ಬಿ.ಪಿ.. ಲೋ ಬಿಪಿ – ಕಾರಣಗಳೇನು? ನಿರ್ಲಕ್ಷಿಸಿದರೆ ಪ್ರಾಣಾಪಾಯ ಗ್ಯಾರಂಟಿ. ಬಿಪಿ ಇದ್ದವರು ಕಡ್ಡಾಯವಾಗಿ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅತಿ ಮುಖ್ಯ. ಒಂದು ಡೈರಿಯಲ್ಲಿ ದಿನಾಂಕ, ಬಿಪಿ ಚಿಕಿತ್ಸೆ ಇತ್ಯಾದಿ ವಿವರಗಳನ್ನು ಬರೆದಿಟ್ಟುಕೊಳ್ಳಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೆಳಗಿನ ಸಮಯದಲ್ಲಿ ಬಿಪಿ ಪರೀಕ್ಷಿಸಿಕೊಳ್ಳಬೇಕು. ವೈದ್ಯರ ಸೂಚನೆಯಂತೆ ಮಾತ್ರೆ ಸೇವಿಸಬೇಕು.
ಬಿ.ಪಿ…! ಕಾರಣಗಳೇನು?
ಇತ್ತೀಚಿನ ದಿನಗಳಲ್ಲಿ ಮನುಷ್ಯ ತೀರಾ ಒತ್ತಡದ ಬದುಕಿಗೆ ಒಳಗಾಗಿದ್ದಾನೆ. ಸದಾ ಒಂದಲ್ಲ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆತನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಾಗುತ್ತದೆ. ಮಾನಸಿಕ ಒತ್ತಡದ ಯುಗ, ಎಲ್ಲಿ ನೋಡಿದರೂ ಸ್ಪರ್ಧೆ, ಹೋರಾಟ. ಬಾಲ್ಯದಿಂದಲೂ ನಾವು ನಮ್ಮ ಮೆದುಳನ್ನು ಅತಿಯಾಗಿ ದುಡಿಸಿಕೊಳ್ಳುತ್ತಿದ್ದೇವೆ. ಜೊತೆಗೆ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ, ಸಾಮಾಜಿಕ, ರಾಜಕೀಯ, ಪ್ರಾಕೃತಿಕ ಸಂಬಂಧಿ ಸಮಸ್ಯೆಗಳಿಂದಲೂ ಜರ್ಜರಿತ ಗೊಳ್ಳುತ್ತಿದ್ದೇವೆ. ಇದೇ ಕಾರಣಕ್ಕೆ ಬಿ.ಪಿ. ಮಾನವನನ್ನು ಹೆಚ್ಚಾಗಿ ಕಾಡುತ್ತಿದೆ!
1. ಅಧಿಕ ಉಪ್ಪು: `ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ’ ಎಂಬ ಮಾತು ಇದೆ. ಕೆಲವರಂತೂ ಉಪ್ಪಿಲ್ಲದೆ ತುತ್ತೆದವರು. ಆಹಾರದಲ್ಲಿ ಹೆಚ್ಚಿದ ಉಪ್ಪು ಬಳಕೆಯಿಂದ ಬಿಪಿ ಹೆಚ್ಚುಹೆಚ್ಚು ಬಾಧಿಸುತ್ತದೆ. ಚಿಪ್ಸ್, ಕಾರ, ಚಟ್ನಿ, ಉಪ್ಪಿನಕಾಯಿ ಬಳಸಿ ನಾಲಿಗೆ ಚಪ್ಪರಿಸುತ್ತಲೇ ಬಿಪಿಯನ್ನು ಬರಮಾಡಿಕೊಳ್ಳುತ್ತಿದ್ದೇವೆ.
2. ತಂಬಾಕು-ಧೂಮಪಾನ: ಇದು ಬಿಪಿ ಪ್ರಚೋದಕ. ತಂಬಾಕಿನಲ್ಲಿ ಅನೇಕ ವಿಷ ಪದಾರ್ಥಗಳಿವೆ. ಅವುಗಳಲ್ಲಿ ನಿಕೋಟಿವ್ ಹಾಗೂ ಇಂಗಾಲದ ಮಾನಾಕ್ಸೈಡ್ ದೇಹದಲ್ಲಿ `ನಾರ್ ಆಡ್ರಿನಲನ್’ ಎಂಬ ರಾಸಾಯನಿಕ ರಕ್ತದೊತ್ತಡ ಹೆಚ್ಚಿಸುತ್ತದೆ. ಧೂಮಪಾನ ಚಟದ ತೀವ್ರತೆ ಬಿಪಿಯನ್ನು ಹೆಚ್ಚಿಸುತ್ತದೆ. ತಂಬಾಕಿನಿಂದ ತಯಾರಾದ ಯಾವುದೇ ಪದಾರ್ಥದ ಸೇವನೆಯಿಂದ ಬಿಪಿ ಬರುತ್ತದೆ ಎಂಬುದು ನಿಶ್ಚಿತ. ಮದ್ಯಪಾನ ಮದ್ಯಪಾನಿ ವ್ಯಸನಿಗಳಿಗೆ ಬಿಪಿ ಬರುವ ಸಾಧ್ಯತೆ ಹೆಚ್ಚು. ಮದ್ಯಪಾನ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿದರೆ ಕಾಲಾನುಕ್ರಮೇಣ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.
3. ಕಾಫಿ-ಟೀ: ಪ್ರತಿದಿನ ಐದಾರು ಕಪ್‍ಗಳಿಗಿಂತ ಹೆಚ್ಚು ಬಾರಿ ಸ್ಟ್ರಾಂಗ್ ಕಾಫಿ ಸೇವಿಸುವವರಿಗೆ ರಕ್ತದೊತ್ತಡ ಹೆಚ್ಚುತ್ತದೆಂಬುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಪ್ರತಿ ಕಪ್ ಸ್ಟ್ರಾಂಗ್ ಕಾಫಿ ನಮ್ಮ ರಕ್ತದೊತ್ತಡವನ್ನು 10 ಮಿಲಿಮೀ. ನಷ್ಟು ಏರಿಸುತ್ತದೆ ಎಂಬುದು ಪ್ರಯೋಗಗಳಿಂದ ವೇದ್ಯವಾಗಿದೆ.
4. ಮಾನಸಿಕ ಒತ್ತಡ: ರಕ್ತದೊತ್ತಡಕ್ಕೂ ಮಾನಸಿಕ ಒತ್ತಡಕ್ಕೂ ಬಹಳ ಅನ್ಯೋನ್ಯ ಸಂಬಂಧ. ರಕ್ತದ `ಒತ್ತಡ’ ಎಂಬ ಪದವೇ ಈ ಅಂಶವನ್ನು ಧ್ವನಿಸುತ್ತದೆ. ಒತ್ತಡಕ್ಕೆ ಈಡಾದಾಗ ಉಂಟಾಗುವ ಅಹಿತಕರ ವಿದ್ಯಮಾನಗಳು ಬಿಪಿ ಒಂದೇ ಅಲ್ಲದೆ, ಅನೇಕ ಆತಂಕದ ರೋಗಗಳಿಗೆ ನಾಂದಿಯಾಗುತ್ತದೆ. ಅತೀವ ಬಡತನ, ನಿರುದ್ಯೋಗ, ವೈವಾಹಿಕ ಸಮಸ್ಯೆ ಇನ್ನಿತರೆ ಕಾರಣಗಳು ಮಾನಸಿಕ ಖಿನ್ನತೆಗೆ ನೆರವಾಗುತ್ತವೆ.
5. ದೇಹಸ್ಥೂಲತೆ: ಸ್ಥೂಲದೇಹಿಗಳಿಗೆ ಬಿಪಿ ಬರುತ್ತದೆ ಎಂಬುದು ಜನಸಾಮಾನ್ಯರ ತಿಳಿವಳಿಕೆ. ಈ ನಂಬಿಕೆ ನಿಜವೂ ಹೌದು. ಸ್ಥೂಲದೇಹಿಗಳಿಗೆ ಬಿಪಿ ಸಾಧ್ಯತೆ ಹೆಚ್ಚು ಎಂಬುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಬೊಜ್ಜಿನವರ ಬೆನ್ನು ಹತ್ತುವುದು ಬಿಪಿಯ ಜಾಯಮಾನ. ದೇಹದ ಗಾತ್ರ ಹೆಚ್ಚಿದಂತೆ ಬಿಪಿಯೂ ಏರುವುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ.
6. ಕೊಬ್ಬು ಸೇವನೆ: ಅತಿ ಹೆಚ್ಚಾಗಿ ಜಿಡ್ಡು ಪದಾರ್ಥ ಹಾಗೂ ಕರಿದ ಪದಾರ್ಥಗಳನ್ನು ಸೇವಿಸುವವರಲ್ಲಿ ಬಿಪಿ ಹೆಚ್ಚುವ ಸಂಭವವಿದೆ. ಕೊಬ್ಬಿನಿಂದ ಏರುವ ದೇಹ ತೂಕ, ಅದರಿಂದಲೇ ರಕ್ತದೊತ್ತಡವೂ ಏರುತ್ತದೆ. ಮುಖ್ಯವಾಗಿ ಡಾಲ್ಡ, ಕೊಬ್ಬರಿ, ಎಣ್ಣೆ, ಬೆಣ್ಣೆ, ಪ್ರಾಣಿಜನ್ಯ ಕೊಬ್ಬು ಸೇವಿಸುವುದರಿಂದ ರಕ್ತದೊತ್ತಡ ಏರಿಕೆಯ ಅಪಾಯ ಹೆಚ್ಚು. ಇಂತಹ ಜಿಡ್ಡು ಪದಾರ್ಥಗಳಿಂದ ರಕ್ತದಲ್ಲಿ ಅಪಾಯಕಾರಿ ಕೊಲೆಸ್ಟ್ರಾಲ್ ಅಂಶವೂ ಇರುತ್ತದೆ.
Also watch: ವಿಶ್ವ ಹೃದಯ ದಿನದಂದು ಹೃದಯದ ಪ್ರಾಮುಖ್ಯತೆ- ಡಾ. ಮಹಾಂತೇಶ ಚರಂತಿಮಠ್
ಲೋ ಬಿಪಿ
ಲೋ ಬಿಪಿ (ಲೋ ಬ್ಲಡ್ ಪ್ರೆಷರ್) ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಮಸ್ಯೆ. ಮುಖ್ಯವಾಗಿ ಅತೀ ಕಡಿಮೆ ರಕ್ತದೊತ್ತಡಕ್ಕೆ ಲೋ ಬಿಪಿ ಎನ್ನುತ್ತೇವೆ. ವೈದ್ಯಕೀಯ ಭಾಷೆಯಲ್ಲಿ `ಹೈಪೊಟೆನ್ಷನ್’ ಎಂದು ಕರೆಯಲ್ಪಡುತ್ತೇವೆ. ಸಾಮಾನ್ಯವಾಗಿ ಆರೋಗ್ಯವಂತರಲ್ಲಿ ರಕ್ತದೊತ್ತಡ 120/80 ಮಟ್ಟದಲ್ಲಿರುತ್ತದೆ. ಅದು 90/60ಗಿಂತ ಕಡಿಮೆ ಇದ್ದಾಗ ಅದು ಲೋ ಬಿಪಿ ಎನ್ನಲಾಗುವುದು. ಆರೋಗ್ಯವಂತರಲ್ಲಿ ಅದರಲ್ಲೂ ಅಥ್ಲೀಟ್‍ಗಳಲ್ಲಿ ಲೋ ಬಿಪಿ ಇರುವುದು ಹೃದಯ ರಕ್ತನಾಳಗಳ ಆರೋಗ್ಯ ಮಟ್ಟದಲ್ಲಿದೆ ಎಂಬುದರ ಸೂಚಕವಾಗಿರುತ್ತದೆ. ಆದರೆ ಲೋ ಬ್ಲಡ್ ಪ್ರೆಷರ್ ವಿಶೇಷವಾಗಿ ಹಿರಿಯ ವಯಸ್ಕರಲ್ಲಿ ಕಾಯಿಲೆಯ (ಹೃದಯಕ್ಕೆ, ಮೆದುಳಿಗೆ ಅಥವಾ ಇತರೆ ಅಂಗಗಳಿಗೆ ಸರಿಯಾಗಿ ರಕ್ತ ಹೋಗದಿರುವುದರ ಸೂಚಕವಾಗಿರುತ್ತದೆ) ದೀರ್ಘಕಾಲದಿಂದ ಲೋ ಬಿಪಿ ಇದ್ದು ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇದಲ್ಲಿ ಹೆಚ್ಚು ಕಡಿಮೆ ಆಗಿ ಗಂಭೀರ ಸ್ಥಿತಿ ಆಗಬಹುದು.
ಕಾರಣವೇನು?
ಅತೀ ಕಡಿಮೆ ರಕ್ತದೊತ್ತಡಕ್ಕೆ ಕಾರಣ ಸ್ಪಷ್ಟವಿಲ್ಲ. ಗರ್ಭಾಧಾರಣೆ, ಥೈರಾಯಿಡ್ (ಕಡಿಮೆ /ಹೆಚ್ಚಾದಾಗ) ಡಯಾಬಿಟಿಸ್ ಅಥವಾ ಬ್ಲಡ್ ಶುಗರ್ ಕಡಿಮೆಯಾಗುವುದು, ಔಷಧ ಚೀಟಿ ಇಲ್ಲದೆ ಸಿಗುವ ಔಷಧಗಳು, ಬ್ಲಡ್ ಪ್ರೆಷರ್ ಔಷಧಗಳನ್ನು ಓವರ್‍ಡೋಸ್‍ನಲ್ಲಿ ಸೇವಿಸಿದಾಗ, ಹೃದಯ ವೈಪಲ್ಯ, ಹೃದಯದ ಲಯ ತಪ್ಪಿದಾಗ, ರಕ್ತನಾಳಗಳು ವಿಶಾಲ ಅಥವಾ ಅಗಲವಾದಾಗ. ವಿಪರೀತ ಬಿಸಲು ಅಥವಾ ಲಿವರ್ ಕಾಯಿಲೆ ಈ ಕಾರಣಗಳಿಂದ ಲೋ ಬಿಪಿ ಆಗಬಹುದು. ಇದ್ದಕ್ಕಿದ್ದಂತೆ ಬೀಪಿ ಕಡಿಮೆಯಾದರೆ ಪ್ರಾಣಾಪಾಯ ತರಬಲ್ಲದು. ತೀವ್ರ ರಕ್ತಸ್ರಾವ, ದೇಹದ ಉಷ್ಣತೆ ಅತೀ ಕಡಿಮೆ ಆದಾಗ, ಅತೀ ಉಷ್ಣವಾದಾಗ, ಹೃದಯ ಸ್ನಾಯುವಿನ ಕಾಯಿಲೆ, ಹೃದಯ ವೈಪಲ್ಯವಾದಾಗ, ತೀವ್ರ ರಕ್ತದ ಸೋಂಕು, ವಾಂತಿಯ ಕಾರಣ ಡಿಹೈಡ್ರೇಷನ್ ಆದಾಗ, ಅತಿಸಾರ ಅಥವಾ ಜ್ವರ. ಮದ್ಯಪಾನ, ಔಷಧ ಅಲರ್ಜಿ ಇವು ರಕ್ತದೊತ್ತಡ ಕಡಿಮೆಯಾಗಲು ಕಾರಣಗಳಾಗಿವೆ.
`ಪೋಸ್ಚುರಲ್ ಹೈಪೊಟೆನ್ಷನ್
ಆದರೆ ಇದ್ದಕ್ಕಿದ್ದಂತೆ ಬ್ಲಡ್ ಪ್ರೆಶರ್ ಕಡಿಮೆ ಆದಲ್ಲಿ ಮೆದುಳಿಗೆ ರಕ್ತ ಪೂರೈಕೆ ಕಡಿಮೆ ಆದಾಗ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸುತ್ತವೆ. ಇದರಿಂದ ತಲೆ ಸುತ್ತು ಅಥವಾ ಚಕ್ಕರ್ ಬಂದಂತೆ ಆಗುವುದು. ಮಲಗಿದ್ದಾಗ ಇದ್ದಕ್ಕಿದ್ದಂತೆ ಕೂರಲು ಅಥವಾ ನಿಲ್ಲಲು ಹೋದಾಗಲೂ ಕೆಲವರಲ್ಲಿ ಬ್ಲಡ್ ಪ್ರೆಷರ್ ಕಡಿಮೆ ಆಗುವುದು. ಇದನ್ನು `ಪೋಸ್ಚುರಲ್ ಹೈಪೊಟೆನ್ಷನ್ (ಯಾವುದೋ ಭಂಗಿಯಲ್ಲಿ ಅತಿ ಕಡಿಮೆ ರಕ್ತದೊತ್ತಡ) ಎನ್ನುತ್ತಾರೆ. ವಯಸ್ಸಾಗುತ್ತಿದ್ದಂತೆ ಹೈ ಮತ್ತು ಲೋ ಬಿಪಿಯ ರಿಸ್ಕ್ ಹೆಚ್ಚಾಗುತ್ತಾ ಹೋಗುತ್ತದೆ. ವಯಸ್ಸಿನ ಜೊತೆ ಆಗುವ ಬದಲಾವಣೆಗಳು ಇದಕ್ಕೆ ಕಾರಣ. ಅದಲ್ಲದೆ, ಮೆದುಳಿಗೆ ರಕ್ತ ಸಂಚಲನ ವಯಸ್ಸಾಗುತ್ತ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ರಕ್ತನಾಳದಲ್ಲಿ ಸೃಷ್ಟಿಯಾಗುವ ಅಡ್ಡಗೋಡೆಗಳು. 65 ವರ್ಷ ದಾಟಿದವರು ಶೇ. 10ರಿಂದ 20 ಮಂದಿಯಲ್ಲಿ ಪೋಸ್ಚುರಲ್ ಹೈಪೊಟೆನ್ಷನ್ ಇರುತ್ತದೆ ಎಂದು ಅಂದಾಜಿಸಲಾಗಿದೆ.
ಯಾರ್ಯಾರಿಗೆ ಬರಬಹುದು?
ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧ ತೆಗೆದುಕೊಳ್ಳುವವರಲ್ಲಿ ಪೋಸ್ಚುರಲ್ ಹೈಪೋಟೆನ್ಷನ್ ಅತಿ ಸಾಮಾನ್ಯ. ಗರ್ಭಧಾರಣೆ, ವಿಪರೀತ ಭಾವನ್ಮಾತಕ ವ್ಯಕ್ತಿತ್ವ, ರಕ್ತನಾಳಗಳು ಕಠಿಣವಾದಾಗ ಅಥವಾ ಡಯಾಬಿಟಿಸ್. ಹಿರಿಯ ವಯಸ್ಕರಲ್ಲಿ ಇದು ತೀರಾ ಕಾಡುತ್ತದೆ, ಅದರಲ್ಲೂ ವಿಪರೀತ ಬ್ಲಡ್‍ಪೆಷರ್ ಇರುವವರಲ್ಲಿ. ಪೋಸ್ಚುರಲ್ ಹೈಪೊಟೆನ್ಷನ್‍ಗೆ ಕಾರಣಗಳು ಹಲವಾರು. ದೇಹದ ದ್ರವ ಕಡಿಮೆ ಆದಲ್ಲಿ, ಆಹಾರ ಇಲ್ಲದಿದ್ದರೆ, ಬಿಸಿಲಲ್ಲಿ ಬಹುಕಾಲ ನಿಂತಾಗ ಅಥವಾ ತೀರಾ ದಣಿವಾದಾಗ, ಕೆಲವರಲ್ಲಿ ವಯಸ್ಸಿನ ಕಾರಣದಿಂದಲೂ ಔಷಧ, ಆಹಾರ, ಮಾನಸಿಕ ಒತ್ತಡಗಳಿಂದ ಹೀಗಾಗುವುದಂಟು .ಹಲವಾರು ಔಷಧಗಳು ಹೈಯುರಿಟಿಕ್ಸ್, ಬೀಟಾ ಬ್ಲಾಕರ್ಸ್, ಕ್ಯಾಲ್ಷಿಯಂ ಚಾನೆಲ್ ಬ್ಲಾಕರ್ಸ್, ಏಸ್ ಇನ್‍ಹಿಬಿಟರ್ಸ್ ಹೈಪೊಟೆನ್ಷನ್ ಉಂಟು ಮಾಡುತ್ತದೆ ಎಂದು ಹೇಳಬಹುದು. ಆದ್ದರಿಂದ ಲೋ ಬಿಪಿಯನ್ನು ಯಾರೂ ಕೂಡ ನಿರ್ಲಕ್ಷಿಸಲಾಗದು. ಹಾಗಾಗಿ ಸೂಕ್ತ ವೇಳೆಯಲ್ಲೇ ವೈದ್ಯರನ್ನು ಕಂಡು ಚಿಕಿತ್ಸೆಗೆ ಮುಂದಾಗುವುದು ಒಳಿತು.
ಮೊದಲು ಮಾಡಬೇಕಾಗಿದ್ದು….
ಬೀಪಿ ಕಡಮೆ ಆಗಿ ಪ್ರಜ್ಞಾಹೀನರಾಗಿದ್ದಲ್ಲಿ ಈ ಅಗಾಂತ ಭಂಗಿಯಲ್ಲಿ ಮಲಗಿಸಿ. ತಲೆದಿಂಬುಗಳು ಅಥವಾ ಪುಟ್ಟ ಸ್ಟೂಲ್ ಇದ್ದಲ್ಲಿ ಅದನ್ನು ಪಾದದ ಕೆಳಗೆ ಇರಿಸಿ. ಕಾಲನ್ನು ಎತ್ತರದಲ್ಲಿ ಇಟ್ಟಾಗ ರಕ್ತದ ಸಂಚಾರ ಹೃದಯಕ್ಕೆ ಆಗಿ ಬೀಪಿ ನಾರ್ಮಲ್ ಸ್ಥಿತಿಗೆ ಬರುತ್ತದೆ. ವ್ಯಕ್ತಿಯನ್ನು ಆದಷ್ಟು ಬೆಚ್ಚಗೆ ಮತ್ತು ಹಿತವಾಗಿರುವಂತೆ ನೋಡಿಕೊಳ್ಳಿ. ವ್ಯಕ್ತಿಗೆ ಕತ್ತಿನ ಭಾಗದಲ್ಲಿ ಏನೂ ಗಾಯವಾಗಿಲ್ಲ ಎಂದಿದ್ದರೆ ಮಾತ್ರ ತಲೆಯನ್ನು ಒಂದು ಕಡೆ ತಿರುಗಿಸಿ. ವೈದ್ಯರಿಗೆ/ ಆಂಬ್ಯುಲೆನ್ಸ್‍ಗೆ ಕೂಡಲೇ ಪೋನ್ ಮಾಡಿ ಚಿಕಿತ್ಸೆಗೆ ಅನುವಾಗಬೇಕು. ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತಿ.
ಡಾ. ಮಹಂತೇಶ್ ಆರ್. ಚರಂತಿಮಠ್- ಹೃದ್ರೋಗ ತಜ್ಞರು
ತಥಾಗತ್ ಹಾರ್ಟ್‍ಕೇರ್ ಸೆಂಟರ್
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-41410099, 9900356000
E-mail: mahanteshrc67@gmail.com