ಆರೋಗ್ಯಕರ ಹೃದಯ: ಮಾರ್ಗದರ್ಶಿ ಸೂತ್ರಗಳು – ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ, ಹೃದ್ರೋಗವನ್ನು ತಡೆಗಟ್ಟಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ತೆಗೆದುಕೊಳಬೇಕಾದ ಕ್ರಮಗಳು:
ಹೃದಯದ ಕಾಯಿಲೆಗಳು ವಿಶ್ವದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಹೃದಯದ ಆರೋಗ್ಯದ ಮಹತ್ವ ತಿಳಿಸಲು ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಈ ಪ್ರಯತ್ನದಲ್ಲಿ ಸಮುದಾಯಗಳು, ಆರೋಗ್ಯ ವೃತ್ತಿಪರರು, ಸರ್ಕಾರ ಮತ್ತು ಸಂಸ್ಥೆಗಳು ಒಟ್ಟುಗೂಡಬೇಕು.
ಹೃದ್ರೋಗವನ್ನು ತಡೆಗಟ್ಟಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ತೆಗೆದುಕೊಳಬೇಕಾದ ಕ್ರಮಗಳು:
• ಆರೋಗ್ಯಕರ ಜೀವನಶೈಲಿ: ಆರೋಗ್ಯಕರ ಆಹಾರಗಳನ್ನು ಸೇವಿಸಲು ಜನರನ್ನು ಪ್ರೋತ್ಸಾಹಿಸುವುದು, ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಲು ಪ್ರೋತ್ಸಾಹಿಸುವುದು – ಹೃದ್ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಈ ವಿಶ್ವ ಹೃದಯ ದಿನದಂದು, ನೀವು ಜೀವನಶೈಲಿಯ ಬದಲಾವಣೆಯ ಪ್ರಯೋಜನಗಳ ಬಗ್ಗೆ ಪ್ರಚಾರಗಳನ್ನು ಮಾಡಲು ಮತ್ತು ಶಿಕ್ಷಣ ನೀಡಲು ಪ್ರಯತ್ನಿಸಿ.
• ಜಾಗೃತಿ ಮೂಡಿಸಿ: ಹೃದ್ರೋಗಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶಗಳು, ಎಚ್ಚರಿಕೆ ಸೂಚನೆಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ.
• ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಬೆಂಬಲ: ಹೃದ್ರೋಗದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಲು, ಹೊಸ ಚಿಕಿತ್ಸೆಗಳು ಮತ್ತು ತಂತ್ರಜ್ಞಾನಗಳ ಅಗತ್ಯವಿದೆ. ಆದುದರಿಂದ ಸಂಶೋಧನೆಗಳು ಮತ್ತು ಆವಿಷ್ಕಾರಗಳಿಗೆ ಬೆಂಬಲ ನೀಡಿ.
ಹೃದಯ ನಮ್ಮ ದೇಹದ ಎಂಜಿನ್ ಇದ್ದಂತೆ. ಹೃದಯವು ದೇಹದ ರಕ್ತ ಮತ್ತು ಪೋಷಕಾಂಶಗಳ ಅಗತ್ಯತೆ ಯನ್ನು ಪೂರೈಸಲು ದಿನಕ್ಕೆ ಸುಮಾರು 100,000 ಬಾರಿ ಬಡಿಯುತ್ತದೆ. ಹೃದಯವು ದೇಹಕ್ಕೆ ಬೇಕಾಗುವ ಆಮ್ಲಜನಕವನ್ನು ಪೂರೈಸುವುದರ ಜೊತೆಗೆ ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯಮಾಡುತ್ತದೆ. ಹೃದಯದ ಆರೋಗ್ಯದ ಬಗ್ಗೆ ಜನರು ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಯುವಜನರು 40-50 ರ ಆಸುಪಾಸಿನಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪುತ್ತಿರುವುದು ಬದಲಾದ ಜೀವನ ಶೈಲಿಯ ದ್ಯೋತಕವೂ ಹೌದು.
ಹೃದ್ರೋಗದ ಲಕ್ಷಣಗಳು ಒಬ್ಬರಿಂದ ಮತ್ತೊಬ್ಬರಿಗೆ ವ್ಯತ್ಯಾಸವಿರುತ್ತವೆ. ಎದೆನೋವು, ಹೃದಯ ಭಾರವಾಗುವಿಕೆ, ಉಸಿರಾಟದಲ್ಲಿ ತೊಂದರೆ, ಮಾನಸಿಕ ಒತ್ತಡ, ಹೆಗಲು, ಭುಜ ಅಥವಾ ದವಡೆ ನೋವು, ಕಡಿಮೆ ನಾಡಿಮಿಡಿತ, ಅತಿಯಾಗಿ ಬೆವರುವಿಕೆ, ತಲೆಸುತ್ತುವಿಕೆ, ವಾಂತಿ ಕಾಣಿಸಿಕೊಳ್ಳಬಹುದು. ಒಮ್ಮೊಮ್ಮೆ ಈ ಲಕ್ಷಣ ಬಿರುಸಾಗಿದ್ದರೆ, ಕೆಲವೊಮ್ಮೆ ಲಘುವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಯಾವುದೇ ಲಕ್ಷಣವಿಲ್ಲದೇ ಹೃದಯಾಘಾತ ಸಂಭವಿಸುತ್ತದೆ.
ಹೃದಯದ ರೋಗಗಳಿಗೆ ದೇಹ ಮತ್ತು ರಕ್ತದಲ್ಲಿ ಶೇಖರಣೆಯಾಗುವ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಾರಣ. ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ – ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್(ಎಲ್ ಡಿಎಲ್) ಮತ್ತು ಅಧಿಕ ಸಾಂದ್ರತೆಯ ಲಿಪೋಪ್ರೋಟೀನ್(ಎಚ್ ಡಿಎಲ್) . ಕೆಟ್ಟ ಕೊಲೆಸ್ಟ್ರಾಲ್(ಎಲ್ ಡಿಎಲ್) ಪ್ರಮಾಣ ಹೆಚ್ಚಾದಾಗ ಸಾಮಾನ್ಯವಾಗಿ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ, ಆಹಾರದಲ್ಲಿ ಸೇವಿಸುವ ಕೆಲವು ಪದಾರ್ಥಗಳು ಕೂಡ ಹೃದಯ ಸಮಸ್ಯೆಗಳಿಗೆ ಕಾರಣವಾಗ ಬಹುದು. ಆದ್ದರಿಂದ ಹೃದ್ರೋಗದಿಂದ ರಕ್ಷಿಸಲು ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯ.
ಆರೋಗ್ಯಕರ ಹೃದಯ: ಮಾರ್ಗದರ್ಶಿ ಸೂತ್ರಗಳು – ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು:
• ಸಮಯಕ್ಕೆ ಸರಿಯಾಗಿ, ಸೂಕ್ತ ಪ್ರಮಾಣದಲ್ಲಿ ಆಹಾರ ಸೇವನೆ ಬಹಳ ಮುಖ್ಯ.
• ಸಾಕಷ್ಟು ನಿದ್ರೆಯೂ ಅತ್ಯಗತ್ಯ. ಬೇಗನೆ ಮಲಗಿ ಬೇಗನೆ ಏಳುವುದು ಉತ್ತಮ ಅಭ್ಯಾಸ.
• ನಿರಂತರ ವ್ಯಾಯಾಮ ಒಳ್ಳೆಯದು ಆದರೆ ಅಧಿಕ ಜಿಮ್ ಬೇಡ
• ಪ್ರತಿನಿತ್ಯ ವಾಕಿಂಗ್ ಮಾಡುವುದು ಒಳ್ಳೆಯದು
• ಕಲುಷಿತ ವಾತಾವರಣದಿಂದ ಸಾಧ್ಯವಾದಷ್ಟು ದೂರ ಇರಿ
• ಯೋಗ ಧ್ಯಾನ ಮಾಡುವುದರಿಂದ ಒತ್ತಡ ನಿವಾರಣೆಯ ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ
• ಅತಿಯಾದ ಮದ್ಯಪಾನ ಧೂಮಪಾನ ದುಶ್ಚಟಗಳಿಂದ ದೂರವಿರಿ.
• 40 ವರ್ಷದ ನಂತರ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಬೇಕಾಗುವ ಪೋಷಕಾಂಶಗಳು
• ಒಮೆಗಾ – 3 ಕೊಬ್ಬಿನಾಮ್ಲ: ಇದು ಮೀನುಗಳಲ್ಲಿ (ಸಾಲ್ಮನ್, ಮ್ಯಾಕೆರೆಲ್ ಮತ್ತು ಟ್ರೌಟ್), ಅಗಸೆಬೀಜಗಳಲ್ಲಿ, ಚಿಯಾ ಬೀಜಗಳಲ್ಲಿ ಮತ್ತು ವಾಲ್ನಟ್ ಗಳಲ್ಲಿ ದೊರಕುತ್ತವೆ. ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಉರಿಯೂತದ ಗುಣ ಹೊಂದಿದ್ದು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
• ಫೈಬರ್ಯುಕ್ತ ಆಹಾರ: ಬೀನ್ಸ್, ಮಸೂರ, ಹಣ್ಣುಗಳು ಮತ್ತು ತರಕಾರಿಗಳಲ್ಲಿ ನಾರಿನಾಂಶ ಸಮೃದ್ಧವಾಗಿರುವುದರಿಂದ ಇವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
• ಉತ್ಕರ್ಷಣ ನಿರೋಧಕಗಳು (Antioxidants): ಕೆಲವು ಹಣ್ಣುಗಳು ಮತ್ತು ತರಕಾರಿಗಳಲ್ಲಿ (ಬೆರ್ರಿಗಳು, ಸಿಟ್ರಸ್ ಹಣ್ಣುಗಳು ಮತ್ತು ಎಲೆಗಳ ಸೊಪ್ಪುಗಳು) ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇವು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
• ಡ್ರೈ ಫ್ರೂಟ್ಸ್ ಮತ್ತು ಬೀಜಗಳು: ಹೃದಯದ ಉತ್ತಮ ಆರೋಗ್ಯಕ್ಕೆ ಬಾದಾಮಿ, ವಾಲ್ನಟ್, ಪಿಸ್ತಾ, ಚಿಯಾ ಮತ್ತು ಅಗಸೆಬೀಜಗಳನ್ನು ಸೇವಿಸಿ. ಇವು ಫೈಬರ್ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತವೆ.
• ಆವಕಾಡೊ (ಬೆಣ್ಣೆ ಹಣ್ಣು) ನಲ್ಲಿ ಮೋನೋ ಸ್ಯಾಚುರೇಟೆಡ್, ಅಂದರೆ ಆರೋಗ್ಯಕರ ಕೊಬ್ಬಿನಾಂಶ ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಹೃದಯಾಘಾತಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳು
• ಅತಿಯಾದ ಧೂಮಪಾನ ಹೃದಯದ ಆರೋಗ್ಯಕ್ಕೆ ಮಾರಕ. ಧೂಮಪಾನಿಗಳಿಗೆ ಹೃದಯಾಘಾತಕ್ಕೆ ತುತ್ತಾಗುವ ಗಂಡಾಂತರ 3 ರಿಂದ 6 ಪಟ್ಟು ಹೆಚ್ಚು. ತಂಬಾಕಿನಲ್ಲಿರುವ ನಿಕೋಟಿನ್, ಕಾರ್ಬನ್ ಮೊನೊಕ್ಸೈಡ್ ಮತ್ತು ಇತರೆ ವಿಷಯುಕ್ತ ವಸ್ತುಗಳು ರಕ್ತ ನಾಳಗಳಿಗೆ ಹಾನಿ ಉಂಟು ಮಾಡುತ್ತವೆ. ಪ್ಯಾಸಿವ್ ಸ್ಮೋಕರ್ಗಳಲ್ಲೂ (ನೀವು ಧೂಮಪಾನ ಮಾಡದಿದ್ದರೂ, ಧೂಮಪಾನಿಗಳ ಹೊರ ಸೂಸುವ ತಂಬಾಕಿನ ಹೊಗೆಯನ್ನು ಪಕ್ಕದಲ್ಲಿದ್ದು ಸೇವಿಸುವವರು) ಇದು ಅಷ್ಟೇ ಪ್ರಮಾಣದ ಹಾನಿ ಉಂಟು ಮಾಡುತ್ತದೆ.
• ಕೊಲೆಸ್ಟರಾಲ್ ಮತ್ತು ಡಯಾಬಿಟಿಸ್ ಹೃದಯಾಘಾತ ಸಂಭವಿಸುವ ಅವಕಾಶವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಕೊಲೆಸ್ಟರಾಲ್ (ಕೊಬ್ಬು) ಪ್ರಮಾಣ ಹೆಚ್ಚಾಗುವುದರಿಂದ ಕರೋನರಿ ಆರ್ಟರಿಗಳು ಗಟ್ಟಿಯಾಗುತ್ತವೆ. ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆ ಪ್ರಮಾಣ ಅತಿರೋಸ್ಸ್ಕೆಲೋರಿಸಿಸ್ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಇದರೊಂದಿಗೆ ಹತೋಟಿ ಇಲ್ಲದ ಡಯಾಬಿಟಿಸ್ ಅತಿಯಾದ ತೂಕ ಮತ್ತು ಅಧಿಕ ಕೊಲೆಸ್ಟರಾಲ್ ಗೆ ಎಡೆ ಮಾಡಿಕೊಡುತ್ತದೆ.
• ಅಧಿಕ ರಕ್ತದೊತ್ತಡ ಹೃದಯಾಘಾತ ಗಂಡಾಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗಿ, ಕೇವಲ ಕರೋನರಿ ರಕ್ತ ನಾಳಗಳ ಮೇಲೆ ಮಾತ್ರ ದುಷ್ಪರಿಣಾಮ ಉಂಟು ಮಾಡುವುದಲ್ಲದೇ ಮೆದುಳಿನ ಹಾಗೂ ಮೂತ್ರಪಿಂಡಗಳ ರಕ್ತ ನಾಳಗಳಿಗೂ(ಇದು ಪಾರ್ಶ್ವವಾಯು ಮತ್ತು ಕಿಡ್ನಿ ವೈಫ್ಯಲಕ್ಕೆ ಎಡೆ ಮಾಡಿಕೊಡುತ್ತದೆ) ತೊಂದರೆ ನೀಡುತ್ತದೆ.
• ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವ ವ್ಯಕ್ತಿಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು. ಸಮೃದ್ದ ಆಹಾರಗಳ (ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರ ಪದಾರ್ಥಗಳು) ಅತಿಯಾದ ಸೇವನೆಯಿಂದ ರಕ್ತದಲ್ಲಿನ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುತ್ತದೆ. ಬೊಜ್ಜು ಸಮಸ್ಯೆ ಇರುವವರು ವ್ಯಾಯಾಮ ಮಾಡದಿರುವುದು ಇದಕ್ಕೆ ಕಾರಣ.
• ಉದ್ವೇಗ, ಒತ್ತಡ, ಕೋಪ, ಆವೇಶಕ್ಕೆ ಒಳಗಾಗುವ ವ್ಯಕ್ತಿಗಳು ಹಾಗೂ ಆತುರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ತವಕಿಸುವ ಮಂದಿ ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉದ್ವೇಗದಿಂದ ಉಂಟಾಗುವ ಒತ್ತಡ ಮತ್ತು ಆಯಾಸವು ಅತಿರೋಸ್ಕೋಲೋರಿಸಿಸ್ ಗಂಡಾಂತರವನ್ನು ಹೆಚ್ಚಿಸುತ್ತದೆ.
• ಅನುವಂಶಿಕತೆ ಕೂಡ ಹೃದಯಾಘಾತ ಸಾಧ್ಯತೆ ಹೆಚ್ಚಾಗಿಸುತ್ತದೆ. ಕುಟುಂಬದ ಯಾರಾದರೂ ಒಬ್ಬರಿಗೆ ಯೌವ್ವನದಲ್ಲಿ ಹೃದಯಾಘಾತವಾಗಿದ್ದರೆ ಆ ಕುಟಂಬದಲ್ಲಿ ಯಾವುದೇ ವ್ಯಕ್ತಿ ಹಾರ್ಟ್ ಆಟ್ಯಾಕ್ ಗೆ ಒಳಗಾಗ ಬಹುದು. ಇಂಥ ವ್ಯಕ್ತಿಗಳು ಆರಂಭಿಕ ವರ್ಷದಲ್ಲೇ ಅಗಾಗ ತಪಾಸಣೆಗೆ ಒಳಗಾಗಬೇಕು.
• WHO ವರದಿಯ ಪ್ರಕಾರ, ಜಾಗತಿಕವಾಗಿ ಹೃದಯಾಘಾತದಿಂದ ಉಂಟಾದ 17.9 ಮಿಲಿಯನ್ ಸಾವುಗಳಲ್ಲಿ ಭಾರತದ್ದು ಐದನೇ ಒಂದು ಭಾಗ.
• ಇಂಡಿಯನ್ ಹಾರ್ಟ್ ಹೆಲ್ತ್ ಅಸೋಸಿಯೇಷನ್ ಪ್ರಕಾರ, ಭಾರತದಲ್ಲಿನ ಎಲ್ಲಾ ಹೃದಯಾಘಾತಗಳಲ್ಲಿ 50 ಪ್ರತಿಶತವು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರಲ್ಲಿ ಸಂಭವಿಸುತ್ತದೆ,
• 25 ಪ್ರತಿಶತದಷ್ಟು ಹೃದಯಾಘಾತಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರಲ್ಲಿ ಸಂಭವಿಸುತ್ತವೆ. ಪುರುಷರು ಹೃದಯ ಕಾಯಿಲೆಗಳಿಗೆ ಮಹಿಳೆಯರಿಗಿಂತ ಸ್ವಲ್ಪ ಹೆಚ್ಚು ದುರ್ಬಲರಾಗಿದ್ದಾರೆ.
ಡಾ. ಮಹಂತೇಶ್ ಆರ್. ಚರಂತಿಮಠ್- ಹೃದ್ರೋಗ ತಜ್ಞರು
ತಥಾಗತ್ ಹಾರ್ಟ್‍ಕೇರ್ ಸೆಂಟರ್
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-41410099, 9900356000
E-mail: mahanteshrc67@gmail.com