Vydyaloka

ಬಿಪಿ…! ಕಾರಣಗಳೇನು?

ಬಿಪಿ ಇದ್ದವರು ಕಡ್ಡಾಯವಾಗಿ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅತಿ ಮುಖ್ಯ. ಒಂದು ಡೈರಿಯಲ್ಲಿ ದಿನಾಂಕ, ಬಿಪಿ ಚಿಕಿತ್ಸೆ ಇತ್ಯಾದಿ ವಿವರಗಳನ್ನು ಬರೆದಿಟ್ಟುಕೊಳ್ಳಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೆಳಗಿನ ಸಮಯದಲ್ಲಿ ಬಿಪಿ ಪರೀಕ್ಷಿಸಿಕೊಳ್ಳಬೇಕು. ವೈದ್ಯರ ಸೂಚನೆಯಂತೆ ಮಾತ್ರೆ ಸೇವಿಸಬೇಕು.

ಮಾನಸಿಕ ಒತ್ತಡದ ಯುಗ, ಎಲ್ಲಿ ನೋಡಿದರೂ ಸ್ಪರ್ಧೆ, ಹೋರಾಟ. ಬಾಲ್ಯದಿಂದಲೂ ನಾವು ನಮ್ಮ ಮೆದುಳನ್ನು ಅತಿಯಾಗಿ ದುಡಿಸಿಕೊಳ್ಳುತ್ತಿದ್ದೇವೆ. ಜೊತೆಗೆ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ, ಸಾಮಾಜಿಕ, ರಾಜಕೀಯ, ಪ್ರಾಕೃತಿಕ ಸಂಬಂಧಿ ಸಮಸ್ಯೆಗಳಿಂದಲೂ ಜರ್ಜರಿತ ಗೊಳ್ಳುತ್ತಿದ್ದೇವೆ. ಇದೇ ಕಾರಣಕ್ಕೆ ಬಿ.ಪಿ. ಮಾನವನನ್ನು ಹೆಚ್ಚಾಗಿ ಕಾಡುತ್ತಿದೆ!
ಅದರಲ್ಲೂ ಮುಖ್ಯವಾಗಿ ಬರಲಾರ ಜೀವನಶೈಲಿಯಿಂದ ಸಣ್ಣವಯಸ್ಸಿನಲ್ಲೇ ಬಿಪಿ ಅಸಾಮಾನ್ಯ ರೋಗವಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಬಿಪಿ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳನ್ನು ಸ್ವಯಂ ನಿಯಂತ್ರಿಸಿಕೊಳ್ಳುವುದು ಸೂಕ್ತ.
ಅಧಿಕ ಉಪ್ಪು
`ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ’ ಎಂಬ ಮಾತು ಇದೆ. ಕೆಲವರಂತೂ ಉಪ್ಪಿಲ್ಲದೆ ಊಟವನ್ನೇ ಮಾಡಲಾರರು. ಆಹಾರದಲ್ಲಿ ಹೆಚ್ಚಿದ ಉಪ್ಪು ಬಳಕೆಯಿಂದ ಬಿಪಿ ಹೆಚ್ಚುಹೆಚ್ಚು ಬಾಧಿಸುತ್ತದೆ. ಚಿಪ್ಸ್, ಕಾರ, ಚಟ್ನಿ, ಉಪ್ಪಿನಕಾಯಿ ಬಳಸಿ ನಾಲಿಗೆ ಚಪ್ಪರಿಸುತ್ತಲೇ ಬಿಪಿಯನ್ನು ಬರಮಾಡಿಕೊಳ್ಳುತ್ತಿದ್ದೇವೆ.
ತಂಬಾಕು-ಧೂಮಪಾನ
ಇದು ಬಿಪಿ ಪ್ರಚೋದಕ. ತಂಬಾಕಿನಲ್ಲಿ ಅನೇಕ ವಿಷ ಪದಾರ್ಥಗಳಿವೆ. ಅವುಗಳಲ್ಲಿ ನಿಕೋಟಿವ್ ಹಾಗೂ ಇಂಗಾಲದ ಮಾನಾಕ್ಸೈಡ್ ದೇಹದಲ್ಲಿ `ನಾರ್ ಆಡ್ರಿನಲನ್’ ಎಂಬ ರಾಸಾಯನಿಕ ರಕ್ತದೊತ್ತಡ ಹೆಚ್ಚಿಸುತ್ತದೆ. ಧೂಮಪಾನ ಚಟದ ತೀವ್ರತೆ ಬಿಪಿಯನ್ನು ಹೆಚ್ಚಿಸುತ್ತದೆ. ತಂಬಾಕಿನಿಂದ ತಯಾರಾದ ಯಾವುದೇ ಪದಾರ್ಥದ ಸೇವನೆಯಿಂದ ಬಿಪಿ ಬರುತ್ತದೆ ಎಂಬುದು ನಿಶ್ಚಿತ.
ಮದ್ಯಪಾನ
ಮದ್ಯಪಾನಿ ವ್ಯಸನಿಗಳಿಗೆ ಬಿಪಿ ಬರುವ ಸಾಧ್ಯತೆ ಹೆಚ್ಚು. ಮದ್ಯಪಾನ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿದರೆ ಕಾಲಾನುಕ್ರಮೇಣ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.
ಕಾಫಿ-ಟೀ
ಪ್ರತಿದಿನ ಐದಾರು ಕಪ್‍ಗಳಿಗಿಂತ ಹೆಚ್ಚು ಬಾರಿ ಸ್ಟ್ರಾಂಗ್ ಕಾಫಿ ಸೇವಿಸುವವರಿಗೆ ರಕ್ತದೊತ್ತಡ ಹೆಚ್ಚುತ್ತದೆಂಬುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಪ್ರತಿ ಕಪ್ ಸ್ಟ್ರಾಂಗ್ ಕಾಫಿ ನಮ್ಮ ರಕ್ತದೊತ್ತಡವನ್ನು 10 ಮಿಲಿ ಮೀ.ನಷ್ಟು ಏರಿಸುತ್ತದೆ ಎಂಬುದು ಪ್ರಯೋಗಗಳಿಂದ ವೇದ್ಯವಾಗಿದೆ.
ಮಾನಸಿಕ ಒತ್ತಡ

ರಕ್ತದೊತ್ತಡಕ್ಕೂ ಮಾನಸಿಕ ಒತ್ತಡಕ್ಕೂ ಬಹಳ ಅನ್ಯೋನ್ಯ ಸಂಬಂಧ. ರಕ್ತದ `ಒತ್ತಡ’ ಎಂಬ ಪದವೇ ಈ ಅಂಶವನ್ನು ಧ್ವನಿಸುತ್ತದೆ. ಒತ್ತಡಕ್ಕೆ ಈಡಾದಾಗ ಉಂಟಾಗುವ ಅಹಿತಕರ ವಿದ್ಯಮಾನಗಳು ಬಿಪಿ ಒಂದೇ ಅಲ್ಲದೆ, ಅನೇಕ ಆತಂಕದ ರೋಗಗಳಿಗೆ ನಾಂದಿಯಾಗುತ್ತದೆ. ಅತೀವ ಬಡತನ, ನಿರುದ್ಯೋಗ, ವೈವಾಹಿಕ ಸಮಸ್ಯೆ ಇನ್ನಿತರೆ ಕಾರಣಗಳು ಮಾನಸಿಕ ಖಿನ್ನತೆಗೆ ನೆರವಾಗುತ್ತವೆ.
ದೇಹಸ್ಥೂಲತೆ
ಸ್ಥೂಲದೇಹಿಗಳಿಗೆ ಬಿಪಿ ಬರುತ್ತದೆ ಎಂಬುದು ಜನಸಾಮಾನ್ಯರ ತಿಳಿವಳಿಕೆ. ಈ ನಂಬಿಕೆ ನಿಜವೂ ಹೌದು. ಸ್ಥೂಲದೇಹಿಗಳಿಗೆ ಬಿಪಿ ಸಾಧ್ಯತೆ ಹೆಚ್ಚು ಎಂಬುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಬೊಜ್ಜಿನವರ ಬೆನ್ನು ಹತ್ತುವುದು ಬಿಪಿಯ ಜಾಯಮಾನ. ದೇಹದ ಗಾತ್ರ ಹೆಚ್ಚಿದಂತೆ ಬಿಪಿಯೂ ಏರುವುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ.
ಕೊಬ್ಬು ಸೇವನೆ
ಅತಿ ಹೆಚ್ಚಾಗಿ ಜಿಡ್ಡು ಪದಾರ್ಥ ಹಾಗೂ ಕರಿದ ಪದಾರ್ಥಗಳನ್ನು ಸೇವಿಸುವವರಲ್ಲಿ ಬಿಪಿ ಹೆಚ್ಚುವ ಸಂಭವವಿದೆ. ಕೊಬ್ಬಿನಿಂದ ಏರುವ ದೇಹ ತೂಕ, ಅದರಿಂದಲೇ ರಕ್ತದೊತ್ತಡವೂ ಏರುತ್ತದೆ. ಮುಖ್ಯವಾಗಿ ಡಾಲ್ಡ, ಕೊಬ್ಬರಿ, ಎಣ್ಣೆ, ಬೆಣ್ಣೆ, ಪ್ರಾಣಿಜನ್ಯ ಕೊಬ್ಬು ಸೇವಿಸುವುದರಿಂದ ರಕ್ತದೊತ್ತಡ ಏರಿಕೆಯ ಅಪಾಯ ಹೆಚ್ಚು. ಇಂತಹ ಜಿಡ್ಡು ಪದಾರ್ಥಗಳಿಂದ ರಕ್ತದಲ್ಲಿ ಅಪಾಯಕಾರಿ ಕೊಲೆಸ್ಟ್ರಾಲ್ ಅಂಶವೂ ಇರುತ್ತದೆ.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this: