Vydyaloka

ಆಯುರ್ವೇದದಲ್ಲಿ ಬಾಣಂತಿಯರ ಆಹಾರ

 ಗರ್ಭಿಣಿಯರಿಗೆ ಕೆಲವೊಂದು ಆರೋಗ್ಯಕರ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಗರ್ಭಿಣಿಯರಿಗೆ ನೀಡಬೇಕಾದ ಆಹಾರದ ಬಗ್ಗೆ ಕೆಲವೊಂದು ಮಾಹಿತಿಗಳು ಇಲ್ಲಿವೆ

ಗರ್ಭಿಣಿಯು ಮಗುವಿಗೆ ಜನ್ಮ ನೀಡಿದಾಗಿನಿಂದ 6 ವಾರದ ಅವಧಿಯವರೆಗೆ ಬಾಣಂತಿ ಎನಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಮಗು ತನ್ನ ಬೆಳವಣಿಗೆಗೆ ಸಂಪೂರ್ಣವಾಗಿ ತಾಯಿಯ ಹಾಲನ್ನೇ ಅವಲಂಬಿಸಿರುವುದರಿಂದ, ಬಾಣಂತಿಗೂ ಸಹ ಪ್ರೊಟಿನ್, ಖನಿಜಾಂಶಗಳು ಹಾಗೂ ವಿಟಮಿನ್‍ಗಳ ಪೂರೈಕೆ ಅತ್ಯವಶ್ಯಕವಾಗಿದೆ. ಆದ ಕಾರಣ ಗರ್ಭಾವಸ್ಥೆಯಲ್ಲಿನ ಆಹಾರ ಕ್ರಮವನ್ನೇ ಅನುಸರಿಸಿ. ಹಗುರವಾದ, ಪಚನಕ್ರಿಯೆಗೆ ಸುಲಭವಾದ ರೀತಿಯಲ್ಲಿ ಆಹಾರ ಕ್ರಮ ರೂಢಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಆಯುರ್ವೇದ ಶಾಸ್ತ್ರದ ಪ್ರಕಾರ, ಪ್ರಸವವಾದ ನಂತರ, ಬಾಣಂತಿಗೆ ಹಸಿವೆ ಆದ ಕೂಡಲೇ ತಿಳಿಯಾದ ಅನ್ನದ ಗಂಜಿಗೆ, ಸ್ವಲ್ಪ ಉಪ್ಪು ಹಾಗೂ ಕಾಳು ಮೆಣಸಿನ ಪುಡಿ (ಸ್ವಲ್ಪ ಪ್ರಮಾಣ) ಅಥವಾ ಹಿಪ್ಪಲಿಯ ಪುಡಿಯನ್ನು ಸ್ವಲ್ಪ (1 ಚಮಚ) ಪ್ರಮಾಣದಲ್ಲಿ ಸೇರಿಸಿ ಬಾಣಂತಿಯ ಜೀರ್ಣಶಕ್ತಿಗನುಸಾರವಾಗಿ ಮಿತ ಪ್ರಮಾಣದಲ್ಲಿ ಕೊಡುವುದು ಒಳ್ಳೆಯದು. 3 ದಿನಗಳವರೆಗೆ ಇದೇ ರೀತಿಯ ಪಚನಕ್ಕೆ ಹಗುರವಾದ ಆಹಾರ ಕೊಡುವುದು. ನಂತರ ಮೂರು, ನಾಲ್ಕು ದಿನಗಳವರೆಗೆ ಮೆದುವಾದ ಅನ್ನದ ಜೊತೆಗೆ ಜೀರ್ಣಕಾರಿ ಔಷಧಿಗಳಿಂದ ತಯಾರಿಸಿದ ಸೂಪ್ ಜೊತೆಗೆ 1ರಿಂದ 2 ಚಮಚ ತುಪ್ಪವನ್ನು ಸೇರಿಸಿ ಅಗತ್ಯವಾದ ಪ್ರಮಾಣದಲ್ಲಿ ಕೊಡುವುದು. ಜೊತೆಗೆ ಬೆಳಗಿನ ಸಮಯದಲ್ಲಿ ಔಷಧೀಯ ತುಪ್ಪಗಳಾದ ಉದಾಃ ಶತಾವರಿ ಘೃತ, ದಶಮೂಲಾದ್ಯ ಘೃತ, ಪಿಷ್ಪಲ್ಯಾದಿಘೃತ ಯಾವುದಾದರೂ ತುಪ್ಪವನ್ನು ಒಂದರಿಂದ 2 ಚಮಚ ಹಾಲಿನೊಂದಿಗೆ ಸೇವಿಸುವುದು ಸೂಕ್ತವಾಗಿದೆ.
ಏಳು ದಿನಗಳ ನಂತರ, ಬಾಣಂತಿಯು ತಾನು ಕಳೆದುಕೊಂಡ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯಗಳನ್ನು ಹಿಂತಿರುಗಿ ಪಡೆಯಲು, ಪೌಷ್ಠಿಕವಾದಂತಹ ಪ್ರೊಟಿನ್, ವಿಟಮಿನ್ ಖನಿಜಾಂಶಗಳನ್ನೊಳಗೊಂಡ ಸಮತೋಲನ ಆಹಾರ ಮಿತ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು. ಬೆಂದ ತರಕಾರಿಗಳ ಸೂಪ್‍ಗೆ ಚಿಟಿಕೆ ಉಪ್ಪು ಹಾಗೂ ಕಾಳು ಮೆಣಸಿನ ಪುಡಿ ಚಿಟಿಕೆ ಸೇರಿಸಿ ಕುಡಿಯುವುದು. ತಾಜಾ ಹಣ್ಣುಗಳ ರಸ, ಧಾನ್ಯಗಳು, ಕಾಳುಗಳನ್ನು ಬೇಯಿಸಿ ತಯಾರಿಸಿದ ಸೂಪ್‍ಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಮಾಂಸಾಹಾರಿಗಳಾಗಿದ್ದಲ್ಲಿ 7 ದಿನಗಳ ನಂತರ ಮಾಂಸರಸ (ಮೀಟ್ ಸೂಪ್), ಮೂಳೆಯ ರಸ ಇತರ ಆಹಾರ ದ್ರವ್ಯವನ್ನು ಜೀರ್ಣಶಕ್ತಿಗನುಸಾರವಾಗಿ ತೆಗೆದುಕೊಳ್ಳುವುದರಿಂದ, ಪ್ರೊಟಿನ್, ಕ್ಯಾಲ್ಸಿಯಂಗಳ ಪೂರೈಕೆಯಾಗಿ ಬಾಣಂತಿಯು ಉತ್ತಮ ಗುಣಮಟ್ಟದ ಹಾಲುಣಿಸಲು ಸಮರ್ಥಳಾಗುತ್ತಾಳೆ.
ಇದಲ್ಲದೆ ವೈದ್ಯರ ಸೂಕ್ತ ಸಲಹೆಯ ಮೇರೆಗೆ, ಸೌಭಾಗ್ಯ ಶುಂಠಿಲೇಹ್ಯ, ಶತಾವಾರಿ ಲೇಹ್ಯ, ಅಂಟಿನುಂಡೆ ಮುಂತಾದ ಪುಷ್ಟಿಕರ ಲೇಹ್ಯಗಳನ್ನು ಉಪಯೋಗಿಸುವುದರಿಂದ ಗರ್ಭಾವಸ್ಥೆಯ ಪೂರ್ವದಂತೆಯೇ ದೇಹ ಸಾಮಥ್ರ್ಯವನ್ನು ಹಿಂತಿರುಗಿ ಪಡೆಯಬಹುದಾಗಿದೆ.
ಒಟ್ಟಿನಲ್ಲಿ ನಾಲ್ಕು ತಿಂಗಳವರೆಗೆ ಒಣ ಹಣ್ಣುಗಳು (ಡ್ರೈಫ್ರೂಟ್ಸ್) ಹಣ್ಣು, ತರಕಾರಿಗಳನ್ನು ಧಾನ್ಯಗಳು, ಕಾಳುಗಳು ಇತ್ಯಾದಿಗಳನ್ನು ಗರ್ಭಿಣಿ ಅವಸ್ಥೆಯಲ್ಲಿ ಹೇಳಿರುವಂತೆಯೇ ಆಹಾರದಲ್ಲಿ ಅಳವಡಿಸಿಕೊಳ್ಳಬೇಕು.

ಬಾಣಂತಿಯು ವರ್ಜಿಸಬೇಕಾದ ಆಹಾರ ದ್ರವ್ಯಗಳು

1. ಕರಿದ ತಿಂಡಿಗಳು, ಅತ್ಯಂತ ಖಾರವಾದ ಆಹಾರ ದ್ರವ್ಯಗಳು.
2. ತಂಪು ಪಾನೀಯಗಳು, ಕಾಫಿ, ಟೀ ಮುಂತಾದವುಗಳ ಅತಿಯಾದ ಸೇವನೆ.
3. ಅತಿಯಾದ ಮಾಂಸಾಹಾರದ ಸೇವನೆ (ಘನ ರೂಪದಲ್ಲಿ)
4. ಜೀರ್ಣಕ್ಕೆ (ಪಚನಕ್ಕೆ) ಕಷ್ಟಕರವಾದಂತಹ ಆಹಾರ ವಸ್ತುಗಳ ಸೇವನೆ.

ಆಯಾ ದೇಶಕ್ಕನುಸಾರವಾಗಿ ಬಾಣಂತಿಯರ ಪಥ್ಯ

ಅನೂಪದೇಶ/ಚಳಿ ಇರುವ ಪ್ರದೇಶ:  ಜೀರ್ಣಕಾರಕ (ಉದಾ: ಜೀರಿಗೆ, ಕಾಳು ಮೆಣಸು ಇತ್ಯಾದಿಗಳು) ಆಹಾರ ದ್ರವ್ಯಗಳು ಹಾಗೂ ಬಲಕಾರಕ (ಧಾನ್ಯಗಳು, ತರಕಾರಿ ಇತ್ಯಾದಿಗಳ ಸೂಪ್) ದ್ರವ್ಯಗಳನ್ನು ಸೇವಿಸುವುದು. ತುಪ್ಪ, ಎಣ್ಣೆ ಇತ್ಯಾದಿ ಕೊಬ್ಬಿನಂಶಗಳನ್ನು ವರ್ಜಿಸುವುದು ಸೂಕ್ತ.
ಜಾಂಗಲ ದೇಶ/ಹೆಚ್ಚಾಗಿ ಬಿಸಿಲಿರುವ ಪ್ರದೇಶ: ಧಾನ್ಯಗಳು, ತರಕಾರಿ, ಜೀರ್ಣಕಾರಕ ಆಹಾರ ದ್ರವ್ಯಗಳನ್ನು ಹಾಕಿ ತಯಾರಿಸಿದ ಆಹಾರ ದ್ರವ್ಯದೊಂದಿಗೆ ತುಪ್ಪ, ಬೆಣ್ಣೆ, ಎಣ್ಣೆ ಇತ್ಯಾದಿಗಳನ್ನು ಸೇರಿಸಿ ಉಪಯೋಗಿಸುವುದು.
ಸಾಧಾರಣ ಪ್ರದೇಶ/ವಿದೇಶ: ಮಾಂಸರಸ, ಹಣ್ಣು, ತರಕಾರಿಗಳು ಇತ್ಯಾದಿ ಎಲ್ಲಾ ರೀತಿಯ ಆಹಾರ ದ್ರವ್ಯಗಳನ್ನು ಹಿತಮಿತವಾಗಿ ಸೇವಿಸುವುದು.

ಈ ರೀತಿ ಸರಿಯಾದ ಆಹಾರ ಕ್ರಮ ಅನುಸರಿಸುವುದರಿಂದ ಬಾಣಂತಿ ಪಡೆಯುವ ಪ್ರಯೋಜನಗಳು:
ಬಾಣಂತಿಯರ ಆಹಾರ

ಹಣ್ಣು ಹಾಲಿಗಿಂತ, ಬೆಣ್ಣೆ ತುಪ್ಪಕ್ಕಿಂತ
ಚೆನ್ನಾಗಿ ಕಳಿತ ರಸಬಾಳೆ ಹಣ್ಣಿಗಿಂತ
ಚೆನ್ನ ಕಣೆ ತಾಯಿ ಎದೆಹಾಲು!

ಎಂದು ಜಾನಪದ ಗರತಿ ಹೇಳಿದ್ದನ್ನು ನೀವು ಕೇಳಿರಬಹುದು. ಅಂತಹ ಅಮೃತಮಯವಾದ ಎದೆಹಾಲಿನ ಉತ್ಪತ್ತಿ ಹೆಚ್ಚಿಸುವುದಕ್ಕೆ ಹಾಗೂ ತನ್ನ ಆರೋಗ್ಯಕ್ಕೆ ಅವಳು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದರ ಬಗ್ಗೆ ಎಲ್ಲ ಮಹಿಳೆಯರೂ ತಿಳಿದುಕೊಳ್ಳಬೇಕಾದುದು ಅತ್ಯಂತ ಅವಶ್ಯಕ. ಬಾಣಂತಿಯ ಆಹಾರದ ವಿಷಯದಲ್ಲಿ ಅತಿಯಾದ ಕಟ್ಟುನಿಟ್ಟಿನ ಅವಶ್ಯಕತೆಯಿಲ್ಲ. ಹೆರಿಗೆಯಾದ ಮೊದಲೆರಡು ದಿನ ಮೃದುವಾಗಿ ಬೇಯಿಸಿದ ಅನ್ನ, ಸಾರು, ಇಡ್ಲಿ, ಸ್ವಲ್ಪ ಬೇಯಿಸಿದ ತರಕಾರಿ, ದಿನಕ್ಕೆರಡು ಇಲ್ಲವೇ ಮೂರು ಬಾರಿ ಕುಡಿಯಲು ಹಾಲು ಕೊಡಬೇಕು. ನಂತರದ ದಿನಗಳಲ್ಲಿ ಚಪಾತಿಯನ್ನು ಕೊಡಬಹುದು. ಬಾಣಂತಿಯ ಸ್ಥಿತಿ ಸೂಕ್ಷ್ಮವಾಗಿರುವುದರಿಂದ ಕುಡಿಯಲು ಕುದಿಸಿ ಆರಿಸಿದ ನೀರನ್ನೇ ಉಪಯೋಗಿಸಬೇಕು. ಕೆಲವರು ಬಾಣಂತಿಗೆ ನೀರನ್ನು ಹೆಚ್ಚು ಕೊಡುವುದಿಲ್ಲ. ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಧಾರಾಳವಾಗಿ ಹಾಲು ಉತ್ಪಾದನೆಯಾಗುವುದು ನಿಂತುಹೋಗುತ್ತದೆ. ಅಲ್ಲದೇ ನೀರು ಸಾಕಷ್ಟು ಕುಡಿಯದಿದ್ದರೆ ಮಲಬದ್ಧತೆಯ ಸಮಸ್ಯೆಯೂ ಕಾಡುತ್ತದೆ. ಆಕೆ ದಿನನಿತ್ಯ ಉತ್ಪತ್ತಿ ಮಾಡಬೇಕಾದ 600-700 ಮಿಲಿ ಲೀಟರ್ ಎದೆಹಾಲಿನ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿದಿನ ಆಕೆಗೆ ಎಲ್ಲ ಪೌಷ್ಠಿಕಾಂಶಗಳ ಪ್ರಮಾಣವನ್ನು ಅಧಿಕವಾಗಿ ದೊರಕಿಸಿಕೊಡುವ ಆಹಾರ ಕೊಡಬೇಕು.
ಸಾಧಾರಣ ದಿನಗಳಲ್ಲಿ ಮಹಿಳೆಗೆ 2,500 ಕ್ಯಾಲೋರಿ ಸಾಕಾದರೆ, ಮಗುವಿಗೆ ಹಾಲುಣಿಸುವಾಗ 2,800ರಿಂದ 3,000 ಕ್ಯಾಲೋರಿ ಬೇಕಾಗುತ್ತದೆ. ಸಸಾರಜನಕ ಹಾಗೂ ಮೇದಸ್ಸು ಉಳಿದ ಸಮಯದಲ್ಲಿ 6ರಿಂದ 8 ಗ್ರಾಂನಷ್ಟು ಬೇಕಾದರೆ ಈ ಸಮಯದಲ್ಲಿ 10 ಗ್ರಾಂ ಬೇಕು. ತಾಯಿಯ ದೇಹವು ಅವಳು ಸೇವಿಸುವ ವೈವಿದ್ಯಮಯ ಆಹಾರ ಪದಾರ್ಥಗಳನ್ನು ಅತ್ಯಂತ ಸಂಕೀರ್ಣವಾದ, ವಿಶಿಷ್ಟವಾದ ಹಾಗೂ ಅಮೃತಮಯವಾದ ಎದೆಹಾಲನ್ನು ಪರಿವರ್ತಿಸುತ್ತದೆ. ಅವಳು ಸೇವಿಸಿದ ಹೆಚ್ಚುವರಿ ಆಹಾರ ಪದಾರ್ಥಗಳು ಶೇಕಡಾ 90 ಭಾಗ ಹಾಲಾಗಿ ಪರಿವರ್ತನೆಗೊಳ್ಳುತ್ತದೆ.

ಮಗುವಿಗೆ ಹಾಲುಣಿಸಿ…

ಕೆಲವು ಸ್ತ್ರೀಯರು ತಮ್ಮ ಅಂಗಸೌಷ್ಟವ ಕೆಡುವುದೆಂಬ ಭ್ರಮೆಯಿಂದ ಮಗುವಿಗೆ ಹಾಲುಡಿಸುವುದಿಲ್ಲ. ಎದೆಯಲ್ಲಿ ಹಾಲು ಉತ್ಪತ್ತಿಯಾಗುವುದೇ ಮಗುವಿಗಾಗಿ. ಎದೆಹಾಲು ಕುಡಿಸದಿರುವುದರಿಂದ ತಾಯಿಗೆ ಮಗುವಿನೊಡನೆ ಬೆಳೆಯುವ ಬಾಂಧವ್ಯ ಅವರು ಕಳೆದುಕೊಳ್ಳುವುದು ಖಂಡಿತ. ತಾಯ್ತನದ ಹಿರಿಮೆ ಇರುವುದೇ ಅಲ್ಲಿ. ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಮಗುವಿಗೆ ಯಾವುದೇ ರೀತಿಯ ಕಾಯಿಲೆಗಳು ಕಾಡುವುದಿಲ್ಲ. ಮಗುವಿಗೆ ಮೂರು ತಿಂಗಳು ತುಂಬುವವರೆಗೂ ಎದೆಹಾಲೊಂದನ್ನು ಹೊರತುಪಡಿಸಿ ಇನ್ನೇನೂ ನೀಡಬಾರದು. ಇದರಿಂದ ಮಗುವಿಗೆ ಮಲಬದ್ಧತೆಯ ತೊಂದರೆ ಇರುವುದಿಲ್ಲ.
ಹಾಲುಣಿಸುವ ತಾಯಿ ಪುಷ್ಟಿಕರವಾದ ಹಾಗೂ ಸಮತೋಲನ ಆಹಾರ ಸೇವನೆ ಮಾಡಬೇಕು. ಬಿಸಿಯಾದ ಆಹಾರವನ್ನೇ ಸೇವನೆ ಮಾಡಬೇಕು. ಹಳಸಿದ್ದನ್ನಾಗಲಿ, ತಂಗಳದ್ದನ್ನಾಗಲೀ ಸೇವನೆ ಮಾಡಬಾರದು. ಫ್ರಿಜ್‍ನಲ್ಲಿರಿಸಿದ್ದನ್ನು ತಿನ್ನಲೇಬಾರದು. ಎಲ್ಲ ಬಗೆಯ ಸೊಪ್ಪುಗಳು, ಕರಿಬೇವು, ಕೊತ್ತಂಬರಿ, ದಂಟು, ಹರಿವೆ, ಪಾಲಕ್, ಹೊನಗೊನೆ, ಬಸಳೆ, ಅಗಸೆ ಈ ಎಲ್ಲವೂ ಎದೆಹಾಲಿನ ಉತ್ಪತ್ತಿಗೆ ಸಹಾಯಕ. ಮಾವು, ಪಪ್ಪಾಯಿ, ಕ್ಯಾರೆಟ್, ಟೊಮೆಟೋ, ನೆಲ್ಲಿಕಾಯಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶವಿರುವುದರಿಂದ ಪೌಷ್ಠಿಕ ಹಾಗೂ ಆರೋಗ್ಯಕರವಾಗಿರುತ್ತದೆ.
ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಹೆಸರುಬೇಳೆ ಪಾಯಸ, ಹಾಲುಕೀರು ಮುಂತಾದವುಗಳೆಲ್ಲ ಹಾಲು ಹೆಚ್ಚಿಸುತ್ತದೆ. ಇವಲ್ಲದೆ ಎರಡು-ಎರಡೂವರೆ ಗಂಟೆಗಳಿಗೊಂದು ಬಾರಿ ದ್ರವಾಹಾರ ಅಂದರೆ ಹಣ್ಣಿನ ರಸ, ಹಾಲು ಮುಂತಾದವುಗಳನ್ನು ಕುಡಿಯಲು ಕೊಡಬೇಕು. ಅಕ್ಕಿ, ಗೋಧಿ ಹಾಗೂ ಬೇಳೆಕಾಳುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ಕೊಡುವುದು ತಾಯಿಯ ಹಾಗೂ ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
ಕೆಲವರಲ್ಲಿ ಎದೆಹಾಲಿನ ಪ್ರಮಾಣ ಅತ್ಯಂತ ಕಡಿಮೆಯಿರುತ್ತದೆ. ಅಂತಹವರು ಒಂದು ಲೋಟ ತಾಜಾ ದಂಟಿನ ಸೊಪ್ಪಿನ ರಸವನ್ನು ಜೇನುತುಪ್ಪ ಹಾಗೂ ಏಲಕ್ಕಿ ಪುಡಿಯೊಂದಿಗೆ ಕುಡಿಯಬೇಕು. ಹೆರಿಗೆಯ ನಂತರ ಮುಳ್ಳುಕೀರೆ ಸೊಪ್ಪಿನ ತಾಜಾ ರಸವನ್ನು ಜೇನುತುಪ್ಪ ಹಾಗೂ ಏಲಕ್ಕಿ ಪುಡಿಯೊಂದಿಗೆ ಸೇವಿಸಬೇಕು. ನುಗ್ಗೆ ಸೊಪ್ಪನ್ನು ಬೇಯಿಸಿ ರಸ ತೆಗೆದು ಕುಡಿಯುವುದರಿಂದಲೂ ಎದೆಹಾಲು ಹೆಚ್ಚುತ್ತದೆ. ಬಾಣಂತಿಯರು ಹೊನಗೊನೆ ಸೊಪ್ಪಿನ ಪಲ್ಯ ಸೇವಿಸಬೇಕು.
ಸಬ್ಬಸಿಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಬೆರೆಸಿ, ಚಪಾತಿ ಇಲ್ಲವೇ ಅನ್ನೊದೊಂದಿಗೆ ಸೇವಿಸಿದರೆ ಜೀರ್ಣಶಕ್ತಿಗೆ ಸಹಕಾರಿಯಾಗುವುದಲ್ಲದೇ, ಹಾಲಿನ ಉತ್ಪತ್ತಿಗಾಗಿ ಸಹಾಯವಾಗುತ್ತದೆ.
ಕೆಸುವಿನ ಗಡ್ಡೆ ಅಥವಾ ಶ್ಯಾವಿಗಡ್ಡೆ ಬೇಯಿಸಿ ಅದರಿಂದ ತಯಾರಿಸಿದ ಪಲ್ಯ ಇಲ್ಲವೇ ಮೊಸರುಬಜ್ಜಿ ಸೇವನೆ ಮಾಡಬೇಕು. ತೊಂಡೆಹಣ್ಣಿನ ಸೇವನೆಯೂ ಬಹಳ ಒಳ್ಳೆಯದು. ಬಿಳಿಯ ಎಳ್ಳನ್ನು ಹಾಲಿನಲ್ಲಿ ಅರೆದು ಬಾಣಂತಿಯರಿಗೆ ಕುಡಿಸುವುದರಿಂದ ಹಾಲಿನ ಉತ್ಪತ್ತಿ ಹೆಚ್ಚುತ್ತದೆ.
ಎಳೆಯ ಜೋಳದ ಕಾಳುಗಳನ್ನು ನೊರೆಹಾಲಿನಲ್ಲಿ ಅರೆದು ಅದರಲ್ಲಿಯೇ ಕದಡಿ ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸೇವನೆ ಮಾಡಬೇಕು.
ಅವರೆ ಹೂ ಹಾಗೂ ಶತಾವರಿ ಬೇರಿನ ಪುಡಿಯನ್ನು ನೊರೆಹಾಲಿನಲ್ಲಿ ಬೆರೆಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿಯಲು ಕೊಡಬೇಕು. ಶತಾವರಿಗೆ ಹಲವು ಮಕ್ಕಳ ತಾಯಿ ಬೇರು ಎಂಬ ಹೆಸರೂ ಅನ್ವರ್ಥಕವಾಗಿದೆ. ಶತಾವರಿ ಬೇರನ್ನು ಸಣ್ಣಗೆ ಪುಡಿ ಮಾಡಿ, ಒಂದು ಚಮಚ ಪುಡಿಯನ್ನು ಒಂದು ಲೋಟ ಹಾಲಿನೊಡನೆ ದಿನಕ್ಕೆ ಎರಡು ಬಾರಿ ಕೊಡಬೇಕು. ಎಳ್ಳಿನ ಪುಡಿಯಲ್ಲಿ ತುಪ್ಪ, ಹಾಲು ಸಕ್ಕರೆ ಹಾಗೂ ಜೇನು ಸೇರಿಸಿ ಪ್ರತಿದಿನ ತಿನ್ನಬೇಕು. ಒಂದು ಲೋಟ ಹಸುವಿನ ಹಾಲಿಗೆ ಅರ್ಧ ಚಮಚೆ ಜೇಷ್ಠ ಮಧುವಿನ ಪುಡಿಯನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಲು ಕೊಡಬೇಕು
ಊಟದ ನಂತರ ಪ್ರತಿದಿನ ಪಪ್ಪಾಯಿ ಹಣ್ಣನ್ನು ಸೇವಿಸಲು ಕೊಡಬೇಕು.
ಜೊತೆಗೆ ತಾಂಬೂಲ ಸೇವನೆಯೂ ಒಳ್ಳೆಯದು. ಚಿಗುರು ವೀಳ್ಯದೆಲೆ, ಅಡಿಕೆ ಹಾಗೂ ಸುಣ್ಣ ನಿಗದಿಯಾದ ಪ್ರಮಾಣದಲ್ಲಿ ಸೇರಿದರೆ ಅದು ತಾಂಬೂಲ ಎನಿಸಿಕೊಳ್ಳುತ್ತದೆ. ಈ ಮೂರು ವಸ್ತುಗಳಿಗೂ ತಮ್ಮವೇ ಸ್ವಂತ ಗುಣಗಳಿದ್ದರೂ ಒಟ್ಟು ಸೇರಿದಾಗ ಉತ್ತಮ ಜೀರ್ಣಕಾರಿಯಾಗಿ ಕೆಲಸ ಮಾಡುತ್ತವೆ. ಬಾಯಿಗೆ ರುಚಿ ಹೆಚ್ಚುತ್ತದೆ. ಬಾಯಿಯ ವಾಸನೆ ದೂರವಾಗುವುದು ಹಾಗೂ ಬಾಯಿ ಗಂಟಲಿನಲ್ಲಿ ಅಂಟಿಕೊಂಡಿರುವ ಕಫವು ಕರಗುವುದು. ಹಸಿವೆ ಹೆಚ್ಚುವುದು. ಮಿತವಾದ ತಾಂಬೂಲ ಸೇವನೆಯು ದೇಹದ ಆಯಾಸ ತಗ್ಗಿಸಿ ಬಲವನ್ನು ಹೆಚ್ಚಿಸುತ್ತದೆ.
ಅಂಟಿನುಂಡೆ: ಹೆರಿಗೆಯ ಒಂದೂವರೆ ತಿಂಗಳ ನಂತರ ದಿನಕ್ಕೊಂದರಂತೆ ಅಂಟಿನುಂಡೆಯನ್ನು ತಿನ್ನಲು ಕೊಡಬೇಕು. ಅಂಟಿನುಂಡೆ ರುಚಿಕರ, ಪುಷ್ಟಿಕರ ಹಾಗೂ ಹಾಲಿನ ಉತ್ಪತ್ತಿಗೂ ಸಹಾಯಕಾರಿ. ಅಂಟಿನುಂಡೆ ತಯಾರಿಸಲು ಬೇಕಾಗುವ ವಸ್ತುಗಳೆಂದರೆ ಗಿಟಕ ಕೊಬ್ಬರಿ ಅರ್ಧ ಕೆ.ಜಿ. ಉತ್ಪತ್ತಿ 50 ಗ್ರಾಂ, ಗೇರು ಬೀಜ 100 ಗ್ರಾಂ, ಗಸಗಸೆ 100 ಗ್ರಾಂ, ಲವಂಗ 50 ಗ್ರಾಂ, ಅಂಟು 100 ಗ್ರಾಂ, ಬೆಲ್ಲ 1 ಕೆ.ಜಿ., ಬಾದಾಮಿ 100 ಗ್ರಾಂ, ತುಪ್ಪ ಕಾಲು ಕೆ.ಜಿ. ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಬೇಕು. ಬಾದಾಮಿ, ಗೇರುಬೀಜ, ಉತ್ತುತ್ತಿ, ಲವಂಗ, ಗಸಗಸೆ, ಅಂಟು ಮುಂತಾದವುಗಳನ್ನು ಸಣ್ಣಗೆ ತುಂಡು ಮಾಡಿಕೊಂಡು ತುಪ್ಪದಲ್ಲಿ ಸ್ವಲ್ಪ ಕೆಂಪಾಗುವರೆಗೆ ಹುರಿದುಕೊಳ್ಳಬೇಕು. ನಂತರ ಬೆಲ್ಲವನ್ನು ಕರಗಿಸಿ ಎಲ್ಲವನ್ನೂ ಇದರೊಂದಿಗೆ ಬೆರೆಸಿ ಉಂಡೆ ತಯಾರಿ ಸಿಟ್ಟುಕೊಳ್ಳಬೇಕು.

ಡಾ.ವಸುಂಧರಾ ಭೂಪತಿ
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079, ಮೊ: 9480334750

Share this: