ಆಚಾರ್ಯ ಚರಕರು ಭಾರತೀಯ ವೈದ್ಯಪದ್ದತಿಯ ಪಿತಾಮಹ.ಚರಕ ಸಂಹಿತಾ ಗ್ರಂಥ ಇವತ್ತಿಗೂ ಸಾಮಾನ್ಯ ವ್ಯಾಧಿಗಳಿಗೆ ಚಿಕಿತ್ಸೆ ನೀಡುವ ಆಯುರ್ವೇದ ವೈದ್ಯರಿಗೆ ಆಧಾರ ಗ್ರಂಥ.
ಆಚಾರ್ಯ ಚರಕರನ್ನು ಭಾರತೀಯ ವೈದ್ಯಪದ್ದತಿಯ ಪಿತಾಮಹ ಎನ್ನಲಾಗುವುದು. ಕ್ರಿಸ್ತಪೂರ್ವ 300 ಕಾಲಕ್ಕೆ ಸೇರಿದ ಆಚಾರ್ಯರು ಆಯುರ್ವೇದದ ತತ್ವಗಳನ್ನು, ಮೂಲ ಸಿದ್ದಾಂತ, ಚಿಕಿತ್ಸಾ ಸೂತ್ರ ಹಾಗೂ ವಿಧಾನಗಳನ್ನು ವಿಸ್ತ್ರುತವಾಗಿ ತಮ್ಮ ಚರಕ ಸಂಹಿತಾ ಗ್ರಂಥದಲ್ಲಿ ರಚಿಸಿದ್ದಾರೆ. ಆಚಾರ್ಯ ಅಗ್ನಿವೇಶರಿಂದ ಪಡೆದ ಜ್ನಾನವನ್ನು ಆಚಾರ್ಯ ಚರಕರು ಸಂಹಿತಯರೂಪದಲ್ಲಿ ರಚಿಸಿದ್ದಾರೆ. ಈ ಗ್ರಂಥವು 120 ಅಧ್ಯಾಯಗಳು, 8 ಸ್ಥಾನಗಳನ್ನು ಒಳಗೊಂಡಿದೆ. ಮತ್ತು ಕೊನೆಯ ಕೆಲವು ಅಧ್ಯಾಯಗಳನ್ನು ವೈದ್ಯರಾದ ಆಚಾರ್ಯ ದೃಡಬಾಲರು ಸೇರಿಸಿ ಸಂಪೂರ್ಣಗೊಳಿಸಿದ್ದಾರೆ.
ಅಲ್ಲದೆ ಹುಟ್ಟು ಸಾವಿಗೆ ಕಾರಣ, ಮಾನವನ ಸರ್ವತೋಮುಖದ ಅಭಿವೃದ್ದಿಯ ವಿಧಾನ, ಆರೋಗ್ಯಕರ ಜೀವನ ಪದ್ದತಿಯ ವಿಧಾನ, ಗರ್ಭದ ಅಭಿವೃದ್ದಿ, ಮಾನಸಿಕ ರೋಗಗಳು ಮತ್ತು ಅದರ ಕಾರಣ, ವೈದ್ಯನ ಗುಣ, ಜವಾಬ್ದಾರಿ, ವೈದ್ಯಕೀಯ ಶಿಕ್ಷಣ ಮತ್ತು ಆಧ್ಯಾತ್ಮಿಕ ವಿಚಾರಗಳಂತಹ ವಿಷಯಗಳನ್ನು ವಿಭಿನ್ನರೀತಿಯಲ್ಲಿ ರಚಿಸಿರುವುದು ಚರಕಾಚಾರ್ಯರ ವಿಶೇಷತೆ.
ಚಿಕಿತ್ಸೆಯನ್ನು ನೀಡುವ ಮೊದಲು, ವೈದ್ಯ ರೋಗದ ಸಂಪೂರ್ಣ ಜ್ನಾನವನ್ನು, ಕುಶಲತೆಯನ್ನು ಪಡೆದು, ರೋಗಿಯ ಪರೀಕ್ಷೆ ಮಾಡಿ ರೋಗಿಯ ತೊಂದರೆಯನ್ನು ಸರಿಯಾಗಿ ಅರಿತು ಚಿಕಿತ್ಸೆಯನ್ನು ನೀಡಬೇಕೆಂಬ ಕಿವಿಮಾತನ್ನು ವೈದ್ಯರಿಗೆ ನೀಡಿದ್ದಾರೆ. ವೈದ್ಯಕೀಯ ವಲ್ಲದೆ, ಸಾಮಾಜಿಕ, ಆಧ್ಯಾತ್ಮಿಕ, ವೈಜ್ನಾನಿಕ ಮತ್ತು ಪಾರಂಪರಿಕ ವಿಚಾರಗಳ ಸಮ್ಮಿಲನವನ್ನು ಇವರ ರಚನೆ ಮತ್ತು ತತ್ವಗಳಲ್ಲಿ ಕಾಣಬಹುದಾಗಿದೆ.
ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
Mob: 9964022654