Vydyaloka

ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ

ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ ಒಂದು ಸಂಕೀರ್ಣ ಖಾಯಿಲೆಯಾಗಿದ್ದು, ನೆನಪು ಮಸುಕಾಗಿ ಹೋಗಿ, ಹೊಸತನವನ್ನು ಕಲಿಯುವ ಮತ್ತು ಹಿಂದೆ ನಡೆದು ಹೋದದನ್ನು ನೆನಪಿಸಿಕೊಳ್ಳುವ ಸಾರ್ಮಥ್ಯ ಕಳೆದುಕೊಂಡಿರುತ್ತಾರೆ. ಸೆಪ್ಟೆಂಬರ್ 21 – ಅಲ್ಜೀಮರ್ಸ್ ದಿನ. ಅಲ್ಜೀಮರ್ ರೋಗಿಗಳನ್ನು ಯಾವಾತ್ತೂ ಬಯ್ಯಬೇಡಿ, ದ್ವೇಷಿಸಬೇಡಿ. ಆದಷ್ಟು ಸಂಯಮದಿಂದ ವ್ಯವಹರಿಸಿ.

ಹೆಚ್ಚಿನ ಜನರು ಈ ರೋಗ ಇಳಿ ವಯಸ್ಸಿನ ಜನರಲ್ಲಿ ಮಾತ್ರ ಬರುತ್ತದೆ ಎಂದು ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ.. ಆಲ್ಜೀಮರ್ಸ್ ರೋಗ ವಯಸ್ಸಿನ ಜೊತೆ ಜೊತೆಯಾಗಿ ಬರುವ ಮರುಗುಳಿತನ ಎಂದರೆ ಖಂಡಿತವಾಗಿಯೂ ತಪ್ಪಾದೀತು. ಈ ರೋಗದಿಂದ ಬಳಲುವವರಲ್ಲಿ ಹೆಚ್ಚಿನವರು 65ರ ವಯಸ್ಸಿನ ಆಸುಪಾಸಿನಲ್ಲಿ ಇರುತ್ತಾರೆ. ಆದರೆ 40-50ರ ವಯಸ್ಸಿನಲ್ಲಿ ಬರಬಾರದೆಂದಿಲ್ಲ. ಬದಲಾಗುತ್ತಿರುವ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿರಂತರ ಒತ್ತಡದ ವೃತ್ತಿ ಬದುಕು ಮತ್ತು ಯಾಂತ್ರಿಕೃತ ಬರಡು ಬದುಕು ಇತ್ಯಾದಿಗಳಿಂದಾಗಿ 40-50ರ ಆಸುಪಾಸಿನಲ್ಲಿಯೇ ಈ ರೋಗ ಬಂದರೂ ಆಶ್ಚರ್ಯವೇನಲ್ಲ. ಇತ್ತೀಚಿಗಂತೂ ‘ಗೋದಿಬಣ್ಣ ಸಾಧಾರಣ ಮೈಕಟ್ಟು’ ಎಂಬ ಕನ್ನಡ ಚಲನ ಚಿತ್ರವೂ ಈ ರೋಗದ ಬಗ್ಗೆ ಜನರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ ಎಂದರೂ ತಪ್ಪಲ್ಲ.

ಸುಮಾರು 110 ವರ್ಷಗಳ ಹಿಂದೆ ಜರ್ಮನಿಯ ಪ್ರಾಂಕ್‍ಫರ್ಟ್‍ನಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಅಲೋಸ್ ಅಲ್ಜೀಮರ್ಸ್ ಎಂಬಾತ, ನಿಧಾನವಾಗಿ ನೆನಪಿನ ಶಕ್ತಿ ಮಸುಕಾಗುತ್ತಿರುವ ಮತ್ತು ತಾನೆಲ್ಲಿದ್ದೇನೆ ಎಂಬ ಸ್ಥಳದ ಪರಿಜ್ಞಾನವನ್ನೂ ಕಳೆದುಕೊಳ್ಳುತ್ತಿದ ರೋಗಿಯನ್ನು ಗುರುತಿಸಿದ. ವೃದ್ಯಾಪ್ಯದ ಹೊಸ್ತಿಲಿನಲ್ಲಿದ್ದ ಆಕೆಯಲ್ಲಿ ಈ ಮರೆಗುಳಿತನ ಕಾಣಿಸಿದ ಕೆಲವೇ ವರ್ಷಗಳಲ್ಲಿ ಆಕೆ ನಡೆಯಲಾರದೆ, ವಿಚಿತ್ರ ವರ್ತನೆ ತೋರುತ್ತಾ ಹಸಿವು, ನೀರಡಿಕೆ, ಮಲಮೂತ್ರ ವಿಸರ್ಜನೆ ಎಂಬ ಪರಿಜ್ಞಾನವನ್ನು ಕಳೆದುಕೊಳ್ಳುತ್ತಾ ಬಂದು, ಕೊನೆಗೊಂದು ದಿನ ಇಹಲೋಕ ತ್ಯಜಿಸಿದಳು.

ಆಕೆಯ ಮೆದುಳನ್ನು ಕೂಲಂಕುಷವಾಗಿ ಪರೀಕ್ಷಿಸಿದಾಗ ಅಲ್ಲಿ ನರತಂತುಗಳ ರಚನೆ ಮತ್ತು ಆಕೃತಿ ವಿಭಿನ್ನವಾಗಿತ್ತು ಹಾಗೂ ಮುಪ್ಪಿನ ಪಕಳೆಗಳು ವಿಶೇಷವಾಗಿ ಮೆದುಳಿನಲ್ಲಿ ಕಾಣಸಿಕ್ಕವು. ಈ ರೀತಿಯ ಮರೆಗುಳಿತನದ ಭೌತಿಕ ಸ್ಥಿತಿಯನ್ನು ಅಲ್ಜೀಮರ್ ಖಾಯಿಲೆ ಎಂದು ಕರೆಯಲಾಯಿತು. ಒಟ್ಟಿನಲ್ಲಿ ದೇಹ ಮತ್ತು ಮನಸ್ಸು ಕೂಡ ಗಂಡ ಹೆಂಡಿರಂತೆ ಜೊತೆ ಜೊತೆಗೆ ಸಾಯುವುದಿಲ್ಲ ಎಂಬ ಚಾರ್ಲಸ್ ಕೋಲ್ಟನ್ ಎಂಬ ಲೇಖಕರ ಮಾತಿನಂತೆ, ಈ ಅಲ್ಜೀಮರ್ ರೋಗದಲ್ಲಿಯೂ ದೇಹಕ್ಕಿಂತ ಮೊದಲು, ಮೆದುಳು ನಶಿಸಿ ಹೋಗಿ ‘ಮರೆಗುಳಿತನ’ ಎಂಬ ವಿಚಿತ್ರ ಶೋಚನೀಯ ಖಾಯಿಲೆಗೆ ಮುನ್ನುಡಿ ಬರೆಯುತ್ತದೆ.

ರೋಗದ ಲಕ್ಷಣಗಳು ಏನು?:

ಅಲ್ಜೀಮರ್ ರೋಗ ದಿನ ಬೆಳಗಾಗುವುದಲ್ಲಿ ಬರುವ ರೋಗವಲ್ಲ. ನಿಧಾನವಾಗಿ ದೇಹದ ಸಂವೇಧನಾ ಮತ್ತು ನೆನಪು ಶಕ್ತಿಯನ್ನು ಆಪೋಶನ ತೆಗೆದುಕೊಳ್ಳುತ್ತದೆ. ಮನುಷ್ಯ ನಿಧಾನವಾಗಿ ಭಾವನಾ ಶೂನ್ಯವಾಗಿ ಬಾಹ್ಯ ಜಗತ್ತಿನಿಂದ ದೂರ ಸರಿಯುತ್ತಲೇ ಹೋಗುತ್ತಾನೆ. ಅಲ್ಜೀಮರ್ ಖಾಯಿಲೆ ಒಂದು ಸಂಕೀರ್ಣ ಖಾಯಿಲೆಯಾಗಿದ್ದು, ನೆನಪು ಮಸುಕಾಗಿ ಹೋಗಿ, ಹೊಸತನವನ್ನು ಕಲಿಯುವ ಮತ್ತು ಹಿಂದೆ ನಡೆದು ಹೋದದನ್ನು ನೆನಪಿಸಿಕೊಳ್ಳುವ ಸಾರ್ಮಥ್ಯ ಕಳೆದುಕೊಂಡಿರುತ್ತಾರೆ. ದೇಹಬಲ ಇದ್ದರೂ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳನ್ನು ಗುರುತಿಸುವುದು ಅಸಾಧ್ಯವಾಗುತ್ತದೆ. ಈ ರೋಗಿಗಳಿಗೆ ತಮ್ಮ ನೆನಪು ಶಕ್ತಿ ಕಳೆದು ಹೋಗಿದೆ ಎಂಬುದೇ ಗೊತ್ತಾಗುವುದಿಲ್ಲ. ತೀರ ಇತ್ತೀಚಿನ ಸಂಗತಿಗಳು ಮತ್ತು ಘಟನೆಗಳು ನೆನಪಿಗೆ ಬರುವುದಿಲ್ಲ.

ಎಷ್ಟೋ ವರ್ಷಗಳ ಹಿಂದೆ ಜರುಗಿ ಹೋದ ಘಟನೆಯನ್ನು, ಇಲ್ಲವೇ ವ್ಯಕ್ತಿಯನ್ನು ಏಕಾಏಕಿ ನೆನಪಿಗೆ ತಂದುಕೊಳ್ಳುತ್ತಾರೆ. ಅವರು ತಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಸಂಪೂರ್ಣವಾಗಿ ನಿರಾಸಕ್ತರಾಗಿರುತ್ತಾರೆ. ಅವರ ಬಗ್ಗೆ ಅವರಿಗೆ ಏನೂ ಅನ್ನಿಸುವುದೇ ಇಲ್ಲ.ಸ್ಥಳ ಮತ್ತು ಸಮಯ ಪ್ರಜ್ಞೆ ಸಂರ್ಪೂಣವಾಗಿ ನಾಶವಾಗಿರುತ್ತದೆ. ಅವರ ವ್ಯಕ್ತಿತ್ವದಲ್ಲಿ ವಿಪರೀತ ಮಾರ್ಪಾಡಾಗಿ ವಿಷಯಗಳ ಪರ ವಿರೋಧಗಳು ತುಲನಾತ್ಮಕ ಸಾರ್ಮಥ್ಯವನ್ನು ಮಾಡಲು ಅಸಮರ್ಥರಾಗಿರುತ್ತಾರೆ. ಆ ಕಾರಣವಾಗಿ ಕುಳಿತಲ್ಲಿ ಕುಳಿತಿರದೆ, ನಿಂತಲ್ಲಿ ನಿಂತಿರದೆ, ಮನಬಂದಂತೆ ಗೊತ್ತು ಗುರಿಯಿಲ್ಲದೆ ನಡೆದಾಡುತ್ತಾರೆ. ನಿದ್ದೆ ಕಡಿಮೆಯಾಗಿ ಮಾನಸಿಕ ತಳಮಳ, ಖಿನ್ನತೆ, ಭ್ರಾಂತಿ ತೋರಿಬರುತ್ತದೆ. ಅವರ ಚಲನ ಸಾರ್ಮಥ್ಯ ರೋಗದ ಕೊನೆಯ ಹಂತದವರೆಗೂ ಸಮರ್ಪಕವಾಗಿರುತ್ತದೆ. ರೋಗ ಉಲ್ಬಣಿಸಿದಂತೆ ಆಹಾರ ನೀರಿನ ಬಗ್ಗೆ, ಮಲ ಮೂತ್ರ ವಿಸರ್ಜನೆಯ ಪರಿಜ್ಞಾನವೂ ಅವರಲ್ಲಿ ಉಳಿಯುವುದಿಲ್ಲ. ಒಟ್ಟಿನಲ್ಲಿ ಅತ್ತರೆ ಅಳುತ್ತಲೇ ಇರುವ, ನಕ್ಕರೆ ನಗುತ್ತಲೇ ಇರುವ, ಮಗ, ಮಗಳು, ಸೊಸೆ, ಹೆಂಡತಿ ಬಂಧು ಬಳಗವನ್ನೇ ಗುರುತಿಸಲಾಗದ, ಭಾವನೆಗಳೇ ಇಲ್ಲದ ಬರಡು ಬದುಕು ಎಂದರೂ ತಪ್ಪಲ್ಲ.

ಚಿಕಿತ್ಸೆ ಹೇಗೆ?

ಮೆದುಳಿನ ಸ್ಕ್ಯಾನ್ ಮಾಡಿಸಿ, ಮೆದುಳಿನ ರಚನೆ ಮತ್ತು ನರತಂತುಗಳ ಆಕೃತಿಗಳ ಬಗ್ಗೆ ವಿವರ ತಿಳಿದುಕೊಂಡು, ಮೆದುಳಿನಲ್ಲಿ ಉಂಟಾದ ಬದಲಾವಣೆಗಳನ್ನು ಗುರುತಿಸಲಾಗುತ್ತದೆ. ಇದರ ಜೊತೆಗೆ ರೋಗದ ಚರಿತ್ರೆಯ ವಿವರಗಳು, ಕೌಟುಂಬಿಕ ಹಿನ್ನಲೆ ಮತ್ತು ವ್ಯಕ್ತಿಯ ಜೀವನಶೈಲಿ, ಆಹಾರ ಪದ್ಧತಿಯನ್ನು ಸಮಗ್ರವಾಗಿ ಅಭ್ಯಸಿಸಿ ರೋಗದ ನಿರ್ಣಯವನ್ನು ಮಾಡಲಾಗುತ್ತದೆ. ರೋಗಿಯ ದೈನಂದಿನ ಚಲನವಲನ, ವರ್ತನೆಗಳನ್ನು ಸಿಟಿಸ್ಕ್ಯಾನ್‍ನ ಜೊತೆ ಹೊಂದಾಣಿಕೆ ಮಾಡಿ ರೋಗವನ್ನು ಗುರುತಿಸಿ ವೈದ್ಯರು ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ. ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಅಸಾಧ್ಯ. ಆದರೆ ಕೆಲವೊಮ್ಮೆ ರೋಗಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಿಥ್ಯಮಾತ್ರೆಗಳನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ರೋಗಿಯ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಅವರು ತೋರ್ಪಡಿಸುವ ಖಿನ್ನತೆ, ತಳಮಳ, ನಿದ್ರಾಹೀನತೆ, ಮನೋವಿಕಾರದಂತಹ ವರ್ತನೆಯ ಬದಲಾವಣೆಗಳನ್ನು ಕಡಮೆ ಮಾಡುವ ಪ್ರಯತ್ನ ಮಾಡಲಾಗುತ್ತದೆ.

ಏನು ಮಾಡಬೇಕು?

ಏನು ಮಾಡಬಾರದು?

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this: