Vydyaloka

ಆತ್ಮಹತ್ಯೆ……….ಸಮಸ್ಯೆಗೆ ಪರಿಹಾರವಲ್ಲ

ಆತ್ಮಹತ್ಯೆ ಯೋಚನೆ ಮಾಡುವವರು ಸಾಮಾನ್ಯವಾಗಿ, ಮಾನಸಿಕವಾಗಿ, ದುರ್ಬಲರಾಗಿ, ಉದ್ವೇಗ ಹಾಗೂ ಖಿನ್ನತೆಯನ್ನು ಹೊಂದಿರುತ್ತಾರೆ. ಪ್ರತಿಯೊಂದು ಆತ್ಮಹತ್ಯೆಯೂ ವಿನಾಶಕಾರಿ ಹಾಗೂ ಅವರ ಸುತ್ತಲಿನವರ ಮೇಲೆ ಭೀಕರ ಪರಿಣಾಮ ಮಾಡುತ್ತದೆ. 

ಪ್ರಪಂಚದ ಪ್ರತೀ ನೂರು ಸಾವುಗಳಲ್ಲಿ ಒಂದು ಆತ್ಮಹತ್ಯೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸರಾಸರಿ 3,000 ಜನ ಪ್ರತಿನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 20 ಜನರು ಆತ್ಮಹತ್ಯೆಗೆ ಪ್ರಯತ್ನಿಸಿದರೆ ಒಬ್ಬ ಸಾಯುತ್ತಾನೆ. ಪ್ರತೀವರ್ಷ ಸುಮಾರು ಒಂದು ದಶಲಕ್ಷ ಜನ ಆತ್ಮಹತ್ಯೆಯಿಂದ ಸಾಯುತ್ತಾರೆ. ದೇವರು ಅಥವಾ ಪ್ರಕೃತಿ ಕೊಟ್ಟಿರುವ ಸಂಪೂರ್ಣ ಜೀವನವನ್ನು ಅವಧಿಗೆ ಮುನ್ನ ಮುಗಿಸುವ ಆತ್ಮಹತ್ಯೆ ಮಾನಸಿಕ-ಸಾಮಾಜಿಕ, ಸಾಂಸ್ಕøತಿಕ ಹಾಗೂ ವಾತಾವರಣದ ಅಪಾಯಕಾರಿ ಅಂಶಗಳಾಗಿವೆ.

ಇದು ನಮ್ಮೆಲ್ಲರನ್ನೂ ಕಾಡುವ ಪ್ರಶ್ನೆ. ಪ್ರತಿಯೊಂದು ಆತ್ಮಹತ್ಯೆಯೂ ವಿನಾಶಕಾರಿ ಹಾಗೂ ಅವರ ಸುತ್ತಲಿನವರ ಮೇಲೆ ಭೀಕರ ಪರಿಣಾಮ ಮಾಡುತ್ತದೆ. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದರಿಂದ ಆತ್ಮಹತ್ಯೆಯ ಕಳಂಕವನ್ನು ನಿವಾರಿಸಿ, ಉತ್ತಮ ಮಾಹಿತಿ ಹೊಂದಿದ ಕ್ರಿಯೆಯನ್ನು ಪ್ರೋತ್ಸಾಹಿಸುವುದರಿಂದ, ನಾವು ಪ್ರಪಂಚದಲ್ಲಿಯ ನಮ್ಮ ಸುತ್ತಲಿನ ಆತ್ಮಹತ್ಯೆಯ ಪ್ರಯತ್ನಗಳನ್ನು ಕಡಿಮೆ ಮಾಡಬಹುದು. ವಿಶ್ವ ಆತ್ಮಹತ್ಯೆ ಪ್ರತಿಬಂಧಕ ದಿನವು ಇಂಥ ಜಾಗೃತಿಯ ಒಂದು ಅವಕಾಶ ಕೊಡುತ್ತದೆ. ಈ ಕ್ರಿಯೆಯಿಂದ ಭರವಸೆಯನ್ನು ಸೃಷ್ಟಿಸಬಲ್ಲೆವು.

ಸುಮಾರು 50 ವರ್ಷಗಳ ಹಿಂದೆ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಒಬ್ಬ ಮಿತ್ರ ವಿಷ ಕುಡಿದು ಆಸ್ಪತ್ರೆಯಲ್ಲಿ ಮಾತನಾಡಲಾಗದ ಗಂಭೀರ ಸ್ಥಿತಿಯಲ್ಲಿ ಇದ್ದಾಗ ಆತನನ್ನು ಕೇಳಿದೆ ಏಕೆ ವಿಷ ಕುಡಿದೆ? ಆತ ಬರೆದು ಉತ್ತರಿಸಿದ “ನಾನು ಪ್ರೀತಿಸಿದ ಹುಡುಗಿ ನನಗೆ ಕೈ ಕೊಟ್ಟಳು. ಅದಕ್ಕೆ ಸಾಯಬೇಕೆಂದು ವಿಷ ಕುಡಿದೆ”. ನನ್ನ ಈ ಮಿತ್ರನ ಕಥೆ ಕೇಳಿ ನನಗೆ ಆಘಾತವಾಯಿತು. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ ಈತ ಪ್ರೇಮ ವೈಫಲ್ಯದಿಂದ ಸಾಯ ಬಯಸಿದ. ಆದರೆ ವಿಧಿ ಆತನಿಗೆ ಮರಣ ಕೊಡದೆ ಧ್ವನಿ ಕಿತ್ತುಕೊಂಡು ಅಜೀವ ಶವದಂತಾದ ಈತ. ಇನ್ನೊಬ್ಬ ಮಿತ್ರ ರೈಲ್ವೆ ಕಂಬಿಯ ಮೇಲೆ ಮಲಗಿ ರೈಲು ಹಾದು ಹೋಗುವ ತನಕ ಯೋಚನೆ ಮಾಡುತ್ತಿದ್ದ, “ದೇವರು ಇದ್ದಾನೋ ಇಲ್ಲವೋ? ಆತ ಇದ್ದರೆ ನನ್ನನ್ನು ಈ ರೈಲು ಸಾಯಿಸುವುದಿಲ್ಲ”. ಆದರೆ ಈ ಜಿಜ್ಞಾಸೆಯಲ್ಲಿ ನನ್ನ ಮಿತ್ರ ರೈಲಿನಿಂದ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ. ಹೀಗೆ ಅಮೂಲ್ಯವಾದ ಜೀವವನ್ನು ಹಾಗೂ ಜೀವನವನ್ನು ಮುಗಿಸಿಕೊಳ್ಳಲು ಹೋಗಿ, ಇತ್ತ ಜೀವವೂ ಹೋಗದೇ, ಜೀವನವೂ ಭೀಬತ್ಸವಾಗಿರುವ ಎಷ್ಟೋ ಪ್ರಕರಣಗಳನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ.

ಹಾಗಾದರೆ ಆತ್ಮಹತ್ಯೆ ದಾರಿಯನ್ನು ಜನ ಯಾಕೆ ತುಳಿಯುತ್ತಾರೆ?.

ನಾನು ಭದ್ರಾವತಿ ಅಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿದ್ದಾಗ, ರಂಗದ ಮೇಲೆ ಪ್ರದರ್ಶಿಸಿದ ಹಾಗೂ ರೇಡಿಯೋ ಮೂಲಕ ಪ್ರಸಾರ ಮಾಡಿದ ‘ಹದಿಹರೆಯ’ದ ಬಗೆಗಿನ ‘ಆರೋಗ್ಯ ಶಿಕ್ಷಣ’ ಮಾಲಿಕೆಗಳ ಕಾರ್ಯಕ್ರಮಗಳಲ್ಲಿ ‘ಹರೆಯದ ಕಥೆ’, ‘ಪ್ರಾಯದ ಕಥೆ’, ‘ಹರೆಯ ಬಂತು ಹರೆಯ’, ಇವುಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅವುಗಳಲ್ಲಿ ಅನೇಕ ಅಧ್ಯಾಯಗಳಲ್ಲಿ ಹದಿಹರೆಯದಲ್ಲಿ ಉಂಟಾಗುವ ಪ್ರೇಮ, ಕಾಮ, ತಪ್ಪು ಕಲ್ಪನೆಗಳು, ಮಿಥ್ಯೆಗಳು, ಭಾವನೆಗಳ ಆಘಾತ, ಪ್ರೇಮದಲ್ಲಿ ಸೋತವರು, ಪ್ರಾಯದಲ್ಲಿ ಅರಿವಿಲ್ಲದೇ ದುಡುಕಿ ಬಸಿರು ಹೊತ್ತ ಬಾಲಕಿಯರು, ತಂದೆ-ತಾಯಿಗಳ-ಕುಟುಂಬದ ಅಂಕೆ ಬೇಡವೆಂದು, ಮನೆ ಬಿಟ್ಟು ಓಡಿ ಹೋದವರು, ಮನೆಯಲ್ಲಿ ಮದುವೆ ಒಪ್ಪದಾಗ ಜೀವನದಲ್ಲಿ ಸೋತು ಆತ್ಮಹತ್ಯೆ ಮಾಡಿಕೊಂಡ ಹಲವರ ಕಥೆಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿತ್ತು. ಕೆಲಸ ಸಿಗದೇ, ಮೋಜಿನ ಜೀವನ ಸಾಧ್ಯವಾಗದೇ, ಪ್ರೇಮ ಸಂಬಂಧಕ್ಕೆ ಹಿರಿಯರ ಒಪ್ಪಿಗೆ ಸಿಗದಿದ್ದುದು, ಅಂತರ್ಜಾತಿ ವಿವಾಹಗಳನ್ನು ಗ್ರಾಮಗಳಲ್ಲಿ ತಿರಸ್ಕರಿಸಿದ್ದು, ಪೋಲೀಸರ ಬಂಧನದ ಭೀತಿ, ಕೊಲೆ-ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಾಗ ತಪ್ಪಿಸಿಕೊಳ್ಳಲು, ಹೆಂಡತಿ-ಮಗ-ಮಗಳು ತಮ್ಮ ಮಾತು ಕೇಳದಿದ್ದಾಗ ಹಿರಿಯರ ದುಡುಕು ಇವೆಲ್ಲ ಆತ್ಮಹತ್ಯೆಯ ಕಾರಣಗಳು ಎಂದು ಸ್ಥಳೀಯ ಸಂದರ್ಶನಗಳಿಂದ ತಿಳಿಯಿತು. ಪ್ರತೀ ವ್ಯಕ್ತಿ-ಕುಟುಂಬ-ಸಮಾಜ ತನ್ನ ಬೆಂಬಲಕ್ಕಿದೆ ಎಂಬ ನಂಬಿಕೆ ಇರುವ ಯಾವುದೇ ತರುಣ-ತರುಣಿ ಆತ್ಮಹತ್ಯೆಗೆ ಮುಂದಾಗಲಾರರು. ಇತ್ತೀಚಿಗೆ ಕೋವಿಡ್-19ರ ಅವಧಿಯಲ್ಲಿ ‘ಲಾಕ್‍ಡೌನ್’ ಆದಾಗ ಕುಡಿಯಲು ಮದ್ಯ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡವರ ಉದಾಹರಣೆಗಳೂ ಇವೆ.

ನನಗೆ ಕೆಲವು ಚಲನಚಿತ್ರಗಳ ನೆನಪು ಬಂದಿತು. ನನ್ನ ಬಾಲ್ಯದಲ್ಲಿ ನಾನು ನೋಡಿದ್ದ ಬಿ.ಆರ್.ಪಂತುಲು ಅವರ ನಿರ್ದೇಶನ ಹಾಗೂ ಅಭಿನಯದ “ಮೊದಲ್ ತೇದಿ”, ನಂತರದ ಲಕ್ಷ್ಮೀ ಹಾಗೂ ಶ್ರೀನಾಥ್ ಅವರ ಅಭಿನಯದ “ಕುಂಕುಮ ಭಾಗ್ಯ”, ಎಸ್.ನಾರಾಯಣ್ ನಿರ್ದೇಶನದ ವಿಷ್ಣುವರ್ಧನ್ ಅಭಿನಯದ “ಸಿರಿವಂತ”. “ಮೊದಲ್ ತೇದಿ” ಚಿತ್ರದಲ್ಲಿ ಮನೆಯ ಹಿರಿಯ ಆತ್ಮಹತ್ಯೆಯ ಯೋಚನೆ ಮಾಡುತ್ತಾನೆ. ಆಗ ಆತ ದೆವ್ವವಾಗಿ, ಮನೆಗೆ ಬಂದು ಸಾಲ ಮರುಪಾವತಿಗೆ ಪೀಡಿಸುತ್ತಿರುವವರನ್ನು ಕಂಡು, ತನ್ನ ಕುಟುಂಬದ ಹೆಂಡತಿ, ಮಗಳು, ಮಗ ಎಲ್ಲರೂ ಪಡುವ ಯಾತನೆಗಳನ್ನು ಕಂಡು ತಾನು ಏಕಾದರೂ ಆತ್ಮಹತ್ಯೆ ಮಾಡಿಕೊಂಡೆ, ಇದ್ದು ಈ ಸಮಸ್ಯೆಗಳನ್ನು ತನ್ನ ಪ್ರಯತ್ನದಿಂದ ಪರಿಹರಿಸಬಹುದಿತ್ತು ಎಂದು ಚಿಂತಿಸುತ್ತಾನೆ. ತನಗೆ ದೇವರು ಮತ್ತೊಮ್ಮೆ ಪುನರ್ಜನ್ಮ ಕೊಟ್ಟಿದ್ದರೇ………!? ಎಂದು ಪರಿಪರಿಯಾಗಿ ಚಿಂತಿಸುತ್ತಾನೆ. ಮರುಕ್ಷಣದಲ್ಲಿ ಎಚ್ಚರವಾದಾಗ ತಾನು ಇದುವರೆಗೆ ಕಂಡದ್ದು ಕನಸ್ಸೆಂದು ತಿಳಿದಾಗ ಸಂಭ್ರಮಿಸುತ್ತಾನೆ. “ಕುಂಕುಮ ಭಾಗ್ಯ” ಚಿತ್ರದಲ್ಲಿ ಸಂಸಾರ ನಿರ್ವಹಣೆಗಾಗಿ ಹೆಣಗಿ, ಸೋತು ಅಂತಿಮ ಪರಿಹಾರವೆಂದು ಜೀವವಿಮೆ ಹಣ ಪಡೆಯಲು ನಾಯಕ ಹೆಣವೂ ಸಿಗದ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡುತ್ತಾನೆ. ಬಂದ ಹಣದಲ್ಲಿ ತನ್ನ ವಯಸ್ಸಾದ ತಂದೆ, ಹೆಂಡತಿ, ಮಕ್ಕಳು ಇವರು ಚೆನ್ನಾಗಿರಲೆಂದು ಅಜ್ಞಾತವಾಸ ಮಾಡುತ್ತಾನೆ. ನಂತರ ನಡೆಯುವ ಊಹಾತೀತ ಅನುಭವಗಳು ಆತ್ಮಹತ್ಯೆ ಮಹಾ ಪಾಪ, ನಾಟಕ ಮಾಡಿ ಹಣ ಸಂಪಾದಿಸುವುದು ಅಪರಾಧ ಎಂಬ ಅಂಶ ಪ್ರೇಕ್ಷಕರಿಗೆ ಮನವರಿಕೆಯಾಗುತ್ತದೆ. “ಸಿರಿವಂತ” ಚಿತ್ರದಲ್ಲಿ ಸಮಸ್ಯೆಗಳನ್ನು ದೂರ ಮಾಡಿ ತನ್ನ ಮಕ್ಕಳಿಗೆ ಕೆಲಸ, ಹಣ ಸಿಗಲೆಂದು ನಾಯಕ ಆತ್ಮಹತ್ಯೆ ಮಾಡಿಕೊಂಡಾಗ, ಆತನನ್ನು ಯಮದೂತರು ಯಮ ಲೋಕಕ್ಕೆ ಕರೆದೊಯ್ಯುತ್ತಾರೆ. ಆತ ಯಮ ಲೋಕದಲ್ಲಿ ಒಂದು ವಿನಂತಿ ಮಾಡಿಕೊಂಡು ತನ್ನ ಸಂಸಾರ ಈಗ ಹೇಗಿದೆ ಎಂದು ನೋಡಲು ಭೂಮಿಗೆ ವಾಪಸ್ ಬರುತ್ತಾನೆ. ನಂತರ ಇರುವ ಸ್ಥಿತಿಯಲ್ಲಿ ಬಾಳಬೇಕಿತ್ತು ಎಂಬ ಪಶ್ಚಾತ್ತಾಪ ಪಡುತ್ತಾನೆ.

‘ದೀರ್ಘ ಆಯುಷ್ಯ ಹೊಂದಿ ಚೆನ್ನಾಗಿ ಬಾಳಿ’ ಎಂದು ನಮ್ಮ ಹಿರಿಯರ ಆಶೀರ್ವಾದ ಹೇಳುತ್ತೆ. ಆದರೆ ವಿಶ್ವದಲ್ಲಿ, ನಮ್ಮ ದೇಶದಲ್ಲಿ, ಇನ್ನೂ ತಾರುಣ್ಯಾವಸ್ಥೆಯಲ್ಲೇ ಅನೇಕ ಯುವಜನ, ಆತ್ಮಹತ್ಯೆಯೇ ಅಂತಿಮ ಎಂದೆಂದುಕೊಳ್ಳುತ್ತಿದ್ದಾರೆ. ಹದಿಹರೆಯ ಅಪಾಯಕಾರಿ. ಕಾಲಕಾಲಕ್ಕೆ ಸತತ ಬೆಂಬಲ, ಕೌಂಟುಂಬಿಕ ಆಸರೆ, ಸರಿಯಾದ ಮಾರ್ಗದರ್ಶನ ಇಲ್ಲದೇ, ಹೂವಾಗಿ ಅರಳಿ ಜೀವನ ಸವಿಯುವ ಮುನ್ನವೇ, ಮೊಗ್ಗಿನಾವಸ್ಥೆಯಲ್ಲೇ ಮುರುಟಿ ಹೋಗುವ ಜೀವಗಳನ್ನು ತಡೆಯುವುದು, ಅತ್ಯಂತ ತುರ್ತು ಬೇಡಿಕೆ. ಮೊಬೈಲ್ ಕೊಡಿಸಲಿಲ್ಲ, ಪಾಕೆಟ್ ಮನಿ ಕೊಡಲಿಲ್ಲ. ಪರೀಕ್ಷೆಲಿ ಫೇಲು, ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಲವ್ ಫೇಲ್ಯುಯರ್, ವಿಷಮ ದಾಂಪತ್ಯ, ಜೊತೆಗಾರ, ಜೊತೆಗಾರ್ತಿಯ ಅಕ್ರಮ ಸಂಬಂಧ, ಭಾರೀ ಸಾಲ ಮರು ಪಾವತಿ, ಕಟ್ಟಿದ ಸಾಮ್ರಾಜ್ಯ ಕುಸಿಯುತ್ತಿರುವ ಭೀತಿ, ಇವೇ ಮುಂತಾದ ಹಲವು ಕಾರಣಗಳ ಪಟ್ಟಿ ಇಲ್ಲಿದೆ.

ಹದಿಹರೆಯ, ತಾರುಣ್ಯ, ‘ಲೈಂಗಿಕ ಶಿಕ್ಷಣ’ದ ಬಗೆಗೆ ಅನೇಕ ರೇಡಿಯೋ ಧಾರಾವಾಹಿಗಳನ್ನು, ರಂಗಪ್ರದರ್ಶನಗಳನ್ನು ಮಾಡಿರುವ ನಾನು, ಈ ಬಗ್ಗೆ ಅನೇಕ ಬಾರಿ ಚಿಂತಿಸಿ ವಿವಿಧ ಸ್ಥಳಗಳಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಮಾನಸಿಕ ತಜ್ಞರು, ಆಪ್ತ ಸಲಹೆಗಾರರು ಸಮಾಲೋಚಕರರ ಬೆಂಬಲದಿಂದ, ಶಿವಮೊಗ್ಗಾ ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ರೇಡಿಯೋ ರಂಗಭೂಮಿ ಮೇಲೆ ಕಾರ್ಯಕ್ರಮಗಳನ್ನು ಮಾಡಿದ ಅನುಭವದಲ್ಲಿ ಈ ಲೇಖನ ಬರೆಯುತ್ತಿದ್ದೇನೆ.

ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ 2007ರ ಏಪ್ರಿಲ್-ಜೂನ್ ಸಂಚಿಕೆಯಲ್ಲಿ ಬಂದಿರುವ, ಲಕ್ಷ್ಮೀ ವಿಜಯಕುಮಾರ್ ಅವರ ಲೇಖನದ ಕೆಲವು ಸಾಲುಗಳನ್ನೂ ಈ ಲೇಖನದಲ್ಲಿ ಉಲ್ಲೇಖಿಸ ಬಯಸುವೆ. “ನಮ್ಮ ದೇಶದಲ್ಲಿ ಪ್ರತೀ ವರ್ಷದ 1 ಲಕ್ಷಕ್ಕಿಂತ ಹೆಚ್ಚು ಜೀವಗಳು ಆತ್ಮಹತ್ಯೆಯಿಂದ ಮಾಯವಾಗುತ್ತವೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ, ಆತ್ಮಹತ್ಯೆ ದರ 15ಕ್ಕಿಂತ ಹೆಚ್ಚು. ಹೆಚ್ಚಿನ ಅಕ್ಷರತೆ, ಉತ್ತಮ ವರದಿ, ವ್ಯವಸ್ಥೆ, ಕಡಿಮೆ ಹೊರಗಿನ ಆಕ್ರಮಣ, ಹೆಚ್ಚಿರುವ ಸಾಮಾಜಿಕ ಆರ್ಥಿಕ ಸ್ಥಾನ ಹಾಗೂ ಅತಿ ಹೆಚ್ಚು ನಿರೀಕ್ಷೆಗಳೇ ಈ ಸಮಸ್ಯೆಯ ಮೂಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳುವಂತೆ 2015ರಲ್ಲಿ ರೈತರ ಗರಿಷ್ಠ ಆತ್ಮಹತ್ಯೆಗಳು ನಡೆದ ರಾಜ್ಯಗಳು ಮಹಾರಾಷ್ಟ್ರ (3030), ತೆಲಂಗಾಣ (1358), ಕರ್ನಾಟಕ (1197), ಮಧ್ಯಪ್ರದೇಶ (581), ಆಂಧ್ರಪ್ರದೇಶ (516) ಹಾಗೂ ಛರ್ತಿಸ್‍ಗಡ್ (854).

ಇತ್ತೀಚಿನ ಅಂಕಿ-ಅಂಶಗಳನ್ನು ಕಂಡರೆ ರೈತರ ಆತ್ಮಹತ್ಯೆಗಳು ಶೇ.45%ರಷ್ಟು ಕಡಿಮೆ ಆಗಿದೆಯಂತೆ. 2015-16 ಹಾಗೂ 2018-19 ಅವಧಿಯಲ್ಲಿ, 3737 ರೈತರು, ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರರ್ಥ ಪ್ರತೀದಿನ ಸರಾಸರಿ ಇಬ್ಬರ ಆತ್ಮಹತ್ಯೆ. ಪತ್ರಿಕಾ ವರದಿಗಳನ್ನು ಗಮನಿಸಿದರೆ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ; 1 ಲಕ್ಷ ಜನಸಂಖ್ಯೆಗೆ ಸರಾಸರಿ 30.7 ಆತ್ಮಹತ್ಯೆಗಳು. ಕೇರಳ ಹಾಗೂ ತಮಿಳುನಾಡುಗಳಲ್ಲಿ ಪುರುಷರ ಆತ್ಮಹತ್ಯೆ ಸಂಖ್ಯೆ ಹೆಚ್ಚು. 2016ರಲ್ಲಿ ಭಾರತದಲ್ಲಿ 2,30,300ರ ಆತ್ಮಹತ್ಯೆಗಳಾಗಿವೆ. 1990ರಲ್ಲಿ ಇದು 1,64,400 ಇತ್ತು. ಆದರೆ ಕಳೆದ 25 ವರ್ಷಗಳಲ್ಲಿ ಮಹಿಳೆಯ ಆತ್ಮಹತ್ಯೆ ಕಡಿಮೆಯಾಗಿದೆ ಎಂದು ಇನ್ನೊಂದು ವರದಿ ಹೇಳುತ್ತದೆ. 2015ರ ಸಂಖ್ಯೆಯನ್ನು, 2030ರೊಳಗೆ 1/3 ಪ್ರಮಾಣಕ್ಕೆ ಇಳಿಸಬೇಕೆಂಬುದು ವಿಶ್ವ ಸಂಸ್ಥೆ ಗುರಿ.

ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಂಶೋದಕಿ ರಾಖಿ ದಾಂಡೋನ ಹೇಳುವಂತೆ “2016ರಲ್ಲಿ 15ರಿಂದ 29 ವರ್ಷಗಳ ವಯೋಮಿತಿಯವರು. ಬಾಲಕಿಯರಿಗೆ 15ರಿಂದ 19 ವರ್ಷ ಅತ್ಯಂತ ಮುಖ್ಯ. ಹೀಗಾಗಿ ನಮ್ಮ ದೇಶದಲ್ಲಿ ರಾಷ್ಟ್ರೀಯ ಆತ್ಮಹತ್ಯೆ ತಡೆ ಯೋಜನೆ ಬೇಕು.” ಇಡೀ ದೇಶದಲ್ಲಿ ಗಮನಿಸಿದರೆ, ಪ್ರತೀ 1 ಲಕ್ಷ ಮಹಿಳೆಯರಲ್ಲಿ 15 ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿಶ್ವದ ಪ್ರಮಾಣ 7. ಪರುಷರ ಆತ್ಮಹತ್ಯೆ ಭಾರತದಲ್ಲಿ ಪ್ರತೀ ಲಕ್ಷಕ್ಕೆ 21. ವಿಶ್ವದಲ್ಲಿ ಇದು 16. ಭಾರತದಲ್ಲಿ ವಿವಾಹಿತರ ಮಹಿಳೆಯರ ಪಾಲು ಹೆಚ್ಚಿನದು. ಮಹಿಳೆಯರ ಆತ್ಮಹತ್ಯೆಗೆ ಮದುವೆ ಕಡಿಮೆ ರಕ್ಷಣೆ ಕೊಡುತ್ತಿದೆ. ಬೇಗ ಆಗುವ ಮದುವೆ, ವ್ಯವಸ್ಥೆ ಮಾಡಿದ ಮದುವೆ, ಚಿಕ್ಕ ವಯಸ್ಸಿನಲ್ಲೇ ತಾಯ್ತನ, ಕಡಿಮೆ ಸಾಮಾಜಿಕ ಸ್ಥಿತಿ, ಕೌಟುಂಬಿಕ ಹಿಂಸೆ ಹಾಗೂ ಆರ್ಥಿಕ ಅವಲಂಬನೆ- ಇದಕ್ಕೆ ಕಾರಣಗಳು.

ಹಿಂದೂ ಧರ್ಮ ಆತ್ಮಹತ್ಯೆ ಒಪ್ಪುವುದಿಲ್ಲ. ಆತ್ಮಹತ್ಯೆ ಕುಟುಂಬಕ್ಕೆ ಸಾಮಾಜಿಕ ಅಸಹ್ಯತೆ ಹಾಗೂ ಕೆಟ್ಟ ಹೆಸರು ಇರುತ್ತದೆ. ಬಹುಕಾಲ ಆ ಕುಟುಂಬ ಇದನ್ನೇ ಅನುಭವಿಸಬೇಕು. ಆ ಕುಟುಂಬದ ಸದಸ್ಯರ ಗೌರವಾರ್ಹತೆ ಬಗ್ಗೆ ಇದು ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ. ಅವರಿಗೆ ಅನೇಕ ತೊಡಕುಗಳನ್ನು ತರುವ ಸಾಧ್ಯತೆ ಇದೆ. ಮಹಿಳೆಯ ಆತ್ಮಹತ್ಯೆ ಕುಟುಂಬದ ಸದಸ್ಯರಿಗೆ ಹೆಚ್ಚಿನ ಅಗೌರವ ತರುತ್ತದೆ. ಇದು ಕೋರ್ಟ್ ಕೇಸ್ ಹಾಗೂ ಅಪರಾಧ ತನಿಖೆಗೆ ಕಾರಣೀಭೂತವಾಗುತ್ತದೆ. ಭಾರತದ ಅನೇಕ ಭಾಗಗಳಲ್ಲಿ ಆರ್ಥಿಕ ದುಸ್ಥಿತಿ, ರೋಗ, ಸಾಮಾಜಿಕ ಒತ್ತಡಗಳು, ಕೌಟುಂಬಿಕ ಸಮಸ್ಯೆಗಳು ಹಾಗೂ ಕುಟುಂಬದ ಇತರ ಸದಸ್ಯರಿಂದ ದೊರೆತ ಹಿಂಸೆ ಇವೆಲ್ಲ ಆತ್ಮಹತ್ಯೆಗೆ ಕಾರಣಗಳಾಗುತ್ತವೆ. ಹಿಂದೂಧರ್ಮದ ಪ್ರಕಾರ ಮಾನವ ಜನ್ಮ ಅತ್ಯಂತ ಅಮೂಲ್ಯವಾದದ್ದು. ಇದು ನೂರಾರು, ಸಾವಿರಾರು ಜನ್ಮಗಳ ನಂತರ ದೊರೆಯುವ ಅನನ್ಯ ಅವಕಾಶ. ತಮ್ಮ ಜವಾಬ್ದಾರಿಗಳಿಂದ ಪಲಾಯನ ಮಾಡಿ ಇತರರಿಗೆ ತೊಂದರೆ ಕೊಡುವ ಭಯಂಕರ ಗಂಭೀರ ತಪ್ಪು ಇದು. ವ್ಯಕ್ತಿಯ ಆಧ್ಯಾತ್ಮಕ ಪ್ರಗತಿಯನ್ನು ಇದು ತಡೆಯುತ್ತದೆ.

ವೇದಗಳ ಪ್ರಕಾರ ಆತ್ಮಹತ್ಯೆಯೆಂದರೆ ನಿಗದಿತ ಸಮಯಕ್ಕೆ ಮೊದಲೇ ದೇಹ ಕೊಂದುಕೊಳ್ಳುವುದು. ನಿಮಗೆ ಕೊಟ್ಟಿರುವ ಈ ದೇಹ, ಬಂದ ಸಂತಸ ದುಃಖಗಳನ್ನು ನಿಗದಿತ ಅವಧಿಗೆ ಅನುಭವಿಸಲು ಕೊಡಲಾಗಿದೆ. ಆತ್ಮಹತ್ಯೆ ಮಾಡಿಕೊಂಡರೆ ಏನಾಗುತ್ತದೆ ಅನ್ನಲು ಒಂದು ಉದಾಹರಣೆ-6 ತಿಂಗಳ ಜೈಲು ಶಿಕ್ಷೆಯಾದ ಕೈದಿ ತಪ್ಪಿಸಿಕೊಂಡು-ಹೊರಹೋಗಿ-ಮತೆ ಸಿಕ್ಕರೆ ಆತನಿಗೆ ಮತ್ತೆ ಹೆಚ್ಚಿನ ಅವಧಿಗೆ ಶಿಕ್ಷೆಯಾಗುತ್ತದೆ. ಇದೇ ರೀತಿ ನಿಮಗೆ ನಿಮ್ಮ ಹಿಂದಿನ ಜನ್ಮದ ಕೆಲಸ ನೋಡಿ-ಖುಷಿ ಹಾಗೂ ಕಷ್ಟ ಅನುಭವಿಸಲು, ನಿಮಗೆ ಕೊಟ್ಟಿರುವ ದೇಹವನ್ನು ನೀವಾಗಿಯೇ ಕೊಂದುಕೊಂಡರೆ, ಮತ್ತೆ ಅದೇ ದೇಹ ಹೆಚ್ಚಿನ ಅವಧಿಗೆ ನೋವು ಅನುಭವಿಸಬೇಕು. ಇದನ್ನು ಪಾಪ ಎನ್ನುತ್ತೇವೆ.

ಈ ಹಿನ್ನೆಲೆಯಲ್ಲಿ ನಾವು ಆತ್ಮಹತ್ಯೆ ತಡೆಯಲು ಹಾಗೂ ಆತ್ಮಹತ್ಯೆ ವಿಫಲವಾಗಿ ಉಳಿದವರನ್ನು ಗಮನಿಸಲು, ಪ್ರೇಮದ ಬಗೆಗಿನ ಬುದ್ಧನ ಬೋಧನೆಗಳಲ್ಲಿ ನಾಲ್ಕು ಅಂಶಗಳನ್ನು ಗಮನಿಸಬೇಕು. ಮೊದಲನೇಯದು ಮೈತ್ರಿ. ಇದು ಸ್ನೇಹ-ಸೋದರತ್ವ ಪ್ರೀತಿಸುವುದು ಹಾಗೂ ದಯೆ. ಎರಡನೇಯದು ಕರುಣ. ಇನ್ನೊಬ್ಬರ ನೋವು, ಹಿಂಸೆ ಅರಿತು ಅವರ ತೊಂದರೆ ನಿವಾರಿಸಲು ಅವರನ್ನು ಸುಧಾರಿಸಲು ಯತ್ನಿಸುವುದು ಇದು ಸಹಾನುಭೂತಿ. ಮೂರನೇ ಅಂಶ ಮುದಿತ. ಸಂತಸ. ನಿನ್ನ ಸಂತಸ ಆತನ / ಆಕೆಯ ಸಂತಸ. ನಾಲ್ಕನೇಯ ಅಂಶ ಉಪೇಕ್ಷ ತಾರತಮ್ಯ ತೋರದಿರುವುದು.

ಈ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿದಾಗ ಆತ್ಮಹತ್ಯೆಯ ಯೋಚನೆಗಳು ಸಂಕೀರ್ಣವಾದವು. ಕೋವಿಡ್-19ರ ಅವಧಿಯು ಏಕಾಂಗಿತನದ ಭಾವನೆಗಳನ್ನು ಹಾಗೂ ದುರ್ಬಲತೆಯನ್ನು ಹೆಚ್ಚಿಸಿದೆ. ಆತ್ಮಹತ್ಯೆಯ ಯೋಚನೆ ಮಾಡುವವರು ಸಾಮಾನ್ಯವಾಗಿ, ಮಾನಸಿಕವಾಗಿ, ದುರ್ಬಲರಾಗಿ, ಉದ್ವೇಗ ಹಾಗೂ ಖಿನ್ನತೆಯನ್ನು ಹೊಂದಿರುತ್ತಾರೆ. ಅವರಿಗೆ ಸದಾ ಇರುವ ಭಾವ-ತಾವು ತಮ್ಮ ಕುಟುಂಬ-ಸ್ನೇಹಿತರು-ಸುತ್ತಲಿನವರ ಮೇಲೆ ತಾವು ಭಾರವಾಗಿ ಬದುಕುತ್ತಿದ್ದೇವೆ ಎಂಬುದು. ನೀವು ಕಾಳಜಿ ತೋರಿಸುವುದರಿಂದ ಯಾರಿಗಾದರೂ ಭರವಸೆಯನ್ನು ಮೂಡಿಸಬಹುದು. ಸಹಾಯ ಕೇಳುವಲ್ಲಿ ಇರುವ ದೊಡ್ಡ ತಡೆಗೋಡೆ ಎಂದರೆ ಕಳಂಕ ಭಾವನೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ಅಥವಾ ಅಯಶಸ್ವಿಯಾದವರ ಮನಸ್ಸಿನ ಒಳನೋಟ ಹಾಗೂ ಅವರ ಅನುಭವ ಇತರರಿಗೆ ಮಾರ್ಗದರ್ಶನ ನೀಡಬಲ್ಲದು.

ಈ ಹಿನ್ನೆಲೆಯಲ್ಲಿ ಎಲ್ಲರೂ ಪಸರಿಸಬೇಕಾದ ಮಾಹಿತಿ ಎಂದರೆ-
1. ಆತ್ಮಹತ್ಯೆಯು ತಡೆಯಲು ಹೆಚ್ಚಿನ ಅರಿವು ಹಾಗೂ ಜಾಗೃತಿ ಮೂಡಿಸುವುದು.
2. ಆತ್ಮಹತ್ಯೆ ಪ್ರತಿಬಂಧಿಸಲು ಶೈಕ್ಷಣಿಕ ಅರಿವು ಹೆಚ್ಚಿಸುವುದು.
3. ಆತ್ಮಹತ್ಯೆ ಜಾಗೃತಿಯ ಬಗ್ಗೆ ಮಾಹಿತಿಯನ್ನು ಹರಡುವುದು.
4. ಆತ್ಮಹತ್ಯೆಯ ಬಗ್ಗೆ ಇರುವ ಕಳಂಕ ಹಾಗೂ ಅಪರಾಧಿ ಭಾವವನ್ನು ಕಡಿಮೆ ಮಾಡುವುದು.

ಇಂಥವರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹಿಸಿ, ಅವರನ್ನು ಭೇಟಿಯಾಗಿ, ಮಾತಾಡಿಸಿ, ಅವರ ಅನುಭವಗಳನ್ನು ಆಪ್ತವಾಗಿ, ಸ್ನೇಹದಿಂದ, ಕೇಳುವುದರಿಂದ, ಇಂಥವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕಾಗಿದೆ. ನೋವು ಹಾಗೂ ಸಮಸ್ಯೆಗಳಲ್ಲಿರುವವರಿಗೆ ನಾವು ಬೆಳಕಿನ ದಾರಿದೀಪವಾಗಬಲ್ಲೆವು.

ಎನ್.ವ್ಹಿ.ರಮೇಶ್
ಮೊ. 9845565238

 

Share this: