ಬಾಹ್ಯ ಚಹರೆ
ನಮ್ಮ ಪಕ್ಕದ ಮನೆಯ ತಂಗಿಗೆ ಒಂದು ಮುದ್ದಾದ ಗುಂಡು ಮಗು ಜನಿಸಿತು. ತಾಯಿ-ತಂದೆ, ಅಜ್ಜ-ಅಜ್ಜಿ ಎಲ್ಲರೂ ಸಂತೋಷದಿಂದ ಅಕ್ಕಪಕ್ಕದವರಿಗೆ ಸಿಹಿ ಹಂಚಿ ಬಂಧು-ಮಿತ್ರರಿಗೆ ವಿಷಯ ತಿಳಿಸಿದರು. ಮಗುವಿಗೆ ಮೂರು ತಿಂಗಳು ಆದ ನಂತರ ನಾಮಕರಣ ಸಮಾರಂಭ ಏರ್ಪಡಿಸಿ, ಎಲ್ಲರಿಗೂ ಮಗುವನ್ನು ತೋರಿಸಿ ಊಟ ಹಾಕಿಸಿದರು. ಬಂಧು-ಮಿತ್ರರು, ಹಿತೈಷಿಗಳು ಉಡುಗೊರೆಗಳನ್ನು ನೀಡಿ ತಮ್ಮ ಪ್ರೀತಿಯ ಸೂಚಕವಾಗಿ ಮಗುವಿನ ಗಲ್ಲಕ್ಕೆ ಮುತ್ತು ನೀಡಿ ಆಶೀರ್ವಾದ ಮಾಡಿದರು. ಮರು ದಿನ ಹೆತ್ತವರು ಮತ್ತು ಅಜ್ಜ-ಅಜ್ಜಿ ಮಗುವನ್ನು ನನ್ನ ಬಳಿ ಕರೆತಂದು : ನೋಡಿ ಡಾಕ್ಟ್ರೇ ನಮ್ಮ ಮುದ್ದಾದ ಮೊಮ್ಮಗನಿಗೆ ನಮ್ಮ ಬಂಧು-ಮಿತ್ರರು ಮುತ್ತು ಕೊಟ್ಟು, ಗಲ್ಲವನ್ನು ಕಡಿದ ಪರಿಣಾಮವಾಗಿ ಅದು ಕೆಂಪಾಗಿ ಗುಳ್ಳೆಗಳಾಗಿ ನೋಡಲು ವಿಕಾರವಾಗಿದೆ. ನಮ್ಮ ಸೊಸೆಯು ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಕ್ಕೆ ಮತ್ಸರದ ಭಾವನೆಯಿಂದ ನಮ್ಮ ಮೊಮ್ಮಗನ ಗಲ್ಲ ಕಚ್ಚಿದ್ದಾರೆ ಎಂದು ದೂರು ಹೇಳತೊಡಗಿದರು. ಮಗುವನ್ನು ಪರೀಕ್ಷಿಸಿದ ನಾನು ಇದು ಅಟೊಪಿಕ್ ಡರ್ಮಟೈಟಿಸ್ ಎಂದು ತಿಳಿಸಿ, ಇದು ಬಂಧು-ಮಿತ್ರರ ಹೊಟ್ಟೆಕಿಚ್ಚಿನ ಕಾರಣವಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡಲು ಒಂದು ತಾಸು ಬೇಕಾಯಿತು.
ಅಟೊಪಿಕ್ ಡರ್ಮಟೈಟಿಸ್ ಕಾರಣಗಳು
- ಅಟೊಪಿಕ್ ಡರ್ಮಟೈಟಿಸ್ ಮಕ್ಕಳಲ್ಲಿ ವಂಶಾವಳಿಯ ತಂತು 11 ಕ್ಯು 13 ಕಂಡುಬರುತ್ತದೆ. ಸಾಮಾನ್ಯವಾಗಿ ತಾಯಿ ತನ್ನ ಮಕ್ಕಳಿಗೆ ಈ ಜೀವ ತಂತುವನ್ನು ವರ್ಗಾಹಿಸಿರುತ್ತಾಳೆ.
- ಎಫ್ಎಲ್ಜಿ ವಂಶಾವಳಿಯ ತಂತು ಕೂಡ ಬಲಹೀನವಾಗಿದ್ದು, ಚರ್ಮದಲ್ಲಿನ ಹೊರಪದರದಲ್ಲಿನ ಶಕ್ತಿಯು ಕಡಿಮೆಯಾಗಿ ಸಾಮಾನ್ಯ ರಾಸಾಯನಿಕಗಳು, ರೋಗಾಣುಗಳು ಹೊರಪದರವನ್ನು ತೂರಿಕೊಂಡು ಹೋಗಿ ಚರ್ಮದಲ್ಲಿನ ನೀರಿನ ಅಂಶವು ಕಡಿಮೆಯಾಗಿ ಚರ್ಮವು ಶುಷ್ಕವಾಗುತ್ತದೆ. ಇದರಿಂದಾಗಿ ಚರ್ಮದ ಹೊರ ಪದರದ ಶಕ್ತಿ ಕಡಿಮೆಯಾಗುತ್ತದೆ.
- ರೋಗ ನಿರೋಧಕ ಶಕ್ತಿಯು ಹೆಚ್ಚು ಉದ್ವಿಗ್ನಗೊಂಡು ಚರ್ಮದ ಹೊರ ಪದರಿನಿಂದ ನುಸುಳಿದ ರಾಸಾಯನಿಕಗಳು ಮತ್ತು ರೋಗಾಣುಗಳು ರೋಗ ನಿರೋಧಕ ಶಕ್ತಿಯನ್ನು ತೀವ್ರವಾಗಿ ಉದ್ದೀಪನಗೊಳಿಸಿ ಚರ್ಮದಲ್ಲಿ ಉರಿಯೂತ ಉಂಟು ಮಾಡುತ್ತವೆ. ಇದರ ಪರಿಣಾಮವಾಗಿ ಮೂಗು ಮತ್ತು ಪುಪ್ಪಸಗಳಲ್ಲಿ ಹೆಚ್ಚು ಉರಿಯೂತವಾಗಿ, ಮೂಗಿನಲ್ಲಿ ಸಿಂಬಳ ಸೋರುತ್ತದೆ, ಆಗಾಗ ಸೀನು ಬರುತ್ತದೆ ಮತ್ತು ಉಬ್ಬಸ ಕಂಡು ಬರುತ್ತದೆ. ಪುಟ್ಟ ಮಕ್ಕಳು ತಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹಾಗೂ ಗೆಳೆಯರ ಜೊತೆ ಸಾಮಾನ್ಯ ಪರಿಸರದಲ್ಲಿ ಆಡುವಾಗ, ಊಟ ಮಾಡುವಾಗ ಒಬ್ಬರ ದೇಹದಲ್ಲಿರುವ ರೋಗಾಣುಗಳು ಮತ್ತು ರಾಸಾಯನಿಕಗಳು ಇನ್ನೊಬ್ಬರ ದೇಹ ತಲುಪಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ಬೆಳೆಯುತ್ತದೆ. ಅತಿಯಾದ ಕೊಳೆಯಿಲ್ಲದ ಪರಿಶುದ್ಧ ವಾತಾವರಣದಲ್ಲಿ ಮಕ್ಕಳು ರೋಗ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದಿಲ್ಲ. ಇದನ್ನು ಹೈಜಿನ್ ಹೈಪೋಥೆಸಿಸ್ ಎನ್ನುವರು. ಇಂಥ ಮಕ್ಕಳು ಅಟೊಪಿಕ್ ಡರ್ಮಟೈಟಿಸ್ ರೋಗಕ್ಕೆ ಒಳಗಾಗುತ್ತಾರೆ.
- ಪರಿಸರದಲ್ಲಿ ಆಗುವ ಬದಲಾವಣೆಗಳು : ಬೇಸಿಗೆಯ ಬಿಸಿಲು, ಬೆವರುವಿಕೆ, ಚಳಿಗಾಲದ ಚಳಿ, ನಾವು ಹಾಕಿಕೊಳ್ಳುವ ವಸ್ತಗಳು, ಊಟದಲ್ಲಿ ದೋಷ, ಕಡಲೆಕಾಯಿ ಎಣ್ಣೆಗಳು, ಹಾಲು, ಮೀನು ಕೂಡ ಈ ಸಮಸ್ಯೆಯನ್ನು ಹೆಚ್ಚು ತೀವ್ರಗೊಳಿಸುತ್ತವೆ. ಮಾನಸಿಕ ವ್ಯಥೆ, ಪ್ರತಿ ತಿಂಗಳು ದೇಹದಲ್ಲಿ ಉತ್ಪತ್ತಿಯಾಗುವ ಪೌಷ್ಟಿಕಾಂಶ ಸತ್ವಗಳು ಕೂಡ ಈ ರೋಗ ಹೆಚ್ಚಾಗುವಂತೆ ಮಾಡುತ್ತವೆ.
ರೋಗದ ಮೂರು ಹಂತಗಳು
- ಶಿಶು ಹಂತ : ಎರಡು ತಿಂಗಳಿನಿಂದ ಎರಡು ವರ್ಷಗಳವರೆಗೆ ಮಕ್ಕಳು ಎರಡು ತಿಂಗಳು ತುಂಬಿದ ಮೇಲೆ ಮಗುವಿನ ಗಲ್ಲ ಕೆಂಪಾಗುವುದು, ಊದಿಕೊಳ್ಳುವುದು, ನೀರು ಗುಳ್ಳೆಗಳು ಮತ್ತು ಕೆಲವೊಮ್ಮೆ ಕೀವುಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. 2 ರಿಂದ 3 ದಿವಸವಾದ ಮೇಲೆ ನೀರು ಗುಳ್ಳೆಗಳು ಒಣಗಿ, ಹಕ್ಕಳೆಯಾಗುವುವು. ಮಕ್ಕಳು ಕೈಕಾಲುಗಳನ್ನು ಹೆಚ್ಚು ಹಾಸಿಗೆಗೆ ತಿಕ್ಕುವುದರಿಂದ ಕೈ ಕಾಲುಗಳು ಕೆಂಪಾಗಿ ಊದಿಕೊಳ್ಳುವುದು. ನೀರು ಗುಳ್ಳೆಗಳು ಸಹ ಕಾಣಿಸುವವು. ಚರ್ಮದ ಉರಿಯೂತ ಕಡಿಮೆಯಾಗಿ ಮತ್ತೆ 10-12 ದಿವಸಗಳಲಿ ಮರುಕಳಿಸಬಹುದು.
- ಬಾಲ್ಯದ ಹಂತ : 2 ವರ್ಷದಿಂದ 12 ವರ್ಷದ ಪುಟ್ಟ ಮಕ್ಕಳಲ್ಲಿ ಕಂಡ ತುರಿಕೆ ಮತ್ತು ಚರ್ಮದ ಉರಿಯೂತವು ಮುಖ ಮತ್ತು ಕೈಕಾಲುಗಳಲ್ಲಿ ಕಡಿಮೆಯಾಗಿ ಮೊಣಕೈ, ಮೊಣಕಾಲು ಮತ್ತು ಕುತ್ತಿಗೆಯ ಸುತ್ತ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊಣಕೈ ಮತ್ತು ಮೊಣಕಾಲಿನ ಸುತ್ತ ಇರುವ ಚರ್ಮ ಹೆಚ್ಚು ಕಪ್ಪಾಗಿ ದಪ್ಪವಾಗಿ ತುರಿಕೆಯಿಂದ ಕೂಡಿರುತ್ತದೆ ಮತ್ತು ಒಣಗಿರುತ್ತದೆ. ಔಷಧಿ ಲೇಪಿಸಿದಾಗ ತುರಿಕೆ ಕಡಿಮೆಯಾಗುತ್ತದೆ. ಆದರೆ ಅದು ಮತ್ತೆ ಮರುಕಳಿಸಬಹುದು.
- ವಯಸ್ಕರ ಹಂತ : 12 ವರ್ಷದ ಮೇಲಿನವರು ಮೊಣಕೈ, ಮೊಣಕಾಲು ಮತ್ತು ಕುತ್ತಿಗೆಯ ಸುತ್ತ ಒಣವಾದ, ತುರಿಕೆಯಿಂದ ಕೂಡಿದ ದಪ್ಪ ಚರ್ಮ ಇದ್ದು, ದೇಹದ ಇತರ ಭಾಗಗಳಲ್ಲಿ ಚರ್ಮ ದಪ್ಪವಾಗಿ ತುರಿಕೆ ಕಾಣಿಸಿಕೊಳ್ಳುತ್ತದೆ.
ತುಟಿಯ ಚರ್ಮ ವಣವಾಗಿ, ಸಣ್ಣ ಬಿರುಕುಗಳಾಗಿ ತುರಿಕೆ ನೋವು ಕಂಡುಬರುತ್ತದೆ. ನೀರು ಕುಡಿಯುವಾಗ, ಊಟ ಮಾಡುವಾಗ ತುಟಿಯಲ್ಲಿ ನೋವು ಉಂಟಾಗುತ್ತದೆ. ಸ್ತನದ ಸುತ್ತವೂ ಕೂಡ ಧರ್ಮವು ವಣವಾಗಿ ದಪ್ಪವಾಗಿ ಬಿರುಕುಗಳಾಗಿ ಮಗುವಿಗೆ ಹಾಲುಣಿಸುವಾಗ ತೊಂದರೆಯಾಗುತ್ತದೆ.
ಮುಖ್ಯ ಲಕ್ಷಣಗಳು
- ತುರಿಕೆ-ಚರ್ಮದಲ್ಲಿ ನೆವೆ ಮತ್ತು ತುರಿಕೆ ಕಂಡುಬಂದಾಗ ಕೆರೆದುಕೊಳ್ಳಬೇಕು ಎಂದು ಅನಿಸುತ್ತದೆ. ಮತ್ತಷ್ಟು ಕೆರೆಯಬೇಕು ಎಂಬ ಮನಸ್ಸಾಗುತ್ತದೆ. ಎಷ್ಟು ಕೆರೆದರೂ ಮನಸ್ಸಿಗೆ ಸಮಾಧಾನವಾಗುವುದಿಲ್ಲ. ಕೆರೆದು ಕೆರೆದು ಚರ್ಮದ ಮೇಲೆ ತುರಿಕೆಯ ಗಂಟುಗಳು ಆಗುತ್ತವೆ.
- ಮೂಗು ಸೋರುವಿಕೆ-ಮೂಗು ಸೋರುವಿಕೆ, ಸಿಂಬಳ ಸುರಿಯುವಿಕೆ, ಸೀನುಗಳು ಮತ್ತು ಉಬ್ಬಸ ಕಾಣಿಸಿಕೊಳ್ಳುವಿಕೆ.
- ಊಟದಲ್ಲಿ ಮತ್ತು ನಮ್ಮ ಪರಿಸರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ತುರಿಕೆ ಮತ್ತು ಗಾದರಿ ಉಂಟಾಗುತ್ತದೆ.
- ಉಗುರು ಕೆರೆದ ಗಾಯಗಳಲ್ಲಿ, ಸೋಂಕು ತಗುಲಿ ಕೀವು ಗುಳ್ಳೆಗಳು ಮತ್ತು ಜ್ವರ ಕಂಡುಬರುತ್ತದೆ.
ರೋಗ ನಿರ್ಣಯ
ರೋಗಿಗಳಲ್ಲಿ ಮೊದಲಿನಿಂದಲೂ ತುರಿಯುಕ್ತ ಒಣ ಚರ್ಮ ಇದ್ದರೆ ಅಟೋಪಿಕ್ ಡರ್ಮಟೈಟಿಸ್ ಎಂದು ತಿಳಿಯಬಹುದು. ನಿರ್ದಿಷ್ಟವಾಗಿ ಈ ರೋಗವನ್ನು ಗುರುತಿಸಬೇಕಾದರೆ, ತುರಿಕೆಯ ಒಣ ಚರ್ಮದ ಜೊತೆ ಈ ಕೆಳಕಂಡ ಲಕ್ಷಣಗಳಲ್ಲಿ 3 ಅಥವಾ ಹೆಚ್ಚು ಲಕ್ಷಣಗಳು ಇರಬೇಕು.
- ಮೊಣಕೈ, ಮೊಣಕಾಲು ಚರ್ಮ ಹೆಚ್ಚು ಕಪ್ಪಾಗುವಿಕೆ, ಹೆಚ್ಚು ದಪ್ಪವಾಗಿರುವಿಕೆ ಮತ್ತು ತುರಿಕೆಯಿಂದ ಕೂಡಿರುತ್ತದೆ.
- ರೋಗಿಗೆ ಮತ್ತು ರೋಗಿಯ ಸಂಬಂಧಿಗಳಲ್ಲಿ, ಮೇಲಿಂದ ಮೇಲೆ ಮೂಗು ಸೋರುವಿಕೆ, ಸಿಂಬಳ ಸುರಿಯುವಿಕೆ ಮತ್ತು ಸೀನುವಿಕೆ ಕಂಡುಬರುತ್ತದೆ.
- ಕೆಮ್ಮು ಮತ್ತು ಉಬ್ಬಸ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತದೆ.
- ತುರಿಕೆ ಚರ್ಮ, ಮೂಗು ಸೋರುವಿಕೆ ಸಮಸ್ಯೆಗಳು ಮಗುವಿಗೆ 2 ವರ್ಷಗಳು ತುಂಬುವುದಕ್ಕೆ ಮೊದಲೇ ಆರಂಭವಾಗಿರುತ್ತದೆ.
- ದೇಹದ ಎಲ್ಲ ಭಾಗಗಳಲ್ಲಿ ಚರ್ಮ ಒಣಗಿರುತ್ತದೆ.
- ಅಂಗೈ ಮತ್ತು ಅಂಗಾಲುಗಳಲ್ಲಿ ಚರ್ಮದ ರೇಖೆಗಳು ಹೆಚ್ಚು ಇರುತ್ತದೆ.
- ಮುಖದ ಮೇಲೆ ಬಿಳಿಯ ಕಲೆಗಳು ಕಾಣಿಸುತ್ತವೆ.
ರೋಗ ಗುಣಪಡಿಸುವಿಕೆ
ಒಣ ಚರ್ಮದಲ್ಲಿನ ತೇವಾಂಶವು ಉಳಿಯುವಂತೆ ಮಾಡಬೇಕು. ಅಂದರೆ ಕೊಬ್ಬರಿ ಎಣ್ಣೆ, ಆಲಿವ್ ತೈಲ, ಔಡಲ ಎಣ್ಣೆ, ವ್ಯಾಸಲಿನ್, ಸಿರಮೈ ರಸಗಳನ್ನು ಆಗಾಗ ಲೇಪಿಸಬೇಕು.
ಡಾ. ಕೆ. ಹನುಮಂತಯ್ಯ,
ಪ್ರಾಧ್ಯಾಪಕರು,
ಡಾ. ಮೇನಕಾ ಮೋಹನ್
ವೈದೇಹಿ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್
ಚರ್ಮರೋಗ ವಿಭಾಗ,
# 82, ಇಪಿಐಪಿ ಏರಿಯಾ, ವೈಟ್ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/1/2/3/4/5