ಆಕ್ಯುಪಂಕ್ಚರ್ ಚೀನಾದಿಂದ ಬಂದ ನೋವು ನಿವಾರಕ ಸೂಜಿ ಚಿಕಿತ್ಸೆ. ಅಕ್ಯುಪಂಕ್ಚರ್ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಅತ್ಯಂತ ತೆಳುವಾದ ಹಲವು ಸೂಜಿಗಳನ್ನು ನಿರ್ದಿಷ್ಟ ಶಕ್ತಿ ಬಿಂದುಗಳಲ್ಲಿ ಚುಚ್ಚಿ ರೋಗವನ್ನು ಗುಣಪಡಿಸುವ ಚಿಕಿತ್ಸಾ ವಿಧಾನವಿದು.
ಯಾವುದೇ ರೋಗ ಬಂದಲ್ಲಿ ಅತ್ಯಂತ ತೆಳುವಾದ ಸೂಜಿಗಳನ್ನು ಕೆಲವು ಮುಖ್ಯವಾದ (ಆಯಾ ರೋಗಕ್ಕೆ ಅಗತ್ಯವಾದ) ಶಕ್ತಿಬಿಂದುಗಳಲ್ಲಿ ಚುಚ್ಚುವುದರ ಮೂಲಕ ಅವುಗಳನ್ನು ಪ್ರಚೋದನೆಗೊಳಿಸಿ, ರೋಗಗಳನ್ನು ಗುಣಪಡಿಸಲಾಗುತ್ತದೆ. ಇದರಿಂದಾಗಿ ‘ಚಿ’/’ಪ್ರಾಣಶಕ್ತಿ’ ಪ್ರವಹನೆಯಲ್ಲಿ ಉಂಟಾದ ಎಲ್ಲ ಅಡೆತಡೆಗಳನ್ನು ಇದು ನಿವಾರಿಸುತ್ತದೆ. ಹಾಗಾಗಿ ರೋಗ ವಾಸಿಯಾಗುತ್ತದೆ. ಈ ಅಗತ್ಯ ಶಕ್ತಿಬಿಂದುಗಳನ್ನು ಗುರುತಿಸಿಕೊಳ್ಳಲು ಹಲವಾರು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಬಿಂದುವಿನ ಸರಿಯಾದ ಜಾಗವನ್ನು ಗುರುತಿಸಲು ಅದರದ್ದೇ ಆದ ಅಳತೆಗೋಲಿರುತ್ತದೆ. ಇದನ್ನು ‘ಚುನ್’ ಎಂದು ಕರೆಯಲಾಗುತ್ತದೆ. ಸೂಜಿಯಲ್ಲೂ ಸಹ ಇದೇ ಅಳತೆಯನ್ನು ಉಪಯೋಗಿಸಲಾಗುತ್ತದೆ.
ಸೂಜಿಯನ್ನು ಚುಚ್ಚುವ ವಿಧಾನದಲ್ಲಿಯೂ ಹಲವು ರೀತಿಗಳಿಗೆ (ಲಂಬವಾಗಿ, ಓರೆಯಾಗಿ, ಸಮಾನಾಂತರವಾಗಿ) ಹಾಗೂ ಕೆಲವೊಂದು ಸಂದರ್ಭದಲ್ಲಿ ವಿದ್ಯುತ್ ಪ್ರಚೋದನೆಯನ್ನು ಅಥವಾ ಬಿಸಿ ಶಾಖವನ್ನು ನೀಡಲಾಗುತ್ತದೆ. ಅಕ್ಯುಪಂಕ್ಚರ್ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಅಕ್ಯುಪಂಕ್ಚರ್ ಪರಿಕಲ್ಪನೆಗಳ ಪ್ರಕಾರ, ರೋಗಗಳ ವಿರುದ್ಧ ದೇಹದ ನೈಸರ್ಗಿಕ ಪ್ರತಿರೋಧ ಮತ್ತು ಅದರ ದುರಸ್ತಿ ಸಾಮರ್ಥ್ಯವನ್ನು ದೇಹದಾದ್ಯಂತ ಸಂಚರಿಸುವ ಶಕ್ತಿಯ ಹರಿವು ಎಂದು ವಿವರಿಸಲಾಗುತ್ತದೆ, ಇದನ್ನು ಆರೋಗ್ಯಕರ ಶಕ್ತಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಅಕ್ಯುಪಂಕ್ಚರ್ ಅನ್ನು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬಹಳ ಸಹಾಯಕವೆಂದು ಪರಿಗಣಿಸಲಾಗಿದೆ.
ಚಿಕಿತ್ಸಾವಿಧಾನ:
1. ಚಿಕಿತ್ಸೆಯನ್ನು ಶುರು ಮಾಡುವ ಅರ್ಧ ಗಂಟೆ ಮೊದಲು ಯಾವುದೇ ಬೇರೆ ರೀತಿಯ ಚಿಕಿತ್ಸೆಗೆ ಒಳಗಾಗಿರಬಾರದು.
2. ಶರೀರದ ಮೇಲೆ ನೀರಿನಂಶವಾಗಲೀ ಅಥವಾ ಎಣ್ಣೆಯಂಶವಾಗಲೀ ಇರಬಾರದು.
ಮುನ್ನೆಚ್ಚರಿಕೆ :
1. ಕೀವು ತುಂಬಿರುವ ಗಾಯಗಳು/ಭಾಗಗಳಿದ್ದರೆ ಅಲ್ಲಿ ಸೂಜಿಗಳನ್ನು ಚುಚ್ಚಬಾರದು.
2. ಕೆಲವೊಂದು ಬಿಂದುಗಳಲ್ಲಿ ಗರ್ಭಪಾತವಾಗುವ ಹಾಗೂ ತಕ್ಷಣ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಂಭವ ಇರುವುದರಿಂದ ಆ ಬಿಂದುಗಳ ಕಡೆಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿರುತ್ತದೆ.
3. ಕೆಲವೊಂದು ಬಿಂದುಗಳು ರೋಗವನ್ನು ತಕ್ಷಣ ಗುಣಪಡಿಸುವ ವಿಶೇಷ ಶಕ್ತಿಯನ್ನು ಹೊಂದಿರುತ್ತದೆ (ಉದಾಹರಣೆಗೆ ಉಸಿರಾಡಲು ಕಷ್ಟವಾದಾಗ, ಮೂಗಿನಿಂದ ರಕ್ತಸ್ರಾವವಾಗುವಾಗ, ವಿಪರೀತ ತಲೆನೋವಿದ್ದಾಗ) ಆ ಬಿಂದುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
ಚಿಕಿತ್ಸೆ ನೀಡುವಾಗ :
1. ರೋಗಿಯನ್ನು ಆದಷ್ಟು ಶಾಂತ ರೀತಿಯಲ್ಲಿ ಇರುವಂತೆ ಮನವಿ ಮಾಡಬೇಕು.
2. ಆಯಾ ಶಕ್ತಿಬಿಂದುಗಳಿಗೆ ಅಗತ್ಯವಿರುವ ಮಾದರಿಯ ಸೂಜಿಗಳನ್ನು ಆಯ್ದುಕೊಳ್ಳಲಾಗುವುದು.
3. ಎಲ್ಲ ಎಚ್ಚರಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸರಿಯಾದ ಬಿಂದುಗಳಲ್ಲಿ ಸೂಜಿಗಳನ್ನು ಚುಚ್ಚಿಡಲಾಗುತ್ತದೆ. ಇದಕ್ಕೆ ಅಗತ್ಯವಿದ್ದಲ್ಲಿ ವಿದ್ಯುತ್ ಪ್ರಚೋದನೆ ನೀಡಲಾಗುತ್ತದೆ.
ಕಾಲಾವಧಿ :
1. ಸಾಮಾನ್ಯವಾಗಿ 20 ನಿಮಿಷಗಳ ತನಕ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ 10ರಿಂದ 30 ನಿಮಿಷಗಳ ತನಕ ಕೊಡಲಾಗುತ್ತದೆ.
2. ನಂತರ ನಿಧಾನವಾಗಿ ಒಂದೊಂದೆ ಸೂಜಿಯನ್ನು ತೆಗೆಯಲಾಗುತ್ತದೆ.
ಚಿಕಿತ್ಸೆ ನಂತರ :
1. ಅರ್ಧದಿಂದ ಒಂದು ಗಂಟೆಯ ತನಕ ಅಹಾರ ಸೇವಿಸುವಂತಿಲ್ಲ ಹಾಗೂ ಬೇರೆ ಚಿಕಿತ್ಸೆಯನ್ನು ತೆಗೆದುಕೊಳ್ಳಬಾರದು. ಸ್ನಾನ ಮಾಡಬಾರದು.
ಯಾವ ರೋಗಿಗಳಿಗೆ ಸಹಕಾರಿ ?
1. ತಲೆ ನೋವು, ಕುತ್ತಿಗೆ ನೋವು, ಗಂಟುಗಳ ನೋವು, ಬೆನ್ನು ನೋವು, ಹೊಟ್ಟೆ ನೋವು ಇತ್ಯಾದಿ.
2. ಆಸ್ತಮಾ, ಕಷ್ಟದ ಉಸಿರಾಟ, ಧ್ವನಿಯನ್ನು ಉತ್ತಮಗೊಳಿಸಲು.
3. ಅಧಿಕ ರಕ್ತದೊತ್ತಡ, ಅತಿ ತೂಕ ಇತ್ಯಾದಿ.
4. ನರದ ತೊಂದರೆಗಳಾದ ಸಯಾಟಿಕಾ, ಹೆಮಿಪ್ಲೇಜಿಯಾ, ಪ್ಯಾರಾಪ್ಲೇಜಿಯಾ, ಟೈಜಮೈನಲ್ ನ್ಯೂರಾಲ್‍ಜಿಯಾ, ಅಲ್ನಾರ್/ರೇಡಿಯಲ್ ನರ್ವ್ ಪಾಲ್ಸ್ ಇತ್ಯಾದಿ.
5. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹ ಇದನ್ನು ಬಳಸಬಹುದು.
6. ಈ ಚಿಕಿತ್ಸೆಯನ್ನು ಹೆರಿಗೆಯ ಸಂದರ್ಭದಲ್ಲಿ ನೋವಿಲ್ಲದ ಸು:ಖ ಪ್ರಸವವಾಗಲು ಉಪಯೋಗಿಸುತ್ತಿದ್ದರು. ಹಲವಾರು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅರಿವಳಿಕೆಯನ್ನು ನೀಡಲು ಸಹ ಈ ವಿಧಾನವನ್ನು ಬಳಸಲಾಗುತ್ತಿತ್ತು.
ಎಲ್ಲಿ ಉಪಯೋಗಿಸಬಾರದು :
1. ಅಧಿಕ ಮಧುಮೇಹ ತೊಂದರೆಯಿಂದ ಬಳಲುವವರಲ್ಲಿ ಸೂಜಿಗಳಿಂದ ನಂಜಾಗುವ ಸಂಭವ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ನೀಡಬೇಕು ಅಥವಾ ಸಕ್ಕರೆಯ ಮಟ್ಟ ಸಮ ಪ್ರಮಾಣಕ್ಕೆ ಬಂದಾಗಲೂ ನೀಡಬಹುದು.
2. ಅಧಿಕ ರಕ್ತದೊತ್ತಡ ಇರುವವರಿಗೆ ನೀಡುವಾಗ ಒಂದೇ ಸಲ ರಕ್ತದೊತ್ತಡ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು.
3. ಜ್ವರ
4. ಗರ್ಭಿಣಿಯರು
5. ಉಪವಾಸ ಚಿಕಿತ್ಸೆಯಲ್ಲಿ ಇರುವವರು
6. ವಯೋವೃದ್ದರು ಹಾಗೂ ತುಂಬಾ ನಿಶ್ಶಕ್ತರು
7. ಚಿಕ್ಕ ಮಕ್ಕಳು
ಎಷ್ಟು ದಿನ ಚಿಕಿತ್ಸೆ ತೆಗೆದುಕೊಳ್ಳಬೇಕು ?
1. ಕನಿಷ್ಟ ಪಕ್ಷ 10 ದಿನವಾದರೂ ನಿರಂತರವಾಗಿ ಈ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. 10 ದಿನಗಳ ಒಂದು ಕೋರ್ಸ್‍ನಲ್ಲಿ ನೋವು ಹಾಗೂ ಕೆಲವು ತೊಂದರೆಗಳನ್ನು ಗುಣಪಡಿಸಲು ಸಾಧ್ಯವಿದೆಯಾದರೂ, ಕೆಲವೊಂದು ವರ್ಷಾವಧಿ ರೋಗಗಳಿಗೆ ಕೆಲವೊಬ್ಬರಿಗೆ, 10 ದಿನಗಳ ಒಂದು ಕೋರ್ಸ್ ಸಾಕಾಗುವುದಿಲ್ಲ. ಅಂಥವರಿಗೆ ಮಧ್ಯದಲ್ಲಿ 1 ತಿಂಗಳು, 3 ತಿಂಗಳು ಅಥವಾ ಆರು ತಿಂಗಳ ಅಂತರ ನೀಡಿ ಮತ್ತೊಂದು 10 ದಿನಗಳ ಕೋರ್ಸನ್ನು ನೀಡಲಾಗುತ್ತದೆ.
2. ಯಾವುದೇ ಅಡ್ಡಪರಿಣಾಮಗಳಿಲ್ಲದ, ಅತ್ಯಂತ ಕಡಿಮೆ ಖರ್ಚನ್ನು ಹೊಂದಿರುವ, ಯಾವುದೇ ಅಹಿತಕರ ಸಮಸ್ಯೆಯನ್ನು ಉಂಟು ಮಾಡದಿರುವ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ, ಹಲವಾರು ರೋಗಗಳನ್ನು ಗುಣಪಡಿಸುವ ಸಾಮಥ್ರ್ಯವಿರುವ ಈ ಸೂಜಿ ಚಿಕಿತ್ಸೆ ಅತ್ಯಂತ ಸರಳವೂ ಆಗಿದೆ. ಇಂಥ ಒಂದು ಚಿಕಿತ್ಸಾ ವಿಧಾನವನ್ನು ನೋವುಗಳ ಉಪಶಮನಕ್ಕಾಗಿ ಒಮ್ಮೆಯಾದರೂ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ.