Vydyaloka

ಅಸ್ತಮಾ ಹಾಗೂ ಅಲರ್ಜಿ – ಹೀಗೂ ತಡೆಗಟ್ಟಬಹುದೇ?

ಅಸ್ತಮಾ ಹಾಗೂ ಅಲರ್ಜಿ ಅತ್ಯಂತ ತೀವ್ರಗತಿಯಲ್ಲಿ ಅಪಾಯಕಾರಿ ಮಟ್ಟವನ್ನು ತಲುಪುವುದಕ್ಕೆ ಕಾರಣ ಆಧುನೀಕರಣದ ಧಾವಂತದಲ್ಲಿ ಗರ್ಭಿಣಿಯರಿಗೆ  ಪರಿಸರದ ಸ್ಪರ್ಶ ದೂರವಾಗಿರುವುದು. ಕಳೆದ ಮೂರು ದಶಕಗಳಿಂದ ಅಸ್ತಮಾವು ಅತಿವೇಗದಲ್ಲಿ ಹೆಚ್ಚುತ್ತಿದೆ. ಯಾವ ಜನರು ಹೊಲ-ಗದ್ದೆಗಳಲ್ಲಿ ಬೆಳೆದಿರುತ್ತಾರೆ ಅವರಲ್ಲಿ ಅಸ್ತಮಾಕ್ಕೆ ಒಳಗಾಗುವ ಅಪಾಯಗಳು ಇತರರಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಎಂಬುದು ಕಂಡುಬಂದ ವಿಚಾರ. ಬಾಲ್ಯದಲ್ಲಿ ಮಕ್ಕಳು ಮಣ್ಣು, ಗಿಡ, ಕೊಳೆ, ಗೋ, ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ಬರುವುದನ್ನು ಹುರಿದುಂಬಿಸುವ.


ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವ ಮಕ್ಕಳನ್ನು ಹೊಂದುವುದು ಬಹಳಷ್ಟು ಕುಟುಂಬಗಳ ಸಮಸ್ಯೆ. ಇದೊಂದು ದೀರ್ಘಾವಧಿ ಕಾಯಿಲೆ. ಶ್ವಾಸಕೋಶ ಹಾಗೂ ಶ್ವಾಸನಾಳಗಳ ಉರಿಯೂತ, ಉಸಿರಾಟದ ನಾಳೆಗಳು ಸಂಕೋಚ ಹೊಂದುವುದು, ಎಲ್ಲ ಕಾರಣಗಳಿಂದ ಉಸಿರಾಟಕ್ಕೆ ಕಷ್ಟವಾಗುವುದು ಇದರ ಲಕ್ಷಣಗಳು. ಈಗಲೂ ಕೂಡ ಬಹಳಷ್ಟು ಜನರಿಗೆ ಅಸ್ತಮಕ್ಕೆ ಕಾರಣಗಳು ಅನುವಂಶೀಯ ಹಾಗೂ ಪರಿಸರ ಎಂಬ ನಂಬಿಕೆಯಿದೆ. ಇಂತಹ ವಿವರಣೆಗಳು ಯಾವುದೇ ಕಾಯಿಲೆಯಲ್ಲಿ ಬಹಳಷ್ಟು ಅಂಶಗಳು ಒಳಗೊಂಡಿದ್ದ ಸಂದರ್ಭದಲ್ಲಿ ವಿಜ್ಞಾನಿಗಳಿಂದ ಬಹುನಿರೀಕ್ಷಿತ. ಆದರೆ ವಿಜ್ಞಾನಿಗಳು ಮತ್ತು ನಮಗೂ ಕೂಡ ನಿಜವಾದ ಕಾರಣಗಳು ಇನ್ನೂ ಅಸ್ಪಷ್ಟ.

ಹಾಗಾದರೆ ಅಸ್ತಮಾದ ಬಗ್ಗೆ ನಮಗೆ ತಿಳಿದಿರುವುದು ಏನು? ಅಸ್ತಮಾವು ಜಗತ್ತಿನ ಕೆಲವೊಂದು ಭಾಗಗಳಲ್ಲಿ ಬಹಳ ತಾರಕಕ್ಕೇರಿದೆ ಎಂಬುದಷ್ಟೇ ನಮಗೆ ಗೊತ್ತಿರುವ ಸಂಗತಿ. ಕಳೆದ ಮೂರು ದಶಕಗಳಿಂದ ಅಸ್ತಮಾವು ಅತಿವೇಗದಲ್ಲಿ ಹೆಚ್ಚುತ್ತಿದೆ. ಒಂದೇ ಒಂದು ತಲೆಮಾರಿನಲ್ಲಿ ಆಸ್ತಮಾ ರೋಗಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಉತ್ತರ ಅಮೆರಿಕಾ, ಆಸ್ಟ್ರೇಲಿಯಾ, ಹಾಗೂ ಪಾಶ್ಚಾತ್ಯ ಯುರೋಪಿಯನ್ ದೇಶಗಳ ವರದಿಯ ಪ್ರಕಾರ ಹತ್ತರಿಂದ ಇಪ್ಪತ್ತು ಶೇಕಡಾದಷ್ಟು ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ. ಅಂದರೆ ಜಗತ್ತಿನ ಒಟ್ಟು 300 ಮಿಲಿಯನ್ ಮಕ್ಕಳು. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಮಕ್ಕಳ ದೀರ್ಘಕಾಲೀನ ರೋಗ ಅಸ್ತಮ. ಅತ್ಯಂತ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗುವದಕ್ಕೆ ಕಾರಣ ಅಸ್ತಮ. ಮಕ್ಕಳು ಹೆಚ್ಚಾಗಿ ಶಾಲೆಗಳಿಗೆ ರಜೆ ಮಾಡಲು ಕಾರಣ ಅಸ್ತಮ. ಇವೆಲ್ಲದಕ್ಕೂ ಮೀರಿದ್ದು ಎನ್ನುವಂತೆ, ಬೆಳವಣಿಗೆ ಹೊಂದಿದ ರಾಷ್ಟ್ರಗಳಲ್ಲಿ ಅಸ್ತಮಾ ಅಷ್ಟೊಂದು ಹೆಚ್ಚಾಗಿಲ್ಲ.

ಅಸ್ತಮಾವನ್ನು ಗುಣಪಡಿಸುವುದು ಸಾಧ್ಯವಿಲ್ಲ:

ಇಂದಿನ ಸತ್ಯವೇನೆಂದರೆ ಅಸ್ತಮಾವನ್ನು ಗುಣಪಡಿಸುವುದು ಸಾಧ್ಯವಿಲ್ಲ. ಇದಕ್ಕೆ ಚಿಕಿತ್ಸೆ ಕೊಡುವುದು ಕೂಡ ಕಷ್ಟದ ಸಂಗತಿ. ಒಂದು ವೇಳೆ ಚಿಕಿತ್ಸೆ ಕೊಟ್ಟರೂ ಕೂಡ ಮರು ಕಳಿಸುವುದನ್ನು ತಡೆಗಟ್ಟುವುದು ಹರಸಾಹಸವೇ ಸರಿ. ಸಾರ್ವಜನಿಕ ಆರೋಗ್ಯದಲ್ಲಿ ಅತ್ಯಂತ ಹೆಚ್ಚು ವೆಚ್ಚವನ್ನು ಬಯಸುವ ರೋಗವೆಂದರೆ ಇದೇ ಸರಿ. ಇಡೀ ಜಗತ್ತಿನಲ್ಲಿ ಆರೋಗ್ಯಕ್ಷೇತ್ರಕ್ಕೆ ಸವಾಲು ಆಗಿರುವುದು ಈ ಉಸಿರಾಟದ ಸಮಸ್ಯೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಅಸ್ತಮಾದ ದರವು ಜನ ದಟ್ಟಣೆ ಇರುವ ಕಡಿಮೆ ಬೆಳವಣಿಗೆ ಹೊಂದಿರುವ ರಾಷ್ಟ್ರಗಳಲ್ಲಿ ಏರುವುದಕ್ಕೆ ತೊಡಗಿದೆ. ಇದೆಲ್ಲವನ್ನು ಗಮನಿಸಿದರೆ ನಮ್ಮಲ್ಲಿ ಕುತೂಹಲ ಮೂಡುತ್ತದೆ. -” ಇಷ್ಟೊಂದು ವೇಗದಲ್ಲಿ ಉಬ್ಬಸವು ಬೆಳೆಯುತ್ತಾ ಹೋದರೆ, ಎರಡು ತಲೆಮಾರುಗಳ ನಂತರ ಪರಿಸ್ಥಿತಿ ಹೇಗಾಗಬಹುದು? ಮುಂದೆ ಬರುವ ಮರಿ ಮಕ್ಕಳಿಗೆ, ಪ್ರತಿಯೊಬ್ಬರಿಗೂ ಕೈಯಲ್ಲಿ ಉಬ್ಬಸಕ್ಕೆ ಇರುವ ಇನ್ಹೇಲರ್ ಅನಿವಾರ್ಯ ಆದೀತೆ? ಹುಳುಕು ಹಲ್ಲು ಗಳಂತೆ ಅಸ್ತಮಾ ಕೂಡ ಮಾನವ ಬದುಕಿನ ಅವಿಭಾಜ್ಯ ಅಂಗವಾಗಿ ಬಿಡಬಹುದೆ?

ಅಸ್ತಮಕ್ಕೆ ಅನುವಂಶೀಯ ಹಿನ್ನೆಲೆ ಇರುವುದು ಗೊತ್ತಿರುವ ವಿಚಾರವೇ ಆಗಿದೆ. ಅಧ್ಯಯನಗಳು ಅಸ್ತಮಾ ದೊಂದಿಗೆ ಅನೇಕ ಜೀನುಗಳು ತಳಕು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಿದ್ದರೂ ಬಹುಸಂಖ್ಯೆಯಲ್ಲಿ ಅಸ್ತಮಾವು ಕುಟುಂಬದಲ್ಲಿ ವರ್ಗಾವಣೆ ಹೊಂದುವುದನ್ನು, ವಂಶವಾಹಿಗಳು ವಿವರಿಸಲಾರವು. ಈ ಕಾಯಿಲೆಯು ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಇರುವುದಕ್ಕೆ ಕಾರಣವನ್ನು ಕೂಡ ವಂಶವಾಹಿಗಳ ಸ್ಥಿತ್ಯಂತರ ವಿವರಿಸಲಾರದು. ಬಹುಶಹ ಒಂದೇ ಒಂದು ತಲೆಮಾರಿನಲ್ಲಿ ನಮ್ಮ ವಂಶವಾಹಿಗಳಲ್ಲಿ ಅಷ್ಟೊಂದು ಬದಲಾವಣೆ ಆಗಿರಲಾರದು. ಆದಕಾರಣ ಪರಿಸರದಲ್ಲಿನ ಪರಿವರ್ತಿತ ಅಂಶಗಳು ಇದೆಲ್ಲದಕ್ಕೆ ಪ್ರಭಾವಿ ಕಾರಣಗಳಿರಬಹುದು.

ಪರಿಸರ ಹಾಗೂ ಅಸ್ತಮಾ ರೋಗಕ್ಕೆ ಇರುವ ಸಂಬಂಧದ ಅಧ್ಯಯನ:

ಸಂಶೋಧಕರ ತಂಡಗಳು ಆಹಾರ, ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು, ಸೂರ್ಯನ ಬಿಸಿಲಿನ ಸಂಪರ್ಕ, ಮಾಲಿನ್ಯ, ಪುಷ್ಪಪರಾಗ, ಜನಾಂಗ, ಪ್ರಾಣಿಗಳ ಜೊತೆಗಿನ ಸಂಪರ್ಕ, ಪಟ್ಟಣ ಹಾಗೂ ಹಳ್ಳಿಯ ವಾತಾವರಣ ಗಳು, ನಿರ್ದಿಷ್ಟ ಕೀಟಗಳ ಜೊತೆಗೆ ಸಂಪರ್ಕ, ಹಾಗೂ ಇನ್ನೂ ಅನೇಕ ಅಂಶಗಳ ಬಗ್ಗೆ ಅಧ್ಯಯನ ನಡೆಸುತ್ತಲೇ ಇದೆ. ಇವುಗಳಲ್ಲಿ ಬಹುಪಾಲು ಅಧ್ಯಯನಗಳು ಪರಿಸರದಲ್ಲಿನ ನಿಗದಿತ ಅಂಶಗಳು ಹಾಗೂ ಅಸ್ತಮಾ ರೋಗಕ್ಕೆ ಇರುವ ಸಂಬಂಧವನ್ನು ಗಟ್ಟಿಗೊಳಿಸಿವೆ. ಅದರಲ್ಲೂ ಇನ್ನೂ ಪ್ರಮುಖವಾದದ್ದು ಹಾಗೂ ಪ್ರಬಲವಾದದ್ದು ಹೊಲ ಹಾಗೂ ಕೃಷಿ ಭೂಮಿಗಳ ವಾತಾವರಣ. ಯಾವ ಜನರು ಹೊಲ-ಗದ್ದೆಗಳಲ್ಲಿ ಬೆಳೆದಿರುತ್ತಾರೆ ಅವರಲ್ಲಿ ಅಸ್ತಮಾಕ್ಕೆ ಒಳಗಾಗುವ ಅಪಾಯಗಳು , ಇತರರಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಎಂಬುದು ಕಂಡುಬಂದ ವಿಚಾರ. ಅವರ ಜೀವನ ಪದ್ಧತಿಯಲ್ಲಿನ ಯಾವುದೋ ಅಂಶವು ಆಸ್ತಮಾಕ್ಕೀಡಾಗುವದರಿಂದ ರಕ್ಷಣೆಯನ್ನು ನೀಡಿದೆ ಎಂದು ಅರ್ಥವಾಗುತ್ತದೆ. ಹಾಗಾದರೆ ಅದು ಏನು?

ಉತ್ತರ ಅಮೆರಿಕಾದಲ್ಲಿನ ಅಮಿಶ್ ಜನಾಂಗವನ್ನು ಅಧ್ಯಯನ ಮಾಡಿದಾಗ ಅವರಲ್ಲಿ ಪಾಶ್ಚಾತ್ಯ ಜನಾಂಗದಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಅಸ್ತಮ ಮತ್ತು ಅಲರ್ಜಿಗಳ ಪ್ರಾಬಲ್ಯವು ಕಂಡುಬರಲಿಲ್ಲ. Dr Mark Holbreich ಎಂಬ ಅಲರ್ಜಿ ತಜ್ಞರು ಇಪ್ಪತ್ತು ವರ್ಷಗಳ ಕಾಲ ಅವರನ್ನು ಚಿಕಿತ್ಸೆ ಮಾಡುತ್ತಿದ್ದ ಅವಧಿಯಲ್ಲಿ ಈ ಅಂಶವನ್ನು ಗಮನಿಸಿದರು. 157 ಅಮಿಶ್ ಕುಟುಂಬಗಳನ್ನು 3000 ರೈತ Swiss ಕುಟುಂಬಗಳಿಗೆ ಹಾಗೂ 11000 ರೈತರಲ್ಲದ Swiss ಕುಟುಂಬಗಳಿಗೆ ಹೋಲಿಸಿ ಮಾಡಿದ ಇವನ ಅಧ್ಯಯನದಲ್ಲಿ ದಾಖಲಾದ ಅಂಶಗಳಿವೆ. ಕೇವಲ 5 ಶೇಕಡಾದಷ್ಟು ಅಮಿಶ್ ಮಕ್ಕಳಲ್ಲಿ ಮಾತ್ರ ಅಸ್ತಮಾ ಕಂಡುಬಂದದ್ದು. Swiss ದೇಶದ 6.8 ಶೇಕಡಾದಷ್ಟು ರೈತ ಮಕ್ಕಳಲ್ಲಿ ಹಾಗೂ 11 ಶೇಕಡಾದಷ್ಟು ರೈತರಲ್ಲದ Swiss ಮಕ್ಕಳಲ್ಲಿ ಅಸ್ತಮಾ ಪತ್ತೆಯಾಯಿತು. ಅಮಿಶ್ ಮಕ್ಕಳಲ್ಲಿ ಕಂಡುಬಂದ ಅಸ್ತಮಾದ ಶೇಕಡಾವಾರು ದರವು ತಲೆತಲಾಂತರಗಳಿಂದ ಜನಾಂಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪ್ರಮಾಣವೇ ಆಗಿದೆ. ಹಾಗಾದರೆ ಅಸ್ತಮಾದ ತಡೆಗಟ್ಟುವಿಕೆಗೆ ಮಾರ್ಗಗಳನ್ನು ಅರಸಬೇಕಾದರೆ ಅಮಿಶ್ ಜನಾಂಗದ ಮಕ್ಕಳನ್ನು ಆರಿಸಿಕೊಳ್ಳಬೇಕು ಎಂಬುದಾಗಿ ವಿಜ್ಞಾನಿಗಳಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಅಮಿಶ್ ಜನಾಂಗವು ಸಾಂಪ್ರದಾಯಿಕ ಜೀವನ ಪದ್ಧತಿಯನ್ನು ಅನುಸರಿಸಿತ್ತು. ಕಾರು, ವಿದ್ಯುತ್ ಹಾಗೂ ಆಧುನಿಕವಾದ ಯಾವುದೇ ತಾಂತ್ರಿಕ ಪರಿ ಕರಗಳಿಲ್ಲದ ಜೀವನ ಅವರದಾಗಿತ್ತು. ಅದು ಬಹುಶಹ 18ನೇ ಶತಮಾನದ ರೀತಿಯ ಬದುಕು. ಎಲ್ಲಾ ಕುಟುಂಬಗಳು ಹೊಲಗದ್ದೆಗಳಲ್ಲಿ ದುಡಿಯುವುದರೊಂದಿಗೆ, ಪಶುಪಾಲನೆಯನ್ನು ಕೂಡ ಮಾಡುತ್ತಿದ್ದರು. ಒಟ್ಟಿನಲ್ಲಿ ತಾಂತ್ರಿಕತೆಯಿಂದ ಮುಕ್ತವಾದ ನೈಸರ್ಗಿಕ ಜೀವನವನ್ನು ಅವರು ಬದುಕುತ್ತಿದ್ದರು. 5 ವರ್ಷ ವಯಸ್ಸಿನ ಬಾಲಕರು ದನಗಳ ಹಾಲನ್ನು ಕರೆಯುವುದು, ಮೂರು ವರ್ಷ ವಯಸ್ಸಿನ ಮಕ್ಕಳು ದನಗಳ ಹಟ್ಟಿಗೆ ಹೋಗುವುದು, ಅಲ್ಲಿನ ಪದ್ಧತಿ. ಹೆಚ್ಚಿನ ಶಿಶುಗಳು ನಡೆಯುವುದನ್ನು ದನದ ಹಟ್ಟಿಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. ಮಣ್ಣು, ಕೊಳೆ ಮತ್ತು ಪ್ರಾಣಿಗಳೊಂದಿಗೆ ಸಂಪರ್ಕವು ಜೀವನದ ಆರಂಭದಲ್ಲಿ, ಅಂದರೆ ಬಾಲ್ಯದಲ್ಲಿ ಅವರಿಗೆ ಆಗುತ್ತಿತ್ತು. ಗರ್ಭಿಣಿಯರು ಹೆರಿಗೆಯ ತನಕದ ಅವಧಿಯಲ್ಲಿ ದನದ ಹಟ್ಟಿಗಳಲ್ಲಿ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದರು. ಈ ಮೂಲಕ ಪ್ರಸವಪೂರ್ವದಲ್ಲಿ ಅವರ ಶಿಶುಗಳನ್ನು ಅಸಂಖ್ಯ ಸೂಕ್ಷ್ಮಾಣುಗಳ ಸಂಪರ್ಕಕ್ಕೆ ತರುತ್ತಿದ್ದರು.

ಬಹಳ ಕುತೂಹಲಕಾರಿ ಅಧ್ಯಯನವನ್ನು ನಡೆಸಲಾಗಿದೆ. Amish ಸಮುದಾಯದ ಜನರಂತೆ Hutterite ಸಮುದಾಯದ ಜನರು ಎಲರ್ಜಿ ಮತ್ತು ಅಸ್ತಮಾ ಗಳಿಂದ ಅಷ್ಟು ಸುರಕ್ಷಿತರಲ್ಲ. Hutterite ಜನಾಂಗದವರು ಕೆಲವೊಂದು ವಿಷಯಗಳಲ್ಲಿ Amish ಜನಾಂಗದವರೊಂದಿಗೆ ಸಾಮ್ಯತೆಯನ್ನು ಹೊಂದಿದ್ದಾರೆ. ಇಬ್ಬರೂ ಕೂಡ ಕಟ್ಟುನಿಟ್ಟಾದ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವವರು ಮತ್ತು ಜರ್ಮನ್ ಮೂಲದವರು. ಆದರೆ Hutterite ಜನಾಂಗದವರು ತಾಂತ್ರಿಕ ಅಭಿವೃದ್ಧಿಯನ್ನು ಸ್ವಾಗತಿಸಿದರು, ಹೊಲಬನ್ನು ಉಳುವುದಕ್ಕೆ ಯಂತ್ರಗಳನ್ನು ಬಳಸುವವರು, ಮತ್ತು ಬಹಳ ದೊಡ್ಡದಾದ ಹೊಲಗಳ ಕೃಷಿ ಮಾಡುವವರು, ನಮ್ಮ ಸಾಕುಪ್ರಾಣಿಗಳಿಗೆ ಆಂಟಿಬಯೋಟಿಕ್ ಗಳನ್ನು ಅಧಿಕವಾಗಿ ಬಳಸುವವರು. Amish  ಜನಾಂಗದವರು ಆದಷ್ಟು ನಿಸರ್ಗಕ್ಕೆ ನಿಕಟವಾಗಿ ಬದುಕುವರು.

ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಸೂಕ್ಷ್ಮಾಣುಗಳ ಪಾತ್ರವೂ ಮಹತ್ವದ್ದು:

ಹೊಲಗಳಲ್ಲಿ ಅಧಿಕ ವೈವಿಧ್ಯದ ಸೂಕ್ಷ್ಮಾಣು ಗಳಿವೆ. ದನದ ಕೊಟ್ಟಿಗೆ ಗಳಲ್ಲಿನ ಸೂಕ್ಷ್ಮಾಣುಗಳು ಕೂಡ ಮನೆಯ ಒಳಗಡೆ ಪ್ರವೇಶ ಪಡೆದಿರುತ್ತವೆ. ಈ ಎರಡು ಅಂಶಗಳು ಸೇರಿ ಬಹಳ ಪ್ರಬಲವಾದ ರಕ್ಷಣೆಯನ್ನು ಅಸ್ತಮಾದಿಂದ ನೀಡುತ್ತವೆ. ಈ ಅಂಶವನ್ನು ಯುರೋಪಿನ ಹೊಲಗಳಲ್ಲಿ ಅಧ್ಯಯನ ಮಾಡಿ ವರದಿ ನೀಡಿದವರು ಜರ್ಮನಿಯ Munich ವಿಶ್ವವಿದ್ಯಾಲಯದ Dr. Erika von Mutius ಅವರ ಒಂದು ಅಧ್ಯಯನದ ಪ್ರಕಾರ ತಾಯಿಯ ಹೊದಿಕೆಯಲ್ಲಿ ನ ಸೂಕ್ಷ್ಮಾಣುಗಳ ಸಂಖ್ಯೆಯು ಹೆಚ್ಚಾಗಿದ್ದಾಗ ಅವಳ ಮಕ್ಕಳಲ್ಲಿ ಅಸ್ತಮಾ ದೊಂದಿಗೆ ಹೆಚ್ಚಾಗಿ ತಳಕು ಹಾಕಿಕೊಳ್ಳುವ Eczema ಚರ್ಮರೋಗ ಉಂಟಾಗುವ ಸಾಧ್ಯತೆಯೂ ಕಡಿಮೆ ಎಂಬುದು ಸ್ಪಷ್ಟವಾಯಿತು. ಇವೆಲ್ಲದರ ಆಧಾರದಿಂದ, ಹೊಲದಲ್ಲಿನ ಸೂಕ್ಷ್ಮಾಣುಗಳು ಮನುಷ್ಯನ ದೇಹದೊಂದಿಗೆ ಆರಂಭದಿಂದಲೇ ಬಾಲ್ಯದಲ್ಲಿ ಬಹುಬೇಗನೆ ಸಂಪರ್ಕಕ್ಕೆ ಬಂದಲ್ಲಿ, ಮಕ್ಕಳು ಈ ರೋಗಗಳನ್ನು ಹೊಂದುವುದು ತಪ್ಪಿ ಹೋಗುವುದು.

ಅಷ್ಟೇ ಅಲ್ಲದೆ, ಇನ್ನೊಂದು ಅಧ್ಯಯನದ ಪ್ರಕಾರ, ಹೊಲಗದ್ದೆಗಳ ಸಂಪರ್ಕಕ್ಕೆ ಬಂದ ನವಜಾತ ಶಿಶುಗಳು ಅವುಗಳ ಸಂಪರ್ಕಕ್ಕೆ ಬಾರದ ಶಿಶು ಗಳಿಗಿಂತ ಬಹಳ ವಿಶೇಷವಾದ ರೋಗನಿರೋಧಕ ಶಕ್ತಿಯ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೊಲಗಳಲ್ಲಿ ಕೆಲಸ ಮಾಡಿ ಜೀವಿಸುವ ತಾಯಂದಿರ ಹೊಕ್ಕುಳಬಳ್ಳಿಯ ಮಾದರಿಯನ್ನು ಪರಿಶೀಲಿಸಿದಾಗ ರಕ್ಷಣಾತ್ಮಕ “T cells ” ಅಧಿಕವಾಗಿ ಇದ್ದದ್ದು ಕಂಡುಬಂತು. ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಅವುಗಳ ಪಾತ್ರವೂ ಮಹತ್ವದ್ದು. ಅಸ್ತಮಾ ಹಾಗೂ ಅಲರ್ಜಿ ಗಳನ್ನು ಬಾರದಂತೆ ತಡೆಗಟ್ಟುವಲ್ಲಿಯೂ ಅವುಗಳ ಪಾತ್ರ ಪ್ರಮುಖ.

Also watch the video :

ಅಲರ್ಜಿಗೆ ಕಾರಣಗಳು ಹಾಗೂ ಅದರ ನಿವಾರಣೆ..! | What is Allergy? Causes and Treatment

ಸಂಶೋಧಕರು ತುಲನಾತ್ಮಕ ಅಧ್ಯಯನಕ್ಕೆ ಆರಿಸಿಕೊಂಡ ಎರಡು ಗುಂಪುಗಳು ಕೂಡ ಸಮಾನ ಸಾಮುದಾಯಿಕ ಮೂಲವನ್ನು ಹೊಂದಿದ್ದು, ವ್ಯತ್ಯಾಸವಿರುವುದು ಕೇವಲ ಅವರ ಬದುಕಿನ ಪರಿಸರದಲ್ಲಿ ಮಾತ್ರ. ಚಿಂತನೆಗೀಡು ಮಾಡುವ ಸಂಗತಿಯೆಂದರೆ, ಗರ್ಭಿಣಿಯರು ಹೊಲಗಳ, ದನದ ಹಟ್ಟಿಗಳ ಸಂಪರ್ಕಕ್ಕೆ ಬಂದಲ್ಲಿ, ಸಹಜ ರೀತಿಯಲ್ಲಿ ಗರ್ಭದಲ್ಲಿನ ಶಿಶುವಿನ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ದನ ಇತ್ಯಾದಿ ಸಾಕುಪ್ರಾಣಿಗಳ ಹಾಗೂ ಕೊಳೆಯ ಸಂಪರ್ಕಕ್ಕೆ ಬರುವುದರ ಮೂಲಕ ತಾಯಂದಿರು ತಮ್ಮ ಮಕ್ಕಳಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಊರ್ಜಿತ ಗೊಳಿಸುತ್ತಾರೆ. ಆ ಮೂಲಕ ಭವಿಷ್ಯದಲ್ಲಿ ಅಲರ್ಜಿ ಉಂಟುಮಾಡುವ ಯಾವುದೇ ಸಂಗತಿಗಳನ್ನು ತಾಳಿ ಕೊಳ್ಳುವುದಕ್ಕೆ ಶಕ್ತರಾಗುವಂತೆ ಮಾಡುತ್ತಾರೆ. ನಮ್ಮ ಪೂರ್ವಜರು ಯಾವ ರೀತಿ ಬದುಕಿದ್ದರು, ಮತ್ತು ಮಾನವ ಜಾತಿ ಯಾವ ರೀತಿಯಲ್ಲಿ ಬೆಳೆದು ಬಂತು, ಆ ಅದೇ ರೀತಿಯಲ್ಲಿ ಪ್ರಾಣಿಗಳ ಮತ್ತು ನಿಸರ್ಗದ ಸ್ಪರ್ಶದೊಂದಿಗೆ.

ಆಧುನೀಕರಣದ ಧಾವಂತದಲ್ಲಿ ಗರ್ಭಿಣಿಯರಿಗೆ ಈ ರೀತಿಯ ಪರಿಸರದ ಸ್ಪರ್ಶ ಇಂದು ದೂರವಾಗಿದೆ. ಇದುವೇ ಅತ್ಯಂತ ತೀವ್ರಗತಿಯಲ್ಲಿ ಅಸ್ತಮಾ ಹಾಗೂ ಅಲರ್ಜಿಗಳು ಅಪಾಯಕಾರಿ ಮಟ್ಟವನ್ನು ತಲುಪುವುದಕ್ಕೆ ಕಾರಣ. ನಮ್ಮ ಹಿರಿಯರು ಮನೆಯ ಅಂಗಳದಲ್ಲಿ ಮತ್ತು ಮನೆಯ ಒಳಗೆ ಗೋಮಯ ಅಂದರೆ ಸೆಗಣಿ ಸಾರಿಸುವುದನ್ನು ರೂಢಿಸಿಕೊಂಡಿದ್ದರು. ಅದು ಕೇವಲ ಅಲಂಕಾರಕ್ಕೋ ಮಡಿವಂತಿಕೆಗೋ ಆಗಿರದೆ ಆರೋಗ್ಯ ರಕ್ಷಣೆಯ ವೈಜ್ಞಾನಿಕತೆ ಅದರಲ್ಲಿ ಅಡಗಿದೆ. ಹಿಂದಿನ ಅಧ್ಯಯನಗಳು ಇಂತಹ ಆಚರಣೆಗಳ ಧನಾತ್ಮಕ ಪರಿಣಾಮವನ್ನು ಸಾರಿ ಹೇಳುತ್ತಿವೆ. ಬಾಲ್ಯದಲ್ಲಿ ಮಕ್ಕಳು ಮಣ್ಣು, ಗಿಡ, ಕೊಳೆ, ಗೋ, ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ಬರುವುದನ್ನು ಹುರಿದುಂಬಿಸುವ.

ಡಾ . ಆರ್. ಪಿ. ಬಂಗಾರಡ್ಕ.
ಆಯುರ್ವೇದ ತಜ್ಞ ವೈದ್ಯರು
ಪ್ರಸಾದಿನೀ ಆಯುರ್ನಿಕೇತನ
ಆಯುರ್ವೇದ ಆಸ್ಪತ್ರೆ
ನರಿಮೊಗರು ,ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ.
rpbangaradka@gmail.com
mob:89044 74122
website:www.prasadini.com

Share this: