್ರಯೋಗಕ್ಕೆ ಒಳಗಾಗಲಿದ್ದಾರೆ. ಜೊತೆಗೆ ಬಿ.ವೈ.ಎಲ್. ನಾಯರ್ ಆಸ್ಪತ್ರೆಯಲ್ಲಿಯೂ ಸಹಾ ಲಸಿಕೆ ಪರೀಕ್ಷೆ ನಡೆಸಲು ಅನುಮತಿ ಸಿಕ್ಕಿದ್ದು ಇಲ್ಲಿಯೂ ಸಹಾ 100 ಮಂದಿಯ ಮೇಲೆ ಪ್ರಯೋಗ ನಡೆಯಲಿದೆ. ಆರ್.ಟಿ.ಪಿ.ಸಿ.ಆರ್ ಮತ್ತು ಆಂಟಿಜನ್ ಪರೀಕ್ಷೆಗೆ ಒಳಗಾಗಿ ಕೊರೋನಾ ಇಲ್ಲ ಎಂದು ವರದಿ ಬಂದ ಬಳಿಕವಷ್ಟೇ ಇವರನ್ನು ಮಾನವ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ.

Share this: