Vydyaloka

ಮಧುಮೇಹ ಪೀಡಿತ ಮಹಿಳೆಯರಿಗೆ ಯಾವ ಶಸ್ತ್ರಚಿಕಿತ್ಸೆ ಸೂಕ್ತ?

ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ಇದು ಗುಣವಾಗುವಂತಹ ಕಾಯಿಲೆಯಲ್ಲ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ಜೀವನವನ್ನು ಸುಗಮವಾಗಿ ಸಾಗಿಸಬಹುದು.
ಮಧುಮೇಹ ಮುಂಚೆ 40-45 ವಯಸ್ಸಿನ ಬಳಿಕವೇ ಬರುತ್ತಿತ್ತು. ಆದರೆ ಈಗ ಅದು ಚಿಕ್ಕ ವಯಸ್ಸಿನಲ್ಲಿಯೇ ಬಂದು ಜೀವನವನ್ನು ನರಳುವಂತೆ ಮಾಡುತ್ತಿದೆ. ಮಧುಮೇಹ ಪೀಡಿತ ಮಹಿಳೆಯರಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಾಗ ಅನೇಕ ತೊಂದರೆ-ತಾಪತ್ರಯಗಳು ಉಂಟಾಗಬಹುದು. ಹೀಗಾಗಿ ವೈದ್ಯರು ಶಸ್ತ್ರಚಿಕಿತ್ಸೆಗೂ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂಥವರಿಗೆ ವೈದ್ಯರು ಅನೇಕ ತಪಾಸಣೆಗಳನ್ನು ಮಾಡಿಸುತ್ತಿರಬೇಕಾಗುತ್ತದೆ.
ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಬೇರೆ-ಬೇರೆ ಕಾರಣಗಳಿಂದ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರುತ್ತದೆ. ಮಧುಮೇಹಿ ಮಹಿಳೆಗೆ ಗರ್ಭಾವಸ್ಥೆಯಲ್ಲಿಯೇ ಹೆಚ್ಚಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರಬಹುದು. ಆಗ ಮಧುಮೇಹದ ತೊಂದರೆ ಹೆಚ್ಚು.
ಶಸ್ತ್ರಚಿಕಿತ್ಸೆಯ ಸಾಧ್ಯತೆ ಯಾವಾಗ?
ಹಿಸ್ಟ್ರೆಕ್ಟಮಿ ಅಂದರೆ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ, ಹೊಟ್ಟೆನೋವಿಗೆ ಶಸ್ತ್ರಚಿಕಿತ್ಸೆ, ಗರ್ಭಕೊರಳಿನ ಕ್ಯಾನ್ಸರ್, ಅಂಡಾಶಯದಲ್ಲಿ ಗೆಡ್ಡೆಗಳಿದ್ದಾಗ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರಬಹುದು. 35-40 ವಯಸ್ಸು ಅಥವಾ ಅದಕ್ಕು ಹೆಚ್ಚಿನ ವಯಸ್ಸಿನ ಮಧುಮೇಹಿ ಮಹಿಳೆಯರಿಗೆ ಹೊಟ್ಟೆನೋವು, ಹೊಟ್ಟೆಯಲ್ಲಿ ಗಂಟುಗಳು ಅಥವಾ ಅಂಡಾಶಯದಲ್ಲಿ ಗಂಟು ಇಲ್ಲವೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರುತ್ತದೆ. ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಾಗ ವೈದ್ಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ.
ಸಾಮಾನ್ಯ ಮಹಿಳೆಯರ ಶಸ್ತ್ರಚಿಕಿತ್ಸೆಗಳನ್ನು ಬೇಕೆಂದಾಗ ಮಾಡಬಹುದು. ಆದರೆ ಮಧುಮೇಹಿ ಮಹಿಳೆಯರಲ್ಲಿ ಹಾಗಲ್ಲ. ಅವರ ದೇಹದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರುವಾಗಲೇ ಶಸ್ತ್ರಚಿಕಿತ್ಸೆಗೆ ವೈದ್ಯರು ಮುಂದಾಗುತ್ತಾರೆ. ಕೆಲವು ಮಹಿಳೆಯರು ತಮ್ಮ ದೇಹದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವು ಮಹಿಳೆಯರಲ್ಲಿ ಅದು ಏರಿಳಿತ ಆಗುತ್ತಲೇ ಇರುತ್ತದೆ.
ಮಧುಮೇಹಿ ಮಹಿಳೆಯೊಬ್ಬಳು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಾಗ ವೈದ್ಯರು ಮೊದಲು ಆಕೆಯ ಮಧುಮೇಹ ನಿಯಂತ್ರಣದಲ್ಲಿಡಲು ಎಲ್ಲಾ ಬಗೆಯಲ್ಲೂ ಕಾರ್ಯಪ್ರವೃತ್ತರಾಗುತ್ತಾರೆ. ಮಾತ್ರೆ ಅಥವಾ ಇನ್ಸುಲಿನ್ ಮುಖಾಂತರ ಅದನ್ನು ನಿಯಂತ್ರಣ ಮಾಡಬೇಕಾಗುತ್ತದೆ. ಆ ಬಳಿಕವೇ ಶಸ್ತ್ರಚಿಕಿತ್ಸೆಗೆ ಅಣಿಯಾಗಬೇಕಾಗುತ್ತದೆ.
ಶಸ್ತ್ರಚಿಕಿತ್ಸೆ ಮೈನರ್ ಇಲ್ಲವೆ ಮೇಜರ್ ಇರಬಹುದು. ವೈದ್ಯರು ಮಾತ್ರ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಶುಗರ್ ಲೆವೆಲ್ ಬಗ್ಗೆ ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಆಯಿತೆಂದರೆ ಸಮಸ್ಯೆ ಬಗೆಹರಿಯಿತು ಎಂದಲ್ಲ. ಶಸ್ತ್ರಚಿಕಿತ್ಸೆಯ ಬಳಿಕವೂ ದೇಹದಲ್ಲಿನ ಶುಗರ್ ಮಟ್ಟವನ್ನು ಖಂಡಿತಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
ಏನೇನು ಸಮಸ್ಯೆಗಳಾಗಬಹುದು?
ಶಸ್ತ್ರಚಿಕಿತ್ಸೆಯ ಬಳಿಕ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಹೋದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ಕೀವು ಉಂಟಾಗಿ ಸೆಪ್ಟಿಕ್ ಆಗಬಹುದು. ಹಾಗಾಗಿ ಸೋಂಕು ತಡೆಗಟ್ಟಲು ಇಂಥವರಿಗೆ ಹೈ ಆ್ಯಂಟಿಬಯಾಟಿಕ್ಸ್ ನೀಡಲಾಗುತ್ತದೆ.
ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯೇ ಸೂಕ್ತ
ಶಸ್ತ್ರಚಿಕಿತ್ಸೆಯಲ್ಲಿ ತೆರೆದ ಶಸ್ತ್ರಚಿಕಿತ್ಸೆ ಅಂದರೆ ಓಪನ್ ಸರ್ಜರಿ ಹಾಗೂ ಲ್ಯಾಪ್ರೋಸ್ಕೋಪಿಕ್ ಎಂಬ ಎರಡು ಬಗೆಗಳಿವೆ. ಮಧುಮೇಹಿ ಮಹಿಳೆಯರಿಗೆ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯೇ ಸೂಕ್ತ. ಅದರಿಂದ ಸೋಂಕು ಉಂಟಾಗುವ ಸಾಧ್ಯತೆ ಕಡಿಮೆ. ಬೇಗನೇ ಮನೆಗೂ ಹೋಗಬಹುದು. ನಂತರ ಅಷ್ಟಾಗಿ ಕಾಳಜಿ ತೆಗೆದುಕೊಳ್ಳಬೇಕಾದ ಅಗತ್ಯವೂ ಇರುವುದಿಲ್ಲ. ಲ್ಯಾಪ್ರೋಸ್ಕೋಪಿಕ್ ಚಿಕಿತ್ಸೆಯ ಗಾಯ ಬಹುಬೇಗ ಒಣಗುತ್ತದೆ. ಸೋಂಕು ಕಡಿಮೆ. ಗರ್ಭಕೋಶದ ಶಸ್ತ್ರಚಿಕಿತ್ಸೆಗಳಿಗೆ ಇದೇ ಸೂಕ್ತ ವಿಧಾನವಾಗಿದೆ.
ಏನು ಎಚ್ಚರಿಕೆ ವಹಿಸಬೇಕು?
ದೇಹದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡಲು ಆಗಾಗ ಅದರ ಪ್ರಮಾಣ ಕಂಡುಕೊಳ್ಳಬೇಕು. ಆಹಾರದ ಮೂಲಕವೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸಿಹಿ ಪದಾರ್ಥಗಳು ಹಾಗೂ ಸಿಹಿ ಹಣ್ಣುಗಳನ್ನು ತಿನ್ನುವುದನ್ನು ನಿಲ್ಲಿಸಬೇಕು.

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this: